Drona Parva: Chapter 137

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೩೭

ಸಾತ್ಯಕಿಯಿಂದ ಸೋಮದತ್ತನ ವಧೆ (೧-೩೩). ದ್ರೋಣನೊಂದಿಗೆ ಯುದ್ಧಮಾಡುತ್ತಿದ್ದ ಯುಧಿಷ್ಠಿರನನ್ನು ಕೃಷ್ಣನು ಎಚ್ಚರಿಸಿ ತಡೆದುದು (೩೪-೫೧).

07137001 ಸಂಜಯ ಉವಾಚ|

07137001a ಸೋಮದತ್ತಂ ತು ಸಂಪ್ರೇಕ್ಷ್ಯ ವಿಧುನ್ವಾನಂ ಮಹದ್ಧನುಃ|

07137001c ಸಾತ್ಯಕಿಃ ಪ್ರಾಹ ಯಂತಾರಂ ಸೋಮದತ್ತಾಯ ಮಾಂ ವಹ||

ಸಂಜಯನು ಹೇಳಿದನು: “ಮಹಾಧನುಸ್ಸನ್ನು ಟೇಂಕರಿಸುತ್ತಿದ್ದ ಸೋಮದತ್ತನನ್ನು ನೋಡಿ ಸಾತ್ಯಕಿಯು “ನನ್ನನ್ನು ಸೋಮದತ್ತನಿದ್ದಲ್ಲಿಗೆ ಒಯ್ಯಿ!” ಎಂದು ಸಾರಥಿಗೆ ಹೇಳಿದನು.

07137002a ನ ಹ್ಯಹತ್ವಾ ರಣೇ ಶತ್ರುಂ ಬಾಹ್ಲೀಕಂ ಕೌರವಾಧಮಂ|

07137002c ನಿವರ್ತಿಷ್ಯೇ ರಣಾತ್ಸೂತ ಸತ್ಯಂ ಏತದ್ವಚೋ ಮಮ||

“ಸೂತ! ಕೌರವಾಧಮ ಶತ್ರು ಬಾಹ್ಲೀಕನನ್ನು ರಣದಲ್ಲಿ ಕೊಲ್ಲದೇ ರಣದಿಂದ ನಾನು ಹಿಂದಿರುಗುವುದಿಲ್ಲ. ನನ್ನ ಈ ಮಾತು ಸತ್ಯ.”

07137003a ತತಃ ಸಂಪ್ರೇಷಯದ್ಯಂತಾ ಸೈಂಧವಾಂಸ್ತಾನ್ಮಹಾಜವಾನ್|

07137003c ತುರಂಗಮಾಂ ಶಂಖವರ್ಣಾನ್ಸರ್ವಶಬ್ದಾತಿಗಾನ್ರಣೇ||

ಆಗ ಸಾರಥಿಯು ಸೈಂಧವದೇಶದ, ಮಹಾವೇಗಶಾಲೀ, ಶಂಖವರ್ಣದ, ಸರ್ವ ಶಬ್ಧಗಳನ್ನೂ ಅತಿಕ್ರಮಿಸಬಲ್ಲ ಆ ಕುದುರೆಗಳನ್ನು ರಣದಲ್ಲಿ ಮುಂದೆ ಹೋಗುವಂತೆ ಚಪ್ಪರಿಸಿದನು.

07137004a ತೇಽವಹನ್ಯುಯುಧಾನಂ ತು ಮನೋಮಾರುತರಂಹಸಃ|

07137004c ಯಥೇಂದ್ರಂ ಹರಯೋ ರಾಜನ್ಪುರಾ ದೈತ್ಯವಧೋದ್ಯತಂ||

ರಾಜನ್! ಹಿಂದೆ ದೈತ್ಯರವಧೆಗೆ ಸಿದ್ಧನಾದ ಇಂದ್ರನನ್ನು ಹೇಗೆ ಕುದುರೆಗಳು ಕೊಂಡೊಯ್ದವೋ ಹಾಗೆ ಯುಯುಧಾನನನ್ನು ಮನಸ್ಸು ಮತ್ತು ಮಾರುತರ ವೇಗವುಳ್ಳ ಅವನ ಕುದುರೆಗಳು ಕೊಂಡೊಯ್ದವು.

07137005a ತಮಾಪತಂತಂ ಸಂಪ್ರೇಕ್ಷ್ಯ ಸಾತ್ವತಂ ರಭಸಂ ರಣೇ|

07137005c ಸೋಮದತ್ತೋ ಮಹಾಬಾಹುರಸಂಭ್ರಾಂತೋಽಭ್ಯವರ್ತತ||

ರಭಸದಿಂದ ರಣದಲ್ಲಿ ಬರುತ್ತಿದ್ದ ಸಾತ್ವತನನ್ನು ನೋಡಿ ಮಹಾಬಾಹು ಸೋಮದತ್ತನು ಗಾಬರಿಗೊಳ್ಳದೇ ಅವನೆದುರು ಧಾವಿಸಿದನು.

07137006a ವಿಮುಂಚಂ ಶರವರ್ಷಾಣಿ ಪರ್ಜನ್ಯ ಇವ ವೃಷ್ಟಿಮಾನ್|

07137006c ಚಾದಯಾಮಾಸ ಶೈನೇಯಂ ಜಲದೋ ಭಾಸ್ಕರಂ ಯಥಾ||

ಮೋಡಗಳು ಭಾಸ್ಕರನನ್ನು ಮುಚ್ಚಿಬಿಡುವಂತೆ ಅವನು ಮಳೆಗರೆಯುವ ಮೋಡಗಳಂತೆ ಶರವರ್ಷಗಳನ್ನು ಸುರಿಸಿ ಶೈನೇಯನನ್ನು ಮುಚ್ಚಿದನು.

07137007a ಅಸಂಭ್ರಾಂತಶ್ಚ ಸಮರೇ ಸಾತ್ಯಕಿಃ ಕುರುಪುಂಗವಂ|

07137007c ಚಾದಯಾಮಾಸ ಬಾಣೌಘೈಃ ಸಮಂತಾದ್ಭರತರ್ಷಭ||

ಭರತರ್ಷಭ! ಸಮರದಲ್ಲಿ ಗಾಬರಿಗೊಳ್ಳದೇ ಸಾತ್ಯಕಿಯು ಕುರುಪುಂಗವನನ್ನು ಬಾಣಗಳ ಗುಂಪುಗಳಿಂದ ಎಲ್ಲಕಡೆಗಳಿಂದ ಮುಚ್ಚಿದನು.

07137008a ಸೋಮದತ್ತಸ್ತು ತಂ ಷಷ್ಟ್ಯಾ ವಿವ್ಯಾಧೋರಸಿ ಮಾಧವಂ|

07137008c ಸಾತ್ಯಕಿಶ್ಚಾಪಿ ತಂ ರಾಜನ್ನವಿಧ್ಯತ್ಸಾಯಕೈಃ ಶಿತೈಃ||

ರಾಜನ್! ಸೋಮದತ್ತನು ಆ ಮಾಧವನ ಎದೆಗೆ ಗುರಿಯಿಟ್ಟು ಅರವತ್ತು ಬಾಣಗಳನ್ನು ಹೊಡೆದನು. ಸಾತ್ಯಕಿಯೂ ಕೂಡ ಅವನನ್ನು ನಿಶಿತ ಸಾಯಕಗಳಿಂದ ಹೊಡೆದನು.

07137009a ತಾವನ್ಯೋನ್ಯಂ ಶರೈಃ ಕೃತ್ತೌ ವ್ಯರಾಜೇತಾಂ ನರರ್ಷಭೌ|

07137009c ಸುಪುಷ್ಪೌ ಪುಷ್ಪಸಮಯೇ ಪುಷ್ಪಿತಾವಿವ ಕಿಂಶುಕ||

ಅನ್ಯೋನ್ಯರನ್ನು ಶರಗಳಿಂದ ಕತ್ತರಿಸಿದ ಆ ನರರ್ಷಭರಿಬ್ಬರೂ ಪುಷ್ಪಸಮಯದಲ್ಲಿ ಚೆನ್ನಾಗಿ ಹೂಬಿಟ್ಟ ಕಿಂಶುಕ ಮರಗಳಂತೆ ವಿರಾಜಿಸಿದರು.

07137010a ರುಧಿರೋಕ್ಷಿತಸರ್ವಾಂಗೌ ಕುರುವೃಷ್ಣಿಯಶಸ್ಕರೌ|

07137010c ಪರಸ್ಪರಮವೇಕ್ಷೇತಾಂ ದಹಂತಾವಿವ ಲೋಚನೈಃ||

ಸರ್ವಾಂಗಗಳಿಂದಲೂ ರಕ್ತವು ಸೋರುತ್ತಿರಲು ಆ ಕುರು-ವೃಷ್ಣಿ ಯಶಸ್ಕರು ಕಣ್ಣುಗಳಿಂದಲೇ ಪರಸ್ಪರರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಿದ್ದರು.

07137011a ರಥಮಂಡಲಮಾರ್ಗೇಷು ಚರಂತಾವರಿಮರ್ದನೌ|

07137011c ಘೋರರೂಪೌ ಹಿ ತಾವಾಸ್ತಾಂ ವೃಷ್ಟಿಮಂತಾವಿವಾಂಬುದೌ||

ರಥಮಂಡಲ ಮಾರ್ಗಗಳಲ್ಲಿ ಸಂಚರಿಸುತ್ತಾ ಆ ಅರಿಮರ್ದನರು ಮಳೆಸುರಿಸುತ್ತಿರುವ ಘೋರರೂಪೀ ಮೋಡಗಳಂತೆ ತೋರುತ್ತಿದ್ದರು.

07137012a ಶರಸಂಭಿನ್ನಗಾತ್ರೌ ತೌ ಸರ್ವತಃ ಶಕಲೀಕೃತೌ|

07137012c ಶ್ವಾವಿಧಾವಿವ ರಾಜೇಂದ್ರ ವ್ಯದೃಷ್ಯೇತಾಂ ಶರಕ್ಷತೌ||

ರಾಜೇಂದ್ರ! ಶರೀರದ ಪೂರ್ತಿ ಬಾಣಗಳು ಚುಚ್ಚಿಕೊಂಡಿರಲು ಬಾಣಗಳಿಂದ ಕ್ಷತವಿಕ್ಷತರಾಗಿದ್ದ ಅವರಿಬ್ಬರೂ ಗಾಯಗೊಂಡ ಮುಳ್ಳುಹಂದಿಗಳಂತೆ ತೋರುತ್ತಿದ್ದರು.

07137013a ಸುವರ್ಣಪುಂಖೈರಿಷುಭಿರಾಚಿತೌ ತೌ ವ್ಯರೋಚತಾಂ|

07137013c ಖದ್ಯೋತೈರಾವೃತೌ ರಾಜನ್ಪ್ರಾವೃಷೀವ ವನಸ್ಪತೀ||

ಸುವರ್ಣಪುಂಖಗಳುಳ್ಳ ಬಾಣಗಳಿಂದ ಚುಚ್ಚಲ್ಪಟ್ಟ ಅವರಿಬ್ಬರೂ ವರ್ಷಾಕಾಲದಲ್ಲಿ ಮಿಣುಕುಹುಳುಗಳಿಂದ ಆವೃತ ಎರಡು ವೃಕ್ಷಗಳಂತೆ ಕಾಣುತ್ತಿದ್ದರು.

07137014a ಸಂಪ್ರದೀಪಿತಸರ್ವಾಂಗೌ ಸಾಯಕೈಸ್ತೌ ಮಹಾರಥೌ|

07137014c ಅದೃಶ್ಯೇತಾಂ ರಣೇ ಕ್ರುದ್ಧಾವುಲ್ಕಾಭಿರಿವ ಕುಂಜರೌ||

ಸಾಯಕಗಳಿಂದ ಸರ್ವಾಂಗಗಳು ಉರಿಯುತ್ತಿರಲು ಆ ಮಹಾರಥರು ರಣದಲ್ಲಿ ಉಲ್ಕೆಗಳಂತೆ ಮತ್ತು ಎರಡು ಕ್ರುದ್ಧ ಆನೆಗಳಂತೆ ಕಾಣುತ್ತಿದ್ದರು.

07137015a ತತೋ ಯುಧಿ ಮಹಾರಾಜ ಸೋಮದತ್ತೋ ಮಹಾರಥಃ|

07137015c ಅರ್ಧಚಂದ್ರೇಣ ಚಿಚ್ಚೇದ ಮಾಧವಸ್ಯ ಮಹದ್ಧನುಃ||

ಮಹಾರಾಜ! ಆಗ ಯುದ್ಧದಲ್ಲಿ ಮಹಾರಥ ಸೋಮದತ್ತನು ಅರ್ಧಚಂದ್ರಾಕಾರದ ಬಾಣದಿಂದ ಮಾಧವನ ಮಹಾಧನುಸ್ಸನ್ನು ತುಂಡರಿಸಿದನು.

07137016a ಅಥೈನಂ ಪಂಚವಿಂಶತ್ಯಾ ಸಾಯಕಾನಾಂ ಸಮಾರ್ಪಯತ್|

07137016c ತ್ವರಮಾಣಸ್ತ್ವರಾಕಾಲೇ ಪುನಶ್ಚ ದಶಭಿಃ ಶರೈಃ||

ಆಗ ಅವನ ಮೇಲೆ ಇಪ್ಪತ್ತೈದು ಸಾಯಕಗಳನ್ನು ಪ್ರಯೋಗಿಸಿದನು ಮತ್ತು ತ್ವರೆಮಾಡಬೇಕಾದ ಸಮಯದಲ್ಲಿ ತ್ವರೆಮಾಡುತ್ತಾ ಪುನಃ ಹತ್ತು ಶರಗಳಿಂದ ಹೊಡೆದನು.

07137017a ಅಥಾನ್ಯದ್ಧನುರಾದಾಯ ಸಾತ್ಯಕಿರ್ವೇಗವತ್ತರಂ|

07137017c ಪಂಚಭಿಃ ಸಾಯಕೈಸ್ತೂರ್ಣಂ ಸೋಮದತ್ತಮವಿಧ್ಯತ||

ಆಗ ಸಾತ್ಯಕಿಯು ಇನ್ನೊಂದು ವೇಗವತ್ತರ ಧನುಸ್ಸನ್ನು ಹಿಡಿದು ತಕ್ಷಣವೇ ಐದು ಸಾಯಕಗಳಿಂದ ಸೋಮದತ್ತನನ್ನು ಹೊಡೆದನು.

07137018a ತತೋಽಪರೇಣ ಭಲ್ಲೇನ ಧ್ವಜಂ ಚಿಚ್ಚೇದ ಕಾಂಚನಂ|

07137018c ಬಾಹ್ಲೀಕಸ್ಯ ರಣೇ ರಾಜನ್ಸಾತ್ಯಕಿಃ ಪ್ರಹಸನ್ನಿವ||

ರಾಜನ್! ಆಗ ಸಾತ್ಯಕಿಯು ರಣದಲ್ಲಿ ನಗುತ್ತಾ ಇನ್ನೊಂದು ಭಲ್ಲದಿಂದ ಬಾಹ್ಲೀಕನ ಕಾಂಚನ ಧ್ವಜವನ್ನು ಕತ್ತರಿಸಿದನು.

07137019a ಸೋಮದತ್ತಸ್ತ್ವಸಂಭ್ರಾಂತೋ ದೃಷ್ಟ್ವಾ ಕೇತುಂ ನಿಪಾತಿತಂ|

07137019c ಶೈನೇಯಂ ಪಂಚವಿಂಶತ್ಯಾ ಸಾಯಕಾನಾಂ ಸಮಾಚಿನೋತ್||

ಧ್ವಜವು ಕೆಳಗೆ ಬಿದ್ದುದನ್ನು ನೋಡಿ ಗಾಬರಿಗೊಳ್ಳದೇ ಸೋಮದತ್ತನು ಶೈನೇಯನನ್ನು ಇಪ್ಪತ್ತೈದು ಸಾಯಕಗಳಿಂದ ಹೊಡೆದನು.

07137020a ಸಾತ್ವತೋಽಪಿ ರಣೇ ಕ್ರುದ್ಧಃ ಸೋಮದತ್ತಸ್ಯ ಧನ್ವಿನಃ|

07137020c ಧನುಶ್ಚಿಚ್ಚೇದ ಸಮರೇ ಕ್ಷುರಪ್ರೇಣ ಶಿತೇನ ಹ||

ರಣದಲ್ಲಿ ಕ್ರುದ್ಧ ಧನ್ವಿ ಸಾತ್ವತನೂ ಕೂಡ ಸಮರದಲ್ಲಿ ಹರಿತ ಕ್ಷುರಪ್ರದಿಂದ ಸೋಮದತ್ತನ ಧನುಸ್ಸನ್ನು ತುಂಡರಿಸಿದನು.

07137021a ಅಥೈನಂ ರುಕ್ಮಪುಂಖಾನಾಂ ಶತೇನ ನತಪರ್ವಣಾಂ|

07137021c ಆಚಿನೋದ್ಬಹುಧಾ ರಾಜನ್ಭಗ್ನದಂಷ್ಟ್ರಮಿವ ದ್ವಿಪಂ||

ರಾಜನ್! ದಂತವನ್ನು ತುಂಡುಮಾಡಿ ಆನೆಯನ್ನು ಪುನಃ ಪುನಃ ಹೊಡೆಯುವಂತೆ ಅವನನ್ನು ರುಕ್ಮಪುಂಖಗಳ ನೂರಾರು ನತಪರ್ವಗಳಿಂದ ಬಹಳಷ್ಟು ಹೊಡೆದನು.

07137022a ಅಥಾನ್ಯದ್ಧನುರಾದಾಯ ಸೋಮದತ್ತೋ ಮಹಾರಥಃ|

07137022c ಸಾತ್ಯಕಿಂ ಚಾದಯಾಮಾಸ ಶರವೃಷ್ಟ್ಯಾ ಮಹಾಬಲಃ||

ಆಗ ಮಹಾಬಲ ಮಹಾರಥ ಸೋಮದತ್ತನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಸಾತ್ಯಕಿಯನ್ನು ಶರವೃಷ್ಟಿಯಿಂದ ಮುಚ್ಚಿದನು.

07137023a ಸೋಮದತ್ತಂ ತು ಸಂಕ್ರುದ್ಧೋ ರಣೇ ವಿವ್ಯಾಧ ಸಾತ್ಯಕಿಃ|

07137023c ಸಾತ್ಯಕಿಂ ಚೇಷುಜಾಲೇನ ಸೋಮದತ್ತೋ ಅಪೀಡಯತ್||

ಸಾತ್ಯಕಿಯು ರಣದಲ್ಲಿ ಸಂಕ್ರುದ್ಧನಾಗಿ ಸೋಮದತ್ತನನ್ನು ಹೊಡೆದನು. ಸೋಮದತ್ತನೂ ಕೂಡ ಸಾತ್ಯಕಿಯನ್ನು ಬಾಣಗಳ ಜಾಲದಿಂದ ಪೀಡಿಸಿದನು.

07137024a ದಶಭಿಃ ಸಾತ್ವತಸ್ಯಾರ್ಥೇ ಭೀಮೋಽಹನ್ಬಾಹ್ಲಿಕಾತ್ಮಜಂ|

07137024c ಸೋಮದತ್ತೋಽಪ್ಯಸಂಭ್ರಾಂತಃ ಶೈನೇಯಮವಧೀಚ್ಚರೈಃ||

ಸಾತ್ವತನ ಸಹಾಯಮಾಡುತ್ತಿದ್ದ ಭೀಮನು ಆಗ ಬಾಹ್ಲೀಕಾತ್ಮಜನನ್ನು ಹತ್ತು ಬಾಣಗಳಿಂದ ಹೊಡೆದನು. ಆದರೆ ಸೋಮದತ್ತನು ಗಾಬರಿಗೊಳ್ಳದೇ ಶೈನೇಯನನ್ನು ಶರಗಳಿಂದ ಹೊಡೆದನು.

07137025a ತತಸ್ತು ಸಾತ್ವತಸ್ಯಾರ್ಥೇ ಭೈಮಸೇನಿರ್ನವಂ ದೃಢಂ|

07137025c ಮುಮೋಚ ಪರಿಘಂ ಘೋರಂ ಸೋಮದತ್ತಸ್ಯ ವಕ್ಷಸಿ||

ಆಗ ಸಾತ್ವತನಿಗೋಸ್ಕರವಾಗಿ ಭೈಮಸೇನಿಯು ಹೊಸದಾದ ದೃಡ ಘೋರ ಪರಿಘವನ್ನು ಸೋಮದತ್ತನ ಎದೆಯಮೇಲೆ ಪ್ರಯೋಗಿಸಿದನು.

07137026a ತಮಾಪತಂತಂ ವೇಗೇನ ಪರಿಘಂ ಘೋರದರ್ಶನಂ|

07137026c ದ್ವಿಧಾ ಚಿಚ್ಚೇದ ಸಮರೇ ಪ್ರಹಸನ್ನಿವ ಕೌರವಃ||

ವೇಗದಿಂದ ಬೀಳುತ್ತಿದ್ದ ಘೋರವಾಗಿ ಕಾಣುತ್ತಿದ್ದ ಆ ಪರಿಘವನ್ನು ಸಮರದಲ್ಲಿ ಕೌರವನು ನಸುನಗುತ್ತಾ ತುಂಡರಿಸಿದನು.

07137027a ಸ ಪಪಾತ ದ್ವಿಧಾ ಚಿನ್ನ ಆಯಸಃ ಪರಿಘೋ ಮಹಾನ್|

07137027c ಮಹೀಧರಸ್ಯೇವ ಮಹಚ್ಚಿಖರಂ ವಜ್ರದಾರಿತಂ||

ಕಬ್ಬಿಣದ ಆ ಮಹಾ ಪರಿಘವು ಎರಡಾಗಿ ವಜ್ರದಿಂದ ಸೀಳಲ್ಪಟ್ಟ ಮಹಾ ಶಿಖರದಂತೆ ಭೂಮಿಯ ಮೇಲೆ ಬಿದ್ದಿತು.

07137028a ತತಸ್ತು ಸಾತ್ಯಕೀ ರಾಜನ್ಸೋಮದತ್ತಸ್ಯ ಸಮ್ಯುಗೇ|

07137028c ಧನುಶ್ಚಿಚ್ಚೇದ ಭಲ್ಲೇನ ಹಸ್ತಾವಾಪಂ ಚ ಪಂಚಭಿಃ||

ರಾಜನ್! ಆಗ ಸಂಯುಗದಲ್ಲಿ ಸಾತ್ಯಕಿಯು ಭಲ್ಲದಿಂದ ಸೋಮದತ್ತನ ಧನುಸ್ಸನ್ನು ಕತ್ತರಿಸಿದನು ಮತ್ತು ಐದು ಬಾಣಗಳಿಂದ ಅವನ ಕೈಚೀಲವನ್ನು ಕತ್ತರಿಸಿದನು.

07137029a ಚತುರ್ಭಿಸ್ತು ಶರೈಸ್ತೂರ್ಣಂ ಚತುರಸ್ತುರಗೋತ್ತಮಾನ್|

07137029c ಸಮೀಪಂ ಪ್ರೇಷಯಾಮಾಸ ಪ್ರೇತರಾಜಸ್ಯ ಭಾರತ||

ಭಾರತ! ತಕ್ಷಣವೇ ನಾಲ್ಕು ಬಾಣಗಳಿಂದ ಅವನ ನಾಲ್ಕು ಉತ್ತಮ ಕುದುರೆಗಳನ್ನೂ ಪ್ರೇತರಾಜನ ಸಮೀಪಕ್ಕೆ ಕಳುಹಿಸಿದನು.

07137030a ಸಾರಥೇಶ್ಚ ಶಿರಃ ಕಾಯಾದ್ಭಲ್ಲೇನ ನತಪರ್ವಣಾ|

07137030c ಜಹಾರ ರಥಶಾರ್ದೂಲಃ ಪ್ರಹಸಂ ಶಿನಿಪುಂಗವಃ||

ರಥಶಾರ್ದೂಲ ಶಿನಿಪುಂಗವನು ನಸುನಗುತ್ತಾ ನತಪರ್ವಣ ಭಲ್ಲದಿಂದ ಸಾರಥಿಯ ಶಿರವನ್ನು ಅಪಹರಿಸಿದನು.

07137031a ತತಃ ಶರಂ ಮಹಾಘೋರಂ ಜ್ವಲಂತಮಿವ ಪಾವಕಂ|

07137031c ಮುಮೋಚ ಸಾತ್ವತೋ ರಾಜನ್ಸ್ವರ್ಣಪುಂಖಂ ಶಿಲಾಶಿತಂ||

ರಾಜನ್! ಆಗ ಸಾತ್ವತನು ಪಾವಕನಂತೆ ಉರಿಯುತ್ತಿರುವ ಮಹಾಘೋರ ಶಿಲಾಶಿತ ಸ್ವರ್ಣಪುಂಖವನ್ನು ಪ್ರಯೋಗಿಸಿದನು.

07137032a ಸ ವಿಮುಕ್ತೋ ಬಲವತಾ ಶೈನೇಯೇನ ಶರೋತ್ತಮಃ|

07137032c ಘೋರಸ್ತಸ್ಯೋರಸಿ ವಿಭೋ ನಿಪಪಾತಾಶು ಭಾರತ||

ಭಾರತ! ವಿಭೋ! ಶೈನೇಯನಿಂದ ಬಲವತ್ತರವಾಗಿ ಪ್ರಯೋಗಿಸಲ್ಪಟ್ಟ ಆ ಉತ್ತಮ ಘೋರ ಶರವು ಸೋಮದತ್ತನ ಎದೆಯಮೇಲೆ ಬಿದ್ದು ನಾಟಿತು.

07137033a ಸೋಽತಿವಿದ್ಧೋ ಬಲವತಾ ಸಾತ್ವತೇನ ಮಹಾರಥಃ|

07137033c ಸೋಮದತ್ತೋ ಮಹಾಬಾಹುರ್ನಿಪಪಾತ ಮಮಾರ ಚ||

ಈ ರೀತಿ ಸಾತ್ವತನಿಂದ ಬಲವತ್ತರವಾಗಿ ಹೊಡೆಯಲ್ಪಟ್ಟ ಮಹಾರಥ ಮಹಾಬಾಹು ಸೋಮದತ್ತನು ಕೆಳಗಿ ಬಿದ್ದು ಅಸುನೀಗಿದನು.

07137034a ತಂ ದೃಷ್ಟ್ವಾ ನಿಹತಂ ತತ್ರ ಸೋಮದತ್ತಂ ಮಹಾರಥಾಃ|

07137034c ಮಹತಾ ಶರವರ್ಷೇಣ ಯುಯುಧಾನಮುಪಾದ್ರವನ್||

ಸೋಮದತ್ತನು ಅಲ್ಲಿ ಹತನಾದುದನ್ನು ನೋಡಿ ಮಹಾರಥರು ಮಹಾ ಶರವರ್ಷಗಳಿಂದ ಯುಯುಧಾನನನ್ನು ಆಕ್ರಮಣಿಸಿದರು.

07137035a ಚಾದ್ಯಮಾನಂ ಶರೈರ್ದೃಷ್ಟ್ವಾ ಯುಯುಧಾನಂ ಯುಧಿಷ್ಠಿರಃ|

07137035c ಮಹತ್ಯಾ ಸೇನಯಾ ಸಾರ್ಧಂ ದ್ರೋಣಾನೀಕಮುಪಾದ್ರವತ್||

ಶರಗಳಿಂದ ಮುಚ್ಚಲ್ಪಟ್ಟ ಯುಯುಧಾನನನ್ನು ನೋಡಿ ಯುಧಿಷ್ಠಿರನು ಮಹಾ ಸೇನೆಯೊಂದಿಗೆ ದ್ರೋಣನ ಸೇನೆಯನ್ನು ಆಕ್ರಮಣಿಸಿದನು.

07137036a ತತೋ ಯುಧಿಷ್ಠಿರಃ ಕ್ರುದ್ಧಸ್ತಾವಕಾನಾಂ ಮಹಾಬಲಂ|

07137036c ಶರೈರ್ವಿದ್ರಾವಯಾಮಾಸ ಭಾರದ್ವಾಜಸ್ಯ ಪಶ್ಯತಃ||

ಆಗ ಕ್ರುದ್ಧ ಯುಧಿಷ್ಠಿರನು, ಭಾರದ್ವಾಜನು ನೋಡುತ್ತಿದ್ದಂತೆಯೇ, ನಿನ್ನ ಮಹಾಬಲವನ್ನು ಶರಗಳಿಂದ ಹೊಡೆದು ಪಲಾಯನಗೊಳಿಸಿದನು.

07137037a ಸೈನ್ಯಾನಿ ದ್ರಾವಯಂತಂ ತು ದ್ರೋಣೋ ದೃಷ್ಟ್ವಾ ಯುಧಿಷ್ಠಿರಂ|

07137037c ಅಭಿದುದ್ರಾವ ವೇಗೇನ ಕ್ರೋಧಸಂರಕ್ತಲೋಚನಃ||

ಸೇನೆಗಳನ್ನು ಪಲಾಯನಗೊಳಿಸುತ್ತಿದ್ದ ಯುಧಿಷ್ಠಿರನನ್ನು ನೋಡಿ ದ್ರೋಣನು ಕ್ರೋಧದಿಂದ ಕೆಂಗಣ್ಣುಗಳುಳ್ಳವನಾಗಿ ವೇಗದಿಂದ ಅವನನ್ನು ಆಕ್ರಮಣಿಸಿದನು.

07137038a ತತಃ ಸುನಿಶಿತೈರ್ಬಾಣೈಃ ಪಾರ್ಥಂ ವಿವ್ಯಾಧ ಸಪ್ತಭಿಃ|

07137038c ಸೋಽತಿವಿದ್ಧೋ ಮಹಾಬಾಹುಃ ಸೃಕ್ಕಿಣೀ ಪರಿಸಂಲಿಹನ್|

07137038e ಯುಧಿಷ್ಠಿರಸ್ಯ ಚಿಚ್ಚೇದ ಧ್ವಜಂ ಕಾರ್ಮುಕಮೇವ ಚ||

ಆಗ ಅವನು ಪಾರ್ಥನನ್ನು ಏಳು ನಿಶಿತ ಬಾಣಗಳಿಂದ ಹೊಡೆದನು. ಹಾಗೆ ಗಾಢವಾಗಿ ಹೊಡೆದು ಕಟವಾಯಿಯನ್ನು ಸವರುತ್ತಾ ಅವನು ಯುಧಿಷ್ಠಿರನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು.

07137039a ಸ ಚಿನ್ನಧನ್ವಾ ತ್ವರಿತಸ್ತ್ವರಾಕಾಲೇ ನೃಪೋತ್ತಮಃ|

07137039c ಅನ್ಯದಾದತ್ತ ವೇಗೇನ ಕಾರ್ಮುಕಂ ಸಮರೇ ದೃಢಂ||

ತ್ವರೆಮಾಡಬೇಕಾದ ಸಮಯದಲ್ಲಿ ತ್ವರೆಮಾಡುತ್ತಾ ಆ ನೃಪೋತ್ತಮನು ವೇಗದಿಂದ ಸಮರದಲ್ಲಿ ಇನ್ನೊಂದು ದೃಢ ಧನುಸ್ಸನ್ನು ತೆಗೆದುಕೊಂಡನು.

07137040a ತತಃ ಶರಸಹಸ್ರೇಣ ದ್ರೋಣಂ ವಿವ್ಯಾಧ ಪಾರ್ಥಿವಃ|

07137040c ಸಾಶ್ವಸೂತಧ್ವಜರಥಂ ತದದ್ಭುತಮಿವಾಭವತ್||

ಆಗ ಪಾರ್ಥಿವನು ನೂರಾರು ಸಹಸ್ರಾರು ಬಾಣಗಳಿಂದ ದ್ರೋಣನನ್ನು ಹೊಡೆದನು ಮತ್ತು ಅವನ ಕುದುರೆ-ಸೂತ-ಧ್ವಜ-ರಥಗಳನ್ನು ಹೊಡೆದನು. ಅದೊಂದು ಅದ್ಭುತವಾಗಿತ್ತು.

07137041a ತತೋ ಮುಹೂರ್ತಂ ವ್ಯಥಿತಃ ಶರಘಾತಪ್ರಪೀಡಿತಃ|

07137041c ನಿಷಸಾದ ರಥೋಪಸ್ಥೇ ದ್ರೋಣೋ ಭರತಸತ್ತಮ||

ಭರತಸತ್ತಮ! ಆಗ ಶರಘಾತದಿಂದ ಪೀಡಿತ ದ್ರೋಣನು ಮುಹೂರ್ತಕಾಲ ರಥದಲ್ಲಿಯೇ ಕುಸಿದು ಕುಳಿತುಕೊಂಡನು.

07137042a ಪ್ರತಿಲಭ್ಯ ತತಃ ಸಂಜ್ಞಾಂ ಮುಹೂರ್ತಾದ್ದ್ವಿಜಸತ್ತಮಃ|

07137042c ಕ್ರೋಧೇನ ಮಹತಾವಿಷ್ಟೋ ವಾಯವ್ಯಾಸ್ತ್ರಮವಾಸೃಜತ್||

ಆಗ ಮುಹೂರ್ತದಲ್ಲಿಯೇ ಸಂಜ್ಞೆಯನ್ನು ಪಡೆದು ದ್ವಿಜಸತ್ತಮನು ಕ್ರೋಧದಿಂದ ಮಹಾವಿಷ್ಟನಾಗಿ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು.

07137043a ಅಸಂಭ್ರಾಂತಸ್ತತಃ ಪಾರ್ಥೋ ಧನುರಾಕೃಷ್ಯ ವೀರ್ಯವಾನ್|

07137043c ತದಸ್ತ್ರಮಸ್ತ್ರೇಣ ರಣೇ ಸ್ತಂಭಯಾಮಾಸ ಭಾರತ||

ಭಾರತ! ಆಗ ವೀರ್ಯವಾನ್ ಪಾರ್ಥನು ಗಾಬರಿಗೊಳ್ಳದೇ ಧನುಸ್ಸನ್ನು ಸೆಳೆದು ರಣದಲ್ಲಿ ಆ ಅಸ್ತ್ರವನ್ನು ಅಸ್ತ್ರದಿಂದಲೇ ಸ್ತಂಭಗೊಳಿಸಿದನು.

07137044a ತತೋಽಬ್ರವೀದ್ವಾಸುದೇವಃ ಕುಂತೀಪುತ್ರಂ ಯುಧಿಷ್ಠಿರಂ|

07137044c ಯುಧಿಷ್ಠಿರ ಮಹಾಬಾಹೋ ಯತ್ತ್ವಾ ವಕ್ಷ್ಯಾಮಿ ತಚ್ಚೃಣು||

ಆಗ ವಾಸುದೇವನು ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು: “ಮಹಾಬಾಹೋ! ಯುಧಿಷ್ಠಿರ! ನಾನು ಹೇಳುವುದನ್ನು ಪ್ರಯತ್ನಿಸಿ ಕೇಳು!

07137045a ಉಪಾರಮಸ್ವ ಯುದ್ಧಾಯ ದ್ರೋಣಾದ್ಭರತಸತ್ತಮ|

07137045c ಗೃಧ್ಯತೇ ಹಿ ಸದಾ ದ್ರೋಣೋ ಗ್ರಹಣೇ ತವ ಸಮ್ಯುಗೇ||

ಭರತಸತ್ತಮ! ದ್ರೋಣನೊಡನೆ ಮಾಡುವ ಈ ಯುದ್ಧವನ್ನು ಕೊನೆಗೊಳಿಸು. ಯುದ್ಧದಲ್ಲಿ ದ್ರೋಣನು ನಿನ್ನನ್ನು ಹಿಡಿಯುವುದಕ್ಕಾಗಿಯೇ ಸದಾ ಪ್ರಯತ್ನಿಸುತ್ತಿದ್ದಾನೆ.

07137046a ನಾನುರೂಪಮಹಂ ಮನ್ಯೇ ಯುದ್ಧಮಸ್ಯ ತ್ವಯಾ ಸಹ|

07137046c ಯೋಽಸ್ಯ ಸೃಷ್ಟೋ ವಿನಾಶಾಯ ಸ ಏನಂ ಶ್ವೋ ಹನಿಷ್ಯತಿ||

ಆದುದರಿಂದ ನೀನು ಅವನೊಡನೆ ಯುದ್ಧಮಾಡುವುದು ನಿನಗೆ ಉಚಿತವೆಂದು ತೋರುವುದಿಲ್ಲ. ಇವನ ವಿನಾಶಕ್ಕಾಗಿ ಯಾರು ಸೃಸ್ಟಿಸಲ್ಪಟ್ಟಿರುವನೋ ಅವನು ಇವನನ್ನು ನಾಳೆ ಕೊಲ್ಲುವವನಿದ್ದಾನೆ.

07137047a ಪರಿವರ್ಜ್ಯ ಗುರುಂ ಯಾಹಿ ಯತ್ರ ರಾಜಾ ಸುಯೋಧನಃ|

07137047c ಭೀಮಶ್ಚ ರಥಶಾರ್ದೂಲೋ ಯುಧ್ಯತೇ ಕೌರವೈಃ ಸಹ||

ಗುರುವನ್ನು ತೊರೆದು ಎಲ್ಲಿ ರಾಜಾ ಸುಯೋಧನನು ಕೌರವರೊಡಗೂಡಿ ರಥಶಾರ್ದೂಲ ಭೀಮನೊಡನೆ ಯುದ್ಧಮಾಡುತ್ತಿರುವನೋ ಅಲ್ಲಿಗೆ ಹೋಗು.”

07137048a ವಾಸುದೇವವಚಃ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ|

07137048c ಮುಹೂರ್ತಂ ಚಿಂತಯಿತ್ವಾ ತು ತತೋ ದಾರುಣಮಾಹವಂ||

ವಾಸುದೇವನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಮುಹೂರ್ತಕಾಲ ಆ ದಾರುಣ ಯುದ್ಧದ ಕುರಿತು ಯೋಚಿಸಿದನು.

07137049a ಪ್ರಾಯಾದ್ದ್ರುತಮಮಿತ್ರಘ್ನೋ ಯತ್ರ ಭೀಮೋ ವ್ಯವಸ್ಥಿತಃ|

07137049c ವಿನಿಘ್ನಂಸ್ತಾವಕಾನ್ಯೋಧಾನ್ವ್ಯಾದಿತಾಸ್ಯ ಇವಾಂತಕಃ||

ಅನಂತರ ಬಾಯ್ದೆರೆದ ಅಂತಕನಂತೆ ನಿನ್ನಕಡೆಯ ಯೋಧರನ್ನು ಸಂಹರಿಸುತ್ತಾ ಆ ಅಮಿತ್ರಘ್ನನು ಭೀಮನು ಎಲ್ಲಿದ್ದನೋ ಅಲ್ಲಿಗೆ ಧಾವಿಸಿದನು.

07137050a ರಥಘೋಷೇಣ ಮಹತಾ ನಾದಯನ್ವಸುಧಾತಲಂ|

07137050c ಪರ್ಜನ್ಯ ಇವ ಘರ್ಮಾಂತೇ ನಾದಯನ್ವೈ ದಿಶೋ ದಶ||

07137051a ಭೀಮಸ್ಯ ನಿಘ್ನತಃ ಶತ್ರೂನ್ಪಾರ್ಷ್ಣಿಂ ಜಗ್ರಾಹ ಪಾಂಡವಃ|

07137051c ದ್ರೋಣೋಽಪಿ ಪಾಂಡುಪಾಂಚಾಲಾನ್ವ್ಯಧಮದ್ರಜನೀಮುಖೇ||

ಮಹಾರಥಘೋಷದಿಂದ ವಸುಧಾತಲವನ್ನು ಮೊಳಗಿಸುತ್ತಾ, ಬೇಸಗೆಯ ಕೊಲೆಯಲ್ಲಿನ ಮೋಡಗಳಂತೆ ದಿಕ್ಕು ದಿಕ್ಕುಗಳನ್ನು ಮೊಳಗುತ್ತಾ ಪಾಂಡವನು ಶತ್ರುಗಳನ್ನು ಸಂಹರಿಸುತ್ತಿದ್ದ ಭೀಮನ ಪಾರ್ಷ್ಣಿಯನ್ನು ಹಿಡಿದನು. ದ್ರೋಣನೂ ಕೂಡ ಆ ರಾತ್ರಿಯಲ್ಲಿ ಪಾಂಡು-ಪಾಂಚಾಲರನ್ನು ವಧಿಸತೊಡಗಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸೋಮದತ್ತವಧೇ ಸಪ್ತತ್ರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸೋಮದತ್ತವಧ ಎನ್ನುವ ನೂರಾಮೂವತ್ತೇಳನೇ ಅಧ್ಯಾಯವು.

Related image

Comments are closed.