Drona Parva: Chapter 48

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೮

ದುಃಶಾಸನನ ಮಗನು ಗದಾಯುದ್ಧದಲ್ಲಿ ಅಭಿಮನ್ಯುವನ್ನು ವಧಿಸಿದುದು (೧-೧೩). ರಣಭೂಮಿಯ ವರ್ಣನೆ  ಮತ್ತು ಹದಿಮೂರನೇ ದಿನದ ಯುದ್ಧದ ಮುಕ್ತಾಯ (೧೪-೫೩).

07048001 ಸಂಜಯ ಉವಾಚ|

07048001a ವಿಷ್ಣೋಃ ಸ್ವಸಾನಂದಿಕರಃ ಸ ವಿಷ್ಣ್ವಾಯುಧಭೂಷಿತಃ|

07048001c ರರಾಜಾತಿರಥಃ ಸಂಖ್ಯೇ ಜನಾರ್ದನ ಇವಾಪರಃ||

ಸಂಜಯನು ಹೇಳಿದನು: “ವಿಷ್ಣುವಿನ ಅಳಿಯ, ಆನಂದದಾಯಕ, ವಿಷ್ಣುವಿನ ಆಯುಧ ಭೂಷಿತನಾದ ಆ ಅತಿರಥನು ಯುದ್ಧದಲ್ಲಿ ಅಪರ ಜನಾರ್ದನನಂತೆಯೇ ರಾರಾಜಿಸಿದನು.

07048002a ಮಾರುತೋದ್ಧೂತಕೇಶಾಂತಮುದ್ಯತಾರಿವರಾಯುಧಂ|

07048002c ವಪುಃ ಸಮೀಕ್ಷ್ಯ ಪೃಥ್ವೀಶಾ ದುಃಸಮೀಕ್ಷ್ಯಂ ಸುರೈರಪಿ||

ಮುಂಗುರುಳುಗಳು ಗಾಳಿಯಲ್ಲಿ ಹಾರಾಡುತ್ತಿರಲು, ಶ್ರೇಷ್ಠ ಚಕ್ರಾಯುಧವನ್ನು ಮೇಲೆತ್ತಿ ಹಿಡಿದಿದ್ದ, ಸುರರಿಗೂ ನೋಡಲಿಕ್ಕೆ ಸಿಗದ ಅವನ ಆ ರೂಪವನ್ನು ಪೃಥ್ವೀಶರು ಕಂಡರು.

07048003a ತಚ್ಚಕ್ರಂ ಭೃಶಮುದ್ವಿಗ್ನಾಃ ಸಂಚಿಚ್ಚಿದುರನೇಕಧಾ|

07048003c ಮಹಾರಥಸ್ತತಃ ಕಾರ್ಷ್ಣಿಃ ಸಂಜಗ್ರಾಹ ಮಹಾಗದಾಂ||

ಉದ್ವಿಗ್ನರಾದ ಅವರು ಆ ಚಕ್ರವನ್ನು ಅನೇಕ ಭಾಗಗಳಾಗಿ ತುಂಡರಿಸಿದರು. ಆಗ ಮಹಾರಥ ಕಾರ್ಷ್ಣಿಯು ಮಹಾಗದೆಯನ್ನು ಎತ್ತಿಕೊಂಡನು.

07048004a ವಿಧನುಃಸ್ಯಂದನಾಸಿಸ್ತೈರ್ವಿಚಕ್ರಶ್ಚಾರಿಭಿಃ ಕೃತಃ|

07048004c ಅಭಿಮನ್ಯುರ್ಗದಾಪಾಣಿರಶ್ವತ್ಥಾಮಾನಮಾದ್ರವತ್||

ಶತ್ರುಗಳಿಂದ ಧನುಸ್ಸು, ರಥ, ಖಡ್ಗ ಮತ್ತು ಚಕ್ರಗಳಿಲ್ಲದಂತೆ ಮಾಡಿಸಿಕೊಂಡ ಅಭಿಮನ್ಯುವು ಗದೆಯನ್ನು ಹಿಡಿದು ಅಶ್ವತ್ಥಾಮನ ಮೇಲೆ ಎರಗಿದನು.

07048005a ಸ ಗದಾಮುದ್ಯತಾಂ ದೃಷ್ಟ್ವಾ ಜ್ವಲಂತೀಮಶನೀಮಿವ|

07048005c ಅಪಾಕ್ರಾಮದ್ರಥೋಪಸ್ಥಾದ್ವಿಕ್ರಮಾಂಸ್ತ್ರೀನ್ನರರ್ಷಭಃ||

ವಜ್ರಾಯುಧದಂತಿದ್ದ ಆ ಗದೆಯನ್ನು ಮೇಲೆತ್ತಿ ಬರುತ್ತಿರುವ ಅವನನ್ನು ನೋಡಿ ನರರ್ಷಭ ಅಶ್ವತ್ಥಾಮನು ತಾನು ನಿಂತಿದ್ದ ರಥದಿಂದ ಮೂರು ಹೆಜ್ಜೆಗಳಷ್ಟು ಹಿಂದೆ ಸರಿದನು.

07048006a ತಸ್ಯಾಶ್ವಾನ್ಗದಯಾ ಹತ್ವಾ ತಥೋಭೌ ಪಾರ್ಷ್ಣಿಸಾರಥೀ|

07048006c ಶರಾಚಿತಾಂಗಃ ಸೌಭದ್ರಃ ಶ್ವಾವಿದ್ವತ್ಪ್ರತ್ಯದೃಶ್ಯತ||

ಗದೆಯಿಂದ ಅವನ ಕುದುರೆಗಳನ್ನೂ ಇಬ್ಬರು ಪಾರ್ಶ್ವಸಾರಥಿಗಳನ್ನೂ ಕೊಂದನು. ಅಂಗಾಂಗಳಲೆಲ್ಲಾ ಶರಗಳಿಂದ ಚುಚ್ಚಲ್ಪಟ್ಟಿದ್ದ ಸೌಭದ್ರನು ಮುಳ್ಳುಹಂದಿಯಂತೆಯೇ ಕಂಡನು.

07048007a ತತಃ ಸುಬಲದಾಯಾದಂ ಕಾಲಕೇಯಮಪೋಥಯತ್|

07048007c ಜಘಾನ ಚಾಸ್ಯಾನುಚರಾನ್ಗಾಂಧಾರಾನ್ಸಪ್ತಸಪ್ತತಿಂ||

ಅನಂತರ ಅವನು ಸುಬಲನ ಮಗ ಕಾಲಕೇಯನನ್ನು ಕೆಳಗುರುಳಿಸಿ ಅವನ ಎಪ್ಪತ್ತೇಳು ಗಾಂಧಾರ ಅನುಚರರನ್ನು ಸಂಹರಿಸಿದನು.

07048008a ಪುನರ್ಬ್ರಹ್ಮವಸಾತೀಯಾಂ ಜಘಾನ ರಥಿನೋ ದಶ|

07048008c ಕೇಕಯಾನಾಂ ರಥಾನ್ಸಪ್ತ ಹತ್ವಾ ಚ ದಶ ಕುಂಜರಾನ್|

07048008e ದೌಃಶಾಸನಿರಥಂ ಸಾಶ್ವಂ ಗದಯಾ ಸಮಪೋಥಯತ್||

ಪುನಃ ಅವನು ಗದೆಯಿಂದ ಬ್ರಹ್ಮವಸಾತೀಯ ಹತ್ತು ರಥಿಗಳನ್ನು ಸಂಹರಿಸಿದನು. ಹತ್ತು ಆನೆಗಳನ್ನು ಕೊಂದು ಕೇಕಯರ ಏಳು ರಥಗಳನ್ನು ನೆಲಸಮಮಾಡಿದನು. ಹಾಗೆಯೇ ದೌಃಶಾಸನಿಯ ರಥವನ್ನು ಅಶ್ವಗಳೊಂದಿಗೆ ಧ್ವಂಸಮಾಡಿದನು.

07048009a ತತೋ ದೌಃಶಾಸನಿಃ ಕ್ರುದ್ಧೋ ಗದಾಮುದ್ಯಮ್ಯ ಮಾರಿಷ|

07048009c ಅಭಿದುದ್ರಾವ ಸೌಭದ್ರಂ ತಿಷ್ಠ ತಿಷ್ಠೇತಿ ಚಾಬ್ರವೀತ್||

ಮಾರಿಷ! ಆಗ ದೌಃಶಾಸನಿಯು ಕ್ರುದ್ಧನಾಗಿ ಗದೆಯನ್ನು ಮೇಲೆತ್ತಿ “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ಸೌಭದ್ರನ ಮೇಲೆ ಎರಗಿದನು.

07048010a ತಾವುದ್ಯತಗದೌ ವೀರಾವನ್ಯೋನ್ಯವಧಕಾಂಕ್ಷಿಣೌ|

07048010c ಭ್ರಾತೃವ್ಯೌ ಸಂಪ್ರಜಹ್ರಾತೇ ಪುರೇವ ತ್ರ್ಯಂಬಕಾಂತಕೌ||

ಅನ್ಯೋನ್ಯರನ್ನು ವಧಿಸಲು ಬಯಸಿ ಅವರಿಬ್ಬರು ಭ್ರಾತೃಗಳೂ ಹಿಂದೆ ತ್ರ್ಯಂಬಕ-ಅಂತಕರಂತೆ ಪರಸ್ಪರರನ್ನು ಗದೆಯಿಂದ ಪ್ರಹರಿಸಿದರು.

07048011a ತಾವನ್ಯೋನ್ಯಂ ಗದಾಗ್ರಾಭ್ಯಾಂ ಸಂಹತ್ಯ ಪತಿತೌ ಕ್ಷಿತೌ|

07048011c ಇಂದ್ರಧ್ವಜಾವಿವೋತ್ಸೃಷ್ಟೌ ರಣಮಧ್ಯೇ ಪರಂತಪೌ||

ಗದೆಗಳ ಅಗ್ರಭಾಗಗಳಿಂದ ಪೆಟ್ಟುತಿಂದು ಮೇಲಿನಿಂದ ಬಿದ್ದ ಇಂದ್ರಧ್ವಜಗಳಂತೆ ಇಬ್ಬರೂ ಭೂಮಿಯ ಮೇಲೆ ಬಿದ್ದರು.

07048012a ದೌಃಶಾಸನಿರಥೋತ್ಥಾಯ ಕುರೂಣಾಂ ಕೀರ್ತಿವರ್ಧನಃ|

07048012c ಪ್ರೋತ್ತಿಷ್ಠಮಾನಂ ಸೌಭದ್ರಂ ಗದಯಾ ಮೂರ್ಧ್ನ್ಯತಾಡಯತ್||

ಒಡನೆಯೇ ಕುರುಗಳ ಕೀರ್ತಿವರ್ಧಕ ದೌಃಶಾಸನಿಯು ಮೇಲೆದ್ದು ಮೇಲೇಳುತ್ತಿರುವ ಸೌಭದ್ರನ ತಲೆಗೆ ಗದೆಯಿಂದ ಹೊಡೆದನು.

07048013a ಗದಾವೇಗೇನ ಮಹತಾ ವ್ಯಾಯಾಮೇನ ಚ ಮೋಹಿತಃ|

07048013c ವಿಚೇತಾ ನ್ಯಪತದ್ಭೂಮೌ ಸೌಭದ್ರಃ ಪರವೀರಹಾ|

ಮಹಾವೇಗಯುಕ್ತವಾದ ಗದಾ ಪ್ರಹಾರದಿಂದಲೂ ಹೆಚ್ಚಿನ ಶ್ರಮದಿಂದಲೂ ವಿವೋಹಿತನಾಗಿದ್ದ ಪರವೀರಹ ಸೌಭದ್ರನು ಅಸುನೀಗಿ ಭೂಮಿಯ ಮೇಲೆ ಬಿದ್ದನು.

07048013e ಏವಂ ವಿನಿಹತೋ ರಾಜನ್ನೇಕೋ ಬಹುಭಿರಾಹವೇ||

ಹೀಗೆ ರಾಜನ್! ಅನೇಕರು ಆಹವದಲ್ಲಿ ಏಕಾಂಗಿಯಾಗಿದ್ದವನನ್ನು ಸಂಹರಿಸಿದರು.

07048014a ಕ್ಷೋಭಯಿತ್ವಾ ಚಮೂಂ ಸರ್ವಾನ್ನಲಿನೀಮಿವ ಕುಂಜರಃ|

07048014c ಅಶೋಭತ ಹತೋ ವೀರೋ ವ್ಯಾಧೈರ್ವನಗಜೋ ಯಥಾ||

ಸರೋವರವನ್ನು ಆನೆಯು ಕ್ಷೋಭೆಗೊಳಿಸುವಂತೆ ಆ ವೀರನು ಸೇನೆಯನ್ನು ಅಲ್ಲೋಲಕಲ್ಲೋಲಗೊಳಿಸಿ ವ್ಯಾಧರಿಂದ ಬೇಟೆಯಾಡಲ್ಪಟ್ಟ ಕಾಡಾನೆಯಂತೆ ಹತನಾಗಿ ಶೋಭಿಸಿದನು.

07048015a ತಂ ತಥಾ ಪತಿತಂ ಶೂರಂ ತಾವಕಾಃ ಪರ್ಯವಾರಯನ್|

07048015c ದಾವಂ ದಗ್ಧ್ವಾ ಯಥಾ ಶಾಂತಂ ಪಾವಕಂ ಶಿಶಿರಾತ್ಯಯೇ||

07048016a ವಿಮೃದ್ಯ ತರುಶೃಂಗಾಣಿ ಸನ್ನಿವೃತ್ತಮಿವಾನಿಲಂ|

07048016c ಅಸ್ತಂ ಗತಮಿವಾದಿತ್ಯಂ ತಪ್ತ್ವಾ ಭಾರತವಾಹಿನೀಂ||

07048017a ಉಪಪ್ಲುತಂ ಯಥಾ ಸೋಮಂ ಸಂಶುಷ್ಕಮಿವ ಸಾಗರಂ|

07048017c ಪೂರ್ಣಚಂದ್ರಾಭವದನಂ ಕಾಕಪಕ್ಷವೃತಾಕ್ಷಕಂ||

07048018a ತಂ ಭೂಮೌ ಪತಿತಂ ದೃಷ್ಟ್ವಾ ತಾವಕಾಸ್ತೇ ಮಹಾರಥಾಃ|

07048018c ಮುದಾ ಪರಮಯಾ ಯುಕ್ತಾಶ್ಚುಕ್ರುಶುಃ ಸಿಂಹವನ್ಮುಹುಃ||

ಹೀಗೆ ಕೆಳಗೆಬಿದ್ದ ಆ ಶೂರನನ್ನು ನಿನ್ನವರು ಸುತ್ತುವರೆದರು. ಶಿಶಿರ ಋತುವಿನ ಅಂತ್ಯದಲ್ಲಿ ಅರಣ್ಯವನ್ನು ಸುಟ್ಟು ಶಾಂತನಾದ ಪಾವಕನಂತಿದ್ದ, ಮರ-ಶಿಖರಗಳನ್ನು ಕೆಳಗುರುಳಿಸಿ ಶಾಂತವಾದ ಭಿರುಗಾಳಿಯಂತಿದ್ದ, ಭಾರತವಾಹಿನಿಯನ್ನು ಸುಟ್ಟು ಅಸ್ತಂಗತನಾದ ಆದಿತ್ಯನಂತಿದ್ದ, ರಾಹುಗ್ರಸ್ತ ಚಂದ್ರನಂತಿದ್ದ, ಬತ್ತಿಹೋದ ಸಾಗರದಂತಿದ್ದ, ಪೂರ್ಣಚಂದ್ರನ ಕಾಂತಿಯಿಂದ ಬೆಳಗುತ್ತಿದ್ದ, ಮುಚ್ಚಿದ ಕಣ್ಣುಗಳು ಮುಂಗುರುಳುಗಳಿಂದ ಕೂಡಿದ ಮುಖದ ಅವನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ನಿನ್ನ ಕಡೆಯ ಮಹಾರಥರು ಪರಮ ಹರ್ಷಿತರಾಗಿ ಒಟ್ಟಾಗಿ ಮತ್ತೆ ಮತ್ತೆ ಸಿಂಹನಾದಗೈದರು.

07048019a ಆಸೀತ್ಪರಮಕೋ ಹರ್ಷಸ್ತಾವಕಾನಾಂ ವಿಶಾಂ ಪತೇ|

07048019c ಇತರೇಷಾಂ ತು ವೀರಾಣಾಂ ನೇತ್ರೇಭ್ಯಃ ಪ್ರಾಪತಜ್ಜಲಂ||

ವಿಶಾಂಪತೇ! ನಿನ್ನವರಿಗೆ ಪರಮ ಹರ್ಷವುಂಟಾಯಿತು. ಆದರೆ ಇತರ ವೀರರ ಕಣ್ಣುಗಳು ನೀರಿನಿಂದ ತುಂಬಿದವು.

07048020a ಅಭಿಕ್ರೋಶಂತಿ ಭೂತಾನಿ ಅಂತರಿಕ್ಷೇ ವಿಶಾಂ ಪತೇ|

07048020c ದೃಷ್ಟ್ವಾ ನಿಪತಿತಂ ವೀರಂ ಚ್ಯುತಂ ಚಂದ್ರಮಿವಾಂಬರಾತ್||

ವಿಶಾಂಪತೇ! ಅಂಬರದಿಂದ ಚಂದ್ರನು ಬಿದ್ದಂತೆ ಬಿದ್ದಿರುವ ಆ ವೀರನನ್ನು ನೋಡಿ ಅಂತರಿಕ್ಷದಲ್ಲಿ ಇರುವವರು ಕಿರುಚಿಕೊಂಡರು:

07048021a ದ್ರೋಣಕರ್ಣಮುಖೈಃ ಷಡ್ಭಿರ್ಧಾರ್ತರಾಷ್ಟ್ರೈರ್ಮಹಾರಥೈಃ|

07048021c ಏಕೋಽಯಂ ನಿಹತಃ ಶೇತೇ ನೈಷ ಧರ್ಮೋ ಮತೋ ಹಿ ನಃ||

“ದ್ರೋಣ-ಕರ್ಣರೇ ಪ್ರಮುಖರಾದ ಧಾರ್ತರಾಷ್ಟ್ರರ ಆರು ಮಹಾರಥರಿಂದ ಈ ಒಬ್ಬನೇ ನಿಹತನಾಗಿ ಮಲಗಿದ್ದಾನೆ! ಇದು ಧರ್ಮವಲ್ಲವೆಂಬುದು ನಮ್ಮ ಮತ!”

07048022a ತಸ್ಮಿಂಸ್ತು ನಿಹತೇ ವೀರೇ ಬಹ್ವಶೋಭತ ಮೇದಿನೀ|

07048022c ದ್ಯೌರ್ಯಥಾ ಪೂರ್ಣಚಂದ್ರೇಣ ನಕ್ಷತ್ರಗಣಮಾಲಿನೀ||

ಆ ವೀರನು ಹತನಾಗಲು ರಣಾಂಗಣವು ಪೂರ್ಣಚಂದ್ರನಿಂದ ಕೂಡಿದ ನಕ್ಷತ್ರಗಣಮಾಲಿನೀ ಆಕಾಶದಂತೆ ಬಹುವಾಗಿ ಶೋಭಿಸಿತು.

07048023a ರುಕ್ಮಪುಂಖೈಶ್ಚ ಸಂಪೂರ್ಣಾ ರುಧಿರೌಘಪರಿಪ್ಲುತಾ|

07048023c ಉತ್ತಮಾಂಗೈಶ್ಚ ವೀರಾಣಾಂ ಭ್ರಾಜಮಾನೈಃ ಸಕುಂಡಲೈಃ||

07048024a ವಿಚಿತ್ರೈಶ್ಚ ಪರಿಸ್ತೋಮೈಃ ಪತಾಕಾಭಿಶ್ಚ ಸಂವೃತಾ|

07048024c ಚಾಮರೈಶ್ಚ ಕುಥಾಭಿಶ್ಚ ಪ್ರವಿದ್ಧೈಶ್ಚಾಂಬರೋತ್ತಮೈಃ||

07048025a ರಥಾಶ್ವನರನಾಗಾನಾಮಲಂಕಾರೈಶ್ಚ ಸುಪ್ರಭೈಃ|

07048025c ಖಡ್ಗೈಶ್ಚ ನಿಶಿತೈಃ ಪೀತೈರ್ನಿರ್ಮುಕ್ತೈರ್ಭುಜಗೈರಿವ||

07048026a ಚಾಪೈಶ್ಚ ವಿಶಿಖೈಶ್ಚಿನ್ನೈಃ ಶಕ್ತ್ಯೃಷ್ಟಿಪ್ರಾಸಕಂಪನೈಃ|

07048026c ವಿವಿಧೈರಾಯುಧೈಶ್ಚಾನ್ಯೈಃ ಸಂವೃತಾ ಭೂರಶೋಭತ||

ರುಕ್ಮಪುಂಖಗಳಿಂದ, ಸಂಪೂರ್ಣವಾಗಿ ರಕ್ತದಲ್ಲಿ ತೋಯ್ದುಹೋಗಿದ್ದ ವೀರರ ಶಿರಗಳಿಂದ, ಹೊಳೆಯುತ್ತಿದ್ದ ಕುಂಡಲಗಳಿಂದ, ಪತಾಕೆಗಳಿಂದ ಸಂವೃತವಾಗಿದ್ದ ವಿಚಿತ್ರ ಪರಿಸ್ತೋಮಗಳಿಂದ, ಚಾಮರಗಳಿಂದ, ಬಣ್ಣದ ಕಂಬಳಿಗಳಿಂದ, ಹರಡಿದ್ದ ಉತ್ತಮ ವಸ್ತ್ರಗಳಿಂದ, ರಥ-ಅಶ್ವ-ನರ-ನಾಗಗಳ ಹೊಳೆಯುತ್ತಿರುವ ಅಲಂಕಾರಗಳಿಂದ, ಪೊರೆಬಿಟ್ಟ ಸರ್ಪಗಳಂತಿದ್ದ ಪೀತಲದ ನಿಶಿತ ಖಡ್ಗಗಳಿಂದ, ಮುರಿದಿದ್ದ ಚಾಪ-ವಿಶಿಖಗಳಿಂದ, ಶಕ್ತಿ-ಋಷ್ಟಿ-ಪ್ರಾಸ-ಕಂಪನಗಳಿಂದ, ಅನ್ಯ ವಿವಿಧ ಆಯುಧಗಳಿಂದ ತುಂಬಿ ಭೂಮಿಯು ಶೋಭಿಸಿತು.

07048027a ವಾಜಿಭಿಶ್ಚಾಪಿ ನಿರ್ಜೀವೈಃ ಸ್ವಪದ್ಭಿಃ ಶೋಣಿತೋಕ್ಷಿತೈಃ|

07048027c ಸಾರೋಹೈರ್ವಿಷಮಾ ಭೂಮಿಃ ಸೌಭದ್ರೇಣ ನಿಪಾತಿತೈಃ||

ಸೌಭದ್ರನಿಂದ ಕೆಳಗುರುಳಿಸಲ್ಪಟ್ಟ ನಿರ್ಜೀವ ಕುದುರೆಗಳು ಮತ್ತು ರಕ್ತದಿಂದ ತೋಯ್ದು ಹೋಗಿ ಆರೋಹಿಗಳೊಡನೆ ಸ್ವಲ್ಪ ಸ್ವಲ್ಪವೇ ಉಸಿರಾಡುತ್ತಿದ್ದ ಕುದುರೆಗಳಿಂದ ರಣಭೂಮಿಯು ಏರುತಿಟ್ಟಾಗಿತ್ತು.

07048028a ಸಾಂಕುಶೈಃ ಸಮಹಾಮಾತ್ರೈಃ ಸವರ್ಮಾಯುಧಕೇತುಭಿಃ|

07048028c ಪರ್ವತೈರಿವ ವಿಧ್ವಸ್ತೈರ್ವಿಶಿಖೋನ್ಮಥಿತೈರ್ಗಜೈಃ||

ಅಂಕುಶಗಳಿಂದ, ಮಾವುತರಿಂದ, ಕವಚಗಳಿಂದ, ಆಯುಧಗಳಿಂದ, ಕೇತುಗಳಿಂದ, ಮತ್ತು ವಿಶಿಖಗಳಿಂದ ಸಂಹರಿಸಲ್ಪಟ್ಟ ಪರ್ವತಗಳಂತಿರುವ ಆನೆಗಳಿಂದ ರಣರಂಗವು ಹರಡಿ ಹೋಗಿತ್ತು.

07048029a ಪೃಥಿವ್ಯಾಮನುಕೀರ್ಣೈಶ್ಚ ವ್ಯಶ್ವಸಾರಥಿಯೋಧಿಭಿಃ|

07048029c ಹ್ರದೈರಿವ ಪ್ರಕ್ಷುಭಿತೈರ್ಹತನಾಗೈ ರಥೋತ್ತಮೈಃ||

ಅಶ್ವ-ಸಾರಥಿ-ಯೋಧರಿಂದ ವಿಹೀನವಾದ ರಥಗಳು ನುಚ್ಚುನೂರಾಗಿ ಅಲ್ಲೋಲಕಲ್ಲೋಲವಾಗಿರುವ, ಸತ್ತುಬಿದ್ದಿರುವ ಸರ್ಪಗಳಿಂದ ಕೂಡಿದ ಮಡುವುಗಳಂತೆ ಶೋಭಿಸುತ್ತಿದ್ದವು.

07048030a ಪದಾತಿಸಂಘೈಶ್ಚ ಹತೈರ್ವಿವಿಧಾಯುಧಭೂಷಣೈಃ|

07048030c ಭೀರೂಣಾಂ ತ್ರಾಸಜನನೀ ಘೋರರೂಪಾಭವನ್ಮಹೀ||

ವಿವಿಧಾಯುಧಭೂಷಣಗಳೊಂದಿಗೆ ಹತರಾಗಿ ಬಿದ್ದಿದ್ದ ಪದಾತಿಸೇನೆಗಳಿಂದ ರಣಭೂಮಿಯು ಹೇಡಿಗಳಿಗೆ ಭಯವನ್ನುಂಟುಮಾಡುವ ಘೋರರೂಪವನ್ನು ತಾಳಿತ್ತು.

07048031a ತಂ ದೃಷ್ಟ್ವಾ ಪತಿತಂ ಭೂಮೌ ಚಂದ್ರಾರ್ಕಸದೃಶದ್ಯುತಿಂ|

07048031c ತಾವಕಾನಾಂ ಪರಾ ಪ್ರೀತಿಃ ಪಾಂಡೂನಾಂ ಚಾಭವದ್ವ್ಯಥಾ||

ಚಂದ್ರ-ಸೂರ್ಯರ ಕಾಂತಿಯನ್ನು ಹೊಂದಿದ್ದ ಅವನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ನಿನ್ನವರಿಗೆ ಪರಮ ಸಂತೋಷವಾಯಿತು ಮತ್ತು ಪಾಂಡವರಿಗೆ ವ್ಯಥೆಯಾಯಿತು.

07048032a ಅಭಿಮನ್ಯೌ ಹತೇ ರಾಜನ್ ಶಿಶುಕೇಽಪ್ರಾಪ್ತಯೌವನೇ|

07048032c ಸಂಪ್ರಾದ್ರವಚ್ಚಮೂಃ ಸರ್ವಾ ಧರ್ಮರಾಜಸ್ಯ ಪಶ್ಯತಃ||

ರಾಜನ್! ಇನ್ನೂ ಯೌವನವನ್ನು ಪಡೆಯದಿದ್ದ ಕುಮಾರ ಅಭಿಮನ್ಯುವು ಹತನಾಗಲು ಧರ್ಮರಾಜನು ನೋಡುತ್ತಿದ್ದಂತೆಯೇ ಎಲ್ಲ ಸೇನೆಗಳೂ ಓಡಿ ಹೋಗತೊಡಗಿದವು.

07048033a ದೀರ್ಯಮಾಣಂ ಬಲಂ ದೃಷ್ಟ್ವಾ ಸೌಭದ್ರೇ ವಿನಿಪಾತಿತೇ|

07048033c ಅಜಾತಶತ್ರುಃ ಸ್ವಾನ್ವೀರಾನಿದಂ ವಚನಮಬ್ರವೀತ್||

ಸೌಭದ್ರನು ಕೆಳಗುರುಳಲು ಸೀಳಿಹೋದ ಸೇನೆಯನ್ನು ನೋಡಿ ಅಜಾತಶತ್ರುವು ತನ್ನ ವೀರರಿಗೆ ಈ ಮಾತನ್ನಾಡಿದನು:

07048034a ಸ್ವರ್ಗಂ ಏಷ ಗತಃ ಶೂರೋ ಯೋ ಹತೋ ನಪರಾಙ್ಮುಖಃ|

07048034c ಸಂಸ್ತಂಭಯತ ಮಾ ಭೈಷ್ಟ ವಿಜೇಷ್ಯಾಮೋ ರಣೇ ರಿಪೂನ್||

“ಪರಾಙ್ಮುಖನಾಗದೇ ಹತನಾದ ಈ ಶೂರನು ಸ್ವರ್ಗಕ್ಕೇ ಹೋಗಿದ್ದಾನೆ. ನೀವೆಲ್ಲರೂ ಧೈರ್ಯತಾಳಿರಿ. ಹೆದರಬೇಡಿ. ರಣದಲ್ಲಿ ರಿಪುಗಳನ್ನು ನಾವು ಗೆಲ್ಲುತ್ತೇವೆ!”

07048035a ಇತ್ಯೇವಂ ಸ ಮಹಾತೇಜಾ ದುಃಖಿತೇಭ್ಯೋ ಮಹಾದ್ಯುತಿಃ|

07048035c ಧರ್ಮರಾಜೋ ಯುಧಾಂ ಶ್ರೇಷ್ಠೋ ಬ್ರುವನ್ದುಃಖಮಪಾನುದತ್||

ಈ ರೀತಿ ದುಃಖಿತನಾಗಿದ್ದ ಮಹಾತೇಜಸ್ವಿ ಮಹಾದ್ಯುತಿ, ಯೋಧರಲ್ಲಿ ಶ್ರೇಷ್ಠ ಧರ್ಮರಾಜನು ಹೇಳಿ ದುಃಖವನ್ನು ಕಡಿಮೆಮಾಡಿದನು.

07048036a ಯುದ್ಧೇ ಹ್ಯಾಶೀವಿಷಾಕಾರಾನ್ರಾಜಪುತ್ರಾನ್ರಣೇ ಬಹೂನ್|

07048036c ಪೂರ್ವಂ ನಿಹತ್ಯ ಸಂಗ್ರಾಮೇ ಪಶ್ಚಾದಾರ್ಜುನಿರನ್ವಗಾತ್||

ಯುದ್ಧದಲ್ಲಿ ಸರ್ಪವಿಷಸಮಾನ ಅನೇಕ ರಾಜಪುತ್ರರನ್ನು ರಣದಲ್ಲಿ ಮೊದಲು ಸಂಹರಿಸಿ ಅನಂತರ ಸಂಗ್ರಾಮದಲ್ಲಿ ಆರ್ಜುನಿಯು ತೀರಿಕೊಂಡನು.

07048037a ಹತ್ವಾ ದಶಸಹಸ್ರಾಣಿ ಕೌಸಲ್ಯಂ ಚ ಮಹಾರಥಂ|

07048037c ಕೃಷ್ಣಾರ್ಜುನಸಮಃ ಕಾರ್ಷ್ಣಿಃ ಶಕ್ರಸದ್ಮ ಗತೋ ಧ್ರುವಂ||

ಹತ್ತು ಸಾವಿರರನ್ನು ಮತ್ತು ಮಹಾರಥ ಕೌಸಲ್ಯನನ್ನೂ ಸಂಹರಿಸಿ ಕೃಷ್ಣಾರ್ಜುನರ ಸಮನಾದ ಕಾರ್ಷ್ಣಿಯು ಶಕ್ರನ ಮನೆಗೆ ಹೋಗಿರುವುದು ನಿಶ್ಚಯ.

07048038a ರಥಾಶ್ವನರಮಾತಂಗಾನ್ವಿನಿಹತ್ಯ ಸಹಸ್ರಶಃ|

07048038c ಅವಿತೃಪ್ತಃ ಸ ಸಂಗ್ರಾಮಾದಶೋಚ್ಯಃ ಪುಣ್ಯಕರ್ಮಕೃತ್||

ಸಹಸ್ರಾರು ರಥ-ಅಶ್ವ-ನರ-ಮಾತಂಗಗಳನ್ನು ನಾಶಪಡಿಸಿಯೂ ಅವನು ಸಂಗ್ರಾಮದಲ್ಲಿ ಅತೃಪ್ತನಾಗಿದ್ದನು. ಪುಣ್ಯಕರ್ಮಗಳನ್ನೆಸಗಿದ ಅವನು ಅಶೋಚ್ಯನೇ ಸರಿ.

07048039a ವಯಂ ತು ಪ್ರವರಂ ಹತ್ವಾ ತೇಷಾಂ ತೈಃ ಶರಪೀಡಿತಾಃ|

07048039c ನಿವೇಶಾಯಾಭ್ಯುಪಾಯಾಮ ಸಾಯಾಹ್ನೇ ರುಧಿರೋಕ್ಷಿತಾಃ||

ನಾವಾದರೋ ಅವರಲ್ಲಿ ಶ್ರೇಷ್ಠನಾದವನನ್ನು ಸಂಹರಿಸಿ ಅವನ ಶರಗಳಿಂದ ಪೀಡಿತರಾಗಿ, ರಕ್ತದಲ್ಲಿ ತೋಯ್ದು, ಸಾಯಂಕಾಲದ ಹೊತ್ತಿಗೆ ಬಿಡಾರಗಳಿಗೆ ಹಿಂದಿರುಗಿದೆವು.

07048040a ನಿರೀಕ್ಷಮಾಣಾಸ್ತು ವಯಂ ಪರೇ ಚಾಯೋಧನಂ ಶನೈಃ|

07048040c ಅಪಯಾತಾ ಮಹಾರಾಜ ಗ್ಲಾನಿಂ ಪ್ರಾಪ್ತಾ ವಿಚೇತಸಃ||

ಮಹಾರಾಜ! ನಾವು ಮತ್ತು ಅವರು ರಣರಂಗವನ್ನು ತಿರುಗಿ ತಿರುಗಿ ನೋಡುತ್ತಾ ಮೆಲ್ಲ ಮೆಲ್ಲನೇ ಹಿಂದಿರುಗಿದೆವು. ಅವರು ಶೋಕಗ್ರಸ್ತರಾಗಿ ಬುದ್ಧಿಕೆಟ್ಟವರಾಗಿ ಹಿಂದಿರುಗಿದರು.

07048041a ತತೋ ನಿಶಾಯಾ ದಿವಸಸ್ಯ ಚಾಶಿವಃ

         ಶಿವಾರುತಃ ಸಂಧಿರವರ್ತತಾದ್ಭುತಃ|

07048041c ಕುಶೇಶಯಾಪೀಡನಿಭೇ ದಿವಾಕರೇ

         ವಿಲಂಬಮಾನೇಽಸ್ತಮುಪೇತ್ಯ ಪರ್ವತಂ||

ಆಗ ಕಮಲದ ಮಾಲೆಯ ಕಾಂತಿಯ ದಿವಾಕರನು ಪರ್ವತವನ್ನೇರಿ ಕೆಳಗಿಳಿಯುತ್ತಿರಲು, ರಾತ್ರಿ ಮತ್ತು ದಿವಸದ ಸಂಧಿಯು ನರಿಗಳ ಅಮಂಗಳಕರ ಕೂಗಿನಿಂದ ಅದ್ಭುತವಾಯಿತು.

07048042a ವರಾಸಿಶಕ್ತ್ಯೃಷ್ಟಿವರೂಥಚರ್ಮಣಾಂ

         ವಿಭೂಷಣಾನಾಂ ಚ ಸಮಾಕ್ಷಿಪನ್ಪ್ರಭಾಂ|

07048042c ದಿವಂ ಚ ಭೂಮಿಂ ಚ ಸಮಾನಯನ್ನಿವ

         ಪ್ರಿಯಾಂ ತನುಂ ಭಾನುರುಪೈತಿ ಪಾವಕಂ||

ಶ್ರೇಷ್ಠ ಖಡ್ಗ-ಶಕ್ತಿ-ಋಷ್ಠಿ-ರಥ-ಗುರಾಣಿಗಳ ಮತ್ತು ವಿಭೂಷಣಗಳ ಪ್ರಭೆಗಳನ್ನು ಹೀರಿಕೊಳ್ಳುತ್ತಾ, ಅಂತರಿಕ್ಷ-ಭೂಮಿಗಳನ್ನು ಸಮಾನವೆನ್ನಿಸುವಂತೆ ಮಾಡುತ್ತಾ ಭಾನುವು ತನ್ನ ಪ್ರಿಯ ಪಾವಕನಲ್ಲಿ ಸೇರಿಕೊಂಡನು.

07048043a ಮಹಾಭ್ರಕೂಟಾಚಲಶೃಂಗಸಮ್ನಿಭೈರ್

         ಗಜೈರನೇಕೈರಿವ ವಜ್ರಪಾತಿತೈಃ|

07048043c ಸವೈಜಯಂತ್ಯಂಕುಶವರ್ಮಯಂತೃಭಿರ್

         ನಿಪಾತಿತೈರ್ನಿಷ್ಟನತೀವ ಗೌಶ್ಚಿತಾ||

ಮಹಾಮೇಘಸಮೂಹಸದೃಶ, ಪರ್ವತಶಿಖರ ಸದೃಶ ದೊಡ್ಡ ದೊಡ್ಡ ಆನೆಗಳು ವಜ್ರಾಯುಧದಿಂದ ಹತವಾದವುಗಳಂತೆ ವೈಜಯಂತಿ-ಅಂಕುಶ-ಕವಚ-ಮಾವುತರ ಸಹಿತ ಅಸುನೀಗಿ ಕೆಳಗೆ ಬಿದ್ದು ರಣರಂಗದ ಹಾದಿಗಳನ್ನೇ ಮುಚ್ಚಿಬಿಟ್ಟಿದ್ದವು.

07048044a ಹತೇಶ್ವರೈಶ್ಚೂರ್ಣಿತಪತ್ತ್ಯುಪಸ್ಕರೈರ್

         ಹತಾಶ್ವಸೂತೈರ್ವಿಪತಾಕಕೇತುಭಿಃ|

07048044c ಮಹಾರಥೈರ್ಭೂಃ ಶುಶುಭೇ ವಿಚೂರ್ಣಿತೈಃ

         ಪುರೈರಿವಾಮಿತ್ರಹತೈರ್ನರಾಧಿಪ||

ನರಾಧಿಪ! ಒಡೆಯರು ಹತರಾಗಿ, ಯುದ್ಧ ಸಾಮಗ್ರಿಗಳು ಚೆಲ್ಲಿ ಹರಡಿ, ಕುದುರೆ-ಸಾರಥಿಗಳು ಹತರಾಗಿ, ಪತಾಕೆ-ಕೇತುಗಳನ್ನು ಕಳೆದುಕೊಂಡು ಮುರಿದು ಬಿದ್ದಿದ್ದ ಮಹಾರಥಗಳು ರಣರಂಗದಲ್ಲಿ ಶತ್ರುಗಳಿಂದ ಧ್ವಂಸಗೊಂಡ ಪುರಗಳಂತೆ ಶೋಭಿಸಿದವು.

07048045a ರಥಾಶ್ವವೃಂದೈಃ ಸಹಸಾದಿಭಿರ್ಹತೈಃ

         ಪ್ರವಿದ್ಧಭಾಂಡಾಭರಣೈಃ ಪೃಥಗ್ವಿಧೈಃ|

07048045c ನಿರಸ್ತಜಿಹ್ವಾದಶನಾಂತ್ರಲೋಚನೈರ್

         ಧರಾ ಬಭೌ ಘೋರವಿರೂಪದರ್ಶನಾ||

ಮುರಿದ ರಥಗಳೂ ಮತ್ತು ಸತ್ತುಹೋದ ಕುದುರೆಗಳೂ, ಅವುಗಳ ಸವಾರರೂ ಗುಂಪು ಗುಂಪಾಗಿ ಬಿದ್ದಿದ್ದವು. ಸಲಕರಣೆಗಳು ಮತ್ತು ಆಭರಣಗಳು ಅಲ್ಲಲ್ಲಿ ಚೆಲ್ಲಿ ಬಿದ್ದಿದ್ದವು. ಹೊರಚಾಚಿದ್ದ ನಾಲಿಗೆ, ಹಲ್ಲು, ಕರುಳು, ಕಣ್ಣುಗಳಿಂದ ಧರೆಯು ನೋಡಲು ಘೋರವೂ ವಿರೂಪವೂ ಆಗಿದ್ದಿತು.

07048046a ಪ್ರವಿದ್ಧವರ್ಮಾಭರಣಾ ವರಾಯುಧಾ

         ವಿಪನ್ನಹಸ್ತ್ಯಶ್ವರಥಾನುಗಾ ನರಾಃ|

07048046c ಮಹಾರ್ಹಶಯ್ಯಾಸ್ತರಣೋಚಿತಾಃ ಸದಾ

         ಕ್ಷಿತಾವನಾಥಾ ಇವ ಶೇರತೇ ಹತಾಃ||

ಗಜಾಶ್ವರಥ ಸೇನೆಗಳನ್ನು ಅನುಸರಿಸಿ ಹೋಗುತ್ತಿದ್ದ ಪದಾತಿಗಳೂ, ತುಂಡಾಗಿದ್ದ ಕವಚ-ಆಭರಣಗಳು, ಶ್ರೇಷ್ಠ ಆಯುಧಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು. ಸದಾ ಬೆಲೆಬಾಳುವ ಹಾಸಿಗೆಗಳ ಮೇಲೆ ಮಲಗಲು ಅರ್ಹರಾಗಿದ್ದ ಅವರು ಅನಾಥರಂತೆ ಹತರಾಗಿ ನೆಲದ ಮೇಲೆ ಮಲಗಿದ್ದರು.

07048047a ಅತೀವ ಹೃಷ್ಟಾಃ ಶ್ವಸೃಗಾಲವಾಯಸಾ

         ಬಡಾಃ ಸುಪರ್ಣಾಶ್ಚ ವೃಕಾಸ್ತರಕ್ಷವಃ|

07048047c ವಯಾಂಸ್ಯಸೃಕ್ಪಾನ್ಯಥ ರಕ್ಷಸಾಂ ಗಣಾಃ

         ಪಿಶಾಚಸಂಘಾಶ್ಚ ಸುದಾರುಣಾ ರಣೇ||

ಆ ಸುದಾರುಣ ರಣದಲ್ಲಿ ನಾಯಿಗಳು, ನರಿಗಳು, ಕಾಗೆಗಳು, ಬಕಪಕ್ಷಿಗಳು, ಗರುಡಪಕ್ಷಿಗಳು, ತೋಳಗಳು, ಕಿರುಬಗಳು, ರಕ್ತವನ್ನೇ ಹೀರುವ ಪಕ್ಷಿಗಳು, ರಾಕ್ಷಸ ಗಣಗಳು ಮತ್ತು ಪಿಶಾಚ ಪಂಗಡಗಳು ಅತೀವ ಹರ್ಷಿತವಾಗಿದ್ದವು.

07048048a ತ್ವಚೋ ವಿನಿರ್ಭಿದ್ಯ ಪಿಬನ್ವಸಾಮಸೃಕ್

         ತಥೈವ ಮಜ್ಜಾಂ ಪಿಶಿತಾನಿ ಚಾಶ್ನುವನ್|

07048048c ವಪಾಂ ವಿಲುಂಪಂತಿ ಹಸಂತಿ ಗಾಂತಿ ಚ

         ಪ್ರಕರ್ಷಮಾಣಾಃ ಕುಣಪಾನ್ಯನೇಕಶಃ||

ಅವು ಚರ್ಮಗಳನ್ನು ಕಿತ್ತು ರಕ್ತವನ್ನು ಹೀರಿ ಕುಡಿಯುತ್ತಿದ್ದವು. ಹಾಗೆಯೇ ಮಾಂಸ-ಮಜ್ಜೆಗಳನ್ನು ತಿನ್ನುತ್ತಿದ್ದವು. ಹೆಣಗಳನ್ನು ಅನೇಕ ಬಾರಿ ಇಲ್ಲಿಂದಲ್ಲಿಗೆ ಕಚ್ಚಿಕೊಂಡು ಎಳೆದಾಡುತ್ತಿದ್ದ ಅವು ನಗುತ್ತಾ, ಹಾಡುತ್ತಾ, ಔತಣದೂಟ ಮಾಡುತ್ತಿದ್ದವು.

07048049a ಶರೀರಸಂಘಾಟವಹಾ ಅಸೃಗ್ಜಲಾ

         ರಥೋಡುಪಾ ಕುಂಜರಶೈಲಸಂಕಟಾ|

07048049c ಮನುಷ್ಯಶೀರ್ಷೋಪಲಮಾಂಸಕರ್ದಮಾ

         ಪ್ರವಿದ್ಧನಾನಾವಿಧಶಸ್ತ್ರಮಾಲಿನೀ||

07048050a ಮಹಾಭಯಾ ವೈತರಣೀವ ದುಸ್ತರಾ

         ಪ್ರವರ್ತಿತಾ ಯೋಧವರೈಸ್ತದಾ ನದೀ|

07048050c ಉವಾಹ ಮಧ್ಯೇನ ರಣಾಜಿರಂ ಭೃಶಂ

         ಭಯಾವಹಾ ಜೀವಮೃತಪ್ರವಾಹಿನೀ||

ಮಹಾಭಯಂಕರವಾದ ದಾಟಲು ಅಸಾಧ್ಯವಾದ ವೈತರಣೀ ನದಿಯನ್ನು ಶ್ರೇಷ್ಠ ಯೋಧರು ಅಲ್ಲಿ ಹರಿಸಿದ್ದರು: ರಕ್ತವೇ ನೀರಾಗಿದ್ದ ಅದರಲ್ಲಿ ಪ್ರಾಣಿಗಳ ಶರೀರಸಮೂಹಗಳು ಕೊಚ್ಚಿಕೊಂಡು ಹೋಗುತ್ತಿದ್ದವು. ರಥಗಳು ದೋಣಿಗಳಂತಿದ್ದವು. ಆನೆಗಳು ಸಂಕಟದ್ವೀಪಗಳಂತಿದ್ದವು. ಮನುಷ್ಯರ ತಲೆಗಳು ನದಿಯ ಸಣ್ಣ ಬಂಡೆಗಳಂತಿದ್ದವು. ಮಾಂಸವೇ ಕೆಸರಾಗಿತ್ತು. ಚೆಲ್ಲಿದ್ದ ನಾನಾವಿಧದ ಶಸ್ತ್ರಗಳೇ ತೆರೆಗಳಾಗಿದ್ದವು. ಜೀವಿಸಿರುವವರನ್ನೂ ಸತ್ತವರನ್ನೂ ಒಯ್ಯುತ್ತಿದ್ದ ಆ ಭಯಂಕರ ನದಿಯು ರಣರಂಗದ ಮಧ್ಯದಲ್ಲಿ ಹರಿಯುತ್ತಿತ್ತು.

07048051a ಪಿಬಂತಿ ಚಾಶ್ನಂತಿ ಚ ಯತ್ರ ದುರ್ದೃಶಾಃ

         ಪಿಶಾಚಸಂಘಾ ವಿವಿಧಾಃ ಸುಭೈರವಾಃ|

07048051c ಸುನಂದಿತಾಃ ಪ್ರಾಣಭೃತಾಂ ಭಯಂಕರಾಃ

         ಸಮಾನಭಕ್ಷಾಃ ಶ್ವಸೃಗಾಲಪಕ್ಷಿಣಃ||

ನೋಡಲೂ ಕಷ್ಟಸಾಧ್ಯವಾದ, ತುಂಬಾ ಭೈರವ ವಿವಿಧ ಪಿಶಾಚಗಣಗಳು ಅಲ್ಲಿ ಕುಡಿಯುತ್ತಿದ್ದವು ತಿನ್ನುತ್ತಿದ್ದವು. ಪ್ರಾಣವಿರುವವುಗಳಲ್ಲೇ ಭಯಂಕವಾದ ಮೃಗ-ಪಕ್ಷಿಗಳು ಸಮಾನವಾಗಿ ಆನಂದಿತರಾಗಿ ಭಕ್ಷಿಸುತ್ತಿದ್ದವು.

07048052a ತಥಾ ತದಾಯೋಧನಮುಗ್ರದರ್ಶನಂ

         ನಿಶಾಮುಖೇ ಪಿತೃಪತಿರಾಷ್ಟ್ರಸನ್ನಿಭಂ|

07048052c ನಿರೀಕ್ಷಮಾಣಾಃ ಶನಕೈರ್ಜಹುರ್ನರಾಃ

         ಸಮುತ್ಥಿತಾರುಂಡಕುಲೋಪಸಂಕುಲಂ||

ನಿಶಾಮುಖದಲ್ಲಿ ಆ ರಣರಂಗವು ಯಮರಾಜನ ರಾಷ್ಟ್ರದಂತೆ ಉಗ್ರವಾಗಿ ಕಾಣುತ್ತಿತ್ತು. ಮೇಲಕ್ಕೆದ್ದು ಕುಣಿಯುತ್ತಿದ್ದ ಮುಂಡಗಳನ್ನು ಜಾಗ್ರತೆಯಿಂದ ನೋಡಿಕೊಳ್ಳುತ್ತಾ ಯೋಧರು ಮೆಲ್ಲನೆ ಹಿಂದಿರುಗಿದರು.

07048053a ಅಪೇತವಿಧ್ವಸ್ತಮಹಾರ್ಹಭೂಷಣಂ

         ನಿಪಾತಿತಂ ಶಕ್ರಸಮಂ ಮಹಾರಥಂ|

07048053c ರಣೇಽಭಿಮನ್ಯುಂ ದದೃಶುಸ್ತದಾ ಜನಾ

         ವ್ಯಪೋಢಹವ್ಯಂ ಸದಸೀವ ಪಾವಕಂ||

ಸುತ್ತಲೂ ಮಹಾರ್ಹಭೂಷಣಗಳು ಹರಡಿ ಬಿದ್ದಿರುವ, ಹವಿಸ್ಸಿಲ್ಲದೇ ಸೀದುಹೋದ ಯಜ್ಞೇಶ್ವರನಂತೆ ರಣದಲ್ಲಿ ಬಿದ್ದಿರುವ ಶಕ್ರಸಮ ಮಹಾರಥ ಅಭಿಮನ್ಯುವನ್ನು ಜನರು ನೋಡಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುವಧೇ ಅಷ್ಠಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುವಧ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.

Image result for trees against white background

Comments are closed.