Drona Parva: Chapter 32

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೩೨

ದುರ್ಯೋಧನ-ದ್ರೋಣರ ಸಂವಾದ (೧-೧೪). ಅಭಿಮನ್ಯುವಧೆಯ ಸಂಕ್ಷೇಪಕಥನ (೧೫-೨೦). ಧೃತರಾಷ್ಟ್ರನ ಪ್ರಶ್ನೆ (೨೧-೨೬).

07032001 ಸಂಜಯ ಉವಾಚ|

07032001a ಪೂರ್ವಮಸ್ಮಾಸು ಭಗ್ನೇಷು ಫಲ್ಗುನೇನಾಮಿತೌಜಸಾ|

07032001c ದ್ರೋಣೇ ಚ ಮೋಘಸಂಕಲ್ಪೇ ರಕ್ಷಿತೇ ಚ ಯುಧಿಷ್ಠಿರೇ||

ಸಂಜಯನು ಹೇಳಿದನು: “ಅಮಿತೌಜಸ ಫಲ್ಗುನನು ನಮ್ಮನ್ನು ಮೊದಲೇ ಭಗ್ನಗೊಳಿಸಿದ್ದನು. ಮತ್ತು ಯುಧಿಷ್ಠಿರನನ್ನು ರಕ್ಷಿಸಿ ದ್ರೋಣನ ಸಂಕಲ್ಪವನ್ನು ಅಸಫಲಗೊಳಿಸಿದ್ದನು.

07032002a ಸರ್ವೇ ವಿಧ್ವಸ್ತಕವಚಾಸ್ತಾವಕಾ ಯುಧಿ ನಿರ್ಜಿತಾಃ|

07032002c ರಜಸ್ವಲಾ ಭೃಶೋದ್ವಿಗ್ನಾ ವೀಕ್ಷಮಾಣಾ ದಿಶೋ ದಶ||

ನಿನ್ನವರೆಲ್ಲರೂ ಯುದ್ಧದಲ್ಲಿ ಸೋತು, ಕವಚಗಳನ್ನು ಕಳೆದುಕೊಂಡು ಧೂಳಿನಿಂತ ತುಂಬಿಕೊಂಡು, ತುಂಬಾ ಉದ್ವಿಗ್ನರಾಗಿ ದಿಕ್ಕು ದಿಕ್ಕುಗಳನ್ನು ನೋಡುತ್ತಿದ್ದರು.

07032003a ಅವಹಾರಂ ತತಃ ಕೃತ್ವಾ ಭಾರದ್ವಾಜಸ್ಯ ಸಮ್ಮತೇ|

07032003c ಲಬ್ಧಲಕ್ಷ್ಯೈಃ ಪರೈರ್ದೀನಾ ಭೃಶಾವಹಸಿತಾ ರಣೇ||

ಭಾರದ್ವಾಜನ ಸಮ್ಮತಿಯಂತೆ ಯುದ್ಧದಿಂದ ಹಿಂದಿರುಗಿದರು. ಅರ್ಜುನನ ಗುರಿಗೆ ಸಿಲುಕಿದ್ದ ಅವರು ರಣದಲ್ಲಿ ಶತ್ರುಗಳಿಂದ ದೀನರಾಗಿಸಿಕೊಂಡಿದ್ದರು ಮತ್ತು ಅವಹೇಳನಕ್ಕೊಳಗಾಗಿದ್ದರು.

07032004a ಶ್ಲಾಘಮಾನೇಷು ಭೂತೇಷು ಫಲ್ಗುನಸ್ಯಾಮಿತಾನ್ಗುಣಾನ್|

07032004c ಕೇಶವಸ್ಯ ಚ ಸೌಹಾರ್ದೇ ಕೀರ್ತ್ಯಮಾನೇಽರ್ಜುನಂ ಪ್ರತಿ|

07032004e ಅಭಿಶಸ್ತಾ ಇವಾಭೂವನ್ಧ್ಯಾನಮೂಕತ್ವಮಾಸ್ಥಿತಾಃ||

ಎಲ್ಲ ಭೂತಗಳು ಫಲ್ಗುನನ ಅಮಿತ ಗುಣಗಳನ್ನು ಮತ್ತು ಕೇಶವನ ಸೌಹಾರ್ದತೆಯನ್ನು ಶ್ಲಾಘಿಸುತ್ತಿದ್ದವು. ಅರ್ಜುನನ ಗುಣಗಾನವನ್ನೇ ಮಾಡುತ್ತಿದ್ದರು. ನಿನ್ನವರು ಮಾತ್ರ ಕಳಂಕಿತರಾದವರಂತೆ ಧ್ಯಾನಮೂಕರಾಗಿದ್ದರು.

07032005a ತತಃ ಪ್ರಭಾತಸಮಯೇ ದ್ರೋಣಂ ದುರ್ಯೋಧನೋಽಬ್ರವೀತ್|

07032005c ಪ್ರಣಯಾದಭಿಮಾನಾಚ್ಚ ದ್ವಿಷದ್ವೃದ್ಧ್ಯಾ ಚ ದುರ್ಮನಾಃ|

07032005e ಶೃಣ್ವತಾಂ ಸರ್ವಭೂತಾನಾಂ ಸಂರಬ್ಧೋ ವಾಕ್ಯಕೋವಿದಃ||

ಆಗ ಪ್ರಭಾತಸಮಯದಲ್ಲಿ ಶತ್ರುಗಳ ಗೆಲುವಿನಿಂದ ಮನಸ್ಸು ಕೆಟ್ಟುಹೋಗಿ ಸಂರಬ್ಧನಾಗಿದ್ದ ವಾಕ್ಯಕೋವಿದ ದುರ್ಯೋಧನನು ಎಲ್ಲರಿಗೂ ಕೇಳುವಂತೆ ಪ್ರಣಯ ಮತ್ತು ಅಭಿಮಾನಗಳಿಂದ ದ್ರೋಣನಿಗೆ ಹೇಳಿದನು.

07032006a ನೂನಂ ವಯಂ ವಧ್ಯಪಕ್ಷೇ ಭವತೋ ಬ್ರಹ್ಮವಿತ್ತಮ|

07032006c ತಥಾ ಹಿ ನಾಗ್ರಹೀಃ ಪ್ರಾಪ್ತಂ ಸಮೀಪೇಽದ್ಯ ಯುಧಿಷ್ಠಿರಂ||

“ಬ್ರಹ್ಮವಿತ್ತಮ! ನಾವೆಲ್ಲರೂ ನಿಮ್ಮ ಶತ್ರುಪಕ್ಷದಲ್ಲಿದ್ದೇವೆ ಎಂದು ತೋರುತ್ತದೆ. ಆದುದರಿಂದಲೇ ಯುಧಿಷ್ಠರನು ಸಮೀಪದಲ್ಲಿ ದೊರಕಿದ್ದರೂ ಅವನನ್ನು ನೀವು ಸೆರೆಹಿಡಿಯಲಿಲ್ಲ!

07032007a ಇಚ್ಚತಸ್ತೇ ನ ಮುಚ್ಯೇತ ಚಕ್ಷುಃಪ್ರಾಪ್ತೋ ರಣೇ ರಿಪುಃ|

07032007c ಜಿಘೃಕ್ಷತೋ ರಕ್ಷ್ಯಮಾಣಃ ಸಾಮರೈರಪಿ ಪಾಂಡವೈಃ||

ನೀವು ಬಯಸಿದರೆ ರಣದಲ್ಲಿ ನಿಮ್ಮ ಕಣ್ಣಿಗೆ ಸಿಲುಕಿದ ಯಾವ ಶತ್ರುವೂ ಅಮರರಿಂದಾಗಲೀ ಪಾಂಡವರಿಂದಾಗಲೀ ರಕ್ಷಿಸಲ್ಪಡುತ್ತಿದ್ದರೂ ನಿಮ್ಮಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ.

07032008a ವರಂ ದತ್ತ್ವಾ ಮಮ ಪ್ರೀತಃ ಪಶ್ಚಾದ್ವಿಕೃತವಾನಸಿ|

07032008c ಆಶಾಭಂಗಂ ನ ಕುರ್ವಂತಿ ಭಕ್ತಸ್ಯಾರ್ಯಾಃ ಕಥಂ ಚನ||

ನನ್ನ ಮೇಲೆ ಪ್ರೀತರಾಗಿ ವರವನ್ನಿತ್ತು ನಂತರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಆರ್ಯರು ಎಂದೂ ಭಕ್ತರ ಆಶಾಭಂಗವನ್ನು ಎಸಗುವುದಿಲ್ಲ.”

07032009a ತತೋಽಪ್ರೀತಸ್ತಥೋಕ್ತಃ ಸ ಭಾರದ್ವಾಜೋಽಬ್ರವೀನ್ನೃಪಂ|

07032009c ನಾರ್ಹಸೇ ಮಾನ್ಯಥಾ ಜ್ಞಾತುಂ ಘಟಮಾನಂ ತವ ಪ್ರಿಯೇ||

ಆಗ ಅಪ್ರೀತನಾಗಿ ಭಾರದ್ವಾಜನು ನೃಪನಿಗೆ ಹೇಳಿದನು: “ನಿನಗೋಸ್ಕರವಾಗಿ ಸರ್ವ ಪ್ರಯತ್ನಮಾಡಿ ದುಡಿಯುತ್ತಿದ್ದವನ ಕುರಿತು ಹಾಗೆ ಆಲೋಚಿಸುವುದು ಸರಿಯಲ್ಲ.

07032010a ಸಸುರಾಸುರಗಂಧರ್ವಾಃ ಸಯಕ್ಷೋರಗರಾಕ್ಷಸಾಃ|

07032010c ನಾಲಂ ಲೋಕಾ ರಣೇ ಜೇತುಂ ಪಾಲ್ಯಮಾನಂ ಕಿರೀಟಿನಾ||

ರಣದಲ್ಲಿ ಕಿರೀಟಿಯಿಂದ ಪಾಲಿತನಾದವನನ್ನು ಜಯಿಸಲು ಲೋಕದಲ್ಲಿ ಸುರಾಸುರಗಂಧರ್ವರಿಗೂ ಯಕ್ಷೋರಗರಾಕ್ಷಸರಿಗೂ ಸಾಧ್ಯವಿಲ್ಲ.

07032011a ವಿಶ್ವಸೃಗ್ಯತ್ರ ಗೋವಿಂದಃ ಪೃತನಾರಿಸ್ತಹಾರ್ಜುನಃ|

07032011c ತತ್ರ ಕಸ್ಯ ಬಲಂ ಕ್ರಾಮೇದನ್ಯತ್ರ ತ್ರ್ಯಂಬಕಾತ್ಪ್ರಭೋಃ||

ಎಲ್ಲಿ ವಿಶ್ವದ ಸೃಷ್ಟಿಕರ್ತನಾದ ಗೋವಿಂದನಿದ್ದಾನೋ ಎಲ್ಲಿ ಸೇನಾಧಿಪತಿ ಅರ್ಜುನನಿದ್ದಾನೋ ಅಲ್ಲಿ ಪ್ರಭು ತ್ರ್ಯಂಬಕನ ಬಲವನ್ನು ಬಿಟ್ಟು ಬೇರೆ ಯಾರ ಬಲವು ತಾನೇ ನಾಟೀತು?

07032012a ಸತ್ಯಂ ತು ತೇ ಬ್ರವೀಮ್ಯದ್ಯ ನೈತಜ್ಜಾತ್ವನ್ಯಥಾ ಭವೇತ್|

07032012c ಅದ್ಯೈಷಾಂ ಪ್ರವರಂ ವೀರಂ ಪಾತಯಿಷ್ಯೇ ಮಹಾರಥಂ||

ಇಂದು ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇದು ಅನ್ಯಥಾ ಆಗುವುದಿಲ್ಲ ಎಂದು ತಿಳಿ. ಇಂದು ನಾನು ಓರ್ವ ಮುಖ್ಯ ವೀರ ಮಹಾರಥನನ್ನು ಕೆಡವುತ್ತೇನೆ.

07032013a ತಂ ಚ ವ್ಯೂಹಂ ವಿಧಾಸ್ಯಾಮಿ ಯೋಽಭೇದ್ಯಸ್ತ್ರಿದಶೈರಪಿ|

07032013c ಯೋಗೇನ ಕೇನ ಚಿದ್ರಾಜನ್ನರ್ಜುನಸ್ತ್ವಪನೀಯತಾಂ||

ಅದಕ್ಕಾಗಿ ನಾನು ದೇವತೆಗಳಿಗೂ ಅಭೇದ್ಯವಾದ ವ್ಯೂಹವನ್ನು ರಚಿಸುತ್ತೇನೆ. ಆದರೆ ಯಾವುದಾದರೂ ಉಪಾಯದಿಂದ ನೀನು ಅರ್ಜುನನನ್ನು ಬೇರೆಕಡೆ ಒಯ್ಯಬೇಕು.

07032014a ನ ಹ್ಯಜ್ಞಾತಮಸಾಧ್ಯಂ ವಾ ತಸ್ಯ ಸಂಖ್ಯೇಽಸ್ತಿ ಕಿಂ ಚನ|

07032014c ತೇನ ಹ್ಯುಪಾತ್ತಂ ಬಲವತ್ಸರ್ವಜ್ಞಾನಮಿತಸ್ತತಃ||

ಏಕೆಂದರೆ ಅವನಿಗೆ ಯುದ್ಧದ ವಿಷಯದಲ್ಲಿ ತಿಳಿಯದೇ ಇದ್ದುದು ಮತ್ತು ಅಸಾಧ್ಯವಾದುದು ಯಾವುದೂ ಇಲ್ಲ. ಅವನು ಸೇನೆಗಳ ಕುರಿತು ಸರ್ವ ಜ್ಞಾನವನ್ನೂ ಇಲ್ಲಿಂದ ಮತ್ತು ಬೇರೆಕಡೆಗಳಿಂದ ಪಡೆದುಕೊಂಡಿದ್ದಾನೆ.”

07032015a ದ್ರೋಣೇನ ವ್ಯಾಹೃತೇ ತ್ವೇವಂ ಸಂಶಪ್ತಕಗಣಾಃ ಪುನಃ|

07032015c ಆಹ್ವಯನ್ನರ್ಜುನಂ ಸಂಖ್ಯೇ ದಕ್ಷಿಣಾಮಭಿತೋ ದಿಶಂ||

ದ್ರೋಣನು ಹೀಗೆ ಹೇಳಲು ಪುನಃ ಸಂಶಪ್ತಕಗಣಗಳು ರಣದ ದಕ್ಷಿಣಭಾಗಕ್ಕೆ ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿದರು.

07032016a ತತ್ರಾರ್ಜುನಸ್ಯಾಥ ಪರೈಃ ಸಾರ್ಧಂ ಸಮಭವದ್ರಣಃ|

07032016c ತಾದೃಶೋ ಯಾದೃಶೋ ನಾನ್ಯಃ ಶ್ರುತೋ ದೃಷ್ಟೋಽಪಿ ವಾ ಕ್ವ ಚಿತ್||

ಅಲ್ಲಿ ಅರ್ಜುನ ಮತ್ತು ಶತ್ರುಗಳ ನಡುವೆ ಎಲ್ಲಿಯೂ ಎಂದೂ ಕಂಡು-ಕೇಳಿರದಂತಹ ಕಾಳಗವು ನಡೆಯಿತು.

07032017a ತತೋ ದ್ರೋಣೇನ ವಿಹಿತೋ ರಾಜನ್ವ್ಯೂಹೋ ವ್ಯರೋಚತ|

07032017c ಚರನ್ಮಧ್ಯಂದಿನೇ ಸೂರ್ಯಃ ಪ್ರತಪನ್ನಿವ ದುರ್ದೃಶಃ||

ರಾಜನ್! ಆಗ ದ್ರೋಣನು ಮಧ್ಯಾಹ್ನದ ಸೂರ್ಯನು ಸುಡುವಂತೆ ನೋಡಲೂ ಅಸಾದ್ಯವಾದ ವ್ಯೂಹವನ್ನು ರಚಿಸಿದನು.

07032018a ತಂ ಚಾಭಿಮನ್ಯುರ್ವಚನಾತ್ಪಿತುರ್ಜ್ಯೇಷ್ಠಸ್ಯ ಭಾರತ|

07032018c ಬಿಭೇದ ದುರ್ಭಿದಂ ಸಂಖ್ಯೇ ಚಕ್ರವ್ಯೂಹಮನೇಕಧಾ||

ಭಾರತ! ರಣದಲ್ಲಿ ಭೇದಿಸಲಸಾಧ್ಯವಾದ ಆ ಚಕ್ರವ್ಯೂಹವನ್ನು ಕೂಡ ಅಭಿಮನ್ಯುವು ದೊಡ್ಡಪ್ಪನ ಮಾತಿನಂತೆ ಅನೇಕ ಪ್ರಕಾರವಾಗಿ ಭೇದಿಸಿದನು.

07032019a ಸ ಕೃತ್ವಾ ದುಷ್ಕರಂ ಕರ್ಮ ಹತ್ವಾ ವೀರಾನ್ ಸಹಸ್ರಶಃ|

07032019c ಷಟ್ಸು ವೀರೇಷು ಸಂಸಕ್ತೋ ದೌಃಶಾಸನಿವಶಂ ಗತಃ||

ಅವನು ದುಷ್ಕರ ಕರ್ಮಗಳನ್ನು ಮಾಡಿ ಸಹಸ್ರಾರು ವೀರರನ್ನು ಸಂಹರಿಸಿ ಆರು ವೀರರೊಂದಿಗೆ ಯುದ್ಧದಲ್ಲಿ ತೊಡಗಿರುವಾಗ ದುಃಶಾಸನನ ಮಗನಿಂದ ಹತನಾದನು.

07032020a ವಯಂ ಪರಮಸಂಹೃಷ್ಟಾಃ ಪಾಂಡವಾಃ ಶೋಕಕರ್ಶಿತಾಃ|

07032020c ಸೌಭದ್ರೇ ನಿಹತೇ ರಾಜನ್ನವಹಾರಮಕುರ್ವತ||

ರಾಜನ್! ಅದರಿಂದ ನಾವು ಪರಮ ಹರ್ಷಿತರಾದೆವು. ಪಾಂಡವರು ಶೋಕಾವಿಷ್ಟರಾದರು. ಸೌಭದ್ರನು ಹತನಾಗಲು ಆ ದಿನದ ಯುದ್ಧವು ನಿಂತಿತು.”

07032021 ಧೃತರಾಷ್ಟ್ರ ಉವಾಚ|

07032021a ಪುತ್ರಂ ಪುರುಷಸಿಂಹಸ್ಯ ಸಂಜಯಾಪ್ರಾಪ್ತಯೌವನಂ|

07032021c ರಣೇ ವಿನಿಹತಂ ಶ್ರುತ್ವಾ ಭೃಶಂ ಮೇ ದೀರ್ಯತೇ ಮನಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಪುರುಷಸಿಂಹನ ಮಗನೂ ಇನ್ನೂ ಎಳೆಯ ವಯಸ್ಸಿನವನೂ ಆದ ಅವನು ರಣದಲ್ಲಿ ಹತನಾದನೆಂದು ಕೇಳಿ ನನ್ನ ಎದೆಯು ತುಂಬಾ ಸೀಳಿಹೋಗುವಂತಿದೆ.

07032022a ದಾರುಣಃ ಕ್ಷತ್ರಧರ್ಮೋಽಯಂ ವಿಹಿತೋ ಧರ್ಮಕರ್ತೃಭಿಃ|

07032022c ಯತ್ರ ರಾಜ್ಯೇಪ್ಸವಃ ಶೂರಾ ಬಾಲೇ ಶಸ್ತ್ರಮಪಾತಯನ್||

ಧರ್ಮಗಳನ್ನು ಮಾಡಿರುವವರು ಈ ಕ್ಷತ್ರಿಯ ಧರ್ಮವನ್ನು ದಾರುಣವನ್ನಾಗಿಸಿದ್ದಾರೆ. ರಾಜ್ಯವನ್ನು ಬಯಸುವ ಅವರು ಬಾಲಕ ಮಕ್ಕಳ ಮೇಲೂ ಶಸ್ತ್ರಗಳನ್ನು ಬೀಳಿಸಬೇಕಾಗುತ್ತದೆ.

07032023a ಬಾಲಮತ್ಯಂತಸುಖಿನಂ ವಿಚರಂತಮಭೀತವತ್|

07032023c ಕೃತಾಸ್ತ್ರಾ ಬಹವೋ ಜಘ್ನುರ್ಬ್ರೂಹಿ ಗಾವಲ್ಗಣೇ ಕಥಂ||

ಗಾವಲ್ಗಣೇ! ಅತ್ಯಂತ ಸುಖಿಯಾಗಿದ್ದ, ಭಯಪಡದೇ ಸಂಚರಿಸುತ್ತಿದ್ದ, ಕೃತಾಸ್ತ್ರ ಬಾಲಕನನ್ನು ಹಲವಾರು ಮಂದಿ ಹೇಗೆ ಸಂಹರಿಸಿದರು ಹೇಳು.

07032024a ಬಿಭಿತ್ಸತಾ ರಥಾನೀಕಂ ಸೌಭದ್ರೇಣಾಮಿತೌಜಸಾ|

07032024c ವಿಕ್ರೀಡಿತಂ ಯಥಾ ಸಂಖ್ಯೇ ತನ್ಮಮಾಚಕ್ಷ್ವ ಸಂಜಯ||

ಸಂಜಯ! ರಥಸೇನೆಯನ್ನು ಧ್ವಂಸಗೊಳಿಸಲು ಬಯಸಿದ ಅಮಿತೌಜಸ ಸೌಭದ್ರನು ರಣರಂಗದಲ್ಲಿ ಹೇಗೆ ಆಟವಾಡಿದನು ಎನ್ನುವುದನ್ನು ನನಗೆ ಹೇಳು.”

07032025 ಸಂಜಯ ಉವಾಚ|

07032025a ಯನ್ಮಾಂ ಪೃಚ್ಚಸಿ ರಾಜೇಂದ್ರ ಸೌಭದ್ರಸ್ಯ ನಿಪಾತನಂ|

07032025c ತತ್ತೇ ಕಾರ್ತ್ಸ್ನ್ಯೆನ ವಕ್ಷ್ಯಾಮಿ ಶೃಣು ರಾಜನ್ಸಮಾಹಿತಃ|

07032025e ವಿಕ್ರೀಡಿತಂ ಕುಮಾರೇಣ ಯಥಾನೀಕಂ ಬಿಭಿತ್ಸತಾ||

ಸಂಜಯನು ಹೇಳಿದನು: “ರಾಜೇಂದ್ರ! ರಾಜನ್! ಸೌಭದ್ರನ ಪತನದ ಕುರಿತು ನನ್ನನ್ನು ಕೇಳುತ್ತಿರುವೆಯಲ್ಲಾ ಅದನ್ನು ಮತ್ತು ರಥ ಸೇನೆಯನ್ನು ನಾಶಗೊಳಿಸಲು ಬಯಸಿದ ಆ ಕುಮಾರನು ಹೇಗೆ ಯುದ್ಧದ ಆಟವಾಡಿದನು ಎನ್ನುವುದನ್ನು ಸಂಪೂರ್ಣವಾಗಿ ಹೇಳುತ್ತೇನೆ. ಗಮನವಿಟ್ಟು ಕೇಳು.

07032026a ದಾವಾಗ್ನ್ಯಭಿಪರೀತಾನಾಂ ಭೂರಿಗುಲ್ಮತೃಣದ್ರುಮೇ|

07032026c ವನೌಕಸಾಮಿವಾರಣ್ಯೇ ತ್ವದೀಯಾನಾಮಭೂದ್ಭಯಂ||

ಅರಣ್ಯದಲ್ಲಿ ದಾವಾಗ್ನಿಯಿಂದ ಪರಿತಪ್ತವಾದ ಹೂ-ತಳಿರುಗಳನ್ನುಳ್ಳ ವೃಕ್ಷಗಳಂತೆ ನಿನ್ನ ಸೇನೆಗಳು ಆದವು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುವಧಸಂಕ್ಷೇಪಕಥನೇ ದ್ವಾತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುವಧಸಂಕ್ಷೇಪಕಥನ ಎನ್ನುವ ಮೂವತ್ತೆರಡನೇ ಅಧ್ಯಾಯವು.

Image result for trees against white background

Comments are closed.