Drona Parva: Chapter 45

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೫

ಅಭಿಮನ್ಯುವಿನಿಂದ ದುರ್ಯೋಧನನ ಮಗ ಲಕ್ಷ್ಮಣನ ವಧೆ (೧-೧೭). ದ್ರೋಣ, ಕೃಪ, ಕರ್ಣ, ಅಶ್ವತ್ಥಾಮ, ಬೃಹದ್ಬಲ, ಕೃತವರ್ಮ ಈ ಷಡ್ರಥರು ಅಭಿಮನ್ಯುವನ್ನು ಆಕ್ರಮಣಿಸಲು ಅಭಿಮನ್ಯುವು ಅವರನ್ನು ಹಿಮ್ಮೆಟ್ಟಿಸಿ ಜಯದ್ರಥನನನ್ನು ಆಕ್ರಮಣಿಸಿ, ಕ್ರಾಥನನ್ನು ವಧಿಸಿದುದು (೧೮-೨೬).

Image result for abhimanyu07045001 ಧೃತರಾಷ್ಟ್ರ ಉವಾಚ|

07045001a ಯಥಾ ವದಸಿ ಮೇ ಸೂತ ಏಕಸ್ಯ ಬಹುಭಿಃ ಸಹ|

07045001c ಸಂಗ್ರಾಮಂ ತುಮುಲಂ ಘೋರಂ ಜಯಂ ಚೈವ ಮಹಾತ್ಮನಃ||

ಧೃತರಾಷ್ಟ್ರನು ಹೇಳಿದನು: “ಸೂತ! ಅನೇಕರೊಂದಿಗೆ ಒಬ್ಬನ ಘೋರ ತುಮುಲ ಸಂಗ್ರಾಮದಲ್ಲಿ ಜಯವು ಆ ಮಹಾತ್ಮನದೇ ಆಗುತ್ತಿತ್ತೆಂದು ನೀನು ಹೇಳುತ್ತಿರುವೆ.

07045002a ಅಶ್ರದ್ಧೇಯಮಿವಾಶ್ಚರ್ಯಂ ಸೌಭದ್ರಸ್ಯಾಥ ವಿಕ್ರಮಂ|

07045002c ಕಿಂ ತು ನಾತ್ಯದ್ಭುತಂ ತೇಷಾಂ ಯೇಷಾಂ ಧರ್ಮೋ ವ್ಯಪಾಶ್ರಯಃ||

ಸೌಭದ್ರನ ಈ ವಿಕ್ರಮವು ಆಶ್ಚರ್ಯಕರವೂ ನಂಬಲಸಾಧ್ಯವೂ ಆಗಿದೆ. ಆದರೆ ಧರ್ಮವು ಯಾರ ಆಶ್ರಯವಾಗಿರುವುದೋ ಅಂಥವರಿಗೆ ಇವು ಅದ್ಭುತವೇನಲ್ಲ!

07045003a ದುರ್ಯೋಧನೇಽಥ ವಿಮುಖೇ ರಾಜಪುತ್ರಶತೇ ಹತೇ|

07045003c ಸೌಭದ್ರೇ ಪ್ರತಿಪತ್ತಿಂ ಕಾಂ ಪ್ರತ್ಯಪದ್ಯಂತ ಮಾಮಕಾಃ||

ನೂರು ರಾಜಪುತ್ರರೂ ಹತರಾಗಿ ದುರ್ಯೋಧನನು ವಿಮುಖನಾಗಲು ಸೌಭದ್ರನನ್ನು ಎದುರಿಸಲು ನನ್ನವರು ಯಾವ ಉಪಾಯವನ್ನು ಹೂಡಿದರು?”

07045004 ಸಂಜಯ ಉವಾಚ|

07045004a ಸಂಶುಷ್ಕಾಸ್ಯಾಶ್ಚಲನ್ನೇತ್ರಾಃ ಪ್ರಸ್ವಿನ್ನಾ ಲೋಮಹರ್ಷಿಣಃ|

07045004c ಪಲಾಯನಕೃತೋತ್ಸಾಹಾ ನಿರುತ್ಸಾಹಾ ದ್ವಿಷಜ್ಜಯೇ||

07045005a ಹತಾನ್ಭ್ರಾತೄನ್ಪಿತೄನ್ಪುತ್ರಾನ್ಸುಹೃತ್ಸಂಬಂಧಿಬಾಂಧವಾನ್|

07045005c ಉತ್ಸೃಜ್ಯೋತ್ಸೃಜ್ಯ ಸಮಿಯುಸ್ತ್ವರಯಂತೋ ಹಯದ್ವಿಪಾನ್||

ಸಂಜಯನು ಹೇಳಿದನು: “ಮುಖವು ಒಣಗಿ ಹೋಗಿ, ಕಣ್ಣುಗಳು ತಿರುಗುತ್ತಿರಲು, ಶರೀರಗಳು ಬೆವತಿರಲು, ರೋಮಗಳು ನಿಮಿರೆದ್ದು, ಪಲಾಯನದಲ್ಲಿಯೇ ಉತ್ಸಾಹಿಗಳಾಗಿ, ಶತ್ರುಗಳನ್ನು ಜಯಿಸುವುದರಲ್ಲಿ ನಿರುತ್ಸಾಹಿಗಳಾಗಿ, ಹತರಾಗಿದ್ದ ಸಹೋದರರು-ತಂದೆಯಂದಿರು-ಪುತ್ರರು-ಮಿತ್ರರು-ಸಂಬಂಧಿಗಳು-ಬಾಂಧವರನ್ನು ಅಲ್ಲಲ್ಲಿಯೇ ಬಿಟ್ಟು ತಾವು ಕುಳಿತಿದ್ದ ಕುದುರೆ ಆನೆಗಳನ್ನು ಅವಸರ ಪಡಿಸುತ್ತಾ ಓಡಿ ಹೋಗುತ್ತಿದ್ದರು.

07045006a ತಾನ್ಪ್ರಭಗ್ನಾಂಸ್ತಥಾ ದೃಷ್ಟ್ವಾ ದ್ರೋಣೋ ದ್ರೌಣಿರ್ಬೃಹದ್ಬಲಃ|

07045006c ಕೃಪೋ ದುರ್ಯೋಧನಃ ಕರ್ಣಃ ಕೃತವರ್ಮಾಥ ಸೌಬಲಃ||

07045007a ಅಭಿದ್ರುತಾಃ ಸುಸಂಕ್ರುದ್ಧಾಃ ಸೌಭದ್ರಮಪರಾಜಿತಂ|

07045007c ತೇಽಪಿ ಪೌತ್ರೇಣ ತೇ ರಾಜನ್ಪ್ರಾಯಶೋ ವಿಮುಖೀಕೃತಾಃ||

ಅವರು ಹಾಗೆ ಪ್ರಭಗ್ನರಾದುದನ್ನು ನೋಡಿ ದ್ರೋಣ, ದ್ರೌಣಿ, ಬೃಹದ್ಬಲ, ಕೃಪ, ದುರ್ಯೋಧನ, ಕರ್ಣ, ಕೃತವರ್ಮ, ಮತ್ತು ಸೌಬಲರು ಸಂಕ್ರುದ್ಧರಾಗಿ ಅಪರಾಜಿತ ಸೌಭದ್ರನನ್ನು ಆಕ್ರಮಣಿಸಿದರು. ರಾಜನ್! ಅವರನ್ನೂ ಕೂಡ ಹೆಚ್ಚುಪಾಲು ನಿನ್ನ ಮೊಮ್ಮಗನು ವಿಮುಖರನ್ನಾಗಿ ಮಾಡಿದನು.

07045008a ಏಕಸ್ತು ಸುಖಸಂವೃದ್ಧೋ ಬಾಲ್ಯಾದ್ದರ್ಪಾಚ್ಚ ನಿರ್ಭಯಃ|

07045008c ಇಷ್ವಸ್ತ್ರವಿನ್ಮಹಾತೇಜಾ ಲಕ್ಷ್ಮಣೋಽಽರ್ಜುನಿಮಭ್ಯಯಾತ್||

ಆದರೆ ಅವರಲ್ಲಿ ಒಬ್ಬ ಸುಖದಲ್ಲಿಯೇ ಬೆಳೆದಿದ್ದ, ಬಾಲ್ಯದಿಂದಲೂ ದರ್ಪ-ಭಯಗಳನ್ನು ತೊರೆದಿದ್ದ, ಇಷ್ವಸ್ತ್ರಗಳನ್ನು ಚೆನ್ನಾಗಿ ತಿಳಿದಿದ್ದ, ಮಹಾತೇಜಸ್ವಿ ಲಕ್ಷ್ಮಣನು ಆರ್ಜುನಿಯನ್ನು ಎದುರಿಸಿದನು.

07045009a ತಮನ್ವಗೇವಾಸ್ಯ ಪಿತಾ ಪುತ್ರಗೃದ್ಧೀ ನ್ಯವರ್ತತ|

07045009c ಅನು ದುರ್ಯೋಧನಂ ಚಾನ್ಯೇ ನ್ಯವರ್ತಂತ ಮಹಾರಥಾಃ||

ಮಗನ ಮೇಲಿನ ಪ್ರೀತಿಯಿಂದ ಅವನ ತಂದೆ ದುರ್ಯೋಧನನೂ ಅವನನ್ನು ಹಿಂಬಾಲಿಸಿದನು. ಇತರ ಮಹಾರಥರೂ ಹಿಂದಿರುಗಿದರು.

07045010a ತಂ ತೇಽಭಿಷಿಷಿಚುರ್ಬಾಣೈರ್ಮೇಘಾ ಗಿರಿಮಿವಾಂಬುಭಿಃ|

07045010c ಸ ಚ ತಾನ್ಪ್ರಮಮಾಥೈಕೋ ವಿಷ್ವಗ್ವಾತೋ ಯಥಾಂಬುದಾನ್||

ಮೋಡಗಳು ಮಳೆಗರೆದು ಪರ್ವತವನ್ನು ಮುಚ್ಚುವಂತೆ ಅವನು ಮತ್ತು ಅವನ ಅನುಯಾಯಿಗಳು ಬಾಣಗಳಿಂದ ಅಭಿಮನ್ಯುವನ್ನು ಮುಚ್ಚಿಬಿಟ್ಟರು.

07045011a ಪೌತ್ರಂ ತು ತವ ದುರ್ಧರ್ಷಂ ಲಕ್ಷ್ಮಣಂ ಪ್ರಿಯದರ್ಶನಂ|

07045011c ಪಿತುಃ ಸಮೀಪೇ ತಿಷ್ಠಂತಂ ಶೂರಮುದ್ಯತಕಾರ್ಮುಕಂ||

07045012a ಅತ್ಯಂತಸುಖಸಂವೃದ್ಧಂ ಧನೇಶ್ವರಸುತೋಪಮಂ|

07045012c ಆಸಸಾದ ರಣೇ ಕಾರ್ಷ್ಣಿರ್ಮತ್ತೋ ಮತ್ತಮಿವ ದ್ವಿಪಂ||

ಮದಿಸಿದ ಸಲಗವನ್ನು ಇನ್ನೊಂದು ಮದಿಸಿದ ಸಲಗವು ಎದುರಿಸುವಂತೆ ರಣದಲ್ಲಿ ಕಾರ್ಷ್ಣಿಯು ತನ್ನ ತಂದೆಯ ಸಮೀಪದಲ್ಲಿಯೇ ನಿಂತು ಕಾರ್ಮುಕವನ್ನು ಎತ್ತಿ ಹಿಡಿದಿದ್ದ ನಿನ್ನ ಮೊಮ್ಮಗ, ದುರ್ಧರ್ಷ, ನೋಡಲು ಸುಂದರನಾಗಿದ್ದ, ಅತ್ಯಂತ ಸುಖದಲ್ಲಿ ಬೆಳೆದಿದ್ದ, ಧನೇಶ್ವರನ ಮಗನಂತಿದ್ದ ಶೂರ ಲಕ್ಷ್ಮಣನನ್ನು ಎದುರಿಸಿದನು.

07045013a ಲಕ್ಷ್ಮಣೇನ ತು ಸಂಗಮ್ಯ ಸೌಭದ್ರಃ ಪರವೀರಹಾ|

07045013c ಶರೈಃ ಸುನಿಶಿತೈಸ್ತೀಕ್ಷ್ಣೈರ್ಬಾಹ್ವೋರುರಸಿ ಚಾರ್ಪಿತಃ||

ಎದುರಿಸಲು ಪರವೀರಹ ಸೌಭದ್ರನು ಲಕ್ಷ್ಮಣನ ನಿಶಿತ ತೀಕ್ಷ್ಣ ಶರಗಳಿಂದ ಬಾಹುಗಳು ಮತ್ತು ಎದೆಯಲ್ಲಿ ಹೊಡೆಯಲ್ಪಟ್ಟನು.

07045014a ಸಂಕ್ರುದ್ಧೋ ವೈ ಮಹಾಬಾಹುರ್ದಂಡಾಹತ ಇವೋರಗಃ|

07045014c ಪೌತ್ರಸ್ತವ ಮಹಾರಾಜ ತವ ಪೌತ್ರಮಭಾಷತ||

ಮಹಾರಾಜ! ಕೋಲಿನಿಂದ ಹೊಡೆಯಲ್ಪಟ್ಟ ಸರ್ಪದಂತೆ ಸಂಕ್ರುದ್ಧನಾದ ನಿನ್ನ ಮೊಮ್ಮಗನು ನಿನ್ನ ಮೊಮ್ಮಗನಿಗೆ ಹೇಳಿದನು:

07045015a ಸುದೃಷ್ಟಃ ಕ್ರಿಯತಾಂ ಲೋಕೋ ಅಮುಂ ಲೋಕಂ ಗಮಿಷ್ಯಸಿ|

07045015c ಪಶ್ಯತಾಂ ಬಾಂಧವಾನಾಂ ತ್ವಾಂ ನಯಾಮಿ ಯಮಸಾದನಂ||

“ಈ ಲೋಕವನ್ನೆಲ್ಲ ಒಮ್ಮೆ ಚೆನ್ನಾಗಿ ನೋಡಿಕೋ! ಇನ್ನೊಂದು ಲೋಕಕ್ಕೆ ಹೋಗಲಿರುವೆ. ಬಾಂಧವರೆಲ್ಲರೂ ನೋಡುತ್ತಿರುವಂತೆ ನಿನ್ನನ್ನು ನಾನು ಯಮಸಾದನಕ್ಕೆ ಕಳುಹಿಸುತ್ತೇನೆ!”

07045016a ಏವಮುಕ್ತ್ವಾ ತತೋ ಭಲ್ಲಂ ಸೌಭದ್ರಃ ಪರವೀರಹಾ|

07045016c ಉದ್ಬಬರ್ಹ ಮಹಾಬಾಹುರ್ನಿರ್ಮುಕ್ತೋರಗಸನ್ನಿಭಂ||

ಹೀಗೆ ಹೇಳಿ ಪರವೀರಹ ಮಹಾಬಾಹು ಸೌಭದ್ರನು ಪೊರೆಬಿಟ್ಟ ಸರ್ಪದಂತಿದ್ದ ಭಲ್ಲವನ್ನು ತೆಗೆದು ಪ್ರಯೋಗಿಸಿದನು.

07045017a ಸ ತಸ್ಯ ಭುಜನಿರ್ಮುಕ್ತೋ ಲಕ್ಷ್ಮಣಸ್ಯ ಸುದರ್ಶನಂ|

07045017c ಸುನಸಂ ಸುಭ್ರು ಕೇಶಾಂತಂ ಶಿರೋಽಹಾರ್ಷೀತ್ಸಕುಂಡಲಂ|

07045017e ಲಕ್ಷ್ಮಣಂ ನಿಹತಂ ದೃಷ್ಟ್ವಾ ಹಾ ಹೇತ್ಯುಚ್ಚುಕ್ರುಶುರ್ಜನಾಃ||

ಅದು ಸುಂದರನಾಗಿದ್ದ ಲಕ್ಷ್ಮಣನ ಸುಂದರ ಮೂಗು, ಸುಂದರ ಹುಬ್ಬು, ಮುಂಗುರುಳುಗಳ, ಕುಂಡಲಗಳನ್ನು ಧರಿಸಿದ್ದ, ಶಿರವನ್ನು ಅಪಹರಿಸಿತು. ಲಕ್ಷ್ಮಣನು ಹತನಾದುದನ್ನು ನೋಡಿ ಜನರು ಹಾಹಾಕಾರ ಮಾಡಿದರು.

07045018a ತತೋ ದುರ್ಯೋಧನಃ ಕ್ರುದ್ಧಃ ಪ್ರಿಯೇ ಪುತ್ರೇ ನಿಪಾತಿತೇ|

07045018c ಹತೈನಮಿತಿ ಚುಕ್ರೋಶ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ||

ತನ್ನ ಪ್ರಿಯಪುತ್ರನು ಕೆಳಗುರುಳಲು ಕ್ರುದ್ಧನಾಗಿ ಕ್ಷತ್ರಿಯರ್ಷಭ ದುರ್ಯೋಧನನು “ಇವನನ್ನು ಕೊಲ್ಲಿ!” ಎಂದು ಕ್ಷತ್ರಿಯರಿಗೆ ಕೂಗಿ ಹೇಳಿದನು.

07045019a ತತೋ ದ್ರೋಣಃ ಕೃಪಃ ಕರ್ಣೋ ದ್ರೋಣಪುತ್ರೋ ಬೃಹದ್ಬಲಃ|

07045019c ಕೃತವರ್ಮಾ ಚ ಹಾರ್ದಿಕ್ಯಃ ಷಡ್ರಥಾಃ ಪರ್ಯವಾರಯನ್||

ಆಗ ದ್ರೋಣ, ಕೃಪ, ಕರ್ಣ, ದ್ರೋಣಪುತ್ರ, ಬೃಹದ್ಬಲ, ಹಾರ್ದಿಕ್ಯ ಕೃತವರ್ಮ ಈ ಷಡ್ರಥರು ಅವನನ್ನು ಮುತ್ತಿಗೆ ಹಾಕಿದರು.

07045020a ಸ ತಾನ್ವಿದ್ಧ್ವಾ ಶಿತೈರ್ಬಾಣೈರ್ವಿಮುಖೀಕೃತ್ಯ ಚಾರ್ಜುನಿಃ|

07045020c ವೇಗೇನಾಭ್ಯಪತತ್ ಕ್ರುದ್ಧಃ ಸೈಂಧವಸ್ಯ ಮಹದ್ಬಲಂ||

ಅವರನ್ನು ನಿಶಿತ ಬಾಣಗಳಿಂದ ಗಾಯಗೊಳಿಸಿ ವಿಮುಖರನ್ನಾಗಿ ಮಾಡಿ ಆರ್ಜುನಿಯು ಕ್ರುದ್ಧನಾಗಿ ವೇಗದಿಂದ ಸೈಂಧವನ ಮಹಾಬಲದ ಮೇಲೆ ಎರಗಿದನು.

07045021a ಆವವ್ರುಸ್ತಸ್ಯ ಪಂಥಾನಂ ಗಜಾನೀಕೇನ ದಂಶಿತಾಃ|

07045021c ಕಲಿಂಗಾಶ್ಚ ನಿಷಾದಾಶ್ಚ ಕ್ರಾಥಪುತ್ರಶ್ಚ ವೀರ್ಯವಾನ್|

07045021e ತತ್ಪ್ರಸಕ್ತಮಿವಾತ್ಯರ್ಥಂ ಯುದ್ಧಮಾಸೀದ್ವಿಶಾಂ ಪತೇ||

ದಾರಿಯಲ್ಲಿಯೇ ಗಜಸೇನೆಯಿಂದ ರಕ್ಷಿತರಾದ ಕಲಿಂಗರು, ನಿಷಾದರು ಮತ್ತು ವೀರ್ಯವಾನ್ ಕ್ರಾಥಪುತ್ರನು ಅವನನ್ನು ಆಕ್ರಮಣಿಸಿದರು. ವಿಶಾಂಪತೇ! ಆಗಲೇ ಇತ್ಯರ್ಥವಾಗುವಂತಹ ಯುದ್ಧವು ನಡೆಯಿತು.

07045022a ತತಸ್ತತ್ಕುಂಜರಾನೀಕಂ ವ್ಯಧಮದ್ಧೃಷ್ಟಮಾರ್ಜುನಿಃ|

07045022c ಯಥಾ ವಿವಾನ್ನಿತ್ಯಗತಿರ್ಜಲದಾಂ ಶತಶೋಽಂಬರೇ||

ಆಗ ಆರ್ಜುನಿಯು ಆ ಗಜಸೇನೆಯನ್ನು ಅಂಬರದಲ್ಲಿರುವ ನೂರಾರು ಕಪ್ಪು ಮೋಡಗಳನ್ನು ಭಿರುಗಾಳಿಯು ಚದುರಿಸುತ್ತದೆಯೋ ಹಾಗೆ ಚೆಲ್ಲಾಪಿಲ್ಲಿ ಮಾಡಿದನು.

07045023a ತತಃ ಕ್ರಾಥಃ ಶರವ್ರಾತೈರಾರ್ಜುನಿಂ ಸಮವಾಕಿರತ್|

07045023c ಅಥೇತರೇ ಸನ್ನಿವೃತ್ತಾಃ ಪುನರ್ದ್ರೋಣಮುಖಾ ರಥಾಃ|

07045023e ಪರಮಾಸ್ತ್ರಾಣಿ ಧುನ್ವಾನಾಃ ಸೌಭದ್ರಮಭಿದುದ್ರುವುಃ||

ಆಗ ಕ್ರಾಥನು ಶರವ್ರಾತಗಳಿಂದ ಆರ್ಜುನಿಯನ್ನು ಮುಸುಕಿದನು. ಅಷ್ಟರಲ್ಲಿಯೇ ದ್ರೋಣಪ್ರಮುಖ ರಥರು ಹಿಂದಿರುಗಿ ಬಂದು ಪುನಃ ಪರಮಾಸ್ತ್ರಗಳನ್ನು ಪ್ರಯೋಗಿಸುತ್ತಾ ಸೌಭದ್ರನನ್ನು ಆಕ್ರಮಣಿಸಿದರು.

07045024a ತಾನ್ನಿವಾರ್ಯಾರ್ಜುನಿರ್ಬಾಣೈಃ ಕ್ರಾಥಪುತ್ರಮಥಾರ್ದಯತ್|

07045024c ಶರೌಘೇಣಾಪ್ರಮೇಯೇಣ ತ್ವರಮಾಣೋ ಜಿಘಾಂಸಯಾ||

ಅವುಗಳನ್ನು ತಪ್ಪಿಸಿಕೊಂಡು ಆರ್ಜುನಿಯು ತ್ವರೆಮಾಡಿ ಅವನನ್ನು ಕೊಲ್ಲಲು ಬಯಸಿ ಕ್ರಾಥಪುತ್ರನನ್ನು ಅಪ್ರಮೇಯ ಶರೌಘದಿಂದ ಹೊಡೆದನು.

07045025a ಸಧನುರ್ಬಾಣಕೇಯೂರೌ ಬಾಹೂ ಸಮುಕುಟಂ ಶಿರಃ|

07045025c ಚತ್ರಂ ಧ್ವಜಂ ನಿಯಂತಾರಮಶ್ವಾಂಶ್ಚಾಸ್ಯ ನ್ಯಪಾತಯತ್||

ಅವುಗಳು ಧನುಸ್ಸು-ಬಾಣ-ಕೇಯೂರಗಳೊಂದಿಗೆ ಅವನ ಬಾಹುಗಳನ್ನೂ, ಮುಕುಟ ಧರಿಸಿದ ಶಿರವನ್ನೂ, ಚತ್ರ-ಧ್ವಜಗಳನ್ನೂ, ಸಾರಥಿ-ಕುದುರೆಗಳನ್ನೂ ಕೆಳಗೆ ಬೀಳಿಸಿದವು.

07045026a ಕುಲಶೀಲಶ್ರುತಬಲೈಃ ಕೀರ್ತ್ಯಾ ಚಾಸ್ತ್ರಬಲೇನ ಚ|

07045026c ಯುಕ್ತೇ ತಸ್ಮಿನ್ ಹತೇ ವೀರಾಃ ಪ್ರಾಯಶೋ ವಿಮುಖಾಭವನ್||

ಕುಲ-ಶೀಲ-ಶಿಕ್ಷಣ-ಶಕ್ತಿ, ಕೀರ್ತಿ ಮತ್ತು ಅಸ್ತ್ರಬಲಗಳಿಂದ ಕೂಡಿದ ಅವನು ಹತನಾಗಲು ನಿಮ್ಮವರಲ್ಲಿ ಪ್ರಾಯಶಃ ಎಲ್ಲ ವೀರರೂ ಯುದ್ಧದಿಂದ ಹಿಮ್ಮೆಟ್ಟಿದರು.”

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಅಭಿಮನ್ಯುವಧಪರ್ವಣಿ ಲಕ್ಷ್ಮಣವಧೇ ಪಂಚಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಅಭಿಮನ್ಯುವಧಪರ್ವದಲ್ಲಿ ಲಕ್ಷ್ಮಣವಧ ಎನ್ನುವ ನಲ್ವತ್ತೈದನೇ ಅಧ್ಯಾಯವು.

Image result for trees against white background

Comments are closed.