Drona Parva: Chapter 40

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೦

ಅಭಿಮನ್ಯುವು ಕರ್ಣನ ಸಹೋದರನನ್ನು ಸಂಹರಿಸಿ ಕರ್ಣನನ್ನು ಹಿಮ್ಮೆಟ್ಟಿಸಿದುದು (೧-೮). ಅಭಿಮನ್ಯುವಿನಿಂದ ಕುರುಸೇನೆಯ ಮೇಲೆ ಆಕ್ರಮಣ (೯-೨೪).

Image result for abhimanyu07040001 ಸಂಜಯ ಉವಾಚ|

07040001a ಸೋಽಭಿಗರ್ಜನ್ಧನುಷ್ಪಾಣಿರ್ಜ್ಯಾಂ ವಿಕರ್ಷನ್ಪುನಃ ಪುನಃ|

07040001c ತಯೋರ್ಮಹಾತ್ಮನೋಸ್ತೂರ್ಣಂ ರಥಾಂತರಮವಾಪತತ್||

ಸಂಜಯನು ಹೇಳಿದನು: “ಅವನು ಗರ್ಜಿಸುತ್ತಾ ಪುನಃ ಪುನಃ ಕೈಯಿಂದ ಧನುಸ್ಸಿನ ಶಿಂಜಿನಿಯನ್ನು ಎಳೆಯುತ್ತಾ ಬೇಗನೇ ಆ ಮಹಾತ್ಮರ ರಥಗಳ ಮಧ್ಯೆ ಬಂದು ಎರಗಿದನು.

07040002a ಸೋಽವಿಧ್ಯದ್ದಶಭಿರ್ಬಾಣೈರಭಿಮನ್ಯುಂ ದುರಾಸದಂ|

07040002c ಸಚ್ಚತ್ರಧ್ವಜಯಂತಾರಂ ಸಾಶ್ವಮಾಶು ಸ್ಮಯನ್ನಿವ||

ನಸುನಗುವ ಮುಖವಿದ್ದ ಅವನು ದುರಾಸದನಾದ ಅಭಿಮನ್ಯುವನ್ನು ಅವನ ಚತ್ರ-ಧ್ವಜ-ಸಾರಥಿಯನ್ನೂ ಸೇರಿ ಹತ್ತು ಬಾಣಗಳಿಂದ ಹೊಡೆದನು.

07040003a ಪಿತೃಪೈತಾಮಹಂ ಕರ್ಮ ಕುರ್ವಾಣಮತಿಮಾನುಷಂ|

07040003c ದೃಷ್ಟ್ವಾರ್ದಿತಂ ಶರೈಃ ಕಾರ್ಷ್ಣಿಂ ತ್ವದೀಯಾ ಹೃಷಿತಾಭವನ್||

ಪಿತೃಪಿತಾಮಹರಿಗಾಗಿ ಅತಿ ಮಾನುಷ ಕರ್ಮವನ್ನು ಮಾಡುತ್ತಿದ್ದ ಕಾರ್ಷ್ಣಿಯು ಶರಗಳಿಂದ ಗಾಯಗೊಂಡಿದುದನ್ನು ನೋಡಿ ನಿನ್ನವರಿಗೆ ಸಂತೋಷವಾಯಿತು.

07040004a ತಸ್ಯಾಭಿಮನ್ಯುರಾಯಮ್ಯ ಸ್ಮಯನ್ನೇಕೇನ ಪತ್ರಿಣಾ|

07040004c ಶಿರಃ ಪ್ರಚ್ಯಾವಯಾಮಾಸ ಸ ರಥಾತ್ಪ್ರಾಪತದ್ಭುವಿ||

07040005a ಕರ್ಣಿಕಾರಮಿವೋದ್ಧೂತಂ ವಾತೇನ ಮಥಿತಂ ನಗಾತ್|

07040005c ಭ್ರಾತರಂ ನಿಹತಂ ದೃಷ್ಟ್ವಾ ರಾಜನ್ಕರ್ಣೋ ವ್ಯಥಾಂ ಯಯೌ||

ರಾಜನ್! ಆಗ ಅಭಿಮನ್ಯುವು ನಗು ನಗುತ್ತಲೇ ಶರಸಂಧಾನ ಮಾಡಿ ಶಿಂಜಿನಿಯನ್ನು ದೀರ್ಘವಾಗಿ ಎಳೆದು ಒಂದೇ ಪತ್ರಿಯಿಂದ ಅವನ ಶಿರವನ್ನು ಕತ್ತರಿಸಲು ಚಂಡಮಾರುತವು ಪರ್ವತದಿಂದ ಕೆಳಗುರುಳಿಸಿದ ಬೆಟ್ಟಕಣಗಿಲೇ ಮರದಂತೆ ಅವನು ರಥದಿಂದ ನೆಲದ ಮೇಲೆ ಬಿದ್ದನು. ಸಹೋದರನು ಹತನಾದುದನ್ನು ನೋಡಿ ಕರ್ಣನು ವ್ಯಥಿತನಾದನು.

07040006a ವಿಮುಖೀಕೃತ್ಯ ಕರ್ಣಂ ತು ಸೌಭದ್ರಃ ಕಂಕಪತ್ರಿಭಿಃ|

07040006c ಅನ್ಯಾನಪಿ ಮಹೇಷ್ವಾಸಾಂಸ್ತೂರ್ಣಂ ಏವಾಭಿದುದ್ರುವೇ||

ಕಂಕಪತ್ರಿಗಳಿಂದ ಕರ್ಣನನ್ನೂ ವಿಮುಖನನ್ನಾಗಿ ಮಾಡಿ ಸೌಭದ್ರನು ಕೂಡಲೇ ಅನ್ಯ ಮಹೇಷ್ವಾಸರನ್ನೂ ಆಕ್ರಮಿಸಿದನು.

07040007a ತತಸ್ತದ್ವಿತತಂ ಜಾಲಂ ಹಸ್ತ್ಯಶ್ವರಥಪತ್ತಿಮತ್|

07040007c ಝಷಃ ಕ್ರುದ್ಧ ಇವಾಭಿಂದದಭಿಮನ್ಯುರ್ಮಹಾಯಶಾಃ||

ಆಗ ಕ್ರುದ್ಧನಾದ ಮಹಾಯಶ ಅಭಿಮನ್ಯುವು ವಿಶಾಲವಾಗಿ ಹರಡಿಕೊಂಡಿದ್ದ ಗಜಾಶ್ವರಥಪದಾತಿಗ ಸೈನ್ಯವನ್ನು ಧ್ವಂಸಮಾಡಲು ಉಪಕ್ರಮಿಸಿದನು.

07040008a ಕರ್ಣಸ್ತು ಬಹುಭಿರ್ಬಾಣೈರರ್ದ್ಯಮಾನೋಽಭಿಮನ್ಯುನಾ|

07040008c ಅಪಾಯಾಜ್ಜವನೈರಶ್ವೈಸ್ತತೋಽನೀಕಮಭಿದ್ಯತ||

ಕರ್ಣನಾದರೋ ಅಭಿಮನ್ಯುವಿನ ಅನೇಕ ಬಾಣಗಳಿಂದ ಗಾಯಗೊಂಡು ವೇಗವುಳ್ಳ ಕುದುರೆಗಳೊಂದಿಗೆ ಪಲಾಯನಗೈದನು. ಆಗ ಆ ಸೇನೆಯು ಭಗ್ನವಾಯಿತು.

07040009a ಶಲಭೈರಿವ ಚಾಕಾಶೇ ಧಾರಾಭಿರಿವ ಚಾವೃತೇ|

07040009c ಅಭಿಮನ್ಯೋಃ ಶರೈ ರಾಜನ್ನ ಪ್ರಾಜ್ಞಾಯತ ಕಿಂ ಚನ||

ರಾಜನ್! ಆಕಾಶವು ಮಿಡಿತೆ ಹುಳುಗಳಿಂದ ಅಥವಾ ಮಳೆಯಿಂದ ಮುಚ್ಚಿಹೋದಂತೆ ಅಭಿಮನ್ಯುವಿನ ಶರಗಳಿಂದ ಮುಚ್ಚಿ ಹೋಯಿತು. ಆಗ ಏನೂ ಕಾಣುತ್ತಿರಲಿಲ್ಲ.

07040010a ತಾವಕಾನಾಂ ತು ಯೋಧಾನಾಂ ವಧ್ಯತಾಂ ನಿಶಿತೈಃ ಶರೈಃ|

07040010c ಅನ್ಯತ್ರ ಸೈಂಧವಾದ್ರಾಜನ್ನ ಸ್ಮ ಕಶ್ಚಿದತಿಷ್ಠತ||

ರಾಜನ್! ನಿಶಿತ ಶರಗಳಿಂದ ಆಕ್ರಮಣಿಸಿಸಲ್ಪಡುತ್ತಿರುವ ನಿನ್ನವರ ಯೋಧರಲ್ಲಿ ಸೈಂಧವನನ್ನು ಬಿಟ್ಟು ಬೇರೆ ಯಾರೂ ಅವನನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ.

07040011a ಸೌಭದ್ರಸ್ತು ತತಃ ಶಂಖಂ ಪ್ರಧ್ಮಾಪ್ಯ ಪುರುಷರ್ಷಭಃ|

07040011c ಶೀಘ್ರಮಭ್ಯಪತತ್ಸೇನಾಂ ಭಾರತೀಂ ಭರತರ್ಷಭ||

ಭರತರ್ಷಭ! ಆಗ ಪುರುಷರ್ಷಭ ಸೌಭದ್ರನಾದರೋ ಶಂಖವನ್ನು ಊದಿ ಶೀಘ್ರದಲ್ಲಿ ಭಾರತೀ ಸೇನೆಯನ್ನು ಆಕ್ರಮಣಿಸಿದನು.

07040012a ಸ ಕಕ್ಷೇಽಗ್ನಿರಿವೋತ್ಸೃಷ್ಟೋ ನಿರ್ದಹಂಸ್ತರಸಾ ರಿಪೂನ್|

07040012c ಮಧ್ಯೇ ಭಾರತಸೈನ್ಯಾನಾಮಾರ್ಜುನಿಃ ಪರ್ಯವರ್ತತ||

ಹುಲ್ಲುಮೆದೆಯ ಮೇಲೆ ಬಿದ್ದ ಒಂದು ಕಿಡಿಯೂ ಕೂಡ ಸ್ವಲ್ಪವೇ ಹೊತ್ತಿನಲ್ಲಿ ಅದನ್ನು ಭಸ್ಮಮಾಡುವಂತೆ ಆರ್ಜುನಿಯು ಕ್ಷಣದಲ್ಲಿಯೇ ರಿಪುಗಳನ್ನು ಸಂಹರಿಸುತ್ತಾ ಭಾರತ ಸೇನೆಯ ಮಧ್ಯೆ ಸಂಚರಿಸುತಿದ್ದನು.

07040013a ರಥನಾಗಾಶ್ವಮನುಜಾನರ್ದಯನ್ನಿಶಿತೈಃ ಶರೈಃ|

07040013c ಸ ಪ್ರವಿಶ್ಯಾಕರೋದ್ಭೂಮಿಂ ಕಬಂಧಗಣಸಂಕುಲಾಂ||

ಅವನು ಒಳನುಗ್ಗಿ ನಿಶಿತ ಶರಗಳಿಂದ ರಥ-ಗಜ-ಅಶ್ವ-ಮನುಷ್ಯರನ್ನು ಹೊಡೆಯುತ್ತಾ ಭೂಮಿಯನ್ನು ಮುಂಡಗಳ ರಾಶಿಗಳಿಂದ ಮುಚ್ಚಿದನು.

07040014a ಸೌಭದ್ರಚಾಪಪ್ರಭವೈರ್ನಿಕೃತ್ತಾಃ ಪರಮೇಷುಭಿಃ|

07040014c ಸ್ವಾನೇವಾಭಿಮುಖಾನ್ಘ್ನಂತಃ ಪ್ರಾದ್ರವಂ ಜೀವಿತಾರ್ಥಿನಃ||

ಸೌಭದ್ರನ ಧನುಸ್ಸಿನಿಂದ ಪ್ರಯೋಗಿಸಲ್ಪಟ್ಟ ಶ್ರೇಷ್ಠ ಶರಗಳಿಂದ ಗಾಯಗೊಂಡು ಜೀವವನ್ನು ಉಳಿಸಿಕೊಳ್ಳಲು ಆತುರಪಟ್ಟು ಓಡುವಾಗ ನಿನ್ನವರನ್ನೇ ತುಳಿದು ಸಾಯಿಸುತ್ತಿದ್ದರು.

07040015a ತೇ ಘೋರಾ ರೌದ್ರಕರ್ಮಾಣೋ ವಿಪಾಠಾಃ ಪೃಥವಃ ಶಿತಾಃ|

07040015c ನಿಘ್ನಂತೋ ರಥನಾಗಾಶ್ವಾಂ ಜಗ್ಮುರಾಶು ವಸುಂಧರಾಂ||

ಅವನ ಘೋರ ರೌದ್ರಕರ್ಮಗಳನ್ನು ಮಾಡಬಲ್ಲ, ತೀಕ್ಷ್ಣ ಬಹುಸಂಖ್ಯಾತ ಬಾಣಗಳು ರಥ-ಆನೆ-ಅಶ್ವಗಳನ್ನು ಸಂಹರಿಸಿ ನೆಲವನ್ನು ಹೊಗುತ್ತಿದ್ದವು.

07040016a ಸಾಯುಧಾಃ ಸಾಂಗುಲಿತ್ರಾಣಾಃ ಸಖಡ್ಗಾಃ ಸಾಂಗದಾ ರಣೇ|

07040016c ದೃಶ್ಯಂತೇ ಬಾಹವಶ್ಚಿನ್ನಾ ಹೇಮಾಭರಣಭೂಷಿತಾಃ||

ಆಯುಧಗಳನ್ನು ಹಿಡಿದ, ಅಂಗುಲಿತ್ರಾಣಗಳನ್ನು ಧರಿಸಿದ್ದ, ಖಡ್ಗಗಳನ್ನು ಹಿಡಿದಿದ್ದ, ಗದೆಗಳನ್ನು ಹಿಡಿದಿದ್ದ, ಹೇಮಾಭರಣ ಭೂಷಿತ ಬಾಹುಗಳು ತುಂಡಾಗಿ ಬಿದ್ದಿರುವುದು ರಣರಂಗದಲ್ಲಿ ಕಂಡುಬಂದವು.

07040017a ಶರಾಶ್ಚಾಪಾನಿ ಖಡ್ಗಾಶ್ಚ ಶರೀರಾಣಿ ಶಿರಾಂಸಿ ಚ|

07040017c ಸಕುಂಡಲಾನಿ ಸ್ರಗ್ವೀಣಿ ಭೂಮಾವಾಸನ್ಸಹಸ್ರಶಃ||

ಭೂಮಿಯ ಮೇಲೆ ಸಹಸ್ರಾರು ಬಾಣಗಳೂ, ಚಾಪಗಳೂ, ಖಡ್ಗಗಳೂ, ಶರೀರಗಳೂ, ಕುಂಡಲ-ಸರಗಳನ್ನು ಧರಿಸಿದ್ದ ಶಿರಗಳೂ ಹರಡಿ ಬಿದ್ದಿದ್ದವು.

07040018a ಅಪಸ್ಕರೈರಧಿಷ್ಠಾನೈರೀಷಾದಂಡಕಬಂಧುರೈಃ|

07040018c ಅಕ್ಷೈರ್ವಿಮಥಿತೈಶ್ಚಕ್ರೈರ್ಭಗ್ನೈಶ್ಚ ಬಹುಧಾ ರಥೈಃ|

07040018e ಶಕ್ತಿಚಾಪಾಯುಧೈಶ್ಚಾಪಿ ಪತಿತೈಶ್ಚ ಮಹಾಧ್ವಜೈಃ||

ಯುದ್ಧಸಾಮಗ್ರಿಗಳಿಂದ ಕೂಡಿದ್ದ, ಆಸನಗಳು, ಈಷಾದಂಡಗಳು, ರಥದ ಅಚ್ಚುಗಳು, ಮುರಿದುಹೋದ ಚಕ್ರಗಳು, ಅನೇಕ ರಥಗಳು, ಶಕ್ತಿ-ಚಾಪ ಆಯುಧಗಳೂ ಮಹಾಧ್ವಜಗಳೂ ಬಿದ್ದಿದ್ದವು.

07040019a ನಿಹತೈಃ ಕ್ಷತ್ರಿಯೈರಶ್ವೈರ್ವಾರಣೈಶ್ಚ ವಿಶಾಂ ಪತೇ|

07040019c ಅಗಮ್ಯಕಲ್ಪಾ ಪೃಥಿವೀ ಕ್ಷಣೇನಾಸೀತ್ಸುದಾರುಣಾ||

ವಿಶಾಂಪತೇ! ಸಂಹರಿಸಲ್ಪಡುತ್ತಿದ್ದ ಕ್ಷತ್ರಿಯರು, ಕುದುರೆಗಳು ಮತ್ತು ಆನೆಗಳಿಂದ ಭೂಮಿಯು ಕ್ಷಣದಲ್ಲಿಯೇ ಅಗಮ್ಯವೂ ದಾರುಣವೂ ಆಯಿತು.

07040020a ವಧ್ಯತಾಂ ರಾಜಪುತ್ರಾಣಾಂ ಕ್ರಂದತಾಮಿತರೇತರಂ|

07040020c ಪ್ರಾದುರಾಸೀನ್ಮಹಾಶಬ್ದೋ ಭೀರೂಣಾಂ ಭಯವರ್ಧನಃ|

07040020e ಸ ಶಬ್ದೋ ಭರತಶ್ರೇಷ್ಠ ದಿಶಃ ಸರ್ವಾ ವ್ಯನಾದಯತ್||

ಭರತಶ್ರೇಷ್ಠ! ವಧಿಸಲ್ಪಡುತ್ತಿದ್ದ ರಾಜಪುತ್ರರು ಇತರೇತರರನ್ನು ಕೂಗಿ ಕರೆಯುತ್ತಿದುದರ ಮಹಾ ಶಬ್ಧವು ಉದ್ಭವಿಸಿತು. ಹೇಡಿಗಳ ಭಯವನ್ನು ಹೆಚ್ಚಿಸುವ ಆ ಶಬ್ಧವು ಸರ್ವ ದಿಕ್ಕುಗಳಲ್ಲಿಯೂ ಮೊಳಗಿತು.

07040021a ಸೌಭದ್ರಶ್ಚಾದ್ರವತ್ಸೇನಾಂ ನಿಘ್ನನ್ನಶ್ವರಥದ್ವಿಪಾನ್|

07040021c ವ್ಯಚರತ್ಸ ದಿಶಃ ಸರ್ವಾಃ ಪ್ರದಿಶಶ್ಚಾಹಿತಾನ್ರುಜನ್||

ಅಶ್ವ-ರಥ-ಗಜಗಳ ಸೇನೆಗಳನ್ನು ಸಂಹರಿಸುತ್ತಾ ಸೌಭದ್ರನು ದಿಕ್ಕು ಉಪದಿಕ್ಕುಗಳನ್ನು ಬೆಳಗಿಸುತ್ತಾ ತಿರುಗುತ್ತಿದ್ದನು.

07040022a ತಂ ತದಾ ನಾನುಪಶ್ಯಾಮ ಸೈನ್ಯೇನ ರಜಸಾವೃತಂ|

07040022c ಆದದಾನಂ ಗಜಾಶ್ವಾನಾಂ ನೃಣಾಂ ಚಾಯೂಂಷಿ ಭಾರತ||

ಭಾರತ! ಆಗ ಧೂಳಿನಿಂದ ಸೇನೆಗಳು ಮುಸುಕಿಹೋಗಲು ಆನೆ-ಕುದುರೆ-ಸೈನಿಕರನ್ನು ಧ್ವಂಸಗೊಳಿಸುತ್ತಿದ್ದ ಅವನನ್ನು ನಾವು ಕಾಣಲೇ ಇಲ್ಲ.

07040023a ಕ್ಷಣೇನ ಭೂಯೋಽಪಶ್ಯಾಮ ಸೂರ್ಯಂ ಮಧ್ಯಂದಿನೇ ಯಥಾ|

07040023c ಅಭಿಮನ್ಯುಂ ಮಹಾರಾಜ ಪ್ರತಪಂತಂ ದ್ವಿಷದ್ಗಣಾನ್||

ಮಹಾರಾಜ! ಕ್ಷಣದಲ್ಲಿಯೇ ಮತ್ತೆ ಮಧ್ಯಾಹ್ನದ ಸೂರ್ಯನಂತೆ ಶತ್ರುಗಣಗಳನ್ನು ಸುಡುತ್ತಾ ಅಭಿಮನ್ಯುವು ಕಾಣಿಸಿಕೊಂಡನು.

07040024a ಸ ವಾಸವಸಮಃ ಸಂಖ್ಯೇ ವಾಸವಸ್ಯಾತ್ಮಜಾತ್ಮಜಃ|

07040024c ಅಭಿಮನ್ಯುರ್ಮಹಾರಾಜ ಸೈನ್ಯಮಧ್ಯೇ ವ್ಯರೋಚತ||

ಮಹಾರಾಜ! ಯುದ್ಧದಲ್ಲಿ ವಾಸವನ ಸಮನಾದ ವಾಸವನ ಮಗನ ಮಗ ಅಭಿಮನ್ಯುವು ಸೇನೆಯ ಮಧ್ಯದಲ್ಲಿ ವಿರಾಜಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪರಾಕ್ರಮೇ ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ನಲ್ವತ್ತನೇ ಅಧ್ಯಾಯವು.

Image result for trees against white background

Comments are closed.