Drona Parva: Chapter 4

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

ಭೀಷ್ಮನು ಕರ್ಣನನ್ನು ಯುದ್ಧಕ್ಕೆ ಬೀಳ್ಕೊಟ್ಟಿದುದು (೧-೧೫).

07004001 ಸಂಜಯ ಉವಾಚ|

07004001a ತಸ್ಯ ಲಾಲಪ್ಯತಃ ಶ್ರುತ್ವಾ ವೃದ್ಧಃ ಕುರುಪಿತಾಮಹಃ|

07004001c ದೇಶಕಾಲೋಚಿತಂ ವಾಕ್ಯಮಬ್ರವೀತ್ ಪ್ರೀತಮಾನಸಃ||

ಸಂಜಯನು ಹೇಳಿದನು: “ಅವನ ಆ ಲಲಾಪಗಳನ್ನು ಕೇಳಿದ ಪ್ರೀತಮನಸ್ಕ ವೃದ್ಧ ಕುರುಪಿತಾಮಹನು ದೇಶ ಕಾಲೋಚಿತವಾದ ಮಾತನ್ನಾಡಿದನು.

07004002a ಸಮುದ್ರ ಇವ ಸಿಂಧೂನಾಂ ಜ್ಯೋತಿಷಾಮಿವ ಭಾಸ್ಕರಃ|

07004002c ಸತ್ಯಸ್ಯ ಚ ಯಥಾ ಸಂತೋ ಬೀಜಾನಾಮಿವ ಚೋರ್ವರಾ||

07004003a ಪರ್ಜನ್ಯ ಇವ ಭೂತಾನಾಂ ಪ್ರತಿಷ್ಠಾ ಸುಹೃದಾಂ ಭವ|

07004003c ಬಾಂಧವಾಸ್ತ್ವಾನುಜೀವಂತು ಸಹಸ್ರಾಕ್ಷಮಿವಾಮರಾಃ||

“ನದಿಗಳಿಗೆ ಸಮುದ್ರದಂತೆ, ಬೆಳಗುತ್ತಿರುವವರಲ್ಲಿ ಭಾಸ್ಕರನಂತೆ, ಸಂತರಿಗೆ ಸತ್ಯದಂತೆ, ಫಲವತ್ತಾದ ಭೂಮಿಗೆ ಬೀಜದಂತೆ, ಜೀವಿಗಳಿಗೆ ಮಳೆಯಂತೆ ನಿನ್ನ ಸುಹೃದಯರಲ್ಲಿ ನೆಲೆಸಿರು. ಸಹಸ್ರಾಕ್ಷನನ್ನು ಅವಲಂಬಿಸಿ ಅಮರರು ಇರುವಂತೆ ಬಾಂಧವರು ನಿನ್ನನ್ನು ಅವಲಂಬಿಸಿರಲಿ.

07004004a ಸ್ವಬಾಹುಬಲವೀರ್ಯೇಣ ಧಾರ್ತರಾಷ್ಟ್ರಪ್ರಿಯೈಷಿಣಾ|

07004004c ಕರ್ಣ ರಾಜಪುರಂ ಗತ್ವಾ ಕಾಂಬೋಜಾ ನಿಹತಾಸ್ತ್ವಯಾ||

ಕರ್ಣ! ಧಾರ್ತರಾಷ್ಟ್ರನಿಗೆ ಪ್ರಿಯವಾದುದನ್ನು ಮಾಡಲಿಚ್ಛಿಸಿ ನೀನು ರಾಜಪುರಕ್ಕೆ ಹೋಗಿ ಕಾಂಬೋಜರನ್ನು ಸಂಹರಿಸಿದೆ.

07004005a ಗಿರಿವ್ರಜಗತಾಶ್ಚಾಪಿ ನಗ್ನಜಿತ್ಪ್ರಮುಖಾ ನೃಪಾಃ|

07004005c ಅಂಬಷ್ಠಾಶ್ಚ ವಿದೇಹಾಶ್ಚ ಗಾಂಧಾರಾಶ್ಚ ಜಿತಾಸ್ತ್ವಯಾ||

07004006a ಹಿಮವದ್ದುರ್ಗನಿಲಯಾಃ ಕಿರಾತಾ ರಣಕರ್ಕಶಾಃ|

07004006c ದುರ್ಯೋಧನಸ್ಯ ವಶಗಾಃ ಕೃತಾಃ ಕರ್ಣ ತ್ವಯಾ ಪುರಾ||

ಗಿರಿವ್ರಜಕ್ಕೆ ಹೋಗಿ ನಗ್ನಜಿತನೇ ಮೊದಲಾದ ಪ್ರಮುಖ ನೃಪರನ್ನೂ, ಅಂಬಷ್ಠ, ವಿದೇಹ, ಗಾಂಧಾರರನ್ನು ನೀನು ಗೆದ್ದೆ. ಕರ್ಣ! ಹಿಂದೆ ನೀನು ಹಿಮವತ್ಪರ್ವತದ ಕಣಿವೆಗಳಲ್ಲಿ ವಾಸಿಸುವ ರಣಕರ್ಕಶ ಕಿರಾತರು ದುರ್ಯೋಧನನ ವಶದಲ್ಲಿ ಬರುವಂತೆ ಮಾಡಿದೆ.

07004007a ತತ್ರ ತತ್ರ ಚ ಸಂಗ್ರಾಮೇ ದುರ್ಯೋಧನಹಿತೈಷಿಣಾ|

07004007c ಬಹವಶ್ಚ ಜಿತಾ ವೀರಾಸ್ತ್ವಯಾ ಕರ್ಣ ಮಹೌಜಸಾ||

ಕರ್ಣ! ದುರ್ಯೋಧನನಿಗೆ ಹಿತವನ್ನು ಮಾಡಲು ಬಯಸಿ ನಿನ್ನ ವೀರ್ಯ ಮತ್ತು ಮಹಾ ಓಜಸ್ಸಿನಿಂದ ನೀನು ಅಲ್ಲಲ್ಲಿ ಅನೇಕರನ್ನು ಗೆದ್ದೆ.

07004008a ಯಥಾ ದುರ್ಯೋಧನಸ್ತಾತ ಸಜ್ಞಾತಿಕುಲಬಾಂಧವಃ|

07004008c ತಥಾ ತ್ವಮಪಿ ಸರ್ವೇಷಾಂ ಕೌರವಾಣಾಂ ಗತಿರ್ಭವ||

ಮಗೂ! ದುರ್ಯೋಧನನು ಜ್ಞಾತಿಕುಲಬಾಂಧವರಿಗೆ ಹೇಗೋ ಹಾಗೆ ನೀನೂ ಕೂಡ ಸರ್ವ ಕೌರವರಿಗೆ ಗತಿಯಾಗಿರು.

07004009a ಶಿವೇನಾಭಿವದಾಮಿ ತ್ವಾಂ ಗಚ್ಚ ಯುಧ್ಯಸ್ವ ಶತ್ರುಭಿಃ|

07004009c ಅನುಶಾಧಿ ಕುರೂನ್ಸಂಖ್ಯೇ ಧತ್ಸ್ವ ದುರ್ಯೋಧನೇ ಜಯಂ||

ಮಂಗಳಕರವಾಗಿ ನಿನಗೆ ಹೇಳುತ್ತಿದ್ದೇನೆ. ಹೋಗು! ಶತ್ರುಗಳೊಂದಿಗೆ ಯುದ್ಧಮಾಡು! ಯುದ್ಧದಲ್ಲಿ ಕುರುಗಳನ್ನು ನಡೆಸಿ ದುರ್ಯೋಧನನಿಗೆ ಜಯವನ್ನು ಕೊಡು.

07004010a ಭವಾನ್ಪೌತ್ರಸಮೋಽಸ್ಮಾಕಂ ಯಥಾ ದುರ್ಯೋಧನಸ್ತಥಾ|

07004010c ತವಾಪಿ ಧರ್ಮತಃ ಸರ್ವೇ ಯಥಾ ತಸ್ಯ ವಯಂ ತಥಾ||

ದುರ್ಯೋಧನನು ಹೇಗೋ ಹಾಗೆ ನೀನೂ ಕೂಡ ನಮಗೆ ಮೊಮ್ಮಗನ ಸಮನಾಗಿರುವೆ. ಆದುದರಿಂದ ಧರ್ಮತಃ ನಮ್ಮದೆಲ್ಲವೂ ನಿನ್ನದೂ ಕೂಡ.

07004011a ಯೌನಾತ್ಸಂಬಂಧಕಾಲ್ಲೋಕೇ ವಿಶಿಷ್ಟಂ ಸಂಗತಂ ಸತಾಂ|

07004011c ಸದ್ಭಿಃ ಸಹ ನರಶ್ರೇಷ್ಠ ಪ್ರವದಂತಿ ಮನೀಷಿಣಃ||

ನರಶ್ರೇಷ್ಠ! ಒಂದೇ ತಾಯಿಯಲ್ಲಿ ಹುಟ್ಟಿದವರಿಗಿಂತ ಸಜ್ಜನರ ಸಂಗವು ವಿಶಿಷ್ಟವಾದುದೆಂದು ತಿಳಿದವರು ಹೇಳುತ್ತಾರೆ.

07004012a ಸ ಸತ್ಯಸಂಗರೋ ಭೂತ್ವಾ ಮಮೇದಮಿತಿ ನಿಶ್ಚಿತಂ|

07004012c ಕುರೂಣಾಂ ಪಾಲಯ ಬಲಂ ಯಥಾ ದುರ್ಯೋಧನಸ್ತಥಾ||

ಆದುದರಿಂದ ಸತ್ಯಸಂಗರನಾಗಿದ್ದುಕೊಂಡು ದುರ್ಯೋಧನನ ಸೇನೆಯನ್ನು ನನ್ನದೇ ಎಂದು ನಿಶ್ಚಯಿಸಿ ಕುರುಗಳನ್ನು ಪಾಲಿಸು!”

07004013a ಇತಿ ಶ್ರುತ್ವಾ ವಚಃ ಸೋಽಥ ಚರಣಾವಾಭಿವಾದ್ಯ ಚ|

07004013c ಯಯೌ ವೈಕರ್ತನಃ ಕರ್ಣಸ್ತೂರ್ಣಮಾಯೋಧನಂ ಪ್ರತಿ||

ಅವನ ಆ ಮಾತನ್ನು ಕೇಳಿ ವೈಕರ್ತನ ಕರ್ಣನು ಅವನ ಚರಣಗಳಿಗೆ ನಮಸ್ಕರಿಸಿ ಬೇಗನೇ ದುರ್ಯೋಧನನ ಕಡೆ ಹೋದನು.

07004014a ಸೋಽಭಿವೀಕ್ಷ್ಯ ನರೌಘಾಣಾಂ ಸ್ಥಾನಮಪ್ರತಿಮಂ ಮಹತ್|

07004014c ವ್ಯೂಢಪ್ರಹರಣೋರಸ್ಕಂ ಸೈನ್ಯಂ ತತ್ಸಮಬೃಂಹಯತ್||

ಅವನು ಆ ಅಪ್ರತಿಮ ಸ್ಥಾನದ ಮಹಾ ಸೇನೆಯನ್ನು ನೋಡಿ ವ್ಯೂಹವನ್ನು ವಿಶಾಲ ಎದೆಯ ಅವನು ಉತ್ತೇಜಿಸಿದನು.

07004015a ಕರ್ಣಂ ದೃಷ್ಟ್ವಾ ಮಹೇಷ್ವಾಸಂ ಯುದ್ಧಾಯ ಸಮವಸ್ಥಿತಂ|

07004015c ಕ್ಷ್ವೇಡಿತಾಸ್ಫೋಟಿತರವೈಃ ಸಿಂಹನಾದರವೈರಪಿ|

07004015e ಧನುಃಶಬ್ದೈಶ್ಚ ವಿವಿಧೈಃ ಕುರವಃ ಸಮಪೂಜಯನ್||

ಯುದ್ಧಕ್ಕೆ ಬಂದೊದಗಿದ ಮಹೇಷ್ವಾಸ ಕರ್ಣನನ್ನು ನೋಡಿ ಕೌರವರು ಅವನನ್ನು ಭುಜಗಳನ್ನು ತಟ್ಟುವುದರ ಮೂಲಕ, ಸಿಂಹನಾದದೊಂದಿಗೆ ವಿವಿಧ ಧನುಸ್ಸುಗಳ ಶಬ್ಧಗಳೊಂದಿಗೆ ಗೌರವಿಸಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಕರ್ಣಾಶ್ವಾಸೇ ಚತುರ್ಥೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಕರ್ಣಾಶ್ವಾಸ ಎನ್ನುವ ನಾಲ್ಕನೇ ಅಧ್ಯಾಯವು.

Image result for indian motifs against white background

Comments are closed.