Drona Parva: Chapter 42

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೨

ಜಯದ್ರಥನ ಯುದ್ಧ (೧-೧೯).

07042001 ಸಂಜಯ ಉವಾಚ|

07042001a ಯನ್ಮಾ ಪೃಚ್ಚಸಿ ರಾಜೇಂದ್ರ ಸಿಂಧುರಾಜಸ್ಯ ವಿಕ್ರಮಂ|

07042001c ಶೃಣು ತತ್ಸರ್ವಮಾಖ್ಯಾಸ್ಯೇ ಯಥಾ ಪಾಂಡೂನಯೋಧಯತ್||

ಸಂಜಯನು ಹೇಳಿದನು: “ರಾಜೇಂದ್ರ! ಸಿಂಧುರಾಜನ ವಿಕ್ರಮವನ್ನು ನೀನು ಏನು ಕೇಳುತ್ತಿರುವೆಯೋ ಅವೆಲ್ಲವನ್ನೂ ಮತ್ತು ಪಾಂಡವರೊಂದಿಗೆ ಅವನು ಹೇಗೆ ಯುದ್ಧಮಾಡಿದುದನ್ನೂ ಹೇಳುತ್ತೇನೆ. ಕೇಳು.

07042002a ತಮೂಹುಃ ಸಾರಥೇರ್ವಶ್ಯಾಃ ಸೈಂಧವಾಃ ಸಾಧುವಾಹಿನಃ|

07042002c ವಿಕುರ್ವಾಣಾ ಬೃಹಂತೋಽಶ್ವಾಃ ಶ್ವಸನೋಪಮರಂಹಸಃ||

ಸಾರಥಿಯ ವಶವರ್ತಿಗಳಾದ, ಹೆಚ್ಚು ಭಾರವನ್ನು ಹೊರಬಲ್ಲ, ನಾನಾಪ್ರಕಾರದ ನಡಿಗೆಗಳನ್ನುಳ್ಳ ವಾಯುವಿನ ವೇಗಗತಿಯಿದ್ದ ಅತಿದೊಡ್ಡ ಕುದುರೆಗಳು ಅವನ ರಥವನ್ನು ಕೊಂಡೊಯ್ಯುತ್ತಿದ್ದವು.

07042003a ಗಂಧರ್ವನಗರಾಕಾರಂ ವಿಧಿವತ್ಕಲ್ಪಿತಂ ರಥಂ|

07042003c ತಸ್ಯಾಭ್ಯಶೋಭಯತ್ಕೇತುರ್ವಾರಾಹೋ ರಾಜತೋ ಮಹಾನ್||

ಗಂಧರ್ವನಗರಾಕಾರದ, ವಿಧಿವತ್ತಾಗಿ ರಚಿಸಲ್ಪಟ್ಟ ರಥವು ವರಾಹದ ಚಿಹ್ನೆಯ ಬೆಳ್ಳಿಯ ಮಹಾ ಕೇತುವೊಂದಿಗೆ ಶೋಭಿಸುತ್ತಿತ್ತು.

07042004a ಶ್ವೇತಚ್ಚತ್ರಪತಾಕಾಭಿಶ್ಚಾಮರವ್ಯಜನೇನ ಚ|

07042004c ಸ ಬಭೌ ರಾಜಲಿಂಗೈಸ್ತೈಸ್ತಾರಾಪತಿರಿವಾಂಬರೇ||

ಶ್ವೇತ ಚತ್ರ-ಪತಾಕೆಗಳಿಂದ ಮತ್ತು ಚಾಮರ-ವ್ಯಜನಗಳಿಂದ ಮತ್ತು ಇತರ ರಾಜ ಚಿಹ್ನೆಗಳಿಂದ ಅವನು ಅಂಬರದಲ್ಲಿ ತಾರಾಪತಿಯಂತೆ ಕಾಣಿಸಿದನು.

07042005a ಮುಕ್ತಾವಜ್ರಮಣಿಸ್ವರ್ಣೈರ್ಭೂಷಿತಂ ತದಯಸ್ಮಯಂ|

07042005c ವರೂಥಂ ವಿಬಭೌ ತಸ್ಯ ಜ್ಯೋತಿರ್ಭಿಃ ಖಮಿವಾವೃತಂ||

ಮುಕ್ತ-ವಜ್ರ-ಮಣಿ-ಸುವರ್ಣಗಳಿಂದ ಭೂಷಿತವಾಗಿದ್ದ ಲೋಹಮಯವಾಗಿದ್ದ ಆ ರಥದ ಕಟಾಂಜನವು ನಕ್ಷತ್ರಗಳಿಂದ ಆವೃತ ಆಕಾಶದಂತೆ ಪ್ರಕಾಶಿಸುತ್ತಿತ್ತು.

07042006a ಸ ವಿಸ್ಫಾರ್ಯ ಮಹಚ್ಚಾಪಂ ಕಿರನ್ನಿಷುಗಣಾನ್ಬಹೂನ್|

07042006c ತತ್ಖಂಡಂ ಪೂರಯಾಮಾಸ ಯದ್ವ್ಯದಾರಯದಾರ್ಜುನಿಃ||

ಅವನು ಮಹಾಚಾಪವನ್ನು ಎಳೆದು ಅನೇಕ ಬಾಣಸಮೂಹಗಳನ್ನು ಪ್ರಯೋಗಿಸಿ ಆರ್ಜುನಿಯು ದ್ವಾರವನ್ನಾಗಿಸಿದ್ದ ವ್ಯೂಹದ ಆ ಖಂಡವನ್ನು ಮುಚ್ಚಿಬಿಟ್ಟನು.

07042007a ಸ ಸಾತ್ಯಕಿಂ ತ್ರಿಭಿರ್ಬಾಣೈರಷ್ಟಭಿಶ್ಚ ವೃಕೋದರಂ|

07042007c ಧೃಷ್ಟದ್ಯುಮ್ನಂ ತಥಾ ಷಷ್ಟ್ಯಾ ವಿರಾಟಂ ದಶಭಿಃ ಶರೈಃ||

07042008a ದ್ರುಪದಂ ಪಂಚಭಿಸ್ತೀಕ್ಷ್ಣೈರ್ದಶಭಿಶ್ಚ ಶಿಖಂಡಿನಂ|

07042008c ಕೇಕಯಾನ್ಪಂಚವಿಂಶತ್ಯಾ ದ್ರೌಪದೇಯಾಂಸ್ತ್ರಿಭಿಸ್ತ್ರಿಭಿಃ||

07042009a ಯುಧಿಷ್ಠಿರಂ ಚ ಸಪ್ತತ್ಯಾ ತತಃ ಶೇಷಾನಪಾನುದತ್|

07042009c ಇಷುಜಾಲೇನ ಮಹತಾ ತದದ್ಭುತಮಿವಾಭವತ್||

ಅವನು ಸಾತ್ಯಕಿಯನ್ನು ಮೂರು ಬಾಣಗಳಿಂದ, ಎಂಟರಿಂದ ವೃಕೋದರನನ್ನು, ಹಾಗೆಯೇ ಧೃಷ್ಟದ್ಯುಮ್ನನನ್ನು ಆರವತ್ತರಿಂದ, ವಿರಾಟನನ್ನು ಹತ್ತು ಶರಗಳಿಂದ, ದ್ರುಪದನನ್ನು ಐದು ತೀಕ್ಷ್ಣ ಶರಗಳಿಂದ, ಹತ್ತರಿಂದ ಶಿಖಂಡಿಯನ್ನು, ಇಪ್ಪತ್ತೈದರಿಂದ ಕೇಕಯರನ್ನು, ದ್ರೌಪದೇಯರನು ಮೂರು ಮೂರು ಬಾಣಗಳಿಂದ ಮತ್ತು ಯುಧಿಷ್ಠಿರನನ್ನು ಎಪ್ಪತ್ತು ಬಾಣಗಳಿಂದಲೂ ಪ್ರಹರಿಸಿ, ಉಳಿದವರನ್ನೂ ಬಾಣಗಳ ಮಹಾ ಜಾಲಗಳನ್ನು ಸುರಿಸಿ ಓಡಿಸಿಬಿಟ್ಟನು. ಅದೊಂದು ಅದ್ಭುತವಾಗಿತ್ತು.

07042010a ಅಥಾಸ್ಯ ಶಿತಪೀತೇನ ಭಲ್ಲೇನಾದಿಶ್ಯ ಕಾರ್ಮುಕಂ|

07042010c ಚಿಚ್ಚೇದ ಪ್ರಹಸನ್ರಾಜಾ ಧರ್ಮಪುತ್ರಃ ಪ್ರತಾಪವಾನ್||

ಆಗ ಪ್ರತಾಪವಾನ್ ರಾಜಾ ಧರ್ಮಪುತ್ರನು ನಸುನಗುತ್ತಾ ಹೊಂಬಣ್ಣದ ನಿಶಿತ ಭಲ್ಲವನ್ನು ಪ್ರಯೋಗಿಸಿ ಅವನ ಕಾರ್ಮುಕವನ್ನು ಕತ್ತರಿಸಿದನು.

07042011a ಅಕ್ಷ್ಣೋರ್ನಿಮೇಷಮಾತ್ರೇಣ ಸೋಽನ್ಯದಾದಾಯ ಕಾರ್ಮುಕಂ|

07042011c ವಿವ್ಯಾಧ ದಶಭಿಃ ಪಾರ್ಥ ತಾಂಶ್ಚೈವಾನ್ಯಾಂಸ್ತ್ರಿಭಿಸ್ತ್ರಿಭಿಃ||

ಕಣ್ಣು ಮುಚ್ಚಿ ತೆಗೆಯುವುದರೊಳಗಾಗಿ ಅವನು ಇನ್ನೊಂದು ಬಿಲ್ಲನ್ನು ಎತ್ತಿಕೊಂಡು ಹತ್ತು ಬಾಣಗಳಿಂದ ಪಾರ್ಥನನ್ನೂ, ಅನ್ಯರನ್ನು ಮೂರು ಮೂರು ಬಾಣಗಳಿಂದಲೂ ಹೊಡೆದನು.

07042012a ತಸ್ಯ ತಲ್ಲಾಘವಂ ಜ್ಞಾತ್ವಾ ಭೀಮೋ ಭಲ್ಲೈಸ್ತ್ರಿಭಿಃ ಪುನಃ|

07042012c ಧನುರ್ಧ್ವಜಂ ಚ ಚತ್ರಂ ಚ ಕ್ಷಿತೌ ಕ್ಷಿಪ್ರಮಪಾತಯತ್||

ಅವನ ಆ ಹಸ್ತಲಾಘವನ್ನು ಅರ್ಥಮಾಡಿಕೊಂಡ ಭೀಮನು ಮೂರು ಮೂರು ಬಾಣಗಳಿಂದ ಪುನಃ ಅವನ ಧನುಸ್ಸನ್ನೂ, ಧ್ವಜವನ್ನೂ, ಚತ್ರವನ್ನೂ ಭೂಮಿಯ ಮೇಲೆ ಬೀಳಿಸಿದನು.

07042013a ಸೋಽನ್ಯದಾದಾಯ ಬಲವಾನ್ಸಜ್ಯಂ ಕೃತ್ವಾ ಚ ಕಾರ್ಮುಕಂ|

07042013c ಭೀಮಸ್ಯಾಪೋಥಯತ್ ಕೇತುಂ ಧನುರಶ್ವಾಂಶ್ಚ ಮಾರಿಷ||

ಮಾರಿಷ! ಆ ಬಲವಾನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹೆದೆಯೇರಿಸಿ ಭೀಮನ ಕೇತು, ಧನುಸ್ಸು ಮತ್ತು ಕುದುರೆಗಳನ್ನು ಕಡಿದು ಉರುಳಿಸಿದನು.

07042014a ಸ ಹತಾಶ್ವಾದವಪ್ಲುತ್ಯ ಚಿನ್ನಧನ್ವಾ ರಥೋತ್ತಮಾತ್|

07042014c ಸಾತ್ಯಕೇರಾಪ್ಲುತೋ ಯಾನಂ ಗಿರ್ಯಗ್ರಮಿವ ಕೇಸರೀ||

ಧನುಸ್ಸನ್ನು ಕಳೆದುಕೊಂಡ ಅವನು ಕುದುರೆಗಳು ಹತವಾಗಿದ್ದ ಆ ಉತ್ತಮ ರಥದಿಂದ ಧುಮುಕಿ ಸಿಂಹವು ಪರ್ವತ ಶಿಖರವನ್ನೇರುವಂತೆ ಸಾತ್ಯಕಿಯ ರಥವನ್ನೇರಿದನು.

07042015a ತತಸ್ತ್ವದೀಯಾಃ ಸಂಹೃಷ್ಟಾಃ ಸಾಧು ಸಾಧ್ವಿತಿ ಚುಕ್ರುಶುಃ|

07042015c ಸಿಂಧುರಾಜಸ್ಯ ತತ್ಕರ್ಮ ಪ್ರೇಕ್ಷ್ಯಾಶ್ರದ್ಧೇಯಮುತ್ತಮಂ||

ಶ್ರವಣಮಾತ್ರದಿಂದ ನಂಬಲಾಗದ ಪರಮಾದ್ಭುತವಾದ ಸಿಂಧುರಾಜನ ಆ ಸಾಹಸಕರ್ಮವನ್ನು ಪ್ರತ್ಯಕ್ಷವಾಗಿಯೇ ನೋಡಿದ ನಿನ್ನ ಕಡೆಯವರು ಸಂಹೃಷ್ಟರಾಗಿ “ಸಾಧು! ಸಾಧು!” ಎಂದು ಕೂಗಿದರು.

07042016a ಸಂಕ್ರುದ್ಧಾನ್ಪಾಂಡವಾನೇಕೋ ಯದ್ದಧಾರಾಸ್ತ್ರತೇಜಸಾ|

07042016c ತತ್ತಸ್ಯ ಕರ್ಮ ಭೂತಾನಿ ಸರ್ವಾಣ್ಯೇವಾಭ್ಯಪೂಜಯನ್||

ಅಸ್ತ್ರತೇಜಸ್ಸಿನಿಂದ ಅವನು ಒಬ್ಬನೇ ಸಂಕ್ರುದ್ಧ ಪಾಂಡವರನ್ನು ತಡೆಹಿಡಿದ ಅವನ ಆ ಕರ್ಮವನ್ನು ನೋಡಿ ಸರ್ವ ಭೂತಗಳೂ ಅವನನ್ನು ಗೌರವಿಸಿದವು.

07042017a ಸೌಭದ್ರೇಣ ಹತೈಃ ಪೂರ್ವಂ ಸೋತ್ತರಾಯುಧಿಭಿರ್ದ್ವಿಪೈಃ|

07042017c ಪಾಂಡೂನಾಂ ದರ್ಶಿತಃ ಪಂಥಾಃ ಸೈಂಧವೇನ ನಿವಾರಿತಃ||

ಈ ಮೊದಲು ಸೌಭದ್ರನು ಅನೇಕ ಗಜ-ಯೋಧರನ್ನು ಸಂಹರಿಸಿ ಪಾಂಡವರಿಗೆ ತೋರಿಸಿಕೊಟ್ಟಿದ್ದ ದಾರಿಯನ್ನೇ ಸೈಂಧವನು ಮುಚ್ಚಿಬಿಟ್ಟನು.

07042018a ಯತಮಾನಾಸ್ತು ತೇ ವೀರಾ ಮತ್ಸ್ಯಪಾಂಚಾಲಕೇಕಯಾಃ|

07042018c ಪಾಂಡವಾಶ್ಚಾನ್ವಪದ್ಯಂತ ಪ್ರತ್ಯೈಕಶ್ಯೇನ ಸೈಂಧವಂ||

ಆ ಮತ್ಸ್ಯ-ಪಾಂಚಾಲ-ಕೇಕಯ ವೀರರು ಮತ್ತು ಪಾಂಡವರು ಎಷ್ಟೇ ಪ್ರಯತ್ನಪಟ್ಟರೂ ಸೈಂಧವನನ್ನು ಅಲ್ಲಿಂದ ಕದಲಿಸಲು ಅವರಿಗೆ ಸಾಧ್ಯವಾಗಲಿಲ್ಲ.

07042019a ಯೋ ಯೋ ಹಿ ಯತತೇ ಭೇತ್ತುಂ ದ್ರೋಣಾನೀಕಂ ತವಾಹಿತಃ|

07042019c ತಂ ತಂ ದೇವವರಪ್ರಾಪ್ತ್ಯಾ ಸೈಂಧವಃ ಪ್ರತ್ಯವಾರಯತ್||

ನಿನ್ನ ಶತ್ರುಗಳಲ್ಲಿ ಯಾರ್ಯಾರು ದ್ರೋಣನ ವ್ಯೂಹವನ್ನು ಭೇದಿಸಲು ಪ್ರಯತ್ನಿಸುತ್ತಿದ್ದರೋ ಅವರನ್ನು ದೇವವರವನ್ನು ಪಡೆದಿದ್ದ ಸೈಂಧವನು ತಡೆಯುತ್ತಿದ್ದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಜಯದ್ರಥಯುದ್ಧೇ ದ್ವಾಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಜಯದ್ರಥಯುದ್ಧ ಎನ್ನುವ ನಲ್ವತ್ತೆರಡನೇ ಅಧ್ಯಾಯವು.

Image result for trees against white background

Comments are closed.