Drona Parva: Chapter 128

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೨೮

ಯುದ್ಧವರ್ಣನೆ (೧-೧೦). ದುರ್ಯೋಧನನ ಯುದ್ಧ ಮತ್ತು ಪರಾಭವ (೧೧-೩೪).

07128001 ಸಂಜಯ ಉವಾಚ|

07128001a ತದುದೀರ್ಣಗಜಾಶ್ವೌಘಂ ಬಲಂ ತವ ಜನಾಧಿಪ|

07128001c ಪಾಂಡುಸೇನಾಮಭಿದ್ರುತ್ಯ ಯೋಧಯಾಮಾಸ ಸರ್ವತಃ||

ಸಂಜಯನು ಹೇಳಿದನು: “ಜನಾಧಿಪ! ನಿನ್ನ ಪ್ರಚಂಡ ಗಜಸೇನೆಯು ಪಾಂಡವರ ಸೇನೆಗಳನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ಯುದ್ಧಮಾಡತೊಡಗಿತು.

07128002a ಪಾಂಚಾಲಾಃ ಕುರವಶ್ಚೈವ ಯೋಧಯಂತಃ ಪರಸ್ಪರಂ|

07128002c ಯಮರಾಷ್ಟ್ರಾಯ ಮಹತೇ ಪರಲೋಕಾಯ ದೀಕ್ಷಿತಾಃ||

ಪರಲೋಕದ ದೀಕ್ಷೆಯನ್ನು ತೊಟ್ಟಿದ್ದ ಪಾಂಚಾಲರು ಮತ್ತು ಕುರುಗಳು ಯಮರಾಷ್ಟ್ರವನ್ನು ವರ್ಧಿಸಲು ಪರಸ್ಪರರೊಡನೆ ಯುದ್ಧಮಾಡಿದರು.

07128003a ಶೂರಾಃ ಶೂರೈಃ ಸಮಾಗಮ್ಯ ಶರತೋಮರಶಕ್ತಿಭಿಃ|

07128003c ವಿವ್ಯಧುಃ ಸಮರೇ ತೂರ್ಣಂ ನಿನ್ಯುಶ್ಚೈವ ಯಮಕ್ಷಯಂ||

ಸಮರದಲ್ಲಿ ಶೂರರು ಶೂರರನ್ನು ಎದುರಿಸಿ ಶರ-ತೋಮರ-ಶಕ್ತಿಗಳಿಂದ ಹೊಡೆದು ಬೇಗನೇ ಯಮಕ್ಷಯಕ್ಕೆ ಕಳುಹಿಸುತ್ತಿದ್ದರು.

07128004a ರಥಿನಾಂ ರಥಿಭಿಃ ಸಾರ್ಧಂ ರುಧಿರಸ್ರಾವಿ ದಾರುಣಂ|

07128004c ಪ್ರಾವರ್ತತ ಮಹದ್ಯುದ್ಧಂ ನಿಘ್ನತಾಮಿತರೇತರಂ||

ಪರಸ್ಪರರನ್ನು ಸಂಹರಿಸುವುದರಲ್ಲಿ ತೊಡಗಿದ ರಥಿಗಳು ರಥಿಗಳನ್ನು ಎದುರಿಸಿ ರಕ್ತದ ದಾರುಣ ಕೋಡಿಯನ್ನೇ ಹರಿಸುವ ಮಹಾಯುದ್ಧವು ಪ್ರಾರಂಭವಾಯಿತು.

07128005a ವಾರಣಾಶ್ಚ ಮಹಾರಾಜ ಸಮಾಸಾದ್ಯ ಪರಸ್ಪರಂ|

07128005c ವಿಷಾಣೈರ್ದಾರಯಾಮಾಸುಃ ಸಂಕ್ರುದ್ಧಾಶ್ಚ ಮದೋತ್ಕಟಾಃ||

ಮಹಾರಾಜ! ಮದೋತ್ಕಟ ಸಂಕ್ರುದ್ಧ ಆನೆಗಳು ಪರಸ್ಪರರನ್ನು ಎದುರಿಸಿ ಕೋರೆದಾಡೆಗಳಿಂದ ಇರಿಯುತ್ತಿದ್ದವು.

07128006a ಹಯಾರೋಹಾನ್ ಹಯಾರೋಹಾಃ ಪ್ರಾಸಶಕ್ತಿಪರಶ್ವಧೈಃ|

07128006c ಬಿಭಿದುಸ್ತುಮುಲೇ ಯುದ್ಧೇ ಪ್ರಾರ್ಥಯಂತೋ ಮಹದ್ಯಶಃ||

ಆ ತುಮುಲ ಯುದ್ಧದಲ್ಲಿ ಮಹಾ ಯಶಸ್ಸನ್ನು ಅರಸುತ್ತಾ ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ ಪ್ರಾಸ-ಶಕ್ತಿ-ಪರಶಾಯುಧಗಳಿಂದ ಹೊಡೆದಾಡಿದರು.

07128007a ಪತ್ತಯಶ್ಚ ಮಹಾಬಾಹೋ ಶತಶಃ ಶಸ್ತ್ರಪಾಣಯಃ|

07128007c ಅನ್ಯೋನ್ಯಮಾರ್ದಯನ್ರಾಜನ್ನಿತ್ಯಯತ್ತಾಃ ಪರಾಕ್ರಮೇ||

ಮಹಾಬಾಹೋ! ರಾಜನ್! ನೂರಾರು ಶಸ್ತ್ರಪಾಣಿ ಪದಾತಿ ಸೈನಿಕರು ಸತತವಾಗಿ ಪ್ರಯತ್ನಿಸಿ ತಮ್ಮ ಪರಾಕ್ರಮವನ್ನು ತೋರ್ಪಡಿಸುತ್ತಾ ಅನ್ಯೋನ್ಯರನ್ನು ಹೊಡೆಯುತ್ತಿದ್ದರು.

07128008a ಗೋತ್ರಾಣಾಂ ನಾಮಧೇಯಾನಾಂ ಕುಲಾನಾಂ ಚೈವ ಮಾರಿಷ|

07128008c ಶ್ರವಣಾದ್ಧಿ ವಿಜಾನೀಮಃ ಪಾಂಚಾಲಾನ್ಕುರುಭಿಃ ಸಹ||

ಮಾರಿಷ! ಗೋತ್ರ, ನಾಮಧೇಯ ಮತ್ತು ಕುಲಗಳನ್ನು ಕೇಳಿಯೇ ಕುರುಗಳೊಂದಿಗೆ ಹೋರಾಡುತ್ತಿರುವವರು ಪಾಂಚಾಲರು ಎಂದು ನಮಗೆ ತಿಳಿಯುತ್ತಿತ್ತು.

07128009a ಅನ್ಯೋನ್ಯಂ ಸಮರೇ ಯೋಧಾಃ ಶರಶಕ್ತಿಪರಶ್ವಧೈಃ|

07128009c ಪ್ರೇಷಯನ್ಪರಲೋಕಾಯ ವಿಚರಂತೋ ಹ್ಯಭೀತವತ್||

ಸಮರದಲ್ಲಿ ಯೋಧರು ಶರ-ಶಕ್ತಿ-ಪರಶಾಯುಧಗಳಿಂದ ಅನ್ಯೋನ್ಯರನ್ನು ಪರಲೋಕಗಳಿಗೆ ಕಳುಹಿಸುತ್ತಾ ನಿರ್ಭೀತರಾಗಿ ಸಂಚರಿಸುತ್ತಿದ್ದರು.

07128010a ಶರೈರ್ದಶ ದಿಶೋ ರಾಜಂಸ್ತೇಷಾಂ ಮುಕ್ತೈಃ ಸಹಸ್ರಶಃ|

07128010c ನ ಭ್ರಾಜಂತ ಯಥಾಪೂರ್ವಂ ಭಾಸ್ಕರೇಽಸ್ತಂ ಗತೇಽಪಿ ಚ||

ರಾಜನ್! ಅವರು ಬಿಡುತ್ತಿದ್ದ ಸಹಸ್ರಾರು ಬಾಣಗಳಿಂದಾಗಿ ಮತ್ತು ಭಾಸ್ಕರನು ಅಸ್ತಂಗತನಾಗಿದುದಕ್ಕಾಗಿ ಹತ್ತು ದಿಕ್ಕುಗಳೂ ಮೊದಲಿನಂತೆ ಪ್ರಕಾಶಿಸುತ್ತಿರಲಿಲ್ಲ.

07128011a ತಥಾ ಪ್ರಯುಧ್ಯಮಾನೇಷು ಪಾಂಡವೇಯೇಷು ನಿರ್ಭಯಃ|

07128011c ದುರ್ಯೋಧನೋ ಮಹಾರಾಜ ವ್ಯವಗಾಹತ ತದ್ಬಲಂ||

ಮಹಾರಾಜ! ಹಾಗೆ ಪಾಂಡವರು ಯುದ್ಧಮಾಡುತ್ತಿರುವಾಗ ದುರ್ಯೋಧನನು ನಿರ್ಭಯನಾಗಿ ಅವರ ಸೇನೆಯೊಳಗೆ ನುಗ್ಗಿದನು.

07128012a ಸೈಂಧವಸ್ಯ ವಧೇನೈವ ಭೃಶಂ ದುಃಖಸಮನ್ವಿತಃ|

07128012c ಮರ್ತವ್ಯಮಿತಿ ಸಂಚಿಂತ್ಯ ಪ್ರಾವಿಶತ್ತು ದ್ವಿಷದ್ಬಲಂ||

ಸೈಂಧವನ ವಧೆಯಿಂದಾಗಿ ಅತೀವ ದುಃಖಸಮನ್ವಿತನಾದ ಅವನು ಸಾಯಬೇಕೆಂದು ಯೋಚಿಸಿ ಶತ್ರುಸೈನ್ಯವನ್ನು ಪ್ರವೇಶಿಸಿದನು.

07128013a ನಾದಯನ್ರಥಘೋಷೇಣ ಕಂಪಯನ್ನಿವ ಮೇದಿನೀಂ|

07128013c ಅಭ್ಯವರ್ತತ ಪುತ್ರಸ್ತೇ ಪಾಂಡವಾನಾಮನೀಕಿನೀಂ||

ಮೇದಿನಿಯನ್ನೇ ನಡುಗಿಸುವಂತಿರುವ ರಥಘೋಷದಿಂದ ನಿನ್ನ ಮಗನು ಪಾಂಡವರ ಸೇನೆಯನ್ನು ಆಕ್ರಮಣಿಸಿ ಗರ್ಜಿಸಿದನು.

07128014a ಸ ಸನ್ನಿಪಾತಸ್ತುಮುಲಸ್ತಸ್ಯ ತೇಷಾಂ ಚ ಭಾರತ|

07128014c ಅಭವತ್ಸರ್ವಸೈನ್ಯಾನಾಮಭಾವಕರಣೋ ಮಹಾನ್||

ಭಾರತ! ಅವನ ಮತ್ತು ಪಾಂಡವರ ನಡುವೆ ನಡೆದ ಆ ಮಹಾ ತುಮುಲ ಯುದ್ಧವು ಸರ್ವಸೇನೆಗಳಿಗೆ ವಿನಾಶಕಾರಿಯಾಗಿ ಪರಿಣಮಿಸಿತು.

07128015a ಮಧ್ಯಂದಿನಗತಂ ಸೂರ್ಯಂ ಪ್ರತಪಂತಂ ಗಭಸ್ತಿಭಿಃ|

07128015c ತಥಾ ತವ ಸುತಂ ಮಧ್ಯೇ ಪ್ರತಪಂತಂ ಶರೋರ್ಮಿಭಿಃ||

07128016a ನ ಶೇಕುರ್ಭಾರತಂ ಯುದ್ಧೇ ಪಾಂಡವಾಃ ಸಮವೇಕ್ಷಿತುಂ|

ತೀಕ್ಷ್ಣ ಕಿರಣಗಳಿಂದ ಕೂಡಿದ ಮಧ್ಯಾಹ್ನದ ಸೂರ್ಯನನ್ನು ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ ಕಿರಣಗಳಂತೆ ಹೊರಬೀಳುತ್ತಿದ್ದ ಬಾಣಗಳ ಮಧ್ಯದಲ್ಲಿದ್ದ ನಿನ್ನ ಮಗ ಭಾರತನನ್ನು ಯುದ್ಧದಲ್ಲಿ ಪಾಂಡವರಿಗೆ ಕಣ್ಣೆತ್ತಿ ನೋಡಲಿಕ್ಕೂ ಆಗುತ್ತಿರಲಿಲ್ಲ.

07128016c ಪಲಾಯನೇ ಕೃತೋತ್ಸಾಹಾ ನಿರುತ್ಸಾಹಾ ದ್ವಿಷಜ್ಜಯೇ||

07128017a ಪರ್ಯಧಾವಂತ ಪಾಂಚಾಲಾ ವಧ್ಯಮಾನಾ ಮಹಾತ್ಮನಾ|

ಮಹಾತ್ಮ ದುರ್ಯೋಧನನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು ಶತ್ರುವನ್ನು ಗೆಲ್ಲುವುದರಲ್ಲಿ ನಿರುತ್ಸಾಹಿಗಳಾಗಿ ಪಲಾಯನ ಮಾಡುವುದರಲ್ಲಿ ಉತ್ಸಾಹ ತಳೆದು ಓಡಿಹೋಗುತ್ತಿದ್ದರು.

07128017c ರುಕ್ಮಪುಂಖೈಃ ಪ್ರಸನ್ನಾಗ್ರೈಸ್ತವ ಪುತ್ರೇಣ ಧನ್ವಿನಾ|

07128017e ಅರ್ದ್ಯಮಾನಾಃ ಶರೈಸ್ತೂರ್ಣಂ ನ್ಯಪತನ್ಪಾಂಡುಸೈನಿಕಾಃ||

ನಿನ್ನ ಮಗ ಧನ್ವಿ ದುರ್ಯೋಧನನ ರುಕ್ಮಪುಂಖಗಳ, ಮೊನಚಾದ ತುದಿಯುಳ್ಳ ಶರಗಳಿಂದ ಗಾಯಗೊಂಡು ಬೇಗ ಬೇಗನೇ ಪಾಂಡವ ಸೈನಿಕರು ಬೀಳುತ್ತಿದ್ದರು.

07128018a ನ ತಾದೃಶಂ ರಣೇ ಕರ್ಮ ಕೃತವಂತಸ್ತು ತಾವಕಾಃ|

07128018c ಯಾದೃಶಂ ಕೃತವಾನ್ರಾಜಾ ಪುತ್ರಸ್ತವ ವಿಶಾಂ ಪತೇ||

ವಿಶಾಂಪತೇ! ಆಗ ನಿನ್ನ ಮಗ ರಾಜಾ ದುರ್ಯೋಧನನು ಮಾಡಿದ ಸಾಹಸ ಕಾರ್ಯವನ್ನು ನಿನ್ನ ಕಡೆಯ ಯಾವ ಯೋಧರೂ ಅದೂವರೆಗೆ ಮಾಡಿರಲಿಲ್ಲ.

07128019a ಪುತ್ರೇಣ ತವ ಸಾ ಸೇನಾ ಪಾಂಡವೀ ಮಥಿತಾ ರಣೇ|

07128019c ನಲಿನೀ ದ್ವಿರದೇನೇವ ಸಮಂತಾತ್ ಫುಲ್ಲಪಂಕಜಾ||

ಅರಳಿದ ಕಮಲಗಳುಳ್ಳ ಸರೋವರವನ್ನು ಹೊಕ್ಕು ಆನೆಯೊಂದು ಎಲ್ಲ ಕಡೆ ಧ್ವಂಸಮಾಡುವಂತೆ ನಿನ್ನ ಮಗನು ರಣದಲ್ಲಿ ಪಾಂಡವ ಸೇನೆಯನ್ನು ಮಥಿಸಿದನು.

07128020a ಕ್ಷೀಣತೋಯಾನಿಲಾರ್ಕಾಭ್ಯಾಂ ಹತತ್ವಿಡಿವ ಪದ್ಮಿನೀ|

07128020c ಬಭೂವ ಪಾಂಡವೀ ಸೇನಾ ತವ ಪುತ್ರಸ್ಯ ತೇಜಸಾ||

ನಿನ್ನ ಮಗನ ತೇಜಸ್ಸಿನಿಂದಾಗಿ ಪಾಂಡವರ ಸೇನೆಯು ಕಮಲಗಳುಳ್ಳ ಸರೋವರವು ಸೂರ್ಯನ ಪ್ರಖರಕಿರಣಗಳಿಂದ ಬತ್ತಿಹೋಗಿ ಅಥವಾ ಭಿರುಗಾಳಿಗೆ ಸಿಲುಕಿ ನಾಶವಾಗುವಂತೆ ಹತಾಶಗೊಂಡಿತು.

07128021a ಪಾಂಡುಸೇನಾಂ ಹತಾಂ ದೃಷ್ಟ್ವಾ ತವ ಪುತ್ರೇಣ ಭಾರತ|

07128021c ಭೀಮಸೇನಪುರೋಗಾಸ್ತು ಪಾಂಚಾಲಾಃ ಸಮುಪಾದ್ರವನ್||

ಭಾರತ! ಪಾಂಡುಸೇನೆಯು ನಿನ್ನ ಮಗನಿಂದಾಗಿ ಹತಾಶಗೊಂಡಿದುದನ್ನು ನೋಡಿ ಪಾಂಚಾಲರು ಭೀಮಸೇನನನ್ನು ಮುಂದಿರಿಸಿಕೊಂಡು ಅವನನ್ನು ಆಕ್ರಮಣಿಸಿದರು.

07128022a ಸ ಭೀಮಸೇನಂ ದಶಭಿರ್ಮಾದ್ರೀಪುತ್ರೌ ತ್ರಿಭಿಸ್ತ್ರಿಭಿಃ|

07128022c ವಿರಾಟದ್ರುಪದೌ ಷಡ್ಭಿಃ ಶತೇನ ಚ ಶಿಖಂಡಿನಂ||

07128023a ಧೃಷ್ಟದ್ಯುಮ್ನಂ ಚ ಸಪ್ತತ್ಯಾ ಧರ್ಮಪುತ್ರಂ ಚ ಸಪ್ತಭಿಃ|

07128023c ಕೇಕಯಾಂಶ್ಚೈವ ಚೇದೀಂಶ್ಚ ಬಹುಭಿರ್ನಿಶಿತೈಃ ಶರೈಃ||

07128024a ಸಾತ್ವತಂ ಪಂಚಭಿರ್ವಿದ್ಧ್ವಾ ದ್ರೌಪದೇಯಾಂಸ್ತ್ರಿಭಿಸ್ತ್ರಿಭಿಃ|

07128024c ಘಟೋತ್ಕಚಂ ಚ ಸಮರೇ ವಿದ್ಧ್ವಾ ಸಿಂಹ ಇವಾನದತ್||

ಸಮರದಲ್ಲಿ ದುರ್ಯೋಧನನು ಭೀಮಸೇನನನ್ನು ಹತ್ತರಿಂದ, ಮಾದ್ರೀಪುತ್ರರನ್ನು ಮೂರು-ಮೂರು ಬಾಣಗಳಿಂದ, ವಿರಾಟ-ದ್ರುಪದರನ್ನು ಆರರಿಂದ, ನೂರರಿಂದ ಶಿಖಂಡಿಯನ್ನು. ಧೃಷ್ಟದ್ಯುಮ್ನನನ್ನು ಎಪ್ಪತ್ತರಿಂದ, ಧರ್ಮಪುತ್ರನನ್ನು ಏಳರಿಂದ, ಅನೇಕ ನಿಶಿತ ಶರಗಳಿಂದ ಕೇಕಯರನ್ನೂ ಮತ್ತು ಚೇದಿಯರನ್ನೂ, ಸಾತ್ವತ ಸಾತ್ಯಕಿಯನ್ನು ಐದರಿಂದ, ದ್ರೌಪದೇಯರನ್ನು ಮೂರು-ಮೂರರಿಂದ ಮತ್ತು ಘಟೋತ್ಕಚನನ್ನು ಹೊಡೆದು ಸಿಂಹದಂತೆ ಗರ್ಜಿಸಿದನು.

07128025a ಶತಶಶ್ಚಾಪರಾನ್ಯೋಧಾನ್ಸದ್ವಿಪಾಶ್ವರಥಾನ್ರಣೇ|

07128025c ಶರೈರವಚಕರ್ತೋಗ್ರೈಃ ಕ್ರುದ್ಧೋಽಂತಕ ಇವ ಪ್ರಜಾಃ||

ಕ್ರುದ್ಧ ಅಂತಕನು ಪ್ರಜೆಗಳನ್ನು ಹೇಗೋ ಹಾಗೆ ದುರ್ಯೋಧನನು ಉಗ್ರ ಶರಗಳಿಂದ ರಣದಲ್ಲಿ ಆನೆ-ಕುದುರೆ-ರಥಗಳೊಂದಿಗೆ ನೂರಾರು ಶತ್ರು ಸೈನಿಕರನ್ನು ಕತ್ತರಿಸಿ ಹಾಕಿದನು.

07128026a ತಸ್ಯ ತಾನ್ನಿಘ್ನತಃ ಶತ್ರೂನ್ರುಕ್ಮಪೃಷ್ಠಂ ಮಹದ್ಧನುಃ|

07128026c ಭಲ್ಲಾಭ್ಯಾಂ ಪಾಂಡವೋ ಜ್ಯೇಷ್ಠಸ್ತ್ರಿಧಾ ಚಿಚ್ಚೇದ ಮಾರಿಷ||

ಮಾರಿಷ! ಹಾಗೆ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಬಂಗಾರದ ಬೆನ್ನುಳ್ಳ ಮಹಾಧನುಸ್ಸನ್ನು ಜ್ಯೇಷ್ಠ ಪಾಂಡವನು ಭಲ್ಲಗಳೆರಡರಿಂದ ಮೂರು ಭಾಗಗಳನ್ನಾಗಿ ಕತ್ತರಿಸಿದನು.

07128027a ವಿವ್ಯಾಧ ಚೈನಂ ದಶಭಿಃ ಸಮ್ಯಗಸ್ತೈಃ ಶಿತೈಃ ಶರೈಃ|

07128027c ಮರ್ಮಾಣಿ ಭಿತ್ತ್ವಾ ತೇ ಸರ್ವೇ ಸಂಭಗ್ನಾಃ ಕ್ಷಿತಿಮಾವಿಶನ್||

ಸುಪ್ರಯುಕ್ತ ನಿಶಿತ ಇನ್ನೂ ಹತ್ತು ಬಾಣಗಳಿಂದ ಅವನನ್ನು ಹೊಡೆಯಲು ಅವು ಎಲ್ಲವೂ ದುರ್ಯೋಧನನ ಮರ್ಮಸ್ಥಾನಗಳನ್ನು ಪ್ರವೇಶಿಸಿ ಶರೀರವನ್ನು ಭೇದಿಸಿ ಭೂಮಿಯಮೇಲೆ ಬಿದ್ದವು.

07128028a ತತಃ ಪ್ರಮುದಿತಾ ಯೋಧಾಃ ಪರಿವವ್ರುರ್ಯುಧಿಷ್ಠಿರಂ|

07128028c ವೃತ್ರಹತ್ಯೈ ಯಥಾ ದೇವಾಃ ಪರಿವವ್ರುಃ ಪುರಂದರಂ||

ಆಗ ವೃತ್ರನನ್ನು ಸಂಹರಿಸಿದಾಗ ಪುರಂದರನನ್ನು ದೇವತೆಗಳು ಹೇಗೆ ಸುತ್ತುವರೆದರೋ ಹಾಗೆ ಸಂತೋಷಗೊಂಡ ಯೋಧರು ಯುಧಿಷ್ಠಿರನನ್ನು ಸುತ್ತುವರೆದರು.

07128029a ತತೋ ಯುಧಿಷ್ಠಿರೋ ರಾಜಾ ತವ ಪುತ್ರಸ್ಯ ಮಾರಿಷ|

07128029c ಶರಂ ಪರಮದುರ್ವಾರಂ ಪ್ರೇಷಯಾಮಾಸ ಸಂಯುಗೇ|

07128029e ಸ ತೇನ ಭೃಶಸಂವಿದ್ಧೋ ನಿಷಸಾದ ರಥೋತ್ತಮೇ||

ಮಾರಿಷ! ಆಗ ರಾಜಾ ಯುಧಿಷ್ಠಿರನು ಸಂಯುಗದಲ್ಲಿ ತಡೆಯಲು ಅಸಾಧ್ಯ ಪರಮ ಶರವನ್ನು ನಿನ್ನ ಮಗನ ಮೇಲೆ ಪ್ರಯೋಗಿಸಲು, ಅದರಿಂದ ಅವನು ಬಹಳ ಪ್ರಹೃತನಾಗಿ ತನ್ನ ಉತ್ತಮ ರಥದಲ್ಲಿಯೇ ಕುಸಿದು ಬಿದ್ದನು.

07128030a ತತಃ ಪಾಂಚಾಲಸೈನ್ಯಾನಾಂ ಭೃಶಮಾಸೀದ್ರವೋ ಮಹಾನ್|

07128030c ಹತೋ ರಾಜೇತಿ ರಾಜೇಂದ್ರ ಮುದಿತಾನಾಂ ಸಮಂತತಃ||

ರಾಜೇಂದ್ರ! ಆಗ “ರಾಜನು ಹತನಾದನು!” ಎಂಬ ಜೋರಾದ ಕೂಗು ಹರ್ಷಗೊಂಡ ಪಾಂಚಾಲ ಸೇನೆಗಳಲ್ಲಿ ಕೇಳಿಬಂದಿತು.

07128031a ಬಾಣಶಬ್ದರವಶ್ಚೋಗ್ರಃ ಶುಶ್ರುವೇ ತತ್ರ ಮಾರಿಷ|

07128031c ಅಥ ದ್ರೋಣೋ ದ್ರುತಂ ತತ್ರ ಪ್ರತ್ಯದೃಶ್ಯತ ಸಂಯುಗೇ||

ಮಾರಿಷ! ಅಲ್ಲಿ ಬಾಣಗಳ ಉಗ್ರ ಶಬ್ಧವೂ ಕೇಳಿಬಂದಿತು. ಅಷ್ಟರಲ್ಲಿಯೇ ದ್ರೋಣನು ಅಲ್ಲಿಗೆ ಬಂದು ಸಂಯುಗದಲ್ಲಿ ಕಾಣಿಸಿಕೊಂಡನು.

07128032a ಹೃಷ್ಟೋ ದುರ್ಯೋಧನಶ್ಚಾಪಿ ದೃಢಮಾದಾಯ ಕಾರ್ಮುಕಂ|

07128032c ತಿಷ್ಠ ತಿಷ್ಠೇತಿ ರಾಜಾನಂ ಬ್ರುವನ್ಪಾಂಡವಮಭ್ಯಯಾತ್||

ದುರ್ಯೋಧನನು ಕೂಡ ಹರ್ಷಗೊಂಡು ದೃಢ ಬಿಲ್ಲನ್ನು ಎತ್ತಿಕೊಂಡು “ನಿಲ್ಲು! ನಿಲ್ಲು!” ಎನ್ನುತ್ತಾ ಪಾಂಡವನನ್ನು ಆಕ್ರಮಣಿಸಿದನು.

07128033a ಪ್ರತ್ಯುದ್ಯಯುಸ್ತಂ ತ್ವರಿತಾಃ ಪಾಂಚಾಲಾ ರಾಜಗೃದ್ಧಿನಃ|

07128033c ತಾನ್ದ್ರೋಣಃ ಪ್ರತಿಜಗ್ರಾಹ ಪರೀಪ್ಸನ್ಕುರುಸತ್ತಮಂ|

07128033e ಚಂಡವಾತೋದ್ಧತಾನ್ಮೇಘಾನ್ನಿಘ್ನನ್ರಶ್ಮಿಮುಚೋ ಯಥಾ||

ರಾಜನನ್ನು ಸಂಹರಿಸಲು ಬಯಸಿದ ಪಾಂಚಾಲರು ತ್ವರೆಮಾಡಿ ಅವನನ್ನು ಎದುರಿಸಿ ಯುದ್ಧಮಾಡ ತೊಡಗಿದರು. ದ್ರೋಣನು ಕುರುಸತ್ತಮನನ್ನು ರಕ್ಷಿಸುತ್ತಾ ಚಂಡಮಾರುತದಿಂದ ಬೀಸಿಬಂದ ಮೋಡಗಳನ್ನು ಸೂರ್ಯನು ರಶ್ಮಿಗಳಿಂದ ಕರಗಿಸಿಬಿಡುವಂತೆ ಪಾಂಚಾಲರನ್ನು ತಡೆದನು.

07128034a ತತೋ ರಾಜನ್ಮಹಾನಾಸೀತ್ಸಂಗ್ರಾಮೋ ಭೂರಿವರ್ಧನಃ|

07128034c ತಾವಕಾನಾಂ ಪರೇಷಾಂ ಚ ಸಮೇತಾನಾಂ ಯುಯುತ್ಸಯಾ||

ರಾಜನ್! ಆಗ ಯುದ್ಧೋತ್ಸಾಹದಿಂದ ಸೇರಿದ್ದ ನಿನ್ನವರ ಮತ್ತು ಶತ್ರುಗಳ ನಡುವೆ ಶ್ರೇಯಸ್ಸನ್ನು ಹೆಚ್ಚಿಸುವ ಮಹಾ ಸಂಗ್ರಾಮವು ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಘಟೋತ್ಕಚವಧಪರ್ವಣಿ ರಾತ್ರಿಯುದ್ಧೇ ದುರ್ಯೋಧನಪರಾಭವೇ ಅಷ್ಠವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಘಟೋತ್ಕಚವಧಪರ್ವದಲ್ಲಿ ರಾತ್ರಿಯುದ್ಧೇ ದುರ್ಯೋಧನಪರಾಭವ ಎನ್ನುವ ನೂರಾಇಪ್ಪತ್ತೆಂಟನೇ ಅಧ್ಯಾಯವು.

Related image

Comments are closed.