Drona Parva: Chapter 153

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೫೩

ಸಂಕುಲ ಯುದ್ಧ (೧-೧೧). ಅಲಾಯುಧ-ಘಟೋತ್ಕಚರ ಯುದ್ಧ; ಅಲಾಯುಧನ ವಧೆ (೧೨-೪೦).

07153001 ಸಂಜಯ ಉವಾಚ|

07153001a ಸಂಪ್ರೇಕ್ಷ್ಯ ಸಮರೇ ಭೀಮಂ ರಕ್ಷಸಾ ಗ್ರಸ್ತಮಂತಿಕಾತ್|

07153001c ವಾಸುದೇವೋಽಬ್ರವೀದ್ವಾಕ್ಯಂ ಘಟೋತ್ಕಚಮಿದಂ ತದಾ||

ಸಂಜಯನು ಹೇಳಿದನು: “ಸಮರದಲ್ಲಿ ಹತ್ತಿರದಲ್ಲಿಯೇ ರಾಕ್ಷಸನ ಹಿಡಿತಕ್ಕೆ ಸಿಲುಕಿದ್ದ ಭೀಮನನ್ನು ತೋರಿಸುತ್ತಾ ವಾಸುದೇವನು ಘಟೋತ್ಕಚನಿಗೆ ಈ ಮಾತನ್ನಾಡಿದನು:

07153002a ಪಶ್ಯ ಭೀಮಂ ಮಹಾಬಾಹೋ ರಕ್ಷಸಾ ಗ್ರಸ್ತಮಂತಿಕಾತ್|

07153002c ಪಶ್ಯತಾಂ ಸರ್ವಸೈನ್ಯಾನಾಂ ತವ ಚೈವ ಮಹಾದ್ಯುತೇ||

“ಮಹಾಬಾಹೋ! ಮಹಾದ್ಯುತೇ! ನೀನೂ ಮತ್ತು ಸರ್ವ ಸೈನ್ಯಗಳೂ ನೋಡುತ್ತಿರುವಂತೆ ಹತ್ತಿರದಲ್ಲಿಯೇ ರಾಕ್ಷಸನ ಹಿಡಿತಕ್ಕೆ ಸಿಲುಕಿರುವ ಭೀಮನನ್ನು ನೋಡು!

07153003a ಸ ಕರ್ಣಂ ತ್ವಂ ಸಮುತ್ಸೃಜ್ಯ ರಾಕ್ಷಸೇಂದ್ರಮಲಾಯುಧಂ|

07153003c ಜಹಿ ಕ್ಷಿಪ್ರಂ ಮಹಾಬಾಹೋ ಪಶ್ಚಾತ್ಕರ್ಣಂ ವಧಿಷ್ಯಸಿ||

ಮಹಾಬಾಹೋ! ನೀನು ಕರ್ಣನನ್ನು ಬಿಟ್ಟು ರಾಕ್ಷಸೇಂದ್ರ ಅಲಾಯುಧನನ್ನು ಬೇಗನೇ ಕೊಲ್ಲು! ಅನಂತರ ಕರ್ಣನನ್ನು ವಧಿಸಬಲ್ಲೆ!”

07153004a ಸ ವಾರ್ಷ್ಣೇಯವಚಃ ಶ್ರುತ್ವಾ ಕರ್ಣಮುತ್ಸೃಜ್ಯ ವೀರ್ಯವಾನ್|

07153004c ಯುಯುಧೇ ರಾಕ್ಷಸೇಂದ್ರೇಣ ಬಕಭ್ರಾತ್ರಾ ಘಟೋತ್ಕಚಃ|

07153004e ತಯೋಃ ಸುತುಮುಲಂ ಯುದ್ಧಂ ಬಭೂವ ನಿಶಿ ರಕ್ಷಸೋಃ||

ಆ ವೀರ್ಯವಾನ ಘಟೋತ್ಕಚನು ವಾರ್ಷ್ಣೇಯನ ಮಾತನ್ನು ಕೇಳಿ ಕರ್ಣನನ್ನು ಬಿಟ್ಟು ಬಕನ ಸಹೋದರ ರಾಕ್ಷಸೇಂದ್ರನೊಡನೆ ಯುದ್ಧಮಾಡತೊಡಗಿದನು. ಆ ರಾತ್ರಿ ಆ ಇಬ್ಬರು ರಾಕ್ಷಸರ ನಡುವೆ ತುಮುಲ ಯುದ್ಧವು ನಡೆಯಿತು.

07153005a ಅಲಾಯುಧಸ್ಯ ಯೋಧಾಂಸ್ತು ರಾಕ್ಷಸಾನ್ಭೀಮದರ್ಶನಾನ್|

07153005c ವೇಗೇನಾಪತತಃ ಶೂರಾನ್ಪ್ರಗೃಹೀತಶರಾಸನಾನ್||

07153006a ಆತ್ತಾಯುಧಃ ಸುಸಂಕ್ರುದ್ಧೋ ಯುಯುಧಾನೋ ಮಹಾರಥಃ|

07153006c ನಕುಲಃ ಸಹದೇವಶ್ಚ ಚಿಚ್ಚಿದುರ್ನಿಶಿತೈಃ ಶರೈಃ||

ಭಯಂಕರರಾಗಿ ಕಾಣುತ್ತಿದ್ದ, ಧನುಸ್ಸುಗಳನ್ನು ಕೈಯಲ್ಲಿ ಹಿಡಿದು ವೇಗದಿಂದ ಆಕ್ರಮಣಿಸುತ್ತಿದ್ದ  ಅಲಾಯುಧನ ರಾಕ್ಷಸ ಶೂರ ಯೋಧರನ್ನು ಕ್ರುದ್ಧನಾಗಿ ಆಯುಧವನ್ನು ಎತ್ತಿ ಹಿಡಿದಿದ್ದ ಮಹಾರಥ ಯುಯುಧಾನ ಮತ್ತು ನಕುಲ-ಸಹದೇವರು ನಿಶಿತ ಶರಗಳಿಂದ ತುಂಡರಿಸಿದರು.

07153007a ಸರ್ವಾಂಶ್ಚ ಸಮರೇ ರಾಜನ್ಕಿರೀಟೀ ಕ್ಷತ್ರಿಯರ್ಷಭಾನ್|

07153007c ಪರಿಚಿಕ್ಷೇಪ ಬೀಭತ್ಸುಃ ಸರ್ವತಃ ಪ್ರಕ್ಷಿಪಂ ಶರಾನ್||

ರಾಜನ್! ಕಿರೀಟಿ ಬೀಭತ್ಸುವು ಸಮರದಲ್ಲಿ ಎಲ್ಲ ಕಡೆ ಶರಗಳನ್ನು ಎರಚುತ್ತಾ ಎಲ್ಲ ಕ್ಷತ್ರಿಯರ್ಷಭರನ್ನೂ ಪಲಾಯನಗೊಳಿಸಿದನು.

07153008a ಕರ್ಣಶ್ಚ ಸಮರೇ ರಾಜನ್ವ್ಯದ್ರಾವಯತ ಪಾರ್ಥಿವಾನ್|

07153008c ಧೃಷ್ಟದ್ಯುಮ್ನಶಿಖಂಡ್ಯಾದೀನ್ಪಾಂಚಾಲಾನಾಂ ಮಹಾರಥಾನ್||

ರಾಜನ್! ಕರ್ಣನೂ ಕೂಡ ಸಮರದಲ್ಲಿ ಧೃಷ್ಟದ್ಯುಮ್ನ, ಶಿಖಂಡಿಗಳೇ ಮೊದಲಾದ ಪಾಂಚಾಲ ಮಹಾರಥರನ್ನೂ ಪಾರ್ಥಿವರನ್ನೂ ಪಲಾಯನಗೊಳಿಸಿದನು.

07153009a ತಾನ್ವಧ್ಯಮಾನಾನ್ದೃಷ್ಟ್ವಾ ತು ಭೀಮೋ ಭೀಮಪರಾಕ್ರಮಃ|

07153009c ಅಭ್ಯಯಾತ್ತ್ವರಿತಃ ಕರ್ಣಂ ವಿಶಿಖಾನ್ವಿಕಿರನ್ರಣೇ||

ಅವರು ಹಾಗೆ ವಧಿಸಲ್ಪಡುತ್ತಿರುವುದನ್ನು ನೋಡಿದ ಭೀಮಪರಾಕ್ರಮಿ ಭೀಮನು ತ್ವರೆಮಾಡಿ ಬಂದು ರಣದಲ್ಲಿ ಕರ್ಣನನ್ನು ವಿಶಿಖಗಳಿಂದ ಮುಚ್ಚಿದನು.

07153010a ತತಸ್ತೇಽಪ್ಯಾಯಯುರ್ಹತ್ವಾ ರಾಕ್ಷಸಾನ್ಯತ್ರ ಸೂತಜಃ|

07153010c ನಕುಲಃ ಸಹದೇವಶ್ಚ ಸಾತ್ಯಕಿಶ್ಚ ಮಹಾರಥಃ|

07153010e ತೇ ಕರ್ಣಂ ಯೋಧಯಾಮಾಸುಃ ಪಾಂಚಾಲಾ ದ್ರೋಣಮೇವ ಚ||

ಆಗ ರಾಕ್ಷಸರನ್ನು ಸಂಹರಿಸಿ ನಕುಲ-ಸಹದೇವರೂ ಮಹಾರಥ ಸಾತ್ಯಕಿಯೂ ಸೂತಜನಿದ್ದಲ್ಲಿಗೆ ಬಂದರು. ಅವರು ಕರ್ಣನೊಡನೆಯೂ ಪಾಂಚಾಲರು ದ್ರೋಣನೊಡನೆಯೂ ಯುದ್ಧಮಾಡತೊಡಗಿದರು.

07153011a ಅಲಾಯುಧಸ್ತು ಸಂಕ್ರುದ್ಧೋ ಘಟೋತ್ಕಚಮರಿಂದಮಂ|

07153011c ಪರಿಘೇಣಾತಿಕಾಯೇನ ತಾಡಯಾಮಾಸ ಮೂರ್ಧನಿ||

ಸಂಕ್ರುದ್ಧ ಅಲಾಯುಧನಾದರೋ ಅತಿದೊಡ್ಡ ಪರಿಘದಿಂದ ಅರಿಂದಮ ಘಟೋತ್ಕಚನ ನೆತ್ತಿಯ ಮೇಲೆ ಹೊಡೆಯತೊಡಗಿದನು.

07153012a ಸ ತು ತೇನ ಪ್ರಹಾರೇಣ ಭೈಮಸೇನಿರ್ಮಹಾಬಲಃ|

07153012c ಈಷನ್ಮೂರ್ಚಾನ್ವಿತೋಽಽತ್ಮಾನಂ ಸಂಸ್ತಂಭಯತ ವೀರ್ಯವಾನ್||

ಅವನ ಆ ಪ್ರಹಾರದಿಂದ ಮಹಾಬಲ ಭೈಮಸೇನಿಯು ಕ್ಷಣಕಾಲ ಮೂರ್ಚಿತನಾದರೂ ಆ ವೀರ್ಯವಾನನು ಸ್ವಲ್ಪಹೊತ್ತಿನಲ್ಲಿಯೇ ಚೇತರಿಸಿಕೊಂಡನು.

07153013a ತತೋ ದೀಪ್ತಾಗ್ನಿಸಂಕಾಶಾಂ ಶತಘಂಟಾಮಲಂಕೃತಾಂ|

07153013c ಚಿಕ್ಷೇಪ ಸಮರೇ ತಸ್ಮೈ ಗದಾಂ ಕಾಂಚನಭೂಷಣಾಂ||

ಆಗ ಪ್ರಜ್ವಲಿಸುತ್ತಿರುವ ಅಗ್ನಿಗೆ ಸಮಾನ ನೂರುಘಂಟೆಗಳಿಂದ ಅಲಂಕೃತ ಕಾಂಚನ ಭೂಷಣ ಗದೆಯನ್ನು ಸಮರದಲ್ಲಿ ಅವನ ಮೇಲೆ ಎಸೆದನು.

07153014a ಸಾ ಹಯಾನ್ಸಾರಥಿಂ ಚೈವ ರಥಂ ಚಾಸ್ಯ ಮಹಾಸ್ವನಾ|

07153014c ಚೂರ್ಣಯಾಮಾಸ ವೇಗೇನ ವಿಸೃಷ್ಟಾ ಭೀಮಕರ್ಮಣಾ||

ಭೀಮಕರ್ಮಿಯಿಂದ ವೇಗವಾಗಿ ಎಸೆಯಲ್ಪಟ್ಟ ಆ ಗದೆಯು ಮಹಾಧ್ವನಿಯೊಂದಿಗೆ ಕುದುರೆಗಳನ್ನೂ, ಸಾರಥಿಯನ್ನೂ ಮತ್ತು ರಥವನ್ನೂ ಪುಡಿಪುಡಿಮಾಡಿತು.

07153015a ಸ ಭಗ್ನಹಯಚಕ್ರಾಕ್ಷೋ ವಿಶೀರ್ಣಧ್ವಜಕೂಬರಃ|

07153015c ಉತ್ಪಪಾತ ರಥಾತ್ತೂರ್ಣಂ ಮಾಯಾಮಾಸ್ಥಾಯ ರಾಕ್ಷಸೀಂ||

ಕುದುರೆ, ರಥಚಕ್ರ, ರಥದ ಅಚ್ಚುಗಳು ಮುರಿದುಹೋಗಲು, ಧ್ವಜ ಮತ್ತು ಮೂಕಿಗಳು ಚೂರು ಚೂರಾಗಿ ಬೀಳಲು ಅಲಾಯುಧನು ರಾಕ್ಷಸೀ ಮಾಯೆಯನ್ನು ಬಳಸಿ ತಕ್ಷಣವೇ ರಥದಿಂದ ಮೇಲೇರಿದನು.

07153016a ಸ ಸಮಾಸ್ಥಾಯ ಮಾಯಾಂ ತು ವವರ್ಷ ರುಧಿರಂ ಬಹು|

07153016c ವಿದ್ಯುದ್ವಿಭ್ರಾಜಿತಂ ಚಾಸೀತ್ತಿಮಿರಾಭ್ರಾಕುಲಂ ನಭಃ||

ಅವನು ಮಾಯೆಯನ್ನು ಬಳಸಿ ಬಹಳ ರಕ್ತವನ್ನು ಸುರಿಸಿದನು. ಆ ರಾತ್ರಿಯ ಆಕಾಶವು ಮಿಂಚಿನಿಂದ ಬೆಳಗುತ್ತಿತ್ತು.

07153017a ತತೋ ವಜ್ರನಿಪಾತಾಶ್ಚ ಸಾಶನಿಸ್ತನಯಿತ್ನವಃ|

07153017c ಮಹಾಂಶ್ಚಟಚಟಾಶಬ್ದಸ್ತತ್ರಾಸೀದ್ಧಿ ಮಹಾಹವೇ||

ಆಗ ಗುಡುಗು ಮಿಂಚುಗಳೂ, ಸಿಡಿಲುಗಳೂ ಬಿದ್ದವು. ಆ ಮಹಾಯುದ್ಧದಲ್ಲಿ ಜೋರಾಗಿ ಚಟ ಚಟಾ ಶಬ್ಧವು ಕೇಳಿಬರುತ್ತಿತ್ತು.

07153018a ತಾಂ ಪ್ರೇಕ್ಷ್ಯ ವಿಹಿತಾಂ ಮಾಯಾಂ ರಾಕ್ಷಸೋ ರಾಕ್ಷಸೇನ ತು|

07153018c ಊರ್ಧ್ವಮುತ್ಪತ್ಯ ಹೈಡಿಂಬಸ್ತಾಂ ಮಾಯಾಂ ಮಾಯಯಾವಧೀತ್||

ರಾಕ್ಷಸನಿಂದ ನಿರ್ಮಿಸಲ್ಪಟ್ಟಿದ್ದ ಆ ರಾಕ್ಷಸೀ ಮಾಯೆಯನ್ನು ನೋಡಿ ಹೈಡಿಂಬನು ಮೇಲೆ ಹಾರಿ ತನ್ನದೇ ಮಾಯೆಯಿಂದ ಆ ಮಾಯೆಯನ್ನು ನಾಶಗೊಳಿಸಿದನು.

07153019a ಸೋಽಭಿವೀಕ್ಷ್ಯ ಹತಾಂ ಮಾಯಾಂ ಮಾಯಾವೀ ಮಾಯಯೈವ ಹಿ|

07153019c ಅಶ್ಮವರ್ಷಂ ಸುತುಮುಲಂ ವಿಸಸರ್ಜ ಘಟೋತ್ಕಚೇ||

ತನ್ನ ಮಾಯೆಯನ್ನು ಮಾಯೆಯಿಂದಲೇ ನಾಶಗೊಳಿಸಿದುದನ್ನು ನೋಡಿ ಮಾಯಾವೀ ಅಲಾಯುಧನು ಘಟೋತ್ಕಚನ ಮೇಲೆ ಕಲ್ಲಿನ ತುಮುಲ ಮಳೆಯನ್ನು ಸುರಿಸಿದನು.

07153020a ಅಶ್ಮವರ್ಷಂ ಸ ತದ್ಘೋರಂ ಶರವರ್ಷೇಣ ವೀರ್ಯವಾನ್|

07153020c ದಿಶೋ ವಿಧ್ವಂಸಯಾಮಾಸ ತದದ್ಭುತಮಿವಾಭವತ್||

ವೀರ್ಯವಾನ್ ಘಟೋತ್ಕಚನು ಆ ಘೋರ ಕಲ್ಲಿನ ಮಳೆಯನ್ನು ದಿಕ್ಕುಗಳಲ್ಲಿ ಶರವರ್ಷವನ್ನು ಸುರಿಸಿ ವಿಧ್ವಂಸಗೊಳಿಸಿದನು. ಅದೊಂದು ಅದ್ಭುತವಾಗಿತ್ತು.

07153021a ತತೋ ನಾನಾಪ್ರಹರಣೈರನ್ಯೋನ್ಯಮಭಿವರ್ಷತಾಂ|

07153021c ಆಯಸೈಃ ಪರಿಘೈಃ ಶೂಲೈರ್ಗದಾಮುಸಲಮುದ್ಗರೈಃ||

07153022a ಪಿನಾಕೈಃ ಕರವಾಲೈಶ್ಚ ತೋಮರಪ್ರಾಸಕಂಪನೈಃ|

07153022c ನಾರಾಚೈರ್ನಿಶಿತೈರ್ಭಲ್ಲೈಃ ಶರೈಶ್ಚಕ್ರೈಃ ಪರಶ್ವಧೈಃ||

07153023a ಅಯೋಗುಡೈರ್ಭಿಂಡಿಪಾಲೈರ್ಗೋಶೀರ್ಷೋಲೂಖಲೈರಪಿ|

07153023c ಉತ್ಪಾಟ್ಯ ಚ ಮಹಾಶಾಖೈರ್ವಿವಿಧೈರ್ಜಗತೀರುಹೈಃ||

07153024a ಶಮೀಪೀಲುಕರೀರೈಶ್ಚ ಶಮ್ಯಾಕೈಶ್ಚೈವ ಭಾರತ|

07153024c ಇಂಗುದೈರ್ಬದರೀಭಿಶ್ಚ ಕೋವಿದಾರೈಶ್ಚ ಪುಷ್ಪಿತೈಃ||

07153025a ಪಲಾಶೈರರಿಮೇದೈಶ್ಚ ಪ್ಲಕ್ಷನ್ಯಗ್ರೋಧಪಿಪ್ಪಲೈಃ|

07153025c ಮಹದ್ಭಿಃ ಸಮರೇ ತಸ್ಮಿನ್ನನ್ಯೋನ್ಯಮಭಿಜಘ್ನತುಃ||

ಭಾರತ! ಆಗ ಅವರಿಬ್ಬರು ಅನ್ಯೋನ್ಯರ ಮೇಲೆ ನಾನಾ ಪ್ರಹರಣಗಳನ್ನು - ಕಬ್ಬಿಣದ ಹಾರೆ, ಪರಿಘ, ಶೂಲ, ಗದೆ, ಮುಸಲ, ಮುದ್ಗರ, ಪಿನಾಕ, ಕರವಾಲ, ತೋಮರ, ಪ್ರಾಸಕಂಪನ, ನಾರಾಚ, ಹರಿತ ಭಲ್ಲ, ಬಾಣ, ಚಕ್ರ, ಪರಶು, ಅಯೋಗುಡ, ಭಿಂಡಿಪಾಲ, ಗೋಶೀಷ, ಉಲೂಖ, ಉತ್ಪಾಟ ಸುರಿಸುತ್ತಾ, ಮತ್ತು ಮಹಾಶಾಖೆಗಳಿಂದ ಕೂಡಿದ್ದ ಶಮೀ, ಪೀಲು, ಕದಂಬ, ಸಂಪಿಗೆ, ಇಂಗುದ, ಬದರೀ, ಸುಪುಷ್ಪಿತ ಪಲಾಶ, ಅರಿಮೇದ, ಹಲಸು, ನ್ಯಗ್ರೋದ, ಪಿಪ್ಪಲ ಮೊದಲಾದ ವೃಕ್ಷಗಳಿಂದ ಅನ್ಯೋನ್ಯರನ್ನು ಹೊಡೆದು ಸೆಣೆಸಾಡಿದರು.

07153026a ವಿವಿಧೈಃ ಪರ್ವತಾಗ್ರೈಶ್ಚ ನಾನಾಧಾತುಭಿರಾಚಿತೈಃ|

07153026c ತೇಷಾಂ ಶಬ್ದೋ ಮಹಾನಾಸೀದ್ವಜ್ರಾಣಾಂ ಭಿದ್ಯತಾಮಿವ||

ನಾನಾವಿಧ ಗರಿಕಾದಿ ಧಾತುಗಳಿಂದ ಸಮಾಕುಲ ಪರ್ವತ ಶಿಖರಗಳನ್ನೇ ಕಿತ್ತು ಪರಸ್ಪರರೊಡನೆ ಯುದ್ಧಮಾಡಿದರು. ಅವುಗಳ ಶಬ್ಧವು ವಜ್ರಗಳನ್ನು ಒಡೆಯುತ್ತಿರುವರೋ ಎನ್ನುವಂತೆ ಮಹತ್ತರವಾಗಿತ್ತು.

07153027a ಯುದ್ಧಂ ತದಭವದ್ಘೋರಂ ಭೈಮ್ಯಲಾಯುಧಯೋರ್ನೃಪ|

07153027c ಹರೀಂದ್ರಯೋರ್ಯಥಾ ರಾಜನ್ವಾಲಿಸುಗ್ರೀವಯೋಃ ಪುರಾ||

ನೃಪ! ರಾಜನ್! ಅವರಿಬ್ಬರ ನಡುವಿನ ಯುದ್ಧವು ಹಿಂದೆ ಕಪೀಂದ್ರ ಸುಗ್ರೀವ-ವಾಲಿಗಳ ನಡುವೆ ನಡೆದಂತೆ ಘೋರವಾಗಿದ್ದಿತು.

07153028a ತೌ ಯುದ್ಧ್ವಾ ವಿವಿಧೈರ್ಘೋರೈರಾಯುಧೈರ್ವಿಶಿಖೈಸ್ತಥಾ|

07153028c ಪ್ರಗೃಹ್ಯ ನಿಶಿತೌ ಖಡ್ಗಾವನ್ಯೋನ್ಯಮಭಿಜಘ್ನತುಃ||

ವಿವಿಧ ಘೋರ ಆಯುಧಗಳಿಂದ ಮತ್ತು ವಿಶಿಖಗಳಿಂದ ಯುದ್ಧಮಾಡುತ್ತಿದ್ದ ಅವರಿಬ್ಬರು ಹರಿತ ಖಡ್ಗಗಳನ್ನು ಹಿಡಿದು ಅನ್ಯೋನ್ಯರನ್ನು ಹೊಡೆಯತೊಡಗಿದರು.

07153029a ತಾವನ್ಯೋನ್ಯಮಭಿದ್ರುತ್ಯ ಕೇಶೇಷು ಸುಮಹಾಬಲೌ|

07153029c ಭುಜಾಭ್ಯಾಂ ಪರ್ಯಗೃಹ್ಣೀತಾಂ ಮಹಾಕಾಯೌ ಮಹಾಬಲೌ||

ಅವರಿಬ್ಬರು ಮಹಾಬಲರೂ ಅನ್ಯೋನ್ಯರ ತಲೆಗೂದಲನ್ನು ಹಿಡಿದು ಎಳೆಯುತ್ತಿದ್ದರು, ಅವರಿಬ್ಬರು ಮಹಾಕಾಯ ಮಹಾಬಲರೂ ಭುಜಗಳನ್ನು ಹಿಡಿದು ಸೆಣೆಸಾಡಿದರು.

07153030a ತೌ ಭಿನ್ನಗಾತ್ರೌ ಪ್ರಸ್ವೇದಂ ಸುಸ್ರುವಾತೇ ಜನಾಧಿಪ|

07153030c ರುಧಿರಂ ಚ ಮಹಾಕಾಯಾವಭಿವೃಷ್ಟಾವಿವಾಚಲೌ||

ಜನಾಧಿಪ! ಜೋರಾಗಿ ಮಳೆಸುರಿಸುವ ಮಹಾ ಮೋಡಗಳಂತೆ ಅ ಇಬ್ಬರು ಮಹಾಕಾಯಗಳಿಂದ ಬೆವರು ಮತ್ತು ರಕ್ತವು ಸುರಿಯುತ್ತಿತ್ತು.

07153031a ಅಥಾಭಿಪತ್ಯ ವೇಗೇನ ಸಮುದ್ಭ್ರಾಮ್ಯ ಚ ರಾಕ್ಷಸಂ|

07153031c ಬಲೇನಾಕ್ಷಿಪ್ಯ ಹೈಡಿಂಬಶ್ಚಕರ್ತಾಸ್ಯ ಶಿರೋ ಮಹತ್||

ಆಗ ಹೈಡಿಂಬನು ವೇಗದಿಂದ ಆ ರಾಕ್ಷಸನನ್ನು ಜೋರಾಗಿ ತಿರುಗಿಸಿ ಬಲವನ್ನುಪಯೋಗಿಸಿ ಹೊಡೆದು ಅವನ ಮಹಾ ಶಿರವನ್ನು ಕತ್ತರಿಸಿದನು.

07153032a ಸೋಽಪಹೃತ್ಯ ಶಿರಸ್ತಸ್ಯ ಕುಂಡಲಾಭ್ಯಾಂ ವಿಭೂಷಿತಂ|

07153032c ತದಾ ಸುತುಮುಲಂ ನಾದಂ ನನಾದ ಸುಮಹಾಬಲಃ||

ಕುಂಡಲಗಳಿಂದ ವಿಭೂಷಿತ ಅವನ ಆ ಶಿರವನ್ನು ತುಂಡರಿಸಿ ಮಹಾಬಲ ಘಟೋತ್ಕಚನು ತುಮುಲ ಕೂಗನ್ನು ಕೂಗಿದನು.

07153033a ಹತಂ ದೃಷ್ಟ್ವಾ ಮಹಾಕಾಯಂ ಬಕಜ್ಞಾತಿಮರಿಂದಮಂ|

07153033c ಪಾಂಚಾಲಾಃ ಪಾಂಡವಾಶ್ಚೈವ ಸಿಂಹನಾದಾನ್ವಿನೇದಿರೇ||

ಆ ಮಹಾಕಾಯ, ಬಕನ ದಾಯಾದಿ, ಅರಿಂದಮ ಅಲಾಯುಧನು ಹತನಾದುದನ್ನು ನೋಡಿ ಪಾಂಚಾಲರು ಮತ್ತು ಪಾಂಡವರು ಸಿಂಹನಾದಗೈದು ವಿನೋದಿಸಿದರು.

07153034a ತತೋ ಭೇರೀಸಹಸ್ರಾಣಿ ಶಂಖಾನಾಮಯುತಾನಿ ಚ|

07153034c ಅವಾದಯನ್ಪಾಂಡವೇಯಾಸ್ತಸ್ಮಿನ್ರಕ್ಷಸಿ ಪಾತಿತೇ||

ಆ ರಾಕ್ಷಸನು ಬೀಳಲು ಪಾಂಡವೇಯರು ಸಹಸ್ರಾರು ಭೇರಿಗಳನ್ನೂ, ಶಂಖಗಳನ್ನೂ ಮೊಳಗಿಸಿದರು.

07153035a ಅತೀವ ಸಾ ನಿಶಾ ತೇಷಾಂ ಬಭೂವ ವಿಜಯಾವಹಾ|

07153035c ವಿದ್ಯೋತಮಾನಾ ವಿಬಭೌ ಸಮಂತಾದ್ದೀಪಮಾಲಿನೀ||

ಎಲ್ಲ ಕಡೆಗಳಲ್ಲಿ ದೀಪಗಳ ಸಾಲಿನಿಂದ ಬೆಳಗುತ್ತಿದ್ದ ಆ ರಾತ್ರಿಯು ಪಾಂಡವರ ವಿಜಯದಿಂದ ಇನ್ನೂ ವಿಶೇಷವಾಗಿ ಪ್ರಕಾಶವಾಗಿದ್ದಿತು.

07153036a ಅಲಾಯುಧಸ್ಯ ತು ಶಿರೋ ಭೈಮಸೇನಿರ್ಮಹಾಬಲಃ|

07153036c ದುರ್ಯೋಧನಸ್ಯ ಪ್ರಮುಖೇ ಚಿಕ್ಷೇಪ ಗತಚೇತನಂ||

ಗತಚೇತನ ಅಲಾಯುಧನ ಆ ಶಿರವನ್ನಾದರೋ ಮಹಾಬಲ ಭೈಮಸೇನಿಯು ದುರ್ಯೋಧನನ ಎದಿರು ಎಸೆದನು.

07153037a ಅಥ ದುರ್ಯೋಧನೋ ರಾಜಾ ದೃಷ್ಟ್ವಾ ಹತಮಲಾಯುಧಂ|

07153037c ಬಭೂವ ಪರಮೋದ್ವಿಗ್ನಃ ಸಹ ಸೈನ್ಯೇನ ಭಾರತ||

ಭಾರತ! ಅಲಾಯುಧನು ಹತನಾದುದನ್ನು ನೋಡಿ ರಾಜಾ ದುರ್ಯೋಧನನು ಸೈನ್ಯಗಳೊಂದಿಗೆ ಬಹಳ ಉದ್ವಿಗ್ನನಾದನು.

07153038a ತೇನ ಹ್ಯಸ್ಯ ಪ್ರತಿಜ್ಞಾತಂ ಭೀಮಸೇನಮಹಂ ಯುಧಿ|

07153038c ಹಂತೇತಿ ಸ್ವಯಮಾಗಮ್ಯ ಸ್ಮರತಾ ವೈರಮುತ್ತಮಂ||

ಹಿಂದಿನ ಕಡುವೈರವನ್ನು ಸ್ಮರಿಸಿಕೊಂಡು ಯುದ್ಧದಲ್ಲಿ ನಾನೇ ಭೀಮಸೇನನನ್ನು ಕೊಲ್ಲುತ್ತೇನೆ ಎಂದು ಅಲಾಯುಧನು ಸ್ವಯಂ ತಾನೇ ಬಂದು ಪ್ರತಿಜ್ಞೆ ಮಾಡಿದ್ದನು.

07153039a ಧ್ರುವಂ ಸ ತೇನ ಹಂತವ್ಯ ಇತ್ಯಮನ್ಯತ ಪಾರ್ಥಿವಃ|

07153039c ಜೀವಿತಂ ಚಿರಕಾಲಾಯ ಭ್ರಾತೄಣಾಂ ಚಾಪ್ಯಮನ್ಯತ||

ಪಾರ್ಥಿವ ದುರ್ಯೋಧನನು ಭೀಮಸೇನನು ಅಲಾಯುಧನಿಂದ ನಿಶ್ಚಯವಾಗಿಯೂ ಹತನಾಗುತ್ತಾನೆಂದೂ ತಾನು ಮತ್ತು ತನ್ನ ಸಹೋದರರು ಚಿರಕಾಲ ಜೀವಿಸಿರಬಹುದೆಂದೂ ತಿಳಿದುಕೊಂಡಿದ್ದನು.

07153040a ಸ ತಂ ದೃಷ್ಟ್ವಾ ವಿನಿಹತಂ ಭೀಮಸೇನಾತ್ಮಜೇನ ವೈ|

07153040c ಪ್ರತಿಜ್ಞಾಂ ಭೀಮಸೇನಸ್ಯ ಪೂರ್ಣಾಮೇವಾಭ್ಯಮನ್ಯತ||

ಆದರೆ ಭೀಮಸೇನನ ಮಗನಿಂದ ಅಲಾಯುಧನು ಹತನಾದುದನ್ನು ನೋಡಿ ಅವನು ಭೀಮಸೇನನ ಪ್ರತಿಜ್ಞೆಯು ಪೂರ್ಣಗೊಳ್ಳುವುದು ಎಂದು ಅಂದುಕೊಂಡನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಲಾಯುಧವಧೇ ತ್ರಿಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಲಾಯುಧವಧ ಎನ್ನುವ ನೂರಾಐವತ್ಮೂರನೇ ಅಧ್ಯಾಯವು.

Related image

Comments are closed.