Drona Parva: Chapter 130

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೩೦

ಧೃತರಾಷ್ಟ್ರನು ರಾತ್ರಿಯುದ್ಧದ ಕುರಿತು ಪುನಃ ಪ್ರಶ್ನಿಸಿದುದು (೧-೧೦). ದ್ರೋಣನಿಂದ ಶಿಬಿಯ ವಧೆ (೧೧-೧೭). ಭೀಮನು ಕಳಿಂಗ ರಾಜಕುಮಾರ, ಧ್ರುವ ಮತ್ತು ಜಯರಾತರನ್ನು ಸಂಹರಿಸಿದುದು (೧೮-೨೫). ಭೀಮನಿಂದ ದುರ್ಮದ-ದುಷ್ಕರ್ಣರ ಸಂಹಾರ (೨೬-೪೦).

07130001 ಧೃತರಾಷ್ಟ್ರ ಉವಾಚ|

07130001a ತಸ್ಮಿನ್ಪ್ರವಿಷ್ಟೇ ದುರ್ಧರ್ಷೇ ಸೃಂಜಯಾನಮಿತೌಜಸಿ|

07130001c ಅಮೃಷ್ಯಮಾಣೇ ಸಂರಬ್ಧೇ ಕಾ ವೋಽಭೂದ್ವೈ ಮತಿಸ್ತದಾ||

ಧೃತರಾಷ್ಟ್ರನು ಹೇಳಿದನು: “ಅಸಹನಶೀಲ ಕ್ರುದ್ಧ ಅಮಿತೌಜಸ ದ್ರೋಣನು ಆ ದುರ್ಧರ್ಷ ಸೃಂಜಯರನ್ನು ಪ್ರವೇಶಿಸಿದಾಗ ನಮ್ಮವರ ಮನಸ್ಥಿತಿಯು ಹೇಗಿದ್ದಿತು?

07130002a ದುರ್ಯೋಧನಂ ತಥಾ ಪುತ್ರಮುಕ್ತ್ವಾ ಶಾಸ್ತ್ರಾತಿಗಂ ಮಮ|

07130002c ಯತ್ಪ್ರಾವಿಶದಮೇಯಾತ್ಮಾ ಕಿಂ ಪಾರ್ಥಃ ಪ್ರತ್ಯಪದ್ಯತ||

ಶಾಸ್ತ್ರಗಳನ್ನು ಉಲ್ಲಂಘಿಸಿ ನಡೆಯುವ ನನ್ನ ಮಗ ದುರ್ಯೋಧನನೊಂದಿಗೆ ಮಾತನಾಡಿದ ಆ ಅಮೇಯಾತ್ಮನು ಸೇನೆಯನ್ನು ಪ್ರವೇಶಿಸಿದಾಗ ಪಾರ್ಥನು ಏನು ಮಾಡಿದನು?

07130003a ನಿಹತೇ ಸೈಂಧವೇ ವೀರೇ ಭೂರಿಶ್ರವಸಿ ಚೈವ ಹಿ|

07130003c ಯದಭ್ಯಗಾನ್ಮಹಾತೇಜಾಃ ಪಾಂಚಾಲಾನಪರಾಜಿತಃ||

07130004a ಕಿಮಮನ್ಯತ ದುರ್ಧರ್ಷಃ ಪ್ರವಿಷ್ಟೇ ಶತ್ರುತಾಪನೇ|

07130004c ದುರ್ಯೋಧನಶ್ಚ ಕಿಂ ಕೃತ್ಯಂ ಪ್ರಾಪ್ತಕಾಲಮಮನ್ಯತ||

ವೀರ ಸೈಂಧವ ಮತ್ತು ಭೂರಿಶ್ರವರು ಹತರಾಗಲು ಮಹಾತೇಜಸ್ವಿ ಪಾಂಚಾಲರನ್ನು ಆ ಅಪರಾಜಿತ ದುರ್ಧರ್ಷ ಶತ್ರುತಾಪನನು ಪ್ರವೇಶಿಸಿ ಆಕ್ರಮಿಸಲು ಆ ಸಮಯದಲ್ಲಿ ದುರ್ಯೋಧನನು ಯಾವ ಕೆಲಸವು ಉಚಿತವೆಂದು ಯೋಚಿಸಿದನು?

07130005a ಕೇ ಚ ತಂ ವರದಂ ವೀರಮನ್ವಯುರ್ದ್ವಿಜಸತ್ತಮಂ|

07130005c ಕೇ ಚಾಸ್ಯ ಪೃಷ್ಠತೋಽಗಚ್ಚನ್ವೀರಾಃ ಶೂರಸ್ಯ ಯುಧ್ಯತಃ|

07130005e ಕೇ ಪುರಸ್ತಾದಯುಧ್ಯಂತ ನಿಘ್ನತಃ ಶಾತ್ರವಾನ್ರಣೇ||

ಆ ವರದ ವೀರ ದ್ವಿಜಸತ್ತಮನನ್ನು ಯಾರು ಅನುಸರಿಸಿದರು? ಯುದ್ಧಮಾಡುತ್ತಿರುವ ಆ ಶೂರನ ಹಿಂದಿನಿಂದ ಯಾವ ವೀರರು ಹೋದರು? ಅವನು ರಣದಲ್ಲಿ ಯುದ್ಧಮಾಡಿ ಶತ್ರುಗಳನ್ನು ಸಂಹರಿಸುತ್ತಿರುವಾಗ ಅವನ ಮುಂದೆ ಯಾರಿದ್ದರು?

07130006a ಮನ್ಯೇಽಹಂ ಪಾಂಡವಾನ್ಸರ್ವಾನ್ಭಾರದ್ವಾಜಶರಾರ್ದಿತಾನ್|

07130006c ಶಿಶಿರೇ ಕಂಪಮಾನಾ ವೈ ಕೃಶಾ ಗಾವ ಇವಾಭಿಭೋ||

ಭಾರದ್ವಾಜನ ಶರಗಳಿಂದ ಗಾಯಗೊಂಡ ಪಾಂಡವರೆಲ್ಲರೂ ಛಳಿಗಾಲದಲ್ಲಿ ನಡುಗುವ ಬಡಕಲು ಆಕಳುಗಳಂತೆ ತೋರುತ್ತಿದ್ದಿರಬಹುದಲ್ಲವೇ?

07130007a ಪ್ರವಿಶ್ಯ ಸ ಮಹೇಷ್ವಾಸಃ ಪಾಂಚಾಲಾನರಿಮರ್ದನಃ|

07130007c ಕಥಂ ನು ಪುರುಷವ್ಯಾಘ್ರಃ ಪಂಚತ್ವಮುಪಜಗ್ಮಿವಾನ್||

ಪಾಂಚಾಲರನ್ನು ಪ್ರವೇಶಿಸಿ ಆ ಮಹೇಷ್ವಾಸ, ಪುರುಷವ್ಯಾಘ್ರ, ಅರಿಮರ್ದನನು ಹೇಗೆ ಪಂಚತ್ವವನ್ನು ಹೊಂದಿದನು?

07130008a ಸರ್ವೇಷು ಸೈನ್ಯೇಷು ಚ ಸಂಗತೇಷು

         ರಾತ್ರೌ ಸಮೇತೇಷು ಮಹಾರಥೇಷು|

07130008c ಸಂಲೋಡ್ಯಮಾನೇಷು ಪೃಥಗ್ವಿಧೇಷು

         ಕೇ ವಸ್ತದಾನೀಂ ಮತಿಮಂತ ಆಸನ್||

ಆ ರಾತ್ರಿ ಎಲ್ಲಸೇನೆಗಳೂ ಸೇರಿರಲು, ಮಹಾರಥರು ಒಟ್ಟಾಗಿರಲು, ಭೂಮಿ-ಆಕಾಶಗಳನ್ನು ಅಲ್ಲಾಡಿಸುತ್ತಿರಲು ನಮ್ಮವರಲ್ಲಿ ಅತಿ ಬುದ್ಧಿವಂತನಾದವನು ಯಾರಿದ್ದನು?

07130009a ಹತಾಂಶ್ಚೈವ ವಿಷಕ್ತಾಂಶ್ಚ ಪರಾಭೂತಾಂಶ್ಚ ಶಂಸಸಿ|

07130009c ರಥಿನೋ ವಿರಥಾಂಶ್ಚೈವ ಕೃತಾನ್ಯುದ್ಧೇಷು ಮಾಮಕಾನ್||

ಯುದ್ಧ ಮಾಡುತ್ತಿರುವ ನನ್ನವರಾದ ಮಹಾರಥರು “ಹತರಾದರು!” “ಪರಾಜಿತರಾದರು!” “ಶಕ್ತಿಯನ್ನು ಕಳೆದುಕೊಂಡರು!” “ವಿರಥರಾದರು!” ಎಂದು ಹೇಳಿಕೊಂಡೇ ಇದ್ದೀಯೆ!

07130010a ಕಥಮೇಷಾಂ ತದಾ ತತ್ರ ಪಾರ್ಥಾನಾಮಪಲಾಯಿನಾಂ|

07130010c ಪ್ರಕಾಶಮಭವದ್ರಾತ್ರೌ ಕಥಂ ಕುರುಷು ಸಂಜಯ||

ಸಂಜಯ! ಪಲಾಯನ ಮಾಡದೇ ಇದ್ದ ಪಾರ್ಥರಿಗೆ ಮತ್ತು ಕುರುಗಳಿಗೆ ಆ ರಾತ್ರಿ ಅಲ್ಲಿ ಬೆಳಕು ಹೇಗೆ ಉಂಟಾಯಿತು?”

07130011 ಸಂಜಯ ಉವಾಚ|

07130011a ರಾತ್ರಿಯುದ್ಧೇ ತದಾ ರಾಜನ್ವರ್ತಮಾನೇ ಸುದಾರುಣೇ|

07130011c ದ್ರೋಣಮಭ್ಯದ್ರವನ್ರಾತ್ರೌ ಪಾಂಡವಾಃ ಸಹಸೈನಿಕಾಃ||

ಸಂಜಯನು ಹೇಳಿದನು: “ರಾಜನ್! ಆ ಸುದಾರುಣ ರಾತ್ರಿಯುದ್ಧವು ನಡೆಯುತ್ತಿರಲು ಸೈನಿಕರೊಂದಿಗೆ ಪಾಂಡವರು ದ್ರೋಣನನ್ನು ಆಕ್ರಮಣಿಸಿದರು.

07130012a ತತೋ ದ್ರೋಣಃ ಕೇಕಯಾಂಶ್ಚ ಧೃಷ್ಟದ್ಯುಮ್ನಸ್ಯ ಚಾತ್ಮಜಾನ್|

07130012c ಪ್ರೇಷಯನ್ಮೃತ್ಯುಲೋಕಾಯ ಸರ್ವಾನಿಷುಭಿರಾಶುಗೈಃ||

ಆಗ ದ್ರೋಣನು ಕೇಕಯರನ್ನೂ, ಧೃಷ್ಟದ್ಯುಮ್ನನ ಎಲ್ಲ ಮಕ್ಕಳನ್ನೂ ಆಶುಗಗಳಿಂದ ಮೃತ್ಯುಲೋಕಕ್ಕೆ ಕಳುಹಿಸಿದನು.

07130013a ತಸ್ಯ ಪ್ರಮುಖತೋ ರಾಜನ್ಯೇಽವರ್ತಂತ ಮಹಾರಥಾಃ|

07130013c ತಾನ್ಸರ್ವಾನ್ಪ್ರೇಷಯಾಮಾಸ ಪರಲೋಕಾಯ ಭಾರತ||

ರಾಜನ್! ಭಾರತ! ಅವನ ಎದುರಾದ ಎಲ್ಲ ಮಹಾರಥರನ್ನೂ ಅವನು ಪರಲೋಕಕ್ಕೆ ಕಳುಹಿಸಿದನು.

07130014a ಪ್ರಮಥ್ನಂತಂ ತದಾ ವೀರಂ ಭಾರದ್ವಾಜಂ ಮಹಾರಥಂ|

07130014c ಅಭ್ಯವರ್ತತ ಸಂಕ್ರುದ್ಧಃ ಶಿಬೀ ರಾಜನ್ಪ್ರತಾಪವಾನ್||

ರಾಜನ್! ಆಗ ಸಂಕ್ರುದ್ಧ ಪ್ರತಾಪವಾನ ಶಿಬಿಯು ವೀರ ಮಹಾರಥ ಭಾರದ್ವಾಜನ ಮೇಲೆ ದಾಳಿ ಮಾಡಿದನು.

07130015a ತಮಾಪತಂತಂ ಸಂಪ್ರೇಕ್ಷ್ಯ ಪಾಂಡವಾನಾಂ ಮಹಾರಥಂ|

07130015c ವಿವ್ಯಾಧ ದಶಭಿರ್ದ್ರೋಣಃ ಸರ್ವಪಾರಶವೈಃ ಶರೈಃ||

ಪಾಂಡವರ ಮಹಾರಥನು ತನ್ನ ಮೇಲೆ ಆಕ್ರಮಣ ಮಾಡುತ್ತಿರುವನ್ನು ನೋಡಿ ದ್ರೋಣನು ಹತ್ತು ಲೋಹಮಯ ಬಾಣಗಳಿಂದ ಅವನನ್ನು ಹೊಡೆದನು.

07130016a ತಂ ಶಿಬಿಃ ಪ್ರತಿವಿವ್ಯಾಧ ತ್ರಿಂಶತಾ ನಿಶಿತೈಃ ಶರೈಃ|

07130016c ಸಾರಥಿಂ ಚಾಸ್ಯ ಭಲ್ಲೇನ ಸ್ಮಯಮಾನೋ ನ್ಯಪಾತಯತ್||

ಆಗ ಶಿಬಿಯು ನಸುನಗುತ್ತಾ ಮೂವತ್ತು ನಿಶಿತ ಶರಗಳಿಂದ ಅವನನ್ನು ಹೊಡೆದು, ಭಲ್ಲದಿಂದ ಸಾರಥಿಯನ್ನು ರಥದಿಂದ ಉರುಳಿಸಿದನು.

07130017a ತಸ್ಯ ದ್ರೋಣೋ ಹಯಾನ್ ಹತ್ವಾ ಸಾರಥಿಂ ಚ ಮಹಾತ್ಮನಃ|

07130017c ಅಥಾಸ್ಯ ಸಶಿರಸ್ತ್ರಾಣಂ ಶಿರಃ ಕಾಯಾದಪಾಹರತ್||

ಮಹಾತ್ಮ ದ್ರೋಣನು ಅವನ ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿ ಕಿರೀಟದೊಂದಿಗಿನ ಅವನ ಶಿರವನ್ನು ಕಾಯದಿಂದ ಬೇರ್ಪಡಿಸಿದನು.

07130018a ಕಲಿಂಗಾನಾಂ ಚ ಸೈನ್ಯೇನ ಕಲಿಂಗಸ್ಯ ಸುತೋ ರಣೇ|

07130018c ಪೂರ್ವಂ ಪಿತೃವಧಾತ್ಕ್ರುದ್ಧೋ ಭೀಮಸೇನಮುಪಾದ್ರವತ್||

ಹಿಂದೆ ತಂದೆಯನ್ನು ಸಂಹರಿಸಿದುದರಿಂದ ಭೀಮಸೇನನ ಮೇಲೆ ಕ್ರುದ್ಧನಾದ ಕಲಿಂಗನ ಮಗನು ಕಲಿಂಗರ ಸೇನೆಯೊಂದಿಗೆ ರಣದಲ್ಲಿ ಭೀಮಸೇನನನ್ನು ಆಕ್ರಮಣಿಸಿದನು.

07130019a ಸ ಭೀಮಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ|

07130019c ವಿಶೋಕಂ ತ್ರಿಭಿರಾಜಘ್ನೇ ಧ್ವಜಮೇಕೇನ ಪತ್ರಿಣಾ||

ಅವನು ಭೀಮನನ್ನು ಮೊದಲು ಐದರಿಂದ ಮತ್ತು ಪುನಃ ಏಳರಿಂದ ಹೊಡೆದು ಸಾರಥಿ ವಿಶೋಕನನ್ನು ಮೂರರಿಂದಲೂ ಒಂದು ಪತ್ರಿಯಿಂದ ಧ್ವಜವನ್ನೂ ಹೊಡೆದನು.

07130020a ಕಲಿಂಗಾನಾಂ ತು ತಂ ಶೂರಂ ಕ್ರುದ್ಧಂ ಕ್ರುದ್ಧೋ ವೃಕೋದರಃ|

07130020c ರಥಾದ್ರಥಮಭಿದ್ರುತ್ಯ ಮುಷ್ಟಿನಾಭಿಜಘಾನ ಹ||

ಕಲಿಂಗರ ಆ ಕ್ರುದ್ಧ ಶೂರನನ್ನು ಕ್ರುದ್ಧ ವೃಕೋದರನು ಅವನ ರಥಕ್ಕೆ ಹಾರಿ ಮುಷ್ಟಿಯಿಂದಲೇ ಗುದ್ದಿ ಸಂಹರಿಸಿದನು.

07130021a ತಸ್ಯ ಮುಷ್ಟಿಹತಸ್ಯಾಜೌ ಪಾಂಡವೇನ ಬಲೀಯಸಾ|

07130021c ಸರ್ವಾಣ್ಯಸ್ಥೀನಿ ಸಹಸಾ ಪ್ರಾಪತನ್ವೈ ಪೃಥಕ್ ಪೃಥಕ್||

ಬಲಿಷ್ಟ ಭೀಮಸೇನನ ಮುಷ್ಟಿಯಿಂದ ಹತನಾದ ಅವನ ಎಲ್ಲ ಮೂಳೆಗಳೂ ಚೂರಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಕೆಳಗೆ ಬಿದ್ದವು.

07130022a ತಂ ಕರ್ಣೋ ಭ್ರಾತರಶ್ಚಾಸ್ಯ ನಾಮೃಷ್ಯಂತ ಮಹಾರಥಾಃ|

07130022c ತೇ ಭೀಮಸೇನಂ ನಾರಾಚೈರ್ಜಘ್ನುರಾಶೀವಿಷೋಪಮೈಃ||

ಆ ಕೃತ್ಯವನ್ನು ಮಹಾರಥ ಕರ್ಣನೂ ಕಳಿಂಗನ ಸಹೋದರರೂ ಸಹಿಸಿಕೊಳ್ಳಲಿಲ್ಲ. ಅವರು ಭೀಮಸೇನನನ್ನು ಸರ್ಪಗಳಂತಿದ್ದ ನಾರಾಚಗಳಿಂದ ಪ್ರಹರಿಸಿದರು.

07130023a ತತಃ ಶತ್ರುರಥಂ ತ್ಯಕ್ತ್ವಾ ಭೀಮೋ ಧ್ರುವರಥಂ ಗತಃ|

07130023c ಧ್ರುವಂ ಚಾಸ್ಯಂತಮನಿಶಂ ಮುಷ್ಟಿನಾ ಸಮಪೋಥಯತ್|

07130023e ಸ ತಥಾ ಪಾಂಡುಪುತ್ರೇಣ ಬಲಿನಾ ನಿಹತೋಽಪತತ್||

ಆಗ ಭೀಮನು ಶತ್ರುವಿನ ರಥವನ್ನು ಬಿಟ್ಟು ಧ್ರುವನ ರಥಕ್ಕೆ ಹಾರಿ ಒಂದೇ ಸಮನೆ ಬಾಣಗಳನ್ನು ಬಿಡುತ್ತಿದ್ದ ಧ್ರುವನನ್ನು ಕೂಡ ಮುಷ್ಟಿಯಿಂದ ಜಜ್ಜಿದನು. ಬಲಶಾಲಿ ಪಾಂಡುಪುತ್ರನ ಪೆಟ್ಟಿಗೆ ಸಿಲುಕಿದ ಅವನು ಕೂಡ ಹತನಾದನು.

07130024a ತಂ ನಿಹತ್ಯ ಮಹಾರಾಜ ಭೀಮಸೇನೋ ಮಹಾಬಲಃ|

07130024c ಜಯರಾತರಥಂ ಪ್ರಾಪ್ಯ ಮುಹುಃ ಸಿಂಹ ಇವಾನದತ್||

ಮಹಾರಾಜ! ಅವನನ್ನು ಸಂಹರಿಸಿ ಮಹಾಬಲ ಭೀಮಸೇನನು ಜಯರಾತನ ರಥಕ್ಕೆ ಹಾರಿ ಸಿಂಹನಾದಗೈದನು.

07130025a ಜಯರಾತಮಥಾಕ್ಷಿಪ್ಯ ನದನ್ಸವ್ಯೇನ ಪಾಣಿನಾ|

07130025c ತಲೇನ ನಾಶಯಾಮಾಸ ಕರ್ಣಸ್ಯೈವಾಗ್ರತಃ ಸ್ಥಿತಂ||

ಆಗ ಜಯರಾತನ ತಲೆಯನ್ನು ಎಡಗೈಯಿಂದ ಹಿಡಿದುಕೊಂಡು ಬಲಗೈಯಿಂದ ಅವನನ್ನು ಪ್ರಹರಿಸಿ ಕೊಂದು ಕರ್ಣನ ಎದುರೇ ಹೋಗಿ ನಿಂತುಕೊಂಡನು.

07130026a ಕರ್ಣಸ್ತು ಪಾಂಡವೇ ಶಕ್ತಿಂ ಕಾಂಚನೀಂ ಸಮವಾಸೃಜತ್|

07130026c ತತಸ್ತಾಮೇವ ಜಗ್ರಾಹ ಪ್ರಹಸನ್ಪಾಂಡುನಂದನಃ||

ಕರ್ಣನಾದರೋ ಸುವರ್ಣಮಯ ಶಕ್ತ್ಯಾಯುಧವನ್ನು ಪಾಂಡವನ ಮೇಲೆ ಪ್ರಯೋಗಿಸಿದನು. ಅದನ್ನು ಕೂಡ ಪಾಂಡುನಂದನನು ನಸುನಗುತ್ತಾ ಹಿಡಿದುಕೊಂಡನು.

07130027a ಕರ್ಣಾಯೈವ ಚ ದುರ್ಧರ್ಷಶ್ಚಿಕ್ಷೇಪಾಜೌ ವೃಕೋದರಃ|

07130027c ತಾಮಂತರಿಕ್ಷೇ ಚಿಚ್ಚೇದ ಶಕುನಿಸ್ತೈಲಪಾಯಿನಾ||

ಅದನ್ನೇ ದುರ್ಧರ್ಷ ವೃಕೋದರನು ಕರ್ಣನ ಮೇಲೆ ಎಸೆಯಲು ಪಲಾಯನಮಾಡದಿರುವ ಶಕುನಿಯು ಅದನ್ನು ಅಂತರಿಕ್ಷದಲ್ಲಿಯೇ ತುಂಡರಿಸಿದನು.

07130028a ತತಸ್ತವ ಸುತಾ ರಾಜನ್ಭೀಮಸ್ಯ ರಥಮಾವ್ರಜನ್|

07130028c ಮಹತಾ ಶರವರ್ಷೇಣ ಚಾದಯಂತೋ ವೃಕೋದರಂ||

ರಾಜನ್! ಆಗ ನಿನ್ನ ಮಕ್ಕಳು ಭೀಮನ ರಥವನ್ನು ಸುತ್ತುವರೆದು ಮಹಾ ಶರವರ್ಷಗಳಿಂದ ವೃಕೋದರನನ್ನು ಮುಚ್ಚಿದರು.

07130029a ದುರ್ಮದಸ್ಯ ತತೋ ಭೀಮಃ ಪ್ರಹಸನ್ನಿವ ಸಮ್ಯುಗೇ|

07130029c ಸಾರಥಿಂ ಚ ಹಯಾಂಶ್ಚೈವ ಶರೈರ್ನಿನ್ಯೇ ಯಮಕ್ಷಯಂ||

ಆಗ ರಣದಲ್ಲಿ ಭೀಮನು ನಗುತ್ತಾ ದುರ್ಮದನ ಸಾರಥಿಯನ್ನೂ ಕುದುರೆಗಳನ್ನೂ ಬಾಣಗಳಿಂದ ಹೊಡೆದು ಯಮಸದನಕ್ಕೆ ಕಳುಹಿಸಿದನು.

07130029e ದುರ್ಮದಸ್ತು ತತೋ ಯಾನಂ ದುಷ್ಕರ್ಣಸ್ಯಾವಪುಪ್ಲುವೇ||

07130030a ತಾವೇಕರಥಮಾರೂಢೌ ಭ್ರಾತರೌ ಪರತಾಪನೌ|

07130030c ಸಂಗ್ರಾಮಶಿರಸೋ ಮಧ್ಯೇ ಭೀಮಂ ದ್ವಾವಭ್ಯಧಾವತಾಂ|

07130030e ಯಥಾಂಬುಪತಿಮಿತ್ರೌ ಹಿ ತಾರಕಂ ದೈತ್ಯಸತ್ತಮಂ||

ಆಗ ದುರ್ಮದನಾದರೋ ಹಾರಿ ದುಷ್ಕರ್ಣನ ರಥವನ್ನೇರಿದನು. ಆ ಇಬ್ಬರು ಪರತಾಪನ ಸಹೋದರರೂ ಒಂದೇ ರಥವನ್ನೇರಿ ಯುದ್ಧಭೂಮಿಯ ಮಧ್ಯದಲ್ಲಿ ಮಿತ್ರಾವರುಣರು ದೈತ್ಯಸತ್ತಮ ತಾರಕನನ್ನು ಎದುರಿಸಿ ಯುದ್ಧಮಾಡಿದಂತೆ ಭೀಮನನ್ನು ಆಕ್ರಮಣಿಸಿದರು.

07130031a ತತಸ್ತು ದುರ್ಮದಶ್ಚೈವ ದುಷ್ಕರ್ಣಶ್ಚ ತವಾತ್ಮಜೌ|

07130031c ರಥಮೇಕಂ ಸಮಾರುಹ್ಯ ಭೀಮಂ ಬಾಣೈರವಿಧ್ಯತಾಂ||

ನಿನ್ನ ಮಕ್ಕಳಾದ ದುರ್ಮದ-ದುಷ್ಕರ್ಣರು ಒಂದೇ ರಥವನ್ನೇರಿ ಬಾಣಗಳಿಂದ ಭೀಮನನ್ನು ಪ್ರಹರಿಸಿದರು.

07130032a ತತಃ ಕರ್ಣಸ್ಯ ಮಿಷತೋ ದ್ರೌಣೇರ್ದುರ್ಯೋಧನಸ್ಯ ಚ|

07130032c ಕೃಪಸ್ಯ ಸೋಮದತ್ತಸ್ಯ ಬಾಹ್ಲೀಕಸ್ಯ ಚ ಪಾಂಡವಃ||

07130033a ದುರ್ಮದಸ್ಯ ಚ ವೀರಸ್ಯ ದುಷ್ಕರ್ಣಸ್ಯ ಚ ತಂ ರಥಂ|

07130033c ಪಾದಪ್ರಹಾರೇಣ ಧರಾಂ ಪ್ರಾವೇಶಯದರಿಂದಮಃ||

ಆಗ ಕರ್ಣ, ದುರ್ಯೋಧನ, ಕೃಪ, ಸೋಮದತ್ತ ಮತ್ತು ಬಾಹ್ಲೀಕರು ನೋಡುತ್ತಿದ್ದಂತೆಯೇ ಅರಿಂದಮ ಪಾಂಡವನು ವೀರ ದುರ್ಮದ-ದುಷ್ಕರ್ಣರ ಆ ರಥವನ್ನು ಕಾಲಿನಿಂದಲೇ ಒದೆದು ಭೂಮಿಗುರುಳಿಸಿದನು.

07130034a ತತಃ ಸುತೌ ತೇ ಬಲಿನೌ ಶೂರೌ ದುಷ್ಕರ್ಣದುರ್ಮದೌ|

07130034c ಮುಷ್ಟಿನಾಹತ್ಯ ಸಂಕ್ರುದ್ಧೋ ಮಮರ್ದ ಚರಣೇನ ಚ||

ಸಂಕ್ರುದ್ಧನಾದ ಅವನು ನಿನ್ನ ಮಕ್ಕಳಾದ ಆ ಬಲಶಾಲೀ ದುಷ್ಕರ್ಣ-ದುರ್ಮದರನ್ನು ಮುಷ್ಟಿಯಿಂದ ಹೊಡೆದು ಕಾಲಿನಿಂದ ತುಳಿದು ಸಂಹರಿಸಿದನು.

07130035a ತತೋ ಹಾಹಾಕೃತೇ ಸೈನ್ಯೇ ದೃಷ್ಟ್ವಾ ಭೀಮಂ ನೃಪಾಬ್ರುವನ್|

07130035c ರುದ್ರೋಽಯಂ ಭೀಮರೂಪೇಣ ಧಾರ್ತರಾಷ್ಟ್ರೇಷು ಗೃಧ್ಯತಿ||

ಆಗ ಭೀಮನನ್ನು ಕಂಡು ಸೈನ್ಯದಲ್ಲಿದ್ದ ನೃಪರು “ಭೀಮರೂಪದ ರುದ್ರನೇ ಧಾರ್ತರಾಷ್ಟ್ರರನ್ನು ಸಂಹರಿಸುತ್ತಿದ್ದಾನೆ!” ಎಂದು ಹೇಳಿಕೊಳ್ಳುತ್ತಾ ಹಾಹಾಕಾರಗೈದರು.

07130036a ಏವಮುಕ್ತ್ವಾಪಲಾಯಂತ ಸರ್ವೇ ಭಾರತ ಪಾರ್ಥಿವಾಃ|

07130036c ವಿಸಂಜ್ಞಾವಾಹಯನ್ವಾಹಾನ್ನ ಚ ದ್ವೌ ಸಹ ಧಾವತಃ||

ಭಾರತ! ಹೀಗೆ ಮಾತನಾಡಿಕೊಳ್ಳುತ್ತ ಎಲ್ಲರೂ ಬುದ್ಧಿಗೆಟ್ಟವರಾಗಿ ಕಂಡ ಕಂಡ ಕಡೆಗೆ ತಮ್ಮ ವಾಹನಗಳನ್ನು ಓಡಿಸಿಕೊಂಡು ಪಲಾಯನಮಾಡಿದರು.

07130037a ತತೋ ಬಲೇ ಭೃಶಲುಲಿತೇ ನಿಶಾಮುಖೇ

         ಸುಪೂಜಿತೋ ನೃಪವೃಷಭೈರ್ವೃಕೋದರಃ|

07130037c ಮಹಾಬಲಃ ಕಮಲವಿಬುದ್ಧಲೋಚನೋ

         ಯುಧಿಷ್ಠಿರಂ ನೃಪತಿಮಪೂಜಯದ್ಬಲೀ||

ಆಗ ರಾತ್ರಿಯ ಪ್ರಥಮ ಯಾಮದಲ್ಲಿ ನೃಪರು ವೃಕೋದರನನ್ನು ಗೌರವಿಸಿದರು. ಮಹಾಬಲ, ಕಮಲಲೋಚನ ಬಲಶಾಲೀ ಭೀಮನೂ ಕೂಡ ನೃಪತಿ ಯುಧಿಷ್ಠಿರನನ್ನು ಪೂಜಿಸಿದನು.

07130038a ತತೋ ಯಮೌ ದ್ರುಪದವಿರಾಟಕೇಕಯಾ

         ಯುಧಿಷ್ಠಿರಶ್ಚಾಪಿ ಪರಾಂ ಮುದಂ ಯಯುಃ|

07130038c ವೃಕೋದರಂ ಭೃಶಮಭಿಪೂಜಯಂಶ್ಚ ತೇ

         ಯಥಾಂಧಕೇ ಪ್ರತಿನಿಹತೇ ಹರಂ ಸುರಾಃ||

ಆಗ ಯಮಳರೂ, ದ್ರುಪದ-ವಿರಾಟ-ಕೇಕಯರೂ ಮತ್ತು ಯುಧಿಷ್ಠಿರನೂ ಪರಮ ಸಂತೋಷಗೊಂಡರು. ಅಂಧಕನನ್ನು ಸಂಹರಿಸಿದ ಹರನನ್ನು ಸುರರು ಹೇಗೋ ಹಾಗೆ ಅವರು ವೃಕೋದರನನ್ನು ತುಂಬಾ ಗೌರವಿಸಿದರು.

07130039a ತತಃ ಸುತಾಸ್ತವ ವರುಣಾತ್ಮಜೋಪಮಾ

         ರುಷಾನ್ವಿತಾಃ ಸಹ ಗುರುಣಾ ಮಹಾತ್ಮನಾ|

07130039c ವೃಕೋದರಂ ಸರಥಪದಾತಿಕುಂಜರಾ

         ಯುಯುತ್ಸವೋ ಭೃಶಮಭಿಪರ್ಯವಾರಯನ್||

ಆಗ ವರುಣನ ಮಕ್ಕಳ ಪರಾಕ್ರಮವುಳ್ಳ ನಿನ್ನ ಮಕ್ಕಳು ರೋಷಾನ್ವಿತರಾಗಿ ಮಹಾತ್ಮ ಗುರು ದ್ರೋಣನೊಂದಿಗೆ ರಥ-ಪದಾತಿ-ಕುಂಜರಗಳೊಂದಿಗೆ ಯುದ್ಧವನ್ನು ಮಾಡಲು ಬಯಸಿ ವೃಕೋದರನನ್ನು ಸುತ್ತುವರೆದರು.

07130040a ತತೋಽಭವತ್ತಿಮಿರಘನೈರಿವಾವೃತಂ

         ಮಹಾಭಯೇ ಭಯದಮತೀವ ದಾರುಣಂ|

07130040c ನಿಶಾಮುಖೇ ಬಡವೃಕಗೃಧ್ರಮೋದನಂ

         ಮಹಾತ್ಮನಾಂ ನೃಪವರಯುದ್ಧಮದ್ಭುತಂ||

ಆಗ ದಟ್ಟ ಕತ್ತಲೆಯಿಂದ ಆವೃತ ರಾತ್ರಿವೇಳೆಯಲ್ಲಿ ಮಹಾಭಯಂಕರ, ಭಯದಾಯಕ, ದಾರುಣ, ತೋಳ-ಕಾಗೆ-ರಣಹದ್ದುಗಳಿಗೆ ಆನಂದದಾಯಕ ಅದ್ಭುತ ಮಹಾತ್ಮ ನೃಪವರರ ಯುದ್ಧವು ಪುನಃ ಪ್ರಾರಂಭವಾಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಭೀಮಪರಾಕ್ರಮೇ ತ್ರಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಭೀಮಪರಾಕ್ರಮ ಎನ್ನುವ ನೂರಾಮೂವತ್ತನೇ ಅಧ್ಯಾಯವು.

Related image

Comments are closed.