Drona Parva: Chapter 33

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೩

ಹದಿಮೂರನೆಯ ದಿನದ ಯುದ್ಧ

ಅಭಿಮನ್ಯುವಿನ ಗುಣಗಳ ವರ್ಣನೆ (೧-೧೦). ಚಕ್ರವ್ಯೂಹ ನಿರ್ಮಾಣ (೧೧-೨೦).

07033001 ಸಂಜಯ ಉವಾಚ|

07033001a ಸಮರೇಽತ್ಯುಗ್ರಕರ್ಮಾಣಃ ಕರ್ಮಭಿರ್ವ್ಯಂಜಿತಶ್ರಮಾಃ|

07033001c ಸಕೃಷ್ಣಾಃ ಪಾಂಡವಾಃ ಪಂಚ ದೇವೈರಪಿ ದುರಾಸದಾಃ||

ಸಂಜಯನು ಹೇಳಿದನು: “ಸಮರದಲ್ಲಿ ಉಗ್ರಕರ್ಮಿಗಳಾದ, ಶ್ರಮಿಸಿ ಕರ್ಮಗಳನ್ನು ಮಾಡಿತೋರಿಸುವ ಐವರು ಪಾಂಡವರು ಕೃಷ್ಣನನ್ನೂ ಸೇರಿ, ದೇವತೆಗಳಿಗೂ ಸೋಲಿಸಲು ಅಸಾಧ್ಯರು.

07033002a ಸತ್ತ್ವಕರ್ಮಾನ್ವಯೈರ್ಬುದ್ಧ್ಯಾ ಪ್ರಕೃತ್ಯಾ ಯಶಸಾ ಶ್ರಿಯಾ|

07033002c ನೈವ ಭೂತೋ ನ ಭವಿತಾ ಕೃಷ್ಣತುಲ್ಯಗುಣಃ ಪುಮಾನ್||

ಸತ್ತ್ವಗುಣ, ಸತ್ಕರ್ಮ, ವಂಶ, ಬುದ್ಧಿ, ಕೀರ್ತಿ, ಯಶಸ್ಸು ಮತ್ತು ಸಂಪತ್ತು ಇವುಗಳಲ್ಲಿ ಕೃಷ್ಣನಿಗೆ ಸಮನಾದ ಪುರುಷನು ಹಿಂದೆ ಎಂದೂ ಇರಲಿಲ್ಲ. ಮುಂದೆ ಎಂದೂ ಇರಲಾರ.

07033003a ಸತ್ಯಧರ್ಮಪರೋ ದಾತಾ ವಿಪ್ರಪೂಜಾದಿಭಿರ್ಗುಣೈಃ|

07033003c ಸದೈವ ತ್ರಿದಿವಂ ಪ್ರಾಪ್ತೋ ರಾಜಾ ಕಿಲ ಯುಧಿಷ್ಠಿರಃ||

ಸತ್ಯಧರ್ಮಪರಾಯಣನೂ ಜಿತೇಂದ್ರಿಯನೂ ಆದ ರಾಜಾ ಯುಧಿಷ್ಠಿರನು ಬ್ರಾಹ್ಮಣ ಸತ್ಕಾರವೇ ಮೊದಲಾದ ಸದ್ಗುಣಗಳಿಂದ ಈಗಾಗಲೆ ಸ್ವರ್ಗವನ್ನು ಪಡೆದುಕೊಂಡವನಾಗಿದ್ದಾನೆ.

07033004a ಯುಗಾಂತೇ ಚಾಂತಕೋ ರಾಜನ್ಜಾಮದಗ್ನ್ಯಶ್ಚ ವೀರ್ಯವಾನ್|

07033004c ರಣಸ್ಥೋ ಭೀಮಸೇನಶ್ಚ ಕಥ್ಯಂತೇ ಸದೃಶಾಸ್ತ್ರಯಃ||

ರಾಜನ್! ಯುಂಗಾಂತದಲ್ಲಿ ಯಮ, ವೀರ್ಯವಾನ್ ಜಾಮದಗ್ನಿ ಮತ್ತು ರಣದಲ್ಲಿರುವ ಭೀಮಸೇನ ಈ ಮೂವರೂ ಒಂದೇ ಸಮರೆಂದು ಹೇಳುತ್ತಾರೆ.

07033005a ಪ್ರತಿಜ್ಞಾಕರ್ಮದಕ್ಷಸ್ಯ ರಣೇ ಗಾಂಡೀವಧನ್ವನಃ|

07033005c ಉಪಮಾಂ ನಾಧಿಗಚ್ಚಾಮಿ ಪಾರ್ಥಸ್ಯ ಸದೃಶೀಂ ಕ್ಷಿತೌ||

ರಣದಲ್ಲಿ ಪ್ರತಿಜ್ಞಾಪೂರ್ವಕವಾಗಿ ಕರ್ಮಗಳನ್ನು ಮಾಡಲು ದಕ್ಷನಾದ ಗಾಂಡೀವ ಧನ್ವಿ ಪಾರ್ಥನಿಗೆ ಸದೃಶ ಉಪಮೆಯು ನನಗೆ ಪ್ರಪಂಚದಲ್ಲಿ ಯಾರೂ ಸಿಕ್ಕಿರುವುದಿಲ್ಲ.

07033006a ಗುರುವಾತ್ಸಲ್ಯಮತ್ಯಂತಂ ನೈಭೃತ್ಯಂ ವಿನಯೋ ದಮಃ|

07033006c ನಕುಲೇಽಪ್ರಾತಿರೂಪ್ಯಂ ಚ ಶೌರ್ಯಂ ಚ ನಿಯತಾನಿ ಷಟ್||

ಅತ್ಯಂತ ಗುರುವಾತ್ಸಲ್ಯ, ಮಂತ್ರಾಲೋಚನೆಯನ್ನು ರಹಸ್ಯವಾಗಿಟ್ಟುಕೊಳ್ಳುವುದು, ವಿನಯ, ಇಂದ್ರಿಯ ಸಂಯಮ, ಅಪ್ರತಿಮ ರೂಪ-ಶೌರ್ಯ ಮತ್ತು ಸಂಯಮ ಈ ಆರು ಗುಣಗಳು ನಕುಲನಲ್ಲಿವೆ.

07033007a ಶ್ರುತಗಾಂಭೀರ್ಯಮಾಧುರ್ಯಸತ್ತ್ವವೀರ್ಯಪರಾಕ್ರಮೈಃ|

07033007c ಸದೃಶೋ ದೇವಯೋರ್ವೀರಃ ಸಹದೇವಃ ಕಿಲಾಶ್ವಿನೋಃ||

ಪಾಂಡಿತ್ಯ, ಗಾಂಭೀರ್ಯ, ಮಾಧುರ್ಯ, ಸತ್ತ್ವ, ವೀರ-ಪರಾಕ್ರಮಗಳಲ್ಲಿ ವೀರ ಸಹದೇವನು ದೇವ ಅಶ್ವಿನಿಯರ ಸದೃಶ.

07033008a ಯೇ ಚ ಕೃಷ್ಣೇ ಗುಣಾಃ ಸ್ಫೀತಾಃ ಪಾಂಡವೇಷು ಚ ಯೇ ಗುಣಾಃ|

07033008c ಅಭಿಮನ್ಯೌ ಕಿಲೈಕಸ್ಥಾ ದೃಶ್ಯಂತೇ ಗುಣಸಂಚಯಾಃ||

ಕೃಷ್ಣನಲ್ಲಿ ಯಾವ ಉಜ್ಜ್ವಲ ಗುಣಗಳಿವೆಯೋ, ಪಾಂಡವರಲ್ಲಿ ಯಾವ ಗುಣಗಳಿವೆಯೋ ಆ ಗುಣಸಂಚಯಗಳೆಲ್ಲವೂ ಅಭಿಮನ್ಯುವಿನಲ್ಲಿ ಇದ್ದುದು ಕಂಡುಬರುತ್ತಿತ್ತು.

07033009a ಯುಧಿಷ್ಠಿರಸ್ಯ ಧೈರ್ಯೇಣ ಕೃಷ್ಣಸ್ಯ ಚರಿತೇನ ಚ|

07033009c ಕರ್ಮಭಿರ್ಭೀಮಸೇನಸ್ಯ ಸದೃಶೋ ಭೀಮಕರ್ಮಣಃ||

ಧೈರ್ಯದಲ್ಲಿ ಯುಧಿಷ್ಠಿರನ, ಚಾರಿತ್ರ್ಯಲ್ಲಿ ಕೃಷ್ಣನ, ಕರ್ಮಗಳಲ್ಲಿ ಭೀಮಕರ್ಮಿ ಭೀಮಸೇನನ ಸದೃಶನಾಗಿದ್ದನು.

07033010a ಧನಂಜಯಸ್ಯ ರೂಪೇಣ ವಿಕ್ರಮೇಣ ಶ್ರುತೇನ ಚ|

07033010c ವಿನಯಾತ್ಸಹದೇವಸ್ಯ ಸದೃಶೋ ನಕುಲಸ್ಯ ಚ||

ರೂಪ-ವಿಕ್ರಮಗಳಲ್ಲಿ ಧನಂಜಯನ, ಮತ್ತು ಪಾಂಡಿತ್ಯ-ವಿನಯಗಳಲ್ಲಿ ಸಹದೇವ-ನಕುಲರ ಸದೃಶನಾಗಿದ್ದನು.”

07033011 ಧೃತರಾಷ್ಟ್ರ ಉವಾಚ|

07033011a ಅಭಿಮನ್ಯುಮಹಂ ಸೂತ ಸೌಭದ್ರಮಪರಾಜಿತಂ|

07033011c ಶ್ರೋತುಮಿಚ್ಚಾಮಿ ಕಾರ್ತ್ಸ್ನ್ಯೆನ ಕಥಮಾಯೋಧನೇ ಹತಃ||

ಧೃತರಾಷ್ಟ್ರನು ಹೇಳಿದನು: “ಸೂತ! ಅಪರಾಜಿತ ಸೌಭದ್ರ ಅಭಿಮನ್ಯುವು ಹತನಾದುದನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ. ಯುದ್ಧಮಾಡುತ್ತಿರುವಾಗ ಅವನು ಹೇಗೆ ಹತನಾದ?”

07033012 ಸಂಜಯ ಉವಾಚ|

07033012a ಚಕ್ರವ್ಯೂಹೋ ಮಹಾರಾಜ ಆಚಾರ್ಯೇಣಾಭಿಕಲ್ಪಿತಃ|

07033012c ತತ್ರ ಶಕ್ರೋಪಮಾಃ ಸರ್ವೇ ರಾಜಾನೋ ವಿನಿವೇಶಿತಾಃ||

ಸಂಜಯನು ಹೇಳಿದನು: “ಮಹಾರಾಜ! ಆಚಾರ್ಯರು ರಚಿಸಿದ ಚಕ್ರವ್ಯೂಹದಲ್ಲಿ ಇಂದ್ರಸಮಾನ ರಾಜರೆಲ್ಲರೂ ಪ್ರತಿಷ್ಠಿತರಾಗಿದ್ದರು.

07033013a ಸಂಘಾತೋ ರಾಜಪುತ್ರಾಣಾಂ ಸರ್ವೇಷಾಮಭವತ್ತದಾ|

07033013c ಕೃತಾಭಿಸಮಯಾಃ ಸರ್ವೇ ಸುವರ್ಣವಿಕೃತಧ್ವಜಾಃ||

ಆಗ ಅಲ್ಲಿ ಎಲ್ಲ ಪ್ರತಿಜ್ಞೆಮಾಡಿದ್ದ, ಸುವರ್ಣವಿಕೃತಧ್ವಜ ರಾಜಪುತ್ರರ ಒಕ್ಕೂಟವು ಸೇರಿತ್ತು.

07033014a ರಕ್ತಾಂಬರಧರಾಃ ಸರ್ವೇ ಸರ್ವೇ ರಕ್ತವಿಭೂಷಣಾಃ|

07033014c ಸರ್ವೇ ರಕ್ತಪತಾಕಾಶ್ಚ ಸರ್ವೇ ವೈ ಹೇಮಮಾಲಿನಃ||

ಎಲ್ಲರೂ ಕೆಂಪು ವಸ್ತ್ರಗಳನ್ನು ಧರಿಸಿದ್ದರು. ಎಲ್ಲರೂ ಕೆಂಪು ಆಭರಣಗಳನ್ನು ಧರಿಸಿದ್ದರು. ಎಲ್ಲರಿಗೂ ಕೆಂಪು ಧ್ವಜಗಳಿದ್ದವು. ಎಲ್ಲರೂ ಚಿನ್ನದ ಮಾಲೆಗಳನ್ನು ಧರಿಸಿದ್ದರು.

07033015a ತೇಷಾಂ ದಶಸಹಸ್ರಾಣಿ ಬಭೂವುರ್ದೃಢಧನ್ವಿನಾಂ|

07033015c ಪೌತ್ರಂ ತವ ಪುರಸ್ಕೃತ್ಯ ಲಕ್ಷ್ಮಣಂ ಪ್ರಿಯದರ್ಶನಂ||

ನಿನ್ನ ಮೊಮ್ಮಗ ಪ್ರಿಯದರ್ಶನ ಲಕ್ಷ್ಮಣನನ್ನು ಮುಂದೆ ಇರಿಸಿಕೊಂಡಿದ್ದ ಆ ದೃಢಧನ್ವಿಗಳ ಸಂಖ್ಯೆ ಹತ್ತುಸಾವಿರವಾಗಿತ್ತು.

07033016a ಅನ್ಯೋನ್ಯಸಮದುಃಖಾಸ್ತೇ ಅನ್ಯೋನ್ಯಸಮಸಾಹಸಾಃ|

07033016c ಅನ್ಯೋನ್ಯಂ ಸ್ಪರ್ಧಮಾನಾಶ್ಚ ಅನ್ಯೋನ್ಯಸ್ಯ ಹಿತೇ ರತಾಃ||

ಒಬ್ಬನಿಗಾಗುವ ದುಃಖವು ಎಲ್ಲರಿಗೂ ಸಮಾನವೆಂದು ಭಾವಿಸಿದ್ದರು. ಸಾಹಸದಲ್ಲಿ ಅನ್ಯೋನ್ಯರ ಸಮನಾಗಿದ್ದರು. ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿದ್ದರು. ಮತ್ತು ಅನ್ಯೋನ್ಯರ ಹಿತಾಸಕ್ತಿಯುಳ್ಳವರಾಗಿದ್ದರು.

07033017a ಕರ್ಣದುಃಶಾಸನಕೃಪೈರ್ವೃತೋ ರಾಜಾ ಮಹಾರಥೈಃ|

07033017c ದೇವರಾಜೋಪಮಃ ಶ್ರೀಮಾನ್ ಶ್ವೇತಚ್ಚತ್ರಾಭಿಸಂವೃತಃ|

07033017e ಚಾಮರವ್ಯಜನಾಕ್ಷೇಪೈರುದಯನ್ನಿವ ಭಾಸ್ಕರಃ||

07033018a ಪ್ರಮುಖೇ ತಸ್ಯ ಸೈನ್ಯಸ್ಯ ದ್ರೋಣೋಽವಸ್ಥಿತನಾಯಕೇ|

ಕರ್ಣ-ದುಃಶಾಸನರಿಂದ ಮತ್ತು ಮಹಾರಥ ರಾಜರಿಂದ ಪರಿವೃತನಾಗಿ, ದೇವರಾಜನಂತಿದ್ದ ಶ್ರೀಮಾನ್ ಶ್ವೇತಚತ್ರದಡಿಯಲ್ಲಿ, ಚಾಮರ ಬೀಸಣಿಗೆಗಳನ್ನು ಬೀಸುತ್ತಿರಲು, ಉದಯಿಸುತ್ತಿರುವ ಭಾಸ್ಕರನಂತೆ ಆ ಸೈನ್ಯದ ಪ್ರಮುಖ ನಾಯಕನಾಗಿ ದ್ರೋಣನು ವ್ಯವಸ್ಥಿತನಾಗಿದ್ದನು.

07033018c ಸಿಂಧುರಾಜಸ್ತಥಾತಿಷ್ಠಚ್ಚ್ರೀಮಾನ್ಮೇರುರಿವಾಚಲಃ||

07033019a ಸಿಂಧುರಾಜಸ್ಯ ಪಾರ್ಶ್ವಸ್ಥಾ ಅಶ್ವತ್ಥಾಮಪುರೋಗಮಾಃ|

ಅಲ್ಲಿ ಮೇರು ಪರ್ವತದಂತೆ ಶ್ರೀಮಾನ್ ಸಿಂಧುರಾಜನು ನಿಂತಿದ್ದನು. ಸಿಂಧುರಾಜನ ಪಕ್ಕದಲ್ಲಿ ಅಶ್ವತ್ಥಾಮನೇ ಮೊದಲಾದವರು ನಿಂತಿದ್ದರು.

07033019c ಸುತಾಸ್ತವ ಮಹಾರಾಜ ತ್ರಿಂಶತ್ತ್ರಿದಶಸನ್ನಿಭಾಃ||

07033020a ಗಾಂಧಾರರಾಜಃ ಕಿತವಃ ಶಲ್ಯೋ ಭೂರಿಶ್ರವಾಸ್ತಥಾ|

07033020c ಪಾರ್ಶ್ವತಃ ಸಿಂಧುರಾಜಸ್ಯ ವ್ಯರಾಜಂತ ಮಹಾರಥಾಃ||

ಮಹಾರಾಜ! ದೇವ ಸನ್ನಿಭರಾದ ನಿನ್ನ ಮೂವತ್ತು ಮಕ್ಕಳೂ, ಜೂಜುಗಾರ ಗಾಂಧಾರರಾಜನೂ, ಮಹಾರಥ ಶಲ್ಯ-ಭೂರಿಶ್ರವರೂ ಸಿಂಧುರಾಜನ ಪಕ್ಕದಲ್ಲಿ ವಿರಾಜಮಾನರಾಗಿದ್ದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಚಕ್ರವ್ಯೂಹನಿರ್ಮಾಣೇ ತ್ರಯಸ್ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಚಕ್ರವ್ಯೂಹನಿರ್ಮಾಣ ಎನ್ನುವ ಮೂವತ್ಮೂರನೇ ಅಧ್ಯಾಯವು.

Image result for trees against white background

Comments are closed.