Drona Parva: Chapter 51

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೫೧

ಯುಧಿಷ್ಠಿರನು ಅಭಿಮನ್ಯುವು ಹತನಾದ ವಿಷಯವನ್ನು ಅನುಕ್ರಮವಾಗಿ ಅರ್ಜುನನಿಗೆ ತಿಳಿಸಿದುದು (೧-೧೫). ಮರುದಿನ ಜಯದ್ರಥನನ್ನು ಕೊಲ್ಲುವೆನೆಂದೂ, ಕೊಲ್ಲದಿದ್ದರೆ ತಾನು ಅಗ್ನಿಪ್ರವೇಶಮಾಡುವೆನೆಂದೂ ಅರ್ಜುನನು ಪ್ರತಿಜ್ಞೆಮಾಡಿದುದು (೧೬-೪೩).

07051001 ಯುಧಿಷ್ಠಿರ ಉವಾಚ|

07051001a ತ್ವಯಿ ಯಾತೇ ಮಹಾಬಾಹೋ ಸಂಶಪ್ತಕಬಲಂ ಪ್ರತಿ|

07051001c ಪ್ರಯತ್ನಮಕರೋತ್ತೀವ್ರಮಾಚಾರ್ಯೋ ಗ್ರಹಣೇ ಮಮ||

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಸಂಶಪ್ತಕರ ಸೇನೆಯ ಕಡೆ ನೀನು ಹೋದನಂತರ ನನ್ನನ್ನು ಹಿಡಿಯಲು ಆಚಾರ್ಯನು ತೀವ್ರ ಪ್ರಯತ್ನವನ್ನು ಮಾಡಿದನು.

07051002a ವ್ಯಾಢಾನೀಕಂ ವಯಂ ದ್ರೋಣಂ ವರಯಾಮಃ ಸ್ಮ ಸರ್ವಶಃ|

07051002c ಪ್ರತಿವ್ಯೂಹ್ಯ ರಥಾನೀಕಂ ಯತಮಾನಂ ತಥಾ ರಣೇ||

ಹಾಗೆ ರಣದಲ್ಲಿ ಪ್ರಯತ್ನಿಸುತ್ತಿದ್ದ ದ್ರೋಣನ ಆ ರಥಸೇನೆಯ ವ್ಯೂಹವನ್ನು ನಾವು ಪ್ರತಿವ್ಯೂಹದೊಂದಿಗೆ ಎಲ್ಲಕಡೆಗಳಲ್ಲಿಯೂ ತಡೆದೆವು.

07051003a ಸ ವಾರ್ಯಮಾಣೋ ರಥಿಭೀ ರಕ್ಷಿತೇನ ಮಯಾ ತಥಾ|

07051003c ಅಸ್ಮಾನಪಿ ಜಘಾನಾಶು ಪೀಡಯನ್ನಿಶಿತೈಃ ಶರೈಃ||

ರಥಿಕರು ಅವನನ್ನು ತಡೆಯುತ್ತಿದ್ದರು ಮತ್ತು ನಾನು ಸುರಕ್ಷಿತವಾಗಿದ್ದೆ. ಆದರೆ ಅವನು ನಮ್ಮನ್ನು ನಿಶಿತ ಶರಗಳಿಂದ ಪೀಡಿಸುತ್ತಿದ್ದನು.

07051004a ತೇ ಪೀಡ್ಯಮಾನಾ ದ್ರೋಣೇನ ದ್ರೋಣಾನೀಕಂ ನ ಶಕ್ನುಮಃ|

07051004c ಪ್ರತಿವೀಕ್ಷಿತುಮಪ್ಯಾಜೌ ಭೇತ್ತುಂ ತತ್ಕುತ ಏವ ತು||

ದ್ರೋಣನಿಂದ ಪೀಡಿತರಾದ ನಾವು ದ್ರೋಣನ ಸೇನೆಯ ಕಡೆ ನೋಡಲೂ ಕೂಡ ಅಸಮರ್ಥರಾದೆವು. ಹಾಗಿರುವಾಗ ಅದನ್ನು ಭೇದಿಸುವುದಾದರೂ ಹೇಗೆ ಸಾಧ್ಯವಿತ್ತು?

07051005a ವಯಂ ತ್ವಪ್ರತಿಮಂ ವೀರ್ಯೇ ಸರ್ವೇ ಸೌಭದ್ರಮಾತ್ಮಜಂ|

07051005c ಉಕ್ತವಂತಃ ಸ್ಮ ತೇ ತಾತ ಭಿಂಧ್ಯನೀಕಮಿತಿ ಪ್ರಭೋ||

ಪ್ರಭೋ! ಆಗ ವೀರ್ಯಗಳೆಲ್ಲದರಲ್ಲಿ ನಿನಗೆ ಸಮನಾದ ಸೌಭದ್ರಾತ್ಮಜನಿಗೆ ನಾವು “ಮಗೂ! ಸೇನೆಯನ್ನು ಭೇದಿಸು!” ಎಂದು ಕೇಳಿಕೊಂಡೆವು.

07051006a ಸ ತಥಾ ಚೋದಿತೋಽಸ್ಮಾಭಿಃ ಸದಶ್ವ ಇವ ವೀರ್ಯವಾನ್|

07051006c ಅಸಹ್ಯಮಪಿ ತಂ ಭಾರಂ ವೋಢುಮೇವೋಪಚಕ್ರಮೇ||

ಹಾಗೆ ನಮ್ಮಿಂದ ಪ್ರೇರಿತನಾದ ಆ ವೀರ್ಯವಾನನು ಉತ್ತಮ ಥಳಿಯ ಕುದುರೆಯಂತೆ ಸಹಿಸಲು ಕಷ್ಟವಾದರೂ ಆ ಭಾರವನ್ನು ಹೊರಲು ಮುಂದಾದನು.

07051007a ಸ ತವಾಸ್ತ್ರೋಪದೇಶೇನ ವೀರ್ಯೇಣ ಚ ಸಮನ್ವಿತಃ|

07051007c ಪ್ರಾವಿಶತ್ತದ್ಬಲಂ ಬಾಲಃ ಸುಪರ್ಣ ಇವ ಸಾಗರಂ||

ನಿನ್ನ ಅಸ್ತ್ರೋಪದೇಶದಿಂದ ಮತ್ತು ವೀರ್ಯದಿಂದ ಸಮನ್ವಿತನಾದ ಆ ಬಾಲಕನು ಗರುಡನು ಸಾಗರವನ್ನು ಹೇಗೋ ಹಾಗೆ ಆ ಸೇನೆಯನ್ನು ಪ್ರವೇಶಿಸಿದನು.

07051008a ತೇಽನುಯಾತಾ ವಯಂ ವೀರಂ ಸಾತ್ವತೀಪುತ್ರಮಾಹವೇ|

07051008c ಪ್ರವೇಷ್ಟುಕಾಮಾಸ್ತೇನೈವ ಯೇನ ಸ ಪ್ರಾವಿಶಚ್ಚಮೂಂ||

ಅವನು ಪ್ರವೇಶಿಸಿದ ಮಾರ್ಗದಿಂದಲೇ ವ್ಯೂಹವನ್ನು ಪ್ರವೇಶಿಸಲು ಇಚ್ಚಿಸಿ ನಾವೆಲ್ಲರೂ ಆಹವದಲ್ಲಿ ಸಾತ್ವತೀಪುತ್ರ ವೀರನನ್ನು ಅನುಸರಿಸಿ ಹೋದೆವು.

07051009a ತತಃ ಸೈಂಧವಕೋ ರಾಜಾ ಕ್ಷುದ್ರಸ್ತಾತ ಜಯದ್ರಥಃ|

07051009c ವರದಾನೇನ ರುದ್ರಸ್ಯ ಸರ್ವಾನ್ನಃ ಸಮವಾರಯತ್||

ಅಯ್ಯಾ! ಆಗ ಕ್ಷುದ್ರ ರಾಜ ಸೈಂಧವ ಜಯದ್ರಥನು ರುದ್ರನ ವರದಾನದಿಂದ ನಮ್ಮೆಲ್ಲರನ್ನೂ ತಡೆದನು.

07051010a ತತೋ ದ್ರೋಣಃ ಕೃಪಃ ಕರ್ಣೋ ದ್ರೌಣಿಶ್ಚ ಸ ಬೃಹದ್ಬಲಃ|

07051010c ಕೃತವರ್ಮಾ ಚ ಸೌಭದ್ರಂ ಷಡ್ರಥಾಃ ಪರ್ಯವಾರಯನ್||

ಆಗ ದ್ರೋಣ, ಕೃಪ, ಕರ್ಣ, ದ್ರೌಣಿ, ಬೃಹದ್ಬಲ ಮತ್ತು ಕೃತವರ್ಮ ಈ ಷಡ್ರಥರು ಸೌಭದ್ರನನ್ನು ಸುತ್ತುವರೆದರು.

07051011a ಪರಿವಾರ್ಯ ತು ತೈಃ ಸರ್ವೈರ್ಯುಧಿ ಬಾಲೋ ಮಹಾರಥೈಃ|

07051011c ಯತಮಾನಃ ಪರಂ ಶಕ್ತ್ಯಾ ಬಹುಭಿರ್ವಿರಥೀಕೃತಃ||

ಅವರೆಲ್ಲ ಮಹಾರಥರಿಂದ ಯುದ್ಧದಲ್ಲಿ ಸುತ್ತುವರೆಯಲ್ಪಟ್ಟು ಪರಮ ಶಕ್ತಿಯಿಂದ ಹೋರಾಡುತ್ತಿದ್ದ ಆ ಬಾಲಕನನ್ನು ಅನೇಕರು ವಿರಥರನ್ನಾಗಿ ಮಾಡಿದರು.

07051012a ತತೋ ದೌಃಶಾಸನಿಃ ಕ್ಷಿಪ್ರಂ ತಥಾ ತೈರ್ವಿರಥೀಕೃತಂ|

07051012c ಸಂಶಯಂ ಪರಮಂ ಪ್ರಾಪ್ಯ ದಿಷ್ಟಾಂತೇನಾಭ್ಯಯೋಜಯತ್||

ಆಗ ಪರಮ ಸಂಕಟವನ್ನು ಅನುಭವಿಸಿದ ದೌಃಶಾಸನಿಯು ಆ ವಿರಥನಾದವನನ್ನು ಕ್ಷಿಪ್ರವಾಗಿ ಗದೆಯಿಂದ ಪ್ರಹರಿಸಿ ಸಂಹರಿಸಿದನು.

07051013a ಸ ತು ಹತ್ವಾ ಸಹಸ್ರಾಣಿ ದ್ವಿಪಾಶ್ವರಥಸಾದಿನಾಂ|

07051013c ರಾಜಪುತ್ರಶತಂ ಚಾಗ್ರ್ಯಂ ವೀರಾಂಶ್ಚಾಲಕ್ಷಿತಾನ್ಬಹೂನ್||

07051014a ಬೃಹದ್ಬಲಂ ಚ ರಾಜಾನಂ ಸ್ವರ್ಗೇಣಾಜೌ ಪ್ರಯೋಜ್ಯ ಹ|

07051014c ತತಃ ಪರಮಧರ್ಮಾತ್ಮಾ ದಿಷ್ಟಾಂತಮುಪಜಗ್ಮಿವಾನ್||

ಸಹಸ್ರಾರು ಆನೆ-ಕುದುರೆ-ರಥಾರೂಢರನ್ನು ಸಂಹರಿಸಿ, ಅನೇಕ ನೂರು ಅಗ್ರ ವೀರ ರಾಜಪುತ್ರರನ್ನು ಸಂಹರಿಸಿ, ರಾಜ ಬೃಹದ್ಬಲನನ್ನೂ ಸ್ವರ್ಗಕ್ಕೆ ಕಳುಹಿಸಿ ನಂತರ ಆ ಪರಮ ಧರ್ಮಾತ್ಮನು ಮೃತ್ಯುವಶನಾದನು.

07051015a ಏತಾವದೇವ ನಿರ್ವೃತ್ತಮಸ್ಮಾಕಂ ಶೋಕವರ್ಧನಂ|

07051015c ಸ ಚೈವಂ ಪುರುಷವ್ಯಾಘ್ರಃ ಸ್ವರ್ಗಲೋಕಮವಾಪ್ತವಾನ್||

ನಮ್ಮ ಶೋಕವನ್ನು ಹೆಚ್ಚಿಸಿದ ಆ ಪುರುಷವ್ಯಾಘ್ರನು ಈ ರೀತಿ ನಡೆದುಕೊಂಡು ಸ್ವರ್ಗಲೋಕವನ್ನು ಪಡೆದನು.””

07051016 ಸಂಜಯ ಉವಾಚ|

07051016a ತತೋಽರ್ಜುನೋ ವಚಃ ಶ್ರುತ್ವಾ ಧರ್ಮರಾಜೇನ ಭಾಷಿತಂ|

07051016c ಹಾ ಪುತ್ರ ಇತಿ ನಿಃಶ್ವಸ್ಯ ವ್ಯಥಿತೋ ನ್ಯಪತದ್ಭುವಿ||

ಸಂಜಯನು ಹೇಳಿದನು: “ಧರ್ಮರಾಜನು ಆಡಿದ ಮಾತನ್ನು ಕೇಳಿ ಅರ್ಜುನನು “ಹಾ ಪುತ್ರ!” ಎಂದು ನಿಟ್ಟುಸಿರು ಬಿಡುತ್ತಾ ವ್ಯಥಿತನಾಗಿ ಭೂಮಿಯ ಮೇಲೆ ಬಿದ್ದನು.

07051017a ವಿಷಣ್ಣವದನಾಃ ಸರ್ವೇ ಪರಿಗೃಹ್ಯ ಧನಂಜಯಂ|

07051017c ನೇತ್ರೈರನಿಮಿಷೈರ್ದೀನಾಃ ಪ್ರತ್ಯವೇಕ್ಷನ್ಪರಸ್ಪರಂ||

ಎಲ್ಲರೂ ವಿಷಣ್ಣವದನರಾಗಿ ಧನಂಜಯನ್ನು ಹಿಡಿದು, ದೀನರಾಗಿ ಎವೆಯಿಕ್ಕದೇ ಪರಸ್ಪರರನ್ನು ನೋಡುತ್ತಿದ್ದರು.

07051018a ಪ್ರತಿಲಭ್ಯ ತತಃ ಸಂಜ್ಞಾಂ ವಾಸವಿಃ ಕ್ರೋಧಮೂರ್ಚಿತಃ|

07051018c ಕಂಪಮಾನೋ ಜ್ವರೇಣೇವ ನಿಃಶ್ವಸಂಶ್ಚ ಮುಹುರ್ಮುಹುಃ||

07051019a ಪಾಣಿಂ ಪಾಣೌ ವಿನಿಷ್ಪಿಷ್ಯ ಶ್ವಸಮಾನೋಽಶ್ರುನೇತ್ರವಾನ್|

07051019c ಉನ್ಮತ್ತ ಇವ ವಿಪ್ರೇಕ್ಷನ್ನಿದಂ ವಚನಮಬ್ರವೀತ್||

ಆಗ ಸಂಜ್ಞೆಗಳನ್ನು ಪಡೆದ ವಾಸವಿಯು ಕ್ರೋಧಮೂರ್ಛಿತನಾಗಿ, ಜ್ವರದಲ್ಲಿರುವವನಂತೆ ಕಂಪಿಸುತ್ತಾ, ಪುನಃ ಪುನಃ ನಿಟ್ಟುಸಿರು ಬಿಡುತ್ತಾ, ಕೈಯಿಂದ ಕೈಯನ್ನು ಉಜ್ಜುತ್ತಾ, ಕಣ್ಣುಗಳಲ್ಲಿ ನೀರು ತುಂಬಿಸಿಕೊಂಡು ಉನ್ಮತ್ತನಾದವನಂತೆ ಯಾವುದೋ ದಿಕ್ಕನ್ನು ದಿಟ್ಟಿಸಿ ನೋಡುತ್ತಾ ಈ ಮಾತನ್ನಾಡಿದನು:

07051020a ಸತ್ಯಂ ವಃ ಪ್ರತಿಜಾನಾಮಿ ಶ್ವೋಽಸ್ಮಿ ಹಂತಾ ಜಯದ್ರಥಂ|

07051020c ನ ಚೇದ್ವಧಭಯಾದ್ಭೀತೋ ಧಾರ್ತರಾಷ್ಟ್ರಾನ್ಪ್ರಹಾಸ್ಯತಿ||

07051021a ನ ಚಾಸ್ಮಾಂ ಶರಣಂ ಗಚ್ಚೇತ್ಕೃಷ್ಣಂ ವಾ ಪುರುಷೋತ್ತಮಂ|

07051021c ಭವಂತಂ ವಾ ಮಹಾರಾಜ ಶ್ವೋಽಸ್ಮಿ ಹಂತಾ ಜಯದ್ರಥಂ||

“ನಿಮ್ಮೆಲ್ಲರ ನಡುವೆ ಈ ಸತ್ಯಪ್ರತಿಜ್ಞೆಯನ್ನು ಮಾಡುತ್ತೇನೆ! ನಾಳೆ ನಾನು ಜಯದ್ರಥನನ್ನು ಸಂಹರಿಸುತ್ತೇನೆ! ಭಯದಿಂದ ಭೀತನಾಗಿ ಅವನು ಧಾರ್ತರಾಷ್ಟ್ರರನ್ನು ಬಿಟ್ಟು ಓಡಿ ಹೋಗದಿದ್ದರೆ, ನನ್ನ ಅಥವಾ ಪುರುಷೋತ್ತಮ ಕೃಷ್ಣನ ಅಥವಾ ಮಹಾರಾಜ ನಿನ್ನ ಶರಣು ಹೋಗದಿದ್ದರೆ ನಾಳೆ ನಾನು ಜಯದ್ರಥನನ್ನು ಕೊಲ್ಲುತ್ತೇನೆ!

07051022a ಧಾರ್ತರಾಷ್ಟ್ರಪ್ರಿಯಕರಂ ಮಯಿ ವಿಸ್ಮೃತಸೌಹೃದಂ|

07051022c ಪಾಪಂ ಬಾಲವಧೇ ಹೇತುಂ ಶ್ವೋಽಸ್ಮಿ ಹಂತಾ ಜಯದ್ರಥಂ||

ಧಾರ್ತರಾಷ್ಟ್ರರಿಗೆ ಪ್ರಿಯಂಕರನಾದ, ಸೌಹಾರ್ದತೆಯನ್ನು ಮರೆತಿರುವ, ಬಾಲವಧೆಗೆ ಕಾರಣನಾದ ಆ ಪಾಪಿ ಜಯದ್ರಥನನ್ನು ನಾಳೆ ನಾನು ವಧಿಸುತ್ತೇನೆ!

07051023a ರಕ್ಷಮಾಣಾಶ್ಚ ತಂ ಸಂಖ್ಯೇ ಯೇ ಮಾಂ ಯೋತ್ಸ್ಯಂತಿ ಕೇ ಚನ|

07051023c ಅಪಿ ದ್ರೋಣಕೃಪೌ ವೀರೌ ಚಾದಯಿಷ್ಯಾಮಿ ತಾಂ ಶರೈಃ||

ಯುದ್ಧದಲ್ಲಿ ಅವನನ್ನು ರಕ್ಷಣೆಮಾಡಲು ಯಾವ ಕೆಲವರು ನನ್ನೊಡನೆ ಹೋರಾಡುತ್ತಾರೋ ಅವರು ವೀರ ದ್ರೋಣ-ಕೃಪರೇ ಆಗಿದ್ದರೂ, ಅವರನ್ನು ಶರಗಳಿಂದ ಮುಚ್ಚಿಬಿಡುತ್ತೇನೆ!

07051024a ಯದ್ಯೇತದೇವಂ ಸಂಗ್ರಾಮೇ ನ ಕುರ್ಯಾಂ ಪುರುಷರ್ಷಭಾಃ|

07051024c ಮಾ ಸ್ಮ ಪುಣ್ಯಕೃತಾಂ ಲೋಕಾನ್ಪ್ರಾಪ್ನುಯಾನ್ ಶೂರಸಮ್ಮತಾನ್||

ಪುರುಷರ್ಷಭರೇ! ಒಂದುವೇಳೆ ಸಂಗ್ರಾಮದಲ್ಲಿ ಇದನ್ನು ನಾನು ಮಾಡದೇ ಇದ್ದರೆ ಶೂರರಿಗೆ ಸಮ್ಮತವಾದ ಪುಣ್ಯಕೃತರ ಲೋಕಗಳು ನನಗೆ ದೊರೆಯದಿರಲಿ!

07051025a ಯೇ ಲೋಕಾ ಮಾತೃಹಂತೄಣಾಂ ಯೇ ಚಾಪಿ ಪಿತೃಘಾತಿನಾಂ|

07051025c ಗುರುದಾರಗಾಮಿನಾಂ ಯೇ ಚ ಪಿಶುನಾನಾಂ ಚ ಯೇ ತಥಾ||

07051026a ಸಾಧೂನಸೂಯತಾಂ ಯೇ ಚ ಯೇ ಚಾಪಿ ಪರಿವಾದಿನಾಂ|

07051026c ಯೇ ಚ ನಿಕ್ಷೇಪಹರ್ತೄಣಾಂ ಯೇ ಚ ವಿಶ್ವಾಸಘಾತಿನಾಂ||

07051027a ಭುಕ್ತಪೂರ್ವಾಂ ಸ್ತ್ರಿಯಂ ಯೇ ಚ ನಿಂದತಾಮಘಶಂಸಿನಾಂ|

07051027c ಬ್ರಹ್ಮಘ್ನಾನಾಂ ಚ ಯೇ ಲೋಕಾ ಯೇ ಚ ಗೋಘಾತಿನಾಮಪಿ||

07051028a ಪಾಯಸಂ ವಾ ಯವಾನ್ನಂ ವಾ ಶಾಕಂ ಕೃಸರಮೇವ ವಾ|

07051028c ಸಮ್ಯಾವಾಪೂಪಮಾಂಸಾನಿ ಯೇ ಚ ಲೋಕಾ ವೃಥಾಶ್ನತಾಂ|

07051028e ತಾನಹ್ನೈವಾಧಿಗಚ್ಚೇಯಂ ನ ಚೇದ್ಧನ್ಯಾಂ ಜಯದ್ರಥಂ||

ಮಾತಾಪಿತೃಗಳನ್ನು ಹತ್ಯೆಮಾಡಿದವರಿಗೆ, ಗುರುಪತ್ನಿಯನ್ನು ಭೋಗಿಸಿದವರಿಗೆ, ಚಾಡಿಕೋರರಿಗೆ, ಸಾಧುಗಳನ್ನು ನಿಂದಿಸಿದವರಿಗೆ, ಇತರರ ಮೇಲೆ ಮಿಥ್ಯಾಪವಾದವನ್ನು ಹೊರಿಸುವವರಿಗೆ, ವಿಶ್ವಾಸದಿಂದ ಇಟ್ಟ ನಿಧಿಯನ್ನು ಅಪಹರಿಸಿದವರಿಗೆ, ವಿಶ್ವಾಸಘಾತಿಗಳಿಗೆ, ಇನ್ನೊಬ್ಬರು ಭೋಗಿಸಿದ ಸ್ತ್ರೀಯನ್ನು ಕೂಡುವವನಿಗೆ, ಯಾವಾಗಲೂ ಪಾಪಕರ ಮಾತುಗಳನ್ನೇ ಆಡುವವರಿಗೆ, ಬ್ರಹ್ಮಹತ್ಯೆಯನ್ನು ಮಾಡಿದವರಿಗೆ, ಗೋಹತ್ಯೆಯನ್ನು ಮಾಡಿದವರಿಗೆ, ಪಾಯಸ-ಗೋಧಿಯ ಅನ್ನ-ಕಾಯಿ-ಪಲ್ಯೆಗಳು-ತಿಲಾನ್ನ-ಹೋಳಿಗೆ-ಮಾಂಸ ಇವುಗಳನ್ನು ನಿವೇದಿಸದೇ ಭಕ್ಷಿಸುವವನಿಗೆ ಯಾವ ನರಕ ಲೋಕಗಳು ಪ್ರಾಪ್ತವಾಗುವವೋ ಅವುಗಳಿಗೆ ನಾನು ನಾಳೆ ಜಯದ್ರಥನನ್ನು ಕೊಲ್ಲದೇ ಇದ್ದರೆ ಹೋಗುತ್ತೇನೆ.

07051029a ವೇದಾಧ್ಯಾಯಿನಮತ್ಯರ್ಥಂ ಸಂಶಿತಂ ವಾ ದ್ವಿಜೋತ್ತಮಂ|

07051029c ಅವಮನ್ಯಮಾನೋ ಯಾನ್ಯಾತಿ ವೃದ್ಧಾನ್ಸಾಧೂಂಸ್ತಥಾ ಗುರೂನ್||

07051030a ಸ್ಪೃಶತಾಂ ಬ್ರಾಹ್ಮಣಂ ಗಾಂ ಚ ಪಾದೇನಾಗ್ನಿಂ ಚ ಯಾಂ ಲಭೇತ್|

07051030c ಯಾಪ್ಸು ಶ್ಲೇಷ್ಮ ಪುರೀಷಂ ವಾ ಮೂತ್ರಂ ವಾ ಮುಂಚತಾಂ ಗತಿಃ|

07051030e ತಾಂ ಗಚ್ಚೇಯಂ ಗತಿಂ ಘೋರಾಂ ನ ಚೇದ್ಧನ್ಯಾಂ ಜಯದ್ರಥಂ||

ವೇದಾಧ್ಯಾಯಿಯಾದ ಮತ್ತು ಅತ್ಯಂತ ಕಠೋರ ನಿಷ್ಠೆಯಲ್ಲಿರುವ ದ್ವಿಜೋತ್ತಮನನ್ನು, ವೃದ್ಧರನ್ನು, ಸಾಧುಗಳನ್ನು, ಮತ್ತು ಗುರುಗಳನ್ನು ಅವಮಾನಿಸುವನಿಗೆ; ಬ್ರಾಹ್ಮಣನನ್ನೂ, ಗೋವನ್ನೂ, ಅಗ್ನಿಯನ್ನೂ ಕಾಲಿನಿಂದ ಒದೆಯುವವನಿಗೆ; ನೀರಿನಲ್ಲಿ ಕಫ, ಮಲ ಅಥವಾ ಮೂತ್ರಗಳನ್ನು ವಿಸರ್ಜಿಸುವವನಿಗೆ ಯಾವ ಘೋರ ಗತಿಯು ಪ್ರಾಪ್ತವಾಗುವುದೋ ಅದು ನನಗೂ ಕೂಡ ಜಯದ್ರಥನನ್ನು ಕೊಲ್ಲದೇ ಇದ್ದರೆ ಪ್ರಾಪ್ತವಾಗುತ್ತದೆ.

07051031a ನಗ್ನಸ್ಯ ಸ್ನಾಯಮಾನಸ್ಯ ಯಾ ಚ ವಂಧ್ಯಾತಿಥೇರ್ಗತಿಃ|

07051031c ಉತ್ಕೋಚಿನಾಂ ಮೃಷೋಕ್ತೀನಾಂ ವಂಚಕಾನಾಂ ಚ ಯಾ ಗತಿಃ||

07051031e ಆತ್ಮಾಪಹಾರಿಣಾಂ ಯಾ ಚ ಯಾ ಚ ಮಿಥ್ಯಾಭಿಶಂಸಿನಾಂ|

07051032a ಭೃತ್ಯೈಃ ಸಂದೃಶ್ಯಮಾನಾನಾಂ ಪುತ್ರದಾರಾಶ್ರಿತೈಸ್ತಥಾ||

07051032c ಅಸಂವಿಭಜ್ಯ ಕ್ಷುದ್ರಾಣಾಂ ಯಾ ಗತಿರ್ಮೃಷ್ಟಮಶ್ನತಾಂ|

07051032e ತಾಂ ಗಚ್ಚೇಯಂ ಗತಿಂ ಘೋರಾಂ ನ ಚೇದ್ಧನ್ಯಾಂ ಜಯದ್ರಥಂ||

ನಗ್ನರಾಗಿ ಸ್ನಾನಮಾಡುವವರಿಗೆ, ಅತಿಥಿಯನ್ನು ನಿಂದಿಸಿ ಕಳುಹಿಸುವವರಿಗೆ, ಲಂಚತಿನ್ನುವವರಿಗೆ, ಸುಳ್ಳುಹೇಳುವವರಿಗೆ, ವಂಚನೆಮಾಡುವವರಿಗೆ, ಆತ್ಮಹತ್ಯೆ ಮಾಡಿಕೊಳ್ಳುವವರಿಗೆ, ಇತರರ ಮೇಲೆ ಮಿಥ್ಯಾರೋಪ ಮಾಡುವವರಿಗೆ, ಸೇವಕರ ಆಜ್ಞೆಯಂತೆ ನಡೆಯುವವರಿಗೆ, ಮಕ್ಕಳು-ಹೆಂಡತಿ-ಆಶ್ರಿತರೊಂದಿಗೆ ಹಂಚಿಕೊಳ್ಳದೇ ಮೃಷ್ಟಾನ್ನವನ್ನು ಭುಂಜಿಸುವವನಿಗೆ ಯಾವ ಘೋರ ಗತಿಗಳು ಪ್ರಾಪ್ತವಾಗುವವೋ ಅವು ನನಗೂ ಕೂಡ ಜಯದ್ರಥನನ್ನು ನಾನು ಸಂಹರಿಸದೇ ಇದ್ದರೆ ಪ್ರಾಪ್ತವಾಗುತ್ತವೆ.

07051033a ಸಂಶ್ರಿತಂ ವಾಪಿ ಯಸ್ತ್ಯಕ್ತ್ವಾ ಸಾಧುಂ ತದ್ವಚನೇ ರತಂ|

07051033c ನ ಬಿಭರ್ತಿ ನೃಶಂಸಾತ್ಮಾ ನಿಂದತೇ ಚೋಪಕಾರಿಣಂ||

07051034a ಅರ್ಹತೇ ಪ್ರಾತಿವೇಶ್ಯಾಯ ಶ್ರಾದ್ಧಂ ಯೋ ನ ದದಾತಿ ಚ|

07051034c ಅನರ್ಹತೇ ಚ ಯೋ ದದ್ಯಾದ್ವೃಷಲೀಪತ್ಯುರೇವ ಚ||

07051035a ಮದ್ಯಪೋ ಭಿನ್ನಮರ್ಯಾದಃ ಕೃತಘ್ನೋ ಭ್ರಾತೃನಿಂದಕಃ|

07051035c ತೇಷಾಂ ಗತಿಮಿಯಾಂ ಕ್ಷಿಪ್ರಂ ನ ಚೇದ್ಧನ್ಯಾಂ ಜಯದ್ರಥಂ||

ಆಶ್ರಯದಲ್ಲಿರುವವರನ್ನು ತ್ಯಜಿಸಿ ಅವರ ಪೋಷಣೆಯನ್ನು ಮಾಡದ ಕ್ರೂರಿಗೆ, ಉಪಕಾರಮಾಡಿದವರನ್ನು ನಿಂದಿಸುವವರಿಗೆ, ಯೋಗ್ಯನಾಗಿರುವ ಪಕ್ಕದ ಮನೆಯವನನ್ನು ಶ್ರಾದ್ಧಕ್ಕೆ ಕರೆಯದೇ ಇರುವವನಿಗೆ, ಶೂದ್ರಳನ್ನು ವಿವಾಹವಾದ ಅನರ್ಹ ಬ್ರಾಹ್ಮಣನನ್ನು ಶ್ರಾದ್ಧಕ್ಕೆ ಕರೆಯುವವನಿಗೆ, ಮದ್ಯಪಾನ ಮಾಡುವವನಿಗೆ, ಧರ್ಮಮರ್ಯಾದೆಯನ್ನು ಮೀರಿದವನಿಗೆ, ಕೃತಘ್ನನಿಗೆ, ಭ್ರಾತೃನಿಂದಕನಿಗೆ ದೊರೆಯುವ ಗತಿಯು ಒಂದುವೇಳೆ ನಾನು ಜಯದ್ರಥನನ್ನು ಕೊಲ್ಲದೇ ಇದ್ದರೆ ಕ್ಷಿಪ್ರವಾಗಿ ನನಗಾಗಲಿ.

07051036a ಧರ್ಮಾದಪೇತಾ ಯೇ ಚಾನ್ಯೇ ಮಯಾ ನಾತ್ರಾನುಕೀರ್ತಿತಾಃ|

07051036c ಯೇ ಚಾನುಕೀರ್ತಿತಾಃ ಕ್ಷಿಪ್ರಂ ತೇಷಾಂ ಗತಿಮವಾಪ್ನುಯಾಂ|

07051036e ಯದಿ ವ್ಯುಷ್ಟಾಮಿಮಾಂ ರಾತ್ರಿಂ ಶ್ವೋ ನ ಹನ್ಯಾಂ ಜಯದ್ರಥಂ||

ಈ ಹಿಂದೆ ಹೇಳಿದವರನ್ನು ಬಿಟ್ಟು ಇನ್ನೂ ಇತರ ಪಾಪಕರ್ಮಿಗಳಿಗೆ ಪ್ರಾಪ್ತವಾಗುವ ಗತಿಯು ಒಂದು ವೇಳೆ ಈ ರಾತ್ರಿಯನ್ನು ಕಳೆದ ನಾಳೆ ನಾನು ಜಯದ್ರಥನನ್ನು ಸಂಹರಿಸದಿದ್ದರೆ ನನಗಾಗಲಿ.

07051037a ಇಮಾಂ ಚಾಪ್ಯಪರಾಂ ಭೂಯಃ ಪ್ರತಿಜ್ಞಾಂ ಮೇ ನಿಬೋಧತ|

07051037c ಯದ್ಯಸ್ಮಿನ್ನಹತೇ ಪಾಪೇ ಸೂರ್ಯೋಽಸ್ತಮುಪಯಾಸ್ಯತಿ||

07051037e ಇಹೈವ ಸಂಪ್ರವೇಷ್ಟಾಹಂ ಜ್ವಲಿತಂ ಜಾತವೇದಸಂ||

ಈ ನನ್ನ ಮತ್ತೊಂದು ಪ್ರತಿಜ್ಞೆಯನ್ನು ಕೇಳಿರಿ! ಒಂದುವೇಳೆ ಆ ಪಾಪಿಯು ಹತನಾಗದೇ ಸೂರ್ಯನು ಅಸ್ತನಾದನೆಂದಾದರೆ ಇಲ್ಲಿಯೇ ನಾನು ಉರಿಯುತ್ತಿರುವ ಅಗ್ನಿಯನ್ನು ಪ್ರವೇಶಿಸುತ್ತೇನೆ!

07051038a ಅಸುರಸುರಮನುಷ್ಯಾಃ ಪಕ್ಷಿಣೋ ವೋರಗಾ ವಾ

         ಪಿತೃರಜನಿಚರಾ ವಾ ಬ್ರಹ್ಮದೇವರ್ಷಯೋ ವಾ|

07051038c ಚರಮಚರಮಪೀದಂ ಯತ್ಪರಂ ಚಾಪಿ ತಸ್ಮಾತ್

         ತದಪಿ ಮಮ ರಿಪುಂ ತಂ ರಕ್ಷಿತುಂ ನೈವ ಶಕ್ತಾಃ||

ಅಸುರರು, ಸುರರು, ಮನುಷ್ಯರು, ಪಕ್ಷಿಗಳು, ಉರುಗಗಳು, ಪಿತೃಗಣಗಳು, ನಿಶಾಚರರು, ಬ್ರಹ್ಮರ್ಷಿಗಳು, ದೇವರ್ಷಿಗಳು, ಈ ಚರಾಚರ ಜಗತ್ತು, ಇವುಗಳಲ್ಲದೇ ಇನ್ನೂ ಯಾವ ಶಕ್ತಿಗಳಿವೆಯೋ ಅವುಗಳೆಲ್ಲವೂ ಸೇರಿದರೂ ನನ್ನ ಶತ್ರುವನ್ನು ರಕ್ಷಿಸಲಾರರು.

07051039a ಯದಿ ವಿಶತಿ ರಸಾತಲಂ ತದಗ್ರ್ಯಂ

         ವಿಯದಪಿ ದೇವಪುರಂ ದಿತೇಃ ಪುರಂ ವಾ|

07051039c ತದಪಿ ಶರಶತೈರಹಂ ಪ್ರಭಾತೇ

         ಭೃಶಮಭಿಪತ್ಯ ರಿಪೋಃ ಶಿರೋಽಭಿಹರ್ತಾ||

ಅವನು ಪಾತಾಳಕ್ಕೇ ಹೋಗಲಿ, ಅಲ್ಲಿಂದ ಮುಂದಕ್ಕೂ ಹೋಗಲಿ, ಆಕಾಶಕ್ಕೇ ಹೋಗಲಿ, ದೇವಲೋಕಕ್ಕೆ ಹೋಗಲಿ, ದೈತ್ಯರ ಪಟ್ಟಣಕ್ಕಾದರೂ ಹೋಗಲಿ – ಬೆಳಗಾದೊಡನೆಯೇ ನಾನು ಅಲ್ಲಿಯೇ ಹೋಗಿ ನೂರಾರು ಬಾಣಗಳಿಂದ ನನ್ನ ಶತ್ರುವಿನ ಶಿರವನ್ನು ಹಾರಿಸುತ್ತೇನೆ!”

07051040a ಏವಮುಕ್ತ್ವಾ ವಿಚಿಕ್ಷೇಪ ಗಾಂಡೀವಂ ಸವ್ಯದಕ್ಷಿಣಂ|

07051040c ತಸ್ಯ ಶಬ್ದಮತಿಕ್ರಮ್ಯ ಧನುಃಶಬ್ದೋಽಸ್ಪೃಶದ್ದಿವಂ||

ಹೀಗೆ ಹೇಳಿ ಅವನು ಗಾಂಡೀವವನ್ನು ಎರಡೂ ಕೈಗಳಿಂದ ಟೇಂಕರಿಸಿದನು. ಆ ಧನುಸ್ಸಿನ ಘೋಷವು ಎಲ್ಲವನ್ನೂ ಅತಿಕ್ರಮಿಸಿ ದಿಕ್ಕುಗಳನ್ನು ಮುಟ್ಟಿತು.

07051041a ಅರ್ಜುನೇನ ಪ್ರತಿಜ್ಞಾತೇ ಪಾಂಚಜನ್ಯಂ ಜನಾರ್ದನಃ|

07051041c ಪ್ರದಧ್ಮೌ ತತ್ರ ಸಂಕ್ರುದ್ಧೋ ದೇವದತ್ತಂ ಧನಂಜಯಃ||

ಅರ್ಜುನನು ಪ್ರತಿಜ್ಞೆಮಾಡಲು ಜನಾರ್ದನನು ಪಾಂಚಜನ್ಯವನ್ನೂ ಸಂಕ್ರುದ್ಧ ಧನಂಜಯನು ದೇವದತ್ತವನ್ನೂ ಊದಿದರು.

07051042a ಸ ಪಾಂಚಜನ್ಯೋಽಚ್ಯುತವಕ್ತ್ರವಾಯುನಾ

         ಭೃಶಂ ಸುಪೂರ್ಣೋದರನಿಃಸೃತಧ್ವನಿಃ|

07051042c ಜಗತ್ಸಪಾತಾಲವಿಯದ್ದಿಗೀಶ್ವರಂ

         ಪ್ರಕಂಪಯಾಮಾಸ ಯುಗಾತ್ಯಯೇ ಯಥಾ||

ಅಚ್ಯುತನ ಬಾಯಿಯ ವಾಯುವಿನಿಂದ ಪಾಂಚಜನ್ಯದ ಉದರಭಾಗವು ಸಂಪೂರ್ಣವಾಗಿ ತುಂಬಿ, ಅಲ್ಲಿಂದ ಹೊರಬಂದ ಶಬ್ಧವು ಪಾತಾಲ, ಆಕಾಶ, ದಿಕ್ಕುಗಳು ಮತ್ತು ದಿಕ್ಪಾಲಕರಿಂದ ಕೂಡಿದ ಸಂಪೂರ್ಣ ಜಗತ್ತು ಇವೆಲ್ಲವನ್ನೂ ಯುಗಾಂತವೋ ಎಂಬಂತೆ ನಡುಗಿಸಿತು.

07051043a ತತೋ ವಾದಿತ್ರಘೋಷಾಶ್ಚ ಪ್ರಾದುರಾಸನ್ಸಮಂತತಃ|

07051043c ಸಿಂಹನಾದಾಶ್ಚ ಪಾಂಡೂನಾಂ ಪ್ರತಿಜ್ಞಾತೇ ಮಹಾತ್ಮನಾ||

ಆ ಮಹಾತ್ಮನು ಪ್ರತಿಜ್ಞೆಮಾಡಲು ಎಲ್ಲಕಡೆ ವಾದ್ಯ ಘೋಷಗಳು ಮೊಳಗಿದವು ಮತ್ತು ಪಾಂಡವರು ಸಿಂಹನಾದಗೈದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅರ್ಜುನಪ್ರತಿಜ್ಞಾಯಾಂ ಏಕಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅರ್ಜುನಪ್ರತಿಜ್ಞೆ ಎನ್ನುವ ಐವತ್ತೊಂದನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವ ಧಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೬೭/೧೦೦, ಅಧ್ಯಾಯಗಳು-೧೦೨೮/೧೯೯೫, ಶ್ಲೋಕಗಳು-೩೫೧೬೪/೭೩೭೮೪

Image result for trees against white background

Comments are closed.