Drona Parva: Chapter 39

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೯

ದುಃಶಾಸನನ ಪರಾಭವ (೧-೧೯). ಕರ್ಣನ ಪರಾಭವ (೨೦-೩೧).

Image result for abhimanyu07039001 ಸಂಜಯ ಉವಾಚ|

07039001a ಶರವಿಕ್ಷತಗಾತ್ರಸ್ತು ಪ್ರತ್ಯಮಿತ್ರಮವಸ್ಥಿತಂ|

07039001c ಅಭಿಮನ್ಯುಃ ಸ್ಮಯನ್ಧೀಮಾನ್ದುಃಶಾಸನಮಥಾಬ್ರವೀತ್||

ಸಂಜಯನು ಹೇಳಿದನು: “ತನ್ನ ಶರಗಳಿಂದ ಗಾಯಗೊಂಡು ಎದುರಿಸಿ ನಿಂತಿದ್ದ ಶತ್ರು ದುಃಶಾಸನನಿಗೆ ಧೀಮಾನ್ ಅಭಿಮನ್ಯುವು ನಸುನಗುತ್ತಾ ಹೇಳಿದನು:

07039002a ದಿಷ್ಟ್ಯಾ ಪಶ್ಯಾಮಿ ಸಂಗ್ರಾಮೇ ಮಾನಿನಂ ಶತ್ರುಮಾಗತಂ|

07039002c ನಿಷ್ಠುರಂ ತ್ಯಕ್ತಧರ್ಮಾಣಮಾಕ್ರೋಶನಪರಾಯಣಂ||

“ಒಳ್ಳೆಯದಾಯಿತು! ಸಂಗ್ರಾಮದಲ್ಲಿ ಮಾನಿನಿಯೂ, ಶೂರನೂ, ಕ್ರೂರಿಯೂ, ಧರ್ಮವನ್ನು ತ್ಯಜಿಸಿ ಸದಾ ಇತರರನ್ನು ನಿಂದಿಸುವುದರಲ್ಲೇ ನಿರತನಾಗಿರುವ ನಿಷ್ಠುರ ಶತ್ರುವನ್ನು ಕಾಣುತ್ತಿದ್ದೇನೆ.

07039003a ಯತ್ಸಭಾಯಾಂ ತ್ವಯಾ ರಾಜ್ಞೋ ಧೃತರಾಷ್ಟ್ರಸ್ಯ ಶೃಣ್ವತಃ|

07039003c ಕೋಪಿತಃ ಪರುಷೈರ್ವಾಕ್ಯೈರ್ಧರ್ಮರಾಜೋ ಯುಧಿಷ್ಠಿರಃ|

07039003e ಜಯೋನ್ಮತ್ತೇನ ಭೀಮಶ್ಚ ಬಹ್ವಬದ್ಧಂ ಪ್ರಭಾಷತಾ||

ಸಭೆಯಲ್ಲಿ ರಾಜಾ ಧೃತರಾಷ್ಟ್ರನೂ ಕೇಳುವಂತೆ ನೀನು ಧರ್ಮರಾಜ ಯುಧಿಷ್ಠಿರನನ್ನು ಪೌರುಷದ ಮಾತುಗಳಿಂದ ಕುಪಿತಗೊಳಿಸಿದ್ದೆ. ಜಯದಿಂದ ಉನ್ಮತ್ತನಾಗಿ ಭೀಮನಲ್ಲಿ ಕೂಡ ಬಹಳ ಅಬದ್ಧವಾಗಿ ಮಾತನಾಡಿದ್ದೆ.

07039004a ಪರವಿತ್ತಾಪಹಾರಸ್ಯ ಕ್ರೋಧಸ್ಯಾಪ್ರಶಮಸ್ಯ ಚ|

07039004c ಲೋಭಸ್ಯ ಜ್ಞಾನನಾಶಸ್ಯ ದ್ರೋಹಸ್ಯಾತ್ಯಾಹಿತಸ್ಯ ಚ||

07039005a ಪಿತೄಣಾಂ ಮಮ ರಾಜ್ಯಸ್ಯ ಹರಣಸ್ಯೋಗ್ರಧನ್ವಿನಾಂ|

07039005c ತತ್ತ್ವಾಮಿದಮನುಪ್ರಾಪ್ತಂ ತತ್ಕೋಪಾದ್ವೈ ಮಹಾತ್ಮನಾಂ||

ಪರವಿತ್ತಾಪಹರಣ, ಕ್ರೋಧ, ಅಶಾಂತಿ, ಲೋಭ, ಜ್ಞಾನನಾಶ, ದ್ರೋಹ, ಅತಿ ಅಹಿತ ಕರ್ಮಗಳ, ಉಗ್ರಧನ್ವಿಗಳಾದ ನನ್ನ ಪಿತೃಗಳ ರಾಜ್ಯವನ್ನು ಅಪಹರಿಸಿದದರ ಮತ್ತು ಆ ಮಹಾತ್ಮರ ಕೋಪದಿಂದಾಗಿ ನಿನಗೆ ಈ ದುರ್ದಿನವು ಪ್ರಾಪ್ತವಾಗಿದೆ.

07039006a ಸದ್ಯಶ್ಚೋಗ್ರಮಧರ್ಮಸ್ಯ ಫಲಂ ಪ್ರಾಪ್ನುಹಿ ದುರ್ಮತೇ|

07039006c ಶಾಸಿತಾಸ್ಮ್ಯದ್ಯ ತೇ ಬಾಣೈಃ ಸರ್ವಸೈನ್ಯಸ್ಯ ಪಶ್ಯತಃ||

ದುರ್ಮತೇ! ಸದ್ಯವೇ ನೀನು ಆ ಉಗ್ರಧರ್ಮದ ಫಲವನ್ನು ಅನುಭವಿಸುತ್ತೀಯೆ. ಸರ್ವ ಸೇನೆಯು ನೋಡುತ್ತಿರುವಂತೆಯೇ ಇಂದು ನಿನ್ನನ್ನು ಬಾಣಗಳಿಂದ ಶಿಕ್ಷಿಸುತ್ತೇನೆ.

07039007a ಅದ್ಯಾಹಮನೃಣಸ್ತಸ್ಯ ಕೋಪಸ್ಯ ಭವಿತಾ ರಣೇ|

07039007c ಅಮರ್ಷಿತಾಯಾಃ ಕೃಷ್ಣಾಯಾಃ ಕಾಂಕ್ಷಿತಸ್ಯ ಚ ಮೇ ಪಿತುಃ||

07039008a ಅದ್ಯ ಕೌರವ್ಯ ಭೀಮಸ್ಯ ಭವಿತಾಸ್ಮ್ಯನೃಣೋ ಯುಧಿ|

07039008c ನ ಹಿ ಮೇ ಮೋಕ್ಷ್ಯಸೇ ಜೀವನ್ಯದಿ ನೋತ್ಸೃಜಸೇ ರಣಂ||

ಇಂದು ನಾನು ರಣದಲ್ಲಿ ಆ ಕೋಪದ ಋಣವನ್ನು ತೀರಿಸುತ್ತೇನೆ. ಕೌರವ್ಯ! ಇಂದು ಕ್ರೋಧಳಾಗಿರುವ ಕೃಷ್ಣೆಯ ಮತ್ತು ನನ್ನ ದೊಡ್ಡಪ್ಪ ಭೀಮನ ಆಸೆಗಳನ್ನು ಪೂರೈಸಿ ಯುದ್ಧದಲ್ಲಿ ಋಣಮುಕ್ತನಾಗುತ್ತೇನೆ. ರಣವನ್ನು ಬಿಟ್ಟು ಓಡಿಹೋಗದೇ ಇದ್ದರೆ ನೀನು ನನ್ನಿಂದ ಜೀವಂತ ಉಳಿಯಲಾರೆ!”

07039009a ಏವಮುಕ್ತ್ವಾ ಮಹಾಬಾಹುರ್ಬಾಣಂ ದುಃಶಾಸನಾಂತಕಂ|

07039009c ಸಂದಧೇ ಪರವೀರಘ್ನಃ ಕಾಲಾಗ್ನ್ಯನಿಲವರ್ಚಸಂ||

ಹೀಗೆ ಹೇಳಿ ಕಾಲ-ಅಗ್ನಿ-ವಾಯುಗಳ ತೇಜಸ್ಸುಳ್ಳ ಆ ಮಹಾಬಾಹು ಪರವೀರಘ್ನನು ದುಃಶಾಸನನನ್ನು ಕೊನೆಗೊಳಿಸಲು ಧನುಸ್ಸನ್ನು ಹೂಡಿದನು.

07039010a ತಸ್ಯೋರಸ್ತೂರ್ಣಮಾಸಾದ್ಯ ಜತ್ರುದೇಶೇ ವಿಭಿದ್ಯ ತಂ|

07039010c ಅಥೈನಂ ಪಂಚವಿಂಶತ್ಯಾ ಪುನಶ್ಚೈವ ಸಮರ್ಪಯತ್||

ಅದು ಕೂಡಲೇ ಅವನ ಬಳಿಸಾರಿ ಕುತ್ತಿಗೆಯ ಪ್ರದೇಶವನ್ನು ಭೇದಿಸಿತು. ಆಗ ಇನ್ನೊಮ್ಮೆ ಇಪ್ಪತ್ತೈದು ಬಾಣಗಳಿಂದ ಅವನನ್ನು ಹೊಡೆದನು.

07039011a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್|

07039011c ದುಃಶಾಸನೋ ಮಹಾರಾಜ ಕಶ್ಮಲಂ ಚಾವಿಶನ್ಮಹತ್||

ಮಹಾರಾಜ! ಗಾಢವಾಗಿ ಗಾಯಗೊಂಡು ದುಃಖಿತನಾದ ದುಃಶಾಸನನು ರಥದ ಆಸನಕ್ಕೆ ಒರಗಿ ಕುಳಿತುಕೊಂಡನು ಮತ್ತು ಮಹಾ ಮೂರ್ಛಿತನಾದನು.

07039012a ಸಾರಥಿಸ್ತ್ವರಮಾಣಸ್ತು ದುಃಶಾಸನಮಚೇತಸಂ|

07039012c ರಣಮಧ್ಯಾದಪೋವಾಹ ಸೌಭದ್ರಶರಪೀಡಿತಂ||

ಸೌಭದ್ರನ ಶರದಿಂದ ಪೀಡಿತನಾಗಿ ಅಚೇತಸನಾಗಿದ್ದ ದುಃಶಾಸನನನ್ನು ಅವನ ಸಾರಥಿಯು ತ್ವರೆಮಾಡಿ ರಣದಿಂದ ಆಚೆ ತೆಗೆದುಕೊಂಡು ಹೋದನು.

07039013a ಪಾಂಡವಾ ದ್ರೌಪದೇಯಾಶ್ಚ ವಿರಾಟಶ್ಚ ಸಮೀಕ್ಷ್ಯ ತಂ|

07039013c ಪಾಂಚಾಲಾಃ ಕೇಕಯಾಶ್ಚೈವ ಸಿಂಹನಾದಮಥಾನದನ್|

ಪಾಂಡವರು, ದ್ರೌಪದೇಯರು, ವಿರಾಟ, ಪಾಂಚಾಲರು ಮತ್ತು ಕೇಕಯರು ಅದನ್ನು ನೋಡಿ ಸಿಂಹನಾದಗೈದರು.

07039014a ವಾದಿತ್ರಾಣಿ ಚ ಸರ್ವಾಣಿ ನಾನಾಲಿಂಗಾನಿ ಸರ್ವಶಃ|

07039014c ಪ್ರಾವಾದಯಂತ ಸಂಹೃಷ್ಟಾಃ ಪಾಂಡೂನಾಂ ತತ್ರ ಸೈನಿಕಾಃ||

ಅಲ್ಲಿ ಪಾಂಡವರ ಸೈನಿಕರು ಸಂಹೃಷ್ಟರಾಗಿ ಎಲ್ಲರೀತಿಯ ವಾದ್ಯಗಳನ್ನು ಎಲ್ಲೆಡೆ ಬಾರಿಸಿದರು.

07039015a ಪಶ್ಯಂತಃ ಸ್ಮಯಮಾನಾಶ್ಚ ಸೌಭದ್ರಸ್ಯ ವಿಚೇಷ್ಟಿತಂ|

07039015c ಅತ್ಯಂತವೈರಿಣಂ ದೃಪ್ತಂ ದೃಷ್ಟ್ವಾ ಶತ್ರುಂ ಪರಾಜಿತಂ||

07039016a ಧರ್ಮಮಾರುತಶಕ್ರಾಣಾಮಾಶ್ವಿನೋಃ ಪ್ರತಿಮಾಸ್ತಥಾ|

07039016c ಧಾರಯಂತೋ ಧ್ವಜಾಗ್ರೇಷು ದ್ರೌಪದೇಯಾ ಮಹಾರಥಾಃ||

07039017a ಸಾತ್ಯಕಿಶ್ಚೇಕಿತಾನಶ್ಚ ಧೃಷ್ಟದ್ಯುಮ್ನಶಿಖಂಡಿನೌ|

07039017c ಕೇಕಯಾ ಧೃಷ್ಟಕೇತುಶ್ಚ ಮತ್ಸ್ಯಪಾಂಚಾಲಸೃಂಜಯಾಃ||

07039018a ಪಾಂಡವಾಶ್ಚ ಮುದಾ ಯುಕ್ತಾ ಯುಧಿಷ್ಠಿರಪುರೋಗಮಾಃ|

07039018c ಅಭ್ಯವರ್ತಂತ ಸಹಿತಾ ದ್ರೋಣಾನೀಕಂ ಬಿಭಿತ್ಸವಃ||

ಆಟವಾಡುತ್ತಿದ್ದ ಸೌಭದ್ರನನ್ನು ಮತ್ತು ಅತ್ಯಂತ ವೈರಿ ದೃಪ್ತ ಶತ್ರುವು ಪರಾಜಿತನಾದುದನ್ನು ನೋಡಿ ನಸುನಕ್ಕು ಯುಧಿಷ್ಠಿರನನ್ನು ಮುಂದಿರಿಸಿಕೊಂಡು ಧ್ವಜಾಗ್ರಗಳಲ್ಲಿ ಧರ್ಮ, ವಾಯು, ಶಕ್ರ, ಮತ್ತು ಅಶ್ವಿನೀ ದೇವತೆಗಳ ಪ್ರತಿಮೆಗಳನ್ನು ಹೊಂದಿದ್ದ ರಥಗಳೂ ಮಹಾರಥ ದ್ರೌಪದೇಯರೂ, ಸಾತ್ಯಕಿ, ಚೇಕಿತಾನರು, ಧೃಷ್ಟದ್ಯುಮ್ನ-ಶಿಖಂಡಿಯರೂ, ಕೇಕಯರೂ, ಧೃಷ್ಟಕೇತು, ಮತ್ಸ್ಯ-ಪಾಂಚಾಲ-ಸೃಂಜಯರು, ಪಾಂಡವರೂ ಸಂತೋಷದಿಂದ ದ್ರೋಣನ ಸೇನೆಯನ್ನು ಭೇದಿಸಲು ಬಯಸಿ ಮುನ್ನುಗ್ಗಿದರು.

07039019a ತತೋಽಭವನ್ಮಹದ್ಯುದ್ಧಂ ತ್ವದೀಯಾನಾಂ ಪರೈಃ ಸಹ|

07039019c ಜಯಮಾಕಾಂಕ್ಷಮಾಣಾನಾಂ ಶೂರಾಣಾಮನಿವರ್ತಿನಾಂ||

ಆಗ ಜಯವನ್ನು ಬಯಸುತ್ತಿದ್ದವರ ಹಿಂದಿರುಗದೇ ಇದ್ದ ಶತ್ರುಗಳೊಂದಿಗೆ ನಿನ್ನವರ ಮಹಾಯುದ್ಧವು ನಡೆಯಿತು.

07039020a ದುರ್ಯೋಧನೋ ಮಹಾರಾಜ ರಾಧೇಯಮಿದಮಬ್ರವೀತ್|

07039020c ಪಶ್ಯ ದುಃಶಾಸನಂ ವೀರಮಭಿಮನ್ಯುವಶಂ ಗತಂ||

07039021a ಪ್ರತಪಂತಮಿವಾದಿತ್ಯಂ ನಿಘ್ನಂತಂ ಶಾತ್ರವಾನ್ರಣೇ|

07039021c ಸೌಭದ್ರಮುದ್ಯತಾಸ್ತ್ರಾತುಮಭಿಧಾವಂತಿ ಪಾಂಡವಾಃ||

ಆಗ ಮಹಾರಾಜ ದುರ್ಯೋಧನನು ರಾಧೇಯನಿಗೆ ಹೇಳಿದನು: “ನೋಡು! ದುಃಶಾಸನನು ಆದಿತ್ಯನಂತೆ ಸುಡುತ್ತಾ ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಿರುವ ವೀರ ಸೌಭದ್ರ ಅಭಿಮನ್ಯುವಿನ ವಶನಾದುದನ್ನು ನೋಡು! ಹಾಗೆಯೇ ಆಯುಧಗಳನ್ನು ಹಿಡಿದು ಪಾಂಡವರು ಮುನ್ನುಗ್ಗಿ ಬರುತ್ತಿದ್ದಾರೆ.”

07039022a ತತಃ ಕರ್ಣಃ ಶರೈಸ್ತೀಕ್ಷ್ಣೈರಭಿಮನ್ಯುಂ ದುರಾಸದಂ|

07039022c ಅಭ್ಯವರ್ಷತ ಸಂಕ್ರುದ್ಧಃ ಪುತ್ರಸ್ಯ ಹಿತಕೃತ್ತವ||

ಆಗ ನಿನ್ನ ಮಗನಿಗೆ ಹಿತವನ್ನು ಮಾಡಲೋಸುಗ ಕರ್ಣನು ಸಂಕ್ರುದ್ಧನಾಗಿ ದುರಾಸದ ಅಭಿಮನ್ಯುವನ್ನು ತೀಕ್ಷ್ಣ ಶರಗಳಿಂದ ಮುಸುಕಿದನು.

07039023a ತಸ್ಯ ಚಾನುಚರಾಂಸ್ತೀಕ್ಷ್ಣೈರ್ವಿವ್ಯಾಧ ಪರಮೇಷುಭಿಃ|

07039023c ಅವಜ್ಞಾಪೂರ್ವಕಂ ವೀರಃ ಸೌಭದ್ರಸ್ಯ ರಣಾಜಿರೇ||

ಆ ವೀರನು ರಣರಂಗದಲ್ಲಿ ಸೌಭದ್ರನ ಅನುಚರರನ್ನು ತೀಕ್ಷ್ಣ ಮತ್ತು ಶ್ರೇಷ್ಠ ಅಸ್ತ್ರಗಳಿಂದ ತಿರಸ್ಕಾರ ಭಾವದಿಂದ ಹೊಡೆದನು.

07039024a ಅಭಿಮನ್ಯುಸ್ತು ರಾಧೇಯಂ ತ್ರಿಸಪ್ತತ್ಯಾ ಶಿಲೀಮುಖೈಃ|

07039024c ಅವಿಧ್ಯತ್ತ್ವರಿತೋ ರಾಜನ್ದ್ರೋಣಂ ಪ್ರೇಪ್ಸುರ್ಮಹಾಮನಾಃ||

ರಾಜನ್! ಮಹಾಮನಸ್ವಿ ಅಭಿಮನ್ಯುವಾದರೋ ರಾಧೇಯನನ್ನು ತ್ವರೆಮಾಡಿ ಎಪ್ಪತ್ಮೂರು ಶಿಲೀಮುಖಗಳಿಂದ ಹೊಡೆದು ದ್ರೋಣನನ್ನು ತಲುಪಿದನು.

07039025a ತಂ ತದಾ ನಾಶಕತ್ಕಶ್ಚಿದ್ದ್ರೋಣಾದ್ವಾರಯಿತುಂ ರಣೇ|

07039025c ಆರುಜಂತಂ ರಥಶ್ರೇಷ್ಠಾನ್ವಜ್ರಹಸ್ತಮಿವಾಸುರಾನ್||

ವಜ್ರಹಸ್ತನು ಅಸುರರನ್ನು ಹೇಗೋ ಹಾಗೆ ಆಕ್ರಮಣಿಸಿ ಬರುತ್ತಿದ್ದ ಅವನನ್ನು ದ್ರೋಣನಿಂದ ತಡೆಹಿಡಿದು ನಿಲ್ಲಿಸಲು ರಣದಲ್ಲಿ ಯಾವ ರಥಶ್ರೇಷ್ಠನಿಗೂ ಶಕ್ಯವಾಗಲಿಲ್ಲ.

07039026a ತತಃ ಕರ್ಣೋ ಜಯಪ್ರೇಪ್ಸುರ್ಮಾನೀ ಸರ್ವಧನುರ್ಭೃತಾಂ|

07039026c ಸೌಭದ್ರಂ ಶತಶೋಽವಿಧ್ಯದುತ್ತಮಾಸ್ತ್ರಾಣಿ ದರ್ಶಯನ್||

ಆಗ ಜಯವನ್ನು ಬಯಸಿದ ಸರ್ವಧನುಭೃತರಲ್ಲಿ ಮಾನನೀಯನಾದ ಕರ್ಣನು ಉತ್ತಮ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಸೌಭದ್ರನನ್ನು ನೂರಾರು ಬಾಣಗಳಿಂದ ಹೊಡೆದನು.

07039027a ಸೋಽಸ್ತ್ರೈರಸ್ತ್ರವಿದಾಂ ಶ್ರೇಷ್ಠೋ ರಾಮಶಿಷ್ಯಃ ಪ್ರತಾಪವಾನ್|

07039027c ಸಮರೇ ಶತ್ರುದುರ್ಧರ್ಷಮಭಿಮನ್ಯುಮಪೀಡಯತ್||

ಆ ಅಸ್ತ್ರವಿದರಲ್ಲಿ ಶ್ರೇಷ್ಠ, ರಾಮಶಿಷ್ಯ, ಪ್ರತಾಪವಾನನು ಸಮರದಲ್ಲಿ ಶತ್ರುದುರ್ಧರ್ಷ ಅಭಿಮನ್ಯುವನ್ನು ಪೀಡಿಸಿದನು.

07039028a ಸ ತಥಾ ಪೀಡ್ಯಮಾನಸ್ತು ರಾಧೇಯೇನಾಸ್ತ್ರವೃಷ್ಟಿಭಿಃ|

07039028c ಸಮರೇಽಮರಸಂಕಾಶಃ ಸೌಭದ್ರೋ ನ ವ್ಯಷೀದತ||

ಈ ರೀತಿ ಸಮರದಲ್ಲಿ ರಾಧೇಯನ ಅಸ್ತ್ರವೃಷ್ಠಿಗಳಿಂದ ಪೀಡಿತನಾದ ಅಮರಸಂಕಾಶ ಸೌಭದ್ರನು ಸಹಿಸಿಕೊಳ್ಳಲಿಲ್ಲ.

07039029a ತತಃ ಶಿಲಾಶಿತೈಸ್ತೀಕ್ಷ್ಣೈರ್ಭಲ್ಲೈಃ ಸನ್ನತಪರ್ವಭಿಃ|

07039029c ಚಿತ್ತ್ವಾ ಧನೂಂಷಿ ಶೂರಾಣಾಮಾರ್ಜುನಿಃ ಕರ್ಣಮಾರ್ದಯತ್|

07039029e ಸ ಧ್ವಜಂ ಕಾರ್ಮುಕಂ ಚಾಸ್ಯ ಚಿತ್ತ್ವಾ ಭೂಮೌ ನ್ಯಪಾತಯತ್||

ಆಗ ಆರ್ಜುನಿಯು ಶಿಲಾಶಿತ ತೀಕ್ಷ್ಣ ಭಲ್ಲಗಳು-ಸನ್ನತಪರ್ವಗಳಿಂದ ಧನುಸ್ಸನ್ನು ಕತ್ತರಿಸಿ ಶೂರ ಕರ್ಣನನ್ನು ಹೊಡೆದನು. ಅವನ ಧ್ವಜ-ಕಾರ್ಮುಕವು ತುಂಡಾಗಿ ನೆಲದ ಮೇಲೆ ಬಿದ್ದವು.

07039030a ತತಃ ಕೃಚ್ಚ್ರಗತಂ ಕರ್ಣಂ ದೃಷ್ಟ್ವಾ ಕರ್ಣಾದನಂತರಃ|

07039030c ಸೌಭದ್ರಮಭ್ಯಯಾತ್ತೂರ್ಣಂ ದೃಢಮುದ್ಯಮ್ಯ ಕಾರ್ಮುಕಂ||

ಆಗ ಕರ್ಣನು ಕಷ್ಟದಲ್ಲಿ ಸಿಲುಕಿದುದನ್ನು ನೋಡಿದ ಕರ್ಣನ ತಮ್ಮನು ದೃಢ ಕಾರ್ಮುಕವನ್ನು ಎತ್ತಿ ಹಿಡಿದು ತಕ್ಷಣವೇ ಸೌಭದ್ರನ ಮೇಲೆ ಎರಗಿದನು.

07039031a ತತ ಉಚ್ಚುಕ್ರುಶುಃ ಪಾರ್ಥಾಸ್ತೇಷಾಂ ಚಾನುಚರಾ ಜನಾಃ|

07039031c ವಾದಿತ್ರಾಣಿ ಚ ಸಂಜಘ್ನುಃ ಸೌಭದ್ರಂ ಚಾಪಿ ತುಷ್ಟುವುಃ||

ಆಗ ಪಾಂಡವರು ಮತ್ತು ಅವರ ಅನುಚರ ಜನರು ವಾದ್ಯಗಳನ್ನು ನುಡಿಸಿದರು ಮತ್ತು ಸೌಭದ್ರನನ್ನು ಹೊಗಳಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಕರ್ಣದುಃಶಾಸನಪರಾಭವೇ ಏಕೋನಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಕರ್ಣದುಃಶಾಸನಪರಾಭವ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.

Image result for trees against white background

Comments are closed.