Drona Parva: Chapter 34

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೪

ಚಕ್ರವ್ಯೂಹವನ್ನು ಭೇದಿಸಲು ಪಾಂಡವ ಸೇನೆಗೆ ಅಸಾಧ್ಯವಾಗಲು ಯುಧಿಷ್ಠಿರನು ಅಭಿಮನ್ಯುವನ್ನು ಕೇಳಿದುದು (೧-೧೭).  ತನಗೆ ಚಕ್ರವ್ಯೂಹವನ್ನು ಭೇದಿಸುವುದು ಮಾತ್ರ ಗೊತ್ತೆಂದು ಅಭಿಮನ್ಯುವು ಹೇಳಲು ಯುಧಿಷ್ಠಿರ-ಭೀಮಸೇನರು “ಸೇನೆಯನ್ನು ಭೇದಿಸಿ ನಮಗೆ ದ್ವಾರವನ್ನು ಮಾಡಿಕೊಡು. ನೀನು ಯಾವ ಮಾರ್ಗದಲ್ಲಿ ಒಳಹೋಗುತ್ತೀಯೋ ಅದೇ ಮಾರ್ಗದಲ್ಲಿ ನಾವು ನಿನ್ನನ್ನು ಅನುಸರಿಸಿ ಬರುತ್ತೇವೆ.” ಎಂದುದು (೧೮-೨೩). ಅದಕ್ಕೆ ಒಪ್ಪಿಕೊಂಡು ಅಭಿಮನ್ಯುವು ದ್ರೋಣಸೇನೆಯ ಕಡೆ ಹೋದುದು (೨೪-೨೯).

07034001 ಸಂಜಯ ಉವಾಚ|

07034001a ತದನೀಕಮನಾಧೃಷ್ಯಂ ಭಾರದ್ವಾಜೇನ ರಕ್ಷಿತಂ|

07034001c ಪಾರ್ಥಾಃ ಸಮಭ್ಯವರ್ತಂತ ಭೀಮಸೇನಪುರೋಗಮಾಃ||

ಸಂಜಯನು ಹೇಳಿದನು: “ಎದುರಿಸಲು ಅಸಾಧ್ಯವಾಗಿದ್ದ ಭಾರದ್ವಾಜನಿಂದ ರಕ್ಷಿತಗೊಂಡಿದ್ದ ಆ ಸೇನೆಯನ್ನು ಭೀಮಸೇನನನ್ನು ಮುಂದಿಟ್ಟುಕೊಂಡು ಪಾರ್ಥರು ಆಕ್ರಮಣಿಸಿದರು.

07034002a ಸಾತ್ಯಕಿಶ್ಚೇಕಿತಾನಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

07034002c ಕುಂತಿಭೋಜಶ್ಚ ವಿಕ್ರಾಂತೋ ದ್ರುಪದಶ್ಚ ಮಹಾರಥಃ||

07034003a ಆರ್ಜುನಿಃ ಕ್ಷತ್ರಧರ್ಮಾ ಚ ಬೃಹತ್ಕ್ಷತ್ರಶ್ಚ ವೀರ್ಯವಾನ್|

07034003c ಚೇದಿಪೋ ಧೃಷ್ಟಕೇತುಶ್ಚ ಮಾದ್ರೀಪುತ್ರೌ ಘಟೋತ್ಕಚಃ||

07034004a ಯುಧಾಮನ್ಯುಶ್ಚ ವಿಕ್ರಾಂತಃ ಶಿಖಂಡೀ ಚಾಪರಾಜಿತಃ|

07034004c ಉತ್ತಮೌಜಾಶ್ಚ ದುರ್ಧರ್ಷೋ ವಿರಾಟಶ್ಚ ಮಹಾರಥಃ||

07034005a ದ್ರೌಪದೇಯಾಶ್ಚ ಸಂರಬ್ಧಾಃ ಶೈಶುಪಾಲಿಶ್ಚ ವೀರ್ಯವಾನ್|

07034005c ಕೇಕಯಾಶ್ಚ ಮಹಾವೀರ್ಯಾಃ ಸೃಂಜಯಾಶ್ಚ ಸಹಸ್ರಶಃ||

07034006a ಏತೇ ಚಾನ್ಯೇ ಚ ಸಗಣಾಃ ಕೃತಾಸ್ತ್ರಾ ಯುದ್ಧದುರ್ಮದಾಃ|

07034006c ಸಮಭ್ಯಧಾವನ್ಸಹಸಾ ಭಾರದ್ವಾಜಂ ಯುಯುತ್ಸವಃ||

ವಿಕ್ರಾಂತ ಕುಂತೀಭೋಜ, ಮಹಾರಥ ದ್ರುಪದ, ಆರ್ಜುನಿ, ಕ್ಷತ್ರಧರ್ಮ, ವೀರ್ಯವಾನ್ ಬೃಹತ್ಕ್ಷತ್ರ, ಚೇದಿಪ ಧೃಷ್ಟಕೇತು, ಮಾದ್ರೀಪುತ್ರರಿಬ್ಬರು, ಘಟೋತ್ಕಚ, ವಿಕ್ರಾಂತ ಯುಧಾಮನ್ಯು, ಅಪರಾಜಿತ ಶಿಖಂಡೀ, ದುರ್ಧರ್ಷ ಉತ್ತಮೌಜ, ಮಹಾರಥ ವಿರಾಟ, ಸಂರಬ್ಧ ದ್ರೌಪದೇಯರು, ವೀರ್ಯವಾನ್ ಶೈಶುಪಾಲಿ, ಮಹಾವೀರರಾದ ಕೇಕಯರು, ಸಹಸ್ರಾರು ಸೃಂಜಯರು ಮತ್ತು ಇತರ ಅನ್ಯರು ಕೃತಾಸ್ತ್ರರು ಯುದ್ಧದುರ್ಮದರು ಗಣಗಳೊಂದಿಗೆ ಯುದ್ಧಮಾಡಲು ಉತ್ಸುಕರಾಗಿ ಒಮ್ಮೆಲೇ ಭಾರದ್ವಾಜನನ್ನು ಆಕ್ರಮಣಿಸಿದರು.

07034007a ಸಮವೇತಾಂಸ್ತು ತಾನ್ಸರ್ವಾನ್ಭಾರದ್ವಾಜೋಽಪಿ ವೀರ್ಯವಾನ್|

07034007c ಅಸಂಭ್ರಾಂತಃ ಶರೌಘೇಣ ಮಹತಾ ಸಮವಾರಯತ್||

ಒಂದಾಗಿ ಬಂದ ಅವರೆಲ್ಲರನ್ನೂ ವೀರ್ಯವಾನ್ ಭಾರದ್ವಾಜನು ಸಂಭ್ರಾಂತನಾಗದೇ ಮಹಾ ಶರಜಾಲಗಳಿಂದ ತಡೆದು ನಿಲ್ಲಿಸಿದನು.

07034008a ಮಹೌಘಾಃ ಸಲಿಲಸ್ಯೇವ ಗಿರಿಮಾಸಾದ್ಯ ದುರ್ಭಿದಂ|

07034008c ದ್ರೋಣಂ ತೇ ನಾಭ್ಯವರ್ತಂತ ವೇಲಾಮಿವ ಜಲಾಶಯಾಃ||

ದುರ್ಭೇದ್ಯ ಪರ್ವತದ ಸಮೀಪಕ್ಕೆ ಹೋದ ದೊಡ್ಡ ಜಲಪ್ರವಾಹವು ತಟಸ್ಥವಾಗಿ ನಿಲ್ಲುವಂತೆ, ಸಮುದ್ರದ ಅಲೆಗಳು ತಟವನ್ನು ದಾಟಿ ಮುಂದೆ ಬಾರದಂತೆ ದ್ರೋಣನನ್ನು ಅತಿಕ್ರಮಿಸಿ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ.

07034009a ಪೀಡ್ಯಮಾನಾಃ ಶರೈ ರಾಜನ್ದ್ರೋಣಚಾಪವಿನಿಃಸೃತೈಃ|

07034009c ನ ಶೇಕುಃ ಪ್ರಮುಖೇ ಸ್ಥಾತುಂ ಭಾರದ್ವಾಜಸ್ಯ ಪಾಂಡವಾಃ||

ರಾಜನ್! ದ್ರೋಣನ ಚಾಪದಿಂದ ಪ್ರಯೋಗಿಸಲ್ಪಟ್ಟ ಶರಗಳಿಂದ ಪೀಡಿತರಾದ ಪಾಂಡವರು ಭಾರದ್ವಾಜನ ಮುಂದೆ ನಿಲ್ಲಲೂ ಶಕ್ಯರಾಗದಂತಾದರು.

07034010a ತದದ್ಭುತಮಪಶ್ಯಾಮ ದ್ರೋಣಸ್ಯ ಭುಜಯೋರ್ಬಲಂ|

07034010c ಯದೇನಂ ನಾಭ್ಯವರ್ತಂತ ಪಾಂಚಾಲಾಃ ಸೃಂಜಯೈಃ ಸಹ||

ಸೃಂಜಯರೊಂದಿಗೆ ಪಾಂಚಾಲರು ಮುಂದೆ ಬಾರದಂತೆ ತಡೆಗಟ್ಟಿದ ದ್ರೋಣನ ಆ ಭುಜಬಲದ ಅದ್ಭುತವನ್ನು ನಾವು ನೋಡಿದೆವು.

07034011a ತಮಾಯಾಂತಮಭಿಕ್ರುದ್ಧಂ ದ್ರೋಣಂ ದೃಷ್ಟ್ವಾ ಯುಧಿಷ್ಠಿರಃ|

07034011c ಬಹುಧಾ ಚಿಂತಯಾಮಾಸ ದ್ರೋಣಸ್ಯ ಪ್ರತಿವಾರಣಂ||

ಕ್ರುದ್ಧನಾಗಿ ಮುಂದುವರೆದು ಬರುತ್ತಿದ್ದ ದ್ರೋಣನನ್ನು ನೋಡಿ ಯುಧಿಷ್ಠಿರನು ದ್ರೋಣನನ್ನು ಎದುರಿಸಿ ನಿಲ್ಲಿಸುವುದರ ಕುರಿತು ಬಹಳವಾಗಿ ಚಿಂತಿಸಿದನು.

07034012a ಅಶಕ್ಯಂ ತು ತಮನ್ಯೇನ ದ್ರೋಣಂ ಮತ್ವಾ ಯುಧಿಷ್ಠಿರಃ|

07034012c ಅವಿಷಹ್ಯಂ ಗುರುಂ ಭಾರಂ ಸೌಭದ್ರೇ ಸಮವಾಸೃಜತ್||

ಬೇರೆ ಯಾರಿಗೂ ಅದು ಸಾದ್ಯವಿಲ್ಲವೆಂದು ಅಭಿಪ್ರಾಯಪಟ್ಟು ಯುಧಿಷ್ಠಿರನು ದ್ರೋಣನನ್ನು ಎದುರಿಸುವ ಅತಿ ಭಾರವಾದ ಕಾರ್ಯವನ್ನು ಸೌಭದ್ರಿಗೆ ಒಪ್ಪಿಸಿದನು.

07034013a ವಾಸುದೇವಾದನವರಂ ಫಲ್ಗುನಾಚ್ಚಮಿತೌಜಸಂ|

07034013c ಅಬ್ರವೀತ್ಪರವೀರಘ್ನಮಭಿಮನ್ಯುಮಿದಂ ವಚಃ||

ವಾಸುದೇವನಿಗೆ ಮತ್ತು ಅಮಿತೌಜಸ ಫಲ್ಗುನಿಗೆ ಸಮಾನನಾದ ಪರವೀರಘ್ನ ಅಭಿಮನ್ಯುವಿಗೆ ಈ ಮಾತನ್ನಾಡಿದನು:

07034014a ಏತ್ಯ ನೋ ನಾರ್ಜುನೋ ಗರ್ಹೇದ್ಯಥಾ ತಾತ ತಥಾ ಕುರು|

07034014c ಚಕ್ರವ್ಯೂಹಸ್ಯ ನ ವಯಂ ವಿದ್ಮ ಭೇದಂ ಕಥಂ ಚನ||

“ಮಗೂ! ಅರ್ಜುನನು ನಮ್ಮನ್ನು ಈ ವಿಷಯದಲ್ಲಿ ನಿಂದಿಸಬಾರದಂತೆ ಮಾಡು. ನಮ್ಮಲ್ಲಿರುವ ಯಾರಿಗೂ ಚಕ್ರವ್ಯೂಹವನ್ನು ಭೇದಿಸುವುದು ತಿಳಿದಿಲ್ಲ.

07034015a ತ್ವಂ ವಾರ್ಜುನೋ ವಾ ಕೃಷ್ಣೋ ವಾ ಭಿಂದ್ಯಾತ್ಪ್ರದ್ಯುಮ್ನ ಏವ ವಾ|

07034015c ಚಕ್ರವ್ಯೂಹಂ ಮಹಾಬಾಹೋ ಪಂಚಮೋಽನ್ಯೋ ನ ವಿದ್ಯತೇ||

ಮಹಾಬಾಹೋ! ನೀನು ಅಥವಾ ಅರ್ಜುನ ಅಥವಾ ಕೃಷ್ಣ ಅಥವಾ ಪ್ರದ್ಯುಮ್ನರು ಮಾತ್ರ ಚಕ್ರವ್ಯೂಹವನ್ನು ಭೇದಿಸಬಲ್ಲಿರಿ. ಐದನೆಯ ಬೇರೆ ಯಾರಿಗೂ ಇದು ತಿಳಿದಿಲ್ಲ.

07034016a ಅಭಿಮನ್ಯೋ ವರಂ ತಾತ ಯಾಚತಾಂ ದಾತುಮರ್ಹಸಿ|

07034016c ಪಿತೄಣಾಂ ಮಾತುಲಾನಾಂ ಚ ಸೈನ್ಯಾನಾಂ ಚೈವ ಸರ್ವಶಃ||

ಮಗೂ! ಅಭಿಮನ್ಯೋ! ನಿನ್ನ ತಂದೆಯರು, ಸೋದರ ಮಾವಂದಿರು ಮತ್ತು ಎಲ್ಲ ಸೇನೆಗಳೂ ಬೇಡುವ ಈ ವರವನ್ನು ದಯಪಾಲಿಸಬೇಕು.

07034017a ಧನಂಜಯೋ ಹಿ ನಸ್ತಾತ ಗರ್ಹಯೇದೇತ್ಯ ಸಂಯುಗಾತ್|

07034017c ಕ್ಷಿಪ್ರಮಸ್ತ್ರಂ ಸಮಾದಾಯ ದ್ರೋಣಾನೀಕಂ ವಿಶಾತಯ||

ಮಗೂ! ಯುದ್ಧದಿಂದ ಹಿಂದಿರುಗಿದ ಅರ್ಜುನನು ನಮ್ಮನ್ನು ನಿಂದಿಸಬಾರದು. ಅದಕ್ಕಾಗಿ ನೀನು ಬೇಗನೆ ಅಸ್ತ್ರಗಳನ್ನು ತೆಗೆದುಕೊಂಡು ದ್ರೋಣನ ಸೇನೆಯನ್ನು ನಾಶಗೊಳಿಸು.”

07034018 ಅಭಿಮನ್ಯುರುವಾಚ|

07034018a ದ್ರೋಣಸ್ಯ ದೃಢಮವ್ಯಗ್ರಮನೀಕಪ್ರವರಂ ಯುಧಿ|

07034018c ಪಿತೄಣಾಂ ಜಯಮಾಕಾಂಕ್ಷನ್ನವಗಾಹೇ ಭಿನದ್ಮಿ ಚ||

ಅಭಿಮನ್ಯುವು ಹೇಳಿದನು: “ಪಿತೃಗಳ ಜಯವನ್ನು ಬಯಸಿ ನಾನು ದ್ರೋಣನ ಈ ದೃಢ ಅವ್ಯಗ್ರ ಸೇನಾಪ್ರವರವನ್ನು ಯುದ್ಧದಲ್ಲಿ ನುಗ್ಗಿ ಭೇದಿಸುತ್ತೇನೆ.

07034019a ಉಪದಿಷ್ಟೋ ಹಿ ಮೇ ಪಿತ್ರಾ ಯೋಗೋಽನೀಕಸ್ಯ ಭೇದನೇ|

07034019c ನೋತ್ಸಹೇ ತು ವಿನಿರ್ಗಂತುಮಹಂ ಕಸ್ಯಾಂ ಚಿದಾಪದಿ||

ನನ್ನ ತಂದೆಯು ನನಗೆ ಸೇನೆಯನ್ನು ಭೇದಿಸುವುದರ ಉಪಾಯವನ್ನು ಮಾತ್ರ ಉಪದೇಶಿಸಿದ್ದಾನೆ. ಒಂದು ವೇಳೆ ಆಪತ್ತಿನಲ್ಲಿ ಸಿಲುಕಿದರೆ ಹೊರಬರಲು ನನಗೆ ಸರ್ವಥಾ ಸಾಧ್ಯವಾಗಲಾರದು.”

07034020 ಯುಧಿಷ್ಠಿರ ಉವಾಚ|

07034020a ಭಿಂಧ್ಯನೀಕಂ ಯುಧಾ ಶ್ರೇಷ್ಠ ದ್ವಾರಂ ಸಂಜನಯಸ್ವ ನಃ|

07034020c ವಯಂ ತ್ವಾನುಗಮಿಷ್ಯಾಮೋ ಯೇನ ತ್ವಂ ತಾತ ಯಾಸ್ಯಸಿ||

ಯುಧಿಷ್ಠಿರನು ಹೇಳಿದನು: “ಯೋಧಶ್ರೇಷ್ಠ! ಮಗೂ! ಸೇನೆಯನ್ನು ಭೇದಿಸಿ ನಮಗೆ ದ್ವಾರವನ್ನು ಮಾಡಿಕೊಡು. ನೀನು ಯಾವ ಮಾರ್ಗದಲ್ಲಿ ಒಳಹೋಗುತ್ತೀಯೋ ಅದೇ ಮಾರ್ಗದಲ್ಲಿ ನಾವು ನಿನ್ನನ್ನು ಅನುಸರಿಸಿ ಬರುತ್ತೇವೆ.

07034021a ಧನಂಜಯಸಮಂ ಯುದ್ಧೇ ತ್ವಾಂ ವಯಂ ತಾತ ಸಂಯುಗೇ|

07034021c ಪ್ರಣಿಧಾಯಾನುಯಾಸ್ಯಾಮೋ ರಕ್ಷಂತಃ ಸರ್ವತೋಮುಖಾಃ||

ಮಗೂ! ಯುದ್ಧದಲ್ಲಿ ನಿನ್ನನ್ನು ಅರ್ಜುನನ ಸಮನೆಂದೇ ಮನ್ನಿಸುತ್ತೇವೆ. ಎಲ್ಲಕಡೆಗಳಲ್ಲಿ ದೃಷ್ಟಿಯನ್ನು ಹರಿಸುತ್ತಾ ನಿನಗೆ ಸ್ವಲ್ಪವೂ ಅಪಾಯವಾಗದಂತೆ ನಿನ್ನನ್ನು ರಕ್ಷಿಸುತ್ತಾ ಹಿಂಬಾಲಿಸಿ ಬರುತ್ತೇವೆ.”

07034022 ಭೀಮ ಉವಾಚ|

07034022a ಅಹಂ ತ್ವಾನುಗಮಿಷ್ಯಾಮಿ ಧೃಷ್ಟದ್ಯುಮ್ನೋಽಥ ಸಾತ್ಯಕಿಃ|

07034022c ಪಾಂಚಾಲಾಃ ಕೇಕಯಾ ಮತ್ಸ್ಯಾಸ್ತಥಾ ಸರ್ವೇ ಪ್ರಭದ್ರಕಾಃ||

ಭೀಮನು ಹೇಳಿದನು: “ನಾನು ನಿನ್ನನ್ನು ಹಿಂಬಾಲಿಸಿ ಬರುತ್ತೇನೆ. ಅದೇರೀತಿ ಧೃಷ್ಟದ್ಯುಮ್ನ, ಸಾತ್ಯಕಿ, ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಸರ್ವ ಪ್ರಭದ್ರಕರು ಬರುತ್ತಾರೆ.

07034023a ಸಕೃದ್ಭಿನ್ನಂ ತ್ವಯಾ ವ್ಯೂಹಂ ತತ್ರ ತತ್ರ ಪುನಃ ಪುನಃ|

07034023c ವಯಂ ಪ್ರಧ್ವಂಸಯಿಷ್ಯಾಮೋ ನಿಘ್ನಮಾನಾ ವರಾನ್ವರಾನ್||

ವ್ಯೂಹವನ್ನು ಭೇದಿಸುವುದನ್ನು ತಿಳಿದುಕೊಂಡಿರುವ ನೀನು ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಭೇದಿಸು. ನಾವು ಪುನಃ ಪುನಃ ಶ್ರೇಷ್ಠ ಶ್ರೇಷ್ಠರಾದವರನ್ನು ಸಂಹರಿಸಿ ವ್ಯೂಹವನ್ನು ಧ್ವಂಸಗೊಳಿಸುತ್ತೇವೆ.”

07034024 ಅಭಿಮನ್ಯುರುವಾಚ|

07034024a ಅಹಮೇತತ್ಪ್ರವೇಕ್ಷ್ಯಾಮಿ ದ್ರೋಣಾನೀಕಂ ದುರಾಸದಂ|

07034024c ಪತಂಗ ಇವ ಸಂಕ್ರುದ್ಧೋ ಜ್ವಲಿತಂ ಜಾತವೇದಸಂ||

ಅಭಿಮನ್ಯುವು ಹೇಳಿದನು: “ದ್ರೋಣನ ಈ ದುರಾಸದ ಸೇನೆಯನ್ನು ಸಂಕ್ರುದ್ಧ ಪತಂಗವು ಪ್ರಜ್ವಲಿಸುತ್ತಿರುವ ಜಾತವೇದಸನನ್ನು ಹೊಗುವಂತೆ ಪ್ರವೇಶಿಸುತ್ತೇನೆ.

07034025a ತತ್ಕರ್ಮಾದ್ಯ ಕರಿಷ್ಯಾಮಿ ಹಿತಂ ಯದ್ವಂಶಯೋರ್ದ್ವಯೋಃ|

07034025c ಮಾತುಲಸ್ಯ ಚ ಯಾ ಪ್ರೀತಿರ್ಭವಿಷ್ಯತಿ ಪಿತುಶ್ಚ ಮೇ||

ಇಂದು ನಾನು ಎರಡೂ ವಂಶಗಳಿಗೆ ಹಿತವಾದುದನ್ನು ಮಾಡುತ್ತೇನೆ. ಸೋದರ ಮಾವನಿಗೂ ನನ್ನ ತಂದೆಗೂ ಇದರಿಂದ ಸಂತೋಷವಾಗುತ್ತದೆ.

07034026a ಶಿಶುನೈಕೇನ ಸಂಗ್ರಾಮೇ ಕಾಲ್ಯಮಾನಾನಿ ಸಂಘಶಃ|

07034026c ಅದ್ಯ ದ್ರಕ್ಷ್ಯಂತಿ ಭೂತಾನಿ ದ್ವಿಷತ್ಸೈನ್ಯಾನಿ ವೈ ಮಯಾ||

ಇನ್ನೂ ಬಾಲಕನಾಗಿರುವ ನನ್ನಿಂದ ಸಂಗ್ರಾಮದಲ್ಲಿ ಶತ್ರುಸೇನೆಗಳು ನಾಶವಾಗುವುದನ್ನು ಇಂದು ಇರುವವೆಲ್ಲವೂ ನೋಡಲಿವೆ.”

07034027 ಯುಧಿಷ್ಠಿರ ಉವಾಚ|

07034027a ಏವಂ ತೇ ಭಾಷಮಾಣಸ್ಯ ಬಲಂ ಸೌಭದ್ರ ವರ್ಧತಾಂ|

07034027c ಯಸ್ತ್ವಮುತ್ಸಹಸೇ ಭೇತ್ತುಂ ದ್ರೋಣಾನೀಕಂ ಸುದುರ್ಭಿದಂ||

07034028a ರಕ್ಷಿತಂ ಪುರುಷವ್ಯಾಘ್ರೈರ್ಮಹೇಷ್ವಾಸೈಃ ಪ್ರಹಾರಿಭಿಃ|

07034028c ಸಾಧ್ಯರುದ್ರಮರುತ್ಕಲ್ಪೈರ್ವಸ್ವಗ್ನ್ಯಾದಿತ್ಯವಿಕ್ರಮೈಃ||

ಯುಧಿಷ್ಠಿರನು ಹೇಳಿದನು: “ಸೌಭದ್ರ! ಹೀಗೆ ಮಾತನಾಡುತ್ತಿರುವ ನಿನ್ನ ಬಲವು ವರ್ಧಿಸಲಿ. ದುರ್ಭೇದ್ಯವಾದ - ಪುರುಷವ್ಯಾಘ್ರರಿಂದ, ಮಹೇಷ್ವಾಸರಿಂದ, ಪ್ರಹಾರಿಗಳಿಂದ, ಸಾಧ್ಯ-ರುದ್ರ-ಮರುತ್-ಕಲ್ಪ-ವಸು-ಅಗ್ನಿ-ಆದಿತ್ಯರ ವಿಕ್ರಮಗಳನ್ನು ಹೊಂದಿರುವವರಿಂದ ರಕ್ಷಿತವಾದ ದ್ರೋಣನ ಸೇನೆಯನ್ನು ಭೇದಿಸಲು ಉತ್ಸುಕನಾಗಿರುವೆಯಲ್ಲವೇ?””

07034029 ಸಂಜಯ ಉವಾಚ|

07034029a ತಸ್ಯ ತದ್ವಚನಂ ಶ್ರುತ್ವಾ ಸ ಯಂತಾರಮಚೋದಯತ್|

07034029c ಸುಮಿತ್ರಾಶ್ವಾನ್ರಣೇ ಕ್ಷಿಪ್ರಂ ದ್ರೋಣಾನೀಕಾಯ ಚೋದಯ||

ಸಂಜಯನು ಹೇಳಿದನು: “ಅವನ ಆ ಮಾತುಗಳನ್ನು ಕೇಳಿ ಅವನು ತನ್ನ ಸಾರಥಿಯನ್ನು ಪ್ರಚೋದಿಸಿದನು: “ಸುಮಿತ್ರ! ಕ್ಷಿಪ್ರವಾಗಿ ಕುದುರೆಗಳನ್ನು ದ್ರೋಣನ ಸೇನೆಯ ಕಡೆ ಓಡಿಸು!””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪ್ರತಿಜ್ಞಾಯಾಂ ಚತುಸ್ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪ್ರತಿಜ್ಞೆ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.

Image result for trees against white background

Comments are closed.