Drona Parva: Chapter 36

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೬

ಏಕಾಂಗಿಯಾಗಿ ಹಲವಾರು ಕೌರವ ಮಹಾರಥರೊಡನೆ ಯುದ್ಧಮಾಡುತ್ತಿದ್ದ ಅಭಿಮನ್ಯುವು ಅಶ್ಮಕರಾಜನನ್ನು ಸಂಹರಿಸಿ ಶಲ್ಯನನ್ನು ಮೂರ್ಛೆಗೊಳಿಸಿದುದು; ಕೌರವ ಸೇನೆಯ ಪಲಾಯನ (೧-೩೬).

Image result for mahabharata07036001 ಸಂಜಯ ಉವಾಚ|

07036001a ತಾಂ ಪ್ರಭಗ್ನಾಂ ಚಮೂಂ ದೃಷ್ಟ್ವಾ ಸೌಭದ್ರೇಣಾಮಿತೌಜಸಾ|

07036001c ದುರ್ಯೋಧನೋ ಭೃಶಂ ಕ್ರುದ್ಧಃ ಸ್ವಯಂ ಸೌಭದ್ರಮಭ್ಯಯಾತ್||

ಸಂಜಯನು ಹೇಳಿದನು: “ಅಮಿತೌಜಸ ಸೌಭದ್ರನಿಂದ ತನ್ನ ಸೇನೆಯು ಭಗ್ನವಾದುದನ್ನು ನೋಡಿ ಕ್ರುದ್ಧನಾದ ದುರ್ಯೋಧನನು ಸ್ವಯಂ ತಾನೇ ಸೌಭದ್ರನ ಮೇಲೆ ಆಕ್ರಮಣಿಸಿದನು.

07036002a ತತೋ ರಾಜಾನಮಾವೃತ್ತಂ ಸೌಭದ್ರಂ ಪ್ರತಿ ಸಂಯುಗೇ|

07036002c ದೃಷ್ಟ್ವಾ ದ್ರೋಣೋಽಬ್ರವೀದ್ಯೋಧಾನ್ಪರ್ಯಾಪ್ನುತ ನರಾಧಿಪಂ||

ಆಗ ಸೌಭದ್ರನ್ನು ಎದುರಿಸಲು ಮುಂದಾಗುತ್ತಿರುವ ರಾಜನನ್ನು ನೋಡಿ ದ್ರೋಣನು ನರಾಧಿಪನನ್ನು ಸರ್ವಥಾ ರಕ್ಷಿಸಬೇಕೆಂದು ಯೋಧರಿಗೆ ಆದೇಶವನ್ನಿತ್ತನು.

07036003a ಪುರಾಭಿಮನ್ಯುರ್ಲಕ್ಷ್ಯಂ ನಃ ಪಶ್ಯತಾಂ ಹಂತಿ ವೀರ್ಯವಾನ್|

07036003c ತಮಾದ್ರವತ ಮಾ ಭೈಷ್ಟ ಕ್ಷಿಪ್ರಂ ರಕ್ಷತ ಕೌರವಂ||

“ವೀರ್ಯವಾನ್ ಅಭಿಮನ್ಯುವು ನಾವು ನೋಡುತ್ತಿರುವಂತೆಯೇ ಮೊದಲು ಗುರಿಯಿಟ್ಟು ಅವನನ್ನು ಸಂಹರಿಸಿಬಿಡುತ್ತಾನೆ. ಆದುದರಿಂದ ಅವನ ಕಡೆ ಓಡಿ ಹೋಗಿ. ಹೆದರಬೇಡಿ. ಬೇಗನೇ ಕೌರವನನ್ನು ರಕ್ಷಿಸಿರಿ!”

07036004a ತತಃ ಕೃತಜ್ಞಾ ಬಲಿನಃ ಸುಹೃದೋ ಜಿತಕಾಶಿನಃ|

07036004c ತ್ರಾಸ್ಯಮಾನಾ ಭಯಾದ್ವೀರಂ ಪರಿವವ್ರುಸ್ತವಾತ್ಮಜಂ||

ಆಗ ಕೃತಜ್ಞ ಬಲಶಾಲಿ ಸುಹೃದ ಜಯಶೀಲ ಯೋಧರು ಭಯದಿಂದ ಬಿಡುಗಡೆಗೊಳಿಸಲು ನಿನ್ನ ಮಗ ವೀರನನ್ನು ಸುತ್ತುವರೆದರು.

07036005a ದ್ರೋಣೋ ದ್ರೌಣಿಃ ಕೃಪಃ ಕರ್ಣಃ ಕೃತವರ್ಮಾ ಚ ಸೌಬಲಃ|

07036005c ಬೃಹದ್ಬಲೋ ಮದ್ರರಾಜೋ ಭೂರಿರ್ಭೂರಿಶ್ರವಾಃ ಶಲಃ||

07036006a ಪೌರವೋ ವೃಷಸೇನಶ್ಚ ವಿಸೃಜಂತಃ ಶಿತಾಂ ಶರಾನ್|

07036006c ಸೌಭದ್ರಂ ಶರವರ್ಷೇಣ ಮಹತಾ ಸಮವಾಕಿರನ್||

ದ್ರೋಣ, ದ್ರೌಣಿ, ಕೃಪ, ಕರ್ಣ, ಕೃತವರ್ಮ, ಸೌಬಲ, ಬೃಹದ್ಬಲ, ಮದ್ರರಾಜ, ಭೂರಿಶ್ರವ, ಶಲ, ಪೌರವ, ವೃಷಸೇನರು ನಿಶಿತ ಶರಗಳನ್ನು ಪ್ರಯೋಗಿಸುತ್ತಾ ಸೌಭದ್ರನನ್ನು ಮಹಾ ಶರವರ್ಷದಿಂದ ಮುಚ್ಚಿದರು.

07036007a ಸಮ್ಮೋಹಯಿತ್ವಾ ತಮಥ ದುರ್ಯೋಧನಮಮೋಚಯನ್|

07036007c ಆಸ್ಯಾದ್ ಗ್ರಾಸಮಿವಾಕ್ಷಿಪ್ತಂ ಮಮೃಷೇ ನಾರ್ಜುನಾತ್ಮಜಃ||

ಹಾಗೆ ಅವನನ್ನು ಸಮ್ಮೋಹಗೊಳಿಸಿ ದುರ್ಯೋಧನನನ್ನು ವಿಮೋಚನಗೊಳಿಸಿದರು. ಹೀಗೆ ಕೈಗೆ ಸಿಕ್ಕಿದುದನ್ನು ಕೆಳಗೆ ಬೀಳಿಸಿದುದನ್ನು ಅರ್ಜುನನ ಮಗನು ಸಹಿಸಿಕೊಳ್ಳಲಿಲ್ಲ.

07036008a ತಾಂ ಶರೌಘೇಣ ಮಹತಾ ಸಾಶ್ವಸೂತಾನ್ಮಹಾರಥಾನ್|

07036008c ವಿಮುಖೀಕೃತ್ಯ ಸೌಭದ್ರಃ ಸಿಂಹನಾದಮಥಾನದತ್||

ಸೌಭದ್ರನು ಮಹಾ ಶರಜಾಲದಿಂದ ಆ ಮಹಾರಥರನ್ನು, ಅಶ್ವ-ಸೂತರೊಂದಿಗೆ ವಿಮುಖರನ್ನಾಗಿ ಮಾಡಿ ಸಿಂಹನಾದಗೈದನು.

07036009a ತಸ್ಯ ನಾದಂ ತತಃ ಶ್ರುತ್ವಾ ಸಿಂಹಸ್ಯೇವಾಮಿಷೈಷಿಣಃ|

07036009c ನಾಮೃಷ್ಯಂತ ಸುಸಂರಬ್ಧಾಃ ಪುನರ್ದ್ರೋಣಮುಖಾ ರಥಾಃ||

ಮಾಂಸವನ್ನು ಬಯಸಿದ ಸಿಂಹದಂತಿದ್ದ ಅವನ ಆ ಗರ್ಜನೆಯನ್ನು ಕೇಳಿ ದ್ರೋಣಮುಖರಾದ ರಥರು ಸಂರಬ್ಧರಾಗಿ ಸಹಿಸಿಕೊಳ್ಳಲಿಲ್ಲ.

07036010a ತ ಏನಂ ಕೋಷ್ಠಕೀಕೃತ್ಯ ರಥವಂಶೇನ ಮಾರಿಷ|

07036010c ವ್ಯಸೃಜನ್ನಿಷುಜಾಲಾನಿ ನಾನಾಲಿಂಗಾನಿ ಸಂಘಶಃ||

ಮಾರಿಷ! ರಥಗಳ ಸಮೂಹದಿಂದ ಅವನನ್ನು ಇಕ್ಕಟ್ಟಾದ ಜಾಗದಲ್ಲಿರುವಂತೆ ಮಾಡಿ ಅವನ ಮೇಲೆ ಒಟ್ಟಾಗಿ ನಾನಾ ಚಿಹ್ನೆಗಳ ಬಾಣಗಳ ಜಾಲಗಳನ್ನು ಪ್ರಯೋಗಿಸಿದರು.

07036011a ತಾನ್ಯಂತರಿಕ್ಷೇ ಚಿಚ್ಚೇದ ಪೌತ್ರಸ್ತವ ಶಿತೈಃ ಶರೈಃ|

07036011c ತಾಂಶ್ಚೈವ ಪ್ರತಿವಿವ್ಯಾಧ ತದದ್ಭುತಮಿವಾಭವತ್||

ಅವುಗಳನ್ನು ಅಂತರಿಕ್ಷದಲ್ಲಿಯೇ ನಿನ್ನ ಮೊಮ್ಮಗನು ನಿಶಿತ ಶರಗಳಿಂದ ತುಂಡರಿಸಿದನು ಮತ್ತು ಅಲ್ಲದೇ ಅವರನ್ನೂ ತಿರುಗಿ ಹೊಡೆದನು. ಅದೊಂದು ಅದ್ಭುತವಾಗಿತ್ತು.

07036012a ತತಸ್ತೇ ಕೋಪಿತಾಸ್ತೇನ ಶರೈರಾಶೀವಿಷೋಪಮೈಃ|

07036012c ಪರಿವವ್ರುರ್ಜಿಘಾಂಸಂತಃ ಸೌಭದ್ರಮಪಲಾಯಿನಂ||

ಆಗ ಕುಪಿತರಾದ ಸರ್ಪವಿಷದಂತಿರುವ ಬಾಣಗಳಿಂದ ಅವನನ್ನು ಕೊಲ್ಲಲು ಬಯಸಿ ಪಲಾಯನ ಮಾಡದೇ ಇದ್ದ ಸೌಭದ್ರನನ್ನು ಸುತ್ತುವರೆದರು.

07036013a ಸಮುದ್ರಮಿವ ಪರ್ಯಸ್ತಂ ತ್ವದೀಯಂ ತದ್ಬಲಾರ್ಣವಂ|

07036013c ಅಭಿಮನ್ಯುರ್ದಧಾರೈಕೋ ವೇಲೇವ ಮಕರಾಲಯಂ||

ಎಲ್ಲಕಡೆಗಳಲ್ಲೂ ವ್ಯಾಪ್ತವಾಗಿರುವ ಸಮುದ್ರವನ್ನು ತೀರಪ್ರದೇಶವು ತಡೆಹಿಡಿದಿರುವಂತೆ ಅಭಿಮನ್ಯು ಒಬ್ಬನೇ ಸಮುದ್ರದಂತಿದ್ದ ನಿನ್ನ ಸೇನೆಯನ್ನು ತಡೆಹಿಡಿದನು.

07036014a ಶೂರಾಣಾಂ ಯುಧ್ಯಮಾನಾನಾಂ ನಿಘ್ನತಾಮಿತರೇತರಂ|

07036014c ಅಭಿಮನ್ಯೋಃ ಪರೇಷಾಂ ಚ ನಾಸೀತ್ಕಶ್ಚಿತ್ಪರಾಙ್ಮುಖಃ||

ಇತರೇತರರನ್ನು ಹೊಡೆಯುತ್ತಾ ಯುದ್ಧಮಾಡುತ್ತಿದ್ದ ಶೂರ ಅಭಿಮನ್ಯು ಮತ್ತು ಇತರರಲ್ಲಿ ಯಾರೂ ಪರಾಙ್ಮುಖರಾಗಲಿಲ್ಲ.

07036015a ತಸ್ಮಿಂಸ್ತು ಘೋರೇ ಸಂಗ್ರಾಮೇ ವರ್ತಮಾನೇ ಭಯಂಕರೇ|

07036015c ದುಃಸಹೋ ನವಭಿರ್ಬಾಣೈರಭಿಮನ್ಯುಮವಿಧ್ಯತ||

07036016a ದುಃಶಾಸನೋ ದ್ವಾದಶಭಿಃ ಕೃಪಃ ಶಾರದ್ವತಸ್ತ್ರಿಭಿಃ|

07036016c ದ್ರೋಣಸ್ತು ಸಪ್ತದಶಭಿಃ ಶರೈರಾಶೀವಿಷೋಪಮೈಃ||

07036017a ವಿವಿಂಶತಿಸ್ತು ವಿಂಶತ್ಯಾ ಕೃತವರ್ಮಾ ಚ ಸಪ್ತಭಿಃ|

07036017c ಬೃಹದ್ಬಲಸ್ತಥಾಷ್ಟಾಭಿರಶ್ವತ್ಥಾಮಾ ಚ ಸಪ್ತಭಿಃ||

07036018a ಭೂರಿಶ್ರವಾಸ್ತ್ರಿಭಿರ್ಬಾಣೈರ್ಮದ್ರೇಶಃ ಷಡ್ಭಿರಾಶುಗೈಃ|

07036018c ದ್ವಾಭ್ಯಾಂ ಶರಾಭ್ಯಾಂ ಶಕುನಿಸ್ತ್ರಿಭಿರ್ದುರ್ಯೋಧನೋ ನೃಪಃ||

ಭಯಂಕರವಾಗಿ ನಡೆಯುತ್ತಿರುವ ಆ ಘೋರ ಸಂಗ್ರಾಮದಲ್ಲಿ ದುಃಸಹನು ಒಂಭತ್ತು ಬಾಣಗಳಿಂದ, ದುಃಶಾಸನನು ಹನ್ನೆರಡು, ಕೃಪ ಶಾರದ್ವತನು ಮೂರು, ದ್ರೋಣನು ಸರ್ಪಸಮಾನ ಏಳು ಶರಗಳಿಂದ, ವಿವಂಶತಿಯು ಇಪ್ಪತ್ತು, ಕೃತವರ್ಮನು ಏಳು, ಭೂರಿಶ್ರವನು ಏಳು ಬಾಣಗಳಿಂದ, ಮದ್ರೇಶನು ಆರು ಆಶುಗಗಳಿಂದ, ಮತ್ತು ಶಕುನಿ-ನೃಪ ದುರ್ಯೋಧನರು ಎರೆಡೆರಡು ಶರಗಳಿಂದ ಅಭಿಮನ್ಯುವನ್ನು ಹೊಡೆದರು.

07036019a ಸ ತು ತಾನ್ಪ್ರತಿವಿವ್ಯಾಧ ತ್ರಿಭಿಸ್ತ್ರಿಭಿರಜಿಹ್ಮಗೈಃ|

07036019c ನೃತ್ಯನ್ನಿವ ಮಹಾರಾಜ ಚಾಪಹಸ್ತಃ ಪ್ರತಾಪವಾನ್||

ಮಹಾರಾಜ! ಚಾಪವನ್ನು ಹಿಡಿದು ನರ್ತಿಸುತ್ತಿರುವನೋ ಎನ್ನುವಂತೆ ಆ ಪ್ರತಾಪವಂತನು ಅವರು ಒಬ್ಬೊಬ್ಬರನ್ನೂ ಮೂರು ಮೂರು ಜಿಹ್ಮಗಗಳಿಂದ ತಿರುಗಿ ಹೊಡೆದನು.

07036020a ತತೋಽಭಿಮನ್ಯುಃ ಸಂಕ್ರುದ್ಧಸ್ತಾಪ್ಯಮಾನಸ್ತವಾತ್ಮಜೈಃ|

07036020c ವಿದರ್ಶಯನ್ವೈ ಸುಮಹಚ್ಚಿಕ್ಷೌರಸಕೃತಂ ಬಲಂ||

ಆಗ ಕಾಡುತ್ತಿದ್ದ ನಿನ್ನ ಮಕ್ಕಳಿಂದ ಕ್ರುದ್ಧನಾಗಿ ತನ್ನ ಸ್ವಾಭಾವಿಕವಾದ ಮಹಾ ಬಲವನ್ನು ಪ್ರದರ್ಶಿಸತೊಡಗಿದನು.

07036021a ಗರುಡಾನಿಲರಂಹೋಭಿರ್ಯಂತುರ್ವಾಕ್ಯಕರೈರ್ಹಯೈಃ|

07036021c ದಾಂತೈರಶ್ಮಕದಾಯಾದಂ ತ್ವರಮಾಣೋಽಭ್ಯಹಾರಯತ್|

07036021e ವಿವ್ಯಾಧ ಚೈನಂ ದಶಭಿರ್ಬಾಣೈಸ್ತಿಷ್ಠೇತಿ ಚಾಬ್ರವೀತ್||

ಆಗ ಗರುಡ ಮತ್ತು ವಾಯುವೇಗಗಳಿಗೆ ಸಮಾನ ವೇಗವುಳ್ಳ ಸುಶಿಕ್ಷಿತ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಅಶ್ಮಕನ ಮಗನು ತ್ವರೆಮಾಡಿ ಆಕ್ರಮಣಿಸಿ ಹತ್ತು ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಕೂಗಿದನು.

07036022a ತಸ್ಯಾಭಿಮನ್ಯುರ್ದಶಭಿರ್ಬಾಣೈಃ ಸೂತಂ ಹಯಾನ್ಧ್ವಜಂ|

07036022c ಬಾಹೂ ಧನುಃ ಶಿರಶ್ಚೋರ್ವ್ಯಾಂ ಸ್ಮಯಮಾನೋಽಭ್ಯಪಾತಯತ್||

ಅಭಿಮನ್ಯುವು ನಸುನಗುತ್ತಾ ಹತ್ತು ಬಾಣಗಳಿಂದ ಅವನ ಸೂತನನ್ನೂ, ಧ್ವಜವನ್ನೂ, ತೋಳುಗಳನ್ನೂ, ಧನುಸ್ಸನ್ನೂ, ತಲೆ-ತೊಡೆಗಳನ್ನೂ ಕತ್ತರಿಸಿ ಬೀಳಿಸಿದನು.

07036023a ತತಸ್ತಸ್ಮಿನ್ ಹತೇ ವೀರೇ ಸೌಭದ್ರೇಣಾಶ್ಮಕೇಶ್ವರೇ|

07036023c ಸಂಚಚಾಲ ಬಲಂ ಸರ್ವಂ ಪಲಾಯನಪರಾಯಣಂ||

ಹಾಗೆ ವೀರ ಆಶ್ಮಕೇಶ್ವರನು ಸೌಭದ್ರನಿಂದ ಹತನಾಗಲು ಸರ್ವ ಸೇನೆಗಳೂ ಪಲಾಯನಪರರಾದರು.

07036024a ತತಃ ಕರ್ಣಃ ಕೃಪೋ ದ್ರೋಣೋ ದ್ರೌಣಿರ್ಗಾಂಧಾರರಾಟ್ಶಲಃ|

07036024c ಶಲ್ಯೋ ಭೂರಿಶ್ರವಾಃ ಕ್ರಾಥಃ ಸೋಮದತ್ತೋ ವಿವಿಂಶತಿಃ||

07036025a ವೃಷಸೇನಃ ಸುಷೇಣಶ್ಚ ಕುಂಡಭೇದೀ ಪ್ರತರ್ದನಃ|

07036025c ವೃಂದಾರಕೋ ಲಲಿತ್ಥಶ್ಚ ಪ್ರಬಾಹುರ್ದೀರ್ಘಲೋಚನಃ|

07036025e ದುರ್ಯೋಧನಶ್ಚ ಸಂಕ್ರುದ್ಧಃ ಶರವರ್ಷೈರವಾಕಿರನ್||

ಆಗ ಕರ್ಣ, ಕೃಪ, ದ್ರೋಣ, ದ್ರೌಣಿ, ಗಾಂಧಾರರಾಜ, ಶಲ, ಶಲ್ಯ, ಭೂರಿಶ್ರವ, ಕ್ರಾಥ, ಸೋಮದತ್ತ, ವಿವಿಂಶತಿ, ವೃಷಸೇನ, ಸುಷೇಣ, ಕುಂಡಭೇದಿ, ಪ್ರತರ್ದನ, ವೃಂದಾರಕ, ಲಲಿತ್ಥ, ಪ್ರಬಾಹು, ದೀರ್ಘಲೋಚನ ಮತ್ತು ದುರ್ಯೋಧನರು ಸಂಕ್ರುದ್ಧರಾಗಿ ಅವನನ್ನು ಶರವರ್ಷಗಳಿಂದ ಮುಚ್ಚಿದರು.

07036026a ಸೋಽತಿಕ್ರುದ್ಧೋ ಮಹೇಷ್ವಾಸೈರಭಿಮನ್ಯುರಜಿಹ್ಮಗೈಃ|

07036026c ಶರಮಾದತ್ತ ಕರ್ಣಾಯ ಪರಕಾಯಾವಭೇದನಂ||

ಆ ಮಹೇಷ್ವಾಸರಿಂದ ಅತಿ ಕ್ರುದ್ಧನಾದ ಅಭಿಮನ್ಯುವು ಕವಚ-ದೇಹಗಳೆರಡನ್ನೂ ಭೇದಿಸಬಲ್ಲ ಜಿಹ್ಮಗ ಶರವನ್ನು ತೆಗೆದುಕೊಂಡು ಕರ್ಣನ ಮೇಲೆ ಪ್ರಯೋಗಿಸಿದನು.

07036027a ತಸ್ಯ ಭಿತ್ತ್ವಾ ತನುತ್ರಾಣಂ ದೇಹಂ ನಿರ್ಭಿದ್ಯ ಚಾಶುಗಃ|

07036027c ಪ್ರಾವಿಶದ್ಧರಣೀಂ ರಾಜನ್ವಲ್ಮೀಕಮಿವ ಪನ್ನಗಃ||

ರಾಜನ್! ಅದು ಅವನ ಕವಚವನ್ನು ಒಡೆದು ದೇಹವನ್ನು ಭೇದಿಸಿ ಹಾವು ಬಿಲದೊಳಗೆ ಹೊಗುವಂತೆ ನೆಲವನ್ನು ಹೊಕ್ಕಿತು.

07036028a ಸ ತೇನಾತಿಪ್ರಹಾರೇಣ ವ್ಯಥಿತೋ ವಿಹ್ವಲನ್ನಿವ|

07036028c ಸಂಚಚಾಲ ರಣೇ ಕರ್ಣಃ ಕ್ಷಿತಿಕಂಪೇ ಯಥಾಚಲಃ||

ಅದರ ಅತಿ ಪ್ರಹಾರದಿಂದ ವ್ಯಥಿತನಾದ ಕರ್ಣನು ವಿಹ್ವಲನಾಗಿ ಭೂಕಂಪವಾದಾಗ ಪರ್ವತಗಳು ಹೇಗೆ ಅಲ್ಲಾಡುವವೋ ಹಾಗೆ ತೂಕಾಡಿದನು.

07036029a ಅಥಾನ್ಯೈರ್ನಿಶಿತೈರ್ಬಾಣೈಃ ಸುಷೇಣಂ ದೀರ್ಘಲೋಚನಂ|

07036029c ಕುಂಡಭೇದಿಂ ಚ ಸಂಕ್ರುದ್ಧಸ್ತ್ರಿಭಿಸ್ತ್ರೀನವಧೀದ್ಬಲೀ||

ಆಗ ಬಲಿ ಅಭಿಮನ್ಯುವು ಸಂಕ್ರುದ್ಧನಾಗಿ ಮೂರು ಮೂರು ನಿಶಿತ ಬಾಣಗಳಿಂದ ಸುಷೇಣ, ದೀರ್ಘಲೋಚನ, ಮತ್ತು ಕುಂಡಭೇದಿಯರನ್ನು ಹೊಡೆದನು.

07036030a ಕರ್ಣಸ್ತಂ ಪಂಚವಿಂಶತ್ಯಾ ನಾರಾಚಾನಾಂ ಸಮರ್ಪಯತ್|

07036030c ಅಶ್ವತ್ಥಾಮಾ ಚ ವಿಂಶತ್ಯಾ ಕೃತವರ್ಮಾ ಚ ಸಪ್ತಭಿಃ||

ಕರ್ಣನು ಇಪ್ಪತ್ತೈದು ನಾರಾಚಗಳನ್ನು, ಅಶ್ವತ್ಥಾಮನು ಇಪ್ಪತ್ತು ಮತ್ತು ಕೃತವರ್ಮನು ಏಳನ್ನು ಅವನ ಮೇಲೆ ಪ್ರಯೋಗಿಸಿದರು.

07036031a ಸ ಶರಾರ್ದಿತಸರ್ವಾಂಗಃ ಕ್ರುದ್ಧಃ ಶಕ್ರಾತ್ಮಜಾತ್ಮಜಃ|

07036031c ವಿಚರನ್ ದೃಶ್ಯತೇ ಸೈನ್ಯೇ ಪಾಶಹಸ್ತ ಇವಾಂತಕಃ||

ಎಲ್ಲ ಅಂಗಗಳಲ್ಲಿಯೂ ಗಾಯಗೊಂಡು ಕ್ರುದ್ಧನಾದ ಶಕ್ರನ ಮಗನ ಮಗನು ಹೀಗೆ ಸೈನ್ಯದಲ್ಲಿ ಸಂಚರಿಸುತ್ತಿರುವಾಗ ಪಾಶವನ್ನು ಹಿಡಿದ ಯಮನಂತೆ ಕಂಡುಬಂದನು.

07036032a ಶಲ್ಯಂ ಚ ಬಾಣವರ್ಷೇಣ ಸಮೀಪಸ್ಥಮವಾಕಿರತ್|

07036032c ಉದಕ್ರೋಶನ್ಮಹಾಬಾಹುಸ್ತವ ಸೈನ್ಯಾನಿ ಭೀಷಯನ್||

ಸಮೀಪದಲ್ಲಿಯೇ ಇದ್ದ ಶಲ್ಯನನ್ನು ಬಾಣದ ಮಳೆಯಿಂದ ಮುಚ್ಚಿ ಆ ಮಹಾಬಾಹುವು ಸೇನೆಗಳನ್ನು ಬೆದರಿಸುವಂತೆ ಜೋರಾಗಿ ಗರ್ಜಿಸಿದನು.

07036033a ತತಃ ಸ ವಿದ್ಧೋಽಸ್ತ್ರವಿದಾ ಮರ್ಮಭಿದ್ಭಿರಜಿಹ್ಮಗೈಃ|

07036033c ಶಲ್ಯೋ ರಾಜನ್ರಥೋಪಸ್ಥೇ ನಿಷಸಾದ ಮುಮೋಹ ಚ||

ರಾಜನ್! ಆ ಅಸ್ತ್ರವಿದನ ಜಿಹ್ಮಗಗಳಿಂದ ಪೆಟ್ಟುತಿಂದ ಶಲ್ಯನು ರಥದಲ್ಲಿ ಸರಿದು ಕುಳಿತುಕೊಂಡನು ಮತ್ತು ಮೂರ್ಛಿತನಾದನು.

07036034a ತಂ ಹಿ ವಿದ್ಧಂ ತಥಾ ದೃಷ್ಟ್ವಾ ಸೌಭದ್ರೇಣ ಯಶಸ್ವಿನಾ|

07036034c ಸಂಪ್ರಾದ್ರವಚ್ಚಮೂಃ ಸರ್ವಾ ಭಾರದ್ವಾಜಸ್ಯ ಪಶ್ಯತಃ||

ಯಶಸ್ವಿ ಸೌಭದ್ರನಿಂದ ಅವನೂ ಕೂಡ ಮೂರ್ಛಿತನಾದುದನ್ನು ಕಂಡು ಸೇನೆಗಳೆಲ್ಲವೂ ಭಾರದ್ವಾಜನು ನೋಡುತ್ತಿದ್ದಂತೆಯೇ ಪಲಾಯನ ಮಾಡತೊಡಗಿದವು.

07036035a ಪ್ರೇಕ್ಷಂತಸ್ತಂ ಮಹಾಬಾಹುಂ ರುಕ್ಮಪುಂಖೈಃ ಸಮಾವೃತಂ|

07036035c ತ್ವದೀಯಾಶ್ಚ ಪಲಾಯಂತೇ ಮೃಗಾಃ ಸಿಂಹಾರ್ದಿತಾ ಇವ||

ರುಕ್ಮಪುಂಖಗಳಿಂದ ಸಮಾವೃತನಾಗಿದ್ದ ಆ ಮಹಾಬಾಹುವನ್ನು ನೋಡಿ ನಿನ್ನವರು ಸಿಂಹಕ್ಕೆ ಬೆದರಿದ ಜಿಂಕೆಗಳಂತೆ ಪಲಾಯನ ಮಾಡಿದರು.

07036036a ಸ ತು ರಣಯಶಸಾಭಿಪೂಜ್ಯಮಾನಃ

        ಪಿತೃಸುರಚಾರಣಸಿದ್ಧಯಕ್ಷಸಂಘೈಃ|

07036036c ಅವನಿತಲಗತೈಶ್ಚ ಭೂತಸಂಘೈರ್

        ಅತಿವಿಬಭೌ ಹುತಭುಗ್ಯಥಾಜ್ಯಸಿಕ್ತಃ||

ರಣಾಂಗಣದಲ್ಲಿ ಗಳಿಸಿದ ಯಶಸ್ಸಿನಿಂದಾಗಿ ಪಿತೃ-ಸುರ-ಚಾರಣ-ಸಿದ್ಧ-ಯಕ್ಷಗಣಗಳಿಂದ ಮತ್ತು ಭೂಮಿಯ ಮೇಲಿನ ಎಲ್ಲ ಭೂತಗಳಿಂದ ಸಂಪೂಜಿತನಾದ ಅಭಿಮನ್ಯುವು ಆಜ್ಯಧಾರೆಗಳಿಂದ ತೋಯ್ದ ಯಜ್ಞೇಶ್ವರನಂತೆ ಅತಿಯಾಗಿ ಪ್ರಕಾಶಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪರಾಕ್ರಮೇ ಷಡ್ ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ಮೂವತ್ತಾರನೇ ಅಧ್ಯಾಯವು.

Image result for trees against white background

Comments are closed.