Drona Parva: Chapter 30

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೩೦

ತುಮುಲ ಯುದ್ಧ (೧-೧೮). ಅಶ್ವತ್ಥಾಮನಿಂದ ನೀಲವಧೆ (೧೯-೨೯).

Image result for mahabharata07030001 ಧೃತರಾಷ್ಟ್ರ ಉವಾಚ|

07030001a ತೇಷ್ವನೀಕೇಷು ಭಗ್ನೇಷು ಪಾಂಡುಪುತ್ರೇಣ ಸಂಜಯ|

07030001c ಚಲಿತಾನಾಂ ದ್ರುತಾನಾಂ ಚ ಕಥಮಾಸೀನ್ಮನೋ ಹಿ ವಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಪಾಂಡುಪುತ್ರನಿಂದ ಹಾಗೆ ಭಗ್ನಗೊಂಡ ಆ ಸೇನೆಗಳು ಓಡಿಹೋಗುತ್ತಿರುವಾಗ ನಮ್ಮವರ ಮನಸ್ಸು ಹೇಗಿತ್ತು?

07030002a ಅನೀಕಾನಾಂ ಪ್ರಭಗ್ನಾನಾಂ ವ್ಯವಸ್ಥಾನಮಪಶ್ಯತಾಂ|

07030002c ದುಷ್ಕರಂ ಪ್ರತಿಸಂಧಾನಂ ತನ್ಮಮಾಚಕ್ಷ್ವ ಸಂಜಯ||

ಭಗ್ನವಾಗಿ ಹೋಗುತ್ತಿದ್ದ ಸೇನೆಗಳನ್ನು ಪುನಃ ಒಂದುಗೂಡಿಸುವುದು ಕಷ್ಟವಾದುದು. ಅದಕ್ಕಾಗಿ ನಮ್ಮವರು ಏನು ಮಾಡಿದರು ಅದನ್ನು ನನಗೆ ಹೇಳು ಸಂಜಯ!”

07030003 ಸಂಜಯ ಉವಾಚ|

07030003a ತಥಾಪಿ ತವ ಪುತ್ರಸ್ಯ ಪ್ರಿಯಕಾಮಾ ವಿಶಾಂ ಪತೇ|

07030003c ಯಶಃ ಪ್ರವೀರಾ ಲೋಕೇಷು ರಕ್ಷಂತೋ ದ್ರೋಣಮನ್ವಯುಃ||

ಸಂಜಯನು ಹೇಳಿದನು: “ವಿಶಾಂಪತೇ! ಹಾಗಿದ್ದರೂ ನಿನ್ನ ಮಗನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಪ್ರಮುಖರು ಲೋಕದಲ್ಲಿ ತಮ್ಮ ಯಶಸ್ಸನ್ನು ರಕ್ಷಿಸಿಕೊಳ್ಳುತ್ತಾ ದ್ರೋಣನನ್ನು ಅನುಸರಿಸಿದರು.

07030004a ಸಮುದ್ಯತೇಷು ಶಸ್ತ್ರೇಷು ಸಂಪ್ರಾಪ್ತೇ ಚ ಯುಧಿಷ್ಠಿರೇ|

07030004c ಅಕುರ್ವನ್ನಾರ್ಯಕರ್ಮಾಣಿ ಭೈರವೇ ಸತ್ಯಭೀತವತ್||

ಅವರು ಯುಧಿಷ್ಠಿರನನ್ನು ತಲುಪಿ ಶಸ್ತ್ರಗಳನ್ನು ಎತ್ತಿ ಹಿಡಿದು ಭಯಪಡದೇ ಸತ್ಯವಾದ ಭೈರವ ಆರ್ಯಕರ್ಮಗಳನ್ನು ಎಸಗಿದರು.

07030005a ಅಂತರಂ ಭೀಮಸೇನಸ್ಯ ಪ್ರಾಪತನ್ನಮಿತೌಜಸಃ|

07030005c ಸಾತ್ಯಕೇಶ್ಚೈವ ಶೂರಸ್ಯ ಧೃಷ್ಟದ್ಯುಮ್ನಸ್ಯ ಚಾಭಿಭೋ||

ವಿಭೋ! ಬಳಿಯಲ್ಲಿ ಅಮಿತೌಜಸ ಭೀಮಸೇನನೂ, ಶೂರ ಸಾತ್ಯಕಿಯೂ, ಧೃಷ್ಟದ್ಯುಮ್ನನೂ ಇಲ್ಲದಿರುವ ಅವಕಾಶದಲ್ಲಿ ಅವನ ಮೇಲೆ ಎರಗಿದರು.

07030006a ದ್ರೋಣಂ ದ್ರೋಣಮಿತಿ ಕ್ರೂರಾಃ ಪಾಂಚಾಲಾಃ ಸಮಚೋದಯನ್|

07030006c ಮಾ ದ್ರೋಣಮಿತಿ ಪುತ್ರಾಸ್ತೇ ಕುರೂನ್ಸರ್ವಾನಚೋದಯನ್||

“ದ್ರೋಣ! ದ್ರೋಣ!” ಎಂದು ಕ್ರೂರರಾದ ಪಾಂಚಾಲರು ಹುರಿದುಂಬಿಸುತ್ತಿದ್ದರು. “ದ್ರೋಣನನ್ನು ಬಿಟ್ಟುಕೊಡಬೇಡಿ!” ಎಂದು ನಿನ್ನ ಮಕ್ಕಳು ಕುರುಗಳನ್ನು ಹುರಿದುಂಬಿಸುತ್ತಿದ್ದರು.

07030007a ದ್ರೋಣಂ ದ್ರೋಣಮಿತಿ ಹ್ಯೇಕೇ ಮಾ ದ್ರೋಣಮಿತಿ ಚಾಪರೇ|

07030007c ಕುರೂಣಾಂ ಪಾಂಡವಾನಾಂ ಚ ದ್ರೋಣದ್ಯೂತಮವರ್ತತ||

“ದ್ರೋಣ! ದ್ರೋಣ!” ಎಂದು ಒಂದುಕಡೆ ಪಾಂಡವರು ಮತ್ತು “ದ್ರೋಣನನ್ನು ಬಿಟ್ಟುಕೊಡಬೇಡಿ!” ಎಂದು ಇನ್ನೊಂದು ಕಡೆಯಲ್ಲಿ ಕುರುಗಳು ಕೂಗುತ್ತಾ ದ್ರೋಣನನ್ನು ದ್ಯೂತದ ಪಣವಾನ್ನಾಗಿಸಿದ್ದರು.

07030008a ಯಂ ಯಂ ಸ್ಮ ಭಜತೇ ದ್ರೋಣಃ ಪಾಂಚಾಲಾನಾಂ ರಥವ್ರಜಂ|

07030008c ತತ್ರ ತತ್ರ ಸ್ಮ ಪಾಂಚಾಲ್ಯೋ ಧೃಷ್ಟದ್ಯುಮ್ನೋಽಥ ಧೀಯತೇ||

ದ್ರೋಣನು ಪಾಂಚಾಲರ ಯಾವ ಯಾವ ರಥಸಮೂಹಗಳನ್ನು ಆಕ್ರಮಣಿಸುತ್ತಿದ್ದನೋ ಅಲ್ಲಲ್ಲಿ ಪಾಂಚಾಲ್ಯ ಧೃಷ್ಟದ್ಯುಮ್ನನು ಅವನನ್ನು ಎದುರಿಸುತ್ತಿದ್ದನು.

07030009a ಯಥಾಭಾಗವಿಪರ್ಯಾಸೇ ಸಂಗ್ರಾಮೇ ಭೈರವೇ ಸತಿ|

07030009c ವೀರಾಃ ಸಮಾಸದನ್ವೀರಾನಗಚ್ಚನ್ಭೀರವಃ ಪರಾನ್||

ಹೀಗೆ ಭಾಗವಿಪರ್ಯಾಸದಿಂದ ನಡೆಯುತ್ತಿದ್ದ ಸಂಗ್ರಾಮವು ಭೈರವ ರೂಪವನ್ನು ತಾಳಿ, ವೀರರು ಶತ್ರು ವೀರರನ್ನು ಜೋರಾಗಿ ಗರ್ಜಿಸುತ್ತಾ ಎದುರಿಸಿದರು.

07030010a ಅಕಂಪನೀಯಾಃ ಶತ್ರೂಣಾಂ ಬಭೂವುಸ್ತತ್ರ ಪಾಂಡವಾಃ|

07030010c ಅಕಂಪಯಂಸ್ತ್ವನೀಕಾನಿ ಸ್ಮರಂತಃ ಕ್ಲೇಶಮಾತ್ಮನಃ||

ಪಾಂಡವರು ಶತ್ರುಗಳಿಂದ ಸ್ವಲ್ಪವೂ ತತ್ತರಿಸಲಿಲ್ಲ. ಆದರೆ ಅವರ ಕಷ್ಟಗಳನ್ನು ಸ್ಮರಿಸಿಕೊಂಡು ನಿನ್ನ ಸೇನೆಯು ತತ್ತರಿಸುವಂತೆ ಮಾಡಿದರು.

07030011a ತೇ ತ್ವಮರ್ಷವಶಂ ಪ್ರಾಪ್ತಾ ಹ್ರೀಮಂತಃ ಸತ್ತ್ವಚೋದಿತಾಃ|

07030011c ತ್ಯಕ್ತ್ವಾ ಪ್ರಾಣಾನ್ನ್ಯವರ್ತಂತ ಘ್ನಂತೋ ದ್ರೋಣಂ ಮಹಾಹವೇ||

ಲಜ್ಜಾಶೀಲರಾದ ಸತ್ತ್ವಗುಣಸಂಪನ್ನರಾದ ಪಾಂಡವರೂ ಕೂಡ ಕೋಪಾವಿಷ್ಟರಾಗಿ ಪ್ರಾಣಗಳನ್ನೂ ತೊರೆದು ಮಹಾರಣದಲ್ಲಿ ದ್ರೋಣನನ್ನು ಸಂಹರಿಸಲು ಮುನ್ನುಗ್ಗಿ ಹೋಗುತ್ತಿದ್ದರು.

07030012a ಅಯಸಾಮಿವ ಸಂಪಾತಃ ಶಿಲಾನಾಮಿವ ಚಾಭವತ್|

07030012c ದೀವ್ಯತಾಂ ತುಮುಲೇ ಯುದ್ಧೇ ಪ್ರಾಣೈರಮಿತತೇಜಸಾಂ||

ಪ್ರಾಣಗಳನ್ನೇ ಪಣವಾಗಿಟ್ಟ ಅಮಿತತೇಜಸರ ಆ ತುಮುಲ ಯುದ್ಧವು ಕಬ್ಬಿಣದ ಒನಕೆಗಳ ಘರ್ಷಣೆಗೆ ಅಥವಾ ಕಲ್ಲುಗಳ ಘರ್ಷಣೆಗೆ ಸಮಾನವಾಗಿತ್ತು.

07030013a ನ ತು ಸ್ಮರಂತಿ ಸಂಗ್ರಾಮಮಪಿ ವೃದ್ಧಾಸ್ತಥಾವಿಧಂ|

07030013c ದೃಷ್ಟಪೂರ್ವಂ ಮಹಾರಾಜ ಶ್ರುತಪೂರ್ವಮಥಾಪಿ ವಾ||

ಮಹಾರಾಜ! ವೃದ್ಧರು ಕೂಡ ಆ ರೀತಿಯ ಸಂಗ್ರಾಮವನ್ನು ನೆನಪಿಸಿಕೊಳ್ಳಲಾಗುತ್ತಿರಲಿಲ್ಲ. ಏಕೆಂದರೆ ಆ ರೀತಿಯ ಯುದ್ಧವನ್ನು ಅವರು ಕಂಡೂ ಇರಲಿಲ್ಲ. ಕೇಳಿಯೂ ಇರಲಿಲ್ಲ.

07030014a ಪ್ರಾಕಂಪತೇವ ಪೃಥಿವೀ ತಸ್ಮಿನ್ವೀರಾವಸಾದನೇ|

07030014c ಪ್ರವರ್ತತಾ ಬಲೌಘೇನ ಮಹತಾ ಭಾರಪೀಡಿತಾ||

ವೀರರ ವಿನಾಶಕಾರಕ ಆ ಮಹಾಯುದ್ಧದಲ್ಲಿ ರಣಾಂಗಣಕ್ಕೆ ಹಿಂದಿರುಗುತ್ತಿದ್ದ ಮಹಾ ಸೇನಾ ಸಮೂಹದ ಭಾರದಿಂದ ಪೀಡಿತಳಾಗಿ ಭೂಮಿಯು ಕಂಪಿಸಿದಳು.

07030015a ಘೂರ್ಣತೋ ಹಿ ಬಲೌಘಸ್ಯ ದಿವಂ ಸ್ತಬ್ಧ್ವೇವ ನಿಸ್ವನಃ|

07030015c ಅಜಾತಶತ್ರೋಃ ಕ್ರುದ್ಧಸ್ಯ ಪುತ್ರಸ್ಯ ತವ ಚಾಭವತ್||

ಅಜಾತಶತ್ರುವಿನ ಮತ್ತು ಕ್ರುದ್ಧನಾದ ನಿನ್ನ ಮಗನ ಸೈನ್ಯಸಮೂಹಗಳ ಆ ಭಯಂಕರ ಸಂಚಲನದಿಂದಾದ ಶಬ್ಧವು ನಾಕವನ್ನೂ ಸ್ತಬ್ಧಗೊಳಿಸಿತು.

07030016a ಸಮಾಸಾದ್ಯ ತು ಪಾಂಡೂನಾಮನೀಕಾನಿ ಸಹಸ್ರಶಃ|

07030016c ದ್ರೋಣೇನ ಚರತಾ ಸಂಖ್ಯೇ ಪ್ರಭಗ್ನಾನಿ ಶಿತೈಃ ಶರೈಃ||

ಪಾಂಡವರ ಸೇನೆಗಳನ್ನು ಹೊಕ್ಕು ಸಂಚರಿಸುತ್ತಿದ್ದ ದ್ರೋಣನು ನಿಶಿತ ಶಿರಗಳಿಂದ ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸಿದನು.

07030017a ತೇಷು ಪ್ರಮಥ್ಯಮಾನೇಷು ದ್ರೋಣೇನಾದ್ಭುತಕರ್ಮಣಾ|

07030017c ಪರ್ಯವಾರಯದಾಸಾದ್ಯ ದ್ರೋಣಂ ಸೇನಾಪತಿಃ ಸ್ವಯಂ||

ದ್ಭುತಕರ್ಮಿ ದ್ರೋಣನಿಂದ ಪ್ರಮಥಗೊಳ್ಳುತ್ತಿರಲು ಸ್ವಯಂ ಸೇನಾಪತಿ ಧೃಷ್ಟದ್ಯುಮ್ನನು ಎದುರಿಸಿ ತಡೆದನು.

07030018a ತದದ್ಭುತಮಭೂದ್ಯುದ್ಧಂ ದ್ರೋಣಪಾಂಚಾಲ್ಯಯೋಸ್ತದಾ|

07030018c ನೈವ ತಸ್ಯೋಪಮಾ ಕಾ ಚಿತ್ಸಂಭವೇದಿತಿ ಮೇ ಮತಿಃ||

ಆಗ ದ್ರೋಣ-ಪಾಂಚಾಲ್ಯರ ನಡುವೆ ಅದ್ಭುತ ಯುದ್ಧವು ನಡೆಯಿತು. ಅದರಂತಹ ಯುದ್ಧವು ಹಿಂದೆ ಎಂದೂ ನಡೆದಿರಲಿಲ್ಲ ಎನ್ನುವುದು ನನ್ನ ಮತ.

07030019a ತತೋ ನೀಲೋಽನಲಪ್ರಖ್ಯೋ ದದಾಹ ಕುರುವಾಹಿನೀಂ|

07030019c ಶರಸ್ಫುಲಿಂಗಶ್ಚಾಪಾರ್ಚಿರ್ದಹನ್ಕಕ್ಷಮಿವಾನಲಃ||

ಆಗ ಅನಲನೆಂದೇ ಪ್ರಖ್ಯಾತನಾಗಿದ್ದ ನೀಲನು ಬಾಣಗಳನ್ನೇ ಕಿಡಿಯನ್ನಾಗಿ ಬಿಲ್ಲನ್ನೇ ಜ್ವಾಲೆಯನ್ನಾಗಿಸಿಕೊಂಡು ಬೆಂಕಿಯು ಹುಲ್ಲಿನ ಮೆದೆಯನ್ನು ಸುಡುವಂತೆ ಕುರುಸೇನೆಯನ್ನು ದಹಿಸತೊಡಗಿದನು.

07030020a ತಂ ದಹಂತಮನೀಕಾನಿ ದ್ರೋಣಪುತ್ರಃ ಪ್ರತಾಪವಾನ್|

07030020c ಪೂರ್ವಾಭಿಭಾಷೀ ಸುಶ್ಲಕ್ಷ್ಣಂ ಸ್ಮಯಮಾನೋಽಭ್ಯಭಾಷತ||

ಅವನು ಸೇನೆಗಳನ್ನು ಸುಡುತ್ತಿರುವಾಗ ಪೂರ್ವಭಾಷೀ, ಪ್ರತಾಪವಾನ್ ದ್ರೋಣಪುತ್ರನು ನಸುನಗುತ್ತಾ ನಸುನಗುತ್ತಾ ಸುಮಧುರವಾಗಿ ಹೇಳಿದನು:

07030021a ನೀಲ ಕಿಂ ಬಹುಭಿರ್ದಗ್ಧೈಸ್ತವ ಯೋಧೈಃ ಶರಾರ್ಚಿಷಾ|

07030021c ಮಯೈಕೇನ ಹಿ ಯುಧ್ಯಸ್ವ ಕ್ರುದ್ಧಃ ಪ್ರಹರ ಚಾಶುಗೈಃ||

“ನೀಲ! ಬಾಣಗಳೆಂಬ ಜ್ವಾಲೆಯಿಂದ ಅನೇಕ ಯೋಧರನ್ನು ಸುಡುತ್ತೀಯೆ ಏಕೆ? ನನ್ನೊಬ್ಬನೊಡನೆಯೇ ಯುದ್ಧ ಮಾಡು. ಕೋಪಗೊಂಡು ಆಶುಗಗಳಿಂದ ನನ್ನನ್ನು ಪ್ರಹರಿಸು!”

07030022a ತಂ ಪದ್ಮನಿಕರಾಕಾರಂ ಪದ್ಮಪತ್ರನಿಭೇಕ್ಷಣಂ|

07030022c ವ್ಯಾಕೋಶಪದ್ಮಾಭಮುಖಂ ನೀಲೋ ವಿವ್ಯಾಧ ಸಾಯಕೈಃ||

ಆಗ ನೀಲನು ಅರಳುತ್ತಿರುವ ಪದ್ಮದಂತಿದ್ದ, ಪದ್ಮಪತ್ರನಿಭೇಕ್ಷಣ, ಕಮಲಗಳ ಸಮೂಹದಂತೆ ಸುಂದರಾಂಗನಾಗಿದ್ದ ಅಶ್ವತ್ಥಾಮನನ್ನು ಸಾಯಕಗಳಿಂದ ಹೊಡೆದನು.

07030023a ತೇನಾತಿವಿದ್ಧಃ ಸಹಸಾ ದ್ರೌಣಿರ್ಭಲ್ಲೈಃ ಶಿತೈಸ್ತ್ರಿಭಿಃ|

07030023c ಧನುರ್ಧ್ವಜಂ ಚ ಚತ್ರಂ ಚ ದ್ವಿಷತಃ ಸ ನ್ಯಕೃಂತತ||

ಅವನಿಂದ ಪೆಟ್ಟುತಿಂದ ದ್ರೌಣಿಯು ತಕ್ಷಣವೇ ಮೂರು ನಿಶಿತ ಭಲ್ಲಗಳಿಂದ ಶತ್ರುವಿನ ಧನುಸ್ಸನ್ನೂ, ಧ್ವಜವನ್ನೂ, ಚತ್ರವನ್ನೂ ತುಂಡರಿಸಿದನು.

07030024a ಸೋತ್ಪ್ಲುತ್ಯ ಸ್ಯಂದನಾತ್ತಸ್ಮಾನ್ನೀಲಶ್ಚರ್ಮವರಾಸಿಧೃಕ್|

07030024c ದ್ರೋಣಾಯನೇಃ ಶಿರಃ ಕಾಯಾದ್ಧರ್ತುಮೈಚ್ಚತ್ಪತತ್ರಿವತ್||

ಆಗ ದ್ರೌಣಿಯ ಶಿರವನ್ನು ದೇಹದಿಂದ ಕತ್ತರಿಸಲು ಬಯಸಿ ನೀಲನು ಕತ್ತಿ ಗುರಾಣಿಯನ್ನು ಹಿಡಿದು ಪಕ್ಷಿಯಂತೆ ರಥದಿಂದ ಧುಮುಕಿದನು.

07030025a ತಸ್ಯೋದ್ಯತಾಸೇಃ ಸುನಸಂ ಶಿರಃ ಕಾಯಾತ್ಸಕುಂಡಲಂ|

07030025c ಭಲ್ಲೇನಾಪಾಹರದ್ದ್ರೌಣಿಃ ಸ್ಮಯಮಾನ ಇವಾನಘ||

ಅನಘ! ಅಷ್ಟರಲ್ಲಿಯೇ ದ್ರೌಣಿಯು ನಗುತ್ತಲೇ ಭಲ್ಲದಿಂದ ಉನ್ನತ ಹೆಗಲಿನಿಂದಲೂ, ಶೋಭಾಯಮಾನ ಮೂಗಿನಿಂದಲೂ ಮತ್ತು ಕರ್ಣಕುಂಡಲಗಳಿಂದಲೂ ಯುಕ್ತವಾಗಿದ್ದ ಅವನ ಶಿರವನ್ನು ಶರೀರರಿಂದ ಅಪಹರಿಸಿಬಿಟ್ಟನು.

07030026a ಸಂಪೂರ್ಣಚಂದ್ರಾಭಮುಖಃ ಪದ್ಮಪತ್ರನಿಭೇಕ್ಷಣಃ|

07030026c ಪ್ರಾಂಶುರುತ್ಪಲಗರ್ಭಾಭೋ ನಿಹತೋ ನ್ಯಪತತ್ ಕ್ಷಿತೌ||

ಪೂರ್ಣಚಂದ್ರನಿಗೆ ಸಮಾನ ಮುಖಕಾಂತಿಯನ್ನು ಹೊಂದಿದ್ದ, ಕವಲದಳಸದೃಶವಾದ ಕಣ್ಣುಗಳಿಂದ ವಿರಾಜಿಸುತ್ತಿದ್ದ, ಉನ್ನತಾಕಾರವಾಗಿದ್ದ, ಕನ್ನೈದಿಲಿಗೆ ಸಮಾನ ಕಾಂತಿಯುಕ್ತನಾಗಿದ್ದ ನೀಲನು ಹತನಾಗಿ ಭೂಮಿಯ ಮೇಲೆ ಬಿದ್ದನು.

07030027a ತತಃ ಪ್ರವಿವ್ಯಥೇ ಸೇನಾ ಪಾಂಡವೀ ಭೃಶಮಾಕುಲಾ|

07030027c ಆಚಾರ್ಯಪುತ್ರೇಣ ಹತೇ ನೀಲೇ ಜ್ವಲಿತತೇಜಸಿ||

ಆಚಾರ್ಯಪುತ್ರನಿಂದ ಜ್ವಲಿತತೇಜಸ್ವಿ ನೀಲನು ಹತನಾಗಲು ಬಹಳವಾಗಿ ವ್ಯಾಕುಲಗೊಂಡ ಪಾಂಡವ ಸೇನೆಯು ದುಃಖಿಸಿತು.

07030028a ಅಚಿಂತಯಂಶ್ಚ ತೇ ಸರ್ವೇ ಪಾಂಡವಾನಾಂ ಮಹಾರಥಾಃ|

07030028c ಕಥಂ ನೋ ವಾಸವಿಸ್ತ್ರಾಯಾಚ್ಚತ್ರುಭ್ಯ ಇತಿ ಮಾರಿಷ||

ಮಾರಿಷ! “ವಾಸವಿಯು ಹೇಗೆ ನಮ್ಮನ್ನು ಶತ್ರುಗಳಿಂದ ರಕ್ಷಸಿಸುತ್ತಾನೆ?” ಎಂದು ಪಾಂಡವರ ಮಹಾರಥರೆಲ್ಲರೂ ಚಿಂತಿಸತೊಡಗಿದರು.

07030029a ದಕ್ಷಿಣೇನ ತು ಸೇನಾಯಾಃ ಕುರುತೇ ಕದನಂ ಬಲೀ|

07030029c ಸಂಶಪ್ತಕಾವಶೇಷಸ್ಯ ನಾರಾಯಣಬಲಸ್ಯ ಚ||

ಆದರೆ ಆ ಬಲಶಾಲಿಯು ದಕ್ಷಿಣ ಭಾಗದಲ್ಲಿ ಅಳಿದುಳಿದ ಸಂಶಪ್ತಕ ಮತ್ತು ನಾರಾಯಣ ಸೇನೆಗಳೊಂದಿಗೆ ಕದನವಾಡುತ್ತಿದ್ದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ನೀಲವಧೇ ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ನೀಲವಧ ಎನ್ನುವ ಮೂವತ್ತನೇ ಅಧ್ಯಾಯವು.

Image result for indian motifs against white background

Comments are closed.