Drona Parva: Chapter 151

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೫೧

ಬಕನ ಬಂಧು ಅಲಾಯುಧನು ಪಾಂಡವರನ್ನು ತಾನು ಕೊಲ್ಲುತ್ತೇನೆ ಎಂದು ದುರ್ಯೋಧನನಿಗೆ ಬಂದು ಹೇಳುವುದು (೧-೧೧). ಅಲಾಯುಧನ ವರ್ಣನೆ (೧೨-೨೧).

07151001 ಸಂಜಯ ಉವಾಚ|

07151001a ತಸ್ಮಿಂಸ್ತಥಾ ವರ್ತಮಾನೇ ಕರ್ಣರಾಕ್ಷಸಯೋರ್ಮೃಧೇ|

07151001c ಅಲಾಯುಧೋ ರಾಕ್ಷಸೇಂದ್ರೋ ವೀರ್ಯವಾನಭ್ಯವರ್ತತ||

ಸಂಜಯನು ಹೇಳಿದನು: “ಹೀಗೆ ಅಲ್ಲಿ ಕರ್ಣ ಮತ್ತು ರಾಕ್ಷಸರ ಮಧ್ಯೆ ಯುದ್ಧವು ನಡೆಯುತ್ತಿರುವಾಗ ವೀರ್ಯವಾನ್ ರಾಕ್ಷಸೇಂದ್ರ ಅಲಾಯುಧನು ಆಗಮಿಸಿದನು.

07151002a ಮಹತ್ಯಾ ಸೇನಯಾ ಯುಕ್ತಃ ಸುಯೋಧನಮುಪಾಗಮತ್|

07151002c ರಾಕ್ಷಸಾನಾಂ ವಿರೂಪಾಣಾಂ ಸಹಸ್ರೈಃ ಪರಿವಾರಿತಃ|

07151002e ನಾನಾರೂಪಧರೈರ್ವೀರೈಃ ಪೂರ್ವವೈರಮನುಸ್ಮರನ್||

ಹಿಂದಿನ ವೈರವನ್ನು ಸ್ಮರಿಸಿಕೊಂಡು ಅವನು ಸಹಸ್ರಾರು ನಾನಾರೂಪಧರ, ವೀರ ವಿರೂಪ ರಾಕ್ಷಸರಿಂದ ಸುತ್ತುವರೆಯಲ್ಪಟ್ಟು ಸುಯೋಧನನ ಬಳಿಗೆ ಬಂದನು.

07151003a ತಸ್ಯ ಜ್ಞಾತಿರ್ಹಿ ವಿಕ್ರಾಂತೋ ಬ್ರಾಹ್ಮಣಾದೋ ಬಕೋ ಹತಃ|

07151003c ಕಿರ್ಮೀರಶ್ಚ ಮಹಾತೇಜಾ ಹಿಡಿಂಬಶ್ಚ ಸಖಾ ತಥಾ||

ಬ್ರಾಹ್ಮಣಭಕ್ಷಕ ವಿಕ್ರಾಂತ ಬಕನು ಅಲಾಯುಧನ ಬಂಧುವಾಗಿದ್ದನು. ಹತರಾದ ಮಹಾತೇಜಸ್ವಿ ಕಿರ್ಮೀರ ಹಿಡಿಂಬರೂ ಕೂಡ ಅವನ ಸಖರಾಗಿದ್ದರು.

07151004a ಸ ದೀರ್ಘಕಾಲಾಧ್ಯುಷಿತಂ ಪೂರ್ವವೈರಮನುಸ್ಮರನ್|

07151004c ವಿಜ್ಞಾಯೈತನ್ನಿಶಾಯುದ್ಧಂ ಜಿಘಾಂಸುರ್ಭೀಮಮಾಹವೇ||

ಬಹಳ ಹಿಂದಿನಿಂದಲೂ ಮನಸ್ಸಿನಲ್ಲಡಗಿದ್ದ ವೈರವನ್ನು ಸ್ಮರಣೆಗೆ ತಂದುಕೊಂಡು ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಅಲಾಯುಧನು ಅಲ್ಲಿಗೆ ಬಂದನು.

07151005a ಸ ಮತ್ತ ಇವ ಮಾತಂಗಃ ಸಂಕ್ರುದ್ಧ ಇವ ಚೋರಗಃ|

07151005c ದುರ್ಯೋಧನಮಿದಂ ವಾಕ್ಯಮಬ್ರವೀದ್ಯುದ್ಧಲಾಲಸಃ||

ಮದಿಸಿದ ಸಲಗದಂತಿದ್ದ ಮತ್ತು ಸಂಕ್ರುದ್ಧ ಸರ್ಪದಂತಿದ್ದ ಆ ಯುದ್ಧಲಾಲಸನು ದುರ್ಯೋಧನನಿಗೆ ಈ ಮಾತನ್ನಾಡಿದನು:

07151006a ವಿದಿತಂ ತೇ ಮಹಾರಾಜ ಯಥಾ ಭೀಮೇನ ರಾಕ್ಷಸಾಃ|

07151006c ಹಿಡಿಂಬಬಕಕಿರ್ಮೀರಾ ನಿಹತಾ ಮಮ ಬಾಂಧವಾಃ||

“ಮಹಾರಾಜ! ಹೇಗೆ ನನ್ನ ಬಾಂಧವ ಹಿಡಿಂಬ, ಬಕ ಮತ್ತು ಕಿರ್ಮೀರ ರಾಕ್ಷಸರು ಭೀಮನಿಂದ ಹತರಾದರೆನ್ನುವುದು ನಿನಗೆ ತಿಳಿದೇ ಇದೆ.

07151007a ಪರಾಮರ್ಶಶ್ಚ ಕನ್ಯಾಯಾ ಹಿಡಿಂಬಾಯಾಃ ಕೃತಃ ಪುರಾ|

07151007c ಕಿಮನ್ಯದ್ರಾಕ್ಷಸಾನನ್ಯಾನಸ್ಮಾಂಶ್ಚ ಪರಿಭೂಯ ಹ||

ಅಷ್ಟುಮಾತ್ರವಲ್ಲದೇ ಹಿಂದೆ ಅನ್ಯ ನಮ್ಮಂಥಹ ರಾಕ್ಷಸರನ್ನು ಬಿಟ್ಟು ಕನ್ಯೆ ಹಿಡಿಂಬೆಯು ಭೀಮನನ್ನು ವರಿಸಿದಳು!

07151008a ತಮಹಂ ಸಗಣಂ ರಾಜನ್ಸವಾಜಿರಥಕುಂಜರಂ|

07151008c ಹೈಡಿಂಬಂ ಚ ಸಹಾಮಾತ್ಯಂ ಹಂತುಮಭ್ಯಾಗತಃ ಸ್ವಯಂ||

ಅವನ್ನೆಲ್ಲ ಪರಾಮರ್ಶಿಸಿ ರಾಜನ್! ವಾಜಿ-ರಥ-ಕುಂಜರ ಗಣಗಳೊಂದಿಗೆ ಮತ್ತು ಅಮಾತ್ಯರೊಂದಿಗೆ ಹೈಡಿಂಬನನ್ನು ಸಂಹರಿಸಲು ಸ್ವಯಂ ನಾನೇ ಬಂದಿದ್ದೇನೆ.

07151009a ಅದ್ಯ ಕುಂತೀಸುತಾನ್ಸರ್ವಾನ್ವಾಸುದೇವಪುರೋಗಮಾನ್|

07151009c ಹತ್ವಾ ಸಂಭಕ್ಷಯಿಷ್ಯಾಮಿ ಸರ್ವೈರನುಚರೈಃ ಸಹ|

07151009e ನಿವಾರಯ ಬಲಂ ಸರ್ವಂ ವಯಂ ಯೋತ್ಸ್ಯಾಮ ಪಾಂಡವಾನ್||

ಇಂದು ವಾಸುದೇಪ್ರಮುಖರಾದ ಎಲ್ಲ ಕುಂತೀಸುತರನ್ನೂ ಅವರ ಅನುಚರರೊಂದಿಗೆ ಸಂಹರಿಸಿ ಭಕ್ಷಿಸುತ್ತೇನೆ. ಎಲ್ಲ ಸೇನೆಗಳನ್ನೂ ನಿಲ್ಲಿಸು. ನಾವು ಪಾಂಡವರೊಂದಿಗೆ ಹೋರಾಡುತ್ತೇವೆ!”

07151010a ತಸ್ಯ ತದ್ವಚನಂ ಶ್ರುತ್ವಾ ಹೃಷ್ಟೋ ದುರ್ಯೋಧನಸ್ತದಾ|

07151010c ಪ್ರತಿಪೂಜ್ಯಾಬ್ರವೀದ್ವಾಕ್ಯಂ ಭ್ರಾತೃಭಿಃ ಪರಿವಾರಿತಃ||

ಅವನ ಆ ಮಾತನ್ನು ಕೇಳಿ ಸಂತೋಷಗೊಂಡ ದುರ್ಯೋಧನನು ಸಹೋದರರಿಂದ ಸುತ್ತುವರೆಯಲ್ಪಟ್ಟು ಅವನನ್ನು ಅಭಿನಂದಿಸಿ ಈ ಮಾತನ್ನಾಡಿದನು:

07151011a ತ್ವಾಂ ಪುರಸ್ಕೃತ್ಯ ಸಗಣಂ ವಯಂ ಯೋತ್ಸ್ಯಾಮಹೇ ಪರಾನ್|

07151011c ನ ಹಿ ವೈರಾಂತಮನಸಃ ಸ್ಥಾಸ್ಯಂತಿ ಮಮ ಸೈನಿಕಾಃ||

“ಸಸೈನ್ಯನಾದ ನಿನ್ನನ್ನು ಮುಂದೆಮಾಡಿಕೊಂಡು ನಾವೂ ಕೂಡ ಶತ್ರುಗಳೊಂದಿಗೆ ಯುದ್ಧಮಾಡುತ್ತೇವೆ. ಏಕೆಂದರೆ ವೈರವನ್ನು ಮುಗಿಸುವ ಸಲುವಾಗಿರುವ ನನ್ನ ಸೈನಿಕರು ಸುಮ್ಮನೆ ಕುಳಿತಿರಲಾರರು!”

07151012a ಏವಮಸ್ತ್ವಿತಿ ರಾಜಾನಮುಕ್ತ್ವಾ ರಾಕ್ಷಸಪುಂಗವಃ|

07151012c ಅಭ್ಯಯಾತ್ತ್ವರಿತೋ ಭೀಮಂ ಸಹಿತಃ ಪುರುಷಾಶನೈಃ||

ಹಾಗೆಯೇ ಆಗಲೆಂದು ರಾಜನಿಗೆ ಹೇಳಿ ರಾಕ್ಷಸಪುಂಗವನು ತ್ವರೆಮಾಡಿ ಭಯಂಕರ ನರಭಕ್ಷಕರೊಡನೆ ಧಾವಿಸಿದನು.

07151013a ದೀಪ್ಯಮಾನೇನ ವಪುಷಾ ರಥೇನಾದಿತ್ಯವರ್ಚಸಾ|

07151013c ತಾದೃಶೇನೈವ ರಾಜೇಂದ್ರ ಯಾದೃಶೇನ ಘಟೋತ್ಕಚಃ||

ರಾಜೇಂದ್ರ! ದೇದೀಪ್ಯಮಾನ ಶರೀರಕಾಂತಿಯಿಂದ ಕೂಡಿದ್ದ ಅಲಾಯುಧನು ಘಟೋತ್ಕಚನಂತೆಯೇ ಆದಿತ್ಯವರ್ಚಸ್ಸಿನ ರಥದಮೇಲೆ ಕುಳಿತಿದ್ದನು.

07151014a ತಸ್ಯಾಪ್ಯತುಲನಿರ್ಘೋಷೋ ಬಹುತೋರಣಚಿತ್ರಿತಃ|

07151014c ಋಕ್ಷಚರ್ಮಾವನದ್ಧಾಂಗೋ ನಲ್ವಮಾತ್ರೋ ಮಹಾರಥಃ||

ಅಲಾಯುಧನ ರಥವೂ ಬಹುತೋರಣಗಳಿಂದ ಅಲಂಕೃತವಾಗಿತ್ತು. ಕರಡಿಯ ಚರ್ಮವನ್ನು ಹೊದಿಸಲಾಗಿತ್ತು. ಅವನ ಮಹಾ ರಥದ ಸುತ್ತಳತೆಯೂ ನಾಲ್ಕು ನೂರು ಮೊಳದಷ್ಟಿದ್ದಿತು.

07151015a ತಸ್ಯಾಪಿ ತುರಗಾಃ ಶೀಘ್ರಾ ಹಸ್ತಿಕಾಯಾಃ ಖರಸ್ವನಾಃ|

07151015c ಶತಂ ಯುಕ್ತಾ ಮಹಾಕಾಯಾ ಮಾಂಸಶೋಣಿತಭೋಜನಾಃ||

ಅದಕ್ಕೆ ಕಟ್ಟಿದ್ದ ಕುದುರೆಗಳೂ ಕೂಡ ಆನೆಗಳಂತೆ ಮಹಾದೇಹವುಳ್ಳದ್ದಾಗಿದ್ದವು, ಶೀಘ್ರವಾಗಿದ್ದವು ಮತ್ತು ಕತ್ತೆಗಳಂತೆ ಕಿರುಚಿತ್ತಿದ್ದವು. ಕಟ್ಟಿದ್ದ ಅಂತಹ ನೂರು ಮಹಾಕಾಯ ಕುದುರೆಗಳಿಗೆ ರಕ್ತಮಾಂಸಗಳೇ ಭೋಜನವಾಗಿದ್ದವು.

07151016a ತಸ್ಯಾಪಿ ರಥನಿರ್ಘೋಷೋ ಮಹಾಮೇಘರವೋಪಮಃ|

07151016c ತಸ್ಯಾಪಿ ಸುಮಹಚ್ಚಾಪಂ ದೃಢಜ್ಯಂ ಬಲವತ್ತರಂ||

ಅವನ ರಥನಿರ್ಘೋಷವೂ ಮಹಾಮೇಘಗಳ ಗರ್ಜನೆಯಂತಿದ್ದಿತು. ಅವನ ಮಹಾಚಾಪವೂ ದೃಢಮೌರ್ವಿಯಿಂದ ಕೂಡಿದ್ದು ಬಲವತ್ತರವಾಗಿದ್ದಿತು.

07151017a ತಸ್ಯಾಪ್ಯಕ್ಷಸಮಾ ಬಾಣಾ ರುಕ್ಮಪುಂಖಾಃ ಶಿಲಾಶಿತಾಃ|

07151017c ಸೋಽಪಿ ವೀರೋ ಮಹಾಬಾಹುರ್ಯಥೈವ ಸ ಘಟೋತ್ಕಚಃ||

ಅವನ ಬಾಣಗಳು ಕೂಡ ರಥದ ಅಚ್ಚುಮರದಷ್ಟು ದಪ್ಪನಾಗಿದ್ದವು, ರುಕ್ಮಪುಂಖಗಳಾಗಿದ್ದವು. ಶಿಲಾಶಿತಗಳಾಗಿದ್ದವು. ಘಟೋತ್ಕಚನಂತೆ ಅವನೂ ಕೂಡ ಮಹಾಬಾಹು ವೀರನಾಗಿದ್ದನು.

07151018a ತಸ್ಯಾಪಿ ಗೋಮಾಯುಬಡಾಭಿಗುಪ್ತೋ

         ಬಭೂವ ಕೇತುರ್ಜ್ವಲನಾರ್ಕತುಲ್ಯಃ|

07151018c ಸ ಚಾಪಿ ರೂಪೇಣ ಘಟೋತ್ಕಚಸ್ಯ

         ಶ್ರೀಮತ್ತಮೋ ವ್ಯಾಕುಲದೀಪಿತಾಸ್ಯಃ||

ಗುಳ್ಳೆನರಿಗಳ ಸಮೂಹಗಳಿಂದ ರಕ್ಷಿಸಲ್ಪಟ್ಟಿದ್ದ ಅವನ ಧ್ವಜವೂ ಕೂಡ ಜ್ವಲನದಲ್ಲಿ ಸೂರ್ಯನ ಸಮಾನವಾಗಿದ್ದಿತು. ಅವನ ರೂಪವೂ ಸಹ ಘಟೋತ್ಕಚನ ರೂಪದಂತೆ ಅತ್ಯಂತ ಕಾಂತಿಯುಕ್ತವಾಗಿತ್ತು. ಮುಖವು ವ್ಯಾಕುಲಗೊಂಡಿತ್ತು.

07151019a ದೀಪ್ತಾಂಗದೋ ದೀಪ್ತಕಿರೀಟಮಾಲೀ

         ಬದ್ಧಸ್ರಗುಷ್ಣೀಷನಿಬದ್ಧಖಡ್ಗಃ|

07151019c ಗದೀ ಭುಶುಂಡೀ ಮುಸಲೀ ಹಲೀ ಚ

         ಶರಾಸನೀ ವಾರಣತುಲ್ಯವರ್ಷ್ಮಾ||

ಥಳಥಳಿಸುವ ಅಂಗದಗಳನ್ನು ಧರಿಸಿದ್ದ, ಬೆಳಗುತ್ತಿರುವ ಕಿರೀಟ ಮಾಲೆಗಳನ್ನು ಧರಿಸಿದ್ದ, ತಲೆಯ ರುಮಾಲಿನಲ್ಲಿಯೇ ಕತ್ತಿಯನ್ನು ಕಟ್ಟಿಕೊಂಡಿದ್ದ ಅವನು ಗದೆ-ಭುಷಂಡಿ-ಮುಸಲ-ಹಲ-ಬತ್ತಳಿಕೆ ಮತ್ತು ಆನೆಗಳ ಗಾತ್ರದ ಕಲ್ಲುಬಂಡೆಗಳನ್ನು ಹೊಂದಿದ್ದನು.

07151020a ರಥೇನ ತೇನಾನಲವರ್ಚಸಾ ಚ

         ವಿದ್ರಾವಯನ್ಪಾಂಡವವಾಹಿನೀಂ ತಾಂ|

07151020c ರರಾಜ ಸಂಖ್ಯೇ ಪರಿವರ್ತಮಾನೋ

         ವಿದ್ಯುನ್ಮಾಲೀ ಮೇಘ ಇವಾಂತರಿಕ್ಷೇ||

ಅಗ್ನಿಸಮಾನ ತೇಜಸ್ಸಿನಿಂದ ಬೆಳಗುತ್ತಿದ್ದ ರಥದಲ್ಲಿ ಕುಳಿತು ಅವನು ಪಾಂಡವ ಸೇನೆಯನ್ನು ಓಡಿಸುತ್ತಾ ರಣದಲ್ಲಿ ಸಂಚರಿಸುತ್ತಿರಲು ಅಂತರಿಕ್ಷದಲ್ಲಿ ಮಿಂಚಿನಿಂದ ಕೂಡಿದ ಮೇಘದಂತೆ ಪ್ರಕಾಶಿಸಿದನು.

07151021a ತೇ ಚಾಪಿ ಸರ್ವೇ ಪ್ರವರಾ ನರೇಂದ್ರಾ

         ಮಹಾಬಲಾ ವರ್ಮಿಣಶ್ಚರ್ಮಿಣಶ್ಚ|

07151021c ಹರ್ಷಾನ್ವಿತಾ ಯುಯುಧುಸ್ತತ್ರ ರಾಜನ್

         ಸಮಂತತಃ ಪಾಂಡವಯೋಧವೀರಾಃ||

ರಾಜನ್! ಆ ಎಲ್ಲ ನರೇಂದ್ರಪ್ರಮುಖರೂ ಪಾಂಡವ ಯೋಧ ವೀರರೂ ಕೂಡ ಮಹಾಬಲದಿಂದ, ಕವಚ-ಗುರಾಣಿಗಳೊಡನೆ ಹರ್ಷಾನ್ವಿತರಾಗಿ ಅವನನ್ನು ಸುತ್ತುವರೆದು ಯುದ್ಧಮಾಡತೊಡಗಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಲಾಯುಧಯುದ್ಧೇ ಏಕಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಲಾಯುಧಯುದ್ಧ ಎನ್ನುವ ನೂರಾಐವತ್ತೊಂದನೇ ಅಧ್ಯಾಯವು.

Related image

Comments are closed.