Drona Parva: Chapter 37

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೭

ಅಭಿಮನ್ಯುವು ಶಲ್ಯನ ತಮ್ಮನನ್ನು ವಧಿಸಿ ತನ್ನನ್ನು ಆಕ್ರಮಣಿಸಿದ ಮದ್ರಸೇನೆಯನ್ನು ಹಿಮ್ಮೆಟ್ಟಿಸಿದುದು (೧-೨೩). 

07037001 ಧೃತರಾಷ್ಟ್ರ ಉವಾಚ|

07037001a ತಥಾ ಪ್ರಮಥಮಾನಂ ತಂ ಮಹೇಷ್ವಾಸಮಜಿಹ್ಮಗೈಃ|

07037001c ಆರ್ಜುನಿಂ ಮಾಮಕಾಃ ಸರ್ವೇ ಕೇ ತ್ವೇನಂ ಸಮವಾಕಿರನ್||

ಧೃತರಾಷ್ಟ್ರನು ಹೇಳಿದನು: “ಈ ರೀತಿ ಜಿಹ್ಮಗಗಳಿಂದ ಮಹೇಷ್ವಾಸ ಆರ್ಜುನಿಯನ್ನು ನನ್ನವರೆಲ್ಲರಲ್ಲಿ ಯಾರ್ಯಾರು ಅವನನ್ನು ಎದುರಿಸಿ ಯುದ್ಧ ಮಾಡಿದರು?”

07037002 ಸಂಜಯ ಉವಾಚ|

07037002a ಶೃಣು ರಾಜನ್ಕುಮಾರಸ್ಯ ರಣೇ ವಿಕ್ರೀಡಿತಂ ಮಹತ್|

07037002c ಬಿಭಿತ್ಸತೋ ರಥಾನೀಕಂ ಭಾರದ್ವಾಜೇನ ರಕ್ಷಿತಂ||

ಸಂಜಯನು ಹೇಳಿದನು: “ರಾಜನ್! ಭಾರದ್ವಾಜನಿಂದ ರಕ್ಷಿತವಾಗಿದ್ದ ರಥಸೇನೆಯನ್ನು ಭೇದಿಸಲು ಬಯಸಿದ ಕುಮಾರನ ಮಹತ್ತರ ರಣಕ್ರೀಡೆಯನ್ನು ಕೇಳು.

07037003a ಮದ್ರೇಶಂ ಸಾದಿತಂ ದೃಷ್ಟ್ವಾ ಸೌಭಾದ್ರೇಣಾಶುಗೈ ರಣೇ|

07037003c ಶಲ್ಯಾದವರಜಃ ಕ್ರುದ್ಧಃ ಕಿರನ್ಬಾಣಾನ್ಸಮಭ್ಯಯಾತ್||

ಸೌಭದ್ರನು ರಣದಲ್ಲಿ ಆಶುಗಗಳಿಂದ ಮದ್ರೇಶನನ್ನು ಪ್ರಹರಿಸಿದುದನ್ನು ನೋಡಿ ಶಲ್ಯನ ತಮ್ಮನು ಕ್ರುದ್ಧನಾಗಿ ಬಾಣಗಳ ಮಳೆಗರೆಯುತ್ತಾ ಅವನನ್ನು ಆಕ್ರಮಿಸಿದನು.

07037004a ಸ ವಿದ್ಧ್ವಾ ದಶಭಿರ್ಬಾಣೈಃ ಸಾಶ್ವಯಂತಾರಮಾರ್ಜುನಿಂ|

07037004c ಉದಕ್ರೋಶನ್ಮಹಾಶಬ್ದಂ ತಿಷ್ಠ ತಿಷ್ಠೇತಿ ಚಾಬ್ರವೀತ್||

ಅವನು ಹತ್ತು ಬಾಣಗಳಿಂದ ಆರ್ಜುನಿಯನ್ನು ಕುದುರೆ-ಸಾರಥಿಗಳೊಡನೆ ಹೊಡೆದು “ನಿಲ್ಲು! ನಿಲ್ಲು!” ಎಂದು ಮಹಾಸ್ವರದಲ್ಲಿ ಕೂಗಿ ಹೇಳಿದನು.

07037005a ತಸ್ಯಾರ್ಜುನಿಃ ಶಿರೋಗ್ರೀವಂ ಪಾಣಿಪಾದಂ ಧನುರ್ಹಯಾನ್|

07037005c ಚತ್ರಂ ಧ್ವಜಂ ನಿಯಂತಾರಂ ತ್ರಿವೇಣುಂ ಶಮ್ಯುಪಸ್ಕರಂ||

07037006a ಚಕ್ರೇ ಯುಗೇಷಾಂ ತೂಣೀರಾನನುಕರ್ಷಂ ಚ ಸಾಯಕೈಃ|

07037006c ಪತಾಕಾಂ ಚಕ್ರಗೋಪ್ತಾರೌ ಸರ್ವೋಪಕರಣಾನಿ ಚ|

07037006e ವ್ಯಧಮಲ್ಲಾಘವಾತ್ತಚ್ಚ ದದೃಶೇ ನಾಸ್ಯ ಕಶ್ಚನ||

ಆರ್ಜುನಿಯು ಅವನ ತಲೆ, ಕತ್ತು, ಕೈಕಾಲುಗಳು, ಧನುಸ್ಸು, ಕುದುರೆಗಳು, ಚತ್ರ, ಧ್ವಜ, ರಥದ ಮೂರು ಬೊಂಬುಗಳು, ರಥದ ಮೇಲಿದ್ದ ಆಸನ, ರಥದ ಚಕ್ರಗಳು, ನೊಗ, ತೂಣೀರಗಳು, ತೋಳುಮರಗಳು, ಪತಾಕೆ, ಚಕ್ರರಕ್ಷಕರು ಮತ್ತು ಸರ್ವೋಪಕರಣಗಳನ್ನು ಸಾಯಕಗಳಿಂದ ಹಸ್ತಲಾಘವವನ್ನು ಬಳಸಿ ಕತ್ತರಿಸಿ ಚೂರುಚೂರು ಮಾಡಿದನು. ಆಗ ವಧಿಸಲ್ಪಟ್ಟವನನ್ನು ಯಾರಿಂದಲೂ ನೋಡಲು ಸಾಧ್ಯವಾಗುತ್ತಿರಲಿಲ್ಲ.

07037007a ಸ ಪಪಾತ ಕ್ಷಿತೌ ಕ್ಷೀಣಃ ಪ್ರವಿದ್ಧಾಭರಣಾಂಬರಃ|

07037007c ವಾಯುನೇವ ಮಹಾಚೈತ್ಯಃ ಸಂಭಗ್ನೋಽಮಿತತೇಜಸಾ|

07037007e ಅನುಗಾಶ್ಚಾಸ್ಯ ವಿತ್ರಸ್ತಾಃ ಪ್ರಾದ್ರವನ್ಸರ್ವತೋದಿಶಂ||

ಚಂಡಮಾರುತದ ಆಘಾತಕ್ಕೆ ಸಿಲುಕಿದ ಗಿರಿಯಂತೆ ಅಮಿತ ತೇಜಸ್ವಿಯಿಂದ ಭಗ್ನನಾದ ಅವನು ಕ್ಷೀಣನಾಗಿ, ವಸ್ತ್ರಾಭರಣಗಳೆಲ್ಲ ಚೆಲ್ಲಾ-ಪಿಲ್ಲಿಯಾಗಿ, ಭೂಮಿಯ ಮೇಲೆ ಬಿದ್ದನು. ಅವನ ಅನುಯಾಯಿಗಳು ಭಯಗೊಂಡು ದಿಕ್ಕಾಪಾಲಾಗಿ ಓಡಿ ಹೋದರು.

07037008a ಆರ್ಜುನೇಃ ಕರ್ಮ ತದ್ದೃಷ್ಟ್ವ ಪ್ರಣೇದುಶ್ಚ ಸಮಂತತಃ|

07037008c ನಾದೇನ ಸರ್ವಭೂತಾನಿ ಸಾಧು ಸಾಧ್ವಿತಿ ಭಾರತ||

ಭಾರತ! ಆರ್ಜುನಿಯ ಆ ಅದ್ಭುತ ಪರಾಕ್ರಮವನ್ನು ನೋಡಿ ಎಲ್ಲ ಪ್ರಾಣಿಗಳೂ ಎಲ್ಲ ದಿಕ್ಕುಗಳಿಂದ “ಸಾಧು! ಸಾಧು!” ಎಂದು ಜಯಕಾರಗೈದವು.

07037009a ಶಲ್ಯಭ್ರಾತರ್ಯಥಾರುಗ್ಣೇ ಬಹುಶಸ್ತಸ್ಯ ಸೈನಿಕಾಃ|

07037009c ಕುಲಾಧಿವಾಸನಾಮಾನಿ ಶ್ರಾವಯಂತೋಽರ್ಜುನಾತ್ಮಜಂ||

07037010a ಅಭ್ಯವರ್ತಂತ ಸಂಕ್ರುದ್ಧಾ ವಿವಿಧಾಯುಧಪಾಣಯಃ|

07037010c ರಥೈರಶ್ವೈರ್ಗಜೈಶ್ಚಾನ್ಯೇ ಪಾದಾತೈಶ್ಚ ಬಲೋತ್ಕಟಾಃ||

07037011a ಬಾಣಶಬ್ದೇನ ಮಹತಾ ಖುರನೇಮಿಸ್ವನೇನ ಚ|

07037011c ಹುಂಕಾರೈಃ ಕ್ಷ್ವೇಡಿತೋತ್ಕ್ರುಷ್ಟೈಃ ಸಿಂಹನಾದೈಃ ಸಗರ್ಜಿತೈಃ||

07037012a ಜ್ಯಾತಲತ್ರಸ್ವನೈರನ್ಯೇ ಗರ್ಜಂತೋಽರ್ಜುನನಂದನಂ|

07037012c ಬ್ರುವಂತಶ್ಚ ನ ನೋ ಜೀವನ್ಮೋಕ್ಷ್ಯಸೇ ಜೀವತಾಮಿತಿ||

ಶಲ್ಯನ ತಮ್ಮನು ಹತನಾಗಲು ಅವನ ಅನೇಕ ಸೈನಿಕರು ಸಂಕ್ರುದ್ಧರಾಗಿ ವಿವಿಧ ಆಯುಧಗಳನ್ನು ಹಿಡಿದು ತಮ್ಮ ಕುಲ-ನಿವಾಸ-ನಾಮಧೇಯಗಳನ್ನು ಕೇಳಿಸುತ್ತಾ ಅರ್ಜುನಾತ್ಮಜನ ಮೇಲೆ ಎರಗಿದರು. ಬಲೋತ್ಕಟರಾದ ಅವರು ರಥ-ಅಶ್ವ-ಗಜಗಳನ್ನೇರಿ, ಇನ್ನು ಕೆಲವರು ಕಾಲ್ನಡುಗೆಯಲ್ಲಿ ಬಾಣಗಳ ಮಹಾ ಶಬ್ಧ ಮತ್ತು ರಥದ ಚಕ್ರಗಳ ಶಬ್ಧಗಳೊಂದಿಗೆ, ಹೂಂಕಾರಗಳಿಂದ, ಕೋಪದಿಂದ ಗುರುಗುಟ್ಟುತ್ತಾ, ಸಿಂಹನಾದದ ಗರ್ಜನೆಗಳೊಂದಿಗೆ, ಧನುಸ್ಸನ್ನು ಠೇಂಕರಿಸುತ್ತಾ ಚಪ್ಪಾಳೆ ತಟ್ಟುತ್ತಾ, ಅರ್ಜುನನಂದನನನ್ನು ಗರ್ಜಿಸುತ್ತಾ “ನಮ್ಮಿಂದ ನೀನು ಜೀವಸಹಿತ ಹೋಗಲಾರೆ!” ಎಂದು ಕೂಗುತ್ತಾ ಆಕ್ರಮಿಸಿದರು.

07037013a ತಾಂಸ್ತಥಾ ಬ್ರುವತೋ ದೃಷ್ಟ್ವಾ ಸೌಭದ್ರಃ ಪ್ರಹಸನ್ನಿವ|

07037013c ಯೋ ಯಃ ಸ್ಮ ಪ್ರಾಹರತ್ಪೂರ್ವಂ ತಂ ತಂ ವಿವ್ಯಾಧ ಪತ್ರಿಭಿಃ||

ಅವರು ಹಾಗೆ ಹೇಳುತ್ತಿರುವುದನ್ನು ನೋಡಿ ಸೌಭದ್ರನು ನಕ್ಕು ಯಾರ್ಯಾರು ಮೊದಲು ತನ್ನನ್ನು ಹೊಡೆದರೋ ಅವರನ್ನು ಪತ್ರಿಗಳಿಂದ ಹೊಡೆದನು.

07037014a ಸಂದರ್ಶಯಿಷ್ಯನ್ನಸ್ತ್ರಾಣಿ ಚಿತ್ರಾಣಿ ಚ ಲಘೂನಿ ಚ|

07037014c ಆರ್ಜುನಿಃ ಸಮರೇ ಶೂರೋ ಮೃದುಪೂರ್ವಮಯುಧ್ಯತ||

ತನ್ನ ವಿಚಿತ್ರ ಅಸ್ತ್ರಗಳನ್ನೂ ಹಸ್ತಲಾಘವನ್ನೂ ತೋರಿಸಲು ಬಯಸಿ ಸಮರ ಶೂರ ಆರ್ಜುನಿಯು ಮೊದಲು ಮೃದುವಾಗಿಯೇ ಯುದ್ಧಮಾಡಿದನು.

07037015a ವಾಸುದೇವಾದುಪಾತ್ತಂ ಯದ್ಯದಸ್ತ್ರಂ ಚ ಧನಂಜಯಾತ್|

07037015c ಅದರ್ಶಯತ ತತ್ಕಾರ್ಷ್ಣಿಃ ಕೃಷ್ಣಾಭ್ಯಾಮವಿಶೇಷಯನ್||

ವಾಸುದೇವ ಮತ್ತು ಧನಂಜಯನಿಂದ ಪಡೆದಿದ್ದ ಅಸ್ತ್ರಗಳನ್ನು ಕಾರ್ಷ್ಣಿಯು ಆ ಇಬ್ಬರು ಕೃಷ್ಣರನ್ನೂ ಮೀರಿಸಿ ಪ್ರದರ್ಶಿಸಿದನು.

07037016a ದೂರಮಸ್ಯನ್ಗುರುಂ ಭಾರಂ ಸಾಧಯಂಶ್ಚ ಪುನಃ ಪುನಃ|

07037016c ಸಂದಧದ್ವಿಸೃಜಂಶ್ಚೇಷೂನ್ನಿರ್ವಿಶೇಷಮದೃಶ್ಯತ||

ಸಂಧಾನ, ದೂರ, ಗುರುತರ, ಭಾರ, ಸಾಧನಗಳಲ್ಲಿ ಪುನಃ ಪುನಃ ಅವರಿಗೂ ತನಗೂ ವ್ಯತ್ಯಾಸವೇ ಇಲ್ಲದಂತೆ ತೋರಿಸಿದನು.

07037017a ಚಾಪಮಂಡಲಮೇವಾಸ್ಯ ವಿಸ್ಫುರದ್ದಿಕ್ಷ್ವದೃಶ್ಯತ|

07037017c ತಮೋ ಘ್ನತಃ ಸುದೀಪ್ತಸ್ಯ ಸವಿತುರ್ಮಂಡಲಂ ಯಥಾ||

ಶರತ್ಕಾಲದಲ್ಲಿ ಉರಿಯುತ್ತಿದ್ದ ಸೂರ್ಯಮಂಡಲೋಪಾದಿಯಲ್ಲಿ ಅವನ ಧನುಸ್ಸು ಮಂಡಲಾಕಾರವಾಗಿ ಮಾತ್ರ ಎಲ್ಲ ದಿಕ್ಕುಗಳಲ್ಲಿಯೂ ಪ್ರಕಾಶಿಸುತ್ತಿತ್ತು.

07037018a ಜ್ಯಾಶಬ್ದಃ ಶುಶ್ರುವೇ ತಸ್ಯ ತಲಶಬ್ದಶ್ಚ ದಾರುಣಃ|

07037018c ಮಹಾಶನಿಮುಚಃ ಕಾಲೇ ಪಯೋದಸ್ಯೇವ ನಿಸ್ವನಃ||

ವರ್ಷಾಕಾಲದಲ್ಲಿ ಮಿಂಚನ್ನು ಹೊರಬಿಡುವ ಮೇಘದ ಗರ್ಜನೆಯಂತೆ ಅವನ ಧನುಸ್ಸಿನ ಶಿಂಜನಿಯ ಶಬ್ಧವೂ ಅಂಗೈಯ ದಾರುಣ ಶಬ್ಧವೂ ಕೇಳಿಬರುತ್ತಿತ್ತು.

07037019a ಹ್ರೀಮಾನಮರ್ಷೀ ಸೌಭದ್ರೋ ಮಾನಕೃತ್ಪ್ರಿಯದರ್ಶನಃ|

07037019c ಸಮ್ಮಿಮಾನಯಿಷುರ್ವೀರಾನಿಷ್ವಾಸಾಂಶ್ಚಾಪ್ಯಯುಧ್ಯತ||

ಲಜ್ಜಾಶೀಲನಾದ, ಅಸಹಿಷ್ಣುವಾದ, ಇತರರನ್ನು ಗೌರವಿಸುವ ಸ್ವಭಾವವುಳ್ಳ ಸುಂದರನಾದ ಸೌಭದ್ರನು ಶತ್ರುಪಕ್ಷದ ವೀರರನ್ನು ಸಮ್ಮಾನಿಸಬೇಕೆಂಬ ಇಚ್ಛೆಯಿಂದ ಅವರೊಡನೆ ಬಾಣಗಳಿಂದ ಮತ್ತು ಅಸ್ತ್ರಗಳೊಡನೆ ಹೋರಾಡಿದನು.

07037020a ಮೃದುರ್ಭೂತ್ವಾ ಮಹಾರಾಜ ದಾರುಣಃ ಸಮಪದ್ಯತ|

07037020c ವರ್ಷಾಭ್ಯತೀತೋ ಭಗವಾನ್ ಶರದೀವ ದಿವಾಕರಃ||

ಮಹಾರಾಜ! ಭಗವಾನ್ ದಿವಾಕರನು ವರ್ಷಾಕಾಲವು ಮುಗಿಯಲು ಹೇಗೆ ಪ್ರಚಂಡರಶ್ಮಿಯಾಗುತ್ತಾನೋ ಹಾಗೆ ಅವನು ಮೊದಮೊದಲು ಮೃದುವಾಗಿದ್ದು ಕಡೆಕಡೆಗೆ ಉಗ್ರನಾದನು.

07037021a ಶರಾನ್ವಿಚಿತ್ರಾನ್ಮಹತೋ ರುಕ್ಮಪುಂಖಾಂ ಶಿಲಾಶಿತಾನ್|

07037021c ಮುಮೋಚ ಶತಶಃ ಕ್ರುದ್ಧೋ ಗಭಸ್ತೀನಿವ ಭಾಸ್ಕರಃ||

ಸೂರ್ಯನು ತನ್ನ ಕಿರಣಗಳನ್ನು ಚೆಲ್ಲುವಂತೆ ಅವನು ಕ್ರುದ್ಧನಾಗಿ ನೂರಾರು ವಿಚಿತ್ರ ದೊಡ್ಡ ದೊಡ್ಡ ರುಕ್ಮಪುಂಖಗಳ ಶಿಲಾಶಿತ ಶರಗಳನ್ನು ಪ್ರಯೋಗಿಸಿದನು.

07037022a ಕ್ಷುರಪ್ರೈರ್ವತ್ಸದಂತೈಶ್ಚ ವಿಪಾಠೈಶ್ಚ ಮಹಾಯಶಾಃ|

07037022c ನಾರಾಚೈರರ್ಧನಾರಾಚೈರ್ಭಲ್ಲೈರಜ್ಞಲಿಕೈರಪಿ||

07037023a ಅವಾಕಿರದ್ರಥಾನೀಕಂ ಭಾರದ್ವಾಜಸ್ಯ ಪಶ್ಯತಃ|

07037023c ತತಸ್ತತ್ಸೈನ್ಯಮಭವದ್ವಿಮುಖಂ ಶರಪೀಡಿತಂ||

ಭಾರದ್ವಾಜನು ನೋಡುತ್ತಿದ್ದಂತೆಯೇ ಆ ಮಹಾಯಶನು ಅವನ ರಥಸೇನೆಯನ್ನು ಕ್ಷುರಪ್ರಗಳಿಂದ, ವತ್ಸದಂತಗಳಿಂದ, ವಿಪಾಠಗಳಿಂದ, ನಾರಾಚಗಳಿಂದ, ಅರ್ಧನಾರಾಚಗಳಿಂದ, ಭಲ್ಲಗಳಿಂದ, ಅಂಜಲೀಕಗಳಿಂದ ಮುಚ್ಚಿಬಿಟ್ಟನು. ಶರಪೀಡಿದ ಆ ಸೇನೆಯು ಆಗ ಯುದ್ಧದಿಂದ ಹಿಮ್ಮೆಟ್ಟಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪರಾಕ್ರಮೇ ಸಪ್ತತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ಮೂವತ್ತೇಳನೇ ಅಧ್ಯಾಯವು.

Image result for trees against white background

Comments are closed.