Drona Parva: Chapter 149

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೯

ಜಟಾಸುರನ ಮಗ ಅಲಂಬಲನನ್ನು ಘಟೋತ್ಕಚನು ಸಂಹರಿಸಿದುದು (೧-೩೭).

Image result for mahabharata07149001 ಸಂಜಯ ಉವಾಚ|

07149001a ದೃಷ್ಟ್ವಾ ಘಟೋತ್ಕಚಂ ರಾಜನ್ಸೂತಪುತ್ರರಥಂ ಪ್ರತಿ|

07149001c ಪ್ರಯಾಂತಂ ತ್ವರರ್ಯಾ ಯುಕ್ತಂ ಜಿಘಾಂಸುಂ ಕರ್ಣಮಾಹವೇ||

07149002a ಅಬ್ರವೀತ್ತವ ಪುತ್ರಸ್ತು ದುಃಶಾಸನಮಿದಂ ವಚಃ|

ಸಂಜಯನು ಹೇಳಿದನು: “ರಾಜನ್! ಯುದ್ಧದಲ್ಲಿ ಕರ್ಣನನ್ನು ಸಂಹರಿಸುವ ಇಚ್ಛೆಯಿಂದ ತ್ವರೆಮಾಡಿ ಕರ್ಣನ ರಥದ ಸಮೀಪಕ್ಕೆ ಬರುತ್ತಿದ್ದ ಘಟೋತ್ಕಚನನ್ನು ನೋಡಿ ನಿನ್ನ ಮಗನು ದುಃಶಾಸನನಿಗೆ ಈ ಮಾತನ್ನಾಡಿದನು:

07149002c ಏತದ್ರಕ್ಷೋ ರಣೇ ತೂರ್ಣಂ ದೃಷ್ಟ್ವಾ ಕರ್ಣಸ್ಯ ವಿಕ್ರಮಂ||

07149003a ಅಭಿಯಾತಿ ದ್ರುತಂ ಕರ್ಣಂ ತದ್ವಾರಯ ಮಹಾರಥಂ|

“ರಣದಲ್ಲಿ ಕರ್ಣನ ವಿಕ್ರಮವನ್ನು ನೋಡಿ ಕರ್ಣನನ್ನು ಸಂಹರಿಸಲು ಈ ರಾಕ್ಷಸನು ಅವಸರದಲ್ಲಿ ಬರುತ್ತಿದ್ದಾನೆ. ಈ ಮಹಾರಥನನ್ನು ತಡೆ!

07149003c ವೃತಃ ಸೈನ್ಯೇನ ಮಹತಾ ಯಾಹಿ ಯತ್ರ ಮಹಾಬಲಃ||

07149004a ಕರ್ಣೋ ವೈಕರ್ತನೋ ಯುದ್ಧೇ ರಾಕ್ಷಸೇನ ಯುಯುತ್ಸತಿ|

07149004c ರಕ್ಷ ಕರ್ಣಂ ರಣೇ ಯತ್ತೋ ವೃತಃ ಸೈನ್ಯೇನ ಮಾನದ||

ಮಹಾಬಲ ವೈಕರ್ತನ ಕರ್ಣನು ರಾಕ್ಷಸನೊಡನೆ ಯುದ್ಧಮಾಡುವಲ್ಲಿಗೆ ಮಹಾಸೇನೆಯೊಂದಿಗೆ ಹೋಗು. ಮಾನದ! ಸೇನೆಗಳಿಂದ ಪರಿವೃತನಾಗಿ ಪ್ರಯತ್ನಪಟ್ಟು ರಣದಲ್ಲಿ ಕರ್ಣನನ್ನು ರಕ್ಷಿಸು!”

07149005a ಏತಸ್ಮಿನ್ನಂತರೇ ರಾಜನ್ಜಟಾಸುರಸುತೋ ಬಲೀ|

07149005c ದುರ್ಯೋಧನಮುಪಾಗಮ್ಯ ಪ್ರಾಹ ಪ್ರಹರತಾಂ ವರಃ||

ಅಷ್ಟರಲ್ಲಿಯೇ ರಾಜನ್! ಪ್ರಹರಿಗಳಲ್ಲಿ ಶ್ರೇಷ್ಠ ಜಟಾಸುರನ ಬಲಶಾಲೀ ಮಗನು ದುರ್ಯೋಧನನ ಬಳಿಬಂದು ಹೇಳಿದನು:

07149006a ದುರ್ಯೋಧನ ತವಾಮಿತ್ರಾನ್ಪ್ರಖ್ಯಾತಾನ್ಯುದ್ಧದುರ್ಮದಾನ್|

07149006c ಪಾಂಡವಾನ್ಹಂತುಮಿಚ್ಚಾಮಿ ತ್ವಯಾಜ್ಞಪ್ತಃ ಸಹಾನುಗಾನ್||

“ದುರ್ಯೋಧನ! ನಿನ್ನಿಂದ ಅಪ್ಪಣೆಯನ್ನು ಪಡೆದು ನನ್ನ ಅನುಯಾಯಿಗಳೊಂದಿಗೆ ನಿನ್ನ ಶತ್ರುಗಳಾದ ಆ ಪ್ರಖ್ಯಾತ ಯುದ್ಧದುರ್ಮದ ಪಾಂಡವರನ್ನು ಸಂಹರಿಸಲು ಬಯಸುತ್ತೇನೆ.

07149007a ಜಟಾಸುರೋ ಮಮ ಪಿತಾ ರಕ್ಷಸಾಮಗ್ರಣೀಃ ಪುರಾ|

07149007c ಪ್ರಯುಜ್ಯ ಕರ್ಮ ರಕ್ಷೋಘ್ನಂ ಕ್ಷುದ್ರೈಃ ಪಾರ್ಥೈರ್ನಿಪಾತಿತಃ|

07149007e ತಸ್ಯಾಪಚಿತಿಮಿಚ್ಚಾಮಿ ತ್ವದ್ದಿಷ್ಟೋ ಗಂತುಮೀಶ್ವರ||

ರಾಕ್ಷಸರ ಅಗ್ರಣಿ ಜಟಾಸುರನೇ ನನ್ನ ತಂದೆ. ಹಿಂದೆ ಅವನು ರಾಕ್ಷಸರನ್ನು ಸಂಹರಿಸುವ ಕಾರ್ಯಮಾಡುತ್ತಿದ್ದ ಈ ಕ್ಷುದ್ರ ಪಾರ್ಥರಿಂದ ವಧಿಸಲ್ಪಟ್ಟನು. ಅದರ ಪ್ರತೀಕಾರವನ್ನು ಬಯಸುತ್ತೇನೆ. ಈಶ್ವರ! ನನಗೆ ಅನುಜ್ಞೆಯನ್ನು ದಯಪಾಲಿಸು!”

07149008a ತಮಬ್ರವೀತ್ತತೋ ರಾಜಾ ಪ್ರೀಯಮಾಣಃ ಪುನಃ ಪುನಃ|

07149008c ದ್ರೋಣಕರ್ಣಾದಿಭಿಃ ಸಾರ್ಧಂ ಪರ್ಯಾಪ್ತೋಽಹಂ ದ್ವಿಷದ್ವಧೇ|

07149008e ತ್ವಂ ತು ಗಚ್ಚ ಮಯಾಜ್ಞಪ್ತೋ ಜಹಿ ಯುದ್ಧಂ ಘಟೋತ್ಕಚಂ||

ಪುನಃ ಪುನಃ ಪ್ರೀತಿತೋರಿಸುವ ರಾಜನು ಅವನಿಗೆ ಹೇಳಿದನು: “ಶತ್ರುಗಳ ವಧೆಗೆ ದ್ರೋಣ-ಕರ್ಣಾದಿಗಳೊಡನೆ ನಾನು ಸಾಕು. ನೀನಾದರೋ ಹೋಗಿ ಯುದ್ಧದಲ್ಲಿ ಘಟೋತ್ಕಚನನ್ನು ಸಂಹರಿಸು!”

07149009a ತಥೇತ್ಯುಕ್ತ್ವಾ ಮಹಾಕಾಯಃ ಸಮಾಹೂಯ ಘಟೋತ್ಕಚಂ|

07149009c ಜಟಾಸುರಿರ್ಭೈಮಸೇನಿಂ ನಾನಾಶಸ್ತ್ರೈರವಾಕಿರತ್||

ಹಾಗೆಯೇ ಆಗಲೆಂದು ಹೇಳಿ ಮಹಾಕಾಯ ಜಟಾಸುರಿಯು ಭೈಮಸೇನಿ ಘಟೋತ್ಕಚನನ್ನು ಕೂಗಿ ಕರೆದು ನಾನಾಶಸ್ತ್ರಗಳಿಂದ ಮುಸುಕಿದನು.

07149010a ಅಲಂಬಲಂ ಚ ಕರ್ಣಂ ಚ ಕುರುಸೈನ್ಯಂ ಚ ದುಸ್ತರಂ|

07149010c ಹೈಡಿಂಬಃ ಪ್ರಮಮಾಥೈಕೋ ಮಹಾವಾತೋಽಂಬುದಾನಿವ||

ಹೈಡಿಂಬನು ಒಬ್ಬನೇ ಕರ್ಣನನ್ನೂ, ದುಸ್ತರ ಕುರುಸೈನ್ಯವನ್ನೂ, ಅಲಂಬಲನನ್ನೂ ಭಿರುಗಾಳಿಯು ಮೋಡವನ್ನು ಹೇಗೋ ಹಾಗೆ ಚದುರಿಸಿಬಿಟ್ಟನು.

07149011a ತತೋ ಮಾಯಾಮಯಂ ದೃಷ್ಟ್ವಾ ರಥಂ ತೂರ್ಣಮಲಂಬಲಃ|

07149011c ಘಟೋತ್ಕಚಂ ಶರವ್ರಾತೈರ್ನಾನಾಲಿಂಗೈಃ ಸಮಾರ್ದಯತ್||

ಆಗ ಮಾಯಾಮಯ ಘಟೋತ್ಕಚನನ್ನು ನೋಡಿ ಅಲಂಬಲನು ಅವನನ್ನು ಶರವ್ರಾತಗಳಿಂದ ಕಾಣದಂತೆ ಮುಚ್ಚಿಬಿಟ್ಟನು.

07149012a ವಿದ್ಧ್ವಾ ಚ ಬಹುಭಿರ್ಬಾಣೈರ್ಭೈಮಸೇನಿಮಲಂಬಲಃ|

07149012c ವ್ಯದ್ರಾವಯಚ್ಚರವ್ರಾತೈಃ ಪಾಂಡವಾನಾಮನೀಕಿನೀಂ||

ಬಹಳ ಬಾಣಗಳಿಂದ ಭೈಮಸೇನಿಯನ್ನು ಗಾಯಗೊಳಿಸಿ ಅಲಂಬಲನು ಶರವ್ರಾತಗಳಿಂದ ಪಾಂಡವರ ಸೇನೆಯನ್ನು ಮುತ್ತಿದನು.

07149013a ತೇನ ವಿದ್ರಾವ್ಯಮಾಣಾನಿ ಪಾಂಡುಸೈನ್ಯಾನಿ ಮಾರಿಷ|

07149013c ನಿಶೀಥೇ ವಿಪ್ರಕೀರ್ಯಂತ ವಾತನುನ್ನಾ ಘನಾ ಇವ||

ಮಾರಿಷ! ಆ ರಾತ್ರಿವೇಳೆಯಲ್ಲಿ ಓಡಿ ಹೋಗುತ್ತಿದ್ದ ಪಾಂಡು ಸೇನೆಗಳು ಭಿರುಗಾಳಿಗೆ ಸಿಲುಕಿ ಚದುರಿ ಹೋಗುತ್ತಿರುವ ಮೋಡಗಳಂತೆ ಕಾಣುತ್ತಿದ್ದವು.

07149014a ಘಟೋತ್ಕಚಶರೈರ್ನುನ್ನಾ ತಥೈವ ಕುರುವಾಹಿನೀ|

07149014c ನಿಶೀಥೇ ಪ್ರಾದ್ರವದ್ರಾಜನ್ನುತ್ಸೃಜ್ಯೋಲ್ಕಾಃ ಸಹಸ್ರಶಃ||

ಅದೇ ರೀತಿ ಘಟೋತ್ಕಚನ ಶರಗಳಿಗೆ ಸಿಲುಕಿದ ಕುರುವಾಹಿನಿಯೂ ಕೂಡ ಆ ದಟ್ಟ ರಾತ್ರಿಯಲ್ಲಿ ಸಹಸ್ರಾರು ದೀವಟಿಗೆಗಳನ್ನು ಬಿಸುಟು ಓಡಿಹೋಗುತ್ತಿತ್ತು.

07149015a ಅಲಂಬಲಸ್ತತಃ ಕ್ರುದ್ಧೋ ಭೈಮಸೇನಿಂ ಮಹಾಮೃಧೇ|

07149015c ಆಜಘ್ನೇ ನಿಶಿತೈರ್ಬಾಣೈಸ್ತೋತ್ತ್ರೈರಿವ ಮಹಾದ್ವಿಪಂ||

ಕ್ರುದ್ಧ ಅಲಂಬಲನಾದರೋ ಆ ಮಹಾಯುದ್ಧದಲ್ಲಿ ಭೈಮಸೇನಿಯನ್ನು ಮಾವುತನು ಆನೆಯನ್ನು ತಿವಿಯುವಂತೆ ನಿಶಿತ ಬಾಣಗಳಿಂದ ಹೊಡೆದನು.

07149016a ತಿಲಶಸ್ತಸ್ಯ ತದ್ಯಾನಂ ಸೂತಂ ಸರ್ವಾಯುಧಾನಿ ಚ|

07149016c ಘಟೋತ್ಕಚಃ ಪ್ರಚಿಚ್ಚೇದ ಪ್ರಾಣದಚ್ಚಾತಿದಾರುಣಂ||

ಆಗ ಕ್ಷಣದಲ್ಲಿಯೇ ಘಟೋತ್ಕಚನು ತನ್ನ ಶತ್ರುವಿನ ರಥವನ್ನೂ, ಸೂತನನ್ನೂ, ಸರ್ವ ಆಯುಧಗಳನ್ನೂ ಪುಡಿಪುಡಿಮಾಡಿ, ಅತಿದಾರುಣವಾಗಿ ಗಹಗಹಿಸಿ ನಕ್ಕನು.

07149017a ತತಃ ಕರ್ಣಂ ಶರವ್ರಾತೈಃ ಕುರೂನನ್ಯಾನ್ಸಹಸ್ರಶಃ|

07149017c ಅಲಂಬಲಂ ಚಾಭ್ಯವರ್ಷನ್ಮೇಘೋ ಮೇರುಮಿವಾಚಲಂ||

ಅನಂತರ ಅವನು ಕರ್ಣನನ್ನೂ, ಅನ್ಯ ಕುರುಗಳನ್ನೂ ಮತ್ತು ಅಲಂಬಲನನ್ನೂ ಸಹಸ್ರಾರು ಶರವ್ರಾತಗಳಿಂದ ಮೇಘಗಳು ಮೇರುಪರ್ವತವನ್ನು ಹೇಗೋ ಹಾಗೆ ವರ್ಷಿಸಿದನು.

07149018a ತತಃ ಸಂಚುಕ್ಷುಭೇ ಸೈನ್ಯಂ ಕುರೂಣಾಂ ರಾಕ್ಷಸಾರ್ದಿತಂ|

07149018c ಉಪರ್ಯುಪರಿ ಚಾನ್ಯೋನ್ಯಂ ಚತುರಂಗಂ ಮಮರ್ದ ಹ||

ರಾಕ್ಷಸನಿಂದ ಆರ್ದಿತಗೊಂಡ ಕುರುಗಳ ಸೇನೆಯಲ್ಲಿ ಅಲ್ಲೋಲಕಲ್ಲೋಲವಾಯಿತು. ಮೇಲಿಂದಮೇಲೆ ಚತುರಂಗಬಲವು ಅನ್ಯೋನ್ಯರನ್ನು ಸಂಹರಿಸತೊಡಗಿತು.

07149019a ಜಟಾಸುರಿರ್ಮಹಾರಾಜ ವಿರಥೋ ಹತಸಾರಥಿಃ|

07149019c ಘಟೋತ್ಕಚಂ ರಣೇ ಕ್ರುದ್ಧೋ ಮುಷ್ಟಿನಾಭ್ಯಹನದ್ದೃಢಂ||

ಮಹಾರಾಜ! ವಿರಥನಾದ ಸಾರಥಿಯನ್ನೂ ಕಳೆದುಕೊಂಡ ಜಟಾಸುರಿಯು ರಣದಲ್ಲಿ ಕ್ರುದ್ಧನಾಗಿ ಘಟೋತ್ಕಚನನ್ನು ದೃಡ ಮುಷ್ಟಿಯಿಂದ ಹೊಡೆಯತೊಡಗಿದನು.

07149020a ಮುಷ್ಟಿನಾಭಿಹತಸ್ತೇನ ಪ್ರಚಚಾಲ ಘಟೋತ್ಕಚಃ|

07149020c ಕ್ಷಿತಿಕಂಪೇ ಯಥಾ ಶೈಲಃ ಸವೃಕ್ಷಗಣಗುಲ್ಮವಾನ್||

ಅವನ ಮುಷ್ಟಿಯಿಂದ ಹೊಡೆಯಲ್ಪಟ್ಟ ಘಟೋತ್ಕಚನು ಭೂಕಂಪವಾದಾಗ ವೃಕ್ಷಗಣಗುಲ್ಮಲಗಳೊಡನೆ ಶೈಲವು ಅಲುಗಾಡುವಂತೆ ತತ್ತರಿಸಿದನು.

07149021a ತತಃ ಸ ಪರಿಘಾಭೇನ ದ್ವಿಟ್ಸಂಘಘ್ನೇನ ಬಾಹುನಾ|

07149021c ಜಟಾಸುರಿಂ ಭೈಮಸೇನಿರವಧೀನ್ಮುಷ್ಟಿನಾ ಭೃಶಂ||

ಆಗ ಭೈಮಸೇನಿಯು ಪರಿಘದಂತಿದ್ದ ತನ್ನ ಬಾಹುಗಳನ್ನು ಮೇಲೆತ್ತಿ ಮುಷ್ಟಿಯಿಂದ ಜಟಾಸುರಿಯನ್ನು ಜೋರಾಗಿ ಗುದ್ದಿದನು.

07149022a ತಂ ಪ್ರಮಥ್ಯ ತತಃ ಕ್ರುದ್ಧಸ್ತೂರ್ಣಂ ಹೈಡಿಂಬಿರಾಕ್ಷಿಪತ್|

07149022c ದೋರ್ಭ್ಯಾಮಿಂದ್ರಧ್ವಜಾಭಾಭ್ಯಾಂ ನಿಷ್ಪಿಪೇಷ ಮಹೀತಲೇ||

ಕ್ರುದ್ಧ ಹೈಡಿಂಬನು ತಕ್ಷಣವೇ ಅವನನ್ನು ಕೆಳಕ್ಕೆ ಕೆಡವಿ ತನ್ನ ಎರಡೂ ಬಾಹುಗಳಿಂದ ಅವನನ್ನು ನೆಲಕ್ಕೆ ಅದುಮಿದನು.

07149023a ಅಲಂಬಲೋಽಪಿ ವಿಕ್ಷಿಪ್ಯ ಸಮುತ್ಕ್ಷಿಪ್ಯ ಚ ರಾಕ್ಷಸಂ|

07149023c ಘಟೋತ್ಕಚಂ ರಣೇ ರೋಷಾನ್ನಿಷ್ಪಿಪೇಷ ಮಹೀತಲೇ||

ಅಲಂಬಲನಾದರೋ ಆ ರಾಕ್ಷಸನ ಹಿಡಿತದಿಂದ ಬಿಡಿಸಿಕೊಂಡು ರಣದಲ್ಲಿ ರೋಷಾನ್ವಿತನಾಗಿ ಘಟೋತ್ಕಚನನ್ನು ನೆಲಕ್ಕೆ ಕೆಡವಿದನು.

07149024a ತಯೋಃ ಸಮಭವದ್ಯುದ್ಧಂ ಗರ್ಜತೋರತಿಕಾಯಯೋಃ|

07149024c ಘಟೋತ್ಕಚಾಲಂಬಲಯೋಸ್ತುಮುಲಂ ಲೋಮಹರ್ಷಣ||

ಆಗ ಅತಿಕಾಯರಾದ ಘಟೋತ್ಕಚ-ಅಲಂಬಲರಿಬ್ಬರ ನಡುವೆ ರೋಮಾಂಚಕಾರೀ ತುಮುಲ ಯುದ್ಧವು ಪ್ರಾರಂಬವಾಯಿತು.

07149025a ವಿಶೇಷಯಂತಾವನ್ಯೋನ್ಯಂ ಮಾಯಾಭಿರತಿಮಾಯಿನೌ|

07149025c ಯುಯುಧಾತೇ ಮಹಾವೀರ್ಯಾವಿಂದ್ರವೈರೋಚನಾವಿವ||

ಅನ್ಯೋನ್ಯರನ್ನು ಮೀರಿಸುತ್ತಾ ಆ ಮಯಾವಿ ಮತ್ತು ಅತಿಮಾಯಿ ಮಹಾವೀರರಿಬ್ಬರೂ ಇಂದ್ರ ವೈರೋಚನರಂತೆ ಯುದ್ಧಮಾಡಿದರು.

07149026a ಪಾವಕಾಂಬುನಿಧೀ ಭೂತ್ವಾ ಪುನರ್ಗರುಡತಕ್ಷಕೌ|

07149026c ಪುನರ್ಮೇಘಮಹಾವಾತೌ ಪುನರ್ವಜ್ರಮಹಾಚಲೌ|

07149026e ಪುನಃ ಕುಂಜರಶಾರ್ದೂಲೌ ಪುನಃ ಸ್ವರ್ಭಾನುಭಾಸ್ಕರೌ||

07149027a ಏವಂ ಮಾಯಾಶತಸೃಜಾವನ್ಯೋನ್ಯವಧಕಾಂಕ್ಷಿಣೌ|

07149027c ಭೃಶಂ ಚಿತ್ರಮಯುಧ್ಯೇತಾಮಲಂಬಲಘಟೋತ್ಕಚೌ||

ಅಗ್ನಿ ಮತ್ತು ನೀರಾಗಿ, ಪುನಃ ಗರುಡ-ತಕ್ಷಕರಾಗಿ, ಪುನಃ ಮೋಡ-ಭಿರುಗಾಳಿಗಳಾಗಿ, ಪುನಃ ವಜ್ರ-ಮಹಾಚಲಗಳಾಗಿ, ಪುನಃ ಆನೆ-ಸಿಂಹಗಳಾಗಿ, ಪುನಃ ರಾಹು-ಭಾಸ್ಕರರಾಗಿ  - ಈ ರೀತಿ ನೂರಾರು ಮಾಯೆಗಳನ್ನು ಸೃಷ್ಟಿಸುತ್ತಾ ಅನ್ಯೋನ್ಯರನ್ನು ವಧಿಸಲು ಬಯಸಿ ಅಲಂಬಲ ಘಟೋತ್ಕಚರು ಅತ್ಯಂತ ವಿಚಿತ್ರವಾದ ಯುದ್ಧವನ್ನು ಹೋರಾಡಿದರು.

07149028a ಪರಿಘೈಶ್ಚ ಗದಾಭಿಶ್ಚ ಪ್ರಾಸಮುದ್ಗರಪಟ್ಟಿಶೈಃ|

07149028c ಮುಸಲೈಃ ಪರ್ವತಾಗ್ರೈಶ್ಚ ತಾವನ್ಯೋನ್ಯಂ ನಿಜಘ್ನತುಃ||

ಪರಿಘ, ಗದೆ, ಪ್ರಾಸ, ಮುದ್ಗರ, ಪಟ್ಟಿಶ, ಮುಸಲ, ಪರ್ವತಾಗ್ರಗಳಿಂದ ಅವರು ಅನ್ಯೋನ್ಯರನ್ನು ಹೊಡೆದರು.

07149029a ಹಯಾಭ್ಯಾಂ ಚ ಗಜಾಭ್ಯಾಂ ಚ ಪದಾತಿರಥಿನೌ ಪುನಃ|

07149029c ಯುಯುಧಾತೇ ಮಹಾಮಾಯೌ ರಾಕ್ಷಸಪ್ರವರೌ ಯುಧಿ||

ಮಹಾಮಾಯಾವಿ ಆ ರಾಕ್ಷಸಪ್ರವರರು ಯುದ್ಧದಲ್ಲಿ ಕುದುರೆಗಳ ಮೇಲೆ, ಆನೆಗಳ ಮೇಲೆ, ಪದಾತಿಗಳಾಗಿ ಮತ್ತೆ ಪುನಃ ರಥಗಳ ಮೇಳೆ ಯುದ್ಧಮಾಡಿದರು.

07149030a ತತೋ ಘಟೋತ್ಕಚೋ ರಾಜನ್ನಲಂಬಲವಧೇಪ್ಸಯಾ|

07149030c ಉತ್ಪಪಾತ ಭೃಶಂ ಕ್ರುದ್ಧಃ ಶ್ಯೇನವನ್ನಿಪಪಾತ ಹ||

07149031a ಗೃಹೀತ್ವಾ ಚ ಮಹಾಕಾಯಂ ರಾಕ್ಷಸೇಂದ್ರಮಲಂಬಲಂ|

07149031c ಉದ್ಯಮ್ಯ ನ್ಯವಧೀದ್ಭೂಮೌ ಮಯಂ ವಿಷ್ಣುರಿವಾಹವೇ||

ರಾಜನ್! ಆಗ ಘಟೋತ್ಕಚನು ಅಲಂಬಲನನ್ನು ವಧಿಸಲು ಬಯಸಿ ಬಹಳ ಕ್ರುದ್ಧನಾಗಿ ಗಿಡುಗನಂತೆ ಮೇಲೆ ಹಾರಿ ಕೆಳಗೆ ಧುಮುಕಿ, ಆ ಮಹಾಕಾಯ ರಾಕ್ಷಸ ಅಲಂಬಲನನ್ನು ವಿಷ್ಣುವು ಯುದ್ಧದಲ್ಲಿ ಮಯನನ್ನು ಹೇಗೋ ಹಾಗೆ ಹಿಡಿದು ಮೇಲೆ ಹಾರಿ ಕೆಳಗೆ ನೆಲದ ಮೇಲೆ ಚಚ್ಚಿದನು.

07149032a ತತೋ ಘಟೋತ್ಕಚಃ ಖಡ್ಗಮುದ್ಗೃಹ್ಯಾದ್ಭುತದರ್ಶನಂ|

07149032c ಚಕರ್ತ ಕಾಯಾದ್ಧಿ ಶಿರೋ ಭೀಮಂ ವಿಕೃತದರ್ಶನಂ||

ಆಗ ಘಟೋತ್ಕಚನು ಅದ್ಭುತವಾಗಿ ಕಾಣುತ್ತಿದ್ದ ಖಡ್ಗವನ್ನು ಮೇಲೆತ್ತಿ ವಿಕೃತವಾಗಿ ಕಾಣುತ್ತಿದ್ದ ಅಲಂಬಲನ ಶಿರವನ್ನು ಕಾಯದಿಂದ ಕತ್ತರಿಸಿದನು.

07149033a ತಚ್ಚಿರೋ ರುಧಿರಾಭ್ಯಕ್ತಂ ಗೃಹ್ಯ ಕೇಶೇಷು ರಾಕ್ಷಸಃ|

07149033c ಘಟೋತ್ಕಚೋ ಯಯಾವಾಶು ದುರ್ಯೋಧನರಥಂ ಪ್ರತಿ||

ರಕ್ತವನ್ನು ಸುರಿಸುತ್ತಿದ್ದ ಆ ಶಿರವನ್ನು ಕೂದಲಿನಲ್ಲಿ ಹಿಡಿದು ರಾಕ್ಷಸ ಘಟೋತ್ಕಚನು ದುರ್ಯೋಧನನ ರಥದ ಕಡೆ ನಡೆದನು.

07149034a ಅಭ್ಯೇತ್ಯ ಚ ಮಹಾಬಾಹುಃ ಸ್ಮಯಮಾನಃ ಸ ರಾಕ್ಷಸಃ|

07149034c ರಥೇಽಸ್ಯ ನಿಕ್ಷಿಪ್ಯ ಶಿರೋ ವಿಕೃತಾನನಮೂರ್ಧಜಂ|

07149034e ಪ್ರಾಣದದ್ಭೈರವಂ ನಾದಂ ಪ್ರಾವೃಷೀವ ಬಲಾಹಕಃ||

ಅವನ ಬಳಿ ಹೋಗಿ ನಗುತ್ತಾ ಮಹಾಬಾಹು ರಾಕ್ಷಸನು ವಿಕಾರ ಕೂದಲುಗಳುಳ್ಳ ಆ ಶಿರವನ್ನು ಅವನ ರಥದ ಮೇಲೆ ಎಸೆದು ಮಳೆಗಾಲದ ಮೋಡದಂತೆ ಭೈರವವಾಗಿ ಗರ್ಜಿಸಿದನು.

07149035a ಅಬ್ರವೀಚ್ಚ ತತೋ ರಾಜನ್ದುರ್ಯೋಧನಮಿದಂ ವಚಃ|

07149035c ಏಷ ತೇ ನಿಹತೋ ಬಂಧುಸ್ತ್ವಯಾ ದೃಷ್ಟೋಽಸ್ಯ ವಿಕ್ರಮಃ|

07149035e ಪುನರ್ದ್ರಷ್ಟಾಸಿ ಕರ್ಣಸ್ಯ ನಿಷ್ಠಾಮೇತಾಂ ತಥಾತ್ಮನಃ||

ರಾಜನ್! ಆಗ ಅವನು ದುರ್ಯೋಧನನಿಗೆ ಈ ಮಾತನ್ನಾಡಿದನು: “ಇಗೋ! ನಿನ್ನ ವಿಕ್ರಮಿ ಬಂಧುವು ಹತನಾಗಿರುವುದನ್ನು ನೋಡು! ಇವನಂತೆಯೇ ನಿನಗೆ ನಿಷ್ಠನಾಗಿರುವ ಕರ್ಣನನ್ನೂ ಕೂಡ ಪುನಃ ನೋಡಲಿದ್ದೀಯೆ!”

07149036a ಏವಮುಕ್ತ್ವಾ ತತಃ ಪ್ರಾಯಾತ್ಕರ್ಣಂ ಪ್ರತಿ ಜನೇಶ್ವರ|

07149036c ಕಿರಂ ಶರಶತಾಂಸ್ತೀಕ್ಷ್ಣಾನ್ವಿಮುಂಚನ್ಕರ್ಣಮೂರ್ಧನಿ||

ಜನೇಶ್ವರ! ಹೀಗೆ ಹೇಳಿ ಅವನು ಕರ್ಣನ ಮೇಲೆ ನೂರಾರು ತೀಕ್ಷ್ಣ ಶರಗಳನ್ನು ಎರಚುತ್ತಾ ಅವನ ಕಡೆಗೇ ಹೋದನು.

07149037a ತತಃ ಸಮಭವದ್ಯುದ್ಧಂ ಘೋರರೂಪಂ ಭಯಾನಕಂ|

07149037c ವಿಸ್ಮಾಪನಂ ಮಹಾರಾಜ ನರರಾಕ್ಷಸಯೋರ್ಮೃಧೇ||

ಮಹಾರಾಜ! ಅನಂತರ ಆ ನರ-ರಾಕ್ಷಸರ ಮಧ್ಯೆ ರಣದಲ್ಲಿ ಘೋರರೂಪದ, ಭಯಾನಕ, ವಿಸ್ಮಯದಾಯಕ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಲಂಬುಷವಧೇ ಏಕೋನಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಲಂಬುಷವಧ ಎನ್ನುವ ನೂರಾನಲ್ವತ್ತೊಂಭನೇ ಅಧ್ಯಾಯವು.

Image result for flowers against white background

Comments are closed.