Drona Parva: Chapter 17

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೧೭

ಸುಧನ್ವ ವಧೆ (೧-೨೨). ಪಲಾಯನಗೈಯುತ್ತಿದ್ದ ಸಂಶಪ್ತಕ ಸೇನೆಗಳು ಯುದ್ಧಕ್ಕೆ ಹಿಂದಿರುಗಿದುದು (೨೩-೩೧).

07017001 ಸಂಜಯ ಉವಾಚ|

07017001a ತತಃ ಸಂಶಪ್ತಕಾ ರಾಜನ್ಸಮೇ ದೇಶೇ ವ್ಯವಸ್ಥಿತಾಃ|

07017001c ವ್ಯೂಹ್ಯಾನೀಕಂ ರಥೈರೇವ ಚಂದ್ರಾರ್ಧಾಖ್ಯಂ ಮುದಾನ್ವಿತಾಃ||

ಸಂಜಯನು ಹೇಳಿದನು: “ರಾಜನ್! ಆಗ ಸಂಶಪ್ತಕರು ಸಮಪ್ರದೇಶದಲ್ಲಿ ರಥಸೇನೆಗಳಿಂದಲೇ ಅರ್ಧಚಂದ್ರದ ವ್ಯೂಹವನ್ನು ರಚಿಸಿಕೊಂಡು ಮುದಾನ್ವಿತರಾಗಿ ಸಜ್ಜಾಗಿ ನಿಂತಿದ್ದರು.

07017002a ತೇ ಕಿರೀಟಿನಮಾಯಾಂತಂ ದೃಷ್ಟ್ವಾ ಹರ್ಷೇಣ ಮಾರಿಷ|

07017002c ಉದಕ್ರೋಶನ್ನರವ್ಯಾಘ್ರಾಃ ಶಬ್ದೇನ ಮಹತಾ ತದಾ||

ಮಾರಿಷ! ಕಿರೀಟಿಯು ಬರುತ್ತಿರುವುದನ್ನು ನೋಡಿ ಆ ನರವ್ಯಾಘ್ರರು ಹರ್ಷದಿಂದ ಜೋರಾದ ಶಬ್ಧದಲ್ಲಿ ಕೂಗಿದರು.

07017003a ಸ ಶಬ್ದಃ ಪ್ರದಿಶಃ ಸರ್ವಾ ದಿಶಃ ಖಂ ಚ ಸಮಾವೃಣೋತ್|

07017003c ಆವೃತತ್ವಾಚ್ಚ ಲೋಕಸ್ಯ ನಾಸೀತ್ತತ್ರ ಪ್ರತಿಸ್ವನಃ||

ಆ ಶಬ್ಧವು ಸರ್ವ ದಿಕ್ಕು-ಉಪದಿಕ್ಕುಗಳನ್ನೂ ಆಕಾಶವನ್ನೂ ಹರಡಿಕೊಂಡಿತು. ಲೋಕದ ಎಲ್ಲೆಡೆಯೂ ಪ್ರವೇಶಿಸಿದುದರಿಂದ ಆ ಶಬ್ಧವು ಪ್ರತಿಧ್ವನಿಸಲಿಲ್ಲ.

07017004a ಅತೀವ ಸಂಪ್ರಹೃಷ್ಟಾಂಸ್ತಾನುಪಲಭ್ಯ ಧನಂಜಯಃ|

07017004c ಕಿಂ ಚಿದಭ್ಯುತ್ಸ್ಮಯನ್ಕೃಷ್ಣಮಿದಂ ವಚನಮಬ್ರವೀತ್||

ಅತೀವ ಹರ್ಷಿತರಾಗಿದ್ದ ಅವರನ್ನು ಸಮೀಪಿಸಿ ಧನಂಜಯನು ನಸುನಗುತ್ತಾ ಕೃಷ್ಣನಿಗೆ ಈ ಮಾತನ್ನಾಡಿದನು:

07017005a ಪಶ್ಯೈತಾನ್ದೇವಕೀಮಾತರ್ಮುಮೂರ್ಷೂನದ್ಯ ಸಂಯುಗೇ|

07017005c ಭ್ರಾತೄಮ್ಸ್ತ್ರೈಗರ್ತಕಾನೇವಂ ರೋದಿತವ್ಯೇ ಪ್ರಹರ್ಷಿತಾನ್||

“ದೇವಕೀಮಾತ! ಇಂದು ಸಂಯುಗದಲ್ಲಿ ಮುಹೂರ್ತದಲ್ಲಿಯೇ ಸಾಯಲಿರುವ ಇವರನ್ನು ನೋಡು! ಅಳಬೇಕಾಗಿರುವ ಈ ಸಮಯದಲ್ಲಿ ಇವರು ಹರ್ಷಿತರಾಗಿ ನಗುತ್ತಿದ್ದಾರೆ.

07017006a ಅಥ ವಾ ಹರ್ಷಕಾಲೋಽಯಂ ತ್ರೈಗರ್ತಾನಾಮಸಂಶಯಂ|

07017006c ಕುನರೈರ್ದುರವಾಪಾನ್ಹಿ ಲೋಕಾನ್ಪ್ರಾಪ್ಸ್ಯಂತ್ಯನುತ್ತಮಾನ್||

ಅಥವಾ ಕುತ್ಸಿತರು ಪಡೆಯಲು ಕಷ್ಟಕರವಾದ ಅನುತ್ತಮ ಲೋಕಗಳನ್ನು ಈ ಸಮಯದಲ್ಲಿ ಸುಲಭವಾಗಿ ಪಡೆಯಲಿದ್ದಾರೆಂದು ಈ ತ್ರೈಗರ್ತರು ಹರ್ಷಪಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.”

07017007a ಏವಮುಕ್ತ್ವಾ ಮಹಾಬಾಹುರ್ಹೃಷೀಕೇಶಂ ತತೋಽರ್ಜುನಃ|

07017007c ಆಸಸಾದ ರಣೇ ವ್ಯೂಢಾಂ ತ್ರೈಗರ್ತಾನಾಮನೀಕಿನೀಂ||

ಹೀಗೆ ಹೃಷೀಕೇಶನಿಗೆ ಹೇಳಿ ಮಹಾಬಾಹು ಅರ್ಜುನನು ರಣದಲ್ಲಿ ತ್ರೈಗರ್ತರ ಸೇನೆಯ ವ್ಯೂಹವನ್ನು ಸಮೀಪಿಸಿದನು.

07017008a ಸ ದೇವದತ್ತಮಾದಾಯ ಶಂಖಂ ಹೇಮಪರಿಷ್ಕೃತಂ|

07017008c ದಧ್ಮೌ ವೇಗೇನ ಮಹತಾ ಫಲ್ಗುನಃ ಪೂರಯನ್ದಿಶಃ||

ಫಲ್ಗುನನು ಹೇಮಪರಿಷ್ಕೃತ ದೇವದತ್ತ ಶಂಖವನ್ನು ವೇಗವಾಗಿ ಮತ್ತು ಜೋರಾಗಿ ಊದಿ ದಿಕ್ಕುಗಳನ್ನು ಮೊಳಗಿಸಿದನು.

07017009a ತೇನ ಶಬ್ದೇನ ವಿತ್ರಸ್ತಾ ಸಂಶಪ್ತಕವರೂಥಿನೀ|

07017009c ನಿಶ್ಚೇಷ್ಟಾವಸ್ಥಿತಾ ಸಂಕ್ಯೇ ಅಶ್ಮಸಾರಮಯೀ ಯಥಾ||

ಆ ಶಬ್ಧದಿಂದ ನಡುಗಿದ ಸಂಶಪ್ತಕರ ಸೇನೆಯು ಲೋಹದ ಪ್ರತಿಮೆಯಂತೆ ರಣರಂಗದಲ್ಲಿ ಹಾಗೆಯೇ ನಿಂತುಬಿಟ್ಟಿತು.

07017010a ವಾಹಾಸ್ತೇಷಾಂ ವಿವೃತ್ತಾಕ್ಷಾಃ ಸ್ತಬ್ಧಕರ್ಣಶಿರೋಧರಾಃ|

07017010c ವಿಷ್ಟಬ್ಧಚರಣಾ ಮೂತ್ರಂ ರುಧಿರಂ ಚ ಪ್ರಸುಸ್ರುವುಃ||

ಅವರ ಕುದುರೆಗಳು ಕಣ್ಣುತೆರೆದು, ಕಿವಿಗಳನ್ನೂ ತಲೆಗಳನ್ನೂ ಸ್ತಬ್ಧವಾಗಿಸಿಕೊಂಡು, ಕಾಲುಗಳು ಸೆಟೆದು ನಿಂತು ಮೂತ್ರ ಮತ್ತು ರಕ್ತವನ್ನು ಸುರಿಸಿದವು.

07017011a ಉಪಲಭ್ಯ ಚ ತೇ ಸಂಜ್ಞಾಮವಸ್ಥಾಪ್ಯ ಚ ವಾಹಿನೀಂ|

07017011c ಯುಗಪತ್ಪಾಂಡುಪುತ್ರಾಯ ಚಿಕ್ಷಿಪುಃ ಕಂಕಪತ್ರಿಣಃ||

ಅವರು ಎಚ್ಚೆತ್ತು, ಸೇನೆಗಳನ್ನು ಪುನಃ ಸಜ್ಜುಗೊಳಿಸಿ, ಒಟ್ಟಾಗಿ, ಪಾಂಡುಪುತ್ರನ ಮೇಲೆ ಕಂಕಪತ್ರಿಗಳನ್ನು ಎಸೆದರು.

07017012a ತಾನ್ಯರ್ಜುನಃ ಸಹಸ್ರಾಣಿ ದಶ ಪಂಚೈವ ಚಾಶುಗೈಃ|

07017012c ಅನಾಗತಾನ್ಯೇವ ಶರೈಶ್ಚಿಚ್ಚೇದಾಶುಪರಾಕ್ರಮಃ||

ಪರಾಕ್ರಮಿ ಅರ್ಜುನನು ಹದಿನೈದು ಬಾಣಗಳಿಂದಲೇ ಅವರು ಪ್ರಯೋಗಿಸಿದ ಸಹಸ್ರಾರು ಬಾಣಗಳನ್ನು ಬಂದು ತಲುಪುವುದರೊಳಗೇ ಕತ್ತರಿಸಿದನು.

07017013a ತತೋಽರ್ಜುನಂ ಶಿತೈರ್ಬಾಣೈರ್ದಶಭಿರ್ದಶಭಿಃ ಪುನಃ|

07017013c ಪ್ರತ್ಯವಿಧ್ಯಂಸ್ತತಃ ಪಾರ್ಥಸ್ತಾನವಿಧ್ಯತ್ತ್ರಿಭಿಸ್ತ್ರಿಭಿಃ||

ಆಗ ಅವರು ಪ್ರತಿಯೊಬ್ಬರೂ ಪುನಃ ಅರ್ಜುನನ್ನು ಹತ್ತು ಹತ್ತು ನಿಶಿತ ಬಾಣಗಳಿಂದ ಹೊಡೆಯಲು ಪಾರ್ಥನು ಅವಕ್ಕೆ ಪ್ರತಿಯಾಗಿ ಪ್ರತಿಯೊಬ್ಬರನ್ನೂ ಮೂರು ಮೂರು ಬಾಣಗಳಿಂದ ಹೊಡೆದನು.

07017014a ಏಕೈಕಸ್ತು ತತಃ ಪಾರ್ಥಂ ರಾಜನ್ವಿವ್ಯಾಧ ಪಂಚಭಿಃ|

07017014c ಸ ಚ ತಾನ್ಪ್ರತಿವಿವ್ಯಾಧ ದ್ವಾಭ್ಯಾಂ ದ್ವಾಭ್ಯಾಂ ಪರಾಕ್ರಮೀ||

ರಾಜನ್! ಆಗ ಅವರು ಒಬ್ಬೊಬ್ಬರೂ ಐದೈದು ಬಾಣಗಳಿಂದ ಪಾರ್ಥನನ್ನು ಹೊಡೆಯಲು ಆ ಪರಾಕ್ರಮಿಯು ಅವರಲ್ಲಿ ಪ್ರತಿಯೊಬ್ಬರನ್ನೂ ಎರೆಡೆರಡರಿಂದ ಹೊಡೆದನು.

07017015a ಭೂಯ ಏವ ತು ಸಂರಬ್ಧಾಸ್ತೇಽರ್ಜುನಂ ಸಹಕೇಶವಂ|

07017015c ಆಪೂರಯಂ ಶರೈಸ್ತೀಕ್ಷ್ಣೈಸ್ತಟಾಕಮಿವ ವೃಷ್ಟಿಭಿಃ||

ಮೋಡಗಳು ಮಳೆಯಿಂದ ತಟಾಕವನ್ನು ತುಂಬಿಸುವಂತೆ ಸಂರಬ್ಧರಾದ ಅವರು ಕೇಶವನೊಂದಿಗೆ ಅರ್ಜುನನ್ನು ತೀಕ್ಷ್ಣ ಶರಗಳಿಂದ ತುಂಬಿದರು.

07017016a ತತಃ ಶರಸಹಸ್ರಾಣಿ ಪ್ರಾಪತನ್ನರ್ಜುನಂ ಪ್ರತಿ|

07017016c ಭ್ರಮರಾಣಾಮಿವ ವ್ರಾತಾಃ ಫುಲ್ಲದ್ರುಮಗಣೇ ವನೇ||

ವನದಲ್ಲಿ ದುಂಬಿಗಳ ಸಮೂಹಗಳು ಸುಪುಷ್ಪಿತ ವೃಕ್ಷಸಮೂಹಗಳನ್ನು ಮುತ್ತುವಂತೆ ಅವರು ಬಿಟ್ಟ ಸಹಸ್ರಾರು ಬಾಣಗಳು ಅರ್ಜುನನ ಮೇಲೆ ಬಿದ್ದವು.

07017017a ತತಃ ಸುಬಾಹುಸ್ತ್ರಿಂಶದ್ಭಿರದ್ರಿಸಾರಮಯೈರ್ದೃಢೈಃ|

07017017c ಅವಿಧ್ಯದಿಷುಭಿರ್ಗಾಢಂ ಕಿರೀಟೇ ಸವ್ಯಸಾಚಿನಂ||

ಆಗ ಸುಬಾಹುವು ಮೂವತ್ತು ಲೋಹಮಯ ಬಾಣಗಳಿಂದ ಸವ್ಯಸಾಚಿಯ ಕಿರೀಟಕ್ಕೆ ಬಹಳ ಆಳವಾಗಿ ಪ್ರಹರಿಸಿದನು.

07017018a ತೈಃ ಕಿರೀಟೀ ಕಿರೀಟಸ್ಥೈರ್ಹೇಮಪುಂಖೈರಜಿಹ್ಮಗೈಃ|

07017018c ಶಾತಕುಂಭಮಯಾಪೀಡೋ ಬಭೌ ಯೂಪ ಇವೋಚ್ಚ್ರಿತಃ||

ಕಿರೀಟವನ್ನು ಹೊಕ್ಕಿದ್ದ ಚಿನ್ನದ ರೆಕ್ಕೆಗಳನ್ನು ಹೊಂದಿಗೆ ಜಿಹ್ಮಗಗಳಿಂದ ಕಿರೀಟಿಯು ನೂರುಕುಂಭಗಳಿಂದ ಅಲಂಕೃತ ಯಜ್ಞವೇದಿಕೆಯಂತೆ ಶೋಭಿಸಿದನು.

07017019a ಹಸ್ತಾವಾಪಂ ಸುಬಾಹೋಸ್ತು ಭಲ್ಲೇನ ಯುಧಿ ಪಾಂಡವಃ|

07017019c ಚಿಚ್ಚೇದ ತಂ ಚೈವ ಪುನಃ ಶರವರ್ಷೈರವಾಕಿರತ್||

ಯುದ್ಧದಲ್ಲಿ ಪಾಂಡವನು ಭಲ್ಲದಿಂದ ಸುಬಾಹುವಿನ ಹಸ್ತಾವಾಪವನ್ನು ಕತ್ತರಿಸಿದನು ಮತ್ತು ಪುನಃ ಶರವರ್ಷದಿಂದ ಅವನನ್ನು ಮುಚ್ಚಿದನು.

07017020a ತತಃ ಸುಶರ್ಮಾ ದಶಭಿಃ ಸುರಥಶ್ಚ ಕಿರೀಟಿನಂ|

07017020c ಸುಧರ್ಮಾ ಸುಧನುಶ್ಚೈವ ಸುಬಾಹುಶ್ಚ ಸಮರ್ಪಯನ್||

ಆಗ ಕಿರೀಟಿಯನ್ನು ಸುಶರ್ಮ, ಸುರಥ, ಸುಧರ್ಮ, ಸುಧನು ಮತ್ತು ಸುಬಾಹು – ಇವರು ಹತ್ತತ್ತು ಶರಗಳಿಂದ ಹೊಡೆದರು.

07017021a ತಾಂಸ್ತು ಸರ್ವಾನ್ಪೃಥಗ್ಬಾಣೈರ್ವಾನರಪ್ರವರಧ್ವಜಃ|

07017021c ಪ್ರತ್ಯವಿಧ್ಯದ್ಧ್ವಜಾಂಶ್ಚೈಷಾಂ ಭಲ್ಲೈಶ್ಚಿಚ್ಚೇದ ಕಾಂಚನಾನ್||

ವಾನರಪ್ರವರಧ್ವಜನು ಬೇರೆ ಬೇರೆ ಬಾಣಗಳಿಂದ ಅವರನ್ನು ತಿರುಗಿ ಹೊಡೆದು ಭಲ್ಲದಿಂದ ಅವರ ಧ್ವಜಗಳನ್ನು ತುಂಡರಿಸಿದನು.

07017022a ಸುಧನ್ವನೋ ಧನುಶ್ಚಿತ್ತ್ವಾ ಹಯಾನ್ವೈ ನ್ಯವಧೀಚ್ಚರೈಃ|

07017022c ಅಥಾಸ್ಯ ಸಶಿರಸ್ತ್ರಾಣಂ ಶಿರಃ ಕಾಯಾದಪಾಹರತ್||

ಸುಧನ್ವನ ಧನುಸ್ಸನ್ನು ಕತ್ತರಿಸಿ, ಕುದುರೆಗಳನ್ನು ಬಾಣಗಳಿಂದ ಸಂಹರಿಸಿದನು. ಅನಂತರ ಅವನ ಶಿರವನ್ನು, ಶಿರಸ್ತ್ರಾಣದೊಂದಿಗೆ, ದೇಹದಿಂದ ಅಪಹರಿಸಿದನು.

07017023a ತಸ್ಮಿಂಸ್ತು ಪತಿತೇ ವೀರೇ ತ್ರಸ್ತಾಸ್ತಸ್ಯ ಪದಾನುಗಾಃ|

07017023c ವ್ಯದ್ರವಂತ ಭಯಾದ್ಭೀತಾ ಯೇನ ದೌರ್ಯೋಧನಂ ಬಲಂ||

ಆ ವೀರನು ಕೆಳಗುರುಳಲು ಅವನ ಅನುಯಾಯಿಗಳು ಭಯ-ಭೀತರಾಗಿ ದುರ್ಯೋಧನನ ಸೇನೆಯ ಕಡೆ ಓಡಿಹೋದರು.

07017024a ತತೋ ಜಘಾನ ಸಂಕ್ರುದ್ಧೋ ವಾಸವಿಸ್ತಾಂ ಮಹಾಚಮೂಂ|

07017024c ಶರಜಾಲೈರವಿಚ್ಚಿನ್ನೈಸ್ತಮಃ ಸೂರ್ಯ ಇವಾಂಶುಭಿಃ||

ಆಗ ವಾಸವಿಯು ಸಂಕ್ರುದ್ಧನಾಗಿ ಸೂರ್ಯನು ತನ್ನ ಕಿರಣಗಳಿಂದ ಕತ್ತಲೆಯನ್ನು ಕತ್ತರಿಸುವಂತೆ ಆ ಮಹಾಸೇನೆಯನ್ನು ಶರಜಾಲಗಳಿಂದ ಚಿಂದಿಮಾಡಿದನು.

07017025a ತತೋ ಭಗ್ನೇ ಬಲೇ ತಸ್ಮಿನ್ವಿಪ್ರಯಾತೇ ಸಮಂತತಃ|

07017025c ಸವ್ಯಸಾಚಿನಿ ಸಂಕ್ರುದ್ಧೇ ತ್ರೈಗರ್ತಾನ್ಭಯಮಾವಿಶತ್||

ಆಗ ಸವ್ಯಸಾಚಿಯ ಕೋಪಕ್ಕೆ ಸಿಲುಕಿ ಸೇನೆಯು ಭಗ್ನವಾಗಿ ಎಲ್ಲಕಡೆ ಓಡಿಹೋಗುತ್ತಿರಲು ತ್ರಿಗರ್ತರಿಗೆ ಭಯವು ಆವೇಶಗೊಂಡಿತು.

07017026a ತೇ ವಧ್ಯಮಾನಾಃ ಪಾರ್ಥೇನ ಶರೈಃ ಸನ್ನತಪರ್ವಭಿಃ|

07017026c ಅಮುಹ್ಯಂಸ್ತತ್ರ ತತ್ರೈವ ತ್ರಸ್ತಾ ಮೃಗಗಣಾ ಇವ||

ಪಾರ್ಥನ ಸನ್ನತಪರ್ವ ಶರಗಳಿಂದ ವಧಿಸಲ್ಪಡುತ್ತಿದ್ದ ಅವರು ಭಯಗೊಂಡ ಮೃಗಗಣಗಳಂತೆ ಅಲ್ಲಲ್ಲಿಯೇ ಮೂರ್ಛಿತರಾಗಿ ಬೀಳುತ್ತಿದ್ದರು.

07017027a ತತಸ್ತ್ರಿಗರ್ತರಾಟ್ ಕ್ರುದ್ಧಸ್ತಾನುವಾಚ ಮಹಾರಥಾನ್|

07017027c ಅಲಂ ದ್ರುತೇನ ವಃ ಶೂರಾ ನ ಭಯಂ ಕರ್ತುಮರ್ಹಥ||

ಆಗ ತ್ರಿಗರ್ತರಾಜನು ಕ್ರುದ್ಧನಾಗಿ ಆ ಮಹಾರಥರಿಗೆ ಹೇಳಿದನು: “ಓಡಬೇಡಿ! ಶೂರರಾದ ನಾವು ಭಯಪಡುವುದು ಸರಿಯಲ್ಲ.

07017028a ಶಪ್ತ್ವಾ ತು ಶಪಥಾನ್ಘೋರಾನ್ಸರ್ವಸೈನ್ಯಸ್ಯ ಪಶ್ಯತಃ|

07017028c ಗತ್ವಾ ದೌರ್ಯೋಧನಂ ಸೈನ್ಯಂ ಕಿಂ ವೈ ವಕ್ಷ್ಯಥ ಮುಖ್ಯಗಾಃ||

ಸರ್ವಸೈನ್ಯಗಳೂ ನೋಡುತ್ತಿದ್ದಂತೆ ಘೋರ ಶಪಥಗಳನ್ನು ಕೈಗೊಂಡು ಈಗ ದುರ್ಯೋಧನನ ಸೈನ್ಯದ ಬಳಿ ಓಡಿ ಹೋಗಿ ಯಾವ ಉತ್ತರವನ್ನು ನೀಡುವಿರಿ?

07017029a ನಾವಹಾಸ್ಯಾಃ ಕಥಂ ಲೋಕೇ ಕರ್ಮಣಾನೇನ ಸಂಯುಗೇ|

07017029c ಭವೇಮ ಸಹಿತಾಃ ಸರ್ವೇ ನಿವರ್ತಧ್ವಂ ಯಥಾಬಲಂ||

ಲೋಕದಲ್ಲಿ ನಾವು ಅಪಹಾಸ್ಯಕ್ಕೆ ಒಳಗಾಗದಂತೆ ನಾವು ರಣದಲ್ಲಿ ಮಾಡಬೇಕಾಗಿದೆ. ಹಿಂದಿರುಗಿ! ನಾವೆಲ್ಲ ಒಟ್ಟಿಗೇ ಬಲವಿದ್ದಷ್ಟು ಹೋರಾಡೋಣ!”

07017030a ಏವಮುಕ್ತಾಸ್ತು ತೇ ರಾಜನ್ನುದಕ್ರೋಶನ್ಮುಹುರ್ಮುಹುಃ|

07017030c ಶಂಖಾಂಶ್ಚ ದಧ್ಮಿರೇ ವೀರಾ ಹರ್ಷಯಂತಃ ಪರಸ್ಪರಂ||

ರಾಜನ್! ಅವನು ಹೀಗೆ ಹೇಳಲು ಅವರು ಪುನಃ ಪುನಃ ಗರ್ಜನೆ ಮಾಡುತ್ತಾ ಹಿಂದಿರುಗಿದರು. ಪರಸ್ಪರರನ್ನು ಹರ್ಷಗೊಳಿಸುತ್ತಾ ಆ ವೀರರು ಶಂಖಗಳನ್ನು ಊದಿದರು.

07017031a ತತಸ್ತೇ ಸಮ್ನ್ಯವರ್ತಂತ ಸಂಶಪ್ತಕಗಣಾಃ ಪುನಃ|

07017031c ನಾರಾಯಣಾಶ್ಚ ಗೋಪಾಲಾಃ ಕೃತ್ವಾ ಮೃತ್ಯುಂ ನಿವರ್ತನಂ||

ನಾರಾಯಣ-ಗೋಪಾಲ ಮೊದಲಾದ ಸಂಶಪ್ತಕ ಗಣಗಳು ಮೃತ್ಯುವನ್ನೇ ದಾರಿಯನ್ನಾಗಿಸಿಕೊಂಡು ಹಿಂದಿರುಗಿದವು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಸುಧನ್ವವಧೇ ಸಪ್ತಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಸುಧನ್ವವಧ ಎನ್ನುವ ಹದಿನೇಳನೇ ಅಧ್ಯಾಯವು.

Image result for indian motifs against white background

Comments are closed.