Drona Parva: Chapter 25

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೫

ಭೀಮಸೇನನು ಕೌರವರ ಗಜಸೇನೆಯನ್ನು ನಾಶಪಡಿಸಿ ದುರ್ಯೋಧನನೊಂದಿಗೆ ಯುದ್ಧಮಾಡಿದುದು (೧-೧೮). ಭಗದತ್ತನ ಯುದ್ಧ (೧೯-೫೯).

07025001 ಧೃತರಾಷ್ಟ್ರ ಉವಾಚ|

07025001a ತೇಷ್ವೇವಂ ಸನ್ನಿವೃತ್ತೇಷು ಪ್ರತ್ಯುದ್ಯಾತೇಷು ಭಾಗಶಃ|

07025001c ಕಥಂ ಯುಯುಧಿರೇ ಪಾರ್ಥಾ ಮಾಮಕಾಶ್ಚ ತರಸ್ವಿನಃ||

ಧೃತರಾಷ್ಟ್ರನು ಹೇಳಿದನು: “ಅವರು ಹೀಗೆ ಹಿಂದಿರುಗಿ ತಮ ತಮಗೆ ಬೇಕಾದವರೊಂದಿಗೆ ಹೋರಾಡುವಾಗ ತರಸ್ವಿಗಳಾಗಿದ್ದ ನಮ್ಮವರು ಮತ್ತು ಪಾರ್ಥರು ಹೇಗೆ ಯುದ್ಧಮಾಡಿದರು?

07025002a ಕಿಮರ್ಜುನಶ್ಚಾಪ್ಯಕರೋತ್ಸಂಶಪ್ತಕಬಲಂ ಪ್ರತಿ|

07025002c ಸಂಶಪ್ತಕಾ ವಾ ಪಾರ್ಥಸ್ಯ ಕಿಮಕುರ್ವತ ಸಂಜಯ||

ಸಂಶಪ್ತಕರ ಸೇನೆಯ ಕುರಿತು ಅರ್ಜುನನು ಏನು ಮಾಡಿದನು? ಮತ್ತು ಸಂಜಯ! ಪಾರ್ಥನ ಕುರಿತು ಸಂಶಪ್ತಕರು ಏನು ಮಾಡಿದರು?”

7025003 ಸಂಜಯ ಉವಾಚ|

07025003a ತಥಾ ತೇಷು ನಿವೃತ್ತೇಷು ಪ್ರತ್ಯುದ್ಯಾತೇಷು ಭಾಗಶಃ|

07025003c ಸ್ವಯಮಭ್ಯದ್ರವದ್ಭೀಮಂ ನಾಗಾನೀಕೇನ ತೇ ಸುತಃ||

ಸಂಜಯನು ಹೇಳಿದನು: “ಅವರು ಹಾಗೆ ಹಿಂದಿರುಗಿ ತಮ ತಮಗೆ ಬೇಕಾದವರೊಂದಿಗೆ ಹೋರಾಡುತ್ತಿರಲು ಸ್ವಯಂ ನಿನ್ನ ಮಗನು ಗಜಸೇನೆಯೊಂದಿಗೆ ಭೀಮನ ಮೇಲೆ ಎರಗಿದನು.

07025004a ಸ ನಾಗ ಇವ ನಾಗೇನ ಗೋವೃಷೇಣೇವ ಗೋವೃಷಃ|

07025004c ಸಮಾಹೂತಃ ಸ್ವಯಂ ರಾಜ್ಞಾ ನಾಗಾನೀಕಮುಪಾದ್ರವತ್||

ಸಲಗನಿಂದ ಕಾಳಗಕ್ಕೆ ಸೆಳೆಯಲ್ಪಟ್ಟ ಸಲಗದಂತೆ ಮತ್ತು ಗೂಳಿಯಿಂದ ಕರೆಯಲ್ಪಟ್ಟ ಗೂಳಿಯಂತೆ ಸ್ವಯಂ ರಾಜನಿಂದಲೇ ನಡೆಸಲ್ಪಡುತ್ತಿದ್ದ ಗಜಸೇನೆಯನ್ನು ಅವನು ಆಕ್ರಮಣಿಸಿದನು.

07025005a ಸ ಯುದ್ಧಕುಶಲಃ ಪಾರ್ಥೋ ಬಾಹುವೀರ್ಯೇಣ ಚಾನ್ವಿತಃ|

07025005c ಅಭಿನತ್ಕುಂಜರಾನೀಕಮಚಿರೇಣೈವ ಮಾರಿಷ||

ಮಾರಿಷ! ಯುದ್ಧಕುಶಲನಾದ ಮತ್ತು ಬಾಹುವೀರ್ಯದಿಂದ ಸಮನ್ವಿತನಾದ ಆ ಪಾರ್ಥನು ಆನೆಗಳ ಸೇನೆಯನ್ನು ಕ್ಷಣದಲ್ಲಿಯೇ ಧ್ವಂಸಮಾಡಿದನು.

07025006a ತೇ ಗಜಾ ಗಿರಿಸಂಕಾಶಾಃ ಕ್ಷರಂತಃ ಸರ್ವತೋ ಮದಂ|

07025006c ಭೀಮಸೇನಸ್ಯ ನಾರಾಚೈರ್ವಿಮುಖಾ ವಿಮದೀಕೃತಾಃ||

ಮದಿಸಿ ಎಲ್ಲಕಡೆ ಓಡುತ್ತಿರುವ, ಪರ್ವತಗಳಂತಿದ್ದ ಆ ಆನೆಗಳು ಭೀಮಸೇನನ ನಾರಾಚಗಳಿಗೆ ಸಿಲುಕಿ ಮತ್ತನ್ನು ಕಳೆದುಕೊಂಡು ಹಿಮ್ಮೆಟ್ಟಿದವು.

07025007a ವಿಧಮೇದಭ್ರಜಾಲಾನಿ ಯಥಾ ವಾಯುಃ ಸಮಂತತಃ|

07025007c ವ್ಯಧಮತ್ತಾನ್ಯನೀಕಾನಿ ತಥೈವ ಪವನಾತ್ಮಜಃ||

ವಾಯುವು ಹೇಗೆ ಮೋಡಗಳ ಜಾಲಗಳನ್ನು ಎಲ್ಲಕಡೆ ಚದುರಿಸುತ್ತಾನೋ ಹಾಗೆಯೇ ಪವನಾತ್ಮಜನೂ ಕೂಡ ಗಜಸೇನೆಗಳನ್ನು ಚಲ್ಲಾಪಿಲ್ಲಿ ಮಾಡಿದನು.

07025008a ಸ ತೇಷು ವಿಸೃಜನ್ಬಾಣಾನ್ಭೀಮೋ ನಾಗೇಷ್ವಶೋಭತ|

07025008c ಭುವನೇಷ್ವಿವ ಸರ್ವೇಷು ಗಭಸ್ತೀನುದಿತೋ ರವಿಃ||

ಕಿರಣಗಳಿಂದ ಜಗತ್ತೆಲ್ಲವನ್ನೂ ಬೆಳಗಿಸುವ ಉದಿಸುತ್ತಿರುವ ರವಿಯಂತೆ ಭೀಮನು ಆನೆಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಶೋಭಿಸಿದನು.

07025009a ತೇ ಭೀಮಬಾಣೈಃ ಶತಶಃ ಸಂಸ್ಯೂತಾ ವಿಬಭುರ್ಗಜಾಃ|

07025009c ಗಭಸ್ತಿಭಿರಿವಾರ್ಕಸ್ಯ ವ್ಯೋಮ್ನಿ ನಾನಾಬಲಾಹಕಾಃ||

ಆಕಾಶದಲ್ಲಿ ನಾನಾ ಮೋಡಗಳು ಸೂರ್ಯನ ಕಿರಣಗಳಿಂದ ಬೆಳಗುತ್ತಿರುವಂತೆ ಆನೆಗಳು ಶರೀರದ ತುಂಬ ಭೀಮನ ನೂರಾರು ಬಾಣಗಳಿಂದ ಹೊಡೆಯಲ್ಪಟ್ಟು ಪ್ರಕಾಶಿಸಿದವು.

07025010a ತಥಾ ಗಜಾನಾಂ ಕದನಂ ಕುರ್ವಾಣಮನಿಲಾತ್ಮಜಂ|

07025010c ಕ್ರುದ್ಧೋ ದುರ್ಯೋಧನೋಽಭ್ಯೇತ್ಯ ಪ್ರತ್ಯವಿಧ್ಯಚ್ಚಿತೈಃ ಶರೈಃ||

ಈ ರೀತಿ ಆನೆಗಳೊಡನೆ ಕದನ ಮಾಡುತ್ತಿದ್ದ ಅನಿಲಾತ್ಮಜನ ಬಳಿ ಕ್ರುದ್ಧನಾದ ದುರ್ಯೋಧನನು ಬಂದು ನಿಶಿತ ಶರಗಳಿಂದ ಹೊಡೆದನು.

07025011a ತತಃ ಕ್ಷಣೇನ ಕ್ಷಿತಿಪಂ ಕ್ಷತಜಪ್ರತಿಮೇಕ್ಷಣಃ|

07025011c ಕ್ಷಯಂ ನಿನೀಷುರ್ನಿಶಿತೈರ್ಭೀಮೋ ವಿವ್ಯಾಧ ಪತ್ರಿಭಿಃ||

ಒಡನೆಯೇ ಗಾಯದಿಂದ ಹೊರಡುವ ರಕ್ತದಂತೆ ಕಣ್ಣುಗಳನ್ನು ಕೆಂಪು ಮಾಡಿಕೊಂಡು ಭೀಮನು ಅವನನ್ನು ಕೊನೆಗೊಳಿಸಲು ಬಯಸಿ ನಿಶಿತ ಪತ್ರಿಗಳಿಂದ ಹೊಡೆದನು.

07025012a ಸ ಶರಾರ್ಪಿತಸರ್ವಾಂಗಃ ಕ್ರುದ್ಧೋ ವಿವ್ಯಾಧ ಪಾಂಡವಂ|

07025012c ನಾರಾಚೈರರ್ಕರಶ್ಮ್ಯಾಭೈರ್ಭೀಮಸೇನಂ ಸ್ಮಯನ್ನಿವ||

ಶರೀರವೆಲ್ಲ ಬಾಣಗಳಿಂದ ಚುಚ್ಚಲ್ಪಡಲು ಕ್ರುದ್ಧನಾದ ಅವನು ನಸುನಗುತ್ತಾ ಪಾಂಡವ ಭೀಮಸೇನನನ್ನು ಸೂರ್ಯನ ರಶ್ಮಿಗಳಂತಿದ್ದ ನಾರಾಚಗಳಿಂದ ಹೊಡೆದನು.

07025013a ತಸ್ಯ ನಾಗಂ ಮಣಿಮಯಂ ರತ್ನಚಿತ್ರಂ ಧ್ವಜೇ ಸ್ಥಿತಂ|

07025013c ಭಲ್ಲಾಭ್ಯಾಂ ಕಾರ್ಮುಕಂ ಚೈವ ಕ್ಷಿಪ್ರಂ ಚಿಚ್ಚೇದ ಪಾಂಡವಃ||

ತಕ್ಷಣವೇ ಪಾಂಡವನು ಎರಡು ಭಲ್ಲಗಳಿಂದ ಅವನ ಧ್ವಜದಲ್ಲಿದ್ದ ಮಣಿಮಯ ರತ್ನಚಿತ್ರಿತ ಆನೆಯನ್ನೂ ಮತ್ತು ಬಿಲ್ಲನ್ನೂ ಕತ್ತರಿಸಿದನು.

07025014a ದುರ್ಯೋಧನಂ ಪೀಡ್ಯಮಾನಂ ದೃಷ್ಟ್ವಾ ಭೀಮೇನ ಮಾರಿಷ|

07025014c ಚುಕ್ಷೋಭಯಿಷುರಭ್ಯಾಗಾದಂಗೋ ಮಾತಂಗಮಾಸ್ಥಿತಃ||

ಮಾರಿಷ! ಈ ರೀತಿ ದುರ್ಯೋಧನನನ್ನು ಪೀಡಿಸುತ್ತಿದ್ದ ಭೀಮನನ್ನು ಕಂಡು ಅವನನ್ನು ಅಲ್ಲಿಂದ ಕದಲಿಸಲು ಆನೆಯನ್ನೇರಿದ್ದ ಅಂಗರಾಜನು ಧಾವಿಸಿ ಬಂದನು.

07025015a ತಮಾಪತಂತಂ ಮಾತಂಗಮಂಬುದಪ್ರತಿಮನಂ|

07025015c ಕುಂಭಾಂತರೇ ಭೀಮಸೇನೋ ನಾರಾಚೇನಾರ್ದಯದ್ಭೃಶಂ||

ಮೋಡಗಳಂತೆ ಗುಡುಗುತ್ತ ತನ್ನ ಮೇಲೆ ಎರಗುತ್ತಿದ್ದ ಆ ಆನೆಯನ್ನು ನೋಡಿ ಭೀಮಸೇನನು ನಾರಾಚಗಳಿಂದ ಅದರ ಕುಂಭಸ್ಥಳಕ್ಕೆ ಹೊಡೆದನು.

07025016a ತಸ್ಯ ಕಾಯಂ ವಿನಿರ್ಭಿದ್ಯ ಮಮಜ್ಜ ಧರಣೀತಲೇ|

07025016c ತತಃ ಪಪಾತ ದ್ವಿರದೋ ವಜ್ರಾಹತ ಇವಾಚಲಃ||

ಅವು ಅದರ ದೇಹವನ್ನು ಸೀಳಿ ಭೂಮಿಯಲ್ಲಿ ಹುಗಿದುಕೊಂಡವು. ಅನಂತರ ಆ ಅನೆಯು ವಜ್ರವು ತಾಗಿದ ಪರ್ವತದಂತೆ ಕೆಳಗುರುಳಿತು.

07025017a ತಸ್ಯಾವರ್ಜಿತನಾಗಸ್ಯ ಮ್ಲೇಚ್ಚಸ್ಯಾವಪತಿಷ್ಯತಃ|

07025017c ಶಿರಶ್ಚಿಚ್ಚೇದ ಭಲ್ಲೇನ ಕ್ಷಿಪ್ರಕಾರೀ ವೃಕೋದರಃ||

ಆ ಆನೆಯಿಂದ ಕೆಳಗೆ ಹಾರಲು ಪ್ರಯತ್ನಿಸುತ್ತಿದ್ದ ಮ್ಲೇಚ್ಛರ ರಾಜನ ಶಿರವನ್ನು ಕ್ಷಿಪ್ರಕಾರೀ ವೃಕೋದರನು ಭಲ್ಲದಿಂದ ಕತ್ತರಿಸಿದನು.

07025018a ತಸ್ಮಿನ್ನಿಪತಿತೇ ವೀರೇ ಸಂಪ್ರಾದ್ರವತ ಸಾ ಚಮೂಃ|

07025018c ಸಂಭ್ರಾಂತಾಶ್ವದ್ವಿಪರಥಾ ಪದಾತೀನವಮೃದ್ನತೀ||

ಆ ವೀರನು ಕೆಳಗೆ ಬೀಳಲು ಅವನ ಸೇನೆಯು ಪಲಾಯನ ಮಾಡಿತು. ಸಂಭ್ರಾಂತರಾಗಿ ಓಡಿ ಹೋಗುತ್ತಿದ್ದ ಕುದುರೆ-ಆನೆ-ರಥಗಳು ಪದಾತಿಗಳನ್ನೇ ತುಳಿದವು.

07025019a ತೇಷ್ವನೀಕೇಷು ಸರ್ವೇಷು ವಿದ್ರವತ್ಸು ಸಮಂತತಃ|

07025019c ಪ್ರಾಗ್ಜ್ಯೋತಿಷಸ್ತತೋ ಭೀಮಂ ಕುಂಜರೇಣ ಸಮಾದ್ರವತ್||

ಆ ಸೇನೆಗಳು ಎಲ್ಲ ಕಡೆ ಓಡಿ ಹೋಗುತ್ತಿರಲು ಪ್ರಾಗ್ಜ್ಯೋತಿಷನು ಆನೆಯೊಂದಿಗೆ ಆಕ್ರಮಣಿಸಿದನು.

07025020a ಯೇನ ನಾಗೇನ ಮಘವಾನಜಯದ್ದೈತ್ಯದಾನವಾನ್|

07025020c ಸ ನಾಗಪ್ರವರೋ ಭೀಮಂ ಸಹಸಾ ಸಮುಪಾದ್ರವತ್||

ಯಾವ ಆನೆಯ ಮೇಲೆ ಕುಳಿತು ಮಘವಾನನು ದೈತ್ಯ-ದಾನವರನ್ನು ಜಯಿಸಿದನೋ ಅದೇ ಶ್ರೇಷ್ಠ ಆನೆಗಳ ಕುಲದಲ್ಲಿ ಹುಟ್ಟಿದ ಆನೆಯ ಮೇಲೆ ಕುಳಿತು ಒಮ್ಮಿಂದೊಮ್ಮೆಲೇ ಆಕ್ರಮಣಿಸಿದನು.

07025021a ಶ್ರವಣಾಭ್ಯಾಮಥೋ ಪದ್ಭ್ಯಾಂ ಸಂಹತೇನ ಕರೇಣ ಚ|

07025021c ವ್ಯಾವೃತ್ತನಯನಃ ಕ್ರುದ್ಧಃ ಪ್ರದಹನ್ನಿವ ಪಾಂಡವಂ||

ಕ್ರುದ್ದವಾದ ಆ ಶ್ರೇಷ್ಠ ಆನೆಯು ಕಣ್ಣುಗಳನ್ನು ಅಗಲ ಮಾಡಿಕೊಂಡು ತನ್ನ ಎರಡೂ ಮುಂಗಾಲುಗಳಿಂದ ಮತ್ತು ಸುತ್ತಿಕೊಂಡಿರುವ ಸೊಂಡಿಲಿನಿಂದ ಮಥಿಸಿಬಿಡುವಂತೆ ಪಾಂಡವನ ಮೇಲೆ ಎರಗಿತು.

07025022a ತತಃ ಸರ್ವಸ್ಯ ಸೈನ್ಯಸ್ಯ ನಾದಃ ಸಮಭವನ್ಮಹಾನ್|

07025022c ಹಾ ಹಾ ವಿನಿಹತೋ ಭೀಮಃ ಕುಂಜರೇಣೇತಿ ಮಾರಿಷ||

ಮಾರಿಷ! ಆಗ “ಹಾಹಾ! ಆನೆಯಿಂದ ಭೀಮನು ಹತನಾದನು!” ಎಂದು ಸೈನ್ಯದ ಎಲ್ಲ ಕಡೆಗಳಲ್ಲಿ ಮಹಾನಾದವುಂಟಾಯಿತು.

07025023a ತೇನ ನಾದೇನ ವಿತ್ರಸ್ತಾ ಪಾಂಡವಾನಾಮನೀಕಿನೀ|

07025023c ಸಹಸಾಭ್ಯದ್ರವದ್ರಾಜನ್ಯತ್ರ ತಸ್ಥೌ ವೃಕೋದರಃ||

ರಾಜನ್! ಆ ಕೂಗಿನಿಂದ ತತ್ತರಿಸಿದ ಪಾಂಡವರ ಸೇನೆಯು ತಕ್ಷಣವೇ ವೃಕೋದರನು ಎಲ್ಲಿ ನಿಂತಿದ್ದನೋ ಅಲ್ಲಿಗೆ ಧಾವಿಸಿತು.

07025024a ತತೋ ಯುಧಿಷ್ಠಿರೋ ರಾಜಾ ಹತಂ ಮತ್ವಾ ವೃಕೋದರಂ|

07025024c ಭಗದತ್ತಂ ಸಪಾಂಚಾಲಃ ಸರ್ವತಃ ಸಮವಾರಯತ್||

ಆಗ ರಾಜಾ ಯುಧಿಷ್ಠಿರನು ವೃಕೋದರನು ಹತನಾದನೆಂದು ತಿಳಿದು ಪಾಂಚಾಲರೊಂದಿಗೆ ಭಗದತ್ತನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.

07025025a ತಂ ರಥೈ ರಥಿನಾಂ ಶ್ರೇಷ್ಠಾಃ ಪರಿವಾರ್ಯ ಸಮಂತತಃ|

07025025c ಅವಾಕಿರಂ ಶರೈಸ್ತೀಕ್ಷ್ಣೈಃ ಶತಶೋಽಥ ಸಹಸ್ರಶಃ||

ರಥಿಗಳಲ್ಲಿ ಶ್ರೇಷ್ಠರು ರಥಗಳಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದು ನೂರಾರು ಸಹಸ್ರಾರು ತೀಕ್ಷ್ಣ ಶರಗಳಿಂದ ಮುಚ್ಚಿದರು.

07025026a ಸ ವಿಘಾತಂ ಪೃಷತ್ಕಾನಾಮಂಕುಶೇನ ಸಮಾಚರನ್|

07025026c ಗಜೇನ ಪಾಂಡುಪಾಂಚಾಲಾನ್ವ್ಯಧಮತ್ಪರ್ವತೇಶ್ವರಃ||

ಆ ಪರ್ವತೇಶ್ವರನು ಅಂಕುಶದಿಂದಲೇ ತನ್ನ ಮೇಲೆ ಬೀಳುತ್ತಿದ್ದ ಶರಗಳನ್ನು ತಡೆದು ಆನೆಯೊಂದಿಗೆ ಪಾಂಡವ-ಪಾಂಚಾಲರನ್ನು ಜಜ್ಜಿದನು.

07025027a ತದದ್ಭುತಮಪಶ್ಯಾಮ ಭಗದತ್ತಸ್ಯ ಸಂಯುಗೇ|

07025027c ತಥಾ ವೃದ್ಧಸ್ಯ ಚರಿತಂ ಕುಂಜರೇಣ ವಿಶಾಂ ಪತೇ||

ವಿಶಾಂಪತೇ! ಆಗ ನಾವು ಸಂಯುಗದಲ್ಲಿ ಆ ವೃದ್ಧ ಭಗದತ್ತನ ಆನೆಯು ಮಾಡಿ ತೋರಿಸಿದ ಅದ್ಭುತವನ್ನು ಕಂಡೆವು.

07025028a ತತೋ ರಾಜಾ ದಶಾರ್ಣಾನಾಂ ಪ್ರಾಗ್ಜ್ಯೋತಿಷಮುಪಾದ್ರವತ್|

07025028c ತಿರ್ಯಗ್ಯಾತೇನ ನಾಗೇನ ಸಮದೇನಾಶುಗಾಮಿನಾ||

ಆಗ ದಶಾರ್ಣರ ರಾಜನು ಮದೋದಕವನ್ನು ಸುರಿಸುತ್ತಿದ್ದ, ಶೀಘ್ರವಾಗಿ ಸಾಗುತ್ತಿದ್ದ, ಮತ್ತು ವಕ್ರಗತಿಯಲ್ಲಿ ಹೋಗುತ್ತಿದ್ದ ಆನೆಯ ಮೇಲೇರಿ ಪ್ರಾಗ್ಜ್ಯೋತಿಷನನ್ನು ಆಕ್ರಮಣಿಸಿದನು.

07025029a ತಯೋರ್ಯುದ್ಧಂ ಸಮಭವನ್ನಾಗಯೋರ್ಭೀಮರೂಪಯೋಃ|

07025029c ಸಪಕ್ಷಯೋಃ ಪರ್ವತಯೋರ್ಯಥಾ ಸದ್ರುಮಯೋಃ ಪುರಾ||

ಭೀಮರೂಪದ ಆ ಎರಡು ಆನೆಗಳ ನಡುವೆ ಹಿಂದೆ ರೆಕ್ಕೆಗಳನ್ನು ಹೊಂದಿದ್ದ ಪರ್ವತಗಳು ವೃಕ್ಷಗಳೊಂದಿಗೆ ಹೊಡೆದಾಡುತ್ತಿದ್ದಂತೆ ಭಯಂಕರ ಯುದ್ಧವು ನಡೆಯಿತು.

07025030a ಪ್ರಾಗ್ಜ್ಯೋತಿಷಪತೇರ್ನಾಗಃ ಸನ್ನಿಪತ್ಯಾಪವೃತ್ಯ ಚ|

07025030c ಪಾರ್ಶ್ವೇ ದಶಾರ್ಣಾಧಿಪತೇರ್ಭಿತ್ತ್ವಾ ನಾಗಮಪಾತಯತ್||

ಪ್ರಾಗ್ಜ್ಯೋತಿಷಪತಿಯ ಆನೆಯು ಹಿಂದೆ ಸರಿದು ಪುನಃ ರಭಸದಿಂದ ಮುಂದೆ ಬಂದು ದಶಾರ್ಣಾಧಿಪತಿಯ ಆನೆಯ ಪಾರ್ಶ್ವಭಾಗವನ್ನು ಪ್ರಹರಿಸಿ ಸೀಳಿ ಕೆಳಗುರುಳಿಸಿತು.

07025031a ತೋಮರೈಃ ಸೂರ್ಯರಶ್ಮ್ಯಾಭೈರ್ಭಗದತ್ತೋಽಥ ಸಪ್ತಭಿಃ|

07025031c ಜಘಾನ ದ್ವಿರದಸ್ಥಂ ತಂ ಶತ್ರುಂ ಪ್ರಚಲಿತಾಸನಂ||

ಆಗ ಸೂರ್ಯನ ರಶ್ಮಿಗಳಂತೆ ಹೊಳೆಯುತ್ತಿದ್ದ ಏಳು ತೋಮರಗಳಿಂದ ಆನೆಯ ಮೇಲೆ ಕುಳಿತಿದ್ದ ಶತ್ರುವನ್ನು ಕೆಳಗೆ ಬೀಳುವಾಗ ಸಂಹರಿಸಿದನು.

07025032a ಉಪಸೃತ್ಯ ತು ರಾಜಾನಂ ಭಗದತ್ತಂ ಯುಧಿಷ್ಠಿರಃ|

07025032c ರಥಾನೀಕೇನ ಮಹತಾ ಸರ್ವತಃ ಪರ್ಯವಾರಯತ್||

ಯುಧಿಷ್ಠಿರನಾದರೋ ರಾಜಾ ಭಗದತ್ತನ ಮೇಲೆ ಪ್ರಹರಿಸುತ್ತಾ ಮಹಾ ರಥಸೇನೆಯೊಂದಿಗೆ ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.

07025033a ಸ ಕುಂಜರಸ್ಥೋ ರಥಿಭಿಃ ಶುಶುಭೇ ಸರ್ವತೋ ವೃತಃ|

07025033c ಪರ್ವತೇ ವನಮಧ್ಯಸ್ಥೋ ಜ್ವಲನ್ನಿವ ಹುತಾಶನಃ||

ಪರ್ವತದ ಮೇಲಿನ ವನ ಮಧ್ಯದಲ್ಲಿ ಪ್ರಜ್ವಲಿಸುತ್ತಿರುವ ಹುತಾಶನನಂತೆ ರಥಗಳಿಂದ ಎಲ್ಲಕಡೆಗಳಲ್ಲಿ ಸುತ್ತುವರೆಯಲ್ಪಟ್ಟಿದ್ದ ಆನೆಯ ಮೇಲೆ ಕುಳಿತಿದ್ದ ಅವನು ಶೋಭಿಸಿದನು.

07025034a ಮಂಡಲಂ ಸರ್ವತಃ ಶ್ಲಿಷ್ಟಂ ರಥಿನಾಮುಗ್ರಧನ್ವಿನಾಂ|

07025034c ಕಿರತಾಂ ಶರವರ್ಷಾಣಿ ಸ ನಾಗಃ ಪರ್ಯವರ್ತತ||

ಬಾಣಗಳ ಮಳೆಗರೆಯುತ್ತಿದ್ದ ಉಗ್ರಧನ್ವಿ ರಥಿಗಳ ಮಂಡಲವು ಎಲ್ಲ ಕಡೆಗಳಿಂದಲೂ ಆನೆಯ ಮೇಲೆ ಆಕ್ರಮಣ ನಡೆಸುತ್ತಿತ್ತು.

07025035a ತತಃ ಪ್ರಾಗ್ಜ್ಯೋತಿಷೋ ರಾಜಾ ಪರಿಗೃಹ್ಯ ದ್ವಿಪರ್ಷಭಂ|

07025035c ಪ್ರೇಷಯಾಮಾಸ ಸಹಸಾ ಯುಯುಧಾನರಥಂ ಪ್ರತಿ||

ಆಗ ಪ್ರಾಗ್ಜ್ಯೋತಿಷದ ರಾಜನು ಆ ಮಹಾಗಜವನ್ನು ಹತೋಟಿಗೆ ತೆಗೆದುಕೊಂಡು ಯುಯುಧಾನನ ರಥದ ಕಡೆ ರಭಸದಿಂದ ನುಗ್ಗಿಸಿದನು.

07025036a ಶಿನೇಃ ಪೌತ್ರಸ್ಯ ತು ರಥಂ ಪರಿಗೃಹ್ಯ ಮಹಾದ್ವಿಪಃ|

07025036c ಅಭಿಚಿಕ್ಷೇಪ ವೇಗೇನ ಯುಯುಧಾನಸ್ತ್ವಪಾಕ್ರಮತ್||

ಆ ಮಹಾಗಜವು ಶಿನಿಯ ಮೊಮ್ಮಗನ ರಥವನ್ನು ಸೊಂಡಿಲಿನಿಂದ ಹಿಡಿದು ವೇಗದಿಂದ ದೂರಕ್ಕೆಸೆಯಿತು. ಅಷ್ಟರೊಳಗೆ ಯುಯುಧಾನನು ರಥದಿಂದ ಕೆಳಕ್ಕೆ ಹಾರಿದ್ದನು.

07025037a ಬೃಹತಃ ಸೈಂಧವಾನಶ್ವಾನ್ಸಮುತ್ಥಾಪ್ಯ ತು ಸಾರಥಿಃ|

07025037c ತಸ್ಥೌ ಸಾತ್ಯಕಿಮಾಸಾದ್ಯ ಸಂಪ್ಲುತಸ್ತಂ ರಥಂ ಪುನಃ||

ಸಾರಥಿಯಾದರೋ ದೊಡ್ಡದಾಗಿದ್ದ ಸೈಂಧವ ಕುದುರೆಗಳನ್ನು ಮೇಲೆಬ್ಬಿಸಿ ರಥದ ಮೇಲೆ ಹಾರಿ ಕುಳಿತು ರಥವನ್ನು ಪುನಃ ಸಾತ್ಯಕಿಯ ಬಳಿ ತಂದು ನಿಲ್ಲಿಸಿದನು.

07025038a ಸ ತು ಲಬ್ಧ್ವಾಂತರಂ ನಾಗಸ್ತ್ವರಿತೋ ರಥಮಂಡಲಾತ್|

07025038c ನಿಶ್ಚಕ್ರಾಮ ತತಃ ಸರ್ವಾನ್ಪರಿಚಿಕ್ಷೇಪ ಪಾರ್ಥಿವಾನ್||

ಅಷ್ಟರಲ್ಲಿಯೇ ತ್ವರೆಮಾಡಿ ಆ ಆನೆಯು ರಥಮಂಡಲದಿಂದ ಹೊರಬಂದು ಎಲ್ಲ ರಾಜರನ್ನೂ ಎಳೆದೆಳೆದು ಎಸೆಯತೊಡಗಿತ್ತು.

07025039a ತೇ ತ್ವಾಶುಗತಿನಾ ತೇನ ತ್ರಾಸ್ಯಮಾನಾ ನರರ್ಷಭಾಃ|

07025039c ತಮೇಕಂ ದ್ವಿರದಂ ಸಂಖ್ಯೇ ಮೇನಿರೇ ಶತಶೋ ನೃಪಾಃ||

ಅತಿ ವೇಗದ ಆ ಆನೆಯಿಂದ ಪೀಡಿತರಾದ ನರರ್ಷಭರು ಒಂದೇ ಆನೆಯೊಂದಿಗೆ ಹೋರಾಡುತ್ತಿದ್ದರೂ ನೂರಾರರೊಂದಿಗೆ ಹೋರಾಡುತ್ತಿದ್ದೇವೋ ಎಂದು ಭಾವಿಸಿದರು.

07025040a ತೇ ಗಜಸ್ಥೇನ ಕಾಲ್ಯಂತೇ ಭಗದತ್ತೇನ ಪಾಂಡವಾಃ|

07025040c ಐರಾವತಸ್ಥೇನ ಯಥಾ ದೇವರಾಜೇನ ದಾನವಾಃ||

ಆ ಆನೆಯ ಮೇಲೆ ಕುಳಿತಿದ್ದ ಭಗದತ್ತನು ಐರಾವತದ ಮೇಲೆ ಕುಳಿತಿದ್ದ ದೇವರಾಜನು ದಾನವರನ್ನು ಹೇಗೋ ಹಾಗೆ ಪಾಂಡವರನ್ನು ನಾಶಗೊಳಿಸುತ್ತಿದ್ದನು.

07025041a ತೇಷಾಂ ಪ್ರದ್ರವತಾಂ ಭೀಮಃ ಪಾಂಚಾಲಾನಾಮಿತಸ್ತತಃ|

07025041c ಗಜವಾಜಿಕೃತಃ ಶಬ್ದಃ ಸುಮಹಾನ್ಸಮಜಾಯತ||

ಅಲ್ಲಿಂದ ಓಡಿಹೋಗುತ್ತಿದ್ದ ಪಾಂಚಾಲರ ಆನೆ-ಕುದುರೆಗಳು ಮಾಡುತ್ತಿದ್ದ ಭಯಂಕರ ಚೀತ್ಕಾರಗಳ ಶಬ್ಧವು ಜೋರಾಗಿ ಕೇಳಿಬರುತ್ತಿತ್ತು.

07025042a ಭಗದತ್ತೇನ ಸಮರೇ ಕಾಲ್ಯಮಾನೇಷು ಪಾಂಡುಷು|

07025042c ಪ್ರಾಗ್ಜ್ಯೋತಿಷಮಭಿಕ್ರುದ್ಧಃ ಪುನರ್ಭೀಮಃ ಸಮಭ್ಯಯಾತ್||

ಸಮರದಲ್ಲಿ ಪ್ರಾಗ್ಜ್ಯೋತಿಷದ ಭಗದತ್ತನು ಪಾಂಡವರ ಸೇನೆಯನ್ನು ನಾಶಗೊಳಿಸುತ್ತಿರಲು ಪರಮ ಕ್ರುದ್ಧನಾದ ಭೀಮನು ಪುನಃ ಅವನನ್ನು ಆಕ್ರಮಣಿಸಿದನು.

07025043a ತಸ್ಯಾಭಿದ್ರವತೋ ವಾಹಾನ್ ಹಸ್ತಮುಕ್ತೇನ ವಾರಿಣಾ|

07025043c ಸಿಕ್ತ್ವಾ ವ್ಯತ್ರಾಸಯನ್ನಾಗಸ್ತೇ ಪಾರ್ಥಮಹರಂಸ್ತತಃ||

ರಭಸದಿಂದ ತನ್ನ ಕಡೆಗೆ ಬರುತ್ತಿದ್ದ ಅವನ ಕುದುರೆಗಳ ಮೇಲೆ ಆ ಆನೆಯು ಸೊಂಡಿಲಿನಿಂದ ನೀರನ್ನು ಸುರಿಸಿ ತೋಯಿಸಿತು. ಅನಂತರ ಅವು ಪಾರ್ಥನನ್ನು ದೂರಕ್ಕೆ ಕೊಂಡೊಯ್ದವು.

07025044a ತತಸ್ತಮಭ್ಯಯಾತ್ತೂರ್ಣಂ ರುಚಿಪರ್ವಾಕೃತೀಸುತಃ|

07025044c ಸಮುಕ್ಷಂ ಶರವರ್ಷೇಣ ರಥಸ್ಥೋಽಂತಕಸನ್ನಿಭಃ||

ಆಗ ತಕ್ಷಣವೇ ರಥದ ಮೇಲೆ ಕುಳಿತು ಅಂತಕನಂತೆ ತೋರುತ್ತಿದ್ದ ಅಕೃತಿಯ ಮಗ ರುಚಿಪರ್ವನು ಭಗದತ್ತನ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಆಕ್ರಮಣಿಸಿದನು.

07025045a ತತೋ ರುಚಿರಪರ್ವಾಣಂ ಶರೇಣ ನತಪರ್ವಣಾ|

07025045c ಸುಪರ್ವಾ ಪರ್ವತಪತಿರ್ನಿನ್ಯೇ ವೈವಸ್ವತಕ್ಷಯಂ||

ಆಗ ಪರ್ವತಪತಿಯು ಸುಂದರ ನತಪರ್ವ ಶರದಿಂದ ಅವನನ್ನು ವೈವಸ್ವತನ ಸದನಕ್ಕೆ ಕಳುಹಿಸಿದನು.

07025046a ತಸ್ಮಿನ್ನಿಪತಿತೇ ವೀರೇ ಸೌಭದ್ರೋ ದ್ರೌಪದೀಸುತಾಃ|

07025046c ಚೇಕಿತಾನೋ ಧೃಷ್ಟಕೇತುರ್ಯುಯುತ್ಸುಶ್ಚಾರ್ದಯನ್ದ್ವಿಪಂ||

ಆ ವೀರನು ಕೆಳಗುರುಳಲು ಸೌಭದ್ರ ಮತ್ತು ದ್ರೌಪದೀಸುತರು, ಚೇಕಿತಾನ, ಧೃಷ್ಟಕೇತು ಮತ್ತು ಯುಯುತ್ಸುವು ಆನೆಯನ್ನು ಪೀಡಿಸತೊಡಗಿದರು.

07025047a ತ ಏನಂ ಶರಧಾರಾಭಿರ್ಧಾರಾಭಿರಿವ ತೋಯದಾಃ|

07025047c ಸಿಷಿಚುರ್ಭೈರವಾನ್ನಾದಾನ್ವಿನದಂತೋ ಜಿಘಾಂಸವಃ||

ಅದನ್ನು ಕೊಲ್ಲಲು ಬಯಸಿ ಭೈರವ ಗರ್ಜನೆಯನ್ನು ಗರ್ಜಿಸುತ್ತಾ ಮೋಡಗಳಂತೆ ಬಾಣದ ಮಳೆಯನ್ನು ಸುರಿಸಿ ತೋಯಿಸಿದರು.

07025048a ತತಃ ಪಾರ್ಷ್ಣ್ಯಂಕುಶಾಂಗುಷ್ಠೈಃ ಕೃತಿನಾ ಚೋದಿತೋ ದ್ವಿಪಃ|

07025048c ಪ್ರಸಾರಿತಕರಃ ಪ್ರಾಯಾತ್ಸ್ತಬ್ಧಕರ್ಣೇಕ್ಷಣೋ ದ್ರುತಂ||

ಆಗ ಹಿಮ್ಮಡಿ, ಅಂಕುಶ ಮತ್ತು ಅಂಗುಷ್ಠಗಳಿಂದ ಪ್ರಚೋದಿತಗೊಂಡ ಆನೆಯು ಸೊಂಡಿಲನ್ನು ಮೇಲೆತ್ತಿ ಕಿವಿಯನ್ನು ನಿಮಿರಿಸಿ ಒಂದೇ ಕಡೆ ನೋಡುತ್ತಾ ಶೀಘ್ರವಾಗಿ ಓಡತೊಡಗಿತು.

07025049a ಸೋಽಧಿಷ್ಠಾಯ ಪದಾ ವಾಹಾನ್ಯುಯುತ್ಸೋಃ ಸೂತಮಾರುಜತ್|

07025049c ಪುತ್ರಸ್ತು ತವ ಸಂಭ್ರಾಂತಃ ಸೌಭದ್ರಸ್ಯಾಪ್ಲುತೋ ರಥಂ||

ಅದು ಕಾಲಿನಿಂದ ಯುಯುತ್ಸುವಿನ ಕುದುರೆಗಳನ್ನು ಒದೆದು ಸೂತನನ್ನು ಕೊಂದಿತು. ಆಗ ಸಂಭ್ರಾಂತನಾದ ನಿನ್ನ ಮಗನು ಹಾರಿ ಸೌಭದ್ರನ ರಥವನ್ನು ಏರಿದನು.

07025050a ಸ ಕುಂಜರಸ್ಥೋ ವಿಸೃಜನ್ನಿಷೂನರಿಷು ಪಾರ್ಥಿವಃ|

07025050c ಬಭೌ ರಶ್ಮೀನಿವಾದಿತ್ಯೋ ಭುವನೇಷು ಸಮುತ್ಸೃಜನ್||

ಆ ಆನೆಯ ಮೇಲೆ ಕುಳಿತಿದ್ದ ಪಾರ್ಥಿವನು ಭುವನಗಳನ್ನು ತನ್ನ ರಶ್ಮಿಗಳಿಂದ ಬೆಳಗಿಸುವ ಆದಿತ್ಯನಂತೆ ತನ್ನ ಶತ್ರುಗಳ ಮೇಲೆ ಬಾಣಗಳನ್ನು ಪ್ರಹರಿಸುತ್ತಾ ಶೋಭಿಸಿದನು.

07025051a ತಮಾರ್ಜುನಿರ್ದ್ವಾದಶಭಿರ್ಯುಯುತ್ಸುರ್ದಶಭಿಃ ಶರೈಃ|

07025051c ತ್ರಿಭಿಸ್ತ್ರಿಭಿರ್ದ್ರೌಪದೇಯಾ ಧೃಷ್ಟಕೇತುಶ್ಚ ವಿವ್ಯಧುಃ||

ಅವನನ್ನು ಆರ್ಜುನಿಯು ಹನ್ನೆರಡು, ಯುಯುತ್ಸುವು ಹತ್ತು, ದ್ರೌಪದೇಯರು ಮತ್ತು ಧೃಷ್ಟಕೇತುವು ಮೂರು ಮೂರು ಬಾಣಗಳಿಂದ ಹೊಡೆದರು.

07025052a ಸೋಽರಿಯತ್ನಾರ್ಪಿತೈರ್ಬಾಣೈರಾಚಿತೋ ದ್ವಿರದೋ ಬಭೌ|

07025052c ಸಂಸ್ಯೂತ ಇವ ಸೂರ್ಯಸ್ಯ ರಶ್ಮಿಭಿರ್ಜಲದೋ ಮಹಾನ್||

ಆ ಶತ್ರುಗಳಿಂದ ಪ್ರಹರಿಸಲ್ಪಟ್ಟ ಬಾಣಗಳಿಂದ ಮುಚ್ಚಿ ಹೋದ ಆನೆಯು ಸೂರ್ಯನ ಕಿರಣಗಳಿಂದ ಸಂಸ್ಯೂತವಾದ ಮಹಾ ಮೇಘದಂತೆ ಕಾಣತ್ತಿತ್ತು.

07025053a ನಿಯಂತುಃ ಶಿಲ್ಪಯತ್ನಾಭ್ಯಾಂ ಪ್ರೇಷಿತೋಽರಿಶರಾರ್ದಿತಃ|

07025053c ಪರಿಚಿಕ್ಷೇಪ ತಾನ್ನಾಗಃ ಸ ರಿಪೂನ್ಸವ್ಯದಕ್ಷಿಣಂ||

ನಿಯಂತ್ರಿಸಲು ಪ್ರಯತ್ನಪಡುತ್ತಿದ್ದ ಶತ್ರುಗಳು ಪ್ರಯೋಗಿಸಿದ ಶರಗಳಿಂದ ಆರ್ದಿತಗೊಂಡ ಆ ಆನೆಯು ತನ್ನ ಸೊಂಡಿಲಿನಿಂದ ರಿಪುಗಳನ್ನು ಹಿಡಿದು ಎಡ-ಬಲಗಳಲ್ಲಿ ಎಸೆಯತೊಡಗಿತು.

07025054a ಗೋಪಾಲ ಇವ ದಂಡೇನ ಯಥಾ ಪಶುಗಣಾನ್ವನೇ|

07025054c ಆವೇಷ್ಟಯತ ತಾಂ ಸೇನಾಂ ಭಗದತ್ತಸ್ತಥಾ ಮುಹುಃ||

ವನದಲ್ಲಿ ಗೋಪಾಲಕನು ಕೋಲಿನಿಂದ ದನಗಳನ್ನು ತರುಬುವಂತೆ ಭಗದತ್ತನು ಬಾರಿ ಬಾರಿಗೂ ಅವರ ಸೇನೆಯನ್ನು ತರುಬುತ್ತಿದ್ದನು.

07025055a ಕ್ಷಿಪ್ರಂ ಶ್ಯೇನಾಭಿಪನ್ನಾನಾಂ ವಾಯಸಾನಾಮಿವ ಸ್ವನಃ|

07025055c ಬಭೂವ ಪಾಂಡವೇಯಾನಾಂ ಭೃಶಂ ವಿದ್ರವತಾಂ ಸ್ವನಃ||

ವೇಗವಾಗಿ ಬಂದ ಗಿಡುಗದ ಹಿಡಿತಕ್ಕೆ ಸಿಲುಕಿದ ಕಾಗೆಗಳು ಕೂಗಿಕೊಳ್ಳುವಂತೆ ಅವನಿಂದ ಪೀಡಿತರಾಗಿ ಪಾಂಡವರ ಸೇನೆಯು ಜೋರಾಗಿ ಕೂಗುತ್ತಾ ಓಡಿ ಹೋಗುತ್ತಿತ್ತು.

07025056a ಸ ನಾಗರಾಜಃ ಪ್ರವರಾಂಕುಶಾಹತಃ

         ಪುರಾ ಸಪಕ್ಷೋಽದ್ರಿವರೋ ಯಥಾ ನೃಪ|

07025056c ಭಯಂ ತಥಾ ರಿಪುಷು ಸಮಾದಧದ್ಭೃಶಂ

         ವಣಿಗ್ಗಣಾನಾಂ ಕ್ಷುಭಿತೋ ಯಥಾರ್ಣವಃ||

ನೃಪ! ಅಂಕುಶದಿಂದ ತಿವಿಯಲ್ಪಟ್ಟ ಆ ಗಜರಾಜನು ಹಿಂದೆ ರೆಕ್ಕೆಗಳನ್ನು ಹೊಂದಿದ್ದ ಶ್ರೇಷ್ಠ ಗಿರಿಗಳು ಹೇಗೋ ಹಾಗೆ ರಿಪುಸೇನೆಗಳಲ್ಲಿ ಭಯವನ್ನು ತರುತ್ತಿತ್ತು. ಸಾಗರವನ್ನು ಕ್ಷೋಭೆಗೊಳಿಸಿ ವರ್ತಕರನ್ನು ಅಲ್ಲೋಲಕಲ್ಲೋಲಗೊಳಿಸುವಂತೆ ತೋರುತ್ತಿತ್ತು.

07025057a ತತೋ ಧ್ವನಿರ್ದ್ವಿರದರಥಾಶ್ವಪಾರ್ಥಿವೈರ್

         ಭಯಾದ್ದ್ರವದ್ಭಿರ್ಜನಿತೋಽತಿಭೈರವಃ|

07025057c ಕ್ಷಿತಿಂ ವಿಯದ್ದ್ಯಾಂ ವಿದಿಶೋ ದಿಶಸ್ತಥಾ

         ಸಮಾವೃಣೋತ್ಪಾರ್ಥಿವ ಸಂಯುಗೇ ತದಾ||

ಪಾರ್ಥಿವ! ಆ ಆನೆಯಿಂದ ಭಯಾರ್ದಿತರಾಗಿ ಅತಿ ಭೈರವ ಸ್ವರದಲ್ಲಿ ಕೂಗಿಕೊಂಡು ಓಡಿ ಹೋಗುತ್ತಿರುವ ರಥ-ಅಶ್ವ-ಪಾರ್ಥಿವರ ಧ್ವನಿಯು ಭೂಮಿಯನ್ನೂ, ಆಕಾಶವನ್ನೂ, ದಿಕ್ಕುಗಳನ್ನೂ, ಉಪದಿಕ್ಕುಗಳನ್ನೂ ತುಂಬಿತು.

07025058a ಸ ತೇನ ನಾಗಪ್ರವರೇಣ ಪಾರ್ಥಿವೋ

         ಭೃಶಂ ಜಗಾಹೇ ದ್ವಿಷತಾಮನೀಕಿನೀಂ|

07025058c ಪುರಾ ಸುಗುಪ್ತಾಂ ವಿಬುಧೈರಿವಾಹವೇ

         ವಿರೋಚನೋ ದೇವವರೂಥಿನೀಮಿವ||

ಹಿಂದೆ ವಿಬುಧರಿಂದ ರಕ್ಷಿಸಲ್ಪಟ್ಟ ದೇವಸೇನೆಯನ್ನು ವಿರೋಚನನು ಬೇಧಿಸಿ ಒಳಹೊಕ್ಕಿದಂತೆ ಆ ಗಜಶ್ರೇಷ್ಠನ ಮೇಲೇರಿ ಪಾರ್ಥಿವನು ಶತ್ರುಸೇನೆಯನ್ನು ಚೆನ್ನಾಗಿ ಮರ್ದಿಸಿದನು.

07025059a ಭೃಶಂ ವವೌ ಜ್ವಲನಸಖೋ ವಿಯದ್ರಜಃ

         ಸಮಾವೃಣೋನ್ಮುಹುರಪಿ ಚೈವ ಸೈನಿಕಾನ್|

07025059c ತಂ ಏಕನಾಗಂ ಗಣಶೋ ಯಥಾ ಗಜಾಃ

         ಸಮಂತತೋ ದ್ರುತಮಿವ ಮೇನಿರೇ ಜನಾಃ||

ಆಗ ಅಗ್ನಿ ಸಖ ವಾಯುವೂ ಜೋರಾಗಿ ಬೀಸಿ ಎಬ್ಬಿಸಿದ ಧೂಳು ಸೈನಿಕರೆಲ್ಲರನ್ನೂ ವ್ಯಾಪಿಸಿತು. ಒಂದೇ ಒಂದು ಆನೆಯು ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸುತ್ತಿದ್ದರೂ ಹಲವಾರು ಆನೆಗಳು ಗುಂಪಾಗಿ ರಣಾಂಗಣದಲ್ಲಿ ಓಡಾಡುತ್ತಿರುವಂತೆ ತೋರುತ್ತಿದ್ದವು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಭಗದತ್ತಯುದ್ಧೇ ಪಂಚವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಭಗದತ್ತಯುದ್ಧ ಎನ್ನುವ ಇಪ್ಪತ್ತೈದನೇ ಅಧ್ಯಾಯವು.

Image result for indian motifs against white background

Comments are closed.