Drona Parva: Chapter 38

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೮

ಅಭಿಮನ್ಯುವಿನ ಪರಾಕ್ರಮವನ್ನು ಕಂಡು ದ್ರೋಣನು ಅವನನ್ನು ಪ್ರಶಂಸಿಸಿದುದು (೧-೧೩). ಅದನ್ನು ಕೇಳಿ ಕ್ರುದ್ಧನಾದ ದುರ್ಯೋಧನನು ಅಭಿಮನ್ಯುವನ್ನು ಸಂಹರಿಸಲು ಕುರುವೀರರಿಗೆ ಹೇಳಿದುದು (೧೪-೧೯). ಅಭಿಮನ್ಯು-ದುಃಶಾಸನರ ಯುದ್ಧ (೨೦-೩೦).

07038001 ಧೃತರಾಷ್ಟ್ರ ಉವಾಚ|

07038001a ದ್ವೈಧೀಭವತಿ ಮೇ ಚಿತ್ತಂ ಹ್ರಿಯಾ ತುಷ್ಟ್ಯಾ ಚ ಸಂಜಯ|

07038001c ಮಮ ಪುತ್ರಸ್ಯ ಯತ್ ಸೈನ್ಯಂ ಸೌಭದ್ರಃ ಸಮವಾರಯತ್||

ಧೃತರಾಷ್ಟ್ರನು ಹೇಳಿದನು: “ಸಂಜಯ! ಸೌಭದ್ರನು ನನ್ನ ಪುತ್ರನ ಸೇನೆಯನ್ನು ತಡೆದನೆಂದು ನನ್ನ ಮನಸ್ಸಿನಲ್ಲಿ ನಾಚಿಕೆ ಮತ್ತು ತೃಪ್ತಿ ಈ ಎರಡೂ ಭಾವಗಳು ಉಂಟಾಗುತ್ತಿವೆ.

07038002a ವಿಸ್ತರೇಣೈವ ಮೇ ಶಂಸ ಸರ್ವಂ ಗಾವಲ್ಗಣೇ ಪುನಃ|

07038002c ವಿಕ್ರೀಡಿತಂ ಕುಮಾರಸ್ಯ ಸ್ಕಂದಸ್ಯೇವಾಸುರೈಃ ಸಹ||

ಗಾವಲ್ಗಣೇ! ಪುನಃ ವಿಸ್ತಾರವಾಗಿ ಸ್ಕಂದನು ಅಸುರರೊಂದಿಗೆ ಹೇಗೋ ಹಾಗೆ ಆಟವಾಡಿದ ಕುಮಾರನ ಕುರಿತು ಎಲ್ಲವನ್ನೂ ಹೇಳು.”

07038003 ಸಂಜಯ ಉವಾಚ|

07038003a ಹಂತ ತೇ ಸಂಪ್ರವಕ್ಷ್ಯಾಮಿ ವಿಮರ್ದಮತಿದಾರುಣಂ|

07038003c ಏಕಸ್ಯ ಚ ಬಹೂನಾಂ ಚ ಯಥಾಸೀತ್ತುಮುಲೋ ರಣಃ||

ಸಂಜಯನು ಹೇಳಿದನು: “ರಣದಲ್ಲಿ ಅನೇಕರು ಒಬ್ಬನನ್ನು ಮರ್ದಿಸಿದ ಅತಿದಾರುಣ ತುಮುಲ ಯುದ್ಧದ ಕುರಿತು ವರದಿಮಾಡುತ್ತೇನೆ. ತಡೆ.

07038004a ಅಭಿಮನ್ಯುಃ ಕೃತೋತ್ಸಾಹಃ ಕೃತೋತ್ಸಾಹಾನರಿಂದಮಾನ್|

07038004c ರಥಸ್ಥೋ ರಥಿನಃ ಸರ್ವಾಂಸ್ತಾವಕಾನಪ್ಯಹರ್ಷಯತ್||

ಯುದ್ಧೋತ್ಸಾಹಿ ಅಭಿಮನ್ಯುವು ರಥದಲ್ಲಿ ಕುಳಿದು ರಥಸ್ಥರಾಗಿದ್ದ ನಿನ್ನಕಡೆಯ ಯುದ್ಧೋತ್ಸಾಹೀ ಅರಿಂದಮರೆಲ್ಲರನ್ನೂ ದುಃಖಕ್ಕೀಡುಮಾಡಿದನು.

07038005a ದ್ರೋಣಂ ಕರ್ಣಂ ಕೃಪಂ ಶಲ್ಯಂ ದ್ರೌಣಿಂ ಭೋಜಂ ಬೃಹದ್ಬಲಂ|

07038005c ದುರ್ಯೋಧನಂ ಸೌಮದತ್ತಿಂ ಶಕುನಿಂ ಚ ಮಹಾಬಲಂ||

07038006a ನಾನಾನೃಪಾನ್ನೃಪಸುತಾನ್ಸೈನ್ಯಾನಿ ವಿವಿಧಾನಿ ಚ|

07038006c ಅಲಾತಚಕ್ರವತ್ಸರ್ವಾಂಶ್ಚರನ್ಬಾಣೈಃ ಸಮಭ್ಯಯಾತ್||

ದ್ರೋಣ, ಕರ್ಣ, ಕೃಪ, ಶಲ್ಯ, ದ್ರೌಣಿ, ಭೋಜ, ಬೃಹದ್ಬಲ, ದುರ್ಯೋಧನ, ಸೌಮದತ್ತಿ, ಮಹಾಬಲಿ ಶಕುನಿ, ನಾನಾ ನೃಪರು, ನೃಪರ ಮಕ್ಕಳು, ಮತ್ತು ವಿವಿಧ ಸೈನ್ಯಗಳನ್ನು ಬೆಂಕಿಯ ಕೊಳ್ಳಿಯಂತೆ ಎಲ್ಲ ಕಡೆ ಸಂಚರಿಸುತ್ತಾ ಬಾಣಗಳಿಂದ ಮುಚ್ಚಿದನು.

07038007a ನಿಘ್ನನ್ನಮಿತ್ರಾನ್ಸೌಭದ್ರಃ ಪರಮಾಸ್ತ್ರಃ ಪ್ರತಾಪವಾನ್|

07038007c ಅದರ್ಶಯತ ತೇಜಸ್ವೀ ದಿಕ್ಷು ಸರ್ವಾಸು ಭಾರತ||

ಭಾರತ! ಅಮಿತ್ರರನ್ನು ಸಂಹರಿಸುತ್ತಾ ತೇಜಸ್ವೀ ಪರಮಾಸ್ತ್ರ ಪ್ರತಾಪವಾನ್ ಸೌಭದ್ರನು ಎಲ್ಲ ದಿಕ್ಕುಗಳಲ್ಲಿಯೂ ಕಾಣುತ್ತಿದ್ದನು.

07038008a ತದ್ದೃಷ್ಟ್ವಾ ಚರಿತಂ ತಸ್ಯ ಸೌಭದ್ರಸ್ಯಾಮಿತೌಜಸಃ|

07038008c ಸಮಕಂಪಂತ ಸೈನ್ಯಾನಿ ತ್ವದೀಯಾನಿ ಪುನಃ ಪುನಃ||

ಅಮಿತೌಜಸ ಸೌಭದ್ರನ ಆ ಚರಿತವನ್ನು ನೋಡಿ ನಿನ್ನ ಸೈನ್ಯಗಳು ಪುನಃ ಪುನಃ ನಡುಗಿದವು.

07038009a ಅಥಾಬ್ರವೀನ್ಮಹಾಪ್ರಾಜ್ಞೋ ಭಾರದ್ವಾಜಃ ಪ್ರತಾಪವಾನ್|

07038009c ಹರ್ಷೇಣೋತ್ಫುಲ್ಲನಯನಃ ಕೃಪಮಾಭಾಷ್ಯ ಸತ್ವರಂ||

07038010a ಘಟ್ಟಯನ್ನಿವ ಮರ್ಮಾಣಿ ತವ ಪುತ್ರಸ್ಯ ಮಾರಿಷ|

07038010c ಅಭಿಮನ್ಯುಂ ರಣೇ ದೃಷ್ಟ್ವಾ ತದಾ ರಣವಿಶಾರದಂ||

ಮಾರಿಷ! ಆಗ ಮಹಾಪ್ರಾಜ್ಞ ಪ್ರತಾಪವಾನ್ ಭಾರದ್ವಾಜನು ರಣದಲ್ಲಿ ರಣವಿಶಾರದ ಅಭಿಮನ್ಯುವನ್ನು ನೋಡಿ ಹರ್ಷದಿಂದ ವಿಕಸಿತ ಕಣ್ಣುಗಳಿಂದ ಕೂಡಿದವನಾಗಿ ನಿನ್ನ ಮಗನ ಮರ್ಮಗಳನ್ನು ಇರಿಯುವಂತೆ ತ್ವರೆಮಾಡಿ ಕೃಪನಿಗೆ ಹೇಳಿದನು:

07038011a ಏಷ ಗಚ್ಚತಿ ಸೌಭದ್ರಃ ಪಾರ್ಥಾನಾಮಗ್ರತೋ ಯುವಾ|

07038011c ನಂದಯನ್ಸುಹೃದಃ ಸರ್ವಾನ್ರಾಜಾನಂ ಚ ಯುಧಿಷ್ಠಿರಂ||

07038012a ನಕುಲಂ ಸಹದೇವಂ ಚ ಭೀಮಸೇನಂ ಚ ಪಾಂಡವಂ|

07038012c ಬಂಧೂನ್ಸಂಬಂಧಿನಶ್ಚಾನ್ಯಾನ್ಮಧ್ಯಸ್ಥಾನ್ಸುಹೃದಸ್ತಥಾ||

“ಇಗೋ ಇಲ್ಲಿ ಹೋಗುತ್ತಿದ್ದಾನೆ - ಎಲ್ಲ ರಾಜರನ್ನೂ ಸುಹೃದಯರನ್ನೂ, ಯುಧಿಷ್ಠಿರ-ನಕುಲ-ಸಹದೇವ-ಭೀಮಸೇನ ಮತ್ತು ಪಾಂಡವನನ್ನೂ, ಅನ್ಯ ಬಂಧುಗಳನ್ನೂ, ಸಂಬಂಧಿಗಳನ್ನೂ, ಮಧ್ಯಸ್ಥರನ್ನೂ, ಸುಹೃದಯರನ್ನೂ ಆನಂದಿಸುತ್ತಾ - ಯುವಕ ಸೌಭದ್ರನು ಹೋಗುತ್ತಿದ್ದಾನೆ.

07038013a ನಾಸ್ಯ ಯುದ್ಧೇ ಸಮಂ ಮನ್ಯೇ ಕಂ ಚಿದನ್ಯಂ ಧನುರ್ಧರಂ|

07038013c ಇಚ್ಚನ್ ಹನ್ಯಾದಿಮಾಂ ಸೇನಾಂ ಕಿಮರ್ಥಮಪಿ ನೇಚ್ಚತಿ||

ಯುದ್ಧದಲ್ಲಿ ಇವನ ಸಮನಾದ ಧನುರ್ಧರನು ಬೇರೆ ಯಾರೂ ಇಲ್ಲವೆಂದು ನನಗನ್ನಿಸುತ್ತಿದೆ. ಈ ಸೇನೆಗಳನ್ನು ನಾಶಗೊಳಿಸಲು ಇಚ್ಛಿಸಿದರೂ ಯಾವುದೋ ಕಾರಣಕ್ಕೆ ಇವನು ಹಾಗೆ ಮಾಡಲು ಬಯಸುತ್ತಿಲ್ಲ.”

07038014a ದ್ರೋಣಸ್ಯ ಪ್ರೀತಿಸಂಯುಕ್ತಂ ಶ್ರುತ್ವಾ ವಾಕ್ಯಂ ತವಾತ್ಮಜಃ|

07038014c ಆರ್ಜುನಿಂ ಪ್ರತಿ ಸಂಕ್ರುದ್ಧೋ ದ್ರೋಣಂ ದೃಷ್ಟ್ವಾ ಸ್ಮಯನ್ನಿವ||

07038015a ಅಥ ದುರ್ಯೋಧನಃ ಕರ್ಣಮಬ್ರವೀದ್ಬಾಹ್ಲಿಕಂ ಕೃಪಂ|

07038015c ದುಃಶಾಸನಂ ಮದ್ರರಾಜಂ ತಾಂಸ್ತಾಂಶ್ಚಾನ್ಯಾನ್ಮಹಾರಥಾನ್||

ದ್ರೋಣನ ಈ ಪ್ರೀತಿಸಂಯುಕ್ತ ಮಾತನ್ನು ಕೇಳಿ ನಿನ್ನ ಮಗ ದುರ್ಯೋಧನನು ಆರ್ಜುನಿಯ ಕುರಿತು ಕ್ರುದ್ಧನಾಗಿ, ದ್ರೋಣನನ್ನು ನೋಡಿ ನಕ್ಕು, ಕರ್ಣ-ಬಾಹ್ಲಿಕ-ಕೃಪ-ದುಃಶಾಸನ-ಮದ್ರರಾಜ ಮತ್ತು ಇತರ ಮಹಾರಥರಿಗೆ ಹೇಳಿದನು:

07038016a ಸರ್ವಮೂರ್ಧಾವಸಿಕ್ತಾನಾಮಾಚಾರ್ಯೋ ಬ್ರಹ್ಮವಿತ್ತಮಃ|

07038016c ಅರ್ಜುನಸ್ಯ ಸುತಂ ಮೂಢಂ ನಾಭಿಹಂತುಮಿಹೇಚ್ಚತಿ||

“ಮೂರ್ಧಾಭಿಷಿಕ್ತರಾದ ಎಲ್ಲರಿಗೂ ಆಚಾರ್ಯರಾದ ಈ ಬ್ರಹ್ಮವಿತ್ತಮರು ಅರ್ಜುನನ ಈ ಮೂಢ ಮಗನನ್ನು ಕೊಲ್ಲಲು ಇಚ್ಛಿಸುತ್ತಿಲ್ಲ.

07038017a ನ ಹ್ಯಸ್ಯ ಸಮರೇ ಮುಚ್ಯೇದಂತಕೋಽಪ್ಯಾತತಾಯಿನಃ|

07038017c ಕಿಮಂಗ ಪುನರೇವಾನ್ಯೋ ಮರ್ತ್ಯಃ ಸತ್ಯಂ ಬ್ರವೀಮಿ ವಃ||

ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಶಸ್ತ್ರಪಾಣಿಗಳಾದ ಇವರೊಂದಿಗೆ ಸಮರದಲ್ಲಿ ಅಂತಕನೂ ಬಿಡಿಸಿಕೊಳ್ಳಲಾರ. ಹೀಗಿರುವಾಗ ಅನ್ಯ ಮರ್ತ್ಯನು ಹೇಗೆ ಉಳಿದಾನು?

07038018a ಅರ್ಜುನಸ್ಯ ಸುತಂ ತ್ವೇಷ ಶಿಷ್ಯತ್ವಾದಭಿರಕ್ಷತಿ|

07038018c ಪುತ್ರಾಃ ಶಿಷ್ಯಾಶ್ಚ ದಯಿತಾಸ್ತದಪತ್ಯಂ ಚ ಧರ್ಮಿಣಾಂ||

ಅರ್ಜುನನ ಈ ಮಗನನ್ನು ಶಿಷ್ಯತ್ವ ಭಾವದಿಂದ ರಕ್ಷಿಸುತ್ತಿದ್ದಾರೆ. ಧರ್ಮಿಗಳಿಗೆ ಪ್ರಿಯ ಶಿಷ್ಯರ ಮಕ್ಕಳು ತಮ್ಮದೇ ಮಕ್ಕಳಿದ್ದಂತೆ.

07038019a ಸಂರಕ್ಷ್ಯಮಾಣೋ ದ್ರೋಣೇನ ಮನ್ಯತೇ ವೀರ್ಯಮಾತ್ಮನಃ|

07038019c ಆತ್ಮಸಂಭಾವಿತೋ ಮೂಢಸ್ತಂ ಪ್ರಮಥ್ನೀತ ಮಾಚಿರಂ||

ದ್ರೋಣರಿಂದ ಸಂರಕ್ಷಿತನಾದ ಇವನು ತನ್ನನ್ನೇ ವೀರನೆಂದು ತಿಳಿದುಕೊಂಡಿದ್ದಾನೆ. ಆತ್ಮಸಂಭಾವಿತನಾದ ಈ ಮೂಢನನ್ನು ಕೂಡಲೇ ಸಂಹರಿಸಿರಿ!”

07038020a ಏವಮುಕ್ತಾಸ್ತು ತೇ ರಾಜ್ಞಾ ಸಾತ್ವತೀಪುತ್ರಮಭ್ಯಯುಃ|

07038020c ಸಂರಬ್ಧಾಸ್ತಂ ಜಿಘಾಂಸಂತೋ ಭಾರದ್ವಾಜಸ್ಯ ಪಶ್ಯತಃ||

ರಾಜನು ಹೀಗೆ ಹೇಳಲು ಭಾರದ್ವಾಜನು ನೋಡುತ್ತಿದ್ದಂತೆಯೇ ಸಾತ್ವತೀಪುತ್ರನನ್ನು ಸಂಹರಿಸಲು ಅವರು ಮುಂದಾದರು.

07038021a ದುಃಶಾಸನಸ್ತು ತಚ್ಚ್ರುತ್ವಾ ದುರ್ಯೋಧನವಚಸ್ತದಾ|

07038021c ಅಬ್ರವೀತ್ಕುರುಶಾರ್ದೂಲೋ ದುರ್ಯೋಧನಮಿದಂ ವಚಃ||

ದುರ್ಯೋಧನನ ಮಾತನ್ನು ಕೇಳಿ ಕುರುಶಾರ್ದೂಲ ದುಃಶಾಸನನು ದುರ್ಯೋಧನನಿಗೆ ಹೀಗೆ ಹೇಳಿದನು:

07038022a ಅಹಮೇನಂ ಹನಿಷ್ಯಾಮಿ ಮಹಾರಾಜ ಬ್ರವೀಮಿ ತೇ|

07038022c ಮಿಷತಾಂ ಪಾಂಡುಪುತ್ರಾಣಾಂ ಪಾಂಚಾಲಾನಾಂ ಚ ಪಶ್ಯತಾಂ|

07038022e ಗ್ರಸಿಷ್ಯಾಮ್ಯದ್ಯ ಸೌಭದ್ರಂ ಯಥಾ ರಾಹುರ್ದಿವಾಕರಂ||

“ಮಹಾರಾಜ! ನಿನಗೆ ಹೇಳುತ್ತಿದ್ದೇನೆ! ಪಾಂಡುಪುತ್ರರು ಮತ್ತು ಪಾಂಚಾಲರು ನೋಡುತ್ತಿದ್ದಂತೆಯೇ ನಾನು ಇವನನ್ನು ಕೊಲ್ಲುತ್ತಿದ್ದೇನೆ. ರಾಹುವು ದಿವಾಕರನನ್ನು ಹೇಗೋ ಹಾಗೆ ಇಂದು ನಾನು ಸೌಭದ್ರನನ್ನು ಹಿಡಿಯುತ್ತೇನೆ.”

07038023a ಉತ್ಕ್ರುಶ್ಯ ಚಾಬ್ರವೀದ್ವಾಕ್ಯಂ ಕುರುರಾಜಮಿದಂ ಪುನಃ|

07038023c ಶ್ರುತ್ವಾ ಕೃಷ್ಣೌ ಮಯಾ ಗ್ರಸ್ತಂ ಸೌಭದ್ರಮತಿಮಾನಿನೌ|

07038023e ಗಮಿಷ್ಯತಃ ಪ್ರೇತಲೋಕಂ ಜೀವಲೋಕಾನ್ನ ಸಂಶಯಃ||

ಹೀಗೆ ಕೂಗಿ ಹೇಳಿ ಪುನಃ ಕುರುರಾಜನಿಗೆ ಇದನ್ನು ಹೇಳಿದನು: “ಸೌಭದ್ರನು ನನ್ನಿಂದ ಗ್ರಸ್ತನಾಗಿದ್ದುದನ್ನು ಕೇಳಿ ಅತಿಮಾನಿನಿಗಳಾದ ಕೃಷ್ಣರಿಬ್ಬರೂ ಜೀವಲೋಕದಿಂದ ಪ್ರೇತಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

07038024a ತೌ ಚ ಶ್ರುತ್ವಾ ಮೃತೌ ವ್ಯಕ್ತಂ ಪಾಂಡೋಃ ಕ್ಷೇತ್ರೋದ್ಭವಾಃ ಸುತಾಃ|

07038024c ಏಕಾಹ್ನಾ ಸಸುಹೃದ್ವರ್ಗಾಃ ಕ್ಲೈಬ್ಯಾದ್ಧಾಸ್ಯಂತಿ ಜೀವಿತಂ||

ಅವರಿಬ್ಬರೂ ಮೃತರಾದರೆಂದು ಕೇಳಿ ಪಾಂಡುವಿನ ಕ್ಷೇತ್ರದಲ್ಲಿ ಹುಟ್ಟಿದ ಮಕ್ಕಳು ದೌರ್ಬಲ್ಯದ ಕಾರಣದಿಂದ ಸುಹೃದ್ವರ್ಗಗಳೊಂದಿಗೆ ಒಂದೇ ದಿನದಲ್ಲಿ ಜೀವಬಿಡುತ್ತಾರೆ.

07038025a ತಸ್ಮಾದಸ್ಮಿನ್ ಹತೇ ಶತ್ರೌ ಹತಾಃ ಸರ್ವೇಽಹಿತಾಸ್ತವ|

07038025c ಶಿವೇನ ಧ್ಯಾಹಿ ಮಾ ರಾಜನ್ನೇಷ ಹನ್ಮಿ ರಿಪುಂ ತವ||

ಆದುದರಿಂದ ರಾಜನ್! ಇವರಿಬ್ಬರು ಹತರಾದರೆಂದರೆ ನಿನ್ನ ಎಲ್ಲ ಅಹಿತರೂ ಹತರಾದಂತೆ. ನನಗೆ ಮಂಗಳವನ್ನು ಕೋರು. ನಿನ್ನ ಈ ಶತ್ರುಗಳನ್ನು ನಾನು ಸಂಹರಿಸುತ್ತೇನೆ.”

07038026a ಏವಮುಕ್ತ್ವಾ ನದನ್ರಾಜನ್ಪುತ್ರೋ ದುಃಶಾಸನಸ್ತವ|

07038026c ಸೌಭದ್ರಮಭ್ಯಯಾತ್ಕ್ರುದ್ಧಃ ಶರವರ್ಷೈರವಾಕಿರನ್||

ರಾಜನ್! ಹೀಗೆ ಹೇಳಿ ಗರ್ಜಿಸಿ ನಿನ್ನ ಮಗ ದುಃಶಾಸನನು ಕ್ರುದ್ಧನಾಗಿ ಸೌಭದ್ರನನ್ನು ಶರವರ್ಷಗಳಿಂದ ಮುಚ್ಚಿದನು.

07038027a ತಮಭಿಕ್ರುದ್ಧಮಾಯಾಂತಂ ತವ ಪುತ್ರಮರಿಂದಮಃ|

07038027c ಅಭಿಮನ್ಯುಃ ಶರೈಸ್ತೀಕ್ಷ್ಣೈಃ ಷಡ್ವಿಂಶತ್ಯಾ ಸಮರ್ಪಯತ್||

ಕ್ರುದ್ಧನಾಗಿ ಮೇಲೆ ಬೀಳುತ್ತಿದ್ದ ನಿನ್ನ ಪುತ್ರನನ್ನು ಅರಿಂದಮ ಅಭಿಮನ್ಯುವು ಇಪ್ಪತ್ತಾರು ತೀಕ್ಷ್ಣ ಬಾಣಗಳಿಂದ ಹೊಡೆದನು.

07038028a ದುಃಶಾಸನಸ್ತು ಸಂಕ್ರುದ್ಧಃ ಪ್ರಭಿನ್ನ ಇವ ಕುಂಜರಃ|

07038028c ಅಯೋಧಯತ ಸೌಭದ್ರಮಭಿಮನ್ಯುಶ್ಚ ತಂ ರಣೇ||

ದುಃಶಾಸನನಾದರೋ ಕುಂಭಸ್ಥಳವು ಒಡೆದ ಆನೆಯಂತೆ ಸಂಕ್ರುದ್ಧನಾಗಿ ರಣದಲ್ಲಿ ಸೌಭದ್ರ ಅಭಿಮನ್ಯುವಿನೊಡನೆ ಯುದ್ಧಮಾಡಿದನು.

07038029a ತೌ ಮಂಡಲಾನಿ ಚಿತ್ರಾಣಿ ರಥಾಭ್ಯಾಂ ಸವ್ಯದಕ್ಷಿಣಂ|

07038029c ಚರಮಾಣಾವಯುಧ್ಯೇತಾಂ ರಥಶಿಕ್ಷಾವಿಶಾರದೌ||

ರಥಶಿಕ್ಷಾವಿಶಾರದರಾದ ಅವರಿಬ್ಬರೂ ವಿಚಿತ್ರ ರಥಗಳಲ್ಲಿ ಎಡ ಮತ್ತು ಬಲ ಮಂಡಲಗಳಲ್ಲಿ ತಿರುಗುತ್ತಾ ಯುದ್ಧಮಾಡುತ್ತಿದ್ದರು.

07038030a ಅಥ ಪಣವಮೃದಂಗದುಂದುಭೀನಾಂ

         ಕೃಕರಮಹಾನಕಭೇರಿಝರ್ಝರಾಣಾಂ|

07038030c ನಿನದಮತಿಭೃಶಂ ನರಾಃ ಪ್ರಚಕ್ರುರ್

         ಲವಣಜಲೋದ್ಭವಸಿಂಹನಾದಮಿಶ್ರಂ||

ಆಗ ಪಣವ, ಮೃದಂಗ, ದುಂಧುಭಿ, ಕೃಕರ, ಮಹಾನಕ ಭೇರಿಗಳನ್ನೂ ಝರ್ಝರಗಳನ್ನು ವಾದಕರು ಬಾರಿಸಿದರು. ಆ ನಿನಾದವು ಶಂಖಧ್ವನಿಗಳಿಂದಲೂ ವೀರರ ಸಿಂಹನಾದದಿಂದಲೂ ಕೂಡಿ ಮತ್ತಷ್ಟು ಭಯಂಕರವಾಗಿ ಕೇಳುತ್ತಿತ್ತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ದುಃಶಾಸನಯುದ್ಧೇ ಅಷ್ಟತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ದುಃಶಾಸನಯುದ್ಧ ಎನ್ನುವ ಮೂವತ್ತೆಂಟನೇ ಅಧ್ಯಾಯವು.

Image result for trees against white background

Comments are closed.