Drona Parva: Chapter 44

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೪

ಅಭಿಮನ್ಯುವಿನಿಂದ ಶಲ್ಯನ ಪುತ್ರ ರುಕ್ಮರಥನ ವಧೆ (೧-೧೩). ಅಭಿಮನ್ಯುವು ಗಂಧರ್ವಾಸ್ತ್ರವನ್ನು ಪ್ರಯೋಗಿಸಿ ನೂರು ರಾಜಪುತ್ರರನ್ನು ಸಂಹರಿಸಿದುದು; ದುರ್ಯೋಧನನು ವಿಮುಖನಾದುದು (೧೪-೩೦).

07044001 ಸಂಜಯ ಉವಾಚ|

07044001a ಆದದಾನಸ್ತು ಶೂರಾಣಾಮಾಯೂಂಷ್ಯಭವದಾರ್ಜುನಿಃ|

07044001c ಅಂತಕಃ ಸರ್ವಭೂತಾನಾಂ ಪ್ರಾಣಾನ್ ಕಾಲ ಇವಾಗತೇ||

ಸಂಜಯನು ಹೇಳಿದನು: “ಕಾಲವು ಸಮೀಪಿಸಿದಾಗ ಸರ್ವಭೂತಗಳ ಪ್ರಾಣಗಳನ್ನು ತೆಗೆದುಕೊಳ್ಳುವ ಅಂತಕನಂತೆ ಆರ್ಜುನಿಯು ಶೂರರ ಆಯುಸ್ಸುಗಳನ್ನು ಅಪಹರಿದನು.

07044002a ಸ ಶಕ್ರ ಇವ ವಿಕ್ರಾಂತಃ ಶಕ್ರಸೂನೋಃ ಸುತೋ ಬಲೀ|

07044002c ಅಭಿಮನ್ಯುಸ್ತದಾನೀಕಂ ಲೋಡಯನ್ಬಹ್ವಶೋಭತ||

ಶಕ್ರನಂತೆಯೇ ಆ ಶಕ್ರನ ಮಗನ ಮಗ ಬಲಶಾಲೀ ವಿಕ್ರಾಂತ ಅಭಿಮನ್ಯುವು ಆ ಸೇನೆಯನ್ನು ಮಥಿಸುತ್ತಾ ಬಹುವಾಗಿ ಶೋಭಿಸಿದನು.

07044003a ಪ್ರವಿಶ್ಯೈವ ತು ರಾಜೇಂದ್ರ ಕ್ಷತ್ರಿಯೇಂದ್ರಾಂತಕೋಪಮಃ|

07044003c ಸತ್ಯಶ್ರವಸಮಾದತ್ತ ವ್ಯಾಘ್ರೋ ಮೃಗಮಿವೋಲ್ಬಣಂ||

ರಾಜೇಂದ್ರ! ಕ್ಷತ್ರಿಯೇಂದ್ರರಿಗೆ ಅಂತಕನಂತಿದ್ದ ಅವನು ಶತ್ರು ಸೈನ್ಯವನ್ನು ಪ್ರವೇಶಿಸಿ ವ್ಯಾಘ್ರವು ಜಿಂಕೆಯನ್ನು ಹೇಗೋ ಹಾಗೆ ಸತ್ಯಶ್ರವಸನ ಪ್ರಾಣಗಳನ್ನು ಅಪಹರಿಸಿದನು.

07044004a ಸತ್ಯಶ್ರವಸಿ ಚಾಕ್ಷಿಪ್ತೇ ತ್ವರಮಾಣಾ ಮಹಾರಥಾಃ|

07044004c ಪ್ರಗೃಹ್ಯ ವಿಪುಲಂ ಶಸ್ತ್ರಮಭಿಮನ್ಯುಮುಪಾದ್ರವನ್||

ಸತ್ಯಶ್ರವಸನು ಕೆಳಗುರುಳಲು ಮಹಾರಥರು ತ್ವರೆಮಾಡಿ ವಿಪುಲ ಶಸ್ತ್ರಗಳನ್ನು ಹಿಡಿದು ಅಭಿಮನ್ಯುವನ್ನು ಆಕ್ರಮಣಿಸಿದರು.

07044005a ಅಹಂ ಪೂರ್ವಮಹಂ ಪೂರ್ವಮಿತಿ ಕ್ಷತ್ರಿಯಪುಂಗವಾಃ|

07044005c ಸ್ಪರ್ಧಮಾನಾಃ ಸಮಾಜಗ್ಮುರ್ಜಿಘಾಂಸಂತೋಽರ್ಜುನಾತ್ಮಜಂ||

“ನಾನು ಮೊದಲು! ನಾನು ಮೊದಲು!” ಎಂದು ಸ್ಪರ್ಧಿಸುತ್ತಾ ಅರ್ಜುನಾತ್ಮಜನನ್ನು ಕೊಲ್ಲಲು ಬಯಸಿ ಕ್ಷತ್ರಿಯಪುಂಗವರು ಮುಂದಾದರು.

07044006a ಕ್ಷತ್ರಿಯಾಣಾಮನೀಕಾನಿ ಪ್ರದ್ರುತಾನ್ಯಭಿಧಾವತಾಂ|

07044006c ಜಗ್ರಾಸ ತಿಮಿರಾಸಾದ್ಯ ಕ್ಷುದ್ರಮತ್ಸ್ಯಾನಿವಾರ್ಣವೇ||

ತನ್ನ ಮೇಲೆ ಬೀಳಲು ಆತುರದಿಂದ ಮುನ್ನುಗ್ಗುತ್ತಿದ್ದ ಕ್ಷತ್ರಿಯರ ಸೇನೆಗಳನ್ನು ಅವನು ಸಮುದ್ರದಲ್ಲಿ ತಿಮಿಂಗಿಲವು ಕ್ಷುದ್ರಮೀನುಗಳನ್ನು ಹೇಗೋ ಹಾಗೆ ಕಬಳಿಸಿದನು.

07044007a ಯೇ ಕೇ ಚನ ಗತಾಸ್ತಸ್ಯ ಸಮೀಪಮಪಲಾಯಿನಃ|

07044007c ನ ತೇ ಪ್ರತಿನ್ಯವರ್ತಂತ ಸಮುದ್ರಾದಿವ ಸಿಂಧವಃ||

ಪಲಾಯನ ಮಾಡದೇ ಅವನ ಸಮೀಪಕ್ಕೆ ಯಾರೆಲ್ಲ ಹೋಗುತ್ತಿದ್ದರೂ ಅವರು ಸಮುದ್ರಕ್ಕೆ ಸೇರಿದ ನದಿಗಳಂತೆ ಹಿಂದಿರುಗುತ್ತಿರಲಿಲ್ಲ.

07044008a ಮಹಾಗ್ರಾಹಗೃಹೀತೇವ ವಾತವೇಗಭಯಾರ್ದಿತಾ|

07044008c ಸಮಕಂಪತ ಸಾ ಸೇನಾ ವಿಭ್ರಷ್ಟಾ ನೌರಿವಾರ್ಣವೇ||

ಮೊಸಳೆಯ ಬಾಯಿಗೆ ಸಿಕ್ಕಿದವರಂತೆ, ಚಂಡಮಾರುತದ ಭಯದಿಂದ ಆರ್ದಿತವಾದವರಂತೆ, ಮತ್ತು ಸಮುದ್ರದಲ್ಲಿ ದಿಕ್ಕುತಪ್ಪಿದ ನೌಕೆಯಂತೆ ಆ ಸೇನೆಯು ನಡುಗಿತು.

07044009a ಅಥ ರುಕ್ಮರಥೋ ನಾಮ ಮದ್ರೇಶ್ವರಸುತೋ ಬಲೀ|

07044009c ತ್ರಸ್ತಾಮಾಶ್ವಾಸಯನ್ಸೇನಾಮತ್ರಸ್ತೋ ವಾಕ್ಯಮಬ್ರವೀತ್||

ಆಗ ರುಕ್ಮರಥನೆಂಬ ಹೆಸರಿನ ಮದ್ರೇಶ್ವರನ ಬಲಶಾಲೀ ಮಗನು ನಿರ್ಭಯನಾಗಿ ಭಯಗೊಂಡಿದ್ದ ಸೇನೆಗೆ ಆಶ್ವಾಸನೆಯನ್ನು ನೀಡುತ್ತಾ ಹೇಳಿದನು:

07044010a ಅಲಂ ತ್ರಾಸೇನ ವಃ ಶೂರಾ ನೈಷ ಕಶ್ಚಿನ್ಮಯಿ ಸ್ಥಿತೇ|

07044010c ಅಹಮೇನಂ ಗ್ರಹೀಷ್ಯಾಮಿ ಜೀವಗ್ರಾಹಂ ನ ಸಂಶಯಃ||

“ಭಯಪಡುವುದನ್ನು ಸಾಕುಮಾಡಿ! ಶೂರರೇ! ನಾನಿರುವಾಗ ನಿಮಗೆ ಯಾವುದೇ ರೀತಿಯ ಭಯಕ್ಕೂ ಕಾರಣವಿಲ್ಲ. ನಾನು ಇವನನ್ನು ಜೀವಸಹಿತ ಹಿಡಿಯುತ್ತೇನೆ. ಅದರಲ್ಲಿ ಸಂಶಯವಿಲ್ಲ.”

07044011a ಏವಮುಕ್ತ್ವಾ ತು ಸೌಭದ್ರಮಭಿದುದ್ರಾವ ವೀರ್ಯವಾನ್|

07044011c ಸುಕಲ್ಪಿತೇನೋಹ್ಯಮಾನಃ ಸ್ಯಂದನೇನ ವಿರಾಜತಾ||

ಹೀಗೆ ಹೇಳಿ ಆ ವೀರ್ಯವಾನನು ಸುಕಲ್ಪಿತ ರಥದಲ್ಲಿ ವಿರಾಜಿಸುತ್ತಾ ಸೌಭದ್ರನನ್ನು ಆಕ್ರಮಿಸಿದನು.

07044012a ಸೋಽಭಿಮನ್ಯುಂ ತ್ರಿಭಿರ್ಬಾಣೈರ್ವಿದ್ಧ್ವಾ ವಕ್ಷಸ್ಯಥಾನದತ್|

07044012c ತ್ರಿಭಿಶ್ಚ ದಕ್ಷಿಣೇ ಬಾಹೌ ಸವ್ಯೇ ಚ ನಿಶಿತೈಸ್ತ್ರಿಭಿಃ||

ಅವನು ಅಭಿಮನ್ಯುವಿನ ವಕ್ಷಸ್ಥಳಕ್ಕೆ ಮತ್ತು ಮೂರು ಮೂರು ನಿಶಿತ ಶರಗಳಿಂದ ಅವನ ಎಡ-ಬಲ ಬಾಹುಗಳನ್ನೂ ಹೊಡೆದು ಗರ್ಜಿಸಿದನು.

07044013a ಸ ತಸ್ಯೇಷ್ವಸನಂ ಚಿತ್ತ್ವಾ ಫಾಲ್ಗುಣಿಃ ಸವ್ಯದಕ್ಷಿಣೌ|

07044013c ಭುಜೌ ಶಿರಶ್ಚ ಸ್ವಕ್ಷಿಭ್ರು ಕ್ಷಿತೌ ಕ್ಷಿಪ್ರಮಪಾತಯತ್||

ಆಗ ಫಾಲ್ಗುಣಿಯು ಅವನ ಧನುಸ್ಸನ್ನೂ, ಎಡ-ಬಲ ಭುಜಗಳನ್ನೂ, ಸುಂದರ ಕಣ್ಣು-ಹುಬ್ಬುಗಳಿಂದ ಕೂಡಿದ್ದ ಶಿರವನ್ನೂ ಕತ್ತರಿಸಿ ಭೂಮಿಯ ಮೇಲೆ ಬೀಳಿಸಿದನು.

07044014a ದೃಷ್ಟ್ವಾ ರುಕ್ಮರಥಂ ರುಗ್ಣಂ ಪುತ್ರಂ ಶಲ್ಯಸ್ಯ ಮಾನಿನಂ|

07044014c ಜೀವಗ್ರಾಹಂ ಜಿಘೃಕ್ಷಂತಂ ಸೌಭದ್ರೇಣ ಯಶಸ್ವಿನಾ||

07044015a ಸಂಗ್ರಾಮದುರ್ಮದಾ ರಾಜನ್ರಾಜಪುತ್ರಾಃ ಪ್ರಹಾರಿಣಃ|

07044015c ವಯಸ್ಯಾಃ ಶಲ್ಯಪುತ್ರಸ್ಯ ಸುವರ್ಣವಿಕೃತಧ್ವಜಾಃ||

07044016a ತಾಲಮಾತ್ರಾಣಿ ಚಾಪಾನಿ ವಿಕರ್ಷಂತೋ ಮಹಾರಥಾಃ|

07044016c ಆರ್ಜುನಿಂ ಶರವರ್ಷೇಣ ಸಮಂತಾತ್ಪರ್ಯವಾರಯನ್||

ರಾಜನ್! ಜೀವಂತವಾಗಿ ಹಿಡಿಯಲು ಬಯಸಿದ್ದ ಶಲ್ಯನ ಮಾನಿನೀ ಪುತ್ರ ರುಕ್ಮರಥನು ಯಶಸ್ವಿನೀ ಸೌಭದ್ರನಿಂದಲೇ ಹತನಾದುದನ್ನು ನೋಡಿ, , ಶಲ್ಯಪುತ್ರನ ಮಿತ್ರ ರಾಜಪುತ್ರ ಸಂಗ್ರಾಮದುರ್ಮದ ಪ್ರಹಾರಿ ಮಹಾರಥರು ಸುವರ್ಣಧ್ವಜಗಳೊಂದಿಗೆ ನಾಲ್ಕು ಮೊಳಗಳ ಧನುಸ್ಸುಗಳನ್ನು ಟೇಂಕರಿಸುತ್ತಾ ಆರ್ಜುನಿಯನ್ನು ಶರವರ್ಷಗಳಿಂದ ಎಲ್ಲ ಕಡೆಗಳಿಂದಲೂ ಸುತ್ತುವರೆದರು.

07044017a ಶೂರೈಃ ಶಿಕ್ಷಾಬಲೋಪೇತೈಸ್ತರುಣೈರತ್ಯಮರ್ಷಣೈಃ|

07044017c ದೃಷ್ಟ್ವೈಕಂ ಸಮರೇ ಶೂರಂ ಸೌಭದ್ರಮಪರಾಜಿತಂ||

07044018a ಚಾದ್ಯಮಾನಂ ಶರವ್ರಾತೈರ್ಹೃಷ್ಟೋ ದುರ್ಯೋಧನೋಽಭವತ್|

07044018c ವೈವಸ್ವತಸ್ಯ ಭವನಂ ಗತಮೇನಮಮನ್ಯತ||

ಸಮರದಲ್ಲಿ ಶೂರ ಅಪರಾಜಿತ ಸೌಭದ್ರನು ಒಬ್ಬನೇ ಅನೇಕ ಶೂರ-ಶಿಕ್ಷಾಬಲೋಪೇತ-ತರುಣ-ಅಮರ್ಷರ ಶರವೃಷ್ಟಿಯಿಂದ ಮುಸುಕಿದ್ದುದನ್ನು ನೋಡಿ ಹೃಷ್ಟನಾದ ದುರ್ಯೋಧನನು ಅವನು ವೈವಸ್ವತನ ಭವನಕ್ಕೆ ಹೋದನೆಂದೇ ತಿಳಿದನು.

07044019a ಸುವರ್ಣಪುಂಖೈರಿಷುಭಿರ್ನಾನಾಲಿಂಗೈಸ್ತ್ರಿಭಿಸ್ತ್ರಿಭಿಃ|

07044019c ಅದೃಶ್ಯಮಾರ್ಜುನಿಂ ಚಕ್ರುರ್ನಿಮೇಷಾತ್ತೇ ನೃಪಾತ್ಮಜಾಃ||

ಸುವರ್ಣ ಪುಂಖಗಳಿದ್ದ, ನಾನಾ ಚಿಹ್ನೆಗಳಿಂದೊಡಗೂಡಿದ, ಮೂರು ಮೂರು ತೀಕ್ಷ್ಣ ಶರಗಳಿಂದ ಆ ನೃಪಾತ್ಮಜರು ಆರ್ಜುನಿಯನ್ನು ಒಂದು ನಿಮಿಷ ಕಾಣಿಸದಂತೆಯೇ ಮಾಡಿ ಬಿಟ್ಟರು.

07044020a ಸಸೂತಾಶ್ವಧ್ವಜಂ ತಸ್ಯ ಸ್ಯಂದನಂ ತಂ ಚ ಮಾರಿಷ|

07044020c ಆಚಿತಂ ಸಮಪಶ್ಯಾಮ ಶ್ವಾವಿಧಂ ಶಲಲೈರಿವ||

ಮಾರಿಷ! ಮುಳ್ಳುಹಂದಿಯ ಶರೀರದಂತೆ ಅವನೂ ಅವನ ಸೂತನೂ, ಕುದುರೆಗಳೂ, ಧ್ವಜವೂ, ರಥವೂ ಬಾಣಗಳಿಂದ ಚುಚ್ಚಿರುವುದನ್ನು ನಾವು ನೋಡಿದೆವು.

07044021a ಸ ಗಾಢವಿದ್ಧಃ ಕ್ರುದ್ಧಶ್ಚ ತೋತ್ತ್ರೈರ್ಗಜ ಇವಾರ್ದಿತಃ|

07044021c ಗಾಂಧರ್ವಮಸ್ತ್ರಮಾಯಚ್ಚದ್ರಥಮಾಯಾಂ ಚ ಯೋಜಯತ್||

ಆಳವಾಗಿ ಗಾಯಗೊಂಡು ಕ್ರುದ್ಧನಾದ ಅವನು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ಘೀಳಿಟ್ಟನು. ಮತ್ತು ಗಾಂಧರ್ವಾಸ್ತ್ರವನ್ನು ಪ್ರಯೋಗಿಸಿ ರಥಮಾಯೆಯನ್ನು ಬಳಸಿದನು.

07044022a ಅರ್ಜುನೇನ ತಪಸ್ತಪ್ತ್ವಾ ಗಂಧರ್ವೇಭ್ಯೋ ಯದಾಹೃತಂ|

07044022c ತುಂಬುರುಪ್ರಮುಖೇಭ್ಯೋ ವೈ ತೇನಾಮೋಹಯತಾಹಿತಾನ್||

ಅರ್ಜುನನು ತಪಸ್ಸುಮಾಡಿ ತುಂಬುರು ಪ್ರಮುಖ ಗಂಧರ್ವರಿಂದ ಯಾವ ಅಸ್ತ್ರವನ್ನು ಪಡೆದಿದ್ದನೋ ಅದನ್ನೇ ತನ್ನ ಮಗನಿಗೂ ಉಪದೇಶಿಸಿದ್ದನು. ಅದನ್ನು ಬಳಸಿ ಅವನು ಶತ್ರುಗಳನ್ನು ಮೋಹಿಸಿದನು.

07044023a ಏಕಃ ಸ ಶತಧಾ ರಾಜನ್ದೃಶ್ಯತೇ ಸ್ಮ ಸಹಸ್ರಧಾ|

07044023c ಅಲಾತಚಕ್ರವತ್ಸಂಖ್ಯೇ ಕ್ಷಿಪ್ರಮಸ್ತ್ರಾಣಿ ದರ್ಶಯನ್||

ರಾಜನ್! ಬೆಂಕಿಯ ಕೊಳ್ಳಿಯ ಚಕ್ರದಂತೆ ಒಬ್ಬನೇ ನೂರಾಗಿರೂ ಸಹಸ್ರವಾಗಿಯೂ ಕಾಣಿಸುತ್ತಾ ಬೇಗನೇ ಅಸ್ತ್ರಗಳನ್ನು ಪ್ರದರ್ಶಿಸಿದನು.

07044024a ರಥಚರ್ಯಾಸ್ತ್ರಮಾಯಾಭಿರ್ಮೋಹಯಿತ್ವಾ ಪರಂತಪಃ|

07044024c ಬಿಭೇದ ಶತಧಾ ರಾಜನ್ ಶರೀರಾಣಿ ಮಹೀಕ್ಷಿತಾಂ||

ರಾಜನ್! ರಥದ ಚಲನೆ ಮತ್ತು ಅಸ್ತ್ರಗಳಿಂದ ಮೋಹಿಸಿ ಆ ಪರಂತಪನು ನೂರಾರು ಮಹೀಕ್ಷಿತರ ಶರೀರಗಳನ್ನು ಭೇದಿಸಿದನು.

07044025a ಪ್ರಾಣಾಃ ಪ್ರಾಣಭೃತಾಂ ಸಂಖ್ಯೇ ಪ್ರೇಷಿತಾ ನಿಶಿತೈಃ ಶರೈಃ|

07044025c ರಾಜನ್ಪ್ರಾಪುರಮುಂ ಲೋಕಂ ಶರೀರಾಣ್ಯವನಿಂ ಯಯುಃ||

ರಾಜನ್! ಪ್ರಾಣವಿರುವವರ ಪ್ರಾಣಗಳನ್ನು ರಣದಲ್ಲಿ ನಿಶಿತ ಶರಗಳಿಂದ ಪರಲೋಕಕ್ಕೆ ಕಳುಹಿಸಲು ಶರೀರಗಳು ಭೂಮಿಯ ಮೇಲೆ ಬಿದ್ದವು.

07044026a ಧನೂಂಷ್ಯಶ್ವಾನ್ನಿಯಂತ್ರಂಶ್ಚ ಧ್ವಜಾನ್ಬಾಹೂಂಶ್ಚ ಸಾಂಗದಾನ್|

07044026c ಶಿರಾಂಸಿ ಚ ಶಿತೈರ್ಭಲ್ಲೈಸ್ತೇಷಾಂ ಚಿಚ್ಚೇದ ಫಾಲ್ಗುನಿಃ||

ಫಾಲ್ಗುನಿಯು ನಿಶಿತ ಭಲ್ಲಗಳಿಂದ ಅವರ ಧನುಸ್ಸುಗಳನ್ನೂ, ಕುದುರೆಗಳನ್ನೂ, ಸಾರಥಿಗಳನ್ನೂ, ಧ್ವಜಗಳನ್ನೂ, ಅಂಗದಗಳೊಡನೆ ಬಾಹುಗಳನ್ನೂ ಶಿರಗಳನ್ನೂ ಕತ್ತರಿಸಿದನು.

07044027a ಚೂತಾರಾಮೋ ಯಥಾ ಭಗ್ನಃ ಪಂಚವರ್ಷಫಲೋಪಗಃ|

07044027c ರಾಜಪುತ್ರಶತಂ ತದ್ವತ್ಸೌಭದ್ರೇಣಾಪತದ್ಧತಂ||

ಫಲವನ್ನು ಕೊಡಲಿರುವ ಐದುವರ್ಷದ ಮಾವಿನ ಮರವು ಸಿಡುಲಿಗೆ ಸಿಲುಕಿ ಭಗ್ನವಾಗುವಂತೆ ಆ ನೂರು ರಾಜಪುತ್ರರು ಸೌಭದ್ರನಿಂದ ಭಗ್ನರಾಗಿ ಹೋದರು.

07044028a ಕ್ರುದ್ಧಾಶೀವಿಷಸಂಕಾಶಾನ್ಸುಕುಮಾರಾನ್ಸುಖೋಚಿತಾನ್|

07044028c ಏಕೇನ ನಿಹತಾನ್ದೃಷ್ಟ್ವಾ ಭೀತೋ ದುರ್ಯೋಧನೋಽಭವತ್||

ಕ್ರುದ್ಧ ಸರ್ಪದ ವಿಷದಂತಿದ್ದ ಅ ಸುಖೋಚಿತ ಸುಕುಮಾರರೆಲ್ಲರೂ ಒಬ್ಬನಿಂದನೇ ನಿಹತರಾದುದನ್ನು ನೋಡಿ ದುರ್ಯೋಧನನು ಭೀತನಾದನು.

07044029a ರಥಿನಃ ಕುಂಜರಾನಶ್ವಾನ್ಪದಾತೀಂಶ್ಚಾವಮರ್ದಿತಾನ್|

07044029c ದೃಷ್ಟ್ವಾ ದುರ್ಯೋಧನಃ ಕ್ಷಿಪ್ರಮುಪಾಯಾತ್ತಮಮರ್ಷಿತಃ||

ರಥಿಗಳು, ಆನೆಗಳು, ಕುದುರೆಗಳು ಮತ್ತು ಪದಾತಿಗಳು ಅವನಿಂದ ನಾಶವಾಗುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲಾರದೇ ದುರ್ಯೋಧನನು ಬೇಗನೇ ಅವನನ್ನು ಆಕ್ರಮಣಿಸಿದನು.

07044030a ತಯೋಃ ಕ್ಷಣಮಿವಾಪೂರ್ಣಃ ಸಂಗ್ರಾಮಃ ಸಮಪದ್ಯತ|

07044030c ಅಥಾಭವತ್ತೇ ವಿಮುಖಃ ಪುತ್ರಃ ಶರಶತಾರ್ದಿತಃ||

ಅವರಿಬ್ಬರ ನಡುವೆ ನಡೆದ ಒಂದೇ ಕ್ಷಣದ ಸಂಗ್ರಾಮದಲ್ಲಿ ನೂರಾರು ಶರಗಳಿಂದ ಗಾಯಗೊಂಡ ನಿನ್ನ ಮಗನು ವಿಮುಖನಾದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ದುರ್ಯೋಧನಪರಾಜಯೇ ಚತುಷ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ದುರ್ಯೋಧನಪರಾಜಯ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.

Image result for trees against white background

Comments are closed.