Drona Parva: Chapter 16

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೧೬

ಹನ್ನೆರಡನೇ ದಿನದ ಯುದ್ಧ

ಯಾವುದಾದರೂ ಉಪಾಯದಿಂದ ಅರ್ಜುನನನ್ನು ಯುಧಿಷ್ಠಿರನಿಂದ ದೂರಹೋಗುವಂತೆ ಮಾಡಿದರೆ ತಾನು ಖಂಡಿತವಾಗಿ ಯುಧಿಷ್ಠಿರನನ್ನು ಸೆರೆಹಿಡಿಯುತ್ತೇನೆಂದು ದ್ರೋಣನು ದುರ್ಯೋಧನನಿಗೆ ಹೇಳಿದುದು (೧-೧೦). ಸಂಶಪ್ತಕರು ಅರ್ಜುನನನ್ನು ಕೊಲ್ಲುವ ಶಪಥವನ್ನು ಕೈಗೊಂಡು ಅವನನ್ನು ಆಹ್ವಾನಿಸುತ್ತಾ ರಣರಂಗದ ದಕ್ಷಿಣಭಾಗದಲ್ಲಿ ಹೋಗಿ ಸೇರಿದುದು (೧೧-೩೮). ಅರ್ಜುನನು ಯುಧಿಷ್ಠಿರನ ಅನುಮತಿಯನ್ನು ಪಡೆದು ಸಂಶಪ್ತಕರನ್ನು ಎದುರಿಸಿ ಹೋದುದು; ಹನ್ನೆರಡನೇ ದಿನದ ಯುದ್ಧಾರಂಭ (೩೯-೪೯).

07016001 ಸಂಜಯ ಉವಾಚ|

07016001a ತೇ ಸೇನೇ ಶಿಬಿರಂ ಗತ್ವಾ ನ್ಯವಿಶೇತಾಂ ವಿಶಾಂ ಪತೇ|

07016001c ಯಥಾಭಾಗಂ ಯಥಾನ್ಯಾಯಂ ಯಥಾಗುಲ್ಮಂ ಚ ಸರ್ವಶಃ||

ಸಂಜಯನು ಹೇಳಿದನು: “ವಿಶಾಂಪತೇ! ಆ ಸೇನೆಗಳು ಶಿಬಿರಕ್ಕೆ ಹೋಗಿ ಎಲ್ಲಾ  ಕಡೆ ಯಥಾಭಾಗವಾಗಿ, ಯಥಾನ್ಯಾಯವಾಗಿ ಮತ್ತು ಯಥಾಗುಲ್ಮವಾಗಿ ವಿಶ್ರಾಂತಿಪಡೆದರು.

07016002a ಕೃತ್ವಾವಹಾರಂ ಸೈನ್ಯಾನಾಂ ದ್ರೋಣಃ ಪರಮದುರ್ಮನಾಃ|

07016002c ದುರ್ಯೋಧನಮಭಿಪ್ರೇಕ್ಷ್ಯ ಸವ್ರೀಡಮಿದಮಬ್ರವೀತ್||

ಸೇನೆಗಳನ್ನು ಹಿಂದೆ ತೆಗೆದುಕೊಂಡ ದ್ರೋಣನು ಪರಮ ದುಃಖಿತನಾಗಿ ನಾಚಿಕೆಗೊಂಡು ದುರ್ಯೋಧನನನ್ನು ನೋಡಿ ಹೇಳಿದನು:

07016003a ಉಕ್ತಮೇತನ್ಮಯಾ ಪೂರ್ವಂ ನ ತಿಷ್ಠತಿ ಧನಂಜಯೇ|

07016003c ಶಕ್ಯೋ ಗ್ರಹೀತುಂ ಸಂಗ್ರಾಮೇ ದೇವೈರಪಿ ಯುಧಿಷ್ಠಿರಃ||

“ನಾನು ಮೊದಲೇ ನಿನಗೆ ಹೇಳಿದ್ದೆ. ಧನಂಜಯನು ಸಂಗ್ರಾಮದಲ್ಲಿ ನಿಂತಿರಲು ದೇವತೆಗಳೂ ಕೂಡ ಯುಧಿಷ್ಠಿರನನ್ನು ಸೆರೆಹಿಡಿಯಲು ಶಕ್ಯರಾಗಲಾರರು.

07016004a ಇತಿ ತದ್ವಃ ಪ್ರಯತತಾಂ ಕೃತಂ ಪಾರ್ಥೇನ ಸಮ್ಯುಗೇ|

07016004c ಮಾತಿಶಂಕೀರ್ವಚೋ ಮಹ್ಯಮಜೇಯೌ ಕೃಷ್ಣಪಾಂಡವೌ||

ನೀವೆಲ್ಲರೂ ಪ್ರಯತ್ನಿಸಿದರೂ ಸಂಯುಗದಲ್ಲಿ ಪಾರ್ಥನದೇ ಮೇಲುಗೈಯಾಗಿತ್ತು. ನನ್ನ ಮಾತನ್ನು ಶಂಕಿಸಬೇಡ. ಕೃಷ್ಣ-ಪಾಂಡವರಿಬ್ಬರೂ ಅಜೇಯರು.

07016005a ಅಪನೀತೇ ತು ಯೋಗೇನ ಕೇನ ಚಿಚ್ಚ್ವೇತವಾಹನೇ|

07016005c ತತ ಏಷ್ಯತಿ ತೇ ರಾಜನ್ವಶಮದ್ಯ ಯುಧಿಷ್ಠಿರಃ||

ರಾಜನ್! ಇಂದು ಏನಾದರೂ ಉಪಾಯದಿಂದ ಶ್ವೇತವಾಹನನ್ನು ಕರೆದೊಯ್ಯಿ. ಹಾಗಾದರೆ ಇಂದಿನ ದಿನ ಯುಧಿಷ್ಠಿರನ ಸೆರೆಯಾಗಬಲ್ಲದು.

07016006a ಕಶ್ಚಿದಾಹ್ವಯತಾಂ ಸಂಖ್ಯೇ ದೇಶಮನ್ಯಂ ಪ್ರಕರ್ಷತು|

07016006c ತಮಜಿತ್ವಾ ತು ಕೌಂತೇಯೋ ನ ನಿವರ್ತೇತ್ಕಥಂ ಚನ||

ಯಾರಾದರೂ ಅವನನ್ನು ಆಹ್ವಾನಿಸಿ ರಣರಂಗದ ಬೇರೆಕಡೆ ಸೆಳೆದುಕೊಂಡು ಹೋಗಲಿ. ಅವನನ್ನು ಗೆಲ್ಲದೇ ಎಂದೂ ಕೌಂತೇಯನು ಹಿಂದಿರುಗುವುದಿಲ್ಲ.

07016007a ಏತಸ್ಮಿನ್ನಂತರೇ ಶೂನ್ಯೇ ಧರ್ಮರಾಜಮಹಂ ನೃಪ|

07016007c ಗ್ರಹೀಷ್ಯಾಮಿ ಚಮೂಂ ಭಿತ್ತ್ವಾ ಧೃಷ್ಟದ್ಯುಮ್ನಸ್ಯ ಪಶ್ಯತಃ||

ನೃಪ! ಅವನಿಲ್ಲದಿರುವ ಈ ಸಮಯದಲ್ಲಿ ನಾನು ಸೇನೆಯನ್ನು ಭೇದಿಸಿ ಧೃಷ್ಟದ್ಯುಮ್ನನು ನೋಡುತ್ತಿರುವಾಗಲೇ ಧರ್ಮರಾಜನನ್ನು ಹಿಡಿಯುತ್ತೇನೆ.

07016008a ಅರ್ಜುನೇನ ವಿಹೀನಸ್ತು ಯದಿ ನೋತ್ಸೃಜತೇ ರಣಂ|

07016008c ಮಾಮುಪಾಯಾಂತಮಾಲೋಕ್ಯ ಗೃಹೀತಮಿತಿ ವಿದ್ಧಿ ತಂ||

ಅರ್ಜುನನಿಲ್ಲದೇ ಅವನು ರಣದಲ್ಲಿ ನನ್ನನ್ನು ಎದುರಿಸಿದನೆಂದರೆ ನಾನು ಅವನನ್ನು ಸೆರೆಹಿಡಿಯುತ್ತೇನೆ ಎಂದು ತಿಳಿದುಕೋ.

07016009a ಏವಂ ತೇ ಸಹಸಾ ರಾಜನ್ಧರ್ಮಪುತ್ರಂ ಯುಧಿಷ್ಠಿರಂ|

07016009c ಸಮಾನೇಷ್ಯಾಮಿ ಸಗಣಂ ವಶಮದ್ಯ ನ ಸಂಶಯಃ||

ರಾಜನ್! ಹೀಗೆ ನಾನು ಧರ್ಮಪುತ್ರ ಯುಧಿಷ್ಠಿರನನ್ನು ಅವನ ಗಣಗಳೊಂದಿಗೆ ಇಂದು ವಶಮಾಡಿಕೊಂಡು ನಿನ್ನೆದುರಿಗೆ ಕರೆದುಕೊಂಡು ಬರುತ್ತೇನೆ. ಅದರಲ್ಲಿ ಸಂಶಯ ಬೇಡ.

07016010a ಯದಿ ತಿಷ್ಠತಿ ಸಂಗ್ರಾಮೇ ಮುಹೂರ್ತಮಪಿ ಪಾಂಡವಃ|

07016010c ಅಥಾಪಯಾತಿ ಸಂಗ್ರಾಮಾದ್ವಿಜಯಾತ್ತದ್ವಿಶಿಷ್ಯತೇ||

ಆ ಪಾಂಡವನು ಸಂಗ್ರಾಮದಲ್ಲಿ ಒಂದು ಕ್ಷಣವಾದರೂ ನನ್ನ ಎದಿರು ಬಂದರೆ ನಾನು ಅವನನ್ನು ಸೆರೆಹಿಡಿದು ಕರೆತರುತ್ತೇನೆ. ಅದು ಯುದ್ಧದ್ದಲ್ಲಿ ವಿಜಯಕ್ಕಿಂತ ವಿಶೇಷವಾಗಿರುತ್ತದೆ.”

07016011a ದ್ರೋಣಸ್ಯ ತು ವಚಃ ಶ್ರುತ್ವಾ ತ್ರಿಗರ್ತಾಧಿಪತಿಸ್ತತಃ|

07016011c ಭ್ರಾತೃಭಿಃ ಸಹಿತೋ ರಾಜನ್ನಿದಂ ವಚನಮಬ್ರವೀತ್||

ದ್ರೋಣನ ವಚನವನ್ನು ಕೇಳಿ ತ್ರಿಗರ್ತಾಧಿಪತಿಯು ಸಹೋದರರೊಡಗೂಡಿ ಇದನ್ನು ಹೇಳಿದನು:

07016012a ವಯಂ ವಿನಿಕೃತಾ ರಾಜನ್ಸದಾ ಗಾಂಡೀವಧನ್ವನಾ|

07016012c ಅನಾಗಃಸ್ವಪಿ ಚಾಗಸ್ಕೃದಸ್ಮಾಸು ಭರತರ್ಷಭ||

“ರಾಜನ್! ಭರತರ್ಷಭ! ಗಂಡೀವಧನ್ವಿಯು ಸದಾ ನಮಗೆ ಕೆಟ್ಟದ್ದನ್ನೇ ಮಾಡಿದ್ದಾನೆ. ನಮ್ಮಲ್ಲಿ ತಪ್ಪಿಲ್ಲದಿದ್ದರೂ ಅವನು ನಮ್ಮ ಮೇಲೆ ಕೆಡುಕನ್ನೆಸಗಿದ್ದಾನೆ.

07016013a ತೇ ವಯಂ ಸ್ಮರಮಾಣಾಸ್ತಾನ್ವಿನಿಕಾರಾನ್ಪೃಥಗ್ವಿಧಾನ್|

07016013c ಕ್ರೋಧಾಗ್ನಿನಾ ದಹ್ಯಮಾನಾ ನ ಶೇಮಹಿ ಸದಾ ನಿಶಾಃ||

ಅವನು ನಮಗೆ ಮಾಡಿದ ಪ್ರತ್ಯೇಕ ವಿಧವಿಧದ ಕೆಡುಕುಗಳನ್ನು ನೆನಸಿಕೊಂಡು ಕ್ರೋಧಾಗ್ನಿಯಿಂದ ಸುಡುತ್ತಿರುವ ನಾವು ಸದಾ ರಾತ್ರಿ ನಿದ್ದೆಮಾಡುತ್ತಿಲ್ಲ.

07016014a ಸ ನೋ ದಿವ್ಯಾಸ್ತ್ರಸಂಪನ್ನಶ್ಚಕ್ಷುರ್ವಿಷಯಮಾಗತಃ|

07016014c ಕರ್ತಾರಃ ಸ್ಮ ವಯಂ ಸರ್ವಂ ಯಚ್ಚಿಕೀರ್ಷಾಮ ಹೃದ್ಗತಂ||

ಅವನು ದಿವ್ಯಾಸ್ತ್ರಸಂಪನ್ನನಾಗಿ ನಮ್ಮ ಕಣ್ಣಮುಂದೆ ಬರುತ್ತಿದ್ದಾನೆಂದರೆ ನಮ್ಮ ಹೃದಯದಲ್ಲಿರುವಂತೆ ಎಲ್ಲವನ್ನೂ ಮಾಡುತ್ತೇವೆ.

07016015a ಭವತಶ್ಚ ಪ್ರಿಯಂ ಯತ್ಸ್ಯಾದಸ್ಮಾಕಂ ಚ ಯಶಸ್ಕರಂ|

07016015c ವಯಮೇನಂ ಹನಿಷ್ಯಾಮೋ ನಿಕೃಷ್ಯಾಯೋಧನಾದ್ಬಹಿಃ||

ಅವನನ್ನು ಯುದ್ಧಕ್ಕೆ ಬೇರೆಕಡೆ ಕರೆದುಕೊಂಡು ಹೋಗಿ ನಮಗೆ ಯಶಸ್ಕರವಾಗುವಂತೆ ನಾವು ಅವನನ್ನು ಸಂಹರಿಸುತ್ತೇವೆ ಮತ್ತು ಇದರಿಂದ ನಿನಗೆ ಪ್ರಿಯವಾದುದನ್ನೂ ಮಾಡಿದಂತಾಗುತ್ತದೆ.

07016016a ಅದ್ಯಾಸ್ತ್ವನರ್ಜುನಾ ಭೂಮಿರತ್ರಿಗರ್ತಾಥ ವಾ ಪುನಃ|

07016016c ಸತ್ಯಂ ತೇ ಪ್ರತಿಜಾನೀಮೋ ನೈತನ್ಮಿಥ್ಯಾ ಭವಿಷ್ಯತಿ||

ಇಂದು ಭೂಮಿಯು ಅರ್ಜುನ ರಹಿತವಾಗಲಿ ಅಥವಾ ತ್ರಿಗರ್ತರು ಇಲ್ಲದಂತಾಗಲಿ. ಈ ಸತ್ಯ ಪ್ರತಿಜ್ಞೆಯನ್ನು ಮಾಡುತ್ತಿದ್ದೇವೆ. ಇದು ಸುಳ್ಳಾಗುವುದಿಲ್ಲ!”

07016017a ಏವಂ ಸತ್ಯರಥಶ್ಚೋಕ್ತ್ವಾ ಸತ್ಯಧರ್ಮಾ ಚ ಭಾರತ|

07016017c ಸತ್ಯವರ್ಮಾ ಚ ಸತ್ಯೇಷುಃ ಸತ್ಯಕರ್ಮಾ ತಥೈವ ಚ||

07016018a ಸಹಿತಾ ಭ್ರಾತರಃ ಪಂಚ ರಥಾನಾಮಯುತೇನ ಚ|

07016018c ನ್ಯವರ್ತಂತ ಮಹಾರಾಜ ಕೃತ್ವಾ ಶಪಥಮಾಹವೇ||

ಹೀಗೆ ಹೇಳಿ ಸತ್ಯರಥ, ಸತ್ಯಧರ್ಮ, ಸತ್ಯವರ್ಮ, ಸತ್ಯ ಮತ್ತು ಸತ್ಯಕರ್ಮರು ಶಪಥಮಾಡಿ, ಸಹೋದರರೊಂದಿಗೆ ಐವತ್ತು ಸಾವಿರ ರಥಸೇನೆಗಳೊಂದಿಗೆ ರಣರಂಗಕ್ಕೆ ಮರಳಿದರು.

07016019a ಮಾಲವಾಸ್ತುಂಡಿಕೇರಾಶ್ಚ ರಥಾನಾಮಯುತೈಸ್ತ್ರಿಭಿಃ|

07016019c ಸುಶರ್ಮಾ ಚ ನರವ್ಯಾಘ್ರಸ್ತ್ರಿಗರ್ತಃ ಪ್ರಸ್ಥಲಾಧಿಪಃ||

07016020a ಮಾಚೇಲ್ಲಕೈರ್ಲಲಿತ್ಥೈಶ್ಚ ಸಹಿತೋ ಮದ್ರಕೈರಪಿ|

07016020c ರಥಾನಾಮಯುತೇನೈವ ಸೋಽಶಪದ್ಭ್ರಾತೃಭಿಃ ಸಹ||

07016021a ನಾನಾಜನಪದೇಭ್ಯಶ್ಚ ರಥಾನಾಮಯುತಂ ಪುನಃ|

07016021c ಸಮುತ್ಥಿತಂ ವಿಶಿಷ್ಟಾನಾಂ ಸಂಶಪಾರ್ಥಮುಪಾಗತಂ||

ಮಾಲವ, ತುಂಡಿಕೇರರು ಮತ್ತು ನರವ್ಯಾಘ್ರ ಪ್ರಸ್ಥಲಲಾಧಿಪ ಸುಶರ್ಮರು ಮೂವತ್ತು ಸಾವಿರ ರಥಗಳೊಡನೆ, ಮಾಚೇಲ್ಲಕರು ಮತ್ತು ಲಲಿತರೊಡನೆ ಮದ್ರಕನು ತನ್ನ ತಮ್ಮಂದಿರು ಮತ್ತು ಹತ್ತು ಸಾವಿರ ರಥಗಳೊಂದಿಗೆ, ಪುನಃ ಹತ್ತು ಸಾವಿರ ರಥಗಳೊಂದಿಗೆ ನಾನಾ ಜನಪದೇಶ್ವರರು ಶಪಥವನ್ನು ತೆಗೆದುಕೊಳ್ಳಲು ಮುಂದೆ ಬಂದರು.

07016022a ತತೋ ಜ್ವಲನಮಾದಾಯ ಹುತ್ವಾ ಸರ್ವೇ ಪೃಥಕ್ ಪೃಥಕ್|

07016022c ಜಗೃಹುಃ ಕುಶಚೀರಾಣಿ ಚಿತ್ರಾಣಿ ಕವಚಾನಿ ಚ||

ಆಗ ಅವರು ಎಲ್ಲರೂ ಪ್ರತ್ಯೇಕ ಪ್ರತ್ಯೇಕವಾಗಿ ಅಗ್ನಿಯನ್ನು ತೆಗೆದುಕೊಂಡು ಅದರಲ್ಲಿ ಆಹುತಿಯನ್ನಿತ್ತು ಕುಶವಸ್ತ್ರಗಳನ್ನೂ ಬಣ್ಣಬಣ್ಣದ ಕವಚಗಳನ್ನೂ ಧರಿಸಿದರು.

07016023a ತೇ ಚ ಬದ್ಧತನುತ್ರಾಣಾ ಘೃತಾಕ್ತಾಃ ಕುಶಚೀರಿಣಃ|

07016023c ಮೌರ್ವೀಮೇಖಲಿನೋ ವೀರಾಃ ಸಹಸ್ರಶತದಕ್ಷಿಣಾಃ||

07016024a ಯಜ್ವಾನಃ ಪುತ್ರಿಣೋ ಲೋಕ್ಯಾಃ ಕೃತಕೃತ್ಯಾಸ್ತನುತ್ಯಜಃ|

07016024c ಯೋಕ್ಷ್ಯಮಾಣಾಸ್ತದಾತ್ಮಾನಂ ಯಶಸಾ ವಿಜಯೇನ ಚ||

07016025a ಬ್ರಹ್ಮಚರ್ಯಶ್ರುತಿಮುಖೈಃ ಕ್ರತುಭಿಶ್ಚಾಪ್ತದಕ್ಷಿಣೈಃ|

07016025c ಪ್ರಾಪ್ಯ ಲೋಕಾನ್ಸುಯುದ್ಧೇನ ಕ್ಷಿಪ್ರಮೇವ ಯಿಯಾಸವಃ||

07016026a ಬ್ರಾಹ್ಮಣಾಂಸ್ತರ್ಪಯಿತ್ವಾ ಚ ನಿಷ್ಕಾನ್ದತ್ತ್ವಾ ಪೃಥಕ್ ಪೃಥಕ್|

07016026c ಗಾಶ್ಚ ವಾಸಾಂಸಿ ಚ ಪುನಃ ಸಮಾಭಾಷ್ಯ ಪರಸ್ಪರಂ||

07016027a ಪ್ರಜ್ವಾಲ್ಯ ಕೃಷ್ಣವರ್ತ್ಮಾನಮುಪಾಗಮ್ಯ ರಣೇ ವ್ರತಂ|

07016027c ತಸ್ಮಿನ್ನಗ್ನೌ ತದಾ ಚಕ್ರುಃ ಪ್ರತಿಜ್ಞಾಂ ದೃಢನಿಶ್ಚಯಾಃ||

ದಕ್ಷಿಣೆಗಳನ್ನಿತ್ತು ನೂರಾರು ಸಾವಿರಾರು ಯಜ್ಞಗಳನ್ನು ನಡೆಸಿದ್ದ, ಪುತ್ರರನ್ನು ಪಡೆದಿದ್ದ, ಲೋಕದಲ್ಲಿ ಕೃತಕೃತ್ಯರಾದ (ಮಾಡಬೇಕಾದುದೆಲ್ಲವನ್ನೂ ಮಾಡಿ ಮುಗಿಸಿದ್ದ), ದೇಹವನ್ನು ತ್ಯಜಿಸಿದ್ದ, ತಮಗೆ ಯಶಸ್ಸು ಮತ್ತು ವಿಜಯಗಳನ್ನು ಬಯಸಿದ್ದ, ಬ್ರಹ್ಮಚರ್ಯ ಮತ್ತು ಶ್ರುತಿಮುಖೇನ ಆಪ್ತದಕ್ಷಿಣೆಗಳೊಂದಿಗೆ ಕ್ರತುಗಳನ್ನು ನಡೆಸಿದ್ದ, ಉತ್ತಮವಾಗಿ ಯುದ್ಧಮಾಡಿ ಬೇಗನೇ ಲೋಕಗಳನ್ನು ಪಡೆಯಲು ಬಯಸಿದ್ದ ಆ ವೀರರು ದೇಹಕ್ಕೆ ಕವಚಗಳನ್ನು ಕಟ್ಟಿಕೊಂಡು ತುಪ್ಪದಲ್ಲಿ ಸ್ನಾನಮಾಡಿ, ನಾರುಡೆಗಳನ್ನುಟ್ಟುಕೊಂಡು, ಧನುಸ್ಸಿನ ಶಿಂಜನಿಯನ್ನು ತಿವಿದು, ಬ್ರಾಹ್ಮಣರನ್ನು ತೃಪ್ತಿಗೊಳಿಸಿ ಪ್ರತ್ಯೇಕಪ್ರತ್ಯೇಕವಾಗಿ ದಕ್ಷಿಣೆಗಳನ್ನಿತ್ತು, ಗೋವು-ವಸ್ತ್ರಗಳನ್ನಿತ್ತು, ಪುನಃ ಪರಸ್ಪರರಲ್ಲಿ ಪ್ರೀತಿಯ ಮಾತುಗಳನ್ನಾಡಿಕೊಂಡು, ರಣದಲ್ಲಿ ವ್ರತರಾಗಿ ಹೋಗಿ ಅಗ್ನಿಯನ್ನು ಪ್ರಜ್ವಲಿಸಿ ಆ ಅಗ್ನಿಯಲ್ಲಿ ದೃಢನಿಶ್ಚಯರಾಗಿ ಪ್ರತಿಜ್ಞೆಗಳನ್ನು ಕೈಗೊಂಡರು.

07016028a ಶೃಣ್ವತಾಂ ಸರ್ವಭೂತಾನಾಮುಚ್ಚೈರ್ವಾಚಃ ಸ್ಮ ಮೇನಿರೇ|

07016028c ಧೃತ್ವಾ ಧನಂಜಯವಧೇ ಪ್ರತಿಜ್ಞಾಂ ಚಾಪಿ ಚಕ್ರಿರೇ||

ಸರ್ವಭೂತಗಳಿಗೂ ಕೇಳಿಸುವಂತೆ ಉಚ್ಛ ಸ್ವರದಲ್ಲಿ ಧನಂಜಯವಧೆಯ ಪ್ರತಿಜ್ಞೆಯನ್ನು ಮಾಡಿದರು:

07016029a ಯೇ ವೈ ಲೋಕಾಶ್ಚಾನೃತಾನಾಂ ಯೇ ಚೈವ ಬ್ರಹ್ಮಘಾತಿನಾಂ|

07016029c ಪಾನಪಸ್ಯ ಚ ಯೇ ಲೋಕಾ ಗುರುದಾರರತಸ್ಯ ಚ||

07016030a ಬ್ರಹ್ಮಸ್ವಹಾರಿಣಶ್ಚೈವ ರಾಜಪಿಂಡಾಪಹಾರಿಣಃ|

07016030c ಶರಣಾಗತಂ ಚ ತ್ಯಜತೋ ಯಾಚಮಾನಂ ತಥಾ ಘ್ನತಃ||

07016031a ಅಗಾರದಾಹಿನಾಂ ಯೇ ಚ ಯೇ ಚ ಗಾಂ ನಿಘ್ನತಾಮಪಿ|

07016031c ಅಪಚಾರಿಣಾಂ ಚ ಯೇ ಲೋಕಾ ಯೇ ಚ ಬ್ರಹ್ಮದ್ವಿಷಾಮಪಿ||

07016032a ಜಾಯಾಂ ಚ ಋತುಕಾಲೇ ವೈ ಯೇ ಮೋಹಾದಭಿಗಚ್ಚತಾಂ|

07016032c ಶ್ರಾದ್ಧಸಂಗತಿಕಾನಾಂ ಚ ಯೇ ಚಾಪ್ಯಾತ್ಮಾಪಹಾರಿಣಾಂ||

07016033a ನ್ಯಾಸಾಪಹಾರಿಣಾಂ ಯೇ ಚ ಶ್ರುತಂ ನಾಶಯತಾಂ ಚ ಯೇ|

07016033c ಕೋಪೇನ ಯುಧ್ಯಮಾನಾನಾಂ ಯೇ ಚ ನೀಚಾನುಸಾರಿಣಾಂ||

07016034a ನಾಸ್ತಿಕಾನಾಂ ಚ ಯೇ ಲೋಕಾ ಯೇಽಗ್ನಿಹೋರಾಪಿತೃತ್ಯಜಾಂ|

07016034c ತಾನಾಪ್ನುಯಾಮಹೇ ಲೋಕಾನ್ಯೇ ಚ ಪಾಪಕೃತಾಮಪಿ||

07016035a ಯದ್ಯಹತ್ವಾ ವಯಂ ಯುದ್ಧೇ ನಿವರ್ತೇಮ ಧನಂಜಯಂ|

07016035c ತೇನ ಚಾಭ್ಯರ್ದಿತಾಸ್ತ್ರಾಸಾದ್ಭವೇಮ ಹಿ ಪರಾಙ್ಮುಖಾಃ||

ಇಂದು ನಾವು ಯುದ್ಧದಲ್ಲಿ ಧನಂಜಯನನ್ನು ಕೊಲ್ಲದೇ ಹಿಂದಿರುಗಿದರೆ ಅಥವಾ ಅವನ ಅಸ್ತ್ರಗಳಿಂದ ಆರ್ದಿತರಾಗಿ ಭಯಪಟ್ಟುಕೊಂಡು ಪಲಾಯನಗೈದು ಬಂದರೆ ನಮಗೆ ಯಾವ ಲೋಕಗಳು ಸುಳ್ಳುಬುರುಕರಿಗೂ, ಬ್ರಹ್ಮಘಾತಿಗಳಿಗೂ ದೊರೆಯುತ್ತವೆಯೋ, ಮತ್ತು ಕುಡುಕರಿಗೂ, ಗುರುಪತ್ನಿಯೊಂದಿಗೆ ಭೋಗಿಸುವವರಿಗೂ ದೊರಕುವ ಲೋಕಗಳು, ಬ್ರಾಹ್ಮಣರ ಸಂಪತ್ತನ್ನು ಅಪಹರಿಸಿದವನಿಗೆ ಅಥವಾ ರಾಜನ ಪಿಂಡವನ್ನು ಅಪಹರಿಸಿದವನಿಗೆ ದೊರೆಯುವ ಲೋಕಗಳು, ಶರಣಾಗತನಾಗಿರುವವನನ್ನು ತ್ಯಜಿಸುವವನಿಗೆ ಮತ್ತು ಬೇಡಿಕೊಳ್ಳುತ್ತಿರುವವನನ್ನು ಕೊಂದವನಿಗೆ ದೊರೆಯುವ ಲೋಕಗಳು, ಮನೆಗಳಿಗೆ ಬೆಂಕಿಯಿಟ್ಟವನಿಗೆ ಮತ್ತು ಗೋವುಗಳನ್ನು ಕೊಲ್ಲುವವನಿಗೆ ದೊರೆಯುವ ಲೋಕಗಳು, ಅಪಚಾರಿಗಳಿಗೆ ಮತ್ತು ಬ್ರಾಹ್ಮಣದ್ವೇಶಿಗಳಿಗೆ ದೊರೆಯುವ ಲೋಕಗಳು, ಋತುಕಾಲದಲ್ಲಿರುವಾಗ ಮತ್ತು ಶ್ರಾದ್ಧದ ದಿನಗಳಲ್ಲಿ ಮೋಹದಿಂದ ಸಂಭೋಗವನ್ನು ಬಯಸುವವರಿಗೆ ದೊರೆಯುವ ಲೋಕಗಳು, ಆತ್ಮಹತ್ಯೆಮಾಡಿಕೊಳ್ಳುವವರಿಗೆ ಮತ್ತು ಇನ್ನೊಬ್ಬರು ನಂಬಿಕೆಯಿಂದ ಇಟ್ಟಿದ್ದ ಸಂಪತ್ತನ್ನು ಕದಿಯುವವರಿಗೆ ದೊರೆಯುವ ಲೋಕಗಳು, ವಿದ್ಯೆಯನ್ನು ನಾಶಮಾಡುವವರಿಗೆ, ನಪುಂಸಕರೊಂದಿಗೆ ಯುದ್ಧಮಾಡುವವರಿಗೆ ಮತ್ತು ನೀಚರನ್ನು ಅನುಸರಿಸುವವರಿಗೆ ದೊರೆಯುವ ಲೋಕಗಳು, ಮತ್ತು ಇನ್ನೂ ಇತರ ಪಾಪಕರ್ಮಿಗಳಿಗೆ ದೊರೆಯುವ ಲೋಕಗಳು ದೊರೆಯಲಿ.

07016036a ಯದಿ ತ್ವಸುಕರಂ ಲೋಕೇ ಕರ್ಮ ಕುರ್ಯಾಮ ಸಂಯುಗೇ|

07016036c ಇಷ್ಟಾನ್ಪುಣ್ಯಕೃತಾಂ ಲೋಕಾನ್ಪ್ರಾಪ್ನುಯಾಮ ನ ಸಂಶಯಃ||

ಒಂದುವೇಳೆ ಕಷ್ಟಕರವಾದ ಈ ಕರ್ಮಗಳನ್ನು ನಾವು ಸಂಯುಗದಲ್ಲಿ ಮಾಡಿದರೆ ಪುಣ್ಯಕೃತರಿಗೆ ಇಷ್ಟವಾದ ಲೋಕಗಳು ನಮಗೆ ದೊರೆಯುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.”

07016037a ಏವಮುಕ್ತ್ವಾ ತತೋ ರಾಜಂಸ್ತೇಽಭ್ಯವರ್ತಂತ ಸಂಯುಗೇ|

07016037c ಆಹ್ವಯಂತೋಽರ್ಜುನಂ ವೀರಾಃ ಪಿತೃಜುಷ್ಟಾಂ ದಿಶಂ ಪ್ರತಿ||

ರಾಜನ್! ಹೀಗೆ ಹೇಳಿ ಆ ವೀರರು ಅರ್ಜುನನನ್ನು ಆಹ್ವಾನಿಸುತ್ತಾ ರಣರಂಗದ ದಕ್ಷಿಣಭಾಗದಲ್ಲಿ ಹೋಗಿ ಸೇರಿದರು.

07016038a ಆಹೂತಸ್ತೈರ್ನರವ್ಯಾಘ್ರೈಃ ಪಾರ್ಥಃ ಪರಪುರಂಜಯಃ|

07016038c ಧರ್ಮರಾಜಮಿದಂ ವಾಕ್ಯಮಪದಾಂತರಮಬ್ರವೀತ್||

ಆ ನರವ್ಯಾಘ್ರರಿಂದ ಕೂಗಿ ಕರೆಯಲ್ಪಟ್ಟ ಪರಪುರಂಜಯ ಪಾರ್ಥನು ಧರ್ಮರಾಜನಿಗೆ ತಡಮಾಡದೇ ಈ ಮಾತುಗಳನ್ನಾಡಿದನು:

07016039a ಆಹೂತೋ ನ ನಿವರ್ತೇಯಮಿತಿ ಮೇ ವ್ರತಮಾಹಿತಂ|

07016039c ಸಂಶಪ್ತಕಾಶ್ಚ ಮಾಂ ರಾಜನ್ನಾಹ್ವಯಂತಿ ಪುನಃ ಪುನಃ||

“ಕರೆಯಲ್ಪಟ್ಟಾಗ ಹಿಂದೆಸರಿಯದೇ ಇರುವುದು ನಾನು ನಡೆಸಿಕೊಂಡು ಬಂದಿರುವ ವ್ರತ. ರಾಜನ್! ಸಂಶಪ್ತಕರು ನನ್ನನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದಾರೆ.

07016040a ಏಷ ಚ ಭ್ರಾತೃಭಿಃ ಸಾರ್ಧಂ ಸುಶರ್ಮಾಹ್ವಯತೇ ರಣೇ|

07016040c ವಧಾಯ ಸಗಣಸ್ಯಾಸ್ಯ ಮಾಮನುಜ್ಞಾತುಮರ್ಹಸಿ||

ಸಹೋದರರೊಡನೆ ಸುಶರ್ಮನೂ ಕೂಡ ರಣಕ್ಕೆ ನನ್ನನ್ನು ಕರೆಯುತ್ತಿದ್ದಾನೆ. ಗಣಗಳೊಂದಿಗೆ ಅವನನ್ನು ವಧಿಸಲು ಅಲ್ಲಿ ನನಗೆ ಹೋಗಬೇಕಾಗಿದೆ.

07016041a ನೈತಚ್ಚಕ್ನೋಮಿ ಸಂಸೋಢುಮಾಹ್ವಾನಂ ಪುರುಷರ್ಷಭ|

07016041c ಸತ್ಯಂ ತೇ ಪ್ರತಿಜಾನಾಮಿ ಹತಾನ್ವಿದ್ಧಿ ಪರಾನ್ಯುಧಿ||

ಪುರುಷರ್ಷಭ! ಆಹ್ವಾನಿಸುವವರನ್ನು ಬಿಟ್ಟುಬಿಡಲು ಶಕ್ಯನಾಗುತ್ತಿಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಈ ಶತ್ರುಗಳು ಯುದ್ಧದಲ್ಲಿ ಹತರಾದರೆಂದೇ ತಿಳಿ.”

07016042 ಯುಧಿಷ್ಠಿರ ಉವಾಚ|

07016042a ಶ್ರುತಮೇತತ್ತ್ವಯಾ ತಾತ ಯದ್ದ್ರೋಣಸ್ಯ ಚಿಕೀರ್ಷಿತಂ|

07016042c ಯಥಾ ತದನೃತಂ ತಸ್ಯ ಭವೇತ್ತದ್ವತ್ಸಮಾಚರ||

ಯುಧಿಷ್ಠಿರನು ಹೇಳಿದನು: “ಅಯ್ಯಾ! ದ್ರೋಣನು ಏನು ಮಾಡಲು ಬಯಸಿರುವನೆಂಬುದನ್ನು ನೀನು ಕೇಳಿದ್ದೇಯೆ. ಅವನ ಪ್ರಯತ್ನವು ಸುಳ್ಳಾಗುವ ರೀತಿಯಲ್ಲಿ ನಡೆದುಕೋ.

07016043a ದ್ರೋಣೋ ಹಿ ಬಲವಾನ್ ಶೂರಃ ಕೃತಾಸ್ತ್ರಶ್ಚ ಜಿತಶ್ರಮಃ|

07016043c ಪ್ರತಿಜ್ಞಾತಂ ಚ ತೇನೈತದ್ಗ್ರಹಣಂ ಮೇ ಮಹಾರಥ||

ದ್ರೋಣನು ಬಲಶಾಲಿ, ಶೂರ, ಅಸ್ತ್ರಗಳಲ್ಲಿ ಪಳಗಿದವನು ಮತ್ತು ಆಯಾಸವನ್ನು ಗೆದ್ದವನು. ಮಹಾರಥ! ಅವನೂ ಕೂಡ ನನ್ನ ಸೆರೆಯ ಪ್ರತಿಜ್ಞೆಯನ್ನು ಮಾಡಿದ್ದಾನೆ.”

07016044 ಅರ್ಜುನ ಉವಾಚ|

07016044a ಅಯಂ ವೈ ಸತ್ಯಜಿದ್ರಾಜನ್ನದ್ಯ ತೇ ರಕ್ಷಿತಾ ಯುಧಿ|

07016044c ಧ್ರಿಯಮಾಣೇ ಹಿ ಪಾಂಚಾಲ್ಯೇ ನಾಚಾರ್ಯಃ ಕಾಮಮಾಪ್ಸ್ಯತಿ||

ಅರ್ಜುನನು ಹೇಳಿದನು: “ರಾಜನ್! ಇಂದು ಸತ್ಯಜಿತುವು ಯುದ್ಧದಲ್ಲಿ ನಿನ್ನನ್ನು ರಕ್ಷಿಸುತ್ತಾನೆ. ಈ ಪಾಂಚಾಲ್ಯನು ಇರುವವರೆಗೆ ಆಚಾರ್ಯನು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳಲಾರನು.

07016045a ಹತೇ ತು ಪುರುಷವ್ಯಾಘ್ರೇ ರಣೇ ಸತ್ಯಜಿತಿ ಪ್ರಭೋ|

07016045c ಸರ್ವೈರಪಿ ಸಮೇತೈರ್ವಾ ನ ಸ್ಥಾತವ್ಯಂ ಕಥಂ ಚನ||

ಪ್ರಭೋ! ಆದರೆ ಈ ಪುರುಷವ್ಯಾಘ್ರ ಸತ್ಯಜಿತುವ ರಣದಲ್ಲಿ ಹತನಾದರೆ ನಮ್ಮೆಲ್ಲರ ಸೇನೆಗಳೊಂದಿಗಿದ್ದರೂ ನೀನು ಎಂದೂ ರಣದಲ್ಲಿ ನಿಲ್ಲ ಬಾರದು!””

07016046 ಸಂಜಯ ಉವಾಚ|

07016046a ಅನುಜ್ಞಾತಸ್ತತೋ ರಾಜ್ಞಾ ಪರಿಷ್ವಕ್ತಶ್ಚ ಫಲ್ಗುನಃ|

07016046c ಪ್ರೇಮ್ಣಾ ದೃಷ್ಟಶ್ಚ ಬಹುಧಾ ಆಶಿಷಾ ಚ ಪ್ರಯೋಜಿತಃ||

ಸಂಜಯನು ಹೇಳಿದನು: “ರಾಜನು ಅಪ್ಪಣೆಯನ್ನು ನೀಡಿ ಫಲ್ಗುನನನ್ನು ಬಿಗಿದಪ್ಪಿ ಪ್ರೇಮದಿಂದ ನೋಡಿ, ಅನೇಕ ಆಶೀರ್ವಾದಗಳನ್ನಿತ್ತು ಕಳುಹಿಸಿದನು.

07016047a ವಿಹಾಯೈನಂ ತತಃ ಪಾರ್ಥಸ್ತ್ರಿಗರ್ತಾನ್ಪ್ರತ್ಯಯಾದ್ಬಲೀ|

07016047c ಕ್ಷುಧಿತಃ ಕ್ಷುದ್ವಿಘಾತಾರ್ಥಂ ಸಿಂಹೋ ಮೃಗಗಣಾನಿವ||

ಆಗ ಬಲೀ ಪಾರ್ಥನು ಹಸಿದ ಸಿಂಹವು ತನ್ನ ಹಸಿವೆಯನ್ನು ನೀಗಿಸಿಕೊಳ್ಳಲು ಜಿಂಕೆಗಳ ಹಿಂಡಿನ ಕಡೆ ಹೋಗುವಂತೆ ತ್ರಿಗರ್ತರ ಕಡೆ ಹೊರಟನು.

07016048a ತತೋ ದೌರ್ಯೋಧನಂ ಸೈನ್ಯಂ ಮುದಾ ಪರಮಯಾ ಯುತಂ|

07016048c ಗತೇಽರ್ಜುನೇ ಭೃಶಂ ಕ್ರುದ್ಧಂ ಧರ್ಮರಾಜಸ್ಯ ನಿಗ್ರಹೇ||

ಅರ್ಜುನನು ಹೊರಟುಹೋಗಲು ದುರ್ಯೋಧನನ ಸೇನೆಯು ಧರ್ಮರಾಜನನ್ನು ಸೆರೆಹಿಡಿಯಲು ತುಂಬಾ ಕಾತರಗೊಂಡಿತು.

07016049a ತತೋಽನ್ಯೋನ್ಯೇನ ತೇ ಸೇನೇ ಸಮಾಜಗ್ಮತುರೋಜಸಾ|

07016049c ಗಂಗಾಸರಯ್ವೋರ್ವೇಗೇನ ಪ್ರಾವೃಷೀವೋಲ್ಬಣೋದಕೇ||

ಆಗ ಎರಡೂ ಸೇನೆಗಳು ಮಳೆಗಾಲದ ಪ್ರವಾಹದಲ್ಲಿ ಗಂಗೆ ಮತ್ತು ಸರಯೂ ನದಿಗಳು ವೇಗದಿಂದ ಅನ್ಯೋನ್ಯರನ್ನು ಸೇರುವಂತೆ ಓಜಸ್ಸಿನಿಂದ ಕೂಡಿ ಹೋರಾಡಿದವು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಧನಂಜಯಯಾನೇ ಷೋಡಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಧನಂಜಯಯಾನ ಎನ್ನುವ ಹದಿನಾರನೇ ಅಧ್ಯಾಯವು.

Image result for indian motifs against white background

Comments are closed.