Drona Parva: Chapter 35

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೫

ಅಭಿಮನ್ಯು-ಸಾರಥಿ ಸುಮಿತ್ರರ ಸಂವಾದ (೧-೧೦). ಅಭಿಮನ್ಯು ಪರಾಕ್ರಮ (೧೧-೪೪).

07035001 ಸಂಜಯ ಉವಾಚ|

07035001a ಸೌಭದ್ರಸ್ತು ವಚಃ ಶ್ರುತ್ವಾ ಧರ್ಮರಾಜಸ್ಯ ಧೀಮತಃ|

07035001c ಅಚೋದಯತ ಯಂತಾರಂ ದ್ರೋಣಾನೀಕಾಯ ಭಾರತ||

ಸಂಜಯನು ಹೇಳಿದನು: “ಭಾರತ! ಧರ್ಮರಾಜನ ಮಾತನ್ನು ಕೇಳಿ ಧೀಮತ ಸೌಭದ್ರನಾದರೋ ರಥವನ್ನು ದ್ರೋಣನ ಸೇನೆಯ ಕಡೆ ನಡೆಸಿದನು.

07035002a ತೇನ ಸಂಚೋದ್ಯಮಾನಸ್ತು ಯಾಹಿ ಯಾಹೀತಿ ಸಾರಥಿಃ|

07035002c ಪ್ರತ್ಯುವಾಚ ತತೋ ರಾಜನ್ನಭಿಮನ್ಯುಮಿದಂ ವಚಃ||

ರಾಜನ್! ಹೋಗು ಹೋಗೆಂದು ಅವನು ಪ್ರಚೋದಿಸಲು, ಸಾರಥಿಯು ಅಭಿಮನ್ಯುವಿಗೆ ಈ ಮಾತನ್ನಾಡಿದನು:

07035003a ಅತಿಭಾರೋಽಯಮಾಯುಷ್ಮನ್ನಾಹಿತಸ್ತ್ವಯಿ ಪಾಂಡವೈಃ|

07035003c ಸಂಪ್ರಧಾರ್ಯ ಕ್ಷಮಂ ಬುದ್ಧ್ಯಾ ತತಸ್ತ್ವಂ ಯೋದ್ಧುಮರ್ಹಸಿ||

“ಆಯುಷ್ಮಾನ್! ಪಾಂಡವರು ನಿನ್ನ ಮೇಲೆ ಅತಿ ಭಾರವನ್ನು ಹೊರಿಸಿದ್ದಾರೆ. ಕ್ಷಣಕಾಲ ನೀನು ಮಾಡಬೇಕಾಗಿರುವ ಮಹಾ ಕಾರ್ಯದ ಕುರಿತು ಯೋಚಿಸಿ ನಂತರ ನೀನು ಯುದ್ಧ ಮಾಡಬೇಕಾಗುತ್ತದೆ.

07035004a ಆಚಾರ್ಯೋ ಹಿ ಕೃತೀ ದ್ರೋಣಃ ಪರಮಾಸ್ತ್ರೇ ಕೃತಶ್ರಮಃ|

07035004c ಅತ್ಯಂತಸುಖಸಂವೃದ್ಧಸ್ತ್ವಂ ಚ ಯುದ್ಧವಿಶಾರದಃ||

ಆಚಾರ್ಯ ದ್ರೋಣನು ವಿಶೇಷ ಪರಿಶ್ರಮದಿಂದ ಪರಮಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದಾನೆ. ನೀನಾದರೋ ಅತ್ಯಂತ ಸುಖದಲ್ಲಿ ಬೆಳೆದಿದ್ದೀಯೆ ಮತ್ತು ಯುದ್ಧ ವಿಶಾರದನೂ ಆಗಿದ್ದೀಯೆ.”

07035005a ತತೋಽಭಿಮನ್ಯುಃ ಪ್ರಹಸನ್ಸಾರಥಿಂ ವಾಕ್ಯಮಬ್ರವೀತ್|

07035005c ಸಾರಥೇ ಕೋ ನ್ವಯಂ ದ್ರೋಣಃ ಸಮಗ್ರಂ ಕ್ಷತ್ರಮೇವ ವಾ||

ಆಗ ಅಭಿಮನ್ಯುವು ನಸುನಕ್ಕು ಸಾರಥಿಗೆ ಈ ಮಾತನ್ನಾಡಿದನು: “ಸಾರಥೇ! ಏನು ಮಾತನಾಡುತ್ತಿರುವೆ? ಈ ದ್ರೋಣನಾಗಲೀ ಅಥವಾ ಕ್ಷತ್ರಿಯರಾಗಲೀ ನನಗೆ ಸರಿಸಾಟಿಯಲ್ಲ!

07035006a ಐರಾವತಗತಂ ಶಕ್ರಂ ಸಹಾಮರಗಣೈರಹಂ|

07035006c ಯೋಧಯೇಯಂ ರಣಮುಖೇ ನ ಮೇ ಕ್ಷತ್ರೇಽದ್ಯ ವಿಸ್ಮಯಃ|

ಐರಾವತವನ್ನೇರಿ ಅಮರಗಣಗಳೊಂದಿಗೆ ಶಕ್ರನು ಬಂದರೂ ನಾನು ರಣಮುಖದಲ್ಲಿ ಹೋ‌ರಾಡಿ ಕ್ಷತ್ರಿಯರನ್ನು ವಿಸ್ಮಯಗೊಳಿಸುತ್ತೇನೆ.

07035006e ನ ಮಮೈತದ್ದ್ವಿಷತ್ಸೈನ್ಯಂ ಕಲಾಮರ್ಹತಿ ಷೋಡಶೀಂ||

07035007a ಅಪಿ ವಿಶ್ವಜಿತಂ ವಿಷ್ಣುಂ ಮಾತುಲಂ ಪ್ರಾಪ್ಯ ಸೂತಜ|

07035007c ಪಿತರಂ ಚಾರ್ಜುನಂ ಸಂಖ್ಯೇ ನ ಭೀರ್ಮಾಮುಪಯಾಸ್ಯತಿ||

ಈ ಸೈನ್ಯವೂ ಕೂಡ ನನ್ನ ಹದಿನಾರನೆಯ ಒಂದು ಭಾಗದಷ್ಟೂ ಇಲ್ಲ. ಸೂತಜ! ನನ್ನ ಮಾವ ವಿಶ್ವಜಿತು ವಿಷ್ಣುವೂ, ತಂದೆ ಅರ್ಜುನನೂ ಕೂಡ ರಣದಲ್ಲಿ ಬಂದರೆ ಭಯವೆನ್ನುವುದು ನನ್ನನ್ನು ಸುಳಿಯುವುದೂ ಇಲ್ಲ.”

07035008a ತತೋಽಭಿಮನ್ಯುಸ್ತಾಂ ವಾಚಂ ಕದರ್ಥೀಕೃತ್ಯ ಸಾರಥೇಃ|

07035008c ಯಾಹೀತ್ಯೇವಾಬ್ರವೀದೇನಂ ದ್ರೋಣಾನೀಕಾಯ ಮಾಚಿರಂ||

ಆಗ ಸಾರಥಿಯ ಮಾತುಗಳನ್ನು ನಿರ್ಲಕ್ಷಿಸಿ “ಶೀಘ್ರವಾಗಿ ನೀನು ದ್ರೋಣನ ಸೇನೆಯ ಕಡೆ ನಡೆ!” ಎಂದು ಹೇಳಿದನು.

07035009a ತತಃ ಸಂಚೋದಯಾಮಾಸ ಹಯಾನಸ್ಯ ತ್ರಿಹಾಯನಾನ್||

07035009c ನಾತಿಹೃಷ್ಟಮನಾಃ ಸೂತೋ ಹೇಮಭಾಂಡಪರಿಚ್ಚದಾನ್|

ಆಗ ಅಷ್ಟೊಂದು ಸಂತೋಷಗೊಳ್ಳದ ಸೂತನು ಬಂಗಾರದ ಆಭರಣಗಳಿಂದ ಅಲಂಕೃತಗೊಂಡ ಮೂರು ವರ್ಷದ ಕುದುರೆಗಳನ್ನು ಓಡಿಸಿದನು.

07035010a ತೇ ಪ್ರೇಷಿತಾಃ ಸುಮಿತ್ರೇಣ ದ್ರೋಣಾನೀಕಾಯ ವಾಜಿನಃ|

07035010c ದ್ರೋಣಮಭ್ಯದ್ರವನ್ರಾಜನ್ಮಹಾವೇಗಪರಾಕ್ರಮಾಃ||

ರಾಜನ್! ಸುಮಿತ್ರನಿಂದ ದ್ರೋಣನ ಕಡೆ ಓಡಿಸಲ್ಪಟ್ಟ ಆ ಮಹಾವೇಗಪರಾಕ್ರಮ ಕುದುರೆಗಳು ದ್ರೋಣನ ಬಳಿ ಓಡಿ ಬಂದವು.

07035011a ತಮುದೀಕ್ಷ್ಯ ತಥಾಯಾಂತಂ ಸರ್ವೇ ದ್ರೋಣಪುರೋಗಮಾಃ|

07035011c ಅಭ್ಯವರ್ತಂತ ಕೌರವ್ಯಾಃ ಪಾಂಡವಾಶ್ಚ ತಮನ್ವಯುಃ||

ಹೀಗೆ ಬರುತ್ತಿದ್ದ ಅವನನ್ನು ನೋಡಿ ಕೌರವರ ಕಡೆಯವರೆಲ್ಲರೂ ದ್ರೋಣನ ಮುಂದೆ ಬಂದರು. ಪಾಂಡವರು ಅವನನ್ನು ಹಿಂಬಾಲಿಸಿ ಹೋದರು.

07035012a ಸ ಕರ್ಣಿಕಾರಪ್ರವರೋಚ್ಚ್ರಿತಧ್ವಜಃ

        ಸುವರ್ಣವರ್ಮಾರ್ಜುನಿರರ್ಜುನಾದ್ವರಃ|

07035012c ಯುಯುತ್ಸಯಾ ದ್ರೋಣಮುಖಾನ್ಮಹಾರಥಾನ್

        ಸಮಾಸದತ್ಸಿಂಹಶಿಶುರ್ಯಥಾ ಗಜಾನ್||

ಕರ್ಣಿಕಾರ ಗಿಡದ ಚಿಹ್ನೆಯ ಉನ್ನತ ಶ್ರೇಷ್ಠ ಧ್ವಜದ ಆರ್ಜುನಿಯು ಸುವರ್ಣಮಯ ಕವಚವನ್ನು ಧರಿಸಿ ಆನೆಗಳ ಹಿಂಡನ್ನು ಆಕ್ರಮಣಿಸುವ ಸಿಂಹದ ಮರಿಯಂತೆ ದ್ರೋಣಪ್ರಮುಖ ಮಹಾರಥರನ್ನು ಆಕ್ರಮಣಿಸಿದನು.

07035013a ತೇ ವಿಂಶತಿಪದೇ ಯತ್ತಾಃ ಸಂಪ್ರಹಾರಂ ಪ್ರಚಕ್ರಿರೇ|

07035013c ಆಸೀದ್ಗಾಂಗ ಇವಾವರ್ತೋ ಮುಹೂರ್ತಮುದಧೇರಿವ||

ಇಪ್ಪತ್ತೇ ಅಡಿ ದೂರದಲ್ಲಿದ್ದ ಅವರು ಪ್ರಹರಿಸಲು ತೊಡಗಿದರು. ಆಗ ಅಲ್ಲಿ ಒಂದು ಕ್ಷಣ ಗಂಗೆಯ ಸಂಗಮ ಸ್ಥಾನದಲ್ಲುಂಟಾಗುವ ಸುಳಿಯಂತೆ ಕೋಲಾಹಲವುಂಟಾಯಿತು.

07035014a ಶೂರಾಣಾಂ ಯುಧ್ಯಮಾನಾನಾಂ ನಿಘ್ನತಾಮಿತರೇತರಂ|

07035014c ಸಂಗ್ರಾಮಸ್ತುಮುಲೋ ರಾಜನ್ಪ್ರಾವರ್ತತ ಸುದಾರುಣಃ||

ರಾಜನ್! ಇತರೇತರರನ್ನು ಸಂಹರಿಸುತ್ತಾ ಯುದ್ಧ ಮಾಡುತ್ತಿದ್ದ ಆ ಶೂರರ ತುಮುಲ ಯುದ್ಧವು ಅತಿ ದಾರುಣ ರೂಪವನ್ನು ತಾಳಿತು.

07035015a ಪ್ರವರ್ತಮಾನೇ ಸಂಗ್ರಾಮೇ ತಸ್ಮಿನ್ನತಿಭಯಂಕರೇ|

07035015c ದ್ರೋಣಸ್ಯ ಮಿಷತೋ ವ್ಯೂಹಂ ಭಿತ್ತ್ವಾ ಪ್ರಾವಿಶದಾರ್ಜುನಿಃ||

ಆ ಅತಿಭಯಂಕರ ಸಂಗ್ರಾಮವು ನಡೆಯುತ್ತಿರಲು ಆರ್ಜುನಿಯು ದ್ರೋಣನು ನೋಡುತ್ತಿದ್ದಂತೆಯೇ ವ್ಯೂಹವನ್ನು ಭೇದಿಸಿ ಒಳನುಗ್ಗಿದನು.

07035016a ತಂ ಪ್ರವಿಷ್ಟಂ ಪರಾನ್ಘ್ನಂತಂ ಶತ್ರುಮಧ್ಯೇ ಮಹಾಬಲಂ|

07035016c ಹಸ್ತ್ಯಶ್ವರಥಪತ್ತ್ಯೌಘಾಃ ಪರಿವವ್ರುರುದಾಯುಧಾಃ||

ಶತ್ರುಮಧ್ಯವನ್ನು ಪ್ರವೇಶಿಸಿ ಸಂಹರಿಸುತ್ತಿದ್ದ ಆ ಮಹಾಬಲನನ್ನು ಆನೆ-ಕುದುರೆ-ರಥ-ಪದಾತಿ ಗಣಗಳು ಆಯುಧಗಳೊಂದಿಗೆ ಸುತ್ತುವರೆದವು.

07035017a ನಾನಾವಾದಿತ್ರನಿನದೈಃ ಕ್ಷ್ವೇಡಿತೋತ್ಕ್ರುಷ್ಟಗರ್ಜಿತೈಃ|

07035017c ಹುಂಕಾರೈಃ ಸಿಂಹನಾದೈಶ್ಚ ತಿಷ್ಠ ತಿಷ್ಠೇತಿ ನಿಃಸ್ವನೈಃ||

07035018a ಘೋರೈರ್ಹಲಹಲಾಶಬ್ದೈರ್ಮಾ ಗಾಸ್ತಿಷ್ಠೈಹಿ ಮಾಮಿತಿ|

07035018c ಅಸಾವಹಮಮುತ್ರೇತಿ ಪ್ರವದಂತೋ ಮುಹುರ್ಮುಹುಃ||

ನಾನಾ ವಿಧದ ರಣವಾದ್ಯಗಳನ್ನು ಬಾರಿಸುತ್ತಾ, ಕೋಪದಿಂದ ಗುರುಗುಟ್ಟುತ್ತಾ, ಗಟ್ಟಿಯಾಗಿ ಗರ್ಜಿಸುತ್ತಾ, ಹುಂಕಾರ-ಸಿಂಹನಾದಗಳೊಂದಿಗೆ “ನಿಲ್ಲು! ನಿಲ್ಲು!” ಎಂದು ಕೂಗುತ್ತಾ, ಘೋರ ಹಾಲಾಹಲ ಶಬ್ಧದೊಂದಿಗೆ “ಹೋಗಬೇಡ! ನಿಲ್ಲು! ನಾನು ಇಲ್ಲಿಯೇ ಇದ್ದೇನೆ!” ಎಂದು ಬಾರಿ ಬಾರಿ ಕೂಗುತ್ತಿದ್ದರು.

07035019a ಬೃಂಹಿತೈಃ ಶಿಂಜಿತೈರ್ಹಾಸೈಃ ಖುರನೇಮಿಸ್ವನೈರಪಿ|

07035019c ಸಮ್ನಾದಯಂತೋ ವಸುಧಾಮಭಿದುದ್ರುವುರಾರ್ಜುನಿಂ||

ಘೀಂಕಾರಗಳಿಂದ, ಗಂಟೆಯ ಶಬ್ಧಗಳಿಂದ, ಗಹ-ಗಹಿಸಿ ನಗುತ್ತಾ, ರಥಚಕ್ರಗಳ ಶಬ್ಧಗಳಿಂದ ಭೂಮಿಯನ್ನೇ ಮೊಳಗಿಸುತ್ತಾ ಅವರು ಆರ್ಜುನಿಯನ್ನು ಆಕ್ರಮಣಿಸಿದರು.

07035020a ತೇಷಾಮಾಪತತಾಂ ವೀರಃ ಪೂರ್ವಂ ಶೀಘ್ರಮಥೋ ದೃಢಂ|

07035020c ಕ್ಷಿಪ್ರಾಸ್ತ್ರೋ ನ್ಯವಧೀದ್ವ್ರಾತಾನ್ಮರ್ಮಜ್ಞೋ ಮರ್ಮಭೇದಿಭಿಃ||

ಮೇಲೆ ಬೀಳುತ್ತಿದ್ದ ಅವರನ್ನು ವೀರ, ಶೀಘ್ರಯೋಧಿ, ದೃಢ, ಕ್ಷಿಪ್ರಾಸ್ತ್ರ, ಮರ್ಮಜ್ಞ ಅಭಿಮನ್ಯುವು ಮರ್ಮಭೇದಿಗಳಿಂದ ಸಂಹರಿಸತೊಡಗಿದನು.

07035021a ತೇ ಹನ್ಯಮಾನಾಶ್ಚ ತಥಾ ನಾನಾಲಿಂಗೈಃ ಶಿತೈಃ ಶರೈಃ|

07035021c ಅಭಿಪೇತುಸ್ತಮೇವಾಜೌ ಶಲಭಾ ಇವ ಪಾವಕ||

ಹಾಗೆ ನಾನಾ ಚಿಹ್ನೆಗಳ ನಿಶಿತ ಶರಗಳಿಂದ ಸಂಹರಿಸಲ್ಪಡುತ್ತಿದ್ದ ಅವರು ಬೆಂಕಿಯನ್ನು ಮುತ್ತಲು ಹೋದ ದೀಪದ ಹುಳುಗಳಂತೆ ವೇಗವಾಗಿ ಸತ್ತು ಬೀಳುತ್ತಿದ್ದರು.

07035022a ತತಸ್ತೇಷಾಂ ಶರೀರೈಶ್ಚ ಶರೀರಾವಯವೈಶ್ಚ ಸಃ|

07035022c ಸಂತಸ್ತಾರ ಕ್ಷಿತಿಂ ಕ್ಷಿಪ್ರಂ ಕುಶೈರ್ವೇದಿಮಿವಾಧ್ವರೇ||

ಯಾಗಸಮಯದಲ್ಲಿ ನೆಲದಲ್ಲಿ ದರ್ಬೆಗಳನ್ನು ಹರಡುವಂತೆ ಅವನು ಅವರ ಮೃತ ಶರೀರಗಳನ್ನು ಭೂಮಿಯ ಮೇಲೆ ಬೇಗನೆ ಹರಡಿಬಿಟ್ಟನು.

07035023a ಬದ್ಧಗೋಧಾಂಗುಲಿತ್ರಾಣಾನ್ಸಶರಾವರಕಾರ್ಮುಕಾನ್|

07035023c ಸಾಸಿಚರ್ಮಾಂಕುಶಾಭೀಶೂನ್ಸತೋಮರಪರಶ್ವಧಾನ್||

07035024a ಸಗುಡಾಯೋಮುಖಪ್ರಾಸಾನ್ಸರ್ಷ್ಟಿತೋಮರಪಟ್ಟಿಶಾನ್|

07035024c ಸಭಿಂಡಿಪಾಲಪರಿಘಾನ್ಸಶಕ್ತಿವರಕಂಪನಾನ್||

07035025a ಸಪ್ರತೋದಮಹಾಶಂಖಾನ್ಸಕುಂತಾನ್ಸಕಚಗ್ರಹಾನ್|

07035025c ಸಮುದ್ಗರಕ್ಷೇಪಣೀಯಾನ್ಸಪಾಶಪರಿಘೋಪಲಾನ್||

07035026a ಸಕೇಯೂರಾಂಗದಾನ್ಬಾಹೂನ್ ಹೃದ್ಯಗಂಧಾನುಲೇಪನಾನ್|

07035026c ಸಂಚಿಚ್ಚೇದಾರ್ಜುನಿರ್ವೃತ್ತಾಂಸ್ತ್ವದೀಯಾನಾಂ ಸಹಸ್ರಶಃ||

ಗೋಧಾಂಗುಲಿಗಳನ್ನು ಕಟ್ಟಿಕೊಂಡಿದ್ದ, ಧನುಸ್ಸು-ಬಾಣಗಳನ್ನು ಹಿಡಿದುಕೊಂಡಿದ್ದ, ಖಡ್ಗ-ಗುರಾಣಿ-ಅಂಕುಶ-ಲಗಾಮುಗಳನ್ನು ಹಿಡಿದಿದ್ದ, ತೋಮರ ಪರಶುಗಳನ್ನು ಹಿಡಿದಿದ್ದ, ಗದೆ-ಲೋಹದ ಚಂಡು-ಪ್ರಾಸಗಳನ್ನು ಹಿಡಿದಿದ್ದ, ಋಷ್ಟಿ-ತೋಮರ-ಪಟ್ಟಿಷಗಳನ್ನು ಹಿಡಿದಿದ್ದ, ಭಿಂಡಿಪಾಲ-ಪರಿಘಗಳನ್ನು ಹಿಡಿದಿದ್ದ, ಶಕ್ತಿ-ಕಂಪನಗಳನ್ನು ಹಿಡಿದಿದ್ದ, ಪ್ರತೋದ-ಮಹಾಶಂಖ-ಕುಂತ-ಕಚಗ್ರಗಳನ್ನು ಹಿಡಿದಿದ್ದ, ಮುದ್ಗರ-ಕ್ಷೇಪಣಿಗಳನ್ನೂ ಪಾಶ-ಪರಿಘ-ಉಪಲಗಳನ್ನು ಹಿಡಿದಿದ್ದ, ಕೇಯೂರ-ಅಂಗದಗಳಿಂದ ಅಲಂಕೃತಗೊಂಡಿದ್ದ, ಗಂಧಾನುಲೇಪನಗಳಿಂದ ಮನೋಹರವಾಗಿದ್ದ ಸಹಸ್ರಾರು ಬಾಹುಗಳನ್ನು ಆರ್ಜುನಿಯು ಕತ್ತರಿಸಿದನು.

07035027a ತೈಃ ಸ್ಫುರದ್ಭಿರ್ಮಹಾರಾಜ ಶುಶುಭೇ ಲೋಹಿತೋಕ್ಷಿತೈಃ|

07035027c ಪಂಚಾಸ್ಯೈಃ ಪನ್ನಗೈಶ್ಚಿನ್ನೈರ್ಗರುಡೇನೇವ ಮಾರಿಷ||

ಮಹಾರಾಜ! ಮಾರಿಷ! ಗರುಡನಿಂದ ಕತ್ತರಿಸಲ್ಪಟ್ಟ ಸರ್ಪಗಳಂತೆ ಅವರ ಶಿರಸ್ಸುಗಳಿಂದ ಭೂಮಿಯು ತುಂಬಿಹೋಗಿತ್ತು.

07035028a ಸುನಾಸಾನನಕೇಶಾಂತೈರವ್ರಣೈಶ್ಚಾರುಕುಂಡಲೈಃ|

07035028c ಸಂದಷ್ಟೌಷ್ಠಪುಟೈಃ ಕ್ರೋಧಾತ್ ಕ್ಷರದ್ಭಿಃ ಶೋಣಿತಂ ಬಹು||

07035029a ಚಾರುಸ್ರಮ್ಮುಕುಟೋಷ್ಣೀಷೈರ್ಮಣಿರತ್ನವಿರಾಜಿತೈಃ|

07035029c ವಿನಾಲನಲಿನಾಕಾರೈರ್ದಿವಾಕರಶಶಿಪ್ರಭೈಃ||

07035030a ಹಿತಪ್ರಿಯಂವದೈಃ ಕಾಲೇ ಬಹುಭಿಃ ಪುಣ್ಯಗಂಧಿಭಿಃ|

07035030c ದ್ವಿಷಚ್ಚಿರೋಭಿಃ ಪೃಥಿವೀಮವತಸ್ತಾರ ಫಾಲ್ಗುಣಿಃ||

ಫಾಲ್ಗುಣಿಯು ಚೆನ್ನಾದ ಮೂಗು-ಮುಂಗುರುಳು-ಕುಂಡಲಗಳಿಂದ ಸುಂದರವಾಗಿದ್ದ, ಅತಿ ಕ್ರೋಧದಿಂದ ತುಟಿಕಚ್ಚಿ ರಕ್ತವನ್ನು ಸುರಿಸುತ್ತಿದ್ದ, ಸುಂದರ ಮುಕುಟ-ಮುಂಡಾಸು-ಮಣಿ-ರತ್ನಗಳಿಂದ ವಿರಾಜಿಸುತ್ತಿದ್ದ, ದಂಟಿಲ್ಲದ ಕಮಲಗಳಂತೆ, ದಿವಾಕರ-ಶಶಿಗಳ ಪ್ರಭೆಯನ್ನು ಹೊಂದಿದ್ದ, ಆ ಕಾಲದಲ್ಲಿ ಹಿತವಾದ ಪ್ರಿಯ ಮಾತುಗಳನ್ನಾಡುತ್ತಿದ್ದ, ಪುಣ್ಯಗಂಧಗಳಿಂದ ಲೇಪಿತಗೊಂಡಿದ್ದ ಹಲವಾರು ಶತ್ರು ಶಿರಗಳನ್ನು ಭೂಮಿಯ ಮೇಲೆ ತೂರಾಡಿದನು.

07035031a ಗಂಧರ್ವನಗರಾಕಾರಾನ್ವಿಧಿವತ್ಕಲ್ಪಿತಾನ್ರಥಾನ್|

07035031c ವೀಷಾಮುಖಾನ್ವಿತ್ರಿವೇಣೂನ್ವ್ಯಸ್ತದಂಡಕಬಂಧುರಾನ್||

07035032a ವಿಜಂಘಕೂಬರಾಕ್ಷಾಂಶ್ಚ ವಿನೇಮೀನನರಾನಪಿ|

07035032c ವಿಚಕ್ರೋಪಸ್ಕರೋಪಸ್ಥಾನ್ಭಗ್ನೋಪಕರಣಾನಪಿ||

07035033a ಪ್ರಶಾತಿತೋಪಕರಣಾನ್ ಹತಯೋಧಾನ್ಸಹಸ್ರಶಃ|

07035033c ಶರೈರ್ವಿಶಕಲೀಕುರ್ವನ್ದಿಕ್ಷು ಸರ್ವಾಸ್ವದೃಶ್ಯತ||

ಅವನು ಶರಗಳಿಂದ ಗಂಧರ್ವನಗರಾಕಾರದ, ವಿಧಿವತ್ತಾಗಿ ರಚಿಸಿದ್ದ ರಥಗಳ ಈಷಾದಂಡಗಳನ್ನು ತ್ರಿವೇಣುಗಳನ್ನು ಮುರಿದುಹಾಕಿ, ಕೂಬರಗಳನ್ನು ತುಂಡುಮಾಡಿ, ಚಕ್ರಗಳ ಅಂಚುಗಳನ್ನೂ ಅರೆಕಾಲುಗಳನ್ನೂ ಮುರಿದು ಹಾಕಿ, ಉಪಕರಣಗಳನ್ನು ತುಂಡುಮಾಡಿ ಅಲ್ಲಲ್ಲಿ ಚದುರಿ, ಆಸನಗಳೇ ಇಲ್ಲದಂತೆ ಮಾಡಿ ಸಹಸ್ರಾರು ಯೋಧರನ್ನು ಕೊಂದು ಎಲ್ಲ ದಿಕ್ಕುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದನು.

07035034a ಪುನರ್ದ್ವಿಪಾನ್ದ್ವಿಪಾರೋಹಾನ್ವೈಜಯಂತ್ಯಂಕುಶಧ್ವಜಾನ್|

07035034c ತೂಣಾನ್ವರ್ಮಾಣ್ಯಥೋ ಕಕ್ಷ್ಯಾ ಗ್ರೈವೇಯಾನಥ ಕಂಬಲಾನ್||

07035035a ಘಂಟಾಃ ಶುಂಡಾನ್ವಿಷಾಣಾಗ್ರಾನ್ ಕ್ಷುರಪಾಲಾನ್ಪದಾನುಗಾನ್|

07035035c ಶರೈರ್ನಿಶಿತಧಾರಾಗ್ರೈಃ ಶಾತ್ರವಾಣಾಮಶಾತಯತ್||

ಪುನಃ ಅವನು ನಿಶಿತ ಧಾರಾಗ್ರ ಬಾಣಗಳಿಂದ ಆನೆಗಳನ್ನೂ, ಗಜಾರೋಹಿಗಳನ್ನೂ, ವೈಜಯಂತಿ-ಅಂಕುಶ-ಧ್ವಜಗಳನ್ನೂ, ಬತ್ತಳಿಕೆಗಳನ್ನೂ, ಕವಚಗಳನ್ನೂ, ಕಕ್ಷ್ಯಗಳನ್ನೂ, ಹಗ್ಗಗಳನ್ನೂ, ಕಂಠಾಭರಣಗಳನ್ನೂ, ಕಂಬಳಿಗಳನ್ನೂ, ಘಂಟೆಗಳನ್ನೂ, ದಂತಗಳ ಅಗ್ರಭಾಗಗಳನ್ನೂ, ಬೆನ್ನುಗಳ ಮೇಲಿದ್ದ ಚತ್ರಗಳನ್ನೂ ಕತ್ತರಿಸಿದನು.

07035036a ವನಾಯುಜಾನ್ಪಾರ್ವತೀಯಾನ್ಕಾಂಬೋಜಾರಟ್ಟಬಾಹ್ಲಿಕಾನ್|

07035036c ಸ್ಥಿರವಾಲಧಿಕರ್ಣಾಕ್ಷಾಂ ಜವನಾನ್ಸಾಧುವಾಹಿನಃ||

07035037a ಸ್ವಾರೂಢಾಂ ಶಿಕ್ಷಿತೈರ್ಯೋಧೈಃ ಶಕ್ತ್ಯೃಷ್ಟಿಪ್ರಾಸಯೋಧಿಭಿಃ|

07035037c ವಿಧ್ವಸ್ತಚಾಮರಕುಥಾನ್ವಿಪ್ರಕೀರ್ಣಪ್ರಕೀರ್ಣಕಾನ್||

07035038a ನಿರಸ್ತಜಿಹ್ವಾನಯನಾನ್ನಿಷ್ಕೀರ್ಣಾಂತ್ರಯಕೃದ್ಘನಾನ್|

07035038c ಹತಾರೋಹಾನ್ಭಿನ್ನಭಾಂಡಾನ್ಕ್ರವ್ಯಾದಗಣಮೋದನಾನ್||

07035039a ನಿಕೃತ್ತವರ್ಮಕವಚಾಂ ಶಕೃನ್ಮೂತ್ರಾಸೃಗಾಪ್ಲುತಾನ್|

07035039c ನಿಪಾತಯನ್ನಶ್ವವರಾಂಸ್ತಾವಕಾನ್ಸೋಽಭ್ಯರೋಚತ||

ಬಾಲ-ಕಿವಿ-ಕಣ್ಣುಗಳನ್ನು ನಿಮಿರಿಸಿಕೊಂಡು ಹೆಚ್ಚು ಭಾರವನ್ನು ಹೊತ್ತು ವೇಗವಾಗಿ ಓಡಬಲ್ಲ ವನಾಯುಜ-ಪಾರ್ವತೀಯ-ಕಾಂಬೋಜ-ಆರಟ್ಟ-ಬಾಹ್ಲೀಕ ಕುದುರೆಗಳನ್ನೂ, ಅವುಗಳ ಮೇಲೆ ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದು ಕುಳಿತಿದ್ದ ಸುಶಿಕ್ಷಿತ ಯೋಧರನ್ನು ಕೆಳಗುರುಳಿಸಿದನು. ಆ ಕುದುರೆಗಳ ಕುತ್ತಿಗೆಗಳ ಮೇಲೆ ಚಾಮರಗಳಂತಿದ್ದ ಕೂದಲುಗಳು ಅಸ್ತವ್ಯಸ್ತವಾಗಿದ್ದವು. ಶರೀರದ ಮೇಲೆಲ್ಲ ಗಾಯಗಳಾಗಿದ್ದವು. ನಾಲಿಗೆಗಳೂ ಕಣ್ಣುಗಳೂ ಹೊರಚಾಚಿಕೊಂಡಿದ್ದವು. ಕರುಳುಗಳೂ ಪಿತ್ತಕೋಶಗಳೂ ಹೊರಬಿದ್ದಿದ್ದವು. ಮಲ-ಮೂತ್ರ-ರಕ್ತದಿಂದ ತೋಯ್ದು ಹೋಗಿದ್ದವು. ಹೀಗೆ ಸತ್ತು ಬಿದ್ದಿದ್ದ ಕುದುರೆಗಳು ಮತ್ತು ಸವಾರರು ಮಾಂಸಗಳನ್ನು ತಿನ್ನುವ ಪ್ರಾಣಿಗಳಿಗೆ ಆನಂದವನ್ನುಂಟು ಮಾಡಿದವು. ಈ ರೀತಿ ನಿನ್ನವರ ಶ್ರೇಷ್ಠ ಕುದುರೆಗಳನ್ನು ಸಂಹರಿಸಿ ಅವನು ವಿರಾಜಿಸಿದನು.

07035040a ಏಕೋ ವಿಷ್ಣುರಿವಾಚಿಂತ್ಯಃ ಕೃತ್ವಾ ಪ್ರಾಕ್ಕರ್ಮ ದುಷ್ಕರಂ|

07035040c ತಥಾ ವಿಮಥಿತಂ ತೇನ ತ್ರ್ಯಂಗಂ ತವ ಬಲಂ ಮಹತ್|

07035040e ವ್ಯಹನತ್ಸ ಪದಾತ್ಯೋಘಾಂಸ್ತ್ವದೀಯಾನೇವ ಭಾರತ||

ಅಚಿಂತ್ಯ ವಿಷ್ಣುವಂತೆ ಒಬ್ಬನೇ ಆ ದುಷ್ಕರ ಕರ್ಮವನ್ನು ಎಸಗಲು ಮೂರು ಅಂಗಗಳ ನಿನ್ನ ಆ ಮಹಾಸೇನೆಯು ಅವನಿಂದ ನಾಶಗೊಂಡಿತು.

07035041a ಏವಮೇಕೇನ ತಾಂ ಸೇನಾಂ ಸೌಭದ್ರೇಣ ಶಿತೈಃ ಶರೈಃ|

07035041c ಭೃಶಂ ವಿಪ್ರಹತಾಂ ದೃಷ್ಟ್ವಾ ಸ್ಕಂದೇನೇವಾಸುರೀಂ ಚಮೂಂ||

07035042a ತ್ವದೀಯಾಸ್ತವ ಪುತ್ರಾಶ್ಚ ವೀಕ್ಷಮಾಣಾ ದಿಶೋ ದಶ|

07035042c ಸಂಶುಷ್ಕಾಸ್ಯಾಶ್ಚಲನ್ನೇತ್ರಾಃ ಪ್ರಸ್ವಿನ್ನಾ ಲೋಮಹರ್ಷಣಾಃ||

ಹೀಗೆ ಏಕಾಂಗಿಯಾಗಿ ನಿಶಿತ ಶರಗಳಿಂದ ಅಸುರೀ ಸೇನೆಯನ್ನು ಸ್ಕಂದನು ಹೇಗೋ ಹಾಗೆ ಸೌಭದ್ರಿಯು ಆ ಸೇನೆಯನ್ನು ಸಂಪೂರ್ಣ ನಾಶಮಾಡಿದುದನ್ನು ನೋಡಿ ನಿನ್ನ ಮಕ್ಕಳು ಬೆವತು, ರೋಮಾಂಚನಗೊಂಡು, ಬಾಡಿದ ಮುಖಗಳಲ್ಲಿ, ಕಣ್ಣುಗಳನ್ನು ತಿರುಗಿಸುತ್ತಾ ಹತ್ತೂ ದಿಕ್ಕುಗಳನ್ನು ವೀಕ್ಷಿಸತೊಡಗಿದರು.

07035043a ಪಲಾಯನಕೃತೋತ್ಸಾಹಾ ನಿರುತ್ಸಾಹಾ ದ್ವಿಷಜ್ಜಯೇ|

07035043c ಗೋತ್ರನಾಮಭಿರನ್ಯೋನ್ಯಂ ಕ್ರಂದಂತೋ ಜೀವಿತೈಷಿಣಃ||

07035044a ಹತಾನ್ಪುತ್ರಾಂಸ್ತಥಾ ಪಿತೄನ್ಸುಹೃತ್ಸಂಬಂಧಿಬಾಂಧವಾನ್|

07035044c ಪ್ರಾತಿಷ್ಠಂತ ಸಮುತ್ಸೃಜ್ಯ ತ್ವರಯಂತೋ ಹಯದ್ವಿಪಾನ್||

ಶತ್ರುವನ್ನು ಜಯಿಸಲು ನಿರುತ್ಸಾಹಿಗಳಾಗಿ, ಪಲಾಯನಮಾಡುವುದರಲ್ಲಿ ಉತ್ಸಾಹಿಗಳಾಗಿ, ಜೀವಿತವನ್ನು ಬಯಸಿ, ಅನ್ಯೋನ್ಯರ ಹೆಸರು-ಗೋತ್ರಗಳನ್ನು ಕೂಗಿಕೊಳ್ಳುತ್ತಾ, ಹತರಾಗಿದ್ದ ಮಕ್ಕಳು-ತಂದೆಯಂದಿರು-ಗೆಳೆಯರು-ಬಂಧು-ಬಾಂಧವರನ್ನು, ಕುದುರೆ-ಆನೆಗಳನ್ನು ಅಲ್ಲಿಯೇ ಬಿಟ್ಟು ತ್ವರೆಮಾಡಿ ಓಡಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪರಾಕ್ರಮೇ ಪಂಚತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ಮೂವತ್ತೈದನೇ ಅಧ್ಯಾಯವು.

Image result for trees against white background

Comments are closed.