Drona Parva: Chapter 15

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

೧೫

ಸಂಕುಲ ಯುದ್ದ (೧-೧೮). ದ್ರೋಣನು ಕುಮಾರ, ಯುಗಂಧರ, ಸಿಂಹಸೇನ ಮತ್ತು ವ್ಯಾಘ್ರದತ್ತರನ್ನು ಸಂಹರಿಸಿ, ಪಾಂಡವ ಮಹಾರಥರನ್ನು ಸೋಲಿಸಿ, ಯುಧಿಷ್ಠಿರನನ್ನು ಆಕ್ರಮಣಿಸಿದುದು (೧೯-೪೦). ಅರ್ಜುನನು ಕೂಡಲೇ ಧಾವಿಸಿ ದ್ರೋಣನನ್ನು ಆಕ್ರಮಣಿಸಿದುದು (೪೧-೪೭). ಹನ್ನೊಂದನೇ ದಿನದ ಯುದ್ಧ ಸಮಾಪ್ತಿ (೪೮-೫೨).

07015001 ಸಂಜಯ ಉವಾಚ|

07015001a ತದ್ಬಲಂ ಸುಮಹದ್ದೀರ್ಣಂ ತ್ವದೀಯಂ ಪ್ರೇಕ್ಷ್ಯ ವೀರ್ಯವಾನ್|

07015001c ದಧಾರೈಕೋ ರಣೇ ಪಾಂಡೂನ್ವೃಷಸೇನೋಽಸ್ತ್ರಮಾಯಯಾ||

ಸಂಜಯನು ಹೇಳಿದನು: “ನಿನ್ನ ಆ ಮಹಾ ಸೇನೆಯು ಚೆಲ್ಲಾಪಿಲ್ಲಿಯಾಗಿ ರಣದಿಂದ ಪಾಂಡವರಿಂದ ಓಡಿಹೋಗುತ್ತಿದ್ದುದನ್ನು ನೋಡಿ ವೀರ್ಯವಾನ್ ವೃಷಸೇನನೊಬ್ಬನೇ ತನ್ನ ಅಸ್ತ್ರಮಾಯೆಯಿಂದ ಅವರನ್ನು ತಡೆದನು.

07015002a ಶರಾ ದಶ ದಿಶೋ ಮುಕ್ತಾ ವೃಷಸೇನೇನ ಮಾರಿಷ|

07015002c ವಿಚೇರುಸ್ತೇ ವಿನಿರ್ಭಿದ್ಯ ನರವಾಜಿರಥದ್ವಿಪಾನ್||

ಮಾರಿಷ! ವೃಷಸೇನನು ಬಿಟ್ಟ ಬಾಣಗಳು ಮನುಷ್ಯರು-ಕುದುರೆಗಳು-ರಥಗಳು ಮತ್ತು ಆನೆಗಳನ್ನು ಭೇದಿಸಿ ಹತ್ತು ದಿಕ್ಕುಗಳಲ್ಲಿಯೂ ಸಂಚರಿಸಿದವು.

07015003a ತಸ್ಯ ದೀಪ್ತಾ ಮಹಾಬಾಣಾ ವಿನಿಶ್ಚೇರುಃ ಸಹಸ್ರಶಃ|

07015003c ಭಾನೋರಿವ ಮಹಾಬಾಹೋ ಗ್ರೀಷ್ಮಕಾಲೇ ಮರೀಚಯಃ||

ಮಹಾಬಾಹೋ! ಉರಿಯುತ್ತಿದ್ದ ಅವನ ಸಹಸ್ರಾರು ಮಹಾಬಾಣಗಳು ಗ್ರೀಷ್ಮಕಾಲದ ಆಕಾಶದಲ್ಲಿ ನಕ್ಷತ್ರಗಳು ಮಿಂಚುವಂತೆ ಮಿನುಗಿದವು.

07015004a ತೇನಾರ್ದಿತಾ ಮಹಾರಾಜ ರಥಿನಃ ಸಾದಿನಸ್ತಥಾ|

07015004c ನಿಪೇತುರುರ್ವ್ಯಾಂ ಸಹಸಾ ವಾತನುನ್ನಾ ಇವ ದ್ರುಮಾಃ||

ಮಹಾರಾಜ! ಅವನಿಂದ ಆರ್ದಿತರಾದ ರಥಿಗಳು ಮತ್ತು ಅಶ್ವಾರೋಹಿಗಳು ಭಿರುಗಾಳಿಗೆ ಸಿಲುಕಿದ ಮರಗಳಂತೆ ತಕ್ಷಣವೇ ಭೂಮಿಯ ಮೇಲೆ ಬಿದ್ದರು.

07015005a ಹಯೌಘಾಂಶ್ಚ ರಥೌಘಾಂಶ್ಚ ಗಜೌಘಾಂಶ್ಚ ಸಮಂತತಃ|

07015005c ಅಪಾತಯದ್ರಣೇ ರಾಜನ್ ಶತಶೋಽಥ ಸಹಸ್ರಶಃ||

ರಾಜನ್! ಕುದುರೆಗಳ ಗುಂಪುಗಳು, ರಥಗಳ ಗುಂಪುಗಳು ಮತ್ತು ಆನೆಗಳ ಸಮೂಹಗಳು ಎಲ್ಲಕಡೆ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಉರುಳಿದವು.

07015006a ದೃಷ್ಟ್ವಾ ತಮೇವಂ ಸಮರೇ ವಿಚರಂತಮಭೀತವತ್|

07015006c ಸಹಿತಾಃ ಸರ್ವರಾಜಾನಃ ಪರಿವವ್ರುಃ ಸಮಂತತಃ||

ಈ ರೀತಿ ಭಯವಿಲ್ಲದೇ ಸಮರದಲ್ಲಿ ಸಂಚರಿಸುತ್ತಿರುವ ಅವನನ್ನು ನೋಡಿ ಎಲ್ಲರಾಜರೂ ಒಟ್ಟಿಗೇ ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು.

07015007a ನಾಕುಲಿಸ್ತು ಶತಾನೀಕೋ ವೃಷಸೇನಂ ಸಮಭ್ಯಯಾತ್|

07015007c ವಿವ್ಯಾಧ ಚೈನಂ ದಶಭಿರ್ನಾರಾಚೈರ್ಮರ್ಮಭೇದಿಭಿಃ||

ನಕುಲನ ಮಗ ಶತಾನೀಕನಾದರೋ ವೃಷಸೇನನನ್ನು ಎದುರಿಸಿ ಅವನನ್ನು ಹತ್ತು ಮರ್ಮಭೇದಿ ನಾರಾಚಗಳಿಂದ ಹೊಡೆದನು.

07015008a ತಸ್ಯ ಕರ್ಣಾತ್ಮಜಶ್ಚಾಪಂ ಚಿತ್ತ್ವಾ ಕೇತುಮಪಾತಯತ್|

07015008c ತಂ ಭ್ರಾತರಂ ಪರೀಪ್ಸಂತೋ ದ್ರೌಪದೇಯಾಃ ಸಮಭ್ಯಯುಃ||

ಕರ್ಣಾತ್ಮಜನು ಅವನ ಧನುಸ್ಸನ್ನು ಕತ್ತರಿಸಿ ಧ್ವಜವನ್ನು ಕೆಡವಿದನು. ಆ ಸಹೋದರನನ್ನು ರಕ್ಷಿಸಲು ಇತರ ದ್ರೌಪದೇಯರು ಧಾವಿಸಿದರು.

07015009a ಕರ್ಣಾತ್ಮಜಂ ಶರವ್ರಾತೈಶ್ಚಕ್ರುಶ್ಚಾದೃಶ್ಯಮಂಜಸಾ|

07015009c ತಾನ್ನದಂತೋಽಭ್ಯಧಾವಂತ ದ್ರೋಣಪುತ್ರಮುಖಾ ರಥಾಃ||

ಅವರು ಶರಗಳ ಮಳೆಯನ್ನು ಸುರಿಸಿ ಕರ್ಣಾತ್ಮಜನನ್ನು ಕಾಣದಂತೆ ಮಾಡಿದರು. ಆಗ ದ್ರೋಣಪುತ್ರನ ನಾಯಕತ್ವದಲ್ಲಿ ರಥರು ಗರ್ಜಿಸುತ್ತಾ ಅವರಿದ್ದಲ್ಲಿಗೆ ಧಾಮಿಸಿ ಬಂದರು.

07015010a ಚಾದಯಂತೋ ಮಹಾರಾಜ ದ್ರೌಪದೇಯಾನ್ಮಹಾರಥಾನ್|

07015010c ಶರೈರ್ನಾನಾವಿಧೈಸ್ತೂರ್ಣಂ ಪರ್ವತಾಂ ಜಲದಾ ಇವ||

ಮಹಾರಾಜ! ಅವರು ತಕ್ಷಣವೇ ನಾನಾ ವಿಧದ ಶರಗಳಿಂದ ಮೋಡಗಳು ಪರ್ವತವನ್ನು ಹೇಗೋ ಹಾಗೆ ಮಹಾರಥ ದ್ರೌಪದೇಯರನ್ನು ಮುಚ್ಚಿದರು.

07015011a ತಾನ್ಪಾಂಡವಾಃ ಪ್ರತ್ಯಗೃಹ್ಣಂಸ್ತ್ವರಿತಾಃ ಪುತ್ರಗೃದ್ಧಿನಃ|

07015011c ಪಾಂಚಾಲಾಃ ಕೇಕಯಾ ಮತ್ಸ್ಯಾಃ ಸೃಂಜಯಾಶ್ಚೋದ್ಯತಾಯುಧಾಃ||

ಆಗ ಪುತ್ರರ ಮೇಲಿನ ಪ್ರೀತಿಯಿಂದ ಪಾಂಡವರು ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಸೃಂಜಯರೊಂದಿಗೆ ಆಯುಧಗಳನ್ನು ಎತ್ತಿ ಹಿಡಿದು ಧಾವಿಸಿದರು.

07015012a ತದ್ಯುದ್ಧಮಭವದ್ಘೋರಂ ತುಮುಲಂ ಲೋಮಹರ್ಷಣ|

07015012c ತ್ವದೀಯೈಃ ಪಾಂಡುಪುತ್ರಾಣಾಂ ದೇವಾನಾಮಿವ ದಾನವೈಃ||

ಆಗ ದಾನವರೊಂದಿಗೆ ದೇವತೆಗಳಂತೆ ನಿನ್ನವರೊಡನೆ ಪಾಂಡುಪುತ್ರರ ರೋಮಾಂಚಕಾರೀ ಘೋರ ತುಮುಲ ಯುದ್ಧವು ನಡೆಯಿತು.

07015013a ಏವಮುತ್ತಮಸಂರಂಭಾ ಯುಯುಧುಃ ಕುರುಪಾಂಡವಾಃ|

07015013c ಪರಸ್ಪರಮುದೀಕ್ಷಂತಃ ಪರಸ್ಪರಕೃತಾಗಸಃ||

ಹೀಗೆ ಕುರುಪಾಂಡವರು ಪರಸ್ಪರರ ತಪ್ಪುಗಳಿಗೆ ಪರಸ್ಪರರನ್ನು ದಿಟ್ಟಾಗಿ ನೋಡುತ್ತಾ ಕ್ರೋಧದಿಂದ ಉತ್ತಮವಾಗಿ ಯುದ್ಧಮಾಡಿದರು.

07015014a ತೇಷಾಂ ದದೃಶಿರೇ ಕೋಪಾದ್ವಪೂಂಷ್ಯಮಿತತೇಜಸಾಂ|

07015014c ಯುಯುತ್ಸೂನಾಮಿವಾಕಾಶೇ ಪತತ್ರಿವರಭೋಗಿನಾಂ||

ಕೋಪದಿಂದ ಆ ಅಮಿತತೇಜಸ್ವಿಯರ ಶರೀರಗಳು ಆಕಾಶದಲ್ಲಿ ಗರುಡ ಮತ್ತು ಸರ್ಪಗಳು ಹೊಡೆದಾಡುತ್ತಿರುವಂತೆ ಕಾಣುತ್ತಿದ್ದವು.

07015015a ಭೀಮಕರ್ಣಕೃಪದ್ರೋಣದ್ರೌಣಿಪಾರ್ಷತಸಾತ್ಯಕೈಃ|

07015015c ಬಭಾಸೇ ಸ ರಣೋದ್ದೇಶಃ ಕಾಲಸೂರ್ಯೈರಿವೋದಿತೈಃ||

ಭೀಮ, ಕರ್ಣ, ಕೃಪ, ದ್ರೋಣ, ದ್ರೌಣಿ, ಪಾರ್ಷತ ಮತ್ತು ಸಾತ್ಯಕಿಯರಿಂದ ರಣಾಂಗಣವು ಉದಯಕಾಲದ ಸೂರ್ಯನಂತೆ ಹೊಳೆಯುತ್ತಿತ್ತು.

07015016a ತದಾಸೀತ್ತುಮುಲಂ ಯುದ್ಧಂ ನಿಘ್ನತಾಮಿತರೇತರಂ|

07015016c ಮಹಾಬಲಾನಾಂ ಬಲಿಭಿರ್ದಾನವಾನಾಂ ಯಥಾ ಸುರೈಃ||

ಆಗ ಸುರರಿಂದ ದಾನವರು ಹೇಗೋ ಹಾಗೆ ಒಬ್ಬರು ಇನ್ನೊಬ್ಬರನ್ನು ಸಂಹರಿಸುವ ಆ ಮಹಾಬಲರ ಬಲಶಾಲೀ ತುಮುಲ ಯುದ್ಧವು ನಡೆಯಿತು.

07015017a ತತೋ ಯುಧಿಷ್ಠಿರಾನೀಕಮುದ್ಧೂತಾರ್ಣವನಿಸ್ವನಂ|

07015017c ತ್ವದೀಯಮವಧೀತ್ಸೈನ್ಯಂ ಸಂಪ್ರದ್ರುತಮಹಾರಥಂ||

ಆಗ ಯುಧಿಷ್ಠಿರನ ಸೇನೆಯು ಉಕ್ಕಿಬರುವ ಸಮುದ್ರದಂತೆ ಜೋರಾಗಿ ಗರ್ಜಿಸುತ್ತಾ ನಿನ್ನ ಸೇನೆಯ ಮೇಲೆ ಎರಗಿತು. ಆಗ ಮಹಾರಥರು ಪಲಾಯನಗೈದರು.

07015018a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಶತ್ರುಭಿರ್ಭೃಶಮರ್ದಿತಂ|

07015018c ಅಲಂ ದ್ರುತೇನ ವಃ ಶೂರಾ ಇತಿ ದ್ರೋಣೋಽಭ್ಯಭಾಷತ||

ಶತ್ರುಗಳಿಂದ ಬಹಳವಾಗಿ ಮರ್ದಿಸಲ್ಪಟ್ಟು ಭಗ್ನವಾದ ಆ ಸೇನೆಯನ್ನು ನೋಡಿ ದ್ರೋಣನು “ಶೂರರೇ! ನಿಲ್ಲಿ! ಓಡಬೇಡಿ!” ಎಂದು ಕೂಗಿ ಹೇಳಿದನು.

07015019a ತತಃ ಶೋಣಹಯಃ ಕ್ರುದ್ಧಶ್ಚತುರ್ದಂತ ಇವ ದ್ವಿಪಃ|

07015019c ಪ್ರವಿಶ್ಯ ಪಾಂಡವಾನೀಕಂ ಯುಧಿಷ್ಠಿರಮುಪಾದ್ರವತ್||

ಆಗ ಆ ಕೆಂಪುಕುದುರೆಗಳವನು ನಾಲ್ಕುದಂತಗಳ ಆನೆಯಂತೆ ಕೂಗುತ್ತಾ ಪಾಂಡವರ ಸೇನೆಯನ್ನು ಪ್ರವೇಶಿಸಿ ಯುಧಿಷ್ಠಿರನನ್ನು ಆಕ್ರಮಣಿಸಿದನು.

07015020a ತಮವಿಧ್ಯಚ್ಚಿತೈರ್ಬಾಣೈಃ ಕಂಕಪತ್ರೈರ್ಯುಧಿಷ್ಠಿರಃ|

07015020c ತಸ್ಯ ದ್ರೋಣೋ ಧನುಶ್ಚಿತ್ತ್ವಾ ತಂ ದ್ರುತಂ ಸಮುಪಾದ್ರವತ್||

ಯುಧಿಷ್ಠಿರನು ಅವನನ್ನು ನಿಶಿತ ಕಂಕಪತ್ರ ಬಾಣಗಳಿಂದ ಹೊಡೆಯಲು ದ್ರೋಣನು ಅವನ ಧನುಸ್ಸನ್ನು ಕತ್ತರಿಸಿ ಅವನ ಮೇಲೆ ವೇಗದಿಂದ ಎರಗಿದನು.

07015021a ಚಕ್ರರಕ್ಷಃ ಕುಮಾರಸ್ತು ಪಾಂಚಾಲಾನಾಂ ಯಶಸ್ಕರಃ|

07015021c ದಧಾರ ದ್ರೋಣಮಾಯಾಂತಂ ವೇಲೇವ ಸರಿತಾಂ ಪತಿಂ||

ಆಗ ಪಾಂಚಾಲರ ಯಶಸ್ಕರ ಯುಧಿಷ್ಠಿರನ ಚಕ್ರರಕ್ಷಕ ಕುಮಾರನು ಆಕ್ರಮಣಿಸುತ್ತಿದ್ದ ದ್ರೋಣನನ್ನು ಉಕ್ಕಿ ಬರುವ ಅಲೆಗಳನ್ನು ದಡವು ತಡೆಯುವಂತೆ ತಡೆದನು.

07015022a ದ್ರೋಣಂ ನಿವಾರಿತಂ ದೃಷ್ಟ್ವಾ ಕುಮಾರೇಣ ದ್ವಿಜರ್ಷಭಂ|

07015022c ಸಿಂಹನಾದರವೋ ಹ್ಯಾಸೀತ್ಸಾಧು ಸಾಧ್ವಿತಿ ಭಾಷತಾಂ||

ಕುಮಾರನು ದ್ವಿಜರ್ಷಭ ದ್ರೋಣನನ್ನು ತಡೆದುದನ್ನು ನೋಡಿ “ಸಾಧು! ಸಾಧು!” ಎಂಬ ಸಿಂಹನಾದವು ಕೇಳಿಬಂದಿತು.

07015023a ಕುಮಾರಸ್ತು ತತೋ ದ್ರೋಣಂ ಸಾಯಕೇನ ಮಹಾಹವೇ|

07015023c ವಿವ್ಯಾಧೋರಸಿ ಸಂಕ್ರುದ್ಧಃ ಸಿಂಹವಚ್ಚಾನದನ್ಮುಹುಃ||

ಕುಮಾರನಾದರೋ ಮಹಾಹವದಲ್ಲಿ ಸಂಕ್ರುದ್ಧನಾಗಿ ದ್ರೋಣನನ್ನು ಸಾಯಕದಿಂದ ಎದೆಗೆ ಹೊಡೆದು ಪುನಃ ಪುನಃ ಸಿಂಹನಾದಗೈದನು.

07015024a ಸಂವಾರ್ಯ ತು ರಣೇ ದ್ರೋಣಃ ಕುಮಾರಂ ವೈ ಮಹಾಬಲಃ|

07015024c ಶರೈರನೇಕಸಾಹಸ್ರೈಃ ಕೃತಹಸ್ತೋ ಜಿತಕ್ಲಮಃ||

ಮಹಾಬಲ ಪಳಗಿದ ಕೈಯುಳ್ಳ ಆಯಾಸವನ್ನು ಗೆದ್ದ ದ್ರೋಣನು ಅನೇಕ ಸಹಸ್ರ ಬಾಣಗಳಿಂದ ಕುಮಾರನನ್ನು ರಣದಲ್ಲಿ ತಡೆದನು.

07015025a ತಂ ಶೂರಮಾರ್ಯವ್ರತಿನಮಸ್ತ್ರಾರ್ಥಕೃತನಿಶ್ರಮಂ|

07015025c ಚಕ್ರರಕ್ಷಮಪಾಮೃದ್ನಾತ್ಕುಮಾರಂ ದ್ವಿಜಸತ್ತಮಃ||

ದ್ವಿಜಸತ್ತಮನು ಆ ಶೂರ, ಆರ್ಯವ್ರತಿ, ಅಸ್ತ್ರಾರ್ಥಕೃತನಿಶ್ರಮ ಚಕ್ರರಕ್ಷಕ ಕುಮಾರನನ್ನು ಸಂಹರಿಸಿದನು.

07015026a ಸ ಮಧ್ಯಂ ಪ್ರಾಪ್ಯ ಸೇನಾಯಾಃ ಸರ್ವಾಃ ಪರಿಚರನ್ದಿಶಃ|

07015026c ತವ ಸೈನ್ಯಸ್ಯ ಗೋಪ್ತಾಸೀದ್ಭಾರದ್ವಾಜೋ ರಥರ್ಷಭಃ||

ಆ ಭಾರದ್ವಾಜ ರಥರ್ಷಭನು ಸೇನೆಗಳ ಮಧ್ಯೆ ಹೋಗಿ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ನಿನ್ನ ಸೇನೆಯನ್ನು ರಕ್ಷಿಸಿದನು.

07015027a ಶಿಖಂಡಿನಂ ದ್ವಾದಶಭಿರ್ವಿಂಶತ್ಯಾ ಚೋತ್ತಮೌಜಸಂ|

07015027c ನಕುಲಂ ಪಂಚಭಿರ್ವಿದ್ಧ್ವಾ ಸಹದೇವಂ ಚ ಸಪ್ತಭಿಃ||

07015028a ಯುಧಿಷ್ಠಿರಂ ದ್ವಾದಶಭಿರ್ದ್ರೌಪದೇಯಾಂಸ್ತ್ರಿಭಿಸ್ತ್ರಿಭಿಃ|

07015028c ಸಾತ್ಯಕಿಂ ಪಂಚಭಿರ್ವಿದ್ಧ್ವಾ ಮತ್ಸ್ಯಂ ಚ ದಶಭಿಃ ಶರೈಃ||

07015029a ವ್ಯಕ್ಷೋಭಯದ್ರಣೇ ಯೋಧಾನ್ಯಥಾಮುಖ್ಯಾನಭಿದ್ರವನ್|

07015029c ಅಭ್ಯವರ್ತತ ಸಂಪ್ರೇಪ್ಸುಃ ಕುಂತೀಪುತ್ರಂ ಯುಧಿಷ್ಠಿರಂ||

ಶಿಖಂಡಿಯನ್ನು ಹನ್ನೆರಡರಿಂದ, ಉತ್ತಮೌಜಸನನ್ನು ಇಪ್ಪತ್ತರಿಂದ, ನಕುಲನನ್ನು ಐದರಿಂದ, ಸಹದೇವನನ್ನು ಏಳರಿಂದ, ಯುಧಿಷ್ಠಿರನನ್ನು ಹನ್ನೆರಡರಿಂದ, ದ್ರೌಪದೇಯರನ್ನು ಮೂರು ಮೂರರಿಂದ, ಸಾತ್ಯಕಿಯನ್ನು ಐದರಿಂದ, ಮತ್ಸ್ಯನನ್ನು ಹತ್ತು ಶರಗಳಿಂದ ಹೊಡೆದು ರಣದಲ್ಲಿ ಅಲ್ಲೋಲಕಲ್ಲೋಲವನ್ನುಂಟುಮಾಡಿದನು. ಮುಖ್ಯಯೋಧರನ್ನು ಆಕ್ರಮಣಿಸಿ ಕುಂತೀಪುತ್ರ ಯುಧಿಷ್ಠಿರನನ್ನು ತಲುಪಲು ಧಾವಿಸಿದನು.

07015030a ಯುಗಂಧರಸ್ತತೋ ರಾಜನ್ಭಾರದ್ವಾಜಂ ಮಹಾರಥಂ|

07015030c ವಾರಯಾಮಾಸ ಸಂಕ್ರುದ್ಧಂ ವಾತೋದ್ಧೂತಮಿವಾರ್ಣವಂ||

ಆಗ ರಾಜನ್! ಸಂಕ್ರುದ್ಧನಾದ ಯುಗಂಧರನು ಭಿರುಗಾಳಿಯಿಂದ ಉಕ್ಕಿಬಂದ ಸಮುದ್ರದಂತೆ ಮಹಾರಥ ಭಾರದ್ವಾಜನನ್ನು ತಡೆದನು.

07015031a ಯುಧಿಷ್ಠಿರಂ ಸ ವಿದ್ಧ್ವಾ ತು ಶರೈಃ ಸನ್ನತಪರ್ವಭಿಃ|

07015031c ಯುಗಂಧರಂ ಚ ಭಲ್ಲೇನ ರಥನೀಡಾದಪಾಹರತ್||

ಆಗ ದ್ರೋಣನು ಯುಧಿಷ್ಠಿರನನ್ನು ಸನ್ನತಪರ್ವ ಶರದಿಂದ ಹೊಡೆದು ಯುಗಂಧರನನ್ನು ಭಲ್ಲದಿಂದ ಹೊಡೆದು ರಥದಿಂದ ಕೆಳಗೆ ಬೀಳಿಸಿದನು.

07015032a ತತೋ ವಿರಾಟದ್ರುಪದೌ ಕೇಕಯಾಃ ಸಾತ್ಯಕಿಃ ಶಿಬಿಃ|

07015032c ವ್ಯಾಘ್ರದತ್ತಶ್ಚ ಪಾಂಚಾಲ್ಯಃ ಸಿಂಹಸೇನಶ್ಚ ವೀರ್ಯವಾನ್||

07015033a ಏತೇ ಚಾನ್ಯೇ ಚ ಬಹವಃ ಪರೀಪ್ಸಂತೋ ಯುಧಿಷ್ಠಿರಂ|

07015033c ಆವವ್ರುಸ್ತಸ್ಯ ಪಂಥಾನಂ ಕಿರಂತಃ ಸಾಯಕಾನ್ಬಹೂನ್||

ಆಗ ವಿರಾಟ-ದ್ರುಪದರು, ಕೇಕಯರು, ಸಾತ್ಯಕಿ, ಶಿಬಿ, ವ್ಯಾಘ್ರದತ್ತ ಮತ್ತು ಇನ್ನೂ ಇತರ ಅನೇಕರು ಯುಧಿಷ್ಠಿರನನ್ನು ರಕ್ಷಿಸಲು ಬಯಸಿ ಅವನ ದಾರಿಯಲ್ಲಿ ಬಹಳ ಸಾಯಕಗಳನ್ನು ಚೆಲ್ಲಿದರು.

07015034a ವ್ಯಾಘ್ರದತ್ತಶ್ಚ ಪಾಂಚಾಲ್ಯೋ ದ್ರೋಣಂ ವಿವ್ಯಾಧ ಮಾರ್ಗಣೈಃ|

07015034c ಪಂಚಾಶದ್ಭಿಃ ಶಿತೈ ರಾಜಂಸ್ತತ ಉಚ್ಚುಕ್ರುಶುರ್ಜನಾಃ||

ರಾಜನ್! ಪಾಂಚಾಲ್ಯ ವ್ಯಾಘ್ರದತ್ತನು ದ್ರೋಣನನ್ನು ಐವತ್ತು ನಿಶಿತ ಮಾರ್ಗಣಗಳಿಂದ ಹೊಡೆದನು. ಆಗ ಸೈನಿಕರು ಜೋರಾಗಿ ಕೂಗಿದರು.

07015035a ತ್ವರಿತಂ ಸಿಂಹಸೇನಸ್ತು ದ್ರೋಣಂ ವಿದ್ಧ್ವಾ ಮಹಾರಥಂ|

07015035c ಪ್ರಾಹಸತ್ಸಹಸಾ ಹೃಷ್ಟಸ್ತ್ರಾಸಯನ್ವೈ ಯತವ್ರತಂ||

ಸಿಂಹಸೇನನಾದರೋ ಬೇಗನೆ ಮಹಾರಥ ಯತವ್ರತ ದ್ರೋಣನನ್ನು ಹೊಡೆದು ಪೀಡಿಸಿ ಹರ್ಷದಿಂದ ಜೋರಾಗಿ ನಕ್ಕನು.

07015036a ತತೋ ವಿಸ್ಫಾರ್ಯ ನಯನೇ ಧನುರ್ಜ್ಯಾಮವಮೃಜ್ಯ ಚ|

07015036c ತಲಶಬ್ದಂ ಮಹತ್ಕೃತ್ವಾ ದ್ರೋಣಸ್ತಂ ಸಮುಪಾದ್ರವತ್||

ಆಗ ಕಣ್ಣಿನವರೆಗೆ ಧನುಸ್ಸಿನ ಶಿಂಜನಿಯನ್ನು ಎಳೆದು ಜೋರಾಗಿ ಚಪ್ಪಾಳೆಯ ಶಬ್ಧವನ್ನುಂಟುಮಾಡುತ್ತಾ ದ್ರೋಣನು ಅವನ ಮೇಲೆ ಎರಗಿದನು.

07015037a ತತಸ್ತು ಸಿಂಹಸೇನಸ್ಯ ಶಿರಃ ಕಾಯಾತ್ಸಕುಂಡಲಂ|

07015037c ವ್ಯಾಘ್ರದತ್ತಸ್ಯ ಚಾಕ್ರಮ್ಯ ಭಲ್ಲಾಭ್ಯಾಮಹರದ್ಬಲೀ||

ಆಗ ಆ ಬಲಶಾಲಿಯು ಎರಡು ಭಲ್ಲಗಳಿಂದ ಕುಂಡಲಗಳೊಡನೆ ಸಿಂಹಸೇನನ ಶಿರವನ್ನು ದೇಹದಿಂದ ಬೇರ್ಪಡಿಸಿ ವ್ಯಾಘ್ರದತ್ತನನ್ನು ಸಂಹರಿಸಿದನು.

07015038a ತಾನ್ಪ್ರಮೃದ್ಯ ಶರವ್ರಾತೈಃ ಪಾಂಡವಾನಾಂ ಮಹಾರಥಾನ್|

07015038c ಯುಧಿಷ್ಠಿರಸಮಭ್ಯಾಶೇ ತಸ್ಥೌ ಮೃತ್ಯುರಿವಾಂತಕಃ||

ಪಾಂಡವರ ಆ ಮಹಾರಥರನ್ನು ಶರವ್ರಾತದಿಂದ ಸಂಹರಿಸಿ ದ್ರೋಣನು ಯುಧಿಷ್ಠಿರನ ಮುಂದೆ ಅಂತಕ ಮೃತ್ಯುವಿನಂತೆ ಹೋಗಿ ನಿಂತನು.

07015039a ತತೋಽಭವನ್ಮಹಾಶಬ್ದೋ ರಾಜನ್ಯೌಧಿಷ್ಠಿರೇ ಬಲೇ|

07015039c ಹೃತೋ ರಾಜೇತಿ ಯೋಧಾನಾಂ ಸಮೀಪಸ್ಥೇ ಯತವ್ರತೇ||

ರಾಜನ್! ಆಗ ಯುಧಿಷ್ಠಿರನ ಸೇನೆಯಲ್ಲಿ ಆ ಯತವ್ರತನ ಸಮೀಪವಿದ್ದ ಯೋಧರು “ರಾಜನು ಕೊಲ್ಲಲ್ಪಟ್ಟನು!” ಎಂದು ಕೂಗಿ ಮಹಾಶಬ್ಧವುಂಟಾಯಿತು.

07015040a ಅಬ್ರುವನ್ಸೈನಿಕಾಸ್ತತ್ರ ದೃಷ್ಟ್ವಾ ದ್ರೋಣಸ್ಯ ವಿಕ್ರಮಂ|

07015040c ಅದ್ಯ ರಾಜಾ ಧಾರ್ತರಾಷ್ಟ್ರಃ ಕೃತಾರ್ಥೋ ವೈ ಭವಿಷ್ಯತಿ|

07015040e ಆಗಮಿಷ್ಯತಿ ನೋ ನೂನಂ ಧಾರ್ತರಾಷ್ಟ್ರಸ್ಯ ಸಂಯುಗೇ||

ಅಲ್ಲಿ ದ್ರೋಣನ ವಿಕ್ರಮವನ್ನು ನೋಡಿ “ಇಂದು ರಾಜಾ ಧಾರ್ತರಾಷ್ಟ್ರನು ಕೃತಾರ್ಥನಾದಂತೆಯೇ! ಇಂದು ಇವನು ಧಾರ್ತರಾಷ್ಟ್ರನ ಎದುರಿಗೆ ಬರುವವನಿದ್ದಾನೆ” ಎಂದು ಹೇಳಿಕೊಂಡರು.

07015041a ಏವಂ ಸಂಜಲ್ಪತಾಂ ತೇಷಾಂ ತಾವಕಾನಾಂ ಮಹಾರಥಃ|

07015041c ಆಯಾಜ್ಜವೇನ ಕೌಂತೇಯೋ ರಥಘೋಷೇಣ ನಾದಯನ್||

ಹೀಗೆ ನಿನ್ನವರು ಕೂಗಿಕೊಳ್ಳುವಾಗ ಮಹಾರಥ ಕೌಂತೇಯನು ರಥಘೋಷದಿಂದ ಪ್ರತಿಧ್ವನಿಸುತ್ತಾ ವೇಗದಿಂದ ಅಲ್ಲಿಗೆ ಬಂದನು.

07015042a ಶೋಣಿತೋದಾಂ ರಥಾವರ್ತಾಂ ಕೃತ್ವಾ ವಿಶಸನೇ ನದೀಂ|

07015042c ಶೂರಾಸ್ಥಿಚಯಸಂಕೀರ್ಣಾಂ ಪ್ರೇತಕೂಲಾಪಹಾರಿಣೀಂ||

07015043a ತಾಂ ಶರೌಘಮಹಾಫೇನಾಂ ಪ್ರಾಸಮತ್ಸ್ಯಸಮಾಕುಲಾಂ|

07015043c ನದೀಮುತ್ತೀರ್ಯ ವೇಗೇನ ಕುರೂನ್ವಿದ್ರಾವ್ಯ ಪಾಂಡವಃ||

ರಕ್ತವೇ ನೀರಾಗಿ, ರಥಗಳೇ ಸುಳಿಗಳಾಗಿ, ಶೂರರ ಅಸ್ಥಿಗಳಿಂದ ತುಂಬಿಹೋಗಿದ್ದ, ಪ್ರೇತಗಳೆಂಬ ದಡವನ್ನು ಕೊಚ್ಚಿಕೊಂಡು ಹೋಗುತ್ತಿದ್ದ, ಶರೌಘಗಳೇ ನೊರೆಗಳಾಗಿದ್ದ, ಪ್ರಾಸಗಳೆಂಬ ಮೀನುಗಳಿಂದ ತುಂಬಿಹೋಗಿದ್ದ ಆ ವಿಶಸನ ನದಿಯನ್ನು ವೇಗದಿಂದ ದಾಟಿ ಪಾಂಡವನು ಶೀಘ್ರವಾಗಿ ಅಲ್ಲಿಗೆ ಬಂದನು.

07015044a ತತಃ ಕಿರೀಟೀ ಸಹಸಾ ದ್ರೋಣಾನೀಕಮುಪಾದ್ರವತ್|

07015044c ಚಾದಯನ್ನಿಷುಜಾಲೇನ ಮಹತಾ ಮೋಹಯನ್ನಿವ||

ಆಗ ತಕ್ಷಣವೇ ಕಿರೀಟಿಯು ದ್ರೋಣನ ಸೇನೆಯನ್ನು ಆಕ್ರಮಣಿಸಿ ಮಹಾ ಶರಜಾಲದಿಂದ ಮೋಹಿಸಿ ಮುಚ್ಚಿದನು.

07015045a ಶೀಘ್ರಮಭ್ಯಸ್ಯತೋ ಬಾಣಾನ್ಸಂದಧಾನಸ್ಯ ಚಾನಿಶಂ||

07015045c ನಾಂತರಂ ದದೃಶೇ ಕಶ್ಚಿತ್ಕೌಂತೇಯಸ್ಯ ಯಶಸ್ವಿನಃ|

ಯಶಸ್ವಿ ಕೌಂತೇಯನು ಎಷ್ಟೊಂದು ಶೀಘ್ರವಾಗಿದ್ದನೆಂದರೆ ಅವನು ಬಾಣವನ್ನು ತೆಗೆದುಕೊಳ್ಳುವುದರ ಮತ್ತು ಹೂಡುವುದರ ಮಧ್ಯ ಅಂತರವೇ ಕಾಣುತ್ತಿರಲಿಲ್ಲ.

07015046a ನ ದಿಶೋ ನಾಂತರಿಕ್ಷಂ ಚ ನ ದ್ಯೌರ್ನೈವ ಚ ಮೇದಿನೀ|

07015046c ಅದೃಶ್ಯತ ಮಹಾರಾಜ ಬಾಣಭೂತಮಿವಾಭವತ್||

ಮಹಾರಾಜ! ಅದಿಕ್ಕುಗಳಾಗಲೀ, ಅಂತರಿಕ್ಷವಾಗಲೀ, ಆಕಾಶವಾಗಲೀ, ಭೂಮಿಯಾಗಲೀ ಕಾಣದೇ ಹೋಯಿತು. ಎಲ್ಲವೂ ಬಾಣಮಯವಾಯಿತು.

07015047a ನಾದೃಶ್ಯತ ತದಾ ರಾಜಂಸ್ತತ್ರ ಕಿಂ ಚನ ಸಂಯುಗೇ|

07015047c ಬಾಣಾಂಧಕಾರೇ ಮಹತಿ ಕೃತೇ ಗಾಂಡೀವಧನ್ವನಾ||

ರಾಜನ್! ಗಾಂಡೀವಧನ್ವಿಯು ರಚಿಸಿದ ಆ ಮಹಾ ಬಾಣಾಂಧಕಾರದಿಂದಾಗಿ ರಣದಲ್ಲಿ ಏನೊಂದೂ ಕಾಣದಂತಾಯಿತು.

07015048a ಸೂರ್ಯೇ ಚಾಸ್ತಮನುಪ್ರಾಪ್ತೇ ರಜಸಾ ಚಾಭಿಸಂವೃತೇ|

07015048c ನಾಜ್ಞಾಯತ ತದಾ ಶತ್ರುರ್ನ ಸುಹೃನ್ನ ಚ ಕಿಂ ಚನ||

ಸೂರ್ಯನೂ ಅಸ್ತವಾಗುತ್ತಿರಲು ಮತ್ತು ಧೂಳಿನಿಂದ ತುಂಬಿಹೋಗಿರಲು ಅಲ್ಲಿ ಶತ್ರುಗಳಾರು ಮಿತ್ರರಾರು ಎಂದು ಏನೂ ತಿಳಿಯದೇ ಹೋಯಿತು.

07015049a ತತೋಽವಹಾರಂ ಚಕ್ರುಸ್ತೇ ದ್ರೋಣದುರ್ಯೋಧನಾದಯಃ|

07015049c ತಾನ್ವಿದಿತ್ವಾ ಭೃಶಂ ತ್ರಸ್ತಾನಯುದ್ಧಮನಸಃ ಪರಾನ್||

07015050a ಸ್ವಾನ್ಯನೀಕಾನಿ ಬೀಭತ್ಸುಃ ಶನಕೈರವಹಾರಯತ್|

ಆಗ ದ್ರೋಣ-ದುರ್ಯೋಧನಾದಿಗಳು ಯುದ್ಧದಿಂದ ಹಿಮ್ಮೆಟ್ಟಿದರು. ಶತ್ರುಗಳು ಭಯಪಟ್ಟಿದುದನ್ನೂ ಯುದ್ಧದಲ್ಲಿ ನಿರಾಸಕ್ತರಾದುದನ್ನೂ ತಿಳಿದುಕೊಂಡ ಬೀಭತ್ಸುವೂ ಕೂಡ ತನ್ನ ಸೇನೆಗಳನ್ನು ನಿಧಾನವಾಗಿ ಹಿಂದೆ ತೆಗೆದುಕೊಂಡನು.

07015050c ತತೋಽಭಿತುಷ್ಟುವುಃ ಪಾರ್ಥಂ ಪ್ರಹೃಷ್ಟಾಃ ಪಾಂಡುಸೃಂಜಯಾಃ|

07015050e ಪಾಂಚಾಲಾಶ್ಚ ಮನೋಜ್ಞಾಭಿರ್ವಾಗ್ಭಿಃ ಸೂರ್ಯಮಿವರ್ಷಯಃ||

ಪ್ರಹೃಷ್ಟರಾದ ಪಾಂಡವ-ಸೃಂಜಯ-ಪಾಂಚಾಲರು ಪಾರ್ಥನನ್ನು ಋಷಿಗಳು ಸೂರ್ಯನನ್ನು ಸ್ತುತಿಸುವಂತೆ ಮನೋಜ್ಞ ಮಾತುಗಳಿಂದ ಸಂತೋಷಪಡಿಸಿದರು.

07015051a ಏವಂ ಸ್ವಶಿಬಿರಂ ಪ್ರಾಯಾಜ್ಜಿತ್ವಾ ಶತ್ರೂನ್ಧನಂಜಯಃ|

07015051c ಪೃಷ್ಠತಃ ಸರ್ವಸೈನ್ಯಾನಾಂ ಮುದಿತೋ ವೈ ಸಕೇಶವಃ||

ಹೀಗೆ ಶತ್ರುಗಳನ್ನು ಗೆದ್ದು ಸಂತೋಷಭರಿತನಾಗಿ ಧನಂಜಯನು ಕೇಶವನೊಂದಿಗೆ ಸರ್ವಸೇನೆಗಳ ಹಿಂಬಾಗದಲ್ಲಿ ತನ್ನ ಶಿಬಿರದ ಕಡೆ ಪ್ರಯಾಣಿಸಿದನು.

07015052a ಮಸಾರಗಲ್ವರ್ಕಸುವರ್ಣರೂಪ್ಯೈರ್

         ವಜ್ರಪ್ರವಾಲಸ್ಫಟಿಕೈಶ್ಚ ಮುಖ್ಯೈಃ|

07015052c ಚಿತ್ರೇ ರಥೇ ಪಾಂಡುಸುತೋ ಬಭಾಸೇ

         ನಕ್ಷತ್ರಚಿತ್ರೇ ವಿಯತೀವ ಚಂದ್ರಃ||

ನಕ್ಷತ್ರಗಳಿಂದ ಚಿತ್ರಿತವಾಗಿರುವ ಆಕಾಶದಲ್ಲಿ ಚಂದ್ರನು ಪ್ರಕಾಶಿಸುವಂತೆ ಪಾಂಡುಸುತನು ಮಣಿಗಳಿಂದಲೂ, ಪದ್ಮರಾಗಗಳಿಂದಲೂ, ಸುವರ್ಣದಿಂದಲೂ, ವಜ್ರಮಣಿಗಳಿಂದಲೂ, ಹವಳಗಳಿಂದಲೂ, ಸ್ಪಟಿಕ ಮೊದಲಾದವುಗಳಿಂದ ವಿಭೂಷಿತವಾಗಿದ್ದ ಚಿತ್ರರಥದಲ್ಲಿ ಪ್ರಕಾಶಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಪ್ರಥಮದಿವಸಾಪಹಾರೇ ಪಂಚದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಪ್ರಥಮದಿವಸಾಪಹಾರ ಎನ್ನುವ ಹದಿನೈದನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೬೫/೧೦೦, ಅಧ್ಯಾಯಗಳು-೯೯೨/೧೯೯೫, ಶ್ಲೋಕಗಳು-೩೩೮೦೪/೭೩೭೮೪

Image result for indian motifs against white background

Comments are closed.