Drona Parva: Chapter 144

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೪

ನಕುಲ-ಶಕುನಿಯರ ಯುದ್ಧ (೧-೧೪). ಶಿಖಂಡಿ-ಕೃಪರ ಯುದ್ಧ (೧೫-೨೮). ರಾತ್ರಿಯುದ್ಧದ ವರ್ಣನೆ (೨೯-೪೨).

07144001 ಸಂಜಯ ಉವಾಚ|

07144001a ನಕುಲಂ ರಭಸಂ ಯುದ್ಧೇ ನಿಘ್ನಂತಂ ವಾಹಿನೀಂ ತವ|

07144001c ಅಭ್ಯಯಾತ್ಸೌಬಲಃ ಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಸಂಜಯನು ಹೇಳಿದನು: “ಯುದ್ಧದಲ್ಲಿ ರಭಸದಿಂದ ನಿನ್ನ ಸೇನೆಯನ್ನು ಸಂಹರಿಸುತ್ತಿದ್ದ ನಕುಲನನ್ನು ಕ್ರುದ್ಧ ಸೌಬಲನು ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು.

07144002a ಕೃತವೈರೌ ತು ತೌ ವೀರಾವನ್ಯೋನ್ಯವಧಕಾಂಕ್ಷಿಣೌ|

07144002c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ||

ಬದ್ಧವೈರಿಗಳಾಗಿದ್ದ ಆ ವೀರರಿಬ್ಬರೂ ಅನ್ಯೋನ್ಯರನ್ನು ವಧಿಸಲು ಬಯಸಿ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಅನ್ಯೋನ್ಯರನ್ನು ಪ್ರಹರಿಸಿದರು.

07144003a ಯಥೈವ ಸೌಬಲಃ ಕ್ಷಿಪ್ರಂ ಶರವರ್ಷಾಣಿ ಮುಂಚತಿ|

07144003c ತಥೈವ ನಕುಲೋ ರಾಜಂ ಶಿಕ್ಷಾಂ ಸಂದರ್ಶಯನ್ಯುಧಿ||

ರಾಜನ್! ಸೌಬಲನು ಹೇಗೆ ಕ್ಷಿಪ್ರವಾಗಿ ಶರವರ್ಷಗಳನ್ನು ಸುರಿಸುತ್ತಿದ್ದನೋ ಹಾಗೆ ನಕುಲನು ತನ್ನ ಯುದ್ಧನೈಪುಣ್ಯವನ್ನು ಪ್ರದರ್ಶಿಸುತ್ತಿದ್ದನು.

07144004a ತಾವುಭೌ ಸಮರೇ ಶೂರೌ ಶರಕಂಟಕಿನೌ ತದಾ|

07144004c ವ್ಯರಾಜೇತಾಂ ಮಹಾರಾಜ ಕಂಟಕೈರಿವ ಶಾಲ್ಮಲೀ||

ಮಹಾರಾಜ! ಸಮರದಲ್ಲಿ ಶರಗಳಿಂದ ಚುಚ್ಚಲ್ಪಟ್ಟಿದ್ದ ಆ ಇಬ್ಬರು ಶೂರರು ಮುಳ್ಳುಗಳಿದ್ದ ಮುಳ್ಳುಹಂದಿಗಳಂತೆಯೇ ವಿರಾಜಿಸಿದರು.

07144005a ಸುಜಿಹ್ಮಂ ಪ್ರೇಕ್ಷಮಾಣೌ ಚ ರಾಜನ್ವಿವೃತಲೋಚನೌ|

07144005c ಕ್ರೋಧಸಂರಕ್ತನಯನೌ ನಿರ್ದಹಂತೌ ಪರಸ್ಪರಂ||

ರಾಜನ್! ಅವರಿಬ್ಬರೂ ಕಣ್ಣುಗಳನ್ನು ತೆರೆದು ಕ್ರೋಧದಿಂದ ಕೆಂಪಾದ ಕಣ್ಣುಗಳಿಂದ ಪರಸ್ಪರರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಿದ್ದರು.

07144006a ಸ್ಯಾಲಸ್ತು ತವ ಸಂಕ್ರುದ್ಧೋ ಮಾದ್ರೀಪುತ್ರಂ ಹಸನ್ನಿವ|

07144006c ಕರ್ಣಿನೈಕೇನ ವಿವ್ಯಾಧ ಹೃದಯೇ ನಿಶಿತೇನ ಹ||

ಸಂಕ್ರುದ್ಧನಾದ ನಿನ್ನ ಬಾವಮೈದುನನಾದರೋ ನಸುನಗುತ್ತಾ ನಿಶಿತ ಕರ್ಣಿಕದಿಂದ ಮಾದ್ರೀಪುತ್ರನ ಹೃದಯಕ್ಕೆ ಹೊಡೆದನು.

07144007a ನಕುಲಸ್ತು ಭೃಶಂ ವಿದ್ಧಃ ಸ್ಯಾಲೇನ ತವ ಧನ್ವಿನಾ|

07144007c ನಿಷಸಾದ ರಥೋಪಸ್ಥೇ ಕಶ್ಮಲಂ ಚೈನಮಾವಿಶತ್||

ನಿನ್ನ ಧನ್ವಿ ಬಾವಮೈದುನನಿಂದ ಅತಿಯಾಗಿ ಗಾಯಗೊಂಡ ನಕುಲನಾದರೋ ಪೀಠದಿಂದ ಪಕ್ಕಕ್ಕೆ ಸರಿದು ಮೂರ್ಛಿತನಾದನು.

07144008a ಅತ್ಯಂತವೈರಿಣಂ ದೃಪ್ತಂ ದೃಷ್ಟ್ವಾ ಶತ್ರುಂ ತಥಾಗತಂ|

07144008c ನನಾದ ಶಕುನೀ ರಾಜಂಸ್ತಪಾಂತೇ ಜಲದೋ ಯಥಾ||

ರಾಜನ್! ಅತ್ಯಂತ ವೈರಿ ಶತ್ರುವಿನ ಆ ಸ್ಥಿತಿಯನ್ನು ಕಂಡು ಶಕುನಿಯು ಬೇಸಗೆಯ ಅಂತ್ಯದಲ್ಲಿ ಮೋಡವು ಗುಡುಗುವಂತೆ ಜೋರಾಗಿ ಗರ್ಜಿಸಿದನು.

07144009a ಪ್ರತಿಲಭ್ಯ ತತಃ ಸಂಜ್ಞಾಂ ನಕುಲಃ ಪಾಂಡುನಂದನಃ|

07144009c ಅಭ್ಯಯಾತ್ಸೌಬಲಂ ಭೂಯೋ ವ್ಯಾತ್ತಾನನ ಇವಾಂತಕಃ||

ಆಗ ಪಾಂಡುನಂದನ ನಕುಲನು ಸಂಜ್ಞೆಯನ್ನು ಪಡೆದು ಬಾಯಿಕಳೆದ ಅಂತಕನಂತೆ ಸೌಬಲನನ್ನು ಇನ್ನೊಮ್ಮೆ ಆಕ್ರಮಣಿಸಿದನು.

07144010a ಸಂಕ್ರುದ್ಧಃ ಶಕುನಿಂ ಷಷ್ಟ್ಯಾ ವಿವ್ಯಾಧ ಭರತರ್ಷಭ|

07144010c ಪುನಶ್ಚೈವ ಶತೇನೈವ ನಾರಾಚಾನಾಂ ಸ್ತನಾಂತರೇ||

ಆ ಸಂಕ್ರುದ್ಧ ಭರತರ್ಷಭನು ಶಕುನಿಯನ್ನು ಅರವತ್ತು ನಾರಾಚಗಳಿಂದ ಹೊಡೆದು ಪುನಃ ನೂರರಿಂದ ಅವನ ಎದೆಯನ್ನು ಪ್ರಹರಿಸಿದನು.

07144011a ತತೋಽಸ್ಯ ಸಶರಂ ಚಾಪಂ ಮುಷ್ಟಿದೇಶೇ ಸ ಚಿಚ್ಚಿದೇ|

07144011c ಧ್ವಜಂ ಚ ತ್ವರಿತಂ ಚಿತ್ತ್ವಾ ರಥಾದ್ಭೂಮಾವಪಾತಯತ್||

ಅನಂತರ ಶಕುನಿಯ ಶರ ಮತ್ತು ಚಾಪವನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿ, ತ್ವರೆಮಾಡಿ ಧ್ವಜವನ್ನು ಮತ್ತು ಅವನನ್ನು ಕೂಡ ರಥದಿಂದ ಭೂಮಿಯ ಮೇಲೆ ಕೆಡವಿದನು.

07144012a ಸೋಽತಿವಿದ್ಧೋ ಮಹಾರಾಜ ರಥೋಪಸ್ಥ ಉಪಾವಿಶತ್|

07144012c ತಂ ವಿಸಂಜ್ಞಂ ನಿಪತಿತಂ ದೃಷ್ಟ್ವಾ ಸ್ಯಾಲಂ ತವಾನಘ|

07144012e ಅಪೋವಾಹ ರಥೇನಾಶು ಸಾರಥಿರ್ಧ್ವಜಿನೀಮುಖಾತ್||

ಮಹಾರಾಜ! ಅನಘ! ಅತಿಯಾಗಿ ಗಾಯಗೊಂಡು ಮೂರ್ಛಿತನಾಗಿ ಬಿದ್ದ ನಿನ್ನ ಬಾವ ಮೈದುನನು ನೋಡಿ ಅವನ ಸಾರಥಿಯು ಅವನನ್ನು ರಥದ ಮೇಲೆ ಕುಳ್ಳಿರಿಸಿ ರಥವನ್ನು ದೂರ ಕೊಂಡೊಯ್ದನು.

07144013a ತತಃ ಸಂಚುಕ್ರುಶುಃ ಪಾರ್ಥಾ ಯೇ ಚ ತೇಷಾಂ ಪದಾನುಗಾಃ|

07144013c ನಿರ್ಜಿತ್ಯ ಚ ರಣೇ ಶತ್ರೂನ್ನಕುಲಃ ಶತ್ರುತಾಪನಃ|

07144013e ಅಬ್ರವೀತ್ಸಾರಥಿಂ ಕ್ರುದ್ಧೋ ದ್ರೋಣಾನೀಕಾಯ ಮಾಂ ವಹ||

ರಣದಲ್ಲಿ ಶತ್ರುವನ್ನು ಸೋಲಿಸಿದ ಶತ್ರುತಾಪನ ಪಾರ್ಥ ನಕುಲ ಮತ್ತು ಅವನ ಅನುಯಾಯಿಗಳು ಜೋರಾಗಿ ಗರ್ಜಿಸಿದರು. ಕ್ರುದ್ಧನಾದ ಅವನು ದ್ರೋಣಸೇನೆಯ ಕಡೆ ತನ್ನನ್ನು ಕರೆದುಕೊಂಡು ಹೋಗುವಂತೆ ಸಾರಥಿಗೆ ಹೇಳಿದನು.

07144014a ತಸ್ಯ ತದ್ವಚನಂ ಶ್ರುತ್ವಾ ಮಾದ್ರೀಪುತ್ರಸ್ಯ ಧೀಮತಃ|

07144014c ಪ್ರಾಯಾತ್ತೇನ ರಣೇ ರಾಜನ್ಯೇನ ದ್ರೋಣೋಽನ್ವಯುಧ್ಯತ||

ರಾಜನ್! ಮಾದ್ರೀಪುತ್ರನ ಆ ಮಾತನ್ನು ಕೇಳಿ ಧೀಮತ ಸಾರಥಿಯು ದ್ರೋಣನು ಯುದ್ಧಮಾಡುತ್ತಿರುವಲ್ಲಿಗೆ ಅವನನ್ನು ಕೊಂಡೊಯ್ದನು.

07144015a ಶಿಖಂಡಿನಂ ತು ಸಮರೇ ದ್ರೋಣಪ್ರೇಪ್ಸುಂ ವಿಶಾಂ ಪತೇ|

07144015c ಕೃಪಃ ಶಾರದ್ವತೋ ಯತ್ತಃ ಪ್ರತ್ಯುದ್ಗಚ್ಚತ್ಸುವೇಗಿತಃ||

ವಿಶಾಂಪತೇ! ಸಮರದಲ್ಲಿ ದ್ರೋಣನ ಬಳಿ ಹೋಗುತ್ತಿದ್ದ ಶಿಖಂಡಿಯನ್ನು ಪ್ರಯತ್ನಪಟ್ಟು ಕೃಪ ಶಾರದ್ವತನು ವೇಗದಿಂದ ಎದುರಿಸಿ ತಡೆದನು.

07144016a ಗೌತಮಂ ದ್ರುತಮಾಯಾಂತಂ ದ್ರೋಣಾಂತಿಕಮರಿಂದಮಂ|

07144016c ವಿವ್ಯಾಧ ನವಭಿರ್ಭಲ್ಲೈಃ ಶಿಖಂಡೀ ಪ್ರಹಸನ್ನಿವ||

ದ್ರೋಣನ ಸಮೀಪದಿಂದ ವೇಗದಿಂದ ತನ್ನ ಕಡೆಬರುತ್ತಿದ್ದ ಅರಿಂದಮ ಗೌತಮನನ್ನು ಶಿಖಂಡಿಯು ನಗುತ್ತಾ ಒಂಭತ್ತು ಭಲ್ಲಗಳಿಂದ ಪ್ರಹರಿಸಿದನು.

07144017a ತಮಾಚಾರ್ಯೋ ಮಹಾರಾಜ ವಿದ್ಧ್ವಾ ಪಂಚಭಿರಾಶುಗೈಃ|

07144017c ಪುನರ್ವಿವ್ಯಾಧ ವಿಂಶತ್ಯಾ ಪುತ್ರಾಣಾಂ ಪ್ರಿಯಕೃತ್ತವ||

ಮಹಾರಾಜ! ನಿನ್ನ ಪುತ್ರರಿಗೆ ಪ್ರಿಯವನ್ನುಂಟು ಮಾಡುತ್ತಿದ್ದ ಆಚಾರ್ಯನು ಅವನನ್ನು ಐದು ಆಶುಗಗಳಿಂದ ಹೊಡೆದು ಪುನಃ ಇಪ್ಪತ್ತರಿಂದ ಪ್ರಹರಿಸಿದನು.

07144018a ಮಹದ್ಯುದ್ಧಂ ತಯೋರಾಸೀದ್ಘೋರರೂಪಂ ವಿಶಾಂ ಪತೇ|

07144018c ಯಥಾ ದೇವಾಸುರೇ ಯುದ್ಧೇ ಶಂಬರಾಮರರಾಜಯೋಃ||

ವಿಶಾಂಪತೇ! ದೇವಾಸುರರ ಯುದ್ಧದಲ್ಲಿ ಶಂಬರ ಮತ್ತು ಅಮರರಾಜರ ನಡುವೆ ನಡೆದಂತೆ ಅವರಿಬ್ಬರ ನಡುವೆ ಘೋರರೂಪದ ಮಹಾಯುದ್ಧವು ನಡೆಯಿತು.

07144019a ಶರಜಾಲಾವೃತಂ ವ್ಯೋಮ ಚಕ್ರತುಸ್ತೌ ಮಹಾರಥೌ|

07144019c ಪ್ರಕೃತ್ಯಾ ಘೋರರೂಪಂ ತದಾಸೀದ್ಘೋರತರಂ ಪುನಃ||

ಆ ಇಬ್ಬರು ಮಹಾರಥರೂ ಆಕಾಶವನ್ನು ಶರಜಾಲಗಳಿಂದ ಮುಚ್ಚಿಬಿಟ್ಟರು. ಘೋರರೂಪವನ್ನು ತಾಳಿದ್ದ ಪ್ರಕೃತಿಯು ಅದರಿಂದಾಗಿ ಇನ್ನೂ ಘೋರವಾಗಿ ಕಾಣುತ್ತಿತ್ತು.

07144020a ರಾತ್ರಿಶ್ಚ ಭರತಶ್ರೇಷ್ಠ ಯೋಧಾನಾಂ ಯುದ್ಧಶಾಲಿನಾಂ|

07144020c ಕಾಲರಾತ್ರಿನಿಭಾ ಹ್ಯಾಸೀದ್ಘೋರರೂಪಾ ಭಯಾವಹಾ||

ಭರತಶ್ರೇಷ್ಠ! ಯುದ್ಧಾಸಕ್ತರಾಗಿದ್ದ ಯೋಧರಿಗೂ ಆ ಕಾಲರಾತ್ರಿಯು ಘೋರರೂಪವನ್ನು ತಾಳಿ ಭಯವನ್ನುಂಟುಮಾಡುತ್ತಿತ್ತು.

07144021a ಶಿಖಂಡೀ ತು ಮಹಾರಾಜ ಗೌತಮಸ್ಯ ಮಹದ್ಧನುಃ|

07144021c ಅರ್ಧಚಂದ್ರೇಣ ಚಿಚ್ಚೇದ ಸಜ್ಯಂ ಸವಿಶಿಖಂ ತದಾ||

ಮಹಾರಾಜ! ಶಿಖಂಡಿಯಾದರೋ ಅರ್ಧಚಂದ್ರಾಕಾರದ ವಿಶಿಖವನ್ನು ಹೂಡಿ ಗೌತಮನ ಮಹಾಧನುಸ್ಸನ್ನು ತುಂಡರಿಸಿದನು.

07144022a ತಸ್ಯ ಕ್ರುದ್ಧಃ ಕೃಪೋ ರಾಜಂ ಶಕ್ತಿಂ ಚಿಕ್ಷೇಪ ದಾರುಣಾಂ|

07144022c ಸ್ವರ್ಣದಂಡಾಮಕುಂಠಾಗ್ರಾಂ ಕರ್ಮಾರಪರಿಮಾರ್ಜಿತಾಂ||

ರಾಜನ್! ಕ್ರುದ್ಧ ಕೃಪನು ಅವನ ಮೇಲೆ ಕಮ್ಮಾರನಿಂದ ಮಾಡಲ್ಪಟ್ಟ ಸ್ವರ್ಣದ ಹಿಡಿ ಮತ್ತು ಮುಳ್ಳಿನ ತುದಿಯುಳ್ಳ ದಾರುಣ ಶಕ್ತಿಯನ್ನು ಎಸೆದನು.

07144023a ತಾಮಾಪತಂತೀಂ ಚಿಚ್ಚೇದ ಶಿಖಂಡೀ ಬಹುಭಿಃ ಶರೈಃ|

07144023c ಸಾಪತನ್ಮೇದಿನೀಂ ದೀಪ್ತಾ ಭಾಸಯಂತೀ ಮಹಾಪ್ರಭಾ||

ಬೀಳುತ್ತಿದ್ದ ಅದನ್ನು ಶಿಖಂಡಿಯು ಅನೇಕ ಶರಗಳಿಂದ ತುಂಡರಿಸಿದನು. ಮಹಾಪ್ರಭೆಯ ಆ ಶಕ್ತಿಯು ಬೆಂಕಿಯಿಂದ ಬೆಳಗುತ್ತಾ ಭೂಮಿಯ ಮೇಲೆ ಬಿದ್ದಿತು.

07144024a ಅಥಾನ್ಯದ್ಧನುರಾದಾಯ ಗೌತಮೋ ರಥಿನಾಂ ವರಃ|

07144024c ಪ್ರಾಚ್ಚಾದಯಚ್ಚಿತೈರ್ಬಾಣೈರ್ಮಹಾರಾಜ ಶಿಖಂಡಿನಂ||

ಮಹಾರಾಜ! ತಕ್ಷಣವೇ ರಥಿಗಳಲ್ಲಿ ಶ್ರೇಷ್ಠ ಗೌತಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಿಶಿತ ಬಾಣಗಳಿಂದ ಶಿಖಂಡಿಯನ್ನು ಮುಚ್ಚಿಬಿಟ್ಟನು.

07144025a ಸ ಚಾದ್ಯಮಾನಃ ಸಮರೇ ಗೌತಮೇನ ಯಶಸ್ವಿನಾ|

07144025c ವ್ಯಷೀದತ ರಥೋಪಸ್ಥೇ ಶಿಖಂಡೀ ರಥಿನಾಂ ವರಃ||

ಸಮರದಲ್ಲಿ ಯಶಸ್ವಿ ಗೌತಮನಿಂದ ಗಾಯಗೊಂಡ ರಥಿಗಳಲ್ಲಿ ಶ್ರೇಷ್ಠ ಶಿಖಂಡಿಯು ರಥದಲ್ಲಿ ಸರಿದು ಕುಳಿತುಕೊಂಡನು.

07144026a ಸೀದಂತಂ ಚೈನಮಾಲೋಕ್ಯ ಕೃಪಃ ಶಾರದ್ವತೋ ಯುಧಿ|

07144026c ಆಜಘ್ನೇ ಬಹುಭಿರ್ಬಾಣೈರ್ಜಿಘಾಂಸನ್ನಿವ ಭಾರತ||

ಭಾರತ! ಯುದ್ಧದಲ್ಲಿ ಅವನು ಕುಸಿದುದನ್ನು ನೋಡಿ ಕೃಪ ಶಾರದ್ವತನು ಕೊಲ್ಲುವನೋ ಎನ್ನುವಂತೆ ಅವನನ್ನು ಅನೇಕ ಬಾಣಗಳಿಂದ ಹೊಡೆದನು.

07144027a ವಿಮುಖಂ ತಂ ರಣೇ ದೃಷ್ಟ್ವಾ ಯಾಜ್ಞಸೇನಿಂ ಮಹಾರಥಂ|

07144027c ಪಾಂಚಾಲಾಃ ಸೋಮಕಾಶ್ಚೈವ ಪರಿವವ್ರುಃ ಸಮಂತತಃ||

ರಣದಲ್ಲಿ ಮಹಾರಥಿ ಯಾಜ್ಞಸೇನಿಯು ವಿಮುಖನಾದುದನ್ನು ನೋಡಿ ಪಾಂಚಾಲ-ಸೋಮಕರು ಎಲ್ಲಕಡೆಗಳಿಂದ ಸುತ್ತುವರೆದರು.

07144028a ತಥೈವ ತವ ಪುತ್ರಾಶ್ಚ ಪರಿವವ್ರುರ್ದ್ವಿಜೋತ್ತಮಂ|

07144028c ಮಹತ್ಯಾ ಸೇನಯಾ ಸಾರ್ಧಂ ತತೋ ಯುದ್ಧಮಭೂತ್ಪುನಃ||

ಹಾಗೆಯೇ ನಿನ್ನ ಪುತ್ರರೂ ಕೂಡ ದ್ವಿಜೋತ್ತಮನನ್ನು ಸುತ್ತುವರೆದರು. ಆಗ ಮಹಾಸೇನೆಗಳೊಡನೆ ಪುನಃ ಯುದ್ಧವು ನಡೆಯಿತು.

07144029a ರಥಾನಾಂ ಚ ರಣೇ ರಾಜನ್ನನ್ಯೋನ್ಯಮಭಿಧಾವತಾಂ|

07144029c ಬಭೂವ ತುಮುಲಃ ಶಬ್ದೋ ಮೇಘಾನಾಂ ನದತಾಮಿವ||

ರಾಜನ್! ರಣದಲ್ಲಿ ಅನ್ಯೋನ್ಯರನ್ನು ಆಕ್ರಮಣಿಸುತ್ತಿದ್ದ ಆ ರಥಿಗಳ ತುಮುಲಶಬ್ಧವು ಮೋಡಗಳ ಗುಡುಗುಗಳಂತೆ ಕೇಳಿಬರುತ್ತಿತ್ತು.

07144030a ದ್ರವತಾಂ ಸಾದಿನಾಂ ಚೈವ ಗಜಾನಾಂ ಚ ವಿಶಾಂ ಪತೇ|

07144030c ಅನ್ಯೋನ್ಯಮಭಿತೋ ರಾಜನ್ಕ್ರೂರಮಾಯೋಧನಂ ಬಭೌ||

ವಿಶಾಂಪತೇ! ರಾಜನ್! ಓಡಿಬಂದು ಪರಸ್ಪರರನ್ನು ಆಕ್ರಮಣಿಸುತ್ತಿದ್ದ ಕುದುರೆಸವಾರರ ಮತ್ತು ಆನೆಗಳ ಯುದ್ಧವು ಕ್ರೂರವಾಗಿ ಪರಿಣಮಿಸಿತು.

07144031a ಪತ್ತೀನಾಂ ದ್ರವತಾಂ ಚೈವ ಪದಶಬ್ದೇನ ಮೇದಿನೀ|

07144031c ಅಕಂಪತ ಮಹಾರಾಜ ಭಯತ್ರಸ್ತೇವ ಚಾಂಗನಾ||

ಮಹಾರಾಜ! ಓಡುತ್ತಿದ್ದ ಪದಾತಿಗಳ ಕಾಲುಶಬ್ಧಗಳಿಂದ ಮೇದಿನಿಯು ಭಯದಿಂದ ನಡುಗುತ್ತಿದ್ದ ಅಂಗನೆಯಂತೆ ಕಂಪಿಸಿತು.

07144032a ರಥಾ ರಥಾನ್ಸಮಾಸಾದ್ಯ ಪ್ರದ್ರುತಾ ವೇಗವತ್ತರಂ|

07144032c ನ್ಯಗೃಹ್ಣನ್ಬಹವೋ ರಾಜಂ ಶಲಭಾನ್ವಾಯಸಾ ಇವ||

ರಾಜನ್! ವೇಗದಿಂದ ಓಡುತ್ತಿದ್ದ ರಥಿಗಳು ರಥಿಗಳನ್ನು ತಲುಪಿ ಕಾಗೆಗಳು ಮಿಡತೆಹುಳಗಳನ್ನು ಹೇಗೋ ಹಾಗೆ ಅನೇಕರನ್ನು ಹಿಡಿದು ಸಂಹರಿಸುತ್ತಿದ್ದರು.

07144033a ತಥಾ ಗಜಾನ್ಪ್ರಭಿನ್ನಾಂಶ್ಚ ಸುಪ್ರಭಿನ್ನಾ ಮಹಾಗಜಾಃ|

07144033c ತಸ್ಮಿನ್ನೇವ ಪದೇ ಯತ್ತಾ ನಿಗೃಹ್ಣಂತಿ ಸ್ಮ ಭಾರತ||

ಭಾರತ! ಹಾಗೆಯೇ ಮದೋದಕವನ್ನು ಸುರಿಸುತ್ತಿದ್ದ ಆನೆಗಳು ಮದೋದಕವನ್ನು ಸುರಿಸುತ್ತಿದ್ದ ಇತರ ಮಹಾಗಜಗಳನ್ನು ದಾರಿಯಲ್ಲಿಯೇ ಪ್ರಯತ್ನಪಟ್ಟು ಧ್ವಂಸಗೊಳಿಸುತ್ತಿದ್ದವು.

07144034a ಸಾದೀ ಸಾದಿನಮಾಸಾದ್ಯ ಪದಾತೀ ಚ ಪದಾತಿನಂ|

07144034c ಸಮಾಸಾದ್ಯ ರಣೇಽನ್ಯೋನ್ಯಂ ಸಂರಬ್ಧಾ ನಾತಿಚಕ್ರಮುಃ||

ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ಮತ್ತು ಕಾಲಾಳುಗಳು ಕಾಲಾಳುಗಳನ್ನು ರಣದಲ್ಲಿ ಎದುರಿಸಿ ಸಂರಬ್ಧರಾಗಿ ಯಾರಿಗೂ ಮುಂದೆಹೋಗಲು ಬಿಡದೇ ಯುದ್ಧಮಾಡುತ್ತಿದ್ದರು.

07144035a ಧಾವತಾಂ ದ್ರವತಾಂ ಚೈವ ಪುನರಾವರ್ತತಾಮಪಿ|

07144035c ಬಭೂವ ತತ್ರ ಸೈನ್ಯಾನಾಂ ಶಬ್ದಃ ಸುತುಮುಲೋ ನಿಶಿ||

ಚೆಲ್ಲಾಪಿಲ್ಲಿಯಾಗಿ ಓಡಿಹೋಗುತ್ತಿದ್ದ ಮತ್ತು ಪುನಃ ಯುದ್ಧಕ್ಕೆ ಹಿಂದಿರುಗುತ್ತಿದ್ದ ಸೇನೆಗಳ ಆ ತುಮುಲಶಬ್ಧವು ರಾತ್ರಿಯಲ್ಲಿ ಕೇಳಿಬರುತ್ತಿತ್ತು.

07144036a ದೀಪ್ಯಮಾನಾಃ ಪ್ರದೀಪಾಶ್ಚ ರಥವಾರಣವಾಜಿಷು|

07144036c ಅದೃಶ್ಯಂತ ಮಹಾರಾಜ ಮಹೋಲ್ಕಾ ಇವ ಖಾಚ್ಚ್ಯುತಾಃ||

ಮಹಾರಾಜ! ರಥ, ಆನೆ, ಕುದುರೆಗಳ ಮೇಲೆ ಉರಿಯುತ್ತಿದ್ದ ಪಂಜುಗಳು ಆಕಾಶದಿಂದ ಕೆಳಕ್ಕೆ ಬಿದ್ದ ಮಹಾ ಉಲ್ಕೆಗಳಂತೆ ತೋರುತ್ತಿದ್ದವು.

07144037a ಸಾ ನಿಶಾ ಭರತಶ್ರೇಷ್ಠ ಪ್ರದೀಪೈರವಭಾಸಿತಾ|

07144037c ದಿವಸಪ್ರತಿಮಾ ರಾಜನ್ಬಭೂವ ರಣಮೂರ್ಧನಿ||

ಭರತಶ್ರೇಷ್ಠ! ರಾಜನ್! ರಣರಂಗದಲ್ಲಿ ಹತ್ತಿ ಉರಿಯುತ್ತಿದ್ದ ಪಂಜುಗಳಿಂದ ಪ್ರಕಾಶಿತಗೊಂಡ ಆ ರಾತ್ರಿಯು ಹಗಲಿನಂತೆಯೇ ಕಾಣುತ್ತಿತ್ತು.

07144038a ಆದಿತ್ಯೇನ ಯಥಾ ವ್ಯಾಪ್ತಂ ತಮೋ ಲೋಕೇ ಪ್ರಣಶ್ಯತಿ|

07144038c ತಥಾ ನಷ್ಟಂ ತಮೋ ಘೋರಂ ದೀಪೈರ್ದೀಪ್ತೈರಲಂಕೃತಂ||

ಆದಿತ್ಯನಿಂದ ಲೋಕದಲ್ಲಿ ಕತ್ತಲೆಯು ಹೇಗೆ ನಾಶವಾಗುತ್ತದೆಯೋ ಹಾಗೆ ಉರಿಯುತ್ತಿರುವ ದೀಪಗಳಿಂದ ಅಲಂಕೃತಗೊಂಡು ಆ ಘೋರ ಕತ್ತಲೆಯು ನಾಶವಾಗಿತ್ತು.

07144039a ಶಸ್ತ್ರಾಣಾಂ ಕವಚಾನಾಂ ಚ ಮಣೀನಾಂ ಚ ಮಹಾತ್ಮನಾಂ|

07144039c ಅಂತರ್ದಧುಃ ಪ್ರಭಾಃ ಸರ್ವಾ ದೀಪೈಸ್ತೈರವಭಾಸಿತಾಃ||

ಮಹಾತ್ಮರ ಶಸ್ತ್ರಗಳು, ಕವಚಗಳು ಮತ್ತು ಮಣಿಗಳ ಮೇಲೆ ಬಿದ್ದು ಅವುಗಳು ಒಳಗಿನಿಂದಲೇ ಪ್ರಕಾಶಗೊಳ್ಳುತ್ತಿವೆಯೋ ಎಂದು ಅನ್ನಿಸುತ್ತಿತ್ತು.

07144040a ತಸ್ಮಿನ್ಕೋಲಾಹಲೇ ಯುದ್ಧೇ ವರ್ತಮಾನೇ ನಿಶಾಮುಖೇ|

07144040c ಅವಧೀತ್ಸಮರೇ ಪುತ್ರಂ ಪಿತಾ ಭರತಸತ್ತಮ||

07144041a ಪುತ್ರಶ್ಚ ಪಿತರಂ ಮೋಹಾತ್ಸಖಾಯಂ ಚ ಸಖಾ ತಥಾ|

07144041c ಸಂಬಂಧಿನಂ ಚ ಸಂಬಂಧೀ ಸ್ವಸ್ರೀಯಂ ಚಾಪಿ ಮಾತುಲಃ||

ಭರತಸತ್ತಮ! ರಾತ್ರಿವೇಳೆಯಲ್ಲಿ ನಡೆಯುತ್ತಿದ್ದ ಆ ಕೋಲಾಹಲ ಯುದ್ಧದಲ್ಲಿ ತಿಳಿಯದೇ ತಂದೆಯರು ಮಕ್ಕಳನ್ನು, ಮಕ್ಕಳು ತಂದೆಯರನ್ನು, ಸಖರು ಸಖರನ್ನು, ಸಂಬಂಧಿಗಳು ಸಂಬಂಧಿಗಳನ್ನು ಮತ್ತು ಅಳಿಯರು ಮಾವರನ್ನು ವಧಿಸಿದರು.

07144042a ಸ್ವೇ ಸ್ವಾನ್ಪರೇ ಪರಾಂಶ್ಚಾಪಿ ನಿಜಘ್ನುರಿತರೇತರಂ|

07144042c ನಿರ್ಮರ್ಯಾದಮಭೂದ್ಯುದ್ಧಂ ರಾತ್ರೌ ಘೋರಂ ಭಯಾವಹಂ||

ನಮ್ಮವರು ನಮ್ಮವರನ್ನೇ ಮತ್ತು ಶತ್ರುಗಳು ಶತ್ರುಗಳನ್ನೇ ಪರಸ್ಪರ ಕೊಲ್ಲುತ್ತಿದ್ದರು. ಮರ್ಯಾದೆಗಳಿಲ್ಲದ ಆ ರಾತ್ರಿಯುದ್ಧವು ಘೋರವೂ ಭಯಂಕರವೂ ಆಗಿತ್ತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಚತುಶ್ಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ನಾಲ್ಕನೇ ಅಧ್ಯಾಯವು.

Related image

Comments are closed.