Drona Parva: Chapter 143

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೩

ಧೃತರಾಷ್ಟ್ರನ ಮಗ ಚಿತ್ರಸೇನ ಮತ್ತು ನಕುಲನ ಮಗ ಶತಾನೀಕರ ಯುದ್ಧ (೧-೧೨). ದ್ರುಪದ-ವೃಷಸೇನರ ಯುದ್ಧ (೧೩-೨೮). ದುಃಶಾಸನ-ಪ್ರತಿವಿಂಧ್ಯರ ಯುದ್ಧ (೨೯-೪೨).

07143001 ಸಂಜಯ ಉವಾಚ|

07143001a ಶತಾನೀಕಂ ಶರೈಸ್ತೂರ್ಣಂ ನಿರ್ದಹಂತಂ ಚಮೂಂ ತವ|

07143001c ಚಿತ್ರಸೇನಸ್ತವ ಸುತೋ ವಾರಯಾಮಾಸ ಭಾರತ||

ಸಂಜಯನು ಹೇಳಿದನು: “ಭಾರತ! ಬೇಗನೇ ಶರಗಳಿಂದ ನಿನ್ನ ಸೇನೆಯನ್ನು ಸುಡುತ್ತಿರುವ ಶತಾನೀಕನನ್ನು ನಿನ್ನ ಮಗ ಚಿತ್ರಸೇನನು ತಡೆದನು.

07143002a ನಾಕುಲಿಶ್ಚಿತ್ರಸೇನಂ ತು ನಾರಾಚೇನಾರ್ದಯದ್ಭೃಶಂ|

07143002c ಸ ಚ ತಂ ಪ್ರತಿವಿವ್ಯಾಧ ದಶಭಿರ್ನಿಶಿತೈಃ ಶರೈಃ||

ನಕುಲನ ಮಗನು ಚಿತ್ರಸೇನನನ್ನು ನಾರಾಚಗಳಿಂದ ಬಹಳವಾಗಿ ಗಾಯಗೊಳಿಸಿದನು. ಚಿತ್ರಸೇನನೂ ಕೂಡ ಅವನನ್ನು ಹತ್ತು ನಿಶಿತ ಶರಗಳಿಂದ ತಿರುಗಿ ಹೊಡೆದನು.

07143003a ಚಿತ್ರಸೇನೋ ಮಹಾರಾಜ ಶತಾನೀಕಂ ಪುನರ್ಯುಧಿ|

07143003c ನವಭಿರ್ನಿಶಿತೈರ್ಬಾಣೈರಾಜಘಾನ ಸ್ತನಾಂತರೇ||

ಮಹಾರಾಜ! ಚಿತ್ರಸೇನನು ಯುದ್ಧದಲ್ಲಿ ಪುನಃ ಶತಾನೀಕನ ಎದೆಗೆ ಒಂಭತ್ತು ನಿಶಿತ ಬಾಣಗಳನ್ನು ಪ್ರಹರಿಸಿದನು.

07143004a ನಾಕುಲಿಸ್ತಸ್ಯ ವಿಶಿಖೈರ್ವರ್ಮ ಸಮ್ನತಪರ್ವಭಿಃ|

07143004c ಗಾತ್ರಾತ್ಸಂಚ್ಯಾವಯಾಮಾಸ ತದದ್ಭುತಮಿವಾಭವತ್||

ನಾಕುಲಿಯು ವಿಶಿಖ ಸನ್ನತಪರ್ವಗಳಿಂದ ಅವನ ಕವಚವನ್ನು ದೇಹದಿಂದ ಬೇರ್ಪಡಿಸಿದನು. ಅದೊಂದು ಅದ್ಭುತವಾಗಿತ್ತು.

07143005a ಸೋಽಪೇತವರ್ಮಾ ಪುತ್ರಸ್ತೇ ವಿರರಾಜ ಭೃಶಂ ನೃಪ|

07143005c ಉತ್ಸೃಜ್ಯ ಕಾಲೇ ರಾಜೇಂದ್ರ ನಿರ್ಮೋಕಮಿವ ಪನ್ನಗಃ||

ನೃಪ! ರಾಜೇಂದ್ರ! ಕವಚವನ್ನು ಕಳೆದುಕೊಂಡು ನಿನ್ನ ಮಗನು ಪೊರೆಯನ್ನು ಕಳೆದುಕೊಂಡ ಸರ್ಪದಂತೆ ವಿರಾಜಿಸಿದನು.

07143006a ತತೋಽಸ್ಯ ನಿಶಿತೈರ್ಬಾಣೈರ್ಧ್ವಜಂ ಚಿಚ್ಚೇದ ನಾಕುಲಿಃ|

07143006c ಧನುಶ್ಚೈವ ಮಹಾರಾಜ ಯತಮಾನಸ್ಯ ಸಮ್ಯುಗೇ||

ಆಗ ನಾಕುಲಿಯು ನಿಶಿತ ಬಾಣಗಳಿಂದ ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ಅವನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು.

07143007a ಸ ಚಿನ್ನಧನ್ವಾ ಸಮರೇ ವಿವರ್ಮಾ ಚ ಮಹಾರಥಃ|

07143007c ಧನುರನ್ಯನ್ಮಹಾರಾಜ ಜಗ್ರಾಹಾರಿವಿದಾರಣಂ||

ಮಹಾರಾಜ! ಸಮರದಲ್ಲಿ ಧನುಸ್ಸನ್ನೂ ಕವಚವನ್ನೂ ಕಳೆದುಕೊಂಡ ಆ ಮಹಾರಥನು ಶತ್ರುಗಳನ್ನು ಸೀಳಬಲ್ಲ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.

07143008a ತತಸ್ತೂರ್ಣಂ ಚಿತ್ರಸೇನೋ ನಾಕುಲಿಂ ನವಭಿಃ ಶರೈಃ|

07143008c ವಿವ್ಯಾಧ ಸಮರೇ ಕ್ರುದ್ಧೋ ಭರತಾನಾಂ ಮಹಾರಥಃ||

ತಕ್ಷಣವೇ ಭರತರ ಮಹಾರಥ ಚಿತ್ರಸೇನನು ಕ್ರುದ್ಧನಾಗಿ ಸಮರದಲ್ಲಿ ಒಂಭತ್ತು ಶರಗಳಿಂದ ನಾಕುಲಿಯನ್ನು ಹೊಡೆದನು.

07143009a ಶತಾನೀಕೋಽಥ ಸಂಕ್ರುದ್ಧಶ್ಚಿತ್ರಸೇನಸ್ಯ ಮಾರಿಷ|

07143009c ಜಘಾನ ಚತುರೋ ವಾಹಾನ್ಸಾರಥಿಂ ಚ ನರೋತ್ತಮಃ||

ಮಾರಿಷ! ಆಗ ಸಂಕ್ರುದ್ಧ ನರೋತ್ತಮ ಶತಾನೀಕನು ಚಿತ್ರಸೇನನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿದನು.

07143010a ಅವಪ್ಲುತ್ಯ ರಥಾತ್ತಸ್ಮಾಚ್ಚಿತ್ರಸೇನೋ ಮಹಾರಥಃ|

07143010c ನಾಕುಲಿಂ ಪಂಚವಿಂಶತ್ಯಾ ಶರಾಣಾಮಾರ್ದಯದ್ಬಲೀ||

ಮಹಾರಥ ಬಲಶಾಲೀ ಚಿತ್ರಸೇನನು ಆ ರಥದಿಂದ ಹಾರಿ ಇಪ್ಪತ್ತೈದು ಶರಗಳಿಂದ ನಾಕುಲಿಯನ್ನು ಹೊಡೆದನು.

07143011a ತಸ್ಯ ತತ್ಕುರ್ವತಃ ಕರ್ಮ ನಕುಲಸ್ಯ ಸುತೋ ರಣೇ|

07143011c ಅರ್ಧಚಂದ್ರೇಣ ಚಿಚ್ಚೇದ ಚಾಪಂ ರತ್ನವಿಭೂಷಿತಂ||

ನಕುಲನ ಸುತನು ರಣದಲ್ಲಿ ಆ ಕೆಲಸವನ್ನು ಮಾಡಿದ ಚಿತ್ರಸೇನನ ರತ್ನವಿಭೂಷಿತ ಚಾಪವನ್ನು ಅರ್ಧಚಂದ್ರ ಶರದಿಂದ ತುಂಡರಿಸಿದನು.

07143012a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ|

07143012c ಆರುರೋಹ ರಥಂ ತೂರ್ಣಂ ಹಾರ್ದಿಕ್ಯಸ್ಯ ಮಹಾತ್ಮನಃ||

ಧನುಸ್ಸು ತುಂಡಾದ, ವಿರಥನಾದ, ಅಶ್ವ-ಸಾರಥಿಗಳನ್ನು ಕಳೆದುಕೊಂಡ ಚಿತ್ರಸೇನನು ಬೇಗನೇ ಮಹಾತ್ಮ ಹಾರ್ದಿಕ್ಯ ಕೃತವರ್ಮನ ರಥವನ್ನೇರಿದನು.

07143013a ದ್ರುಪದಂ ತು ಸಹಾನೀಕಂ ದ್ರೋಣಪ್ರೇಪ್ಸುಂ ಮಹಾರಥಂ|

07143013c ವೃಷಸೇನೋಽಭ್ಯಯಾತ್ತೂರ್ಣಂ ಕಿರಂ ಶರಶತೈಸ್ತದಾ||

ದ್ರೋಣನ ಹತ್ತಿರ ಸೇನೆಯೊಂದಿಗೆ ಹೋಗುತ್ತಿದ್ದ ಮಹಾರಥ ದ್ರುಪದನನ್ನು ವೃಷಸೇನನು ಬೇಗನೇ ನೂರಾರು ಶರಗಳಿಂದ ಮುಚ್ಚಿಬಿಟ್ಟನು.

07143014a ಯಜ್ಞಸೇನಸ್ತು ಸಮರೇ ಕರ್ಣಪುತ್ರಂ ಮಹಾರಥಂ|

07143014c ಷಷ್ಟ್ಯಾ ಶರಾಣಾಂ ವಿವ್ಯಾಧ ಬಾಹ್ವೋರುರಸಿ ಚಾನಘ||

ಅನಘ! ಯಜ್ಞಸೇನನಾದರೋ ಸಮರದಲ್ಲಿ ಮಹಾರಥ ಕರ್ಣಪುತ್ರನನ್ನು ಅರವತ್ತು ಶರಗಳಿಂದ ಬಾಹುಗಳಿಗೆ ಮತ್ತು ಎದೆಗೆ ಹೊಡೆದನು.

07143015a ವೃಷಸೇನಸ್ತು ಸಂಕ್ರುದ್ಧೋ ಯಜ್ಞಸೇನಂ ರಥೇ ಸ್ಥಿತಂ|

07143015c ಬಹುಭಿಃ ಸಾಯಕೈಸ್ತೀಕ್ಷ್ಣೈರಜಘಾನ ಸ್ತನಾಂತರೇ||

ಸಂಕ್ರುದ್ಧ ವೃಷಸೇನನೂ ಕೂಡ ರಥದಲ್ಲಿ ನಿಂತಿದ್ದ ಯಜ್ಞಸೇನನನ್ನು ಅನೇಕ ತೀಕ್ಷ್ಣಸಾಯಕಗಳಿಂದ ಎದೆಯ ಮಧ್ಯದಲ್ಲಿ ಹೊಡೆದನು.

07143016a ತಾವುಭೌ ಶರನುನ್ನಾಂಗೌ ಶರಕಂಟಕಿನೌ ರಣೇ|

07143016c ವ್ಯಭ್ರಾಜೇತಾಂ ಮಹಾರಾಜ ಶ್ವಾವಿಧೌ ಶಲಲೈರಿವ||

ಮಹಾರಾಜ! ಶರೀರವೆಲ್ಲಾ ಶರಗಳಿಂದ ಚುಚ್ಚಲ್ಪಟ್ಟಿದ್ದ ಅವರಿಬ್ಬರೂ ರಣದಲ್ಲಿ ಮುಳ್ಳುಗಳಿಂದ ಕೂಡಿದ್ದ ಮುಳ್ಳುಹಂದಿಗಳಂತೆ ಪ್ರಕಾಶಿಸುತ್ತಿದ್ದರು.

07143017a ರುಕ್ಮಪುಂಖೈರಜಿಹ್ಮಾಗ್ರೈಃ ಶರೈಶ್ಚಿನ್ನತನುಚ್ಚದೌ|

07143017c ರುಧಿರೌಘಪರಿಕ್ಲಿನ್ನೌ ವ್ಯಭ್ರಾಜೇತಾಂ ಮಹಾಮೃಧೇ||

ರುಕ್ಮಪುಂಖಗಳ ಜಿಹ್ಮಾಗ್ರ ಶರಗಳಿಂದ ಕವಚಗಳು ಸೀಳಿಹೋಗಿ ರಕ್ತವು ಸುರಿಯುತ್ತಿದ್ದ ಅವರಿಬ್ಬರೂ ಮಹಾರಣದಲ್ಲಿ ಬಹಳವಾಗಿ ಪ್ರಕಾಶಿಸಿದರು.

07143018a ತಪನೀಯನಿಭೌ ಚಿತ್ರೌ ಕಲ್ಪವೃಕ್ಷಾವಿವಾದ್ಭುತೌ|

07143018c ಕಿಂಶುಕಾವಿವ ಚೋತ್ಫುಲ್ಲೌ ವ್ಯಕಾಶೇತಾಂ ರಣಾಜಿರೇ||

ಸುವರ್ಣಮಯ ಚಿತ್ರಿತ ಕವಚಗಳುಳ್ಳ ಅವರಿಬ್ಬರೂ ರಣರಂಗದಲ್ಲಿ ಅದ್ಭುತ ಕಲ್ಪವೃಕ್ಷಗಳಂತೆ ಮತ್ತು ಹೂಬಿಟ್ಟ ಮುತ್ತುಗದ ಮರಗಳಂತೆ ಪ್ರಕಾಶಿಸಿದರು.

07143019a ವೃಷಸೇನಸ್ತತೋ ರಾಜನ್ನವಭಿರ್ದ್ರುಪದಂ ಶರೈಃ|

07143019c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಪುನಶ್ಚಾನ್ಯೈಸ್ತ್ರಿಭಿಃ ಶರೈಃ||

ರಾಜನ್! ಆಗ ವೃಷಸೇನನು ದ್ರುಪದನನ್ನು ಒಂಬತ್ತು ಬಾಣಗಳಿಂದ ಪ್ರಹರಿಸಿ, ಎಪ್ಪತ್ತರಿಂದ ಗಾಯಗೊಳಿಸಿ ಪುನಃ ಮೂರು ಮೂರು ಶರಗಳಿಂದ ಹೊಡೆದನು.

07143020a ತತಃ ಶರಸಹಸ್ರಾಣಿ ವಿಮುಂಚನ್ವಿಬಭೌ ತದಾ|

07143020c ಕರ್ಣಪುತ್ರೋ ಮಹಾರಾಜ ವರ್ಷಮಾಣ ಇವಾಂಬುದಃ||

ಮಹಾರಾಜ! ಆಗ ಕರ್ಣಪುತ್ರನು ಸಹಸ್ರಾರು ಬಾಣಗಳನ್ನು ಪ್ರಯೋಗಿಸಿ ಮೋಡದಂತೆ ಶರಗಳ ಮಳೆಯನ್ನು ಸುರಿಸಿದನು.

07143021a ತತಸ್ತು ದ್ರುಪದಾನೀಕಂ ಶರೈಶ್ಚಿನ್ನತನುಚ್ಚದಂ|

07143021c ಸಂಪ್ರಾದ್ರವದ್ರಣೇ ರಾಜನ್ನಿಶೀಥೇ ಭೈರವೇ ಸತಿ||

ರಾಜನ್! ಅವನ ಶರಗಳಿಂದ ಕವಚಗಳನ್ನು ಕಳೆದುಕೊಂಡ ದ್ರುಪದನ ಸೇನೆಯು ಆ ಭೈರವ ರಾತ್ರಿಯಲ್ಲಿ ರಣದಿಂದ ಓಡಿ ಹೋಯಿತು.

07143022a ಪ್ರದೀಪೈರ್ಹಿ ಪರಿತ್ಯಕ್ತೈರ್ಜ್ವಲದ್ಭಿಸ್ತೈಃ ಸಮಂತತಃ|

07143022c ವ್ಯರಾಜತ ಮಹೀ ರಾಜನ್ವೀತಾಭ್ರಾ ದ್ಯೌರಿವ ಗ್ರಹೈಃ||

ರಾಜನ್! ಅವರು ಎಲ್ಲಕಡೆ ಬಿಟ್ಟುಹೋಗಿದ್ದ ಉರಿಯುತ್ತಿರುವ ಪಂಜುಗಳಿಂದ ರಣಭೂಮಿಯು ಗ್ರಹ-ನಕ್ಷತ್ರಗಳಿಂದ ಕೂಡಿದ ಮೋಡಗಳಿಲ್ಲದ ಆಗಸದಂತೆ ವಿರಾಜಿಸುತ್ತಿತ್ತು.

07143023a ತಥಾಂಗದೈರ್ನಿಪತಿತೈರ್ವ್ಯರಾಜತ ವಸುಂಧರಾ|

07143023c ಪ್ರಾವೃಟ್ಕಾಲೇ ಮಹಾರಾಜ ವಿದ್ಯುದ್ಭಿರಿವ ತೋಯದಃ||

ಮಹಾರಾಜ! ವರ್ಷಾಕಾಲದಲ್ಲಿ ಮಿಂಚಿನಿಂದ ಕೂಡಿದ ಮೋಡದಂತೆ ವಸುಂಧರೆಯು ಬಿದ್ದಿದ್ದ ಅಂಗದಾಭರಣಗಳಿಂದ ಪ್ರಕಾಶಿಸುತ್ತಿತ್ತು.

07143024a ತತಃ ಕರ್ಣಸುತತ್ರಸ್ತಾಃ ಸೋಮಕಾ ವಿಪ್ರದುದ್ರುವುಃ|

07143024c ಯಥೇಂದ್ರಭಯವಿತ್ರಸ್ತಾ ದಾನವಾಸ್ತಾರಕಾಮಯೇ||

ಆ ತಾರಕಾಮಯ ಯುದ್ಧದಲ್ಲಿ ಇಂದ್ರನ ಭಯದಿಂದ ತತ್ತರಿಸಿದ ದಾನವರಂತೆ ಕರ್ಣಸುತನಿಂದ ಭಯಗೊಂಡ ಸೋಮಕರು ಪಲಾಯನಮಾಡಿದರು.

07143025a ತೇನಾರ್ದ್ಯಮಾನಾಃ ಸಮರೇ ದ್ರವಮಾಣಾಶ್ಚ ಸೋಮಕಾಃ|

07143025c ವ್ಯರಾಜಂತ ಮಹಾರಾಜ ಪ್ರದೀಪೈರವಭಾಸಿತಾಃ||

ಮಹಾರಾಜ! ಸಮರದಲ್ಲಿ ಅವನಿಂದ ಪೀಡಿತರಾಗಿ ಪಂಜುಗಳನ್ನು ಹಿಡಿದು ಒಡಿಹೋಗುತ್ತಿರುವ ಸೋಮಕರು ಶೋಭಾಯಮಾನರಾಗಿ ಕಾಣುತ್ತಿದ್ದರು.

07143026a ತಾಂಸ್ತು ನಿರ್ಜಿತ್ಯ ಸಮರೇ ಕರ್ಣಪುತ್ರೋ ವ್ಯರೋಚತ|

07143026c ಮಧ್ಯಂದಿನಮನುಪ್ರಾಪ್ತೋ ಘರ್ಮಾಂಶುರಿವ ಭಾರತ||

ಭಾರತ! ಸಮರದಲ್ಲಿ ಅವರನ್ನು ಗೆದ್ದ ಕರ್ಣಪುತ್ರನು ಮಧ್ಯಾಹ್ನ ನಡುನೆತ್ತಿಯ ಮೇಲಿದ್ದ ಸೂರ್ಯನಂತೆ ಪ್ರಕಾಶಿಸಿದನು.

07143027a ತೇಷು ರಾಜಸಹಸ್ರೇಷು ತಾವಕೇಷು ಪರೇಷು ಚ|

07143027c ಏಕ ಏವ ಜ್ವಲಂಸ್ತಸ್ಥೌ ವೃಷಸೇನಃ ಪ್ರತಾಪವಾನ್||

ನಿನ್ನವರ ಮತ್ತು ಶತ್ರುಗಳ ಆ ಸಹಸ್ರಾರು ರಾಜರುಗಳ ಮಧ್ಯೆ ಪ್ರತಾಪವಾನ್ ವೃಷಸೇನನು ಒಬ್ಬನೇ ಪ್ರಜ್ವಲಿಸುತ್ತಾ ನಿಂತಿದ್ದನು.

07143028a ಸ ವಿಜಿತ್ಯ ರಣೇ ಶೂರಾನ್ಸೋಮಕಾನಾಂ ಮಹಾರಥಾನ್|

07143028c ಜಗಾಮ ತ್ವರಿತಸ್ತತ್ರ ಯತ್ರ ರಾಜಾ ಯುಧಿಷ್ಠಿರಃ||

ರಣದಲ್ಲಿ ಮಹಾರಥ ಶೂರ ಸೋಮಕರನ್ನು ಗೆದ್ದು ಅವನು ತ್ವರೆಮಾಡಿ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೋದನು.

07143029a ಪ್ರತಿವಿಂಧ್ಯಮಥ ಕ್ರುದ್ಧಂ ಪ್ರದಹಂತಂ ರಣೇ ರಿಪೂನ್|

07143029c ದುಃಶಾಸನಸ್ತವ ಸುತಃ ಪ್ರತ್ಯುದ್ಗಚ್ಚನ್ಮಹಾರಥಃ||

ಆಗ ಕ್ರುದ್ಧನಾಗಿ ರಣದಲ್ಲಿ ರಿಪುಗಳನ್ನು ದಹಿಸುತ್ತಿದ್ದ ಪ್ರತಿವಿಂಧ್ಯನನ್ನು ನಿನ್ನ ಮಗ ಮಹಾರಥ ದುಃಶಾಸನನು ಹೋಗಿ ಎದುರಿಸಿದನು.

07143030a ತಯೋಃ ಸಮಾಗಮೋ ರಾಜಂಶ್ಚಿತ್ರರೂಪೋ ಬಭೂವ ಹ|

07143030c ವ್ಯಪೇತಜಲದೇ ವ್ಯೋಮ್ನಿ ಬುಧಭಾರ್ಗವಯೋರಿವ||

ರಾಜನ್! ಅವರ ಸಮಾಗಮವು ಮೋಡವಿಲ್ಲದ ಆಕಾಶದಲ್ಲಿ ಬುಧ-ಸೂರ್ಯರ ಸಮಾಗಮದಂತೆ ಚಿತ್ರರೂಪವಾಗಿದ್ದಿತು.

07143031a ಪ್ರತಿವಿಂಧ್ಯಂ ತು ಸಮರೇ ಕುರ್ವಾಣಂ ಕರ್ಮ ದುಷ್ಕರಂ|

07143031c ದುಃಶಾಸನಸ್ತ್ರಿಭಿರ್ಬಾಣೈರ್ಲಲಾಟೇ ಸಮವಿಧ್ಯತ||

ಸಮರದಲ್ಲಿ ದುಷ್ಕರ ಕರ್ಮವನ್ನು ಮಾಡುತ್ತಿದ್ದ ಪ್ರತಿವಿಂಧ್ಯನನ್ನು ದುಃಶಾಸನನು ಬಾಣಗಳಿಂದ ಹಣೆಗೆ ಹೊಡೆದನು.

07143032a ಸೋಽತಿವಿದ್ಧೋ ಬಲವತಾ ಪುತ್ರೇಣ ತವ ಧನ್ವಿನಾ|

07143032c ವಿರರಾಜ ಮಹಾಬಾಹುಃ ಸಶೃಂಗ ಇವ ಪರ್ವತಃ||

ಮಹಾರಾಜ! ನಿನ್ನ ಬಲವಂತ ಧನ್ವಿ ಪುತ್ರನಿಂದ ಅತಿಯಾಗಿ ಗಾಯಗೊಂಡ ಆ ಮಹಾಬಾಹುವು ಶೃಂಗವಿರುವ ಪರ್ವತದಂತೆ ವಿರಾಜಿಸಿದನು.

07143033a ದುಃಶಾಸನಂ ತು ಸಮರೇ ಪ್ರತಿವಿಂಧ್ಯೋ ಮಹಾರಥಃ|

07143033c ನವಭಿಃ ಸಾಯಕೈರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ||

ಸಮರದಲ್ಲಿ ಮಹಾರಥ ಪ್ರತಿವಿಂಧ್ಯನಾದರೋ ದುಃಶಾಸನನನ್ನು ಒಂಭತ್ತು ಸಾಯಕಗಳಿಂದ ಹೊಡೆದು ಪುನಃ ಏಳರಿಂದ ಪ್ರಹರಿಸಿದನು.

07143034a ತತ್ರ ಭಾರತ ಪುತ್ರಸ್ತೇ ಕೃತವಾನ್ಕರ್ಮ ದುಷ್ಕರಂ|

07143034c ಪ್ರತಿವಿಂಧ್ಯಹಯಾನುಗ್ರೈಃ ಪಾತಯಾಮಾಸ ಯಚ್ಚರೈಃ||

ಭಾರತ! ಅಲ್ಲಿ ದುಷ್ಕರ ಕರ್ಮವನ್ನು ಮಾಡುವ ನಿನ್ನ ಪುತ್ರನು ಉಗ್ರ ಶರಗಳಿಂದ ಪ್ರತಿವಿಂಧ್ಯನ ಕುದುರೆಗಳನ್ನು ಕೆಳಗುರುಳಿಸಿದನು.

07143035a ಸಾರಥಿಂ ಚಾಸ್ಯ ಭಲ್ಲೇನ ಧ್ವಜಂ ಚ ಸಮಪಾತಯತ್|

07143035c ರಥಂ ಚ ಶತಶೋ ರಾಜನ್ವ್ಯಧಮತ್ತಸ್ಯ ಧನ್ವಿನಃ||

ರಾಜನ್! ಆ ಧನ್ವಿಯು ಇನ್ನೊಂದು ಭಲ್ಲದಿಂದ ಅವನ ಸಾರಥಿಯನ್ನು ಮತ್ತು ಧ್ವಜವನ್ನು ಕೆಳಗುರುಳಿಸಿದನು. ಮತ್ತು ನೂರಾರು ಬಾಣಗಳಿಂದ ಅವನ ರಥವನ್ನು ಕೂಡ ಪ್ರಹರಿಸಿದನು.

07143036a ಪತಾಕಾಶ್ಚ ಸ ತೂಣೀರಾನ್ರಶ್ಮೀನ್ಯೋಕ್ತ್ರಾಣಿ ಚಾಭಿಭೋ|

07143036c ಚಿಚ್ಚೇದ ತಿಲಶಃ ಕ್ರುದ್ಧಃ ಶರೈಃ ಸಮ್ನತಪರ್ವಭಿಃ||

ವಿಭೋ! ಕ್ರುದ್ಧನಾದ ಅವನು ಸನ್ನತಪರ್ವ ಶರಗಳಿಂದ ಪ್ರತಿವಿಂಧ್ಯನ ಪತಾಕೆಗಳನ್ನೂ, ತೂಣೀರಗಳನ್ನೂ, ಕಡಿವಾಣಗಳನ್ನೂ, ನೊಗಪಟ್ಟಿಗಳನ್ನೂ ನುಚ್ಚುನೂರು ಮಾಡಿದನು.

07143037a ವಿರಥಃ ಸ ತು ಧರ್ಮಾತ್ಮಾ ಧನುಷ್ಪಾಣಿರವಸ್ಥಿತಃ|

07143037c ಅಯೋಧಯತ್ತವ ಸುತಂ ಕಿರಂ ಶರಶತಾನ್ಬಹೂನ್||

ವಿರಥನಾದ ಆ ಧರ್ಮಾತ್ಮ ಪ್ರತಿವಿಂಧ್ಯನಾದರೋ ಧನುಷ್ಪಾಣಿಯಾಗಿ ಅನೇಕ ನೂರು ಬಾಣಗಳಿಂದ ನಿನ್ನ ಸುತನನ್ನು ಮುಚ್ಚಿ ಯುದ್ಧವನ್ನು ಮುಂದುವರಿಸಿದನು.

07143038a ಕ್ಷುರಪ್ರೇಣ ಧನುಸ್ತಸ್ಯ ಚಿಚ್ಚೇದ ಕೃತಹಸ್ತವತ್|

07143038c ಅಥೈನಂ ದಶಭಿರ್ಭಲ್ಲೈಶ್ಚಿನ್ನಧನ್ವಾನಮಾರ್ದಯತ್||

ಆಗ ದುಃಶಾಸನನು ಕೈಚಳಕದಿಂದ ಕ್ಷುರಪ್ರವನ್ನು ಪ್ರಯೋಗಿಸಿ ಅವನ ಧನುಸ್ಸನ್ನು ಕತ್ತರಿಸಿದನು. ಧನುಸ್ಸು ತುಂಡಾದ ಅವನನ್ನು ಹತ್ತು ಭಲ್ಲಗಳಿಂದ ಹೊಡೆದನು.

07143039a ತಂ ದೃಷ್ಟ್ವಾ ವಿರಥಂ ತತ್ರ ಭ್ರಾತರೋಽಸ್ಯ ಮಹಾರಥಾಃ|

07143039c ಅನ್ವವರ್ತಂತ ವೇಗೇನ ಮಹತ್ಯಾ ಸೇನಯಾ ಸಹ||

ವಿರಥನಾಗಿದ್ದ ಪ್ರತಿವಿಂಧ್ಯನನ್ನು ನೋಡಿ ಅವನ ಮಹಾರಥ ಸಹೋದರರು ಮಹಾ ಸೇನೆಯೊಂದಿಗೆ ವೇಗದಿಂದ ಆಗಮಿಸಿದರು.

07143040a ಆಪ್ಲುತಃ ಸ ತತೋ ಯಾನಂ ಸುತಸೋಮಸ್ಯ ಭಾಸ್ವರಂ|

07143040c ಧನುರ್ಗೃಹ್ಯ ಮಹಾರಾಜ ವಿವ್ಯಾಧ ತನಯಂ ತವ||

ಮಹಾರಾಜ! ಆಗ ಅವನು ಸುತಸೋಮನ ಹೊಳೆಯುತ್ತಿರುವ ರಥದ ಮೇಲೆ ಹಾರಿ, ಧನುಸ್ಸನ್ನೆತ್ತಿಕೊಂಡು ನಿನ್ನ ಮಗನನ್ನು ಪ್ರಹರಿಸಿದನು.

07143041a ತತಸ್ತು ತಾವಕಾಃ ಸರ್ವೇ ಪರಿವಾರ್ಯ ಸುತಂ ತವ|

07143041c ಅಭ್ಯವರ್ತಂತ ಸಂಗ್ರಾಮೇ ಮಹತ್ಯಾ ಸೇನಯಾ ವೃತಾಃ||

ಆಗ ನಿನ್ನವರೆಲ್ಲರೂ ನಿನ್ನ ಮಗನನ್ನು ಮಹಾ ಸೇನೆಯೊಂದಿಗೆ ಕೂಡಿ ಸುತ್ತುವರೆದು ಸಂಗ್ರಾಮದಲ್ಲಿ ಎರಗಿದರು.

07143042a ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ|

07143042c ನಿಶೀಥೇ ದಾರುಣೇ ಕಾಲೇ ಯಮರಾಷ್ಟ್ರವಿವರ್ಧನಂ||

ಭಾರತ! ಆಗ ಆ ದಾರುಣ ರಾತ್ರಿವೇಳೆಯಲ್ಲಿ ನಿನ್ನವರ ಮತ್ತು ಅವರ ನಡುವೆ ಯಮರಾಷ್ಟ್ರವನ್ನು ವರ್ಧಿಸುವ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಶತಾನೀಕಾದಿಯುದ್ಧೇ ತ್ರಿಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಶತಾನೀಕಾದಿಯುದ್ಧ ಎನ್ನುವ ನೂರಾನಲ್ವತ್ಮೂರನೇ ಅಧ್ಯಾಯವು.

Related image

Comments are closed.