Drona Parva: Chapter 138

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೩೮

ದೀಪೋದ್ಯೋತನ (೧-೩೪).

07138001 ಸಂಜಯ ಉವಾಚ|

07138001a ವರ್ತಮಾನೇ ತಥಾ ಯುದ್ಧೇ ಘೋರರೂಪೇ ಭಯಾವಹೇ|

07138001c ತಮಸಾ ಸಂವೃತೇ ಲೋಕೇ ರಜಸಾ ಚ ಮಹೀಪತೇ|

ಸಂಜಯನು ಹೇಳಿದನು: “ಮಹೀಪತೇ! ಘೋರರೂಪೀ ಭಯಾವಹ ಆ ಯುದ್ಧವು ಹಾಗೆ ನಡೆಯುತ್ತಿರಲು ಲೋಕವು ಕತ್ತಲೆ ಮತ್ತು ಧೂಳಿನಿಂದ ಮುಚ್ಚಿಹೋಯಿತು.

07138001e ನಾಪಶ್ಯಂತ ರಣೇ ಯೋಧಾಃ ಪರಸ್ಪರಮವಸ್ಥಿತಾಃ||

07138002a ಅನುಮಾನೇನ ಸಂಜ್ಞಾಭಿರ್ಯುದ್ಧಂ ತದ್ವವೃತೇ ಮಹತ್|

07138002c ನರನಾಗಾಶ್ವಮಥನಂ ಪರಮಂ ಲೋಮಹರ್ಷಣ||

ರಣದಲ್ಲಿ ಎದುರಿಸಿದ್ದ ಯೋಧರಿಗೆ ಪರಸ್ಪರರನ್ನು ಗುರುತಿಸಲಾಗುತ್ತಿರಲಿಲ್ಲ. ಅನುಮಾನದಿಂದ ಮತ್ತು ಸಂಕೇತಗಳಿಂದ ಆ ಮನುಷ್ಯ-ಆನೆ-ಕುದುರೆಗಳ ಸಂಹಾರಕಾರ್ಯ, ರೋಮರಾಶಿಗಳು ನಿಮಿರಿ ನಿಲ್ಲುವಷ್ಟು ರೋಮಾಂಚಕಾರಿ ಮಹಾ ಯುದ್ಧವು ನಡೆಯಿತು.

07138003a ದ್ರೋಣಕರ್ಣಕೃಪಾ ವೀರಾ ಭೀಮಪಾರ್ಷತಸಾತ್ಯಕಾಃ|

07138003c ಅನ್ಯೋನ್ಯಂ ಕ್ಷೋಭಯಾಮಾಸುಃ ಸೈನ್ಯಾನಿ ನೃಪಸತ್ತಮ||

ನೃಪಸತ್ತಮ! ವೀರರಾದ ದ್ರೋಣ-ಕರ್ಣ-ಕೃಪರು ಮತ್ತು ಭೀಮ-ಪಾರ್ಷತ-ಸಾತ್ಯಕಿಯರು ಅನ್ಯೋನ್ಯರ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸುತ್ತಿದ್ದರು.

07138004a ವಧ್ಯಮಾನಾನಿ ಸೈನ್ಯಾನಿ ಸಮಂತಾತ್ತೈರ್ಮಹಾರಥೈಃ|

07138004c ತಮಸಾ ರಜಸಾ ಚೈವ ಸಮಂತಾದ್ವಿಪ್ರದುದ್ರುವುಃ||

ಮಹಾರಥರಿಂದ ವಧಿಸಲ್ಪಟ್ಟು ಸೇನೆಗಳು ಎಲ್ಲಕಡೆ ಓಡಿಹೋಗುತ್ತಿದ್ದವು. ಹಾಗೆಯೇ ಕತ್ತಲೆ ಮತ್ತು ಧೂಳಿನಿಂದ ದಿಕ್ಕುಕಾಣದೆ ಸೇನೆಗಳು ಓಡಿ ಹೋಗುತ್ತಿದ್ದವು.

07138005a ತೇ ಸರ್ವತೋ ವಿದ್ರವಂತೋ ಯೋಧಾ ವಿತ್ರಸ್ತಚೇತಸಃ|

07138005c ಅಹನ್ಯಂತ ಮಹಾರಾಜ ಧಾವಮಾನಾಶ್ಚ ಸಮ್ಯುಗೇ||

ಮಹಾರಾಜ! ಬಳಲಿ ನಿದ್ದೆಗೆಟ್ಟಿದ್ದ ಯೋಧರು ಎಲ್ಲಕಡೆ ಓಡಿಹೋಗುತ್ತಿದ್ದವರನ್ನೂ ಯುದ್ಧದಲ್ಲಿ ಸಂಹರಿಸಿದರು.

07138006a ಮಹಾರಥಸಹಸ್ರಾಣಿ ಜಘ್ನುರನ್ಯೋನ್ಯಮಾಹವೇ|

07138006c ಅಂಧೇ ತಮಸಿ ಮೂಢಾನಿ ಪುತ್ರಸ್ಯ ತವ ಮಂತ್ರಿತೇ||

ನಿನ್ನ ಮಗನ ಯೋಜನೆಯಂತೆ ಆ ರಾತ್ರಿಯ ಅಂಧಕಾರದಲ್ಲಿ ಸಹಸ್ರಾರು ಮೂಢ ಮಹಾರಥರು ರಣರಂಗದಲ್ಲಿ ಅನ್ಯೋನ್ಯರನ್ನು ಸಂಹರಿಸಿದರು.

07138007a ತತಃ ಸರ್ವಾಣಿ ಸೈನ್ಯಾನಿ ಸೇನಾಗೋಪಾಶ್ಚ ಭಾರತ|

07138007c ವ್ಯಮುಹ್ಯಂತ ರಣೇ ತತ್ರ ತಮಸಾ ಸಂವೃತೇ ಸತಿ||

ಭಾರತ! ಆಗ ರಣಾಂಗಣವು ಗಾಢಾಂಧಕಾರದಿಂದ ಆವೃತವಾಗಿರಲು ಎಲ್ಲ ಸೇನೆಗಳೂ, ಸೇನಾಧಿಪತಿಗಳೂ ಮೋಹಗೊಂಡರು.”

07138008 ಧೃತರಾಷ್ಟ್ರ ಉವಾಚ|

07138008a ತೇಷಾಂ ಸಂಲೋಡ್ಯಮಾನಾನಾಂ ಪಾಂಡವೈರ್ನಿಹತೌಜಸಾಂ|

07138008c ಅಂಧೇ ತಮಸಿ ಮಗ್ನಾನಾಮಾಸೀತ್ಕಾ ವೋ ಮತಿಸ್ತದಾ||

ಧೃತರಾಷ್ಟ್ರನು ಹೇಳಿದನು: “ಓಜಸ್ಸು ಕುಂಠಿತರಾಗಿ ಕತ್ತಲೆಯಲ್ಲಿ ಅಂಧರಾಗಿ ಪಾಂಡವರಿಂದ ಸಂಹರಿಸಲ್ಪಡುತ್ತಿದ್ದ ನಿಮ್ಮ ಮನಸ್ಸು ಆಗ ಹೇಗಿದ್ದಿತು?

07138009a ಕಥಂ ಪ್ರಕಾಶಸ್ತೇಷಾಂ ವಾ ಮಮ ಸೈನ್ಯೇಷು ವಾ ಪುನಃ|

07138009c ಬಭೂವ ಲೋಕೇ ತಮಸಾ ತಥಾ ಸಂಜಯ ಸಂವೃತೇ||

ಸಂಜಯ! ನೀನು ಹೇಳಿದಂತೆ ಲೋಕವು ಕತ್ತಲೆಯಿಂದ ಆವರಿಸಲ್ಪಟ್ಟಿರಲು ನನ್ನ ಅಥವಾ ಅವರ ಸೇನೆಗಳಲ್ಲಿ ಪ್ರಕಾಶವು ಹೇಗೆ ದೊರಕಿತು?”

07138010 ಸಂಜಯ ಉವಾಚ|

07138010a ತತಃ ಸರ್ವಾಣಿ ಸೈನ್ಯಾನಿ ಹತಶಿಷ್ಟಾನಿ ಯಾನಿ ವೈ|

07138010c ಸೇನಾಗೋಪ್ತೄನಥಾದಿಶ್ಯ ಪುನರ್ವ್ಯೂಹಮಕಲ್ಪಯತ್||

ಸಂಜಯನು ಹೇಳಿದನು: “ಅನಂತರ ದುರ್ಯೋಧನನು ಅಳಿಯದೇ ಉಳಿದಿರುವ ಎಲ್ಲ ಸೇನೆಗಳನ್ನೂ ಸೇನಾನಾಯಕರನ್ನೂ ಒಟ್ಟುಗೂಡಿಸಿ ಪುನಃ ಒಂದು ನೂತನ ವ್ಯೂಹವನ್ನೇ ಕಲ್ಪಿಸಿದನು.

07138011a ದ್ರೋಣಃ ಪುರಸ್ತಾಜ್ಜಘನೇ ತು ಶಲ್ಯಸ್

        ತಥಾ ದ್ರೌಣಿಃ ಪಾರ್ಶ್ವತಃ ಸೌಬಲಶ್ಚ|

07138011c ಸ್ವಯಂ ತು ಸರ್ವಾಣಿ ಬಲಾನಿ ರಾಜನ್

        ರಾಜಾಭ್ಯಯಾದ್ಗೋಪಯನ್ವೈ ನಿಶಾಯಾಂ||

ಆ ವ್ಯೂಹದ ಮುಂಬಾಗದಲ್ಲಿ ದ್ರೋಣ, ಹಿಂಬಾಗದಲ್ಲಿ ಶಲ್ಯ, ಪಕ್ಕಗಳಲ್ಲಿ ದ್ರೌಣಿ-ಸೌಬಲರಿದ್ದರು. ರಾಜನ್! ಸ್ವಯಂ ರಾಜಾ ದುರ್ಯೋಧನನು ಆ ರಾತ್ರಿಯಲ್ಲಿ ಸರ್ವಸೇನೆಗಳನ್ನು ರಕ್ಷಿಸುತ್ತಾ ಮುಂದೆ ಹೋಗುತ್ತಿದ್ದನು.

07138012a ಉವಾಚ ಸರ್ವಾಂಶ್ಚ ಪದಾತಿಸಂಘಾನ್

        ದುರ್ಯೋಧನಃ ಪಾರ್ಥಿವ ಸಾಂತ್ವಪೂರ್ವಂ|

07138012c ಉತ್ಸೃಜ್ಯ ಸರ್ವೇ ಪರಮಾಯುಧಾನಿ

        ಗೃಹ್ಣೀತ ಹಸ್ತೈರ್ಜ್ವಲಿತಾನ್ಪ್ರದೀಪಾನ್||

ರಾಜಾ ದುರ್ಯೋಧನನು ಸಾಂತ್ವನಪೂರ್ವಕವಾಗಿ ಎಲ್ಲ ಪದಾತಿಪಡೆಗಳಿಗೆ ಈ ರೀತಿ ಹೇಳಿದನು: “ನೀವೆಲ್ಲರೂ ಪರಮ ಆಯುಧಗಳನ್ನು ಕೆಳಗಿಟ್ಟು ಪ್ರಜ್ವಲಿಸುತ್ತಿರುವ ಪಂಜುಗಳನ್ನು ಹಿಡಿದುಕೊಳ್ಳಿರಿ!”

07138013a ತೇ ಚೋದಿತಾಃ ಪಾರ್ಥಿವಸತ್ತಮೇನ

        ತತಃ ಪ್ರಹೃಷ್ಟಾ ಜಗೃಹುಃ ಪ್ರದೀಪಾನ್|

07138013c ಸಾ ಭೂಯ ಏವ ಧ್ವಜಿನೀ ವಿಭಕ್ತಾ

        ವ್ಯರೋಚತಾಗ್ನಿಪ್ರಭಯಾ ನಿಶಾಯಾಂ||

ಪಾರ್ಥಿವಸತ್ತಮನಿಂದ ಹೀಗೆ ಪ್ರಚೋದನೆಗೊಂಡ ಯೋಧರು ಸಂತೋಷಗೊಂಡು ಉರಿಯುತ್ತಿರುವ ಪಂಜುಗಳನ್ನು ಹಿಡಿದುಕೊಂಡರು. ಆ ಅಗ್ನಿಪ್ರಭೆಯಿಂದ ರಾತ್ರಿಯಾಗಿದ್ದರೂ ಎರಡು ಕಡೆಯ ದಳಗಳು ಪ್ರತ್ಯೇಕವಾಗಿ ಕಾಣತೊಡಗಿದವು.

07138014a ಮಹಾಧನೈರಾಭರಣೈಶ್ಚ ದಿವ್ಯೈಃ

        ಶಸ್ತ್ರೈಃ ಪ್ರದೀಪ್ತೈರಭಿಸಂಪತದ್ಭಿಃ|

07138014c ಕ್ಷಣೇನ ಸರ್ವೇ ವಿಹಿತಾಃ ಪ್ರದೀಪಾ

        ವ್ಯದೀಪಯಂಶ್ಚ ಧ್ವಜಿನೀಂ ತದಾಶು||

ಅಮೂಲ್ಯ ದಿವ್ಯ ಆಭರಣಗಳ ಮತ್ತು ಹೊಳೆಯುತ್ತಿದ್ದ ಶಸ್ತ್ರಗಳ ಮೇಲೆ ಬೆಳಕು ಬಿದ್ದು ಎರಡೂ ಪಕ್ಷಗಳ ಸೇನೆಗಳು ಪ್ರಕಾಶಮಾನವಾಗಿ ಕಾಣುತ್ತಿದ್ದವು.

07138015a ಸರ್ವಾಸ್ತು ಸೇನಾ ವ್ಯತಿಸೇವ್ಯಮಾನಾಃ

        ಪದಾತಿಭಿಃ ಪಾವಕತೈಲಹಸ್ತೈಃ|

07138015c ಪ್ರಕಾಶ್ಯಮಾನಾ ದದೃಶುರ್ನಿಶಾಯಾಂ

        ಯಥಾಂತರಿಕ್ಷೇ ಜಲದಾಸ್ತಡಿದ್ಭಿಃ||

ಎಣ್ಣೆಯನ್ನೂ ಪಂಜುಗಳನ್ನೂ ಹಿಡಿದಿದ್ದ ಪದಾತಿಗಳು ಬೆಳಕನ್ನು ತೋರಿಸುತ್ತಿರಲು ಎಲ್ಲ ಸೇನೆಗಳೂ ರಾತ್ರಿಯ ಆಕಾಶದಲ್ಲಿ ಮಿಂಚುಗಳಿಂದ ಬೆಳಗಿಸಲ್ಪಡುತ್ತಿದ್ದ ಕಪ್ಪು ಮೋಡಗಳಂತೆ ತೋರುತ್ತಿದ್ದವು.

07138016a ಪ್ರಕಾಶಿತಾಯಾಂ ತು ತಥಾ ಧ್ವಜಿನ್ಯಾಂ

        ದ್ರೋಣೋಽಗ್ನಿಕಲ್ಪಃ ಪ್ರತಪನ್ಸಮಂತಾತ್|

07138016c ರರಾಜ ರಾಜೇಂದ್ರ ಸುವರ್ಣವರ್ಮಾ

        ಮಧ್ಯಂ ಗತಃ ಸೂರ್ಯ ಇವಾಂಶುಮಾಲೀ||

ರಾಜೇಂದ್ರ! ಹಾಗೆ ಪ್ರಕಾಶಿತಗೊಂಡ ಸೇನೆಗಳ ಮಧ್ಯೆ ಸುವರ್ಣಕವಚವನ್ನು ಧರಿಸಿದ್ದ ದ್ರೋಣನು ಮಧ್ಯಾಹ್ನದ ಸೂರ್ಯನಂತೆ ಅಗ್ನಿಸದೃಶನಾಗಿ ಬೆಳಗುತ್ತಿದ್ದನು.

07138017a ಜಾಂಬೂನದೇಷ್ವಾಭರಣೇಷು ಚೈವ

        ನಿಷ್ಕೇಷು ಶುದ್ಧೇಷು ಶರಾವರೇಷು|

07138017c ಪೀತೇಷು ಶಸ್ತ್ರೇಷು ಚ ಪಾವಕಸ್ಯ

        ಪ್ರತಿಪ್ರಭಾಸ್ತತ್ರ ತತೋ ಬಭೂವುಃ||

ಸುವರ್ಣಮಯ ಆಭರಣಗಳಲ್ಲಿಯೂ, ಎದೆಗೆ ಹಾಕುವ ಶುದ್ಧ ನಿಷ್ಕಗಳಲ್ಲಿಯೂ, ಧನುಸ್ಸುಗಳಲ್ಲಿಯೂ, ಪೀತಲ ಶಸ್ತ್ರಗಳಲ್ಲಿಯೂ ಪಂಜುಗಳ ಬೆಳಕು ಪ್ರತಿಬಿಂಬಿಸುತ್ತಿದ್ದವು.

07138018a ಗದಾಶ್ಚ ಶೈಕ್ಯಾಃ ಪರಿಘಾಶ್ಚ ಶುಭ್ರಾ

        ರಥೇಷು ಶಕ್ತ್ಯಶ್ಚ ವಿವರ್ತಮಾನಾಃ|

07138018c ಪ್ರತಿಪ್ರಭಾ ರಶ್ಮಿಭಿರಾಜಮೀಢ

        ಪುನಃ ಪುನಃ ಸಂಜನಯಂತಿ ದೀಪ್ತಾಃ||

ಅಜಮೀಢನ ವಂಶದವನೇ! ಝಳಪಿಸುತ್ತಿದ್ದ ಗದೆಗಳೂ, ಶಕ್ತ್ಯಾಯುಧಗಳೂ, ಪರಿಘಗಳೂ, ರಥಶಕ್ತಿಗಳೂ ಪಂಜುಗಳನ್ನು ಪ್ರತಿಬಿಂಬಿಸುತ್ತಾ ಪುನಃ ಪುನಃ ಇನ್ನೂ ಅನೇಕ ದೀಪಗಳಿವೆಯೋ ಎನ್ನುವಂತೆ ತೋರುತ್ತಿತ್ತು.

07138019a ಚತ್ರಾಣಿ ಬಾಲವ್ಯಜನಾನುಷಂಗಾ

        ದೀಪ್ತಾ ಮಹೋಲ್ಕಾಶ್ಚ ತಥೈವ ರಾಜನ್|

07138019c ವ್ಯಾಘೂರ್ಣಮಾನಾಶ್ಚ ಸುವರ್ಣಮಾಲಾ

        ವ್ಯಾಯಚ್ಚತಾಂ ತತ್ರ ತದಾ ವಿರೇಜುಃ||

ರಾಜನ್! ಛತ್ರಗಳೂ, ಚಾಮರಗಳೂ, ಖಡ್ಗಗಳೂ, ಅಲ್ಲಾಡುತ್ತಿದ್ದ ಸುವರ್ಣಮಾಲೆಗಳೂ ಆಗ ದೀಪಗಳ ಬೆಳಕಿನಿಂದ ಶೋಭಾಯಮಾನವಾಗಿ ಕಾಣುತ್ತಿದ್ದವು.

07138020a ಶಸ್ತ್ರಪ್ರಭಾಭಿಶ್ಚ ವಿರಾಜಮಾನಂ

        ದೀಪಪ್ರಭಾಭಿಶ್ಚ ತದಾ ಬಲಂ ತತ್|

07138020c ಪ್ರಕಾಶಿತಂ ಚಾಭರಣಪ್ರಭಾಭಿರ್

        ಭೃಶಂ ಪ್ರಕಾಶಂ ನೃಪತೇ ಬಭೂವ||

ಶಸ್ತ್ರಗಳ ಪ್ರಭೆಗಳಿಂದ ಮತ್ತು ದೀವಟಿಗೆಗಳ ಪ್ರಭೆಯಿಂದ ವಿರಾಜಮಾನವಾಗಿ ಕಾಣುತ್ತಿದ್ದ ನಿನ್ನ ಸೇನೆಯು ಆಗ ಆಭರಣ ಪ್ರಭೆಯಿಂದ ಇನ್ನೂ ಹೆಚ್ಚಿನ ಪ್ರಕಾಶದಿಂದ ಬೆಳಗುತ್ತಿತ್ತು.

07138021a ಪೀತಾನಿ ಶಸ್ತ್ರಾಣ್ಯಸೃಗುಕ್ಷಿತಾನಿ

        ವೀರಾವಧೂತಾನಿ ತನುದ್ರುಹಾಣಿ|

07138021c ದೀಪ್ತಾಂ ಪ್ರಭಾಂ ಪ್ರಾಜನಯಂತ ತತ್ರ

        ತಪಾತ್ಯಯೇ ವಿದ್ಯುದಿವಾಂತರಿಕ್ಷೇ||

ಬಂಗಾರದ ಬಣ್ಣದ ಶಸ್ತ್ರಗಳೂ ಮತ್ತು ಅಲ್ಲಾಡುತಿದ್ದ ವೀರರ ಕವಚಗಳೂ ದೀವಟಿಗೆಗಳ ಪ್ರಭೆಯನ್ನು ಆಗಾಗ ಪ್ರತಿಬಿಂಬಿಸುತ್ತಿರಲು ಅಂತರಿಕ್ಷದಲ್ಲಿರುವ ಮಿಂಚುಗಳಂತೆ ಹೊಳೆಯುತ್ತಿದ್ದವು.

07138022a ಪ್ರಕಂಪಿತಾನಾಮಭಿಘಾತವೇಗೈರ್

        ಅಭಿಘ್ನತಾಂ ಚಾಪತತಾಂ ಜವೇನ|

07138022c ವಕ್ತ್ರಾಣ್ಯಶೋಭಂತ ತದಾ ನರಾಣಾಂ

        ವಾಯ್ವೀರಿತಾನೀವ ಮಹಾಂಬುಜಾನಿ||

ಹೊಡೆತಗಳ ವೇಗದಿಂದ ಪ್ರಕಂಪಿಸುತ್ತಿದ್ದ, ಪ್ರಹರಿಸಲು ವೇಗವಾಗಿ ಮುಂದೆ ಬರುತ್ತಿದ್ದ ಮನುಷ್ಯರ ಮುಖಗಳು ಗಾಳಿಯಿಂದ ವಿಚಲಿತವಾದ ದೊಡ್ಡ ದೊಡ್ಡ ಕಮಲಗಳಂತೆ ಕಾಣುತ್ತಿದ್ದವು.

07138023a ಮಹಾವನೇ ದಾವ ಇವ ಪ್ರದೀಪ್ತೇ

        ಯಥಾ ಪ್ರಭಾ ಭಾಸ್ಕರಸ್ಯಾಪಿ ನಶ್ಯೇತ್|

07138023c ತಥಾ ತವಾಸೀದ್ಧ್ವಜಿನೀ ಪ್ರದೀಪ್ತಾ

        ಮಹಾಭಯೇ ಭಾರತ ಭೀಮರೂಪಾ||

ಭಾರತ! ಮಹಾವನದಲ್ಲಿ ಉರಿಯುತ್ತಿರುವ ಕಾಡ್ಗಿಚ್ಚು ಹೇಗೆ ಭಾಸ್ಕರನ ಪ್ರಭೆಯನ್ನೂ ಕುಂಠಿತಗೊಳಿಸುತ್ತದೆಯೋ ಹಾಗೆ ನಿನ್ನ ಮಹಾಭಯಂಕರ ಭೀಮರೂಪದ ಸೇನೆಯು ಬೆಳಗಿ ಪ್ರಕಾಶಿಸುತ್ತಿತ್ತು.

07138024a ತತ್ಸಂಪ್ರದೀಪ್ತಂ ಬಲಮಸ್ಮದೀಯಂ

        ನಿಶಾಮ್ಯ ಪಾರ್ಥಾಸ್ತ್ವರಿತಾಸ್ತಥೈವ|

07138024c ಸರ್ವೇಷು ಸೈನ್ಯೇಷು ಪದಾತಿಸಂಘಾನ್

        ಅಚೋದಯಂಸ್ತೇಽಥ ಚಕ್ರುಃ ಪ್ರದೀಪಾನ್||

ನಮ್ಮವರ ಸೇನೆಯು ಹಾಗೆ ಬೆಳಗುತ್ತಿರುವುದನ್ನು ನೋಡಿ ಪಾರ್ಥರೂ ಕೂಡ ಕೂಡಲೇ ತಮ್ಮ ಎಲ್ಲ ಸೇನೆಗಳ ಪದಾತಿಪಡೆಗಳಿಗೆ ದೀವಟಿಗೆಗಳನ್ನು ಹಿಡಿದು ಬೆಳಕುತೋರುವಂತೆ ಪ್ರಚೋದಿಸಿದರು.

07138025a ಗಜೇ ಗಜೇ ಸಪ್ತ ಕೃತಾಃ ಪ್ರದೀಪಾ

        ರಥೇ ರಥೇ ಚೈವ ದಶ ಪ್ರದೀಪಾಃ|

07138025c ದ್ವಾವಶ್ವಪೃಷ್ಠೇ ಪರಿಪಾರ್ಶ್ವತೋಽನ್ಯೇ

        ಧ್ವಜೇಷು ಚಾನ್ಯೇ ಜಘನೇಷು ಚಾನ್ಯೇ||

ಪ್ರತಿಯೊಂದು ಆನೆಯ ಮೇಲೂ ಏಳೇಳು ದೀಪಗಳನ್ನಿಟ್ಟಿದ್ದರು. ಪ್ರತಿಯೊಂದು ರಥದಲ್ಲಿ ಹತ್ತು ಹತ್ತು ದೀಪಗಳನ್ನಿಟ್ಟಿದ್ದರು. ಪ್ರತಿಯೊಂದು ಕುದುರೆಯ ಮೇಲೂ, ಪಾರ್ಶ್ವಗಳಲ್ಲಿಯೂ, ಧ್ವಜಗಳಲ್ಲಿಯೂ ಮತ್ತು ಜಘನಗಳಲ್ಲಿಯೂ ಎರಡೆರಡು ದೀಪಗಳನ್ನು ಇಟ್ಟಿದ್ದರು.

07138026a ಸೇನಾಸು ಸರ್ವಾಸು ಚ ಪಾರ್ಶ್ವತೋಽನ್ಯೇ

        ಪಶ್ಚಾತ್ಪುರಸ್ತಾಚ್ಚ ಸಮಂತತಶ್ಚ|

07138026c ಮಧ್ಯೇ ತಥಾನ್ಯೇ ಜ್ವಲಿತಾಗ್ನಿಹಸ್ತಾಃ

        ಸೇನಾದ್ವಯೇಽಪಿ ಸ್ಮ ನರಾ ವಿಚೇರುಃ||

ಎಲ್ಲ ಸೇನೆಗಳ ಪಾರ್ಶ್ವಗಳಲ್ಲಿಯೂ, ಹಿಂದೆ-ಮುಂದೆ ಮತ್ತು ಸುತ್ತಲೂ, ಮಧ್ಯದಲ್ಲಿಯೂ ಉರಿಯುತ್ತಿರುವ ದೀವಟಿಗೆಗಳನ್ನು ಹಿಡಿದ ನರರು ಎರಡೂ ಸೇನೆಗಳ ಮಧ್ಯೆ ಸಂಚರಿಸುತ್ತಿದ್ದರು.

07138027a ಸರ್ವೇಷು ಸೈನ್ಯೇಷು ಪದಾತಿಸಂಘಾ

        ವ್ಯಾಮಿಶ್ರಿತಾ ಹಸ್ತಿರಥಾಶ್ವವೃಂದೈಃ|

07138027c ಮಧ್ಯೇ ತಥಾನ್ಯೇ ಜ್ವಲಿತಾಗ್ನಿಹಸ್ತಾ

        ವ್ಯದೀಪಯನ್ಪಾಂಡುಸುತಸ್ಯ ಸೇನಾಂ||

ಎಲ್ಲ ಸೇನೆಗಳಲ್ಲಿಯೂ ಪದಾತಿಪಡೆಗಳು ಆನೆ-ರಥ-ಕುದುರೆಗಳ ಗುಂಪುಗಳೊಡನೆ ಮಧ್ಯ ಮಧ್ಯದಲ್ಲಿ ಮಿಶ್ರಿತವಾಗಿ ಪಾಂಡುಸುತನ ಸೇನೆಯನ್ನು ಬೆಳಗಿಸಿದರು.

07138028a ತೇನ ಪ್ರದೀಪ್ತೇನ ತಥಾ ಪ್ರದೀಪ್ತಂ

        ಬಲಂ ತದಾಸೀದ್ಬಲವದ್ಬಲೇನ|

07138028c ಭಾಃ ಕುರ್ವತಾ ಭಾನುಮತಾ ಗ್ರಹೇಣ

        ದಿವಾಕರೇಣಾಗ್ನಿರಿವಾಭಿತಪ್ತಃ||

ಕಿರಣಗಳನ್ನು ಹೊರಸೂಸುವ ಮತ್ತು ಕಿರಣಗಳನ್ನು ಹೊಂದಿರುವ ದಿವಾಕರ ಸೂರ್ಯಗ್ರಹನಿಂದ ರಕ್ಷಿತ ಅಗ್ನಿಯು ರಾತ್ರಿಯಲ್ಲಿ ಹೆಚ್ಚು ಪ್ರಕಾಶಮಾನನಾಗಿ ಉರಿಯುವಂತೆ ಯುಧಿಷ್ಠಿರನ ಸೇನೆಗಳ ದೀಪಗಳಿಂದ ನಿನ್ನ ಸೇನೆಗಳ ಪ್ರಕಾಶವೂ ಹೆಚ್ಚಾಗಿ ತೋರಿತು.

07138029a ತಯೋಃ ಪ್ರಭಾಃ ಪೃಥಿವೀಮಂತರಿಕ್ಷಂ

        ಸರ್ವಾ ವ್ಯತಿಕ್ರಮ್ಯ ದಿಶಶ್ಚ ವೃದ್ಧಾಃ|

07138029c ತೇನ ಪ್ರಕಾಶೇನ ಭೃಶಂ ಪ್ರಕಾಶಂ

        ಬಭೂವ ತೇಷಾಂ ತವ ಚೈವ ಸೈನ್ಯಂ||

ಆ ಪ್ರಭೆಗಳು ಪೃಥ್ವಿ, ಅಂತರಿಕ್ಷ ಮತ್ತು ಎಲ್ಲ ದಿಕ್ಕುಗಳನ್ನೂ ಅತಿಕ್ರಮಿಸಿ ಬೆಳೆಯಲು ಅವುಗಳ ಪ್ರಕಾಶದಿಂದ ನಿನ್ನ ಮತ್ತು ಅವರ ಸೇನೆಗಳು ಇನ್ನೂ ಪ್ರಕಾಶಮಾನವಾಗಿ ಕಾಣುತ್ತಿದ್ದವು.

07138030a ತೇನ ಪ್ರಕಾಶೇನ ದಿವಂಗಮೇನ

        ಸಂಬೋಧಿತಾ ದೇವಗಣಾಶ್ಚ ರಾಜನ್|

07138030c ಗಂಧರ್ವಯಕ್ಷಾಸುರಸಿದ್ಧಸಂಘಾಃ

        ಸಮಾಗಮನ್ನಪ್ಸರಸಶ್ಚ ಸರ್ವಾಃ||

ರಾಜನ್! ಆ ಬೆಳಕಿನಿಂದ ಆಹ್ವಾನಿತರಾಗಿ ದಿವಂಗಮದಲ್ಲಿ ದೇವಗಣಗಳೂ, ಗಂಧರ್ವ-ಯಕ್ಷ-ಅಸುರ-ಸಿದ್ಧ ಸಂಘಗಳು ಮತ್ತು ಎಲ್ಲ ಅಪ್ಸರೆಯರೂ ಬಂದು ಸೇರಿದರು.

07138031a ತದ್ದೇವಗಂಧರ್ವಸಮಾಕುಲಂ ಚ

        ಯಕ್ಷಾಸುರೇಂದ್ರಾಪ್ಸರಸಾಂ ಗಣೈಶ್ಚ|

07138031c ಹತೈಶ್ಚ ವೀರೈರ್ದಿವಮಾರುಹದ್ಭಿರ್

        ಆಯೋಧನಂ ದಿವ್ಯಕಲ್ಪಂ ಬಭೂವ||

ಆ ದೇವ-ಗಂಧರ್ವ ಸಮಾಕುಲಗಳಿಂದ, ಯಕ್ಷ-ಅಸುರ-ಇಂದ್ರ ಅಪ್ಸರ ಗಣಗಳಿಂದ ಮತ್ತು ಹತರಾಗಿ ದಿವವನ್ನು ಏರಿದ್ದ ವೀರರಿಂದ ಕೂಡಿದ್ದ ಆ ಆಕಾಶವು ಸ್ವರ್ಗಲೋಕದಂತೆಯೇ ಕಂಡಿತು.

07138032a ರಥಾಶ್ವನಾಗಾಕುಲದೀಪದೀಪ್ತಂ

        ಸಂರಬ್ಧಯೋಧಾಹತವಿದ್ರುತಾಶ್ವಂ|

07138032c ಮಹದ್ಬಲಂ ವ್ಯೂಢರಥಾಶ್ವನಾಗಂ

        ಸುರಾಸುರವ್ಯೂಹಸಮಂ ಬಭೂವ||

ಬೆಳಗುತ್ತಿರುವ ರಥ-ಅಶ್ವ-ಗಜ ಸಮೂಹಗಳಿಂದ, ಹತರಾಗುತ್ತಿದ್ದ ಮತ್ತು ಓಡಿಹೋಗುತ್ತಿದ್ದ ಯೋಧರಿಂದ ಕೂಡಿದ್ದ ಆ ರಥಾಶ್ವಗಜ ಸೇನೆಗಳ ಮಹಾಬಲವು ಸುರಾಸುರರ ವ್ಯೂಹಗಳ ಸಮನಾಗಿದ್ದವು.

07138033a ತಚ್ಚಕ್ತಿಸಂಘಾಕುಲಚಂಡವಾತಂ

        ಮಹಾರಥಾಭ್ರಂ ರಥವಾಜಿಘೋಷಂ|

07138033c ಶಸ್ತ್ರೌಘವರ್ಷಂ ರುಧಿರಾಂಬುಧಾರಂ

        ನಿಶಿ ಪ್ರವೃತ್ತಂ ನರದೇವಯುದ್ಧಂ||

ನರದೇವ! ಆ ರಾತ್ರಿಯ ಯುದ್ಧದಲ್ಲಿ ಶಕ್ತ್ಯಾಯುಧಗಳ ಪ್ರಯೋಗವೇ ಚಂಡಮಾರುತವಾಗಿತ್ತು. ಮಹಾರಥಗಳೇ ಮೋಡಗಳಾಗಿದ್ದವು. ರಥ-ಕುದುರೆಗಳ ಘೋಷವೇ ಗುಡುಗುಗಳಾಗಿದ್ದವು. ಶಸ್ತ್ರಗಳ ಪ್ರಯೋಗವೇ ಸುರಿಮಳೆಯಂತಿತ್ತು. ರಕ್ತವೇ ಮಳೆಯ ನೀರಾಗಿತ್ತು.

07138034a ತಸ್ಮಿನ್ ಮಹಾಗ್ನಿಪ್ರತಿಮೋ ಮಹಾತ್ಮಾ

        ಸಂತಾಪಯನ್ ಪಾಂಡವಾನ್ ವಿಪ್ರಮುಖ್ಯಃ|

07138034c ಗಭಸ್ತಿಭಿರ್ಮಧ್ಯಗತೋ ಯಥಾರ್ಕೋ

        ವರ್ಷಾತ್ಯಯೇ ತದ್ವದಭೂನ್ನರೇಂದ್ರ||

ನರೇಂದ್ರ! ಮಳೆಗಾಲವು ಮುಗಿಯುತ್ತಲೇ ಹೇಗೆ ಸೂರ್ಯನು ಆಕಾಶದ ಮಧ್ಯದಲ್ಲಿಯೇ ಇರುತ್ತಾನೋ ಹಾಗೆ ಆ ಸೇನೆಯಲ್ಲಿ ಮಹಾ ‌ಅಗ್ನಿಪ್ರತಿಮನಾಗಿದ್ದ ಮಹಾತ್ಮ ದ್ರೋಣನು ಪಾಂಡವ ಪ್ರಮುಖರನ್ನು ಸಂತಾಪಗೊಳಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ದೀಪೋದ್ಯೋತನೇ ಅಷ್ಠತ್ರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ದೀಪೋದ್ಯೋತನ ಎನ್ನುವ ನೂರಾಮೂವತ್ತೆಂಟನೇ ಅಧ್ಯಾಯವು.

Related image

Comments are closed.