Drona Parva: Chapter 139

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೩೯

ರಣಭೂಮಿಯ ವರ್ಣನೆ (೧-೮). ಧೃತರಾಷ್ಟ್ರನ ಪ್ರಶ್ನೆ (೯-೧೫). ದುರ್ಯೋಧನನು ದ್ರೋಣನ ರಕ್ಷಣೆಗೆ ಆದೇಶವನ್ನಿತ್ತಿದುದು (೧೬-೨೮). ಯುದ್ಧ ವರ್ಣನೆ (೨೯-೩೩).

07139001 ಸಂಜಯ ಉವಾಚ|

07139001a ಪ್ರಕಾಶಿತೇ ತಥಾ ಲೋಕೇ ರಜಸಾ ಚ ತಮೋವೃತೇ|

07139001c ಸಮಾಜಗ್ಮುರಥೋ ವೀರಾಃ ಪರಸ್ಪರವಧೈಷಿಣಃ||

ಸಂಜಯನು ಹೇಳಿದನು: “ಕತ್ತಲೆಯು ತುಂಬಿದ್ದ ಆ ರಾತ್ರಿಯಲ್ಲಿ ಲೋಕವು ಹಾಗೆ ಪ್ರಕಾಶಿತಗೊಂಡಿರಲು ಪರಸ್ಪರರನ್ನು ವಧಿಸಲು ಬಯಸಿದ ವೀರರಥರು ಸೇರಿದರು.

07139002a ತೇ ಸಮೇತ್ಯ ರಣೇ ರಾಜಂ ಶಸ್ತ್ರಪ್ರಾಸಾಸಿಧಾರಿಣಃ|

07139002c ಪರಸ್ಪರಮುದೈಕ್ಷಂತ ಪರಸ್ಪರಕೃತಾಗಸಃ||

ರಾಜನ್! ಪರಸ್ಪರರನ್ನು ಅಪರಾಧಿಗಳೆಂದು ತಿಳಿದು ಶಸ್ತ್ರ-ಪ್ರಾಸಗಳನ್ನು ಹಿಡಿದ ಅವರು ರಣದಲ್ಲಿ ಒಟ್ಟಾಗಿ ಪರಸ್ಪರರನ್ನು ವೀಕ್ಷಿಸುತ್ತಿದ್ದರು.

07139003a ಪ್ರದೀಪಾನಾಂ ಸಹಸ್ರೈಶ್ಚ ದೀಪ್ಯಮಾನೈಃ ಸಮಂತತಃ|

07139003c ವಿರರಾಜ ತದಾ ಭೂಮಿರ್ದ್ಯೌರ್ಗ್ರಹೈರಿವ ಭಾರತ||

ಭಾರತ! ಎಲ್ಲ ಕಡೆಗಳಲ್ಲಿ ಸಹಸ್ರಾರು ದೀಪಗಳಿಂದ ಬೆಳಗುತ್ತಿದ್ದ ಆ ರಣಭೂಮಿಯು ಗ್ರಹಗಳಿಂದ ತುಂಬಿದ ಆಕಾಶದಂತೆ ವಿರಾಜಿಸುತ್ತಿತ್ತು.

07139004a ಉಲ್ಕಾಶತೈಃ ಪ್ರಜ್ವಲಿತೈ ರಣಭೂಮಿರ್ವ್ಯರಾಜತ|

07139004c ದಹ್ಯಮಾನೇವ ಲೋಕಾನಾಮಭಾವೇ ವೈ ವಸುಂಧರಾ||

ನೂರಾರು ದೀವಟಿಗೆಗಳಿಂದ ಪ್ರಜ್ವಲಿತಗೊಂಡ ಆ ರಣಭೂಮಿಯು ಪ್ರಳಯಕಾಲದಲ್ಲಿ ದಹಿಸುತ್ತಿರುವ ವಸುಂಧರೆಯಂತೆ ವಿರಾಜಿಸುತ್ತಿತ್ತು.

07139005a ಪ್ರಾದೀಪ್ಯಂತ ದಿಶಃ ಸರ್ವಾಃ ಪ್ರದೀಪೈಸ್ತೈಃ ಸಮಂತತಃ|

07139005c ವರ್ಷಾಪ್ರದೋಷೇ ಖದ್ಯೋತೈರ್ವೃತಾ ವೃಕ್ಷಾ ಇವಾಬಭುಃ||

ಸುತ್ತಲೂ ಇದ್ದ ಆ ದೀವಟಿಗೆಗಳಿಂದ ಎಲ್ಲ ದಿಕ್ಕುಗಳೂ ಬೆಳಗಿ, ವರ್ಷಾಕಾಲದ ಪ್ರದೋಷಕಾಲದಲ್ಲಿ ಮಿಂಚುಹುಳುಗಳಿಂದ ತುಂಬಿದ ವೃಕ್ಷಗಳಂತೆ ತೋರುತ್ತಿದ್ದವು.

07139006a ಅಸಜ್ಜಂತ ತತೋ ವೀರಾ ವೀರೇಷ್ವೇವ ಪೃಥಕ್ ಪೃಥಕ್|

07139006c ನಾಗಾ ನಾಗೈಃ ಸಮಾಜಗ್ಮುಸ್ತುರಗಾಃ ಸಹ ವಾಜಿಭಿಃ||

ಅಲ್ಲಿ ವೀರರು ವೀರರೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಯುದ್ಧದಲ್ಲಿ ತೊಡಗಿದರು. ಆನೆಗಳು ಆನೆಗಳೊಡನೆಯೂ ಅಶ್ವಾರೋಹಿಗಳು ಅಶ್ವಾರೋಹಿಗಳೊಡನೆಯೂ ಯುದ್ಧದಲ್ಲಿ ತೊಡಗಿದರು.

07139007a ರಥಾ ರಥವರೈರೇವ ಸಮಾಜಗ್ಮುರ್ಮುದಾನ್ವಿತಾಃ|

07139007c ತಸ್ಮಿನ್ರಾತ್ರಿಮುಖೇ ಘೋರೇ ಪುತ್ರಸ್ಯ ತವ ಶಾಸನಾತ್||

ಆ ಘೋರ ರಾತ್ರಿಯ ಪ್ರಾರಂಭದಲ್ಲಿ ನಿನ್ನ ಮಗನ ಶಾಸನದಂತೆ ರಥಾರೂಢರು ಮುದಾನ್ವಿತರಾಗಿ ರಥಾರೂಢರೊಂದಿಗೇ ಯುದ್ಧದಲ್ಲಿ ತೊಡಗಿದರು.

07139008a ತತೋಽರ್ಜುನೋ ಮಹಾರಾಜ ಕೌರವಾಣಾಮನೀಕಿನೀಂ|

07139008c ವ್ಯಧಮತ್ತ್ವರಯಾ ಯುಕ್ತಃ ಕ್ಷಪಯನ್ಸರ್ವಪಾರ್ಥಿವಾನ್||

ಮಹಾರಾಜ! ಆಗ ಅರ್ಜುನನು ತ್ವರೆಮಾಡಿ ಎಲ್ಲ ಪಾರ್ಥಿವರನ್ನೂ ಸಂಹರಿಸುತ್ತಾ ಕೌರವರ ಸೇನೆಯನ್ನು ಧ್ವಂಸಗೊಳಿಸಲು ಉಪಕ್ರಮಿಸಿದನು.”

07139009 ಧೃತರಾಷ್ಟ್ರ ಉವಾಚ|

07139009a ತಸ್ಮಿನ್ಪ್ರವಿಷ್ಟೇ ಸಂರಬ್ಧೇ ಮಮ ಪುತ್ರಸ್ಯ ವಾಹಿನೀಂ|

07139009c ಅಮೃಷ್ಯಮಾಣೇ ದುರ್ಧರ್ಷೇ ಕಿಂ ವ ಆಸೀನ್ಮನಸ್ತದಾ||

ಧೃತರಾಷ್ಟ್ರನು ಹೇಳಿದನು: “ಅಸಹನಶೀಲ ದುರ್ಧರ್ಷ ಅರ್ಜುನನು ಕೋಪಾವಿಷ್ಟನಾಗಿ ನನ್ನ ಮಗನ ಸೇನೆಯನ್ನು ಪ್ರವೇಶಿಸಿದಾಗ ನಿಮ್ಮ ಮನಸ್ಸಿನ ಸ್ಥಿತಿಯು ಹೇಗಿದ್ದಿತು?

07139010a ಕಿಮಮನ್ಯಂತ ಸೈನ್ಯಾನಿ ಪ್ರವಿಷ್ಟೇ ಶತ್ರುತಾಪನೇ|

07139010c ದುರ್ಯೋಧನಶ್ಚ ಕಿಂ ಕೃತ್ಯಂ ಪ್ರಾಪ್ತಕಾಲಮಮನ್ಯತ||

ಆ ಶತ್ರುತಾಪನನು ಪ್ರವೇಶಿಸಲು ನನ್ನ ಸೇನೆಗಳು ಏನುಮಾಡಿದವು? ಆಗ ದುರ್ಯೋಧನನೂ ಕೂಡ ಏನು ಮಾಡಬೇಕೆಂದು ನಿಶ್ಚಯಿಸಿದನು?

07139011a ಕೇ ಚೈನಂ ಸಮರೇ ವೀರಂ ಪ್ರತ್ಯುದ್ಯಯುರರಿಂದಮಂ|

07139011c ಕೇಽರಕ್ಷನ್ದಕ್ಷಿಣಂ ಚಕ್ರಂ ಕೇ ಚ ದ್ರೋಣಸ್ಯ ಸವ್ಯತಃ||

07139012a ಕೇ ಪೃಷ್ಠತೋಽಸ್ಯ ಹ್ಯಭವನ್ವೀರಾ ವೀರಸ್ಯ ಯುಧ್ಯತಃ|

07139012c ಕೇ ಪುರಸ್ತಾದಗಚ್ಚಂತ ನಿಘ್ನತಃ ಶಾತ್ರವಾನ್ರಣೇ||

ಸಮರದಲ್ಲಿ ಆ ವೀರ ಅರಿಂದಮನನ್ನು ಯಾರು ಎದುರಿಸಿ ಯುದ್ಧಮಾಡಿದರು? ದ್ರೋಣನ ಎಡ ಮತ್ತು ಬಲ ಚಕ್ರಗಳನ್ನು ಯಾರು ರಕ್ಷಿಸುತ್ತಿದ್ದರು? ಆ ವೀರನ ಮುಂದುಗಡೆ ಇದ್ದುಕೊಂಡು ಯಾವ ವೀರನು ಆ ವೀರ ಅರ್ಜುನನೊಂದಿಗೆ ಯುದ್ಧಮಾಡಿದನು? ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಾ ಅವನ ರಥದ ಮುಂದೆ ಯಾರು ಹೋಗುತ್ತಿದ್ದರು?

07139013a ಯತ್ಪ್ರಾವಿಶನ್ಮಹೇಷ್ವಾಸಃ ಪಾಂಚಾಲಾನಪರಾಜಿತಃ|

07139013c ನೃತ್ಯನ್ನಿವ ನರವ್ಯಾಘ್ರೋ ರಥಮಾರ್ಗೇಷು ವೀರ್ಯವಾನ್||

ಮಹೇಷ್ವಾಸ, ಅಪರಾಜಿತ, ವೀರ್ಯವಾನ್ ನರವ್ಯಾಘ್ರ ದ್ರೋಣನು ರಥಮಾರ್ಗದಲ್ಲಿ ನರ್ತಿಸುತ್ತಿರುವನೇ ಎನ್ನುವಂತೆ ಪಾಂಚಾಲರ ಸೇನೆಯನ್ನು ಪ್ರವೇಶಿಸಿದ್ದನು.

07139014a ದದಾಹ ಚ ಶರೈರ್ದ್ರೋಣಃ ಪಾಂಚಾಲಾನಾಂ ರಥವ್ರಜಾನ್|

07139014c ಧೂಮಕೇತುರಿವ ಕ್ರುದ್ಧಃ ಸ ಕಥಂ ಮೃತ್ಯುಮೀಯಿವಾನ್||

ಧೂಮಕೇತುವಂತೆ ಕ್ರುದ್ಧನಾಗಿ ದ್ರೋಣನು ಶರಗಳಿಂದ ಪಾಂಚಾಲರ ರಥಶ್ರೇಣಿಗಳನ್ನು ಸುಡುತ್ತಿದ್ದನು. ಅಂಥವನು ಹೇಗೆ ಮೃತ್ಯುವಿಗೀಡಾದನು?

07139015a ಅವ್ಯಗ್ರಾನೇವ ಹಿ ಪರಾನ್ಕಥಯಸ್ಯಪರಾಜಿತಾನ್|

07139015c ಹತಾಂಶ್ಚೈವ ವಿಷಣ್ಣಾಂಶ್ಚ ವಿಪ್ರಕೀರ್ಣಾಂಶ್ಚ ಶಂಸಸಿ|

07139015e ರಥಿನೋ ವಿರಥಾಂಶ್ಚೈವ ಕೃತಾನ್ಯುದ್ಧೇಷು ಮಾಮಕಾನ್||

ಎದುರಾಳಿಗಳು ಅವ್ಯಗ್ರರೂ ಅಪರಾಜಿತರೂ ಆಗಿದ್ದರೆಂದು ಹೇಳುತ್ತಿರುವೆ. ಆದರೆ ನಮ್ಮವರು ಹತರಾದರೆಂದೂ, ವಿಷಣ್ಣರಾಗಿದ್ದರೆಂದೂ, ಚದುರಿಹೋಗಿದ್ದರೆಂದೂ, ರಥಿಗಳು ವಿರಥರಾಗಿ ಹೋದರೆಂದೂ ಹೇಳುತ್ತಿರುವೆ!”

07139016 ಸಂಜಯ ಉವಾಚ|

07139016a ದ್ರೋಣಸ್ಯ ಮತಮಾಜ್ಞಾಯ ಯೋದ್ಧುಕಾಮಸ್ಯ ತಾಂ ನಿಶಾಂ|

07139016c ದುರ್ಯೋಧನೋ ಮಹಾರಾಜ ವಶ್ಯಾನ್ ಭ್ರಾತೄನಭಾಷತ||

07139017a ವಿಕರ್ಣಂ ಚಿತ್ರಸೇನಂ ಚ ಮಹಾಬಾಹುಂ ಚ ಕೌರವಂ|

07139017c ದುರ್ಧರ್ಷಂ ದೀರ್ಘಬಾಹುಂ ಚ ಯೇ ಚ ತೇಷಾಂ ಪದಾನುಗಾಃ||

ಸಂಜಯನು ಹೇಳಿದನು: “ಮಹಾರಾಜ! ಆ ರಾತ್ರಿಯಲ್ಲಿ ದ್ರೋಣನು ಯುದ್ಧಮಾಡಲು ಬಯಸುತ್ತಿದ್ದಾನೆಂದು ತಿಳಿದ ದುರ್ಯೋಧನನು ತನ್ನ ವಶವರ್ತಿಗಳಾಗಿದ್ದ ಅನುಜರಿಗೆ ವಿಕರ್ಣ, ಚಿತ್ರಸೇನ, ಮಹಾಬಾಹು ಕೌರವ ದುರ್ಧರ್ಷ, ದೀರ್ಘಬಾಹು ಮತ್ತು ಅವರ ಅನುಯಾಯಿಗಳಿಗೆ ಹೇಳಿದನು:

07139018a ದ್ರೋಣಂ ಯತ್ತಾಃ ಪರಾಕ್ರಾಂತಾಃ ಸರ್ವೇ ರಕ್ಷತ ಪೃಷ್ಠತಃ|

07139018c ಹಾರ್ದಿಕ್ಯೋ ದಕ್ಷಿಣಂ ಚಕ್ರಂ ಶಲ್ಯಶ್ಚೈವೋತ್ತರಂ ತಥಾ||

“ಪರಾಕ್ರಾಂತರಾದ ನೀವೆಲ್ಲರೂ ಪ್ರಯತ್ನಪಟ್ಟು ದ್ರೋಣನನ್ನು ಹಿಂದಿನಿಂದ ರಕ್ಷಿಸಿ. ಹಾಗೆಯೇ ಹಾರ್ದಿಕ್ಯ ಕೃತವರ್ಮನು ಅವನ ಬಲಚಕ್ರವನ್ನೂ ಶಲ್ಯನು ಎಡ ಚಕ್ರವನ್ನೂ ರಕ್ಷಿಸಲಿ!”

07139019a ತ್ರಿಗರ್ತಾನಾಂ ಚ ಯೇ ಶೂರಾ ಹತಶಿಷ್ಟಾ ಮಹಾರಥಾಃ|

07139019c ತಾಂಶ್ಚೈವ ಸರ್ವಾನ್ಪುತ್ರಸ್ತೇ ಸಮಚೋದಯದಗ್ರತಃ||

ತ್ರಿಗರ್ತರಲ್ಲಿ ಅಳಿದುಳಿದಿದ್ದ ಮಹಾರಥರೆಲ್ಲರನ್ನು ಕೂಡ ನಿನ್ನ ಮಗನು ದ್ರೋಣನ ರಥದ ಮುಂಬಾಗದಲ್ಲಿ ಹೋಗುವಂತೆ ಪ್ರಚೋದಿಸಿದನು.

07139020a ಆಚಾರ್ಯೋ ಹಿ ಸುಸಮ್ಯತ್ತೋ ಭೃಶಂ ಯತ್ತಾಶ್ಚ ಪಾಂಡವಾಃ|

07139020c ತಂ ರಕ್ಷತ ಸುಸಮ್ಯತ್ತಾ ನಿಘ್ನಂತಂ ಶಾತ್ರವಾನ್ರಣೇ||

“ಆಚಾರ್ಯನು ಚೆನ್ನಾಗಿ ಪ್ರಯತ್ನಿಸುತ್ತಿರುವನು. ಪಾಂಡವರೂ ಕೂಡ ಚೆನ್ನಾಗಿ ಪ್ರಯತ್ನಿಸುತ್ತಿದ್ದಾರೆ. ರಣದಲ್ಲಿ ಶತ್ರುಗಳನ್ನು ಸಂಹರಿಸುವ ದ್ರೋಣನನ್ನು ನೀವು ಅತಿ ಪ್ರಯತ್ನದಿಂದ ರಕ್ಷಿಸಿರಿ.

07139021a ದ್ರೋಣೋ ಹಿ ಬಲವಾನ್ಯುದ್ಧೇ ಕ್ಷಿಪ್ರಹಸ್ತಃ ಪರಾಕ್ರಮೀ|

07139021c ನಿರ್ಜಯೇತ್ತ್ರಿದಶಾನ್ಯುದ್ಧೇ ಕಿಮು ಪಾರ್ಥಾನ್ಸಸೋಮಕಾನ್||

ಏಕೆಂದರೆ ದ್ರೋಣನೇ ಬಲವಾನನು. ಯುದ್ಧದಲ್ಲಿ ವೇಗದ ಕೈಚಳಕವುಳ್ಳವನು. ಪರಾಕ್ರಮಿಯು. ಯುದ್ಧದಲ್ಲಿ ತ್ರಿದಶರನ್ನೂ ಜಯಿಸಬಲ್ಲನು. ಇನ್ನು ಸೋಮಕರೊಂದಿಗೆ ಪಾರ್ಥರು ಯಾವ ಲೆಖ್ಕಕ್ಕೆ?

07139022a ತೇ ಯೂಯಂ ಸಹಿತಾಃ ಸರ್ವೇ ಭೃಶಂ ಯತ್ತಾ ಮಹಾರಥಾಃ|

07139022c ದ್ರೋಣಂ ರಕ್ಷತ ಪಾಂಚಾಲ್ಯಾದ್ಧೃಷ್ಟದ್ಯುಮ್ನಾನ್ಮಹಾರಥಾತ್||

ನೀವೆಲ್ಲ ಮಹಾರಥರೂ ಒಟ್ಟಾಗಿ ಬಹಳ ಪ್ರಯತ್ನದಿಂದ ದ್ರೋಣನನ್ನು ಮಹಾರಥ ಪಾಂಚಾಲ್ಯ ಧೃಷ್ಟದ್ಯುಮ್ನನಿಂದ ರಕ್ಷಿಸಿರಿ!

07139023a ಪಾಂಡವೇಯೇಷು ಸೈನ್ಯೇಷು ಯೋಧಂ ಪಶ್ಯಾಮ್ಯಹಂ ನ ತಂ|

07139023c ಯೋ ಜಯೇತ ರಣೇ ದ್ರೋಣಂ ಧೃಷ್ಟದ್ಯುಮ್ನಾದೃತೇ ನೃಪಾಃ||

ನೃಪರೇ! ಧೃಷ್ಟದ್ಯುಮ್ನನನ್ನು ಬಿಟ್ಟು ಪಾಂಡವರ ಸೇನೆಯಲ್ಲಿ ರಣದಲ್ಲಿ ದ್ರೋಣನನ್ನು ಜಯಿಸಬಲ್ಲ ಬೇರೆ ಯೋಧರು ಯಾರನ್ನೂ ನಾನು ಕಾಣೆ!

07139024a ತಸ್ಯ ಸರ್ವಾತ್ಮನಾ ಮನ್ಯೇ ಭಾರದ್ವಾಜಸ್ಯ ರಕ್ಷಣಂ|

07139024c ಸ ಗುಪ್ತಃ ಸೋಮಕಾನ್ ಹನ್ಯಾತ್ಸೃಂಜಯಾಂಶ್ಚ ಸರಾಜಕಾನ್||

ಭಾರದ್ವಾಜನ ರಕ್ಷಣೆಯು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿರಿ. ಹಾಗೆ ನಮ್ಮಿಂದ ರಕ್ಷಿಸಲ್ಪಟ್ಟರೆ ಅವನು ರಾಜರೊಂದಿಗೆ ಸೃಂಜಯರನ್ನು ಸಂಹರಿಸಬಲ್ಲನು.

07139025a ಸೃಂಜಯೇಷ್ವಥ ಸರ್ವೇಷು ನಿಹತೇಷು ಚಮೂಮುಖೇ|

07139025c ಧೃಷ್ಟದ್ಯುಮ್ನಂ ರಣೇ ದ್ರೌಣಿರ್ನಾಶಯಿಷ್ಯತ್ಯಸಂಶಯಂ||

ಹಾಗೆ ಸೃಂಜಯರು ಎಲ್ಲರೂ ಹತರಾದನಂತರ ರಣಭೂಮಿಯಲ್ಲಿ ಧೃಷ್ಟದ್ಯುಮ್ನನನ್ನು ದ್ರೌಣಿ ಅಶ್ವತ್ಥಾಮನು ಸಂಹರಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

07139026a ತಥಾರ್ಜುನಂ ರಣೇ ಕರ್ಣೋ ವಿಜೇಷ್ಯತಿ ಮಹಾರಥಃ|

07139026c ಭೀಮಸೇನಮಹಂ ಚಾಪಿ ಯುದ್ಧೇ ಜೇಷ್ಯಾಮಿ ದಂಶಿತಃ||

ಹಾಗೆಯೇ ರಣದಲ್ಲಿ ಮಹಾರಥ ಕರ್ಣನು ಅರ್ಜುನನನ್ನು ಜಯಿಸುತ್ತಾನೆ. ಕವಚಧಾರಿಯಾಗಿ ನಾನು ಯುದ್ಧದಲ್ಲಿ ಭೀಮಸೇನನನ್ನು ಜಯಿಸುತ್ತೇನೆ.

07139027a ಸೋಽಯಂ ಮಮ ಜಯೋ ವ್ಯಕ್ತಂ ದೀರ್ಘಕಾಲಂ ಭವಿಷ್ಯತಿ|

07139027c ತಸ್ಮಾದ್ರಕ್ಷತ ಸಂಗ್ರಾಮೇ ದ್ರೋಣಮೇವ ಮಹಾರಥಾಃ||

ಹೀಗೆ ನನ್ನ ವಿಜಯವು ದೀರ್ಘಕಾಲದವರೆಗೂ ಇರುತ್ತದೆ ಎಂದು ವ್ಯಕ್ತವಾಗುತ್ತಿದೆ. ಆದುದರಿಂದ ಮಹಾರಥರೇ! ಸಂಗ್ರಾಮದಲ್ಲಿ ದ್ರೋಣನನ್ನೇ ರಕ್ಷಿಸಿರಿ!”

07139028a ಇತ್ಯುಕ್ತ್ವಾ ಭರತಶ್ರೇಷ್ಠ ಪುತ್ರೋ ದುರ್ಯೋಧನಸ್ತವ|

07139028c ವ್ಯಾದಿದೇಶ ತತಃ ಸೈನ್ಯಂ ತಸ್ಮಿಂಸ್ತಮಸಿ ದಾರುಣೇ||

ಭರತಶ್ರೇಷ್ಠ! ಹೀಗೆ ಹೇಳಿ ನಿನ್ನ ಮಗ ದುರ್ಯೋಧನನು ಆ ದಾರುಣ ರಾತ್ರಿಯಲ್ಲಿ ಸೈನ್ಯಕ್ಕೆ ಆದೇಶಗಳನ್ನಿತ್ತನು.

07139029a ತತಃ ಪ್ರವವೃತೇ ಯುದ್ಧಂ ರಾತ್ರೌ ತದ್ಭರತರ್ಷಭ|

07139029c ಉಭಯೋಃ ಸೇನಯೋರ್ಘೋರಂ ವಿಜಯಂ ಪ್ರತಿ ಕಾಂಕ್ಷಿಣೋಃ||

ಭರತರ್ಷಭ! ಆಗ ಆ ರಾತ್ರಿಯಲ್ಲಿ ವಿಜಯದ ಗುರಿಯನ್ನೇ ಬಯಸಿದ ಎರಡೂ ಸೇನೆಗಳ ಮಧ್ಯೆ ಘೋರ ಯುದ್ಧವು ನಡೆಯಿತು.

07139030a ಅರ್ಜುನಃ ಕೌರವಂ ಸೈನ್ಯಮರ್ಜುನಂ ಚಾಪಿ ಕೌರವಾಃ|

07139030c ನಾನಾಶಸ್ತ್ರಸಮಾವಾಪೈರನ್ಯೋನ್ಯಂ ಪರ್ಯಪೀಡಯನ್||

ಅರ್ಜುನನು ಕೌರವ ಸೇನೆಯನ್ನೂ, ಕೌರವರು ಅರ್ಜುನನನ್ನೂ ಹೀಗೆ ಅನ್ಯೋನ್ಯರನ್ನು ನಾನಾ ಶಸ್ತ್ರಗಳನ್ನು ಬಳಸಿ ಪೀಡಿಸಿದರು.

07139031a ದ್ರೌಣಿಃ ಪಾಂಚಾಲರಾಜಾನಂ ಭಾರದ್ವಾಜಶ್ಚ ಸೃಂಜಯಾನ್|

07139031c ಚಾದಯಾಮಾಸತುಃ ಸಂಖ್ಯೇ ಶರೈಃ ಸಮ್ನತಪರ್ವಭಿಃ||

ಯುದ್ಧದಲ್ಲಿ ದ್ರೌಣಿಯು ಪಾಂಚಾಲರಾಜರನ್ನೂ ಭಾರದ್ವಾಜನು ಸೃಂಜಯರನ್ನೂ ಸನ್ನತಪರ್ವ ಶರಗಳಿಂದ ಮುಸುಕತೊಡಗಿದರು.

07139032a ಪಾಂಡುಪಾಂಚಾಲಸೇನಾನಾಂ ಕೌರವಾಣಾಂ ಚ ಮಾರಿಷ|

07139032c ಆಸೀನ್ನಿಷ್ಟಾನಕೋ ಘೋರೋ ನಿಘ್ನತಾಮಿತರೇತರಂ||

ಮಾರಿಷ! ಪರಸ್ಪರರನ್ನು ಸಂಹರಿಸುತ್ತಿದ್ದ ಪಾಂಡು-ಪಾಂಚಾಲ ಸೇನೆ ಮತ್ತು ಕುರು ಸೇನೆಗಳಲ್ಲಿ ಘೋರ ಆರ್ತನಾದಗಳುಂಟಾದವು.

07139033a ನೈವಾಸ್ಮಾಭಿರ್ನ ಪೂರ್ವೈರ್ನೋ ದೃಷ್ಟಂ ಪೂರ್ವಂ ತಥಾವಿಧಂ|

07139033c ಯುದ್ಧಂ ಯಾದೃಶಂ ಏವಾಸೀತ್ತಾಂ ರಾತ್ರಿಂ ಸುಮಹಾಭಯಂ||

ನಾವಾಗಲೀ ನಮ್ಮ ಪೂರ್ವಜರಾಗಲೀ ಅಂತಹ ಯುದ್ಧವನ್ನು ಕಂಡಿರಲಿಲ್ಲ ಕೇಳಿರಲಿಲ್ಲ. ಅಂತಹ ಮಹಾಭಯಂಕರ ಯುದ್ಧವು ಆ ರಾತ್ರಿ ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಏಕೋನಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾಮೂವತ್ತೊಂಭತ್ತನೇ ಅಧ್ಯಾಯವು.

Related image

Comments are closed.