Drona Parva: Chapter 167

ದ್ರೋಣ ಪರ್ವ: ನಾರಾಯಣಾಸ್ತ್ರಮೋಕ್ಷ ಪರ್ವ

೧೬೭

ದ್ರೋಣನ ವಧೆಯ ಕುರಿತು ಪಾಂಡವ ಮಹಾರಥರಲ್ಲಿ ವಾಗ್ಯುದ್ಧ

ಕೌರವ ಸೇನೆಯಿಂದ ಕೇಳಿ ಬರುತ್ತಿದ್ದ ಭಯಂಕರ ತುಮುಲ ಶಬ್ಧವನ್ನು ಕೇಳಿದ ಯುಧಿಷ್ಠಿರನು ದ್ರೋಣನ ವಧೆಯ ನಂತರ ಓಡಿ ಹೋಗುತ್ತಿದ್ದ ಕೌರವ ಸೇನೆಯನ್ನು ಪುನಃ ಒಂದುಗೂಡಿಸಿ ಯುದ್ಧಕ್ಕೆ ಬರುತ್ತಿರುವ ಕೌರವ ಯೋಧನು ಯಾರೆಂದು ಯುಧಿಷ್ಠಿರನು ಅರ್ಜುನನನ್ನು ಕೇಳಿದುದು (೧-೨೪). ಯುದ್ಧಕ್ಕೆ ಬರುತ್ತಿರುವವನು ಅಶ್ವತ್ಥಾಮನೆಂದೂ ದ್ರೋಣನ ವಧೆಯು ಅಧರ್ಮವಾದುದೆಂದೂ ಅರ್ಜುನನು ಯುಧಿಷ್ಠಿರನಿಗೆ ಹೇಳಿ ದುಃಖಿಸಿದುದು (೨೫-೫೦).

07167001 ಸಂಜಯ ಉವಾಚ|

07167001a ಪ್ರಾದುರ್ಭೂತೇ ತತಸ್ತಸ್ಮಿನ್ನಸ್ತ್ರೇ ನಾರಾಯಣೇ ತದಾ|

07167001c ಪ್ರಾವಾತ್ಸಪೃಷತೋ ವಾಯುರನಭ್ರೇ ಸ್ತನಯಿತ್ನುಮಾನ್||

ಸಂಜಯನು ಹೇಳಿದನು: “ನಾರಾಯಣಾಸ್ತ್ರವು ಪ್ರಾದುರ್ಭೂತವಾಗಲು ತುಂತುರುಹನಿಗಳೊಂದಿಗೆ ಗಾಳಿಯು ಬೀಸತೊಡಗಿತು. ಮೋಡಗಳಿಲ್ಲದಿದ್ದರೂ ಆಕಾಶವು ಗರ್ಜಿಸಿತು.

07167002a ಚಚಾಲ ಪೃಥಿವೀ ಚಾಪಿ ಚುಕ್ಷುಭೇ ಚ ಮಹೋದಧಿಃ|

07167002c ಪ್ರತಿಸ್ರೋತಃ ಪ್ರವೃತ್ತಾಶ್ಚ ಗಂತುಂ ತತ್ರ ಸಮುದ್ರಗಾಃ||

ಭೂಮಿಯು ನಡುಗಿತು. ಮಹಾಸಾಗರವು ಅಲ್ಲೋಲಕಲ್ಲೋಲಗೊಂಡಿತು. ಸಮುದ್ರಗಾಮಿ ಮುಖ್ಯನದಿಗಳು ಹಿಂದಕ್ಕೆ ಹರಿಯತೊಡಗಿದವು.

07167003a ಶಿಖರಾಣಿ ವ್ಯದೀರ್ಯಂತ ಗಿರೀಣಾಂ ತತ್ರ ಭಾರತ|

07167003c ಅಪಸವ್ಯಂ ಮೃಗಾಶ್ಚೈವ ಪಾಂಡುಪುತ್ರಾನ್ಪ್ರಚಕ್ರಿರೇ||

ಭಾರತ! ಪರ್ವತಗಳಿಂದ ಶಿಖರಗಳು ಬಿರಿಬಿಟ್ಟವು. ಮೃಗಗಳು ಪಾಂಡುಪುತ್ರರನ್ನು ಅಪ್ರದಕ್ಷಿಣವಾಗಿ ಸುತ್ತತೊಡಗಿದವು.

07167004a ತಮಸಾ ಚಾವಕೀರ್ಯಂತ ಸೂರ್ಯಶ್ಚ ಕಲುಷೋಽಭವತ್|

07167004c ಸಂಪತಂತಿ ಚ ಭೂತಾನಿ ಕ್ರವ್ಯಾದಾನಿ ಪ್ರಹೃಷ್ಟವತ್||

ಎಲ್ಲ ಕಡೆಗಳಲ್ಲಿಯೂ ಕತ್ತಲೆಯು ಆವರಿಸಿತು. ಸೂರ್ಯನು ಮಾಲಿನ್ಯಹೊಂದಿದನು. ಮಾಂಸಾಹಾರೀ ಪಕ್ಷಿಗಳು ಸಂತೋಷದಿಂದ ಹಾರಾಡತೊಡಗಿದವು.

07167005a ದೇವದಾನವಗಂಧರ್ವಾಸ್ತ್ರಸ್ತಾ ಆಸನ್ವಿಶಾಂ ಪತೇ|

07167005c ಕಥಂ ಕಥಾಭವತ್ತೀವ್ರಾ ದೃಷ್ಟ್ವಾ ತದ್ವ್ಯಾಕುಲಂ ಮಹತ್||

ವಿಶಾಂಪತೇ! ದೇವದಾನವಗಂಧರ್ವರು ಅಸ್ವಸ್ತರಾದರು. ಆ ತೀವ್ರತೆಗಳನ್ನು ನೋಡಿ ಇದು ಹೇಗಾಯಿತು? ಮುಂದೆ ಏನಾಗುತ್ತದೆ? ಎಂದು ಪಾಂಡವರು ಮಹಾವ್ಯಾಕುಲಕ್ಕೊಳಗಾದರು.

07167006a ವ್ಯಥಿತಾಃ ಸರ್ವರಾಜಾನಸ್ತದಾ ಹ್ಯಾಸನ್ವಿಚೇತಸಃ|

07167006c ತದ್ದೃಷ್ಟ್ವಾ ಘೋರರೂಪಂ ತು ದ್ರೌಣೇರಸ್ತ್ರಂ ಭಯಾವಹಂ||

ದ್ರೌಣಿಯ ಆ ಘೋರರೂಪದ ಭಯಾವಹ ಅಸ್ತ್ರವನ್ನು ನೋಡಿ ಸರ್ವರಾಜರೂ ವಿಚೇತಸರಾಗಿ ವ್ಯಥಿತರಾದರು.”

07167007 ಧೃತರಾಷ್ಟ್ರ ಉವಾಚ|

07167007a ನಿವರ್ತಿತೇಷು ಸೈನ್ಯೇಷು ದ್ರೋಣಪುತ್ರೇಣ ಸಂಯುಗೇ|

07167007c ಭೃಶಂ ಶೋಕಾಭಿತಪ್ತೇನ ಪಿತುರ್ವಧಮಮೃಷ್ಯತಾ||

07167008a ಕುರೂನಾಪತತೋ ದೃಷ್ಟ್ವಾ ಧೃಷ್ಟದ್ಯುಮ್ನಸ್ಯ ರಕ್ಷಣೇ|

07167008c ಕೋ ಮಂತ್ರಃ ಪಾಂಡವೇಷ್ವಾಸೀತ್ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಪಿತ್ರುವಧೆಯನ್ನು ಸಹಿಸಿಕೊಳ್ಳಲಾಗದೇ ಅತ್ಯಂತ ಶೋಕಾಭಿತಪ್ತನಾಗಿದ್ದ ದ್ರೋಣಪುತ್ರನಿಂದಾಗಿ ಯುದ್ಧದಲ್ಲಿ ಸೇನೆಗಳು ಹಿಂದಿರುಗಿದುದನ್ನು ಮತ್ತು ಕುರುಗಳು ಆಕ್ರಮಣ ಮಾಡುತ್ತಿರುವುದನ್ನು ನೋಡಿ ಧೃಷ್ಟದ್ಯುಮ್ನನನ್ನು ರಕ್ಷಿಸಲು ಪಾಂಡವರಿಗೆ ಯಾರು ಸಲಹೆಗಳನ್ನಿತ್ತರು? ಅದನ್ನು ನನಗೆ ಹೇಳು ಸಂಜಯ!”

07167009 ಸಂಜಯ ಉವಾಚ|

07167009a ಪ್ರಾಗೇವ ವಿದ್ರುತಾನ್ದೃಷ್ಟ್ವಾ ಧಾರ್ತರಾಷ್ಟ್ರಾನ್ಯುಧಿಷ್ಠಿರಃ|

07167009c ಪುನಶ್ಚ ತುಮುಲಂ ಶಬ್ಧಂ ಶ್ರುತ್ವಾರ್ಜುನಮಭಾಷತ||

ಸಂಜಯನು ಹೇಳಿದನು: “ಯುಧಿಷ್ಠಿರನು ಸ್ವಲ್ಪ ಹೊತ್ತಿನ ಮೊದಲೇ ಧಾರ್ತರಾಷ್ಟ್ರರು ಓಡಿ ಹೋಗುತ್ತಿದ್ದುದನ್ನು ನೋಡಿದ್ದನು. ಆದರೆ ಪುನಃ ತುಮುಲಶಬ್ಧವನ್ನು ಕೇಳಿ ಅರ್ಜುನನನ್ನು ಪ್ರಶ್ನಿಸಿದನು:

07167010a ಆಚಾರ್ಯೇ ನಿಹತೇ ದ್ರೋಣೇ ಧೃಷ್ಟದ್ಯುಮ್ನೇನ ಸಂಯುಗೇ|

07167010c ನಿಹತೇ ವಜ್ರಹಸ್ತೇನ ಯಥಾ ವೃತ್ರೇ ಮಹಾಸುರೇ||

“ವಜ್ರಹಸ್ತನಿಂದ ಮಹಾಸುರ ವೃತ್ರನು ಹೇಗೆ ಹತನಾದನೋ ಹಾಗೆ ಯುದ್ಧದಲ್ಲಿ ಆಚಾರ್ಯ ದ್ರೋಣನು ಧೃಷ್ಟದ್ಯುಮ್ನನಿಂದ ಹತನಾಗಿದ್ದಾನೆ.

07167011a ನಾಶಂಸಂತ ಜಯಂ ಯುದ್ಧೇ ದೀನಾತ್ಮಾನೋ ಧನಂಜಯ|

07167011c ಆತ್ಮತ್ರಾಣೇ ಮತಿಂ ಕೃತ್ವಾ ಪ್ರಾದ್ರವನ್ಕುರವೋ ಯಥಾ||

ಧನಂಜಯ! ವಿಜಯದ ಆಸೆಯನ್ನೇ ತೊರೆದು ತಮ್ಮನ್ನು ಉಳಿಸಿಕೊಳ್ಳಲು ನಿರ್ಧರಿಸಿ ದೀನಾತ್ಮ ಕುರುಗಳು ಪಲಾಯನಮಾಡಿದ್ದರು.

07167012a ಕೇ ಚಿದ್ಭ್ರಾಂತೈ ರಥೈಸ್ತೂರ್ಣಂ ನಿಹತಪಾರ್ಷ್ಣಿಯಂತೃಭಿಃ|

07167012c ವಿಪತಾಕಧ್ವಜಚ್ಚತ್ರೈಃ ಪಾರ್ಥಿವಾಃ ಶೀರ್ಣಕೂಬರೈಃ||

ಪಾರ್ಷ್ಣಿ ಸಾರಥಿಗಳು ಹತರಾಗಲು ಮತ್ತು ಮೂಕಿಗಳು ಸೀಳಿಹೋಗಿರಲು ಕೆಲವು ಪಾರ್ಥಿವರು ಭ್ರಾಂತರಾಗಿ ತಕ್ಷಣವೇ ರಥಗಳಲ್ಲಿ ಪತಾಕ-ಧ್ವಜ-ಚತ್ರಗಳಿಲ್ಲದೇ ರಥಗಳಲ್ಲಿ ಓಡಿ ಹೋಗುತ್ತಿದ್ದರು.

07167013a ಭಗ್ನನೀಡೈರಾಕುಲಾಶ್ವೈರಾರುಹ್ಯಾನ್ಯೇ ವಿಚೇತಸಃ|

07167013c ಭೀತಾಃ ಪಾದೈರ್ಹಯಾನ್ಕೇ ಚಿತ್ತ್ವರಯಂತಃ ಸ್ವಯಂ ರಥೈಃ|

07167013e ಯುಗಚಕ್ರಾಕ್ಷಭಗ್ನೈಶ್ಚ ದ್ರುತಾಃ ಕೇ ಚಿದ್ಭಯಾತುರಾಃ||

ಇನ್ನು ಕೆಲವರು ರಥದ ಆಸನಗಳು ಭಗ್ನವಾಗಿಹೋಗಿದುದರಿಂದ, ಕುದುರೆಗಳು ವ್ಯಾಕುಲಗೊಂಡು ವಿಚೇತನಗೊಂಡಿದ್ದುದರಿಂದ ಭೀತರಾಗಿ ತಾವೇ ಕಾಲುಗಳಿಂದ ಕುದುರೆಗಳನ್ನು ತಿವಿದುಕೊಳ್ಳುತ್ತಾ ಓಡಿಹೋಗುತ್ತಿದ್ದರು.

07167014a ಗಜಸ್ಕಂಧೇಷು ಸಂಸ್ಯೂತಾ ನಾರಾಚೈಶ್ಚಲಿತಾಸನಾಃ|

07167014c ಶರಾರ್ತೈರ್ವಿದ್ರುತೈರ್ನಾಗೈರ್ಹೃತಾಃ ಕೇ ಚಿದ್ದಿಶೋ ದಶ||

ಇನ್ನು ಕೆಲವರು ನಾರಾಚಗಳಿಂದ ಆಸನಹೀನರಾಗಿ ಆನೆಗಳ ಭುಜಗಳ ಮೇಲಿಂದ ನೇತಾಡುತ್ತಾ ಭಯಾತುರರಾಗಿ ಓಡಿಹೋಗುತ್ತಿದ್ದರು. ಬಾಣಗಳಿಂದ ಗಾಯಗೊಂಡ ಮತ್ತು ಮಾವಟಿಗರಿಲ್ಲದ ಕೆಲವು ಆನೆಗಳು ಯೋಧರನ್ನೆಳೆದುಕೊಂಡು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದವು.

07167015a ವಿಶಸ್ತ್ರಕವಚಾಶ್ಚಾನ್ಯೇ ವಾಹನೇಭ್ಯಃ ಕ್ಷಿತಿಂ ಗತಾಃ|

07167015c ಸಂಚಿನ್ನಾ ನೇಮಿಷು ಗತಾ ಮೃದಿತಾಶ್ಚ ಹಯದ್ವಿಪೈಃ||

ಮತ್ತೆ ಕೆಲವರು ಕವಚ-ಆಯುಧಗಳನ್ನು ಕಳಚಿಕೊಂಡು ವಾಹನಗಳಿಂದ ಕುಸಿದು ನೆಲದಮೇಲೆ ಬಿದ್ದಿದ್ದವರು ರಥಗಾಲಿಗಳಿಂದ ಮತ್ತು ಆನೆ-ಕುದುರೆಗಳಿಂದ ತುಳಿಯಲ್ಪಟ್ಟು ಕತ್ತರಿಸಲ್ಪಟ್ಟಿದ್ದರು.

07167016a ಕ್ರೋಶಂತಸ್ತಾತ ಪುತ್ರೇತಿ ಪಲಾಯಂತೋಽಪರೇ ಭಯಾತ್|

07167016c ನಾಭಿಜಾನಂತಿ ಚಾನ್ಯೋನ್ಯಂ ಕಶ್ಮಲಾಭಿಹತೌಜಸಃ||

ಮತ್ತೆ ಕೆಲವರು ಹಾ ಪುತ್ರಕ! ಹಾ ತಾತ! ಎಂದು ಭಯದಿಂದ ಕೂಗಿಕೊಳ್ಳುತ್ತಾ ಪಲಾಯನಗೈಯುತ್ತಿದ್ದರು. ಸಂಕಟದಿಂದ ನಿರುತ್ಸಾಹಿಗಳಾಗಿದ್ದ ಅವರು ಅನ್ಯೋನ್ಯರನ್ನು ಗುರುತಿಸುತ್ತಿರಲಿಲ್ಲ.

07167017a ಪುತ್ರಾನ್ಪಿತೄನ್ಸಖೀನ್ಭ್ರಾತೄಮ್ಸಮಾರೋಪ್ಯ ದೃಢಕ್ಷತಾನ್|

07167017c ಜಲೇನ ಕ್ಲೇದಯಂತ್ಯನ್ಯೇ ವಿಮುಚ್ಯ ಕವಚಾನ್ಯಪಿ||

ಮತ್ತೆ ಕೆಲವರು ಗಾಢವಾಗಿ ಗಾಯಗೊಂಡಿದ್ದ ಮಕ್ಕಳನ್ನೋ, ತಂದೆಯನ್ನೋ, ಸ್ನೇಹಿತರನ್ನೋ, ಸಹೋದರರನ್ನೋ ತೊಡೆಯಮೇಲಿರಿಸಿಕೊಂಡು ಕವಚಗಳನ್ನು ಕಳಚಿ ನೀರಿನಿಂದ ಉಪಚರಿಸುತ್ತಿದ್ದರು.

07167018a ಅವಸ್ಥಾಂ ತಾದೃಶೀಂ ಪ್ರಾಪ್ಯ ಹತೇ ದ್ರೋಣೇ ದ್ರುತಂ ಬಲಂ|

07167018c ಪುನರಾವರ್ತಿತಂ ಕೇನ ಯದಿ ಜಾನಾಸಿ ಶಂಸ ಮೇ||

ದ್ರೋಣನು ಹತನಾದಾಗ ಈ ರೀತಿಯ ಅವಸ್ಥೆಯನ್ನು ಹೊಂದಿ ಓಡಿ ಹೋಗುತ್ತಿದ್ದ ಅವರ ಸೇನೆಯನ್ನು ಪುನಃ ಯಾರು ಕರೆದುಕೊಂಡು ಬಂದಿದ್ದಾರೆ? ಇದರ ಕುರಿತು ನಿನಗೇನಾದರೂ ತಿಳಿದಿದ್ದರೆ ನನಗೆ ಹೇಳು!

07167019a ಹಯಾನಾಂ ಹೇಷತಾಂ ಶಬ್ಧಃ ಕುಂಜರಾಣಾಂ ಚ ಬೃಂಹತಾಂ|

07167019c ರಥನೇಮಿಸ್ವನಶ್ಚಾತ್ರ ವಿಮಿಶ್ರಃ ಶ್ರೂಯತೇ ಮಹಾನ್||

ಕುದುರೆಗಳ ಹೇಂಕಾರವೂ, ಆನೆಗಳ ಘೀಂಕಾರವೂ, ರಥಚಕ್ರಗಳ ಧ್ವನಿಯೂ ಮಿಶ್ರಿತವಾಗಿ ಜೋರಾಗಿ ಕೇಳಿಬರುತ್ತಿದೆ!

07167020a ಏತೇ ಶಬ್ಧಾ ಭೃಶಂ ತೀವ್ರಾಃ ಪ್ರವೃತ್ತಾಃ ಕುರುಸಾಗರೇ|

07167020c ಮುಹುರ್ಮುಹುರುದೀರ್ಯಂತಃ ಕಂಪಯಂತಿ ಹಿ ಮಾಮಕಾನ್||

ಕುರುಸೇನೆಯ ಮಹಾಸಾಗರದಲ್ಲಿ ಉತ್ಪನ್ನವಾದ ಈ ಶಬ್ಧವು ಕ್ಷಣ ಕ್ಷಣವೂ ತೀವ್ರವಾಗುತ್ತಿದೆ. ಪುನಃ ಪುನಃ ಕೇಳಿಬರುತ್ತಿರುವ ಈ ಶಬ್ಧವು ನಮ್ಮವರನ್ನು ನಡುಗಿಸುತ್ತಿದೆ.

07167021a ಯ ಏಷ ತುಮುಲಃ ಶಬ್ಧಃ ಶ್ರೂಯತೇ ಲೋಮಹರ್ಷಣ|

07167021c ಸೇಂದ್ರಾನಪ್ಯೇಷ ಲೋಕಾಂಸ್ತ್ರೀನ್ಭಂಜ್ಯಾದಿತಿ ಮತಿರ್ಮಮ||

ರೋಮಾಂಚಕಾರಿಯಾಗಿ ಕೇಳಿಬರುತ್ತಿರುವ ಈ ತುಮುಲ ಶಬ್ಧವು ಇಂದ್ರನನ್ನೂ ಕೂಡಿ ಈ ಮೂರು ಲೋಕಗಳನ್ನೂ ನುಂಗಿಬಿಡುತ್ತದೆಯೋ ಎಂದು ನನಗನ್ನಿಸುತ್ತಿದೆ.

07167022a ಮನ್ಯೇ ವಜ್ರಧರಸ್ಯೈಷ ನಿನಾದೋ ಭೈರವಸ್ವನಃ|

07167022c ದ್ರೋಣೇ ಹತೇ ಕೌರವಾರ್ಥಂ ವ್ಯಕ್ತಮಭ್ಯೇತಿ ವಾಸವಃ||

ಈ ನಿನಾದವು ದ್ರೋಣನು ಹತನಾಗಲು ಕೌರವರ ಸಹಾಯಾರ್ಥವಾಗಿ ಬರುತ್ತಿರುವ ವಜ್ರಧರ ವಾಸವನ ಭೈರವಧ್ವನಿಯಾಗಿರಬಹುದು ಎಂದು ನನಗೆ ಅನ್ನಿಸುತ್ತಿದೆ.

07167023a ಪ್ರಹೃಷ್ಟಲೋಮಕೂಪಾಃ ಸ್ಮ ಸಂವಿಗ್ನರಥಕುಂಜರಾಃ|

07167023c ಧನಂಜಯ ಗುರುಂ ಶ್ರುತ್ವಾ ತತ್ರ ನಾದಂ ಸುಭೀಷಣಂ||

ಧನಂಜಯ! ಅಲ್ಲಿಯ ಆ ಸುಭೀಷಣ ಜೋರಾದ ನಾದವನ್ನು ಕೇಳಿ ಸಂವಿಗ್ನರಾದ ನಮ್ಮ ಮಹಾರಥರ ಮತ್ತು ಆನೆಗಳ ರೋಮಗಳು ನಿಮಿರಿನಿಂತಿವೆ!

07167024a ಕ ಏಷ ಕೌರವಾನ್ದೀರ್ಣಾನವಸ್ಥಾಪ್ಯ ಮಹಾರಥಃ|

07167024c ನಿವರ್ತಯತಿ ಯುದ್ಧಾರ್ಥಂ ಮೃಧೇ ದೇವೇಶ್ವರೋ ಯಥಾ||

ಚದುರಿಹೋಗಿದ್ದ ಸೇನೆಗಳನ್ನು ಒಂದುಗೂಡಿಸಿ ಯುದ್ಧಕ್ಕಾಗಿ ದೇವೇಶ್ವರನಂತೆ ಬರುತ್ತಿರುವ ಕೌರವರ ಈ ಮಹಾರಥನ್ಯಾರು?”

07167025 ಅರ್ಜುನ ಉವಾಚ|

07167025a ಉದ್ಯಮ್ಯಾತ್ಮಾನಮುಗ್ರಾಯ ಕರ್ಮಣೇ ಧೈರ್ಯಮಾಸ್ಥಿತಾಃ|

07167025c ಧಮಂತಿ ಕೌರವಾಃ ಶಂಖಾನ್ಯಸ್ಯ ವೀರ್ಯಮುಪಾಶ್ರಿತಾಃ||

07167026a ಯತ್ರ ತೇ ಸಂಶಯೋ ರಾಜನ್ನ್ಯಸ್ತಶಸ್ತ್ರೇ ಗುರೌ ಹತೇ|

07167026c ಧಾರ್ತರಾಷ್ಟ್ರಾನವಸ್ಥಾಪ್ಯ ಕ ಏಷ ನದತೀತಿ ಹ||

ಅರ್ಜುನನು ಹೇಳಿದನು: “ರಾಜನ್! ಶಸ್ತ್ರಸಂನ್ಯಾಸಮಾಡಿದ ಗುರುವು ಹತನಾದ ನಂತರ ಧಾರ್ತರಾಷ್ಟ್ರರನ್ನು ಪುನಃ ಒಂದುಗೂಡಿಸಿ ಗರ್ಜಿಸುತ್ತಿರುವವನ್ಯಾರೆಂದು, ಯಾರ ವೀರ್ಯವನ್ನು ಉಪಾಶ್ರಯಿಸಿ ತಮ್ಮನ್ನು ಈ ಉಗ್ರ ಕರ್ಮಕ್ಕೆ ಧೈರ್ಯವನ್ನು ತಳೆದು ಮೇಲೇರಿಸಿಕೊಂಡು ಕೌರವರು ಶಂಖಗಳನ್ನು ಊದುತ್ತಿರುವವರು ಎಂದು ನಿನಗೆ ಸಂಶಯವಾಗುತ್ತಿದೆಯಲ್ಲವೇ?

07167027a ಹ್ರೀಮಂತಂ ತಂ ಮಹಾಬಾಹುಂ ಮತ್ತದ್ವಿರದಗಾಮಿನಂ|

07167027c ವ್ಯಾಖ್ಯಾಸ್ಯಾಮ್ಯುಗ್ರಕರ್ಮಾಣಂ ಕುರೂಣಾಮಭಯಂಕರಂ||

ಮದಿಸಿದ ಅನೆಯ ನಡುಗೆಯುಳ್ಳ, ಕುರುಗಳಿಗೆ ಅಭಯಂಕರನಾದ, ಹ್ರೀಮಂತನಾದ ಆ ಉಗ್ರಕರ್ಮಿ ಮಹಾಬಾಹುವು ಯಾರೆಂದು ನಿನಗೆ ಹೇಳುತ್ತೇನೆ. ಕೇಳು!

07167028a ಯಸ್ಮಿಂ ಜಾತೇ ದದೌ ದ್ರೋಣೋ ಗವಾಂ ದಶಶತಂ ಧನಂ|

07167028c ಬ್ರಾಹ್ಮಣೇಭ್ಯೋ ಮಹಾರ್ಹೇಭ್ಯಃ ಸೋಽಶ್ವತ್ಥಾಮೈಷ ಗರ್ಜತಿ||

ಯಾರು ಹುಟ್ಟಿದೊಡನೆಯೇ ದ್ರೋಣನು ಒಂದುಸಾವಿರ ಗೋವುಗಳನ್ನು ಯೋಗ್ಯ ಬ್ರಾಹ್ಮಣರಿಗೆ ದಾನಮಾಡಿದನೋ ಆ ಅಶ್ವತ್ಥಾಮನೇ ಹೀಗೆ ಗರ್ಜಿಸುತ್ತಿದ್ದಾನೆ!

07167029a ಜಾತಮಾತ್ರೇಣ ವೀರೇಣ ಯೇನೋಚ್ಛೈಃಶ್ರವಸಾ ಇವ|

07167029c ಹೇಷತಾ ಕಂಪಿತಾ ಭೂಮಿರ್ಲೋಕಾಶ್ಚ ಸಕಲಾಸ್ತ್ರಯಃ||

07167030a ತಚ್ಛೃತ್ವಾಂತರ್ಹಿತಂ ಭೂತಂ ನಾಮ ಚಾಸ್ಯಾಕರೋತ್ತದಾ|

07167030c ಅಶ್ವತ್ಥಾಮೇತಿ ಸೋಽದ್ಯೈಷ ಶೂರೋ ನದತಿ ಪಾಂಡವ||

ಪಾಂಡವ! ಹುಟ್ಟಿದೊಡನೆಯೇ ಯಾವ ವೀರನು ಉಚ್ಛೈಃಶ್ರವದಂತೆ ಹೇಷಾರವ ಮಾಡಿ ಭೂಮಿಯನ್ನೂ ಮೂರು ಲೋಕಗಳನ್ನು ಕಂಪಿಸಿದನೋ, ಯಾರ ಹೇಷಾರವವನ್ನು ಕೇಳಿ ಅಂತರ್ಹಿತ ಭೂತಗಳು ಅವನಿಗೆ ಅಶ್ವತ್ಥಾಮ ಎಂಬ ಹೆಸರನ್ನಿಟ್ಟರೋ ಆ ಶೂರನೇ ಇಂದು ಗರ್ಜಿಸುತ್ತಿದ್ದಾನೆ!

07167031a ಯೋಽದ್ಯಾನಾಥ ಇವಾಕ್ರಮ್ಯ ಪಾರ್ಷತೇನ ಹತಸ್ತಥಾ|

07167031c ಕರ್ಮಣಾ ಸುನೃಶಂಸೇನ ತಸ್ಯ ನಾಥೋ ವ್ಯವಸ್ಥಿತಃ||

ಯಾರನ್ನು ಅನಾಥನಂತೆ ಅತ್ಯಂತಕ್ರೂರ ಕರ್ಮದಿಂದ ಪಾರ್ಷತನು ಆಕ್ರಮಣಿಸಿ ಸಂಹರಿಸಿದನೋ ಅವನ ನಾಥನೇ ಈಗ ರಣಾಂಗಣದಲ್ಲಿ ಉಪಸ್ಥಿತನಾಗಿದ್ದಾನೆ.

07167032a ಗುರುಂ ಮೇ ಯತ್ರ ಪಾಂಚಾಲ್ಯಃ ಕೇಶಪಕ್ಷೇ ಪರಾಮೃಶತ್|

07167032c ತನ್ನ ಜಾತು ಕ್ಷಮೇದ್ದ್ರೌಣಿರ್ಜಾನನ್ಪೌರುಷಮಾತ್ಮನಃ||

ತನ್ನ ಪೌರುಷವು ಎಷ್ಟಿರುವುದೆಂದು ತಿಳಿದಿರುವ ದ್ರೌಣಿಯು ನನ್ನ ಗುರುವಿನ ಮುಡಿಯನ್ನು ಹಿಡಿದು ಕೊಂದಿರುವವನನ್ನು ಖಂಡಿತವಾಗಿಯೂ ಕ್ಷಮಿಸುವುದಿಲ್ಲ!

07167033a ಉಪಚೀರ್ಣೋ ಗುರುರ್ಮಿಥ್ಯಾ ಭವತಾ ರಾಜ್ಯಕಾರಣಾತ್|

07167033c ಧರ್ಮಜ್ಞೇನ ಸತಾ ನಾಮ ಸೋಽಧರ್ಮಃ ಸುಮಹಾನ್ಕೃತಃ||

ಧರ್ಮಜ್ಞನೂ ಮತ್ತು ಸತ್ಪುರುಷನೂ ಆಗಿದ್ದರೂ ರಾಜ್ಯದ ಕಾರಣದಿಂದ ನೀನು ಗುರುವಿಗೆ ಸುಳ್ಳನ್ನು ಹೇಳಿ ಮೋಸಗೊಳಿಸಿ ಮಹಾ ಅಧರ್ಮವನ್ನು ಮಾಡಿರುವೆ!

07167034a ಸರ್ವಧರ್ಮೋಪಪನ್ನೋಽಯಂ ಮಮ ಶಿಷ್ಯಶ್ಚ ಪಾಂಡವಃ|

07167034c ನಾಯಂ ವಕ್ಷ್ಯತಿ ಮಿಥ್ಯೇತಿ ಪ್ರತ್ಯಯಂ ಕೃತವಾಂಸ್ತ್ವಯಿ||

“ಈ ಪಾಂಡವನು ಸರ್ವಧರ್ಮೋಪಪನ್ನನು. ನನ್ನ ಶಿಷ್ಯನೂ ಕೂಡ. ಇವನು ಸುಳ್ಳು ಹೇಳುವುದಿಲ್ಲ” ಎಂಬ ದೃಢವಿಶ್ವಾಸವನ್ನು ಅವನು ನಿನ್ನಲ್ಲಿಟ್ಟಿದ್ದನು.

07167035a ಸ ಸತ್ಯಕಂಚುಕಂ ನಾಮ ಪ್ರವಿಷ್ಟೇನ ತತೋಽನೃತಂ|

07167035c ಆಚಾರ್ಯ ಉಕ್ತೋ ಭವತಾ ಹತಃ ಕುಂಜರ ಇತ್ಯುತ||

ಆದರೆ ನೀನು ಸತ್ಯವೆಂಬ ಅಂಗಿಯನ್ನು ತೊಟ್ಟು ಅಶ್ವತ್ಥಾಮನ ಹೆಸರಿನವನು ಹತನಾದನೆಂಬ ಸುಳ್ಳನ್ನು ಆಚಾರ್ಯನಿಗೆ ಹೇಳಿ ಅನಂತರ ಕುಂಜರ ಎಂದು ಹೇಳಿದೆ!

07167036a ತತಃ ಶಸ್ತ್ರಂ ಸಮುತ್ಸೃಜ್ಯ ನಿರ್ಮಮೋ ಗತಚೇತನಃ|

07167036c ಆಸೀತ್ಸ ವಿಹ್ವಲೋ ರಾಜನ್ಯಥಾ ದೃಷ್ಟಸ್ತ್ವಯಾ ವಿಭುಃ||

ರಾಜನ್! ವಿಭೋ! ಆಗ ಅವನು ಶಸ್ತ್ರವನ್ನು ಬಿಸುಟು ಮಮಕಾರವನ್ನು ತೊರೆದು ಬುದ್ದಿಗೆಟ್ಟವನಾಗಿ ಅತ್ಯಂತ ವಿಹ್ವಲನಾದುದನ್ನು ನೀನೂ ನೋಡಿದೆ!

07167037a ಸ ತು ಶೋಕೇನ ಚಾವಿಷ್ಟೋ ವಿಮುಖಃ ಪುತ್ರವತ್ಸಲಃ|

07167037c ಶಾಶ್ವತಂ ಧರ್ಮಮುತ್ಸೃಜ್ಯ ಗುರುಃ ಶಿಷ್ಯೇಣ ಘಾತಿತಃ||

ಹಾಗೆ ಶೋಕಾವಿಷ್ಟನಾಗಿ ಯುದ್ಧದಿಂದ ವಿಮುಖನಾಗಿದ್ದ ಆ ಪುತ್ರವತ್ಸಲ ಗುರುವು ಶಾಶ್ವತ ಧರ್ಮವನ್ನು ಬಿಸುಟ ಶಿಷ್ಯನಿಂದ ಘಾತಿತನಾದನು!

07167038a ನ್ಯಸ್ತಶಸ್ತ್ರಮಧರ್ಮೇಣ ಘಾತಯಿತ್ವಾ ಗುರುಂ ಭವಾನ್|

07167038c ರಕ್ಷತ್ವಿದಾನೀಂ ಸಾಮಾತ್ಯೋ ಯದಿ ಶಕ್ನೋಷಿ ಪಾರ್ಷತಂ||

ಶಸ್ತ್ರಗಳನ್ನು ಕೆಳಗಿಟ್ಟ ಗುರುವನ್ನು ಅಧರ್ಮದಿಂದ ಕೊಲ್ಲಿಸಿದ ನೀನು ಶಕ್ಯನಾದರೆ ಅಮಾತ್ಯರೊಂದಿಗೆ ಈ ಪಾರ್ಷತನನ್ನು ರಕ್ಷಿಸು!

07167039a ಗ್ರಸ್ತಮಾಚಾರ್ಯಪುತ್ರೇಣ ಕ್ರುದ್ಧೇನ ಹತಬಂಧುನಾ|

07167039c ಸರ್ವೇ ವಯಂ ಪರಿತ್ರಾತುಂ ನ ಶಕ್ಷ್ಯಾಮೋಽದ್ಯ ಪಾರ್ಷತಂ||

ತಂದೆಯನ್ನು ಕಳೆದುಕೊಂಡು ಕ್ರುದ್ಧನಾಗಿರುವ ಆಚಾರ್ಯಪುತ್ರನಿಂದ ಗ್ರಸ್ತನಾಗಿರುವ ಪಾರ್ಷತನನ್ನು ಇಂದು ನಾವೆಲ್ಲ ಸೇರಿದರೂ ರಕ್ಷಿಸಲು ಶಕ್ಯರಾಗಿರಲಿಕ್ಕಿಲ್ಲ.

07167040a ಸೌಹಾರ್ದಂ ಸರ್ವಭೂತೇಷು ಯಃ ಕರೋತ್ಯತಿಮಾತ್ರಶಃ|

07167040c ಸೋಽದ್ಯ ಕೇಶಗ್ರಹಂ ಶ್ರುತ್ವಾ ಪಿತುರ್ಧಕ್ಷ್ಯತಿ ನೋ ರಣೇ||

ಇರುವ ಎಲ್ಲವುಗಳೊಡನೆ ಸೌಹಾರ್ದತೆಯಿಂದಿರುವ ಅಶ್ವತ್ಥಾಮನು ತನ್ನ ತಂದೆಯ ಮುಡಿಯನ್ನು ಹಿಡಿಯಲಾಯಿತು ಎಂದು ಕೇಳಿ ನಮ್ಮನ್ನು ರಣದಲ್ಲಿ ಇಂದು ಸುಡಲಿದ್ದಾನೆ.

07167041a ವಿಕ್ರೋಶಮಾನೇ ಹಿ ಮಯಿ ಭೃಶಮಾಚಾರ್ಯಗೃದ್ಧಿನಿ|

07167041c ಅವಕೀರ್ಯ ಸ್ವಧರ್ಮಂ ಹಿ ಶಿಷ್ಯೇಣ ನಿಹತೋ ಗುರುಃ||

ಆಚಾರ್ಯನನ್ನು ಉಳಿಸಬೇಕೆಂಬ ಆಸೆಯಿಂದ ನಾನು ತುಂಬಾ ಕೂಗಿಕೊಳ್ಳುತ್ತಿದ್ದರೂ ನನ್ನ ಗುರುವು ಸ್ವಧರ್ಮವನ್ನು ತೊರೆದ ಶಿಷ್ಯನಿಂದ ಹತನಾಗಿಬಿಟ್ಟನು!

07167042a ಯದಾ ಗತಂ ವಯೋ ಭೂಯಃ ಶಿಷ್ಟಮಲ್ಪತರಂ ಚ ನಃ|

07167042c ತಸ್ಯೇದಾನೀಂ ವಿಕಾರೋಽಯಮಧರ್ಮೋ ಯತ್ಕೃತೋ ಮಹಾನ್||

ನಮ್ಮ ಆಯುಷ್ಯದಲ್ಲಿ ಬಹುಭಾಗವು ಕಳೆದುಹೋಗಿದೆ. ಸ್ವಲ್ಪವೇ ಉಳಿದುಕೊಂಡಿದೆ. ಈ ಸಮಯದಲ್ಲಿ ನಾವು ಮಹಾ ಅಧರ್ಮವನ್ನು ಮಾಡಿದ್ದೇವೆ, ಮತ್ತು ಉಳಿದ ಆಯುಷ್ಯವನ್ನು ಕಳಂಕಿತಗೊಳಿಸಿದ್ದೇವೆ.

07167043a ಪಿತೇವ ನಿತ್ಯಂ ಸೌಹಾರ್ದಾತ್ಪಿತೇವ ಸ ಹಿ ಧರ್ಮತಃ|

07167043c ಸೋಽಲ್ಪಕಾಲಸ್ಯ ರಾಜ್ಯಸ್ಯ ಕಾರಣಾನ್ನಿಹತೋ ಗುರುಃ||

ನಿತ್ಯವೂ ತಂದೆಯಂತೆ ಸೌಹಾರ್ದತೆಯಿಂದಿದ್ದ ಮತ್ತು ಧರ್ಮದಲ್ಲಿ ತಂದೆಯಂತಿದ್ದ ಗುರುವನ್ನು ನಾವು ಅಲ್ಪಕಾಲದ ರಾಜ್ಯ ಕಾರಣದಿಂದಾಗಿ ಸಂಹರಿಸಿದೆವು!

07167044a ಧೃತರಾಷ್ಟ್ರೇಣ ಭೀಷ್ಮಾಯ ದ್ರೋಣಾಯ ಚ ವಿಶಾಂ ಪತೇ|

07167044c ವಿಸೃಷ್ಟಾ ಪೃಥಿವೀ ಸರ್ವಾ ಸಹ ಪುತ್ರೈಶ್ಚ ತತ್ಪರೈಃ||

ವಿಶಾಂಪತೇ! ತತ್ಪರರಾಗಿದ್ದ ಭೀಷ್ಮ-ದ್ರೋಣರಿಗೆ ಧೃತರಾಷ್ಟ್ರನು ತನ್ನ ಪುತ್ರರೊಂದಿಗೆ ಸರ್ವ ಪೃಥ್ವಿಯನ್ನೂ ಒಪ್ಪಿಸಿಬಿಟ್ಟಿದ್ದನು.

07167045a ಸ ಪ್ರಾಪ್ಯ ತಾದೃಶೀಂ ವೃತ್ತಿಂ ಸತ್ಕೃತಃ ಸತತಂ ಪರೈಃ|

07167045c ಅವೃಣೀತ ಸದಾ ಪುತ್ರಾನ್ಮಾಮೇವಾಭ್ಯಧಿಕಂ ಗುರುಃ||

ಆ ವೃತ್ತಿಯನ್ನು ಪಡೆದು ಶತ್ರುಗಳಿಂದಲೂ ಸತತವಾಗಿ ಸತ್ಕೃತನಾಗಿದ್ದ ಆ ಗುರುವು ನನ್ನನ್ನು ತನ್ನ ಮಗನಿಗಿಂತಲೂ ಅಧಿಕವಾಗಿ ಸ್ವೀಕರಿಸಿದ್ದನು.

07167046a ಅಕ್ಷೀಯಮಾಣೋ ನ್ಯಸ್ತಾಸ್ತ್ರಸ್ತ್ವದ್ವಾಕ್ಯೇನಾಹವೇ ಹತಃ|

07167046c ನ ತ್ವೇನಂ ಯುಧ್ಯಮಾನಂ ವೈ ಹನ್ಯಾದಪಿ ಶತಕ್ರತುಃ||

ನಿನ್ನ ಮಾತಿನಿಂದ ದುಃಖಿತನಾದ ಅವನು ಯುದ್ಧದಲ್ಲಿ ಅಸ್ತ್ರವನ್ನು ತ್ಯಜಿಸಿ ಹತನಾದನು. ಯುದ್ಧಮಾಡುತ್ತಿರುವ ಅವನನ್ನು ಶತಕ್ರತುವು ಕೂಡ ಸಂಹರಿಸಲಾರದವನಾಗಿದ್ದನು.

07167047a ತಸ್ಯಾಚಾರ್ಯಸ್ಯ ವೃದ್ಧಸ್ಯ ದ್ರೋಹೋ ನಿತ್ಯೋಪಕಾರಿಣಃ|

07167047c ಕೃತೋ ಹ್ಯನಾರ್ಯೈರಸ್ಮಾಭೀ ರಾಜ್ಯಾರ್ಥೇ ಲಘುಬುದ್ಧಿಭಿಃ||

ನಿತ್ಯೋಪಕಾರಿಯಾಗಿದ್ದ ವೃದ್ಧ ಆಚಾರ್ಯನಿಗೆ ದ್ರೋಹವೆಸಗಿ ರಾಜ್ಯಕ್ಕಾಗಿ ಸಣ್ಣಬುದ್ಧಿಯವರಾದ ನಾವು ಅನಾರ್ಯರಂತೆ ಸಂಹರಿಸಿದೆವು!

07167048a ಪುತ್ರಾನ್ಭ್ರಾತೄನ್ಪಿತೄನ್ದಾರಾಂ ಜೀವಿತಂ ಚೈವ ವಾಸವಿಃ|

07167048c ತ್ಯಜೇತ್ಸರ್ವಂ ಮಮ ಪ್ರೇಮ್ಣಾ ಜಾನಾತ್ಯೇತದ್ಧಿ ಮೇ ಗುರುಃ||

ನನ್ನ ಮೇಲಿನ ಪ್ರೇಮದಿಂದ ಗುರುವು “ಈ ವಾಸವಿಯು ನನಗಾಗಿ ಸಹೋದರರು, ತಂದೆ, ಮತ್ತು ಜೀವ ಎಲ್ಲವನ್ನೂ ತ್ಯಜಿಸಬಲ್ಲನು” ಎಂದು ತಿಳಿದಿದ್ದನು.

07167049a ಸ ಮಯಾ ರಾಜ್ಯಕಾಮೇನ ಹನ್ಯಮಾನೋಽಪ್ಯುಪೇಕ್ಷಿತಃ|

07167049c ತಸ್ಮಾದವಾಕ್ ಶಿರಾ ರಾಜನ್ಪ್ರಾಪ್ತೋಽಸ್ಮಿ ನರಕಂ ವಿಭೋ||

ವಿಭೋ! ರಾಜ್ಯದ ಆಸೆಯಿಂದ ಸಂಹರಿಸಲ್ಪಡುತ್ತಿದ್ದರೂ ನಾನು ಉಪೇಕ್ಷೆಯಿಂದಿದ್ದುಬಿಟ್ಟೆನು. ರಾಜನ್! ಅದರಿಂದಾಗಿ ನಾನು ತಲೆತಗ್ಗಿಸಿ ನರಕವನ್ನು ಅನುಭವಿಸುತ್ತಿದ್ದೇನೆ.

07167050a ಬ್ರಾಹ್ಮಣಂ ವೃದ್ಧಮಾಚಾರ್ಯಂ ನ್ಯಸ್ತಶಸ್ತ್ರಂ ಯಥಾ ಮುನಿಂ|

07167050c ಘಾತಯಿತ್ವಾದ್ಯ ರಾಜ್ಯಾರ್ಥೇ ಮೃತಂ ಶ್ರೇಯೋ ನ ಜೀವಿತಂ||

ಬ್ರಾಹ್ಮಣನಾದ, ವೃದ್ಧನಾದ, ಆಚಾರ್ಯನಾದ, ಶಸ್ತ್ರವನ್ನು ತ್ಯಜಿಸಿದ್ದ ಮುನಿಯನ್ನು ರಾಜ್ಯಾರ್ಥವಾಗಿ ಸಂಹರಿಸಿದ ನನಗೆ ಸಾವೇ ಶ್ರೇಯಸ್ಸೆನಿಸುತ್ತದೆ. ಜೀವಿತವಾಗಿರುವುದಲ್ಲ!””

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಅರ್ಜುನವಾಕ್ಯೇ ಸಪ್ತಷಷ್ಟ್ಯಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ನೂರಾಅರವತ್ತೇಳನೇ ಅಧ್ಯಾಯವು.

Related image

Comments are closed.