Drona Parva: Chapter 21

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೧

ಕರ್ಣ-ದುರ್ಯೋಧನ ಸಂವಾದ (೧-೨೯).

07021001 ಧೃತರಾಷ್ಟ್ರ ಉವಾಚ|

07021001a ಭಾರದ್ವಾಜೇನ ಭಗ್ನೇಷು ಪಾಂಡವೇಷು ಮಹಾಮೃಧೇ|

07021001c ಪಾಂಚಾಲೇಷು ಚ ಸರ್ವೇಷು ಕಶ್ಚಿದನ್ಯೋಽಭ್ಯವರ್ತತ||

ಧೃತರಾಷ್ಟ್ರನು ಹೇಳಿದನು: “ಮಹಾಯುದ್ಧದಲ್ಲಿ ಭಾರದ್ವಾಜನು ಪಾಂಡವರು ಮತ್ತು ಪಾಂಚಾಲರೆಲ್ಲರನ್ನೂ ಭಗ್ನಗೊಳಿಸಲು ಬೇರೆ ಯಾರು ಅವನನ್ನು ಎದುರಿಸಿದರು?

07021002a ಆರ್ಯಾಂ ಯುದ್ಧೇ ಮತಿಂ ಕೃತ್ವಾ ಕ್ಷತ್ರಿಯಾಣಾಂ ಯಶಸ್ಕರೀಂ|

07021002c ಅಸೇವಿತಾಂ ಕಾಪುರುಷೈಃ ಸೇವಿತಾಂ ಪುರುಷರ್ಷಭೈಃ||

ಕ್ಷತ್ರಿಯರಿಗೆ ಯಶಸ್ಸನ್ನುಂಟುಮಾಡುವ, ನೀಚಪುರುಷರಿಗೆ ಅನುಸರಿಸಲು ಅಸಾದ್ಯವಾದ, ಪುರುಷಶ್ರೇಷ್ಠರು ಅನುಸರಿಸುವ, ಯಾವ ಆರ್ಯನು ಅವನೊಂದಿಗೆ ಯುದ್ಧದ ಮನಸ್ಸನ್ನು ಮಾಡಿದನು?

07021003a ಸ ಹಿ ವೀರೋ ನರಃ ಸೂತ ಯೋ ಭಗ್ನೇಷು ನಿವರ್ತತೇ|

07021003c ಅಹೋ ನಾಸೀತ್ಪುಮಾನ್ಕಶ್ಚಿದ್ದೃಷ್ಟ್ವಾ ದ್ರೋಣಂ ವ್ಯವಸ್ಥಿತಂ||

ಸೂತ! ಭಗ್ನವಾದರೂ ಮರಳಿ ಬರುವ ನರನೇ ವೀರನು. ಅಲ್ಲಿ ವ್ಯವಸ್ಥಿತನಾಗಿದ್ದ ದ್ರೋಣನನ್ನು ನೋಡಿ ಎದುರಿಸುವ ಪುರುಷರು ಯಾರೂ ಇರಲಿಲ್ಲವೇ?

07021004a ಜೃಂಭಮಾಣಮಿವ ವ್ಯಾಘ್ರಂ ಪ್ರಭಿನ್ನಮಿವ ಕುಂಜರಂ|

07021004c ತ್ಯಜಂತಮಾಹವೇ ಪ್ರಾಣಾನ್ಸನ್ನದ್ಧಂ ಚಿತ್ರಯೋಧಿನಂ||

07021005a ಮಹೇಷ್ವಾಸಂ ನರವ್ಯಾಘ್ರಂ ದ್ವಿಷತಾಮಘವರ್ಧನಂ|

07021005c ಕೃತಜ್ಞಂ ಸತ್ಯನಿರತಂ ದುರ್ಯೋಧನಹಿತೈಷಿಣಂ||

07021006a ಭಾರದ್ವಾಜಂ ತಥಾನೀಕೇ ದೃಷ್ಟ್ವಾ ಶೂರಮವಸ್ಥಿತಂ|

07021006c ಕೇ ವೀರಾಃ ಸಮ್ನ್ಯವರ್ತಂತ ತನ್ಮಮಾಚಕ್ಷ್ವ ಸಂಜಯ||

ಬಾಯ್ದೆರೆದ ಹುಲಿಯಂತಿದ್ದ, ಮದೋದಕವನ್ನು ಸುರಿಸುವ ಆನೆಯಂತಿದ್ದ, ಯುದ್ಧದಲ್ಲಿ ಪ್ರಾಣವನ್ನೂ ತ್ಯಜಿಸಲು ಸಿದ್ಧನಾಗಿದ್ದ ಆ ಚಿತ್ರಯೋಧಿ, ಮಹೇಷ್ವಾಸ, ನರವ್ಯಾಘ್ರ, ಶತ್ರುಗಳ ಭಯವನ್ನು ವರ್ಧಿಸುವ, ಕೃತಜ್ಞ, ಸತ್ಯನಿರತ, ದುರ್ಯೋಧನನ ಹಿತೈಷಿಣಿ, ಶೂರ ಭಾರದ್ವಾಜನು ರಣದಲ್ಲಿ ನಿಂತಿದ್ದುದನ್ನು ನೋಡಿ ಯಾವ ವೀರರು ಯುದ್ಧಕ್ಕೆ ಹಿಂದಿರುಗಿದರು ಎನ್ನುವುದನ್ನು ನನಗೆ ಹೇಳು ಸಂಜಯ!”

07021007 ಸಂಜಯ ಉವಾಚ|

07021007a ತಾನ್ದೃಷ್ಟ್ವಾ ಚಲಿತಾನ್ಸಂಖ್ಯೇ ಪ್ರಣುನ್ನಾನ್ದ್ರೋಣಸಾಯಕೈಃ|

07021007c ಪಾಂಚಾಲಾನ್ಪಾಂಡವಾನ್ಮತ್ಸ್ಯಾನ್ಸೃಂಜಯಾಂಶ್ಚೇದಿಕೇಕಯಾನ್||

07021008a ದ್ರೋಣಚಾಪವಿಮುಕ್ತೇನ ಶರೌಘೇಣಾಸುಹಾರಿಣಾ|

07021008c ಸಿಂಧೋರಿವ ಮಹೌಘೇನ ಹ್ರಿಯಮಾಣಾನ್ಯಥಾ ಪ್ಲವಾನ್||

07021009a ಕೌರವಾಃ ಸಿಂಹನಾದೇನ ನಾನಾವಾದ್ಯಸ್ವನೇನ ಚ|

07021009c ರಥದ್ವಿಪನರಾಶ್ವೈಶ್ಚ ಸರ್ವತಃ ಪರ್ಯವಾರಯನ್||

ದ್ರೋಣನ ಸಾಯಕಗಳಿಂದ ಪೀಡಿತರಾಗಿ ರಣರಂಗದಿಂದ ಚದುರಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ ಪಾಂಚಾಲ-ಪಾಂಡವ-ಮತ್ಸ್ಯ-ಸೃಂಜಯ-ಚೇದಿ-ಕೇಕಯರನ್ನು ನೋಡಿ, ನದಿಯ ಪ್ರವಾಹದಿಂದ ದೋಣಿಗಳು ಸೆಳೆಯಲ್ಪಡುವಂತೆ ದ್ರೋಣನ ಬಿಲ್ಲಿನಿಂದ ಬಿಡಲ್ಪಟ್ಟ ಬಾಣಗಳ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿರುವ ಅವರನ್ನು ನೋಡಿ ಕೌರವರು ಸಿಂದನಾದಗೈದು, ನಾನಾವಾದ್ಯಗಳನ್ನು ನುಡಿಸಿ, ರಥ-ಗಜ-ನರ-ಅಶ್ವಗಳನ್ನು ಎಲ್ಲ ಕಡೆಯಿಂದ ಸುತ್ತುವರೆದರು.

07021010a ತಾನ್ಪಶ್ಯನ್ಸೈನ್ಯಮಧ್ಯಸ್ಥೋ ರಾಜಾ ಸ್ವಜನಸಂವೃತಃ|

07021010c ದುರ್ಯೋಧನೋಽಬ್ರವೀತ್ಕರ್ಣಂ ಪ್ರಹೃಷ್ಟಃ ಪ್ರಹಸನ್ನಿವ||

ಅವರನ್ನು ನೋಡಿ ಸ್ವಜನರಿಂದ ಸಂವೃತನಾಗಿ ಸೇನೆಯ ಮಧ್ಯದಲ್ಲಿದ್ದ ರಾಜಾ ದುರ್ಯೋಧನನು ಸಂತೋಷದಿಂದ ನಗುತ್ತಾ ಕರ್ಣನಿಗೆ ಹೇಳಿದನು:

07021011a ಪಶ್ಯ ರಾಧೇಯ ಪಾಂಚಾಲಾನ್ಪ್ರಣುನ್ನಾನ್ದ್ರೋಣಸಾಯಕೈಃ|

07021011c ಸಿಂಹೇನೇವ ಮೃಗಾನ್ವನ್ಯಾಂಸ್ತ್ರಾಸಿತಾನ್ದೃಢಧನ್ವನಾ||

“ರಾಧೇಯ! ಸಿಂಹವು ವನ್ಯಪ್ರಾಣಿಗಳನ್ನು ಹೇಗೋ ಹಾಗೆ ಸಾಯಕಗಳಿಂದ ಪಾಂಚಾಲರನ್ನು ಪೀಡಿಸುತ್ತಿರುವ ದೃಢಧನ್ವಿ ದ್ರೋಣನನ್ನು ನೋಡು!

07021012a ನೈತೇ ಜಾತು ಪುನರ್ಯುದ್ಧಮೀಹೇಯುರಿತಿ ಮೇ ಮತಿಃ|

07021012c ಯಥಾ ತು ಭಗ್ನಾ ದ್ರೋಣೇನ ವಾತೇನೇವ ಮಹಾದ್ರುಮಾಃ||

ಭಿರುಗಾಳಿಗೆ ಸಿಲುಕಿ ಮುರಿದು ಬಿದ್ದ ಮಹಾಮರಗಳಂತೆ ದ್ರೋಣನಿಂದ ಭಗ್ನರಾದ ಇವರು ಪುನಃ ಯುದ್ಧಕ್ಕೆ ಬರುತ್ತಾರೆಂದು ನನಗನ್ನಿಸುವುದಿಲ್ಲ.

07021013a ಅರ್ದ್ಯಮಾನಾಃ ಶರೈರೇತೇ ರುಕ್ಮಪುಂಖೈರ್ಮಹಾತ್ಮನಾ|

07021013c ಪಥಾ ನೈಕೇನ ಗಚ್ಚಂತಿ ಘೂರ್ಣಮಾನಾಸ್ತತಸ್ತತಃ||

ಆ ಮಹಾತ್ಮನ ರುಕ್ಮಪುಂಖ ಶರಗಳಿಂದ ಪೆಟ್ಟುತಿಂದ ಅವರು ಅಲ್ಲಲ್ಲಿಯೇ ಸುತ್ತುತ್ತಾ ಒಂದೇ ಮಾರ್ಗದಲ್ಲಿ ಹೋಗುತ್ತಿಲ್ಲ.

07021014a ಸಮ್ನಿರುದ್ಧಾಶ್ಚ ಕೌರವ್ಯೈರ್ದ್ರೋಣೇನ ಚ ಮಹಾತ್ಮನಾ|

07021014c ಏತೇಽನ್ಯೇ ಮಂಡಲೀಭೂತಾಃ ಪಾವಕೇನೇವ ಕುಂಜರಾಃ||

ಬೆಂಕಿಯನ್ನು ಹಾಕಿ ಆನೆಗಳ ಹಿಂಡನ್ನು ಒಂದೇಕಡೆ ಗೋಲಾಕಾರವಾಗಿ ತಿರುಗಿಸುವಂತೆ ಮಹಾತ್ಮ ದ್ರೋಣ ಮತ್ತು ಕುರುಗಳು ಇವರನ್ನು ಮಾಡಿದ್ದಾರೆ.

07021015a ಭ್ರಮರೈರಿವ ಚಾವಿಷ್ಟಾ ದ್ರೋಣಸ್ಯ ನಿಶಿತೈಃ ಶರೈಃ|

07021015c ಅನ್ಯೋನ್ಯಂ ಸಮಲೀಯಂತ ಪಲಾಯನಪರಾಯಣಾಃ||

ದುಂಬಿಗಳಂತಿರುವ ದ್ರೋಣನ ನಿಶಿತ ಶರಗಳಿಂದ ಮುಸುಕಲ್ಪಟ್ಟು ಇವರು ಪಲಾಯನವೊಂದೇ ಮಾರ್ಗವೆಂದು ತಿಳಿದು ಅನ್ಯೋನ್ಯರ ಹಿಂದೆ ಅಡಗಿಕೊಳ್ಳುತ್ತಿದ್ದಾರೆ.

07021016a ಏಷ ಭೀಮೋ ದೃಢಕ್ರೋಧೋ ಹೀನಃ ಪಾಂಡವಸೃಂಜಯೈಃ|

07021016c ಮದೀಯೈರಾವೃತೋ ಯೋಧೈಃ ಕರ್ಣ ತರ್ಜಯತೀವ ಮಾಂ||

ಈ ಕೋಪಿಷ್ಟ ಭೀಮನು ಪಾಂಡವ-ಸೃಂಜಯರಿಂದ ವಿಹೀನನಾಗಿ ನಮ್ಮವರ ಯೋಧರಿಂದ ಸುತ್ತುವರೆಯಲ್ಪಟ್ಟಿದ್ದಾನೆ. ಕರ್ಣ! ಇದು ನನಗೆ ಅತೀವ ತೃಪ್ತಿಯುನ್ನು ನೀಡುತ್ತಿದೆ.

07021017a ವ್ಯಕ್ತಂ ದ್ರೋಣಮಯಂ ಲೋಕಮದ್ಯ ಪಶ್ಯತಿ ದುರ್ಮತಿಃ|

07021017c ನಿರಾಶೋ ಜೀವಿತಾನ್ನೂನಮದ್ಯ ರಾಜ್ಯಾಚ್ಚ ಪಾಂಡವಃ||

ಆ ದುರ್ಮತಿಗೆ ಇಂದು ಲೋಕವೆಲ್ಲವೂ ದ್ರೋಣಮಯವಾಗಿಯೇ ಕಾಣುತ್ತಿದೆ. ಇಂದು ಆ ಪಾಂಡವನಿಗೆ ಜೀವಿತದಲ್ಲಿಯೂ ರಾಜ್ಯದಲ್ಲಿಯೂ ನಿರಾಶೆಯುಂಟಾಗಿದೆ ಎನ್ನುವುದು ತೋರುತ್ತಿದೆ.”

07021018 ಕರ್ಣ ಉವಾಚ|

07021018a ನೈಷ ಜಾತು ಮಹಾಬಾಹುರ್ಜೀವನ್ನಾಹವಮುತ್ಸೃಜೇತ್|

07021018c ನ ಚೇಮಾನ್ಪುರುಷವ್ಯಾಘ್ರ ಸಿಂಹನಾದಾನ್ವಿಶಕ್ಷ್ಯತೇ||

ಕರ್ಣನು ಹೇಳಿದನು: “ಈ ಮಹಾಬಾಹುವು ಜೀವವಿರುವವರೆಗೆ ಯುದ್ಧವನ್ನು ಬಿಟ್ಟು ಹೋಗುವುಲ್ಲ ಎಂದು ತಿಳಿ. ಪುರುಷವ್ಯಾಘ್ರ! ಇವನು ನಮ್ಮವರ ಈ ಸಿಂಹನಾದವನ್ನೂ ಸಹಿಸಿಕೊಳ್ಳುವವನಲ್ಲ.

07021019a ನ ಚಾಪಿ ಪಾಂಡವಾ ಯುದ್ಧೇ ಭಜ್ಯೇರನ್ನಿತಿ ಮೇ ಮತಿಃ|

07021019c ಶೂರಾಶ್ಚ ಬಲವಂತಶ್ಚ ಕೃತಾಸ್ತ್ರಾ ಯುದ್ಧದುರ್ಮದಾಃ||

ಶೂರ, ಬಲವಂತ, ಕೃತಾಸ್ತ್ರ, ಯುದ್ಧದುರ್ಮದ ಪಾಂಡವರು ಯುದ್ಧವನ್ನು ಮುಂದುವರಿಸುತ್ತಾರೆ ಎಂದು ನನ್ನ ಅಭಿಪ್ರಾಯ.

07021020a ವಿಷಾಗ್ನಿದ್ಯೂತಸಂಕ್ಲೇಶಾನ್ವನವಾಸಂ ಚ ಪಾಂಡವಾಃ|

07021020c ಸ್ಮರಮಾಣಾ ನ ಹಾಸ್ಯಂತಿ ಸಂಗ್ರಾಮಮಿತಿ ಮೇ ಮತಿಃ||

ವಿಷ-ಬೆಂಕಿ-ದ್ಯೂತ ಮತ್ತು ವನವಾಸಗಳ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡಿರುವ ಪಾಂಡವರು ಸಂಗ್ರಾಮದಿಂದ ಓಡಿಹೋಗುವುದಿಲ್ಲವೆಂದು ನನಗನ್ನಿಸುತ್ತದೆ.

07021021a ನಿಕೃತೋ ಹಿ ಮಹಾಬಾಹುರಮಿತೌಜಾ ವೃಕೋದರಃ|

07021021c ವರಾನ್ವರಾನ್ ಹಿ ಕೌಂತೇಯೋ ರಥೋದಾರಾನ್ ಹನಿಷ್ಯತಿ||

ಏಕೆಂದರೆ ಮಹಾಬಾಹು ಅಮಿತ ಓಜಸ್ವಿ ವೃಕೋದರ ಕೌಂತೇಯನು ಮರಳಿ ನಮ್ಮವರ ಶ್ರೇಷ್ಠ ಶ್ರೇಷ್ಠ ರಥೋದಾರರನ್ನು ಕೊಲ್ಲುತ್ತಾನೆ.

07021022a ಅಸಿನಾ ಧನುಷಾ ಶಕ್ತ್ಯಾ ಹಯೈರ್ನಾಗೈರ್ನರೈ ರಥೈಃ|

07021022c ಆಯಸೇನ ಚ ದಂಡೇನ ವ್ರಾತಾನ್ವ್ರಾತಾನ್ ಹನಿಷ್ಯತಿ||

ಖಡ್ಗದಿಂದ, ಧನುಸ್ಸಿನಿಂದ, ಶಕ್ತಿಯಿಂದ, ಕುದುರೆಗಳಿಂದ, ಆನೆಗಳಿಂದ, ಮುನುಷ್ಯರಿಂದ, ರಥಗಳಿಂದ, ಹಾರೆಕೋಲಿನಿಂದ ಮತ್ತು ದಂಡದಿಂದ ಗುಂಪು ಗುಂಪಾಗಿ ಸಂಹರಿಸುತ್ತಿದ್ದಾನೆ.

07021023a ತಮೇತೇ ಚಾನುವರ್ತಂತೇ ಸಾತ್ಯಕಿಪ್ರಮುಖಾ ರಥಾಃ|

07021023c ಪಾಂಚಾಲಾಃ ಕೇಕಯಾ ಮತ್ಸ್ಯಾಃ ಪಾಂಡವಾಶ್ಚ ವಿಶೇಷತಃ||

ಅವನನ್ನು ಹಿಂಬಾಲಿಸಿ ಸಾತ್ಯಕಿಪ್ರಮುಖರಾದ ರಥರು, ವಿಶೇಷವಾಗಿ ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಪಾಂಡವರು ಬರುತ್ತಿದ್ದಾರೆ.

07021024a ಶೂರಾಶ್ಚ ಬಲವಂತಶ್ಚ ವಿಕ್ರಾಂತಾಶ್ಚ ಮಹಾರಥಾಃ|

07021024c ವಿಶೇಷತಶ್ಚ ಭೀಮೇನ ಸಂರಬ್ಧೇನಾಭಿಚೋದಿತಾಃ||

ಆ ಶೂರರು, ಬಲವಂತರು, ವಿಕ್ರಾಂತ ಮಹಾರಥರು ಭೀಮನ ರಣೋತ್ಸಾಹದಿಂದ ವಿಶೇಷವಾಗಿ ಪ್ರಚೋದಿತಗೊಂಡಿದ್ದಾರೆ.

07021025a ತೇ ದ್ರೋಣಮಭಿವರ್ತಂತೇ ಸರ್ವತಃ ಕುರುಪುಂಗವಾಃ|

07021025c ವೃಕೋದರಂ ಪರೀಪ್ಸಂತಃ ಸೂರ್ಯಮಭ್ರಗಣಾ ಇವ||

ವೃಕೋದರನನ್ನು ರಕ್ಷಿಸಲೋಸುಗ ಈ ಕುರುಪಾಂಡವರು ಸೂರ್ಯನನ್ನು ಮುತ್ತುವ ಮೋಡಗಳಂತೆ ದ್ರೋಣನ ಮೇಲೆ ಮುತ್ತಿಗೆ ಹಾಕಿದ್ದಾರೆ.

07021026a ಏಕಾಯನಗತಾ ಹ್ಯೇತೇ ಪೀಡಯೇಯುರ್ಯತವ್ರತಂ|

07021026c ಅರಕ್ಷ್ಯಮಾಣಂ ಶಲಭಾ ಯಥಾ ದೀಪಂ ಮುಮೂರ್ಷವಃ|

07021026e ಅಸಂಶಯಂ ಕೃತಾಸ್ತ್ರಾಶ್ಚ ಪರ್ಯಾಪ್ತಾಶ್ಚಾಪಿ ವಾರಣೇ||

ರಕ್ಷಣೆಯಿಲ್ಲದ ಯತವ್ರತನನ್ನು ಪೀಡಿಸುವ ಒಂದೇ ಒಂದು ಉದ್ದೇಶವನ್ನಿಟ್ಟುಕೊಂಡಿರುವ ಇವರು ದೀಪದ ಹುಳುಗಳು ದೀಪವನ್ನು ಮುತ್ತಿಕೊಂಡು ತಾವು ಸಾಯುವುದನ್ನೂ ಗಮನಿಸದೇ ದೀಪವನ್ನು ಆರಿಸಲು ಪ್ರಯತ್ನಿಸುತ್ತಿರುವಂತೆ ಇರುವ ಈ ಕೃತಾಸ್ತ್ರರು ಅವನನ್ನು ತಡೆಯಲು ಸಮರ್ಥರು ಎನ್ನುವುದರಲ್ಲಿ ಸಂಶಯವಿಲ್ಲ.

07021027a ಅತಿಭಾರಂ ತ್ವಹಂ ಮನ್ಯೇ ಭಾರದ್ವಾಜೇ ಸಮಾಹಿತಂ|

07021027c ತೇ ಶೀಘ್ರಮನುಗಚ್ಚಾಮೋ ಯತ್ರ ದ್ರೋಣೋ ವ್ಯವಸ್ಥಿತಃ|

07021027e ಕಾಕಾ ಇವ ಮಹಾನಾಗಂ ಮಾ ವೈ ಹನ್ಯುರ್ಯತವ್ರತಂ||

ಆದುದರಿಂದ ಇದು ಭಾರದ್ವಾಜನ ಮೇಲಿರುವ ಅತಿಭಾರವೆಂದು ನನಗನ್ನಿಸುತ್ತದೆ. ದ್ರೋಣನಿರುವಲ್ಲಿಗೆ ಶೀಘ್ರವಾಗಿ ಹೋಗೋಣ. ಕಾಗೆಗಳು ಮಹಾಸರ್ಪವನ್ನು ಹೇಗೋ ಹಾಗೆ ಅವರು ಆ ಯತವ್ರತನನ್ನು ಸಂಹರಿಸಬಾರದು!””

07021028 ಸಂಜಯ ಉವಾಚ|

07021028a ರಾಧೇಯಸ್ಯ ವಚಃ ಶ್ರುತ್ವಾ ರಾಜಾ ದುರ್ಯೋಧನಸ್ತದಾ|

07021028c ಭ್ರಾತೃಭಿಃ ಸಹಿತೋ ರಾಜನ್ಪ್ರಾಯಾದ್ದ್ರೋಣರಥಂ ಪ್ರತಿ||

ಸಂಜಯನು ಹೇಳಿದನು: “ರಾಜನ್! ರಾಧೇಯನ ಮಾತನ್ನು ಕೇಳಿ ರಾಜಾ ದುರ್ಯೋಧನನು ಸಹೋದರರೊಂದಿಗೆ ದ್ರೋಣನ ಕಡೆ ಹೋದನು.

07021029a ತತ್ರಾರಾವೋ ಮಹಾನಾಸೀದೇಕಂ ದ್ರೋಣಂ ಜಿಘಾಂಸತಾಂ|

07021029c ಪಾಂಡವಾನಾಂ ನಿವೃತ್ತಾನಾಂ ನಾನಾವರ್ಣೈರ್ಹಯೋತ್ತಮೈಃ||

ಅಲ್ಲಿ ದ್ರೋಣನನ್ನು ಸಂಹರಿಸುವ ಒಂದೇ ಉದ್ದೇಶವನ್ನಿಟ್ಟುಕೊಂಡು ನಾನಾ ಬಣ್ಣದ ಉತ್ತಮ ಕುದುರೆಗಳನ್ನೇರಿ ಹಿಂದಿರುಗಿ ಬರುತ್ತಿದ್ದ ಪಾಂಡವರ ಮಹಾ ಶಬ್ಧವು ಕೇಳಿಬರುತ್ತಿತ್ತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ದ್ರೋಣಯುದ್ಧೇ ಏಕವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ದ್ರೋಣಯುದ್ಧ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

Image result for indian motifs against white background

Comments are closed.