Drona Parva: Chapter 129

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೨೯

ಹದಿನಾಲ್ಕನೆಯ ರಾತ್ರಿಯುದ್ಧದ ವರ್ಣನೆ

ದ್ರೋಣನು ಹೇಗೆ ಮೃತ್ಯುವಶನಾದನು ಎಂಬ ಧೃತರಾಷ್ಟ್ರನ ಪ್ರಶ್ನೆಗೆ ಸಂಜಯನು ಹದಿನಾಲ್ಕನೆಯ ರಾತ್ರಿಯುದ್ಧವನ್ನು ವರ್ಣಿಸುವುದು (೧-೩೫).

07129001 ಧೃತರಾಷ್ಟ್ರ ಉವಾಚ|

07129001a ಯತ್ತದಾ ಪ್ರಾವಿಶತ್ಪಾಂಡೂನಾಮಾಚಾರ್ಯಃ ಕುಪಿತೋ ವಶೀ|

07129001c ಉಕ್ತ್ವಾ ದುರ್ಯೋಧನಂ ಸಮ್ಯಂ ಮಮ ಶಾಸ್ತ್ರಾತಿಗಂ ಸುತಂ||

07129002a ಪ್ರವಿಶ್ಯ ವಿಚರಂತಂ ಚ ರಣೇ ಶೂರಮವಸ್ಥಿತಂ|

07129002c ಕಥಂ ದ್ರೋಣಂ ಮಹೇಷ್ವಾಸಂ ಪಾಂಡವಾಃ ಪರ್ಯವಾರಯನ್||

ಧೃತರಾಷ್ಟ್ರನು ಹೇಳಿದನು: “ಶಾಸ್ತ್ರವನ್ನು ಮೀರಿ ನಡೆಯುವ ನನ್ನ ಮಗ ದುರ್ಯೋಧನನಿಗೆ ಸಾರಿ ಹೇಳಿ ಕೋಪಾವೇಶಗೊಂಡು ಪಾಂಡವರ ಸೈನ್ಯವನ್ನು ಪ್ರವೇಶಿಸಿ ರಣದಲ್ಲಿ ಸುತ್ತಲೂ ಸಂಚರಿಸುತ್ತಿದ್ದ ಶೂರ ಮಹೇಷ್ವಾಸ ಆಚಾರ್ಯ ದ್ರೋಣನನ್ನು ಪಾಂಡವರು ಹೇಗೆ ಮುತ್ತಿಗೆ ಹಾಕಿದರು?

07129003a ಕೇಽರಕ್ಷನ್ದಕ್ಷಿಣಂ ಚಕ್ರಮಾಚಾರ್ಯಸ್ಯ ಮಹಾತ್ಮನಃ|

07129003c ಕೇ ಚೋತ್ತರಮರಕ್ಷಂತ ನಿಘ್ನತಃ ಶಾತ್ರವಾನ್ರಣೇ||

ಮಹಾತ್ಮ ಆಚಾರ್ಯನ ಬಲ ಚಕ್ರವನ್ನು ಯಾರು ರಕ್ಷಿಸಿದರು? ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಎಡಚಕ್ರವನ್ನು ಯಾರು ರಕ್ಷಿಸುತ್ತಿದ್ದರು?

07129004a ನೃತ್ಯನ್ಸ ರಥಮಾರ್ಗೇಷು ಸರ್ವಶಸ್ತ್ರಭೃತಾಂ ವರಃ|

07129004c ಧೂಮಕೇತುರಿವ ಕ್ರುದ್ಧಃ ಕಥಂ ಮೃತ್ಯುಮುಪೇಯಿವಾನ್||

ರಥಮಾರ್ಗಗಳಲ್ಲಿ ನರ್ತಿಸುತ್ತಾ ಸಂಚರಿಸುತ್ತಿರುವ, ಧೂಮಕೇತುವಿನಂತೆ ಕ್ರುದ್ಧನಾಗಿದ್ದ, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ಹೇಗೆ ಮೃತ್ಯುವಶನಾದನು?”

07129005 ಸಂಜಯ ಉವಾಚ|

07129005a ಸಾಯಾಹ್ನೇ ಸೈಂಧವಂ ಹತ್ವಾ ರಾಜ್ಞಾ ಪಾರ್ಥಃ ಸಮೇತ್ಯ ಚ|

07129005c ಸಾತ್ಯಕಿಶ್ಚ ಮಹೇಷ್ವಾಸೋ ದ್ರೋಣಮೇವಾಭ್ಯಧಾವತಾಂ||

ಸಂಜಯನು ಹೇಳಿದನು: “ಸಾಯಂಕಾಲ ಸೈಂಧವನನ್ನು ಸಂಹರಿಸಿ, ರಾಜಾ ಯುಧಿಷ್ಠಿರನೊಡನೆ ಸಮಾಲೋಚನೆಗೈದು ಪಾರ್ಥ ಅರ್ಜುನ ಮತ್ತು ಮಹೇಷ್ವಾಸ ಸಾತ್ಯಕಿಯರು ದ್ರೋಣನನ್ನು ಆಕ್ರಮಿಸಿದರು.

07129006a ತಥಾ ಯುಧಿಷ್ಠಿರಸ್ತೂರ್ಣಂ ಭೀಮಸೇನಶ್ಚ ಪಾಂಡವಃ|

07129006c ಪೃಥಕ್ಚಮೂಭ್ಯಾಂ ಸಂಸಕ್ತೌ ದ್ರೋಣಮೇವಾಭ್ಯಧಾವತಾಂ||

ಹಾಗೆಯೇ ತಡಮಾಡದೇ ಯುಧಿಷ್ಠಿರ ಮತ್ತು ಪಾಂಡವ ಭೀಮಸೇನರು ತಮ್ಮ ತಮ್ಮ ಸೇನೆಗಳಿಂದೊಡಗೂಡಿ ದ್ರೋಣನನ್ನೇ ಆಕ್ರಮಿಸಿದರು.

07129007a ತಥೈವ ನಕುಲೋ ಧೀಮಾನ್ಸಹದೇವಶ್ಚ ದುರ್ಜಯಃ|

07129007c ಧೃಷ್ಟದ್ಯುಮ್ನಃ ಶತಾನೀಕೋ ವಿರಾಟಶ್ಚ ಸಕೇಕಯಃ|

07129007e ಮತ್ಸ್ಯಾಃ ಶಾಲ್ವೇಯಸೇನಾಶ್ಚ ದ್ರೋಣಮೇವ ಯಯುರ್ಯುಧಿ||

ಹಾಗೆಯೇ ಧೀಮಂತ ನಕುಲ, ದುರ್ಜಯ ಸಹದೇವರು ಧೃಷ್ಟದ್ಯುಮ್ನ, ಶತಾನೀಕ, ವಿರಾಟರು, ಕೇಕಯ, ಮತ್ಸ್ಯ ಮತ್ತು ಶಾಲ್ವೇಯಸೇನೆಗಳೊಂದಿಗೆ ದ್ರೋಣನನ್ನೇ ಯುದ್ಧದಲ್ಲಿ ಎದುರಿಸಿದರು.

07129008a ದ್ರುಪದಶ್ಚ ತಥಾ ರಾಜಾ ಪಾಂಚಾಲೈರಭಿರಕ್ಷಿತಃ|

07129008c ಧೃಷ್ಟದ್ಯುಮ್ನಪಿತಾ ರಾಜನ್ದ್ರೋಣಮೇವಾಭ್ಯವರ್ತತ||

ರಾಜನ್! ಹಾಗೆಯೇ ಧೃಷ್ಟದ್ಯುಮ್ನನ ತಂದೆ ರಾಜಾ ದ್ರುಪದನೂ ಕೂಡ ಪಾಂಚಾಲ್ಯರಿಂದ ರಕ್ಷಿತನಾಗಿ ದ್ರೋಣನನ್ನೇ ಆಕ್ರಮಿಸಿದನು.

07129009a ದ್ರೌಪದೇಯಾ ಮಹೇಷ್ವಾಸಾ ರಾಕ್ಷಸಶ್ಚ ಘಟೋತ್ಕಚಃ|

07129009c ಸಸೇನಾಸ್ತೇಽಭ್ಯವರ್ತಂತ ದ್ರೋಣಮೇವ ಮಹಾದ್ಯುತಿಂ||

ಮಹೇಷ್ವಾಸ ದ್ರೌಪದೇಯರೂ ಮತ್ತು ರಾಕ್ಷಸ ಘಟೋತ್ಕಚನೂ ಸ್ವ-ಸೇನೆಗಳೊಂದಿಗೆ ಮಹಾದ್ಯುತಿ ದ್ರೋಣನನ್ನೇ ಆಕ್ರಮಿಸಿದರು.

07129010a ಪ್ರಭದ್ರಕಾಶ್ಚ ಪಾಂಚಾಲಾಃ ಷಟ್ಸಹಸ್ರಾಃ ಪ್ರಹಾರಿಣಃ|

07129010c ದ್ರೋಣಮೇವಾಭ್ಯವರ್ತಂತ ಪುರಸ್ಕೃತ್ಯ ಶಿಖಂಡಿನಂ||

ಶಿಖಂಡಿಯನ್ನು ಮುಂದಿರಿಸಿಕೊಂಡು ಆರುಸಾವಿರ ಪ್ರಭದ್ರಕ ಮತ್ತು ಪಾಂಚಾಲ ಪ್ರಹಾರಿಗಳು ದ್ರೋಣನನ್ನೇ ಮುತ್ತಿದರು.

07129011a ತಥೇತರೇ ನರವ್ಯಾಘ್ರಾಃ ಪಾಂಡವಾನಾಂ ಮಹಾರಥಾಃ|

07129011c ಸಹಿತಾಃ ಸಮ್ನ್ಯವರ್ತಂತ ದ್ರೋಣಮೇವ ದ್ವಿಜರ್ಷಭಂ||

ಹಾಗೆಯೇ ಪಾಂಡವರ ಕಡೆಯ ಇತರ ನರವ್ಯಾಘ್ರ ಮಹಾರಥರೂ ಒಟ್ಟಾಗಿ ದ್ವಿಜರ್ಷಭ ದ್ರೋಣನನ್ನೇ ಸುತ್ತುವರೆದು ಯುದ್ಧಮಾಡಿದರು.

07129012a ತೇಷು ಶೂರೇಷು ಯುದ್ಧಾಯ ಗತೇಷು ಭರತರ್ಷಭ|

07129012c ಬಭೂವ ರಜನೀ ಘೋರಾ ಭೀರೂಣಾಂ ಭಯವರ್ಧಿನೀ||

ಭರತರ್ಷಭ! ಆ ಶೂರರು ಯುದ್ಧಕ್ಕೆ ಹೋಗಲು ರಾತ್ರಿಯು ಹೇಡಿಗಳ ಭಯವನ್ನು ಹೆಚ್ಚಿಸಿ ಘೋರವಾಗಿ ಪರಿಣಮಿಸಿತು.

07129013a ಯೋಧಾನಾಮಶಿವಾ ರೌದ್ರಾ ರಾಜನ್ನಂತಕಗಾಮಿನೀ|

07129013c ಕುಂಜರಾಶ್ವಮನುಷ್ಯಾಣಾಂ ಪ್ರಾಣಾಂತಕರಣೀ ತದಾ||

ರಾಜನ್! ಆ ರೌದ್ರ ಅಮಂಗಳಕರ ರಾತ್ರಿಯು ಯೋಧರನ್ನು ಅಂತಕನಲ್ಲಿಗೆ ಕರೆದೊಯ್ಯುತ್ತಿತ್ತು. ಆನೆ-ಕುದುರೆ-ಮನುಷ್ಯರ ಪ್ರಾಣಗಳನ್ನು ಕೊನೆಗೊಳಿಸುವಂತಿತ್ತು.

07129014a ತಸ್ಯಾಂ ರಜನ್ಯಾಂ ಘೋರಾಯಾಂ ನದಂತ್ಯಃ ಸರ್ವತಃ ಶಿವಾಃ|

07129014c ನ್ಯವೇದಯನ್ಭಯಂ ಘೋರಂ ಸಜ್ವಾಲಕವಲೈರ್ಮುಖೈಃ||

ಆ ಘೋರ ರಾತ್ರಿಯಲ್ಲಿ ಎಲ್ಲಕಡೆ ಜ್ವಾಲೆಗಳಿಂದ ಕೂಡಿದ ಮುಖಗಳಿಂದ ನರಿಗಳು ಘೋರವಾಗಿ ಕೂಗುತ್ತಾ ಮುಂದೆಬರುವ ಮಹಾಭಯವನ್ನು ಸೂಚಿಸುತ್ತಿದ್ದವು.

07129015a ಉಲೂಕಾಶ್ಚಾಪ್ಯದೃಶ್ಯಂತ ಶಂಸಂತೋ ವಿಪುಲಂ ಭಯಂ|

07129015c ವಿಶೇಷತಃ ಕೌರವಾಣಾಂ ಧ್ವಜಿನ್ಯಾಮತಿದಾರುಣಂ||

ಮುಂಬರುವ ವಿಪುಲ ಅತಿದಾರುಣ ಭಯವನ್ನು ಸಾರುವ ಗೂಬೆಗಳು, ವಿಶೇಷವಾಗಿ ಕೌರವರ ಧ್ವಜಗಳ ಮೇಲೆ, ಕಾಣಿಸಿಕೊಂಡವು.

07129016a ತತಃ ಸೈನ್ಯೇಷು ರಾಜೇಂದ್ರ ಶಬ್ದಃ ಸಮಭವನ್ಮಹಾನ್|

07129016c ಭೇರೀಶಬ್ದೇನ ಮಹತಾ ಮೃದಂಗಾನಾಂ ಸ್ವನೇನ ಚ||

ರಾಜೇಂದ್ರ! ಆಗ ಸೇನೆಗಳಲ್ಲಿ ಅತಿಜೋರಾದ ಭೇರಿಶಬ್ಧಗಳಿಂದ ಮತ್ತು ಮೃದಂಗಗಳ ನಾದದಿಂದ ಮಹಾ ಶಬ್ಧವು ಉಂಟಾಯಿತು.

07129017a ಗಜಾನಾಂ ಗರ್ಜಿತೈಶ್ಚಾಪಿ ತುರಂಗಾಣಾಂ ಚ ಹೇಷಿತೈಃ|

07129017c ಖುರಶಬ್ದನಿಪಾತೈಶ್ಚ ತುಮುಲಃ ಸರ್ವತೋಽಭವತ್||

ಎಲ್ಲಕಡೆಗಳಲ್ಲಿ ಆನೆಗಳ ಘೀಂಕಾರ, ಕುದುರೆಗಳ ಹೇಷಾರವ ಮತ್ತು ಖುರಪುಟಗಳ ತುಮುಲ ಶಬ್ಧಗಳು ತುಂಬಿಕೊಂಡವು.

07129018a ತತಃ ಸಮಭವದ್ಯುದ್ಧಂ ಸಂಧ್ಯಾಯಾಮತಿದಾರುಣಂ|

07129018c ದ್ರೋಣಸ್ಯ ಚ ಮಹಾರಾಜ ಸೃಂಜಯಾನಾಂ ಚ ಸರ್ವಶಃ||

ಮಹಾರಾಜ! ಆ ಸಾಯಂಕಾಲ ದ್ರೋಣ ಮತ್ತು ಎಲ್ಲ ಸೃಂಜಯರ ನಡುವೆ ಅತಿದಾರುಣ ಯುದ್ಧವು ನಡೆಯಿತು.

07129019a ತಮಸಾ ಚಾವೃತೇ ಲೋಕೇ ನ ಪ್ರಾಜ್ಞಾಯತ ಕಿಂ ಚನ|

07129019c ಸೈನ್ಯೇನ ರಜಸಾ ಚೈವ ಸಮಂತಾದುತ್ಥಿತೇನ ಹ||

ಕತ್ತಲೆಯು ಲೋಕವನ್ನು ಆವರಿಸಿದುದರಿಂದ ಮತ್ತು ಸೇನೆಗಳ ತುಳಿತದಿಂದ ಮೇಲೆದ್ದ ಧೂಳಿನಿಂದಾಗಿ ಏನಾಗುತ್ತಿದೆಯೆಂದು ತಿಳಿಯುತ್ತಲೇ ಇರಲಿಲ್ಲ.

07129020a ನರಸ್ಯಾಶ್ವಸ್ಯ ನಾಗಸ್ಯ ಸಮಸಜ್ಜತ ಶೋಣಿತಂ|

07129020c ನಾಪಶ್ಯಾಮ ರಜೋ ಭೌಮಂ ಕಶ್ಮಲೇನಾಭಿಸಂವೃತಾಃ||

ಅಷ್ಟರಲ್ಲಿಯೇ ಸೈನಿಕರು-ಕುದುರೆಗಳು-ಆನೆಗಳು ಸುರಿಸಿದ ರಕ್ತದಿಂದಾಗಿ ಭೂಮಿಯನ್ನು ಕಶ್ಮಲಗಳಿಂದ ತುಂಬಿದ್ದ ಧೂಳೇ ಕಾಣದಂತಾಯಿತು.

07129021a ರಾತ್ರೌ ವಂಶವನಸ್ಯೇವ ದಹ್ಯಮಾನಸ್ಯ ಪರ್ವತೇ|

07129021c ಘೋರಶ್ಚಟಚಟಾಶಬ್ದಃ ಶಸ್ತ್ರಾಣಾಂ ಪತತಾಮಭೂತ್||

ರಾತ್ರಿಯ ವೇಳೆ ಪರ್ವತದ ಮೇಲೆ ಬಿದಿರಿನ ಕಾಡು ಸುಡುವಾಗ ಕೇಳಿಬರುವ ಘೋರ ಚಟ ಚಟಾ ಶಬ್ಧದಂತೆ ಶಸ್ತ್ರಗಳು ಬೀಳುವುದರಿಂದ ಕೇಳಿಬರುತ್ತಿತ್ತು.

07129022a ನೈವ ಸ್ವೇ ನ ಪರೇ ರಾಜನ್ಪ್ರಾಜ್ಞಾಯಂತ ತಮೋವೃತೇ|

07129022c ಉನ್ಮತ್ತಮಿವ ತತ್ಸರ್ವಂ ಬಭೂವ ರಜನೀಮುಖೇ||

ರಾಜನ್! ಆ ಕತ್ತಲೆಯಲ್ಲಿ ನಮ್ಮವರ್ಯಾರು ಶತ್ರುಗಳ್ಯಾರು ಎನ್ನುವುದೇ ತಿಳಿಯುತ್ತಿರಲಿಲ್ಲ. ರಾತ್ರಿವೇಳೆಯಲ್ಲಿ ಅವರೆಲ್ಲರೂ ಅಮಲಿನಲ್ಲಿರುವವರಂತೆ ಆಗಿದ್ದರು.

07129023a ಭೌಮಂ ರಜೋಽಥ ರಾಜೇಂದ್ರ ಶೋಣಿತೇನ ಪ್ರಶಾಮಿತಂ|

07129023c ಶಾತಕೌಂಭೈಶ್ಚ ಕವಚೈರ್ಭೂಷಣೈಶ್ಚ ತಮೋಽಭ್ಯಗಾತ್||

ರಾಜೇಂದ್ರ! ಭೂಮಿಯ ಮೇಲೆ ಬೀಳುತ್ತಿರುವ ರಕ್ತದಿಂದಾಗಿ ಧೂಳು ಸ್ವಲ್ಪ ಉಡುಗಿದಂತಾಯಿತು. ಸುವರ್ಣಮಯ ಕವಚ-ಭೂಷಣಗಳ ಹೊಳೆತದಿಂದಾಗಿ ಕತ್ತಲೆಯೂ ದೂರವಾದಂತಾಯಿತು.

07129024a ತತಃ ಸಾ ಭಾರತೀ ಸೇನಾ ಮಣಿಹೇಮವಿಭೂಷಿತಾ|

07129024c ದ್ಯೌರಿವಾಸೀತ್ಸನಕ್ಷತ್ರಾ ರಜನ್ಯಾಂ ಭರತರ್ಷಭ||

ಭರತರ್ಷಭ! ಆಗ ಮಣಿಹೇಮವಿಭೂಷಿತ ಭಾರತೀ ಸೇನೆಯು ನಕ್ಷತ್ರಗಳಿಂದೊಡಗೂಡಿದ ರಾತ್ರಿಯ ಆಕಾಶದಂತೆ ತೋರಿತು.

07129025a ಗೋಮಾಯುಬಡಸಂಘುಷ್ಟಾ ಶಕ್ತಿಧ್ವಜಸಮಾಕುಲಾ|

07129025c ದಾರುಣಾಭಿರುತಾ ಘೋರಾ ಕ್ಷ್ವೇಡಿತೋತ್ಕ್ರುಷ್ಟನಾದಿತಾ||

ಶಕ್ತಿ-ಧ್ವಜಗಳಿಂದ ತುಂಬಿದ್ದ ಆ ಸೇನೆಗಳ ಪಕ್ಕದಲ್ಲಿಯೇ ಗುಳ್ಳೆನರಿಗಳ ಸಮೂಹಗಳು ಭಯಂಕರವಾಗಿ ಕಿರುಚಿಕೊಳ್ಳುತ್ತಿದ್ದವು.

07129026a ತತೋಽಭವನ್ಮಹಾಶಬ್ದಸ್ತುಮುಲೋ ಲೋಮಹರ್ಷಣ|

07129026c ಸಮಾವೃಣ್ವನ್ದಿಶಃ ಸರ್ವಾ ಮಹೇಂದ್ರಾಶನಿನಿಸ್ವನಃ||

ಆಗ ಅಲ್ಲಿ ಮಹೇಂದ್ರನ ಸಿಡಿಲಿಗೆ ಸಮಾನ ರೋಮಾಂಚನಗೊಳಿಸುವ ಮಹಾ ಶಬ್ಧವು ಎಲ್ಲ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಿತು.

07129027a ಸಾ ನಿಶೀಥೇ ಮಹಾರಾಜ ಸೇನಾದೃಶ್ಯತ ಭಾರತೀ|

07129027c ಅಂಗದೈಃ ಕುಂಡಲೈರ್ನಿಷ್ಕೈಃ ಶಸ್ತ್ರೈಶ್ಚೈವಾವಭಾಸಿತಾ||

ಮಹಾರಾಜ! ಆ ರಾತ್ರಿ ಭಾರತೀ ಸೇನೆಯು ಅಂಗದಗಳಿಂದ, ಕುಂಡಲಗಳಿಂದ ಮತ್ತು ಥಳಥಳಿಸುವ ಶಸ್ತ್ರಗಳಿಂದ ಪ್ರಕಾಶಮಾನವಾಗಿ ಕಾಣುತ್ತಿತ್ತು.

07129028a ತತ್ರ ನಾಗಾ ರಥಾಶ್ಚೈವ ಜಾಂಬೂನದವಿಭೂಷಿತಾಃ|

07129028c ನಿಶಾಯಾಂ ಪ್ರತ್ಯದೃಶ್ಯಂತ ಮೇಘಾ ಇವ ಸವಿದ್ಯುತಃ||

ಅಲ್ಲಿ ಬಂಗಾರದಿಂದ ವಿಭೂಷಿತಗೊಂಡಿದ್ದ ರಥ ಮತ್ತು ಆನೆಗಳು ರಾತ್ರಿಯವೇಳೆ ಮಿಂಚಿನಿಂದೊಡಗೂಡಿದ ಕಪ್ಪು ಮೋಡಗಳಂತೆ ಕಾಣಬರುತ್ತಿದ್ದವು.

07129029a ಋಷ್ಟಿಶಕ್ತಿಗದಾಬಾಣಮುಸಲಪ್ರಾಸಪಟ್ಟಿಶಾಃ|

07129029c ಸಂಪತಂತೋ ವ್ಯದೃಶ್ಯಂತ ಭ್ರಾಜಮಾನಾ ಇವಾಗ್ನಯಃ||

ಅಲ್ಲಿ ಮೇಲಿಂದ ಬೀಳುತ್ತಿದ್ದ ಋಷ್ಟಿ, ಶಕ್ತಿ, ಗದೆ, ಬಾಣ, ಮುಸಲ, ಪ್ರಾಸ ಮತ್ತು ಪಟ್ಟಿಶಗಳು ಉರಿಯುತ್ತಿರುವ ಅಗ್ನಿಗಳಂತೆ ಹೊಳೆಯುತ್ತಿದ್ದವು.

07129030a ದುರ್ಯೋಧನಪುರೋವಾತಾಂ ರಥನಾಗಬಲಾಹಕಾಂ|

07129030c ವಾದಿತ್ರಘೋಷಸ್ತನಿತಾಂ ಚಾಪವಿದ್ಯುದ್ಧ್ವಜೈರ್ವೃತಾಂ||

07129031a ದ್ರೋಣಪಾಂಡವಪರ್ಜನ್ಯಾಂ ಖಡ್ಗಶಕ್ತಿಗದಾಶನಿಂ|

07129031c ಶರಧಾರಾಸ್ತ್ರಪವನಾಂ ಭೃಶಂ ಶೀತೋಷ್ಣಸಂಕುಲಾಂ||

07129032a ಘೋರಾಂ ವಿಸ್ಮಾಪನೀಮುಗ್ರಾಂ ಜೀವಿತಚ್ಚಿದಮಪ್ಲವಾಂ|

07129032c ತಾಂ ಪ್ರಾವಿಶನ್ನತಿಭಯಾಂ ಸೇನಾಂ ಯುದ್ಧಚಿಕೀರ್ಷವಃ||

ದುರ್ಯೋಧನನೇ ಮುಂಗಾಳಿಯಾಗಿದ್ದ, ಆನೆ-ರಥಗಳೇ ಮೋಡಗಳಾಗಿದ್ದ, ರಣವಾದ್ಯಗಳೇ ಗುಡುಗಿನಂತಿದ್ದ, ಧನುಸ್ಸು-ಧ್ವಜಗಳೇ ಮಿಂಚುಗಳಂತಿದ್ದ, ದ್ರೋಣ-ಪಾಂಡವರೇ ಪರ್ಜನ್ಯಗಳಂತಿದ್ದ, ಖಡ್ಗ-ಶಕ್ತಿ-ಗದೆಗಳೇ ಸಿಡುಲಿನಂತಿದ್ದ, ಬಾಣಗಳೇ ಜಲಧಾರೆಗಳಾಗಿದ್ದ, ಅಸ್ತ್ರಗಳೇ ಭಿರುಗಾಳಿಯಂತಿದ್ದ, ಶೀತೋಷ್ಣಸಂಕುಲವಾಗಿದ್ದ, ಘೋರವಾಗಿದ್ದ, ವಿಸ್ಮಯಕಾರಿಯಾಗಿದ್ದ, ಉಗ್ರವಾಗಿದ್ದ, ಜೀವಿತವನ್ನೇ ಅಂತ್ಯಗೊಳಿಸುವಂತಿದ್ದ, ದಾಟಲು ದೋಣಿಗಳೇ ಇಲ್ಲವಾಗಿದ್ದ ಆ ಅತಿ ಭಯಂಕರ ಸೇನೆಯನ್ನು ಯುದ್ಧಮಾಡಲು ಬಯಸಿದವರು ಪ್ರವೇಶಿಸಿದರು.

07129033a ತಸ್ಮಿನ್ರಾತ್ರಿಮುಖೇ ಘೋರೇ ಮಹಾಶಬ್ದನಿನಾದಿತೇ|

07129033c ಭೀರೂಣಾಂ ತ್ರಾಸಜನನೇ ಶೂರಾಣಾಂ ಹರ್ಷವರ್ಧನೇ||

ಆ ರಾತ್ರಿವೇಳೆಯ ಘೋರ ಯುದ್ಧದಲ್ಲಿ ಉಂಟಾದ ಮಹಾಶಬ್ಧಗಳು ಹೇಡಿಗಳಲ್ಲಿ ಭಯವನ್ನುಂಟುಮಾಡುತ್ತಿದ್ದವು ಮತ್ತು ಶೂರರ ಸಂತೋಷವನ್ನು ಹೆಚ್ಚಿಸುತ್ತಿದ್ದವು.

07129034a ರಾತ್ರಿಯುದ್ಧೇ ತದಾ ಘೋರೇ ವರ್ತಮಾನೇ ಸುದಾರುಣೇ|

07129034c ದ್ರೋಣಮಭ್ಯದ್ರವನ್ಕ್ರುದ್ಧಾಃ ಸಹಿತಾಃ ಪಾಂಡುಸೃಂಜಯಾಃ||

ಘೋರವಾಗಿ ನಡೆಯುತ್ತಿದ್ದ ಆ ಸುದಾರುಣ ರಾತ್ರಿಯುದ್ಧದಲ್ಲಿ ಕ್ರುದ್ಧ ಪಾಂಡು-ಸೃಂಜಯರು ಒಂದಾಗಿ ದ್ರೋಣನನ್ನು ಆಕ್ರಮಣಿಸಿದರು.

07129035a ಯೇ ಯೇ ಪ್ರಮುಖತೋ ರಾಜನ್ನ್ಯವರ್ತಂತ ಮಹಾತ್ಮನಃ|

07129035c ತಾನ್ಸರ್ವಾನ್ವಿಮುಖಾಂಶ್ಚಕ್ರೇ ಕಾಂಶ್ಚಿನ್ನಿನ್ಯೇ ಯಮಕ್ಷಯಂ||

ರಾಜನ್! ಆ ಮಹಾತ್ಮನಾದರೋ ತನ್ನನ್ನು ಎದುರಿಸಿ ಬಂದವರನ್ನೆಲ್ಲಾ ಪಲಾಯನಗೊಳಿಸುತ್ತಿದ್ದನು. ಯಾರು ವಿಮುಖರಾಗಲಿಲ್ಲವೋ ಅವರನ್ನು ಯಮಕ್ಷಯಕ್ಕೆ ಕಳುಹಿಸುತ್ತಿದ್ದನು.” 

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಏಕೋನತ್ರಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧ ಎನ್ನುವ ನೂರಾಇಪ್ಪತ್ತೊಂಭತ್ತನೇ ಅಧ್ಯಾಯವು.

Related image

Comments are closed.