Drona Parva: Chapter 14

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

೧೪

ಭೀಮಸೇನ-ಶಲ್ಯರ ಗದಾಯುದ್ಧ; ಶಲ್ಯನ ಪಲಾಯನ (೧-೩೭).

07014001 ಧೃತರಾಷ್ಟ್ರ ಉವಾಚ|

07014001a ಬಹೂನಿ ಸುವಿಚಿತ್ರಾಣಿ ದ್ವಂದ್ವಯುದ್ಧಾನಿ ಸಂಜಯ|

07014001c ತ್ವಯೋಕ್ತಾನಿ ನಿಶಮ್ಯಾಹಂ ಸ್ಪೃಹಯಾಮಿ ಸಚಕ್ಷುಷಾಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ವಿಚಿತ್ರವಾಗಿರುವ ಅನೇಕ ದ್ವಂದ್ವ ಯುದ್ಧಗಳ ಕುರಿತು ನೀನು ಹೇಳಿದುದನ್ನು ಕೇಳಿ ಕಣ್ಣುಗಳಿರುವವರ ಸೌಭಾಗ್ಯವನ್ನು ಅಪೇಕ್ಷಿಸುತ್ತೇನೆ.

07014002a ಆಶ್ಚರ್ಯಭೂತಂ ಲೋಕೇಷು ಕಥಯಿಷ್ಯಂತಿ ಮಾನವಾಃ|

07014002c ಕುರೂಣಾಂ ಪಾಂಡವಾನಾಂ ಚ ಯುದ್ಧಂ ದೇವಾಸುರೋಪಮಂ||

ದೇವಾಸುರರ ಯುದ್ಧಕ್ಕೆ ಸಮಾನ ಕುರು-ಪಾಂಡವರ ಯುದ್ಧವನ್ನು ಲೋಕಗಳಲ್ಲಿ ಮಾನವರು ಆಶ್ಚರ್ಯಭೂತವಾದುದೆಂದು ಹೇಳಿಕೊಳ್ಳುತ್ತಾರೆ.

07014003a ನ ಹಿ ಮೇ ತೃಪ್ತಿರಸ್ತೀಹ ಶೃಣ್ವತೋ ಯುದ್ಧಮುತ್ತಮಂ|

07014003c ತಸ್ಮಾದಾರ್ತಾಯನೇರ್ಯುದ್ಧಂ ಸೌಭದ್ರಸ್ಯ ಚ ಶಂಸ ಮೇ||

ಈ ಉತ್ತಮ ಯುದ್ಧದ ಕುರಿತು ಕೇಳುತ್ತಿರುವ ನನಗೆ ತೃಪ್ತಿಯೆಂಬುದೇ ಇಲ್ಲ. ಆದುದರಿಂದ ಶಲ್ಯ ಮತ್ತು ಸೌಭದ್ರರ ಯುದ್ಧದ ಕುರಿತು ಹೇಳು.”

07014004 ಸಂಜಯ ಉವಾಚ|

07014004a ಸಾದಿತಂ ಪ್ರೇಕ್ಷ್ಯ ಯಂತಾರಂ ಶಲ್ಯಃ ಸರ್ವಾಯಷೀಂ ಗದಾಂ|

07014004c ಸಮುತ್ಕ್ಷಿಪ್ಯ ನದನ್ಕ್ರುದ್ಧಃ ಪ್ರಚಸ್ಕಂದ ರಥೋತ್ತಮಾತ್||

ಸಂಜಯನು ಹೇಳಿದನು: “ತನ್ನ ಸೂತನು ಹತನಾದುದನ್ನು ನೋಡಿ ಶಲ್ಯನು ಕ್ರುದ್ಧನಾಗಿ ಉಕ್ಕಿನ ಗದೆಯನ್ನು ಮೇಲೆ ಎತ್ತಿ ಹಿಡಿದು ಗರ್ಜಿಸುತ್ತಾ ಉತ್ತಮ ರಥದಿಂದ ಧುಮುಕಿದನು.

07014005a ತಂ ದೀಪ್ತಮಿವ ಕಾಲಾಗ್ನಿಂ ದಂಡಹಸ್ತಮಿವಾಂತಕಂ|

07014005c ಜವೇನಾಭ್ಯಪತದ್ಭೀಮಃ ಪ್ರಗೃಹ್ಯ ಮಹತೀಂ ಗದಾಂ||

ಕಾಲಾಗ್ನಿಯಂತೆ ಉರಿಯುತ್ತಿದ್ದ, ದಂಡವನ್ನು ಹಿಡಿದ ಅಂತಕನಂತಿದ್ದ ಅವನನ್ನು ನೋಡಿ ಭೀಮನು ಮಹಾ ಗದೆಯನ್ನು ಹಿಡಿದು ವೇಗದಿಂದ ಎದುರಿಸಿದನು.

07014006a ಸೌಭದ್ರೋಽಪ್ಯಶನಿಪ್ರಖ್ಯಾಂ ಪ್ರಗೃಹ್ಯ ಮಹತೀಂ ಗದಾಂ|

07014006c ಏಹ್ಯೇಹೀತ್ಯಬ್ರವೀಚ್ಚಲ್ಯಂ ಯತ್ನಾದ್ಭೀಮೇನ ವಾರಿತಃ||

ಸೌಭದ್ರನೂ ಕೂಡ ವಜ್ರಾಯುಧದಂತಿದ್ದ ಮಹಾ ಗದೆಯನ್ನು ಹಿಡಿದು “ಬಾ! ಬಾ!” ಎಂದು ಶಲ್ಯನನ್ನು ಕರೆಯುತ್ತಿರಲು ಭೀಮನು ಅವನನ್ನು ಪ್ರಯತ್ನಪಟ್ಟು ತಡೆದನು.

07014007a ವಾರಯಿತ್ವಾ ತು ಸೌಭದ್ರಂ ಭೀಮಸೇನಃ ಪ್ರತಾಪವಾನ್|

07014007c ಶಲ್ಯಮಾಸಾದ್ಯ ಸಮರೇ ತಸ್ಥೌ ಗಿರಿರಿವಾಚಲಃ||

ಸೌಭದ್ರನನ್ನು ತಡೆದು ಪ್ರತಾಪವಾನ್ ಭೀಮಸೇನನು ಶಲ್ಯನನ್ನು ಎದುರಿಸಿ ಸಮರದಲ್ಲಿ ಗಿರಿಯಂತೆ ಅಚಲನಾಗಿ ನಿಂತನು.

07014008a ತಥೈವ ಮದ್ರರಾಜೋಽಪಿ ಭೀಮಂ ದೃಷ್ಟ್ವಾ ಮಹಾಬಲಂ|

07014008c ಸಸಾರಾಭಿಮುಖಸ್ತೂರ್ಣಂ ಶಾರ್ದೂಲ ಇವ ಕುಂಜರಂ||

ಆಗ ಮದ್ರರಾಜನೂ ಕೂಡ ಮಹಾಬಲ ಭೀಮನನ್ನು ನೋಡಿ ಹುಲಿಯು ಆನೆಯನ್ನು ಆಕ್ರಮಣಿಸುವಂತೆ ಅವನಿಗೆ ಎದುರಾಗಿ ಹೋಗಿ ಆಕ್ರಮಣಿಸಿದನು.

07014009a ತತಸ್ತೂರ್ಯನಿನಾದಾಶ್ಚ ಶಂಖಾನಾಂ ಚ ಸಹಸ್ರಶಃ|

07014009c ಸಿಂಹನಾದಾಶ್ಚ ಸಂಜಜ್ಞುರ್ಭೇರೀಣಾಂ ಚ ಮಹಾಸ್ವನಾಃ||

ಆಗ ಕೂಡಲೇ ಸಹಸ್ರಾರು ಶಂಖಗಳ ನಿನಾದಗಳು, ಸಿಂಹನಾದಗಳು ಮತ್ತು ಭೇರಿಗಳ ಮಹಾಶಬ್ಧವು ಉಂಟಾಯಿತು.

07014010a ಪಶ್ಯತಾಂ ಶತಶೋ ಹ್ಯಾಸೀದನ್ಯೋನ್ಯಸಮಚೇತಸಾಂ|

07014010c ಪಾಂಡವಾನಾಂ ಕುರೂಣಾಂ ಚ ಸಾಧು ಸಾಧ್ವಿತಿ ನಿಸ್ವನಃ||

ನೋಡುತ್ತಿರುವ ನೂರಾರು ಪಾಂಡವ-ಕೌರವರ ಕಡೆಯವರು ಸಮಚೇತಸರಾದ ಅನ್ಯೋನ್ಯರನ್ನು “ಸಾಧು! ಸಾಧು!” ಎಂದು ಹುರಿದುಂಬಿಸುತ್ತಿದ್ದರು.

07014011a ನ ಹಿ ಮದ್ರಾಧಿಪಾದನ್ಯಃ ಸರ್ವರಾಜಸು ಭಾರತ|

07014011c ಸೋಢುಮುತ್ಸಹತೇ ವೇಗಂ ಭೀಮಸೇನಸ್ಯ ಸಂಯುಗೇ||

ಭಾರತ! ಸಂಯುಗದಲ್ಲಿ ಭೀಮಸೇನನ ವೇಗವನ್ನು ಸಹಿಸಿಕೊಳ್ಳುವವರು ಸರ್ವರಾಜರಲ್ಲಿ ಮದ್ರಾಧಿಪನನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ.

07014012a ತಥಾ ಮದ್ರಾಧಿಪಸ್ಯಾಪಿ ಗದಾವೇಗಂ ಮಹಾತ್ಮನಃ|

07014012c ಸೋಢುಮುತ್ಸಹತೇ ಲೋಕೇ ಕೋಽನ್ಯೋ ಯುಧಿ ವೃಕೋದರಾತ್||

ಹಾಗೆಯೇ ಮಹಾತ್ಮ ಮದ್ರಾಧಿಪನ ಗದಾವೇಗವನ್ನು ಯುದ್ಧದಲ್ಲಿ ವೃಕೋದರನನ್ನು ಬಿಟ್ಟು ಬೇರೆ ಯಾರೂ ಸಹಿಸಿಕೊಳ್ಳಲು ಉತ್ಸುಕರಿರಲಿಲ್ಲ.

07014013a ಪಟ್ಟೈರ್ಜಾಂಬೂನದೈರ್ಬದ್ಧಾ ಬಭೂವ ಜನಹರ್ಷಿಣೀ|

07014013c ಪ್ರಜಜ್ವಾಲ ತಥಾವಿದ್ಧಾ ಭೀಮೇನ ಮಹತೀ ಗದಾ||

ಬಂಗಾರದ ಪಟ್ಟಿಯಿಂದ ಕಟ್ಟಲ್ಪಟ್ಟಿದ್ದ ಭೀಮನು ಹಿಡಿದಿದ್ದ ಜನಹರ್ಷಿಣೀ ಮಹಾಗದೆಯು ಉರಿಯುವ ಬೆಂಕಿಯಂತೆ ಹೊಳೆಯುತ್ತಿತ್ತು.

07014014a ತಥೈವ ಚರತೋ ಮಾರ್ಗಾನ್ಮಂಡಲಾನಿ ಚ ಭಾಗಶಃ|

07014014c ಮಹಾವಿದ್ಯುತ್ಪ್ರತೀಕಾಶಾ ಶಲ್ಯಸ್ಯ ಶುಶುಭೇ ಗದಾ||

ಹಾಗೆಯೇ ಮಂಡಲಾಕಾರ ಮಾರ್ಗದಲ್ಲಿ ಚಲಿಸುತ್ತಿದ್ದ ಶಲ್ಯನ ಗದೆಯೂ ಕೂಡ ಭಾಗಶಃ ಆಕಾಶದಲ್ಲಿರುವ ಮಹಾಮಿಂಚಿನಂತೆ ಹೊಳೆಯತ್ತಿತ್ತು.

07014015a ತೌ ವೃಷಾವಿವ ನರ್ದಂತೌ ಮಂಡಲಾನಿ ವಿಚೇರತುಃ|

07014015c ಆವರ್ಜಿತಗದಾಶೃಂಗಾವುಭೌ ಶಲ್ಯವೃಕೋದರೌ||

ಗೂಳಿಗಳಂತೆ ಕೂಗುತ್ತಾ, ಮಂಡಲಾಕಾರಗಳಲ್ಲಿ ಚಲಿಸುತ್ತಾ ಆ ಶಲ್ಯ-ವೃಕೋದರರಿಬ್ಬರು ಶೃಂಗಗಳಂತಿರುವ ಗದೆಗಳಿಂದ ಹೊಡೆದಾಡಿದರು.

07014016a ಮಂಡಲಾವರ್ತಮಾರ್ಗೇಷು ಗದಾವಿಹರಣೇಷು ಚ|

07014016c ನಿರ್ವಿಶೇಷಮಭೂದ್ಯುದ್ಧಂ ತಯೋಃ ಪುರುಷಸಿಂಹಯೋಃ||

ಮಂಡಲಾಕಾರವಾಗಿ ತಿರುಗುವುದರಲ್ಲಿ, ಗದೆಯನ್ನು ತಿರುಗಿಸುವುದರಲ್ಲಿ ಆ ಪುರುಷಸಿಂಹರ ಯುದ್ಧದಲ್ಲಿ ವ್ಯತ್ಯಾಸವೇ ಇರಲಿಲ್ಲ.

07014017a ತಾಡಿತಾ ಭೀಮಸೇನೇನ ಶಲ್ಯಸ್ಯ ಮಹತೀ ಗದಾ|

07014017c ಸಾಗ್ನಿಜ್ವಾಲಾ ಮಹಾರೌದ್ರಾ ಗದಾಚೂರ್ಣಮಶೀರ್ಯತ||

ಭೀಮಸೇನನಿಂದ ಹೊಡೆಯಲ್ಪಟ್ಟ ಶಲ್ಯನ ಮಹಾಗದೆಯು ಅಗ್ನಿಜ್ವಾಲೆಯೊಂದಿಗೆ ಮಹಾರೌದ್ರವಾಗಿ ಚೂರು ಚೂರಾಯಿತು.

07014018a ತಥೈವ ಭೀಮಸೇನಸ್ಯ ದ್ವಿಷತಾಭಿಹತಾ ಗದಾ|

07014018c ವರ್ಷಾಪ್ರದೋಷೇ ಖದ್ಯೋತೈರ್ವೃತೋ ವೃಕ್ಷ ಇವಾಬಭೌ||

ಹಾಗೆಯೇ ಭೀಮಸೇನನ ದ್ವೇಷಿಯಿಂದ ಹೊಡೆಯಲ್ಪಟ್ಟ ಗದೆಯು ಮಳೆಗಾಲದ ಪ್ರದೋಷಕಾಲದಲ್ಲಿ ಮಿಂಚಿನ ಹುಳುಗಳು ಮುತ್ತಿರುವ ವೃಕ್ಷದಂತೆ ತೋರಿತು.

07014019a ಗದಾ ಕ್ಷಿಪ್ತಾ ತು ಸಮರೇ ಮದ್ರರಾಜೇನ ಭಾರತ|

07014019c ವ್ಯೋಮ ಸಂದೀಪಯಾನಾ ಸಾ ಸಸೃಜೇ ಪಾವಕಂ ಬಹು||

ಭಾರತ! ಮದ್ರರಾಜನು ಸಮರದಲ್ಲಿ ಎಸೆದ ಗದೆಯು ಆಕಾಶವನ್ನೇ ಬೆಳಗಿಸುತ್ತಾ ಅನೇಕ ಬೆಂಕಿಯ ಕಿಡಿಗಳನ್ನುಂಟುಮಾಡಿತು.

07014020a ತಥೈವ ಭೀಮಸೇನೇನ ದ್ವಿಷತೇ ಪ್ರೇಷಿತಾ ಗದಾ|

07014020c ತಾಪಯಾಮಾಸ ತತ್ಸೈನ್ಯಂ ಮಹೋಲ್ಕಾ ಪತತೀ ಯಥಾ||

ಹಾಗೆಯೇ ಭೀಮಸೇನನು ಕೋಪದಿಂದ ಎಸೆದ ಗದೆಯು ಬೀಳುತ್ತಿರುವ ಮಹಾ ಉಲ್ಕೆಯ‌ಂತೆ ಆ ಸೈನ್ಯವನ್ನು ಸುಟ್ಟಿತು.

07014021a ತೇ ಚೈವೋಭೇ ಗದೇ ಶ್ರೇಷ್ಠೇ ಸಮಾಸಾದ್ಯ ಪರಸ್ಪರಂ|

07014021c ಶ್ವಸಂತ್ಯೌ ನಾಗಕನ್ಯೇವ ಸಸೃಜಾತೇ ವಿಭಾವಸುಂ||

ಗದೆಯಲ್ಲಿ ಶ್ರೇಷ್ಠರಾದ ಅವರಿಬ್ಬರೂ ಪರಸ್ಪರರನ್ನು ಎದುರಿಸಿ ನಾಗಕನ್ಯೆಯರಂತೆ ಭುಸುಗುಟ್ಟುತ್ತಾ ಬೆಂಕಿಯ ಕಿಡಿಗಳನ್ನು ಹೊರಹೊಮ್ಮಿದರು.

07014022a ನಖೈರಿವ ಮಹಾವ್ಯಾಘ್ರೌ ದಂತೈರಿವ ಮಹಾಗಜೌ|

07014022c ತೌ ವಿಚೇರತುರಾಸಾದ್ಯ ಗದಾಭ್ಯಾಂ ಚ ಪರಸ್ಪರಂ||

ಮಹಾವ್ಯಾಘ್ರಗಳು ಉಗುರುಗಳಿಂದ ಹೇಗೋ ಹಾಗೆ ಮತ್ತು ಮಹಾಗಜಗಳೆರಡು ದಂತಗಳಿಂದ ಹೇಗೋ ಹಾಗೆ ಅವರಿಬ್ಬರೂ ಗದೆಗಳಿಂದ ಪರಸ್ಪರರನ್ನು ತಾಗಿಸಿ ಹೊಡೆದರು.

07014023a ತತೋ ಗದಾಗ್ರಾಭಿಹತೌ ಕ್ಷಣೇನ ರುಧಿರೋಕ್ಷಿತೌ|

07014023c ದದೃಶಾತೇ ಮಹಾತ್ಮಾನೌ ಪುಷ್ಪಿತಾವಿವ ಕಿಂಶುಕ||

ಆಗ ಕ್ಷಣದಲ್ಲಿಯೇ ಗದೆಯಿಂದ ಪೆಟ್ಟುತಿಂದು ರಕ್ತದಿಂದ ತೋಯ್ದುಹೋಗಿದ್ದ ಆ ಇಬ್ಬರು ಮಹಾತ್ಮರು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಕಂಡರು.

07014024a ಶುಶ್ರುವೇ ದಿಕ್ಷು ಸರ್ವಾಸು ತಯೋಃ ಪುರುಷಸಿಂಹಯೋಃ|

07014024c ಗದಾಭಿಘಾತಸಂಹ್ರಾದಃ ಶಕ್ರಾಶನಿರಿವೋಪಮಃ||

ಆ ಪುರುಷಸಿಂಹರ ಗದಾಪ್ರಹಾರದ ಶಬ್ಧವು ಸಿಡುಲಿನ ಗರ್ಜನೆಯಂತೆ ಎಲ್ಲ ದಿಕ್ಕುಗಳಲ್ಲಿ ಕೇಳಿಬರುತ್ತಿತ್ತು.

07014025a ಗದಯಾ ಮದ್ರರಾಜೇನ ಸವ್ಯದಕ್ಷಿಣಮಾಹತಃ|

07014025c ನಾಕಂಪತ ತದಾ ಭೀಮೋ ಭಿದ್ಯಮಾನ ಇವಾಚಲಃ||

ಮದ್ರರಾಜನು ಗದೆಯಿಂದ ಎಡ ಮತ್ತು ಬಲಭಾಗಗಳೆರಡಕ್ಕೆ ಹೊಡೆದರೂ ಭೀಮನು ಪರ್ವತದಂತೆ ಅಲುಗಾಡಲಿಲ್ಲ.

07014026a ತಥಾ ಭೀಮಗದಾವೇಗೈಸ್ತಾಡ್ಯಮಾನೋ ಮಹಾಬಲಃ|

07014026c ಧೈರ್ಯಾನ್ಮದ್ರಾಧಿಪಸ್ತಸ್ಥೌ ವಜ್ರೈರ್ಗಿರಿರಿವಾಹತಃ||

ಹಾಗೆಯೇ ಭೀಮನ ಗದಾವೇಗದಿಂದ ಹೊಡೆಯಲ್ಪಟ್ಟ ಮಹಾಬಲ ಮದ್ರಾಧಿಪನು ಧೈರ್ಯದಿಂದ ವಜ್ರದಿಂದ ಹೊಡೆಯಲಟ್ಟ ಪರ್ವತದಂತೆ ನಿಂತಿದ್ದನು.

07014027a ಆಪೇತತುರ್ಮಹಾವೇಗೌ ಸಮುಚ್ಚ್ರಿತಮಹಾಗದೌ|

07014027c ಪುನರಂತರಮಾರ್ಗಸ್ಥೌ ಮಂಡಲಾನಿ ವಿಚೇರತುಃ||

ಪುನಃ ಮಹಾವೇಗಯುಕ್ತರಾಗಿದ್ದ ಅವರು ಮಹಾಗದೆಗಳನ್ನು ಎತ್ತಿಕೊಂಡು ಅಂತರ ಮಾರ್ಗಸ್ಥರಾಗಿ ಮಂಡಲಾಕರದ ಗತಿಯಿಂದ ಚಲಿಸತೊಡಗಿದರು.

07014028a ಅಥಾಪ್ಲುತ್ಯ ಪದಾನ್ಯಷ್ಟೌ ಸನ್ನಿಪತ್ಯ ಗಜಾವಿವ|

07014028c ಸಹಸಾ ಲೋಹದಂಡಾಭ್ಯಾಮನ್ಯೋನ್ಯಮಭಿಜಘ್ನತುಃ||

ಎಂಟು ಹೆಜ್ಜೆಗಳಷ್ಟು ದೂರ ಕುಪ್ಪಳಿಸಿ ಎರಡು ಆನೆಗಳೋಪಾದಿಯಲ್ಲಿ ಹೋರಾಡುತ್ತಾ ಒಡನೆಯೇ ಆ ಲೋಹದಂಡಗಳಿಂದ ಪರಸ್ಪರರನ್ನು ಹೊಡೆದರು.

07014029a ತೌ ಪರಸ್ಪರವೇಗಾಚ್ಚ ಗದಾಭ್ಯಾಂ ಚ ಭೃಶಾಹತೌ|

07014029c ಯುಗಪತ್ಪೇತತುರ್ವೀರೌ ಕ್ಷಿತಾವಿಂದ್ರಧ್ವಜಾವಿವ||

ಪರಸ್ಪರರ ಗದೆಗಳ ವೇಗ ಪ್ರಹಾರಗಳಿಂದ ತುಂಬಾ ಗಾಯಗೊಂಡ ಆ ಇಬ್ಬರೂ ವೀರರೂ ಒಟ್ಟಿಗೇ ಇಂದ್ರಧ್ವಜಗಳಂತೆ ಭೂಮಿಯ ಮೇಲೆ ಬಿದ್ದರು.

07014030a ತತೋ ವಿಹ್ವಲಮಾನಂ ತಂ ನಿಃಶ್ವಸಂತಂ ಪುನಃ ಪುನಃ|

07014030c ಶಲ್ಯಮಭ್ಯಪತತ್ತೂರ್ಣಂ ಕೃತವರ್ಮಾ ಮಹಾರಥಃ||

ಆಗ ಶಲ್ಯನು ವಿಹ್ವಲಮಾನನಾಗಿ ಪುನಃ ಪುನಃ ಭುಸುಗುಟ್ಟುತ್ತಾ ಬಿದ್ದಿರಲು ಒಡನೆಯೇ ಅಲ್ಲಿಗೆ ಮಹಾರಥ ಕೃತವರ್ಮನು ಆಗಮಿಸಿದನು.

07014031a ದೃಷ್ಟ್ವಾ ಚೈನಂ ಮಹಾರಾಜ ಗದಯಾಭಿನಿಪೀಡಿತಂ|

07014031c ವಿಚೇಷ್ಟಂತಂ ಯಥಾ ನಾಗಂ ಮೂರ್ಚಯಾಭಿಪರಿಪ್ಲುತಂ||

ಮಹಾರಾಜ! ಗದೆಯಿಂದ ಪೀಡಿತನಾಗಿ ಸರ್ಪದಂತೆ ಮೂರ್ಛೆತಪ್ಪಿ ಹೊರಳಾಡುತ್ತಿದ್ದ ಅವನನ್ನು ನೋಡಿದನು.

07014032a ತತಃ ಸಗದಮಾರೋಪ್ಯ ಮದ್ರಾಣಾಮಧಿಪಂ ರಥಂ|

07014032c ಅಪೋವಾಹ ರಣಾತ್ತೂರ್ಣಂ ಕೃತವರ್ಮಾ ಮಹಾರಥಃ||

ಆಗ ಗದೆಯೊಂದಿಗೆ ಮದ್ರಾಧಿಪನನ್ನು ರಥದಲ್ಲಿ ಏರಿಸಿಕೊಂಡು ಮಹಾರಥ ಕೃತವರ್ಮನು ರಣದಿಂದ ವೇಗವಾಗಿ ಹೊರಟುಹೋದನು.

07014033a ಕ್ಷೀಬವದ್ವಿಹ್ವಲೋ ವೀರೋ ನಿಮೇಷಾತ್ಪುನರುತ್ಥಿತಃ|

07014033c ಭೀಮೋಽಪಿ ಸುಮಹಾಬಾಹುರ್ಗದಾಪಾಣಿರದೃಶ್ಯತ||

ವಿಹ್ವಲನಾಗಿದ್ದ ಆಯಾಸಗೊಂಡಿದ್ದ ಸುಮಹಾಬಾಹು ವೀರ ಭೀಮನಾದರೋ ನಿಮಿಷದಲ್ಲಿಯೇ ಗದೆಯನ್ನು ಹಿಡಿದು ನಿಂತನು.

07014034a ತತೋ ಮದ್ರಾಧಿಪಂ ದೃಷ್ಟ್ವಾ ತವ ಪುತ್ರಾಃ ಪರಾಙ್ಮುಖಂ|

07014034c ಸನಾಗರಥಪತ್ತ್ಯಶ್ವಾಃ ಸಮಕಂಪಂತ ಮಾರಿಷ||

ಮಾರಿಷ! ಆಗ ಮದ್ರಾಧಿಪನು ಪರಾಙ್ಮುಖನಾದುದನ್ನು ನೋಡಿ ನಿನ್ನ ಪುತ್ರನು ಗಜ-ರಥ-ಅಶ್ವ-ಪದಾತಿಗಳನ್ನು ನಡುಗಿಸಿದನು.

07014035a ತೇ ಪಾಂಡವೈರರ್ದ್ಯಮಾನಾಸ್ತಾವಕಾ ಜಿತಕಾಶಿಭಿಃ|

07014035c ಭೀತಾ ದಿಶೋಽನ್ವಪದ್ಯಂತ ವಾತನುನ್ನಾ ಘನಾ ಇವ||

ಗೆಲುವಿನಿಂದ ಸೊಕ್ಕಿದ್ದ ಪಾಂಡವರಿಂದ ಮರ್ದಿಸಲ್ಪಡುತ್ತಿದ್ದ ನಿನ್ನವರು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ಭೀತರಾಗಿ ದಿಕ್ಕಾಪಾಲಾಗಿ ಓಡಿದರು.

07014036a ನಿರ್ಜಿತ್ಯ ಧಾರ್ತರಾಷ್ಟ್ರಾಂಸ್ತು ಪಾಂಡವೇಯಾ ಮಹಾರಥಾಃ|

07014036c ವ್ಯರೋಚಂತ ರಣೇ ರಾಜನ್ದೀಪ್ಯಮಾನಾ ಯಶಸ್ವಿನಃ||

ರಾಜನ್! ಧಾರ್ತರಾಷ್ಟ್ರರನ್ನು ಸೋಲಿಸಿ ಮಹಾರಥ ಯಶಸ್ವಿ ಪಾಂಡವರು ರಣದಲ್ಲಿ ಬೆಳಗುತ್ತಾ ರಾರಾಜಿಸಿದರು.

07014037a ಸಿಂಹನಾದಾನ್ಭೃಶಂ ಚಕ್ರುಃ ಶಂಖಾನ್ದಧ್ಮುಶ್ಚ ಹರ್ಷಿತಾಃ|

07014037c ಭೇರೀಶ್ಚ ವಾದಯಾಮಾಸುರ್ಮೃದಂಗಾಂಶ್ಚಾನಕೈಃ ಸಹ||

ಗಟ್ಟಿಯಾಗಿ ಸಿಂಹನಾದಗೈದರು. ಹರ್ಷಿತರಾಗಿ ಶಂಖಗಳನ್ನು ಊದಿದರು. ಅನಕಗಳೊಂದಿಗೆ ಭೇರಿಗಳನ್ನೂ ಮೃದಂಗಗಳನ್ನೂ ಬಾರಿಸತೊಡಗಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಶಲ್ಯಾಪಯಾನೇ ಚತುರ್ದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಶಲ್ಯಾಪಯಾನ ಎನ್ನುವ ಹದಿನಾಲ್ಕನೇ ಅಧ್ಯಾಯವು.

Image result for indian motifs against white background

Comments are closed.