Drona Parva: Chapter 127

ದ್ರೋಣ ಪರ್ವ: ಜಯದ್ರಥವಧ ಪರ್ವ

೧೨೭

ದುರ್ಯೋಧನನುದ ದ್ರೋಣನನ್ನು ನಿಂದಿಸಿ ಕರ್ಣನೊಡನೆ ಮಾತನಾಡಲು ಕರ್ಣನು ಅವನಿಗೆ ದ್ರೋಣನನ್ನು ನಿಂದಿಸಬೇಡ; ಜಯದ್ರಥನು ವಧಿಸಲ್ಪಟ್ಟಿದುದು ದೈವದೃಷ್ಟವು ಎನ್ನುವುದು (೧-೨೬).

07127001 ಸಂಜಯ ಉವಾಚ|

07127001a ತತೋ ದುರ್ಯೋಧನೋ ರಾಜಾ ದ್ರೋಣೇನೈವಂ ಪ್ರಚೋದಿತಃ|

07127001c ಅಮರ್ಷವಶಮಾಪನ್ನೋ ಯುದ್ಧಾಯೈವ ಮನೋ ದಧೇ||

07127002a ಅಬ್ರವೀಚ್ಚ ತದಾ ಕರ್ಣಂ ಪುತ್ರೋ ದುರ್ಯೋಧನಸ್ತವ|

ಸಂಜಯನು ಹೇಳಿದನು: “ಆಗ ರಾಜಾ ದುರ್ಯೋಧನನು ದ್ರೋಣನಿಂದಲೇ ಪ್ರಚೋದಿತನಾಗಿ ಕೋಪಾವಿಷ್ಟನಾಗಿ ಯುದ್ಧದ ಕುರಿತೇ ಮನಸ್ಸು ಮಾಡಿದನು. ಆಗ ನಿನ್ನ ಮಗ ದುರ್ಯೋಧನನು ಕರ್ಣನಿಗೆ ಹೇಳಿದನು:

07127002c ಪಶ್ಯ ಕೃಷ್ಣಸಹಾಯೇನ ಪಾಂಡವೇನ ಕಿರೀಟಿನಾ|

07127002e ಆಚಾರ್ಯವಿಹಿತಂ ವ್ಯೂಹಂ ಭಿನ್ನಂ ದೇವೈಃ ಸುದುರ್ಭಿದಂ||

“ಆಚಾರ್ಯರು ರಚಿಸಿದ ದೇವತೆಗಳಿಗೂ ದುರ್ಭೇದ್ಯ ವ್ಯೂಹವನ್ನೂ ಕೂಡ ಪಾಂಡವ ಕಿರೀಟಿಯು ಕೃಷ್ಣನ ಸಹಾಯದಿಂದ ಒಡೆದುದನ್ನು ನೋಡು!

07127003a ತವ ವ್ಯಾಯಚ್ಚಮಾನಸ್ಯ ದ್ರೋಣಸ್ಯ ಚ ಮಹಾತ್ಮನಃ|

07127003c ಮಿಷತಾಂ ಯೋಧಮುಖ್ಯಾನಾಂ ಸೈಂಧವೋ ವಿನಿಪಾತಿತಃ||

ಮಹಾತ್ಮರಾದ ನೀನು ಮತ್ತು ದ್ರೋಣರು ಯುದ್ಧಮಾಡುತ್ತಿರುವಾಗ ಯೋಧಪ್ರಮುಖರು ನೋಡುತ್ತಿರುವಂತೆಯೇ ಸೈಂಧವನನ್ನು ಬೀಳಿಸಿದುದನ್ನು ನೋಡು!

07127004a ಪಶ್ಯ ರಾಧೇಯ ರಾಜಾನಃ ಪೃಥಿವ್ಯಾಂ ಪ್ರವರಾ ಯುಧಿ|

07127004c ಪಾರ್ಥೇನೈಕೇನ ನಿಹತಾಃ ಸಿಂಹೇನೇವೇತರಾ ಮೃಗಾಃ||

ರಾಧೇಯ! ಯುದ್ಧದಲ್ಲಿ ಪೃಥ್ವಿಯ ಪ್ರಮುಖ ರಾಜರು ಪಾರ್ಥನೊಬ್ಬನಿಂದಲೇ ಸಿಂಹದಿಂದ ಇತರ ಮೃಗಗಳಂತೆ ಹತರಾಗಿರುವುದನ್ನು ನೋಡು!

07127005a ಮಮ ವ್ಯಾಯಚ್ಚಮಾನಸ್ಯ ಸಮರೇ ಶತ್ರುಸೂದನ|

07127005c ಅಲ್ಪಾವಶೇಷಂ ಸೈನ್ಯಂ ಮೇ ಕೃತಂ ಶಕ್ರಾತ್ಮಜೇನ ಹ||

ಶತ್ರುಸೂದನ! ಸಮರದಲ್ಲಿ ನಾನೇ ಯುದ್ಧಮಾಡುತ್ತಿದ್ದರೂ ಈ ಶಕ್ರಾತ್ಮಜನು ನನ್ನ ಸೇನೆಯಲ್ಲಿ ಸ್ವಲ್ಪವೇ ಉಳಿದುಕೊಳ್ಳುವಂತೆ ಮಾಡಿಬಿಟ್ಟಿದ್ದಾನೆ!

07127006a ಕಥಂ ಹ್ಯನಿಚ್ಚಮಾನಸ್ಯ ದ್ರೋಣಸ್ಯ ಯುಧಿ ಫಲ್ಗುನಃ|

07127006c ಭಿಂದ್ಯಾತ್ಸುದುರ್ಭಿದಂ ವ್ಯೂಹಂ ಯತಮಾನೋಽಪಿ ಸಂಯುಗೇ||

ಯುದ್ಧದಲ್ಲಿ ದ್ರೋಣನು ಬಿಟ್ಟುಕೊಡದೇ ಇದ್ದಿದ್ದರೆ ಫಲ್ಗುನನು ಸಂಯುಗದಲ್ಲಿ ಎಷ್ಟೇ ಪ್ರಯತ್ನಿಸಿದ್ದರೂ ಹೇಗೆ ತಾನೇ ಈ ದುರ್ಭೇದ್ಯ ವ್ಯೂಹವನ್ನು ಭೇದಿಸುತ್ತಿದ್ದನು?

07127007a ಪ್ರಿಯೋ ಹಿ ಫಲ್ಗುನೋ ನಿತ್ಯಮಾಚಾರ್ಯಸ್ಯ ಮಹಾತ್ಮನಃ|

07127007c ತತೋಽಸ್ಯ ದತ್ತವಾನ್ದ್ವಾರಂ ನಯುದ್ಧೇನಾರಿಮರ್ದನ||

ಮಹಾತ್ಮ ಫಲ್ಗುನನು ಯಾವಾಗಲೂ  ಪ್ರಿಯನಲ್ಲವೇ? ಆದುದರಿಂದಲೇ ಅರಿಮರ್ದನ! ಅವನು ಅವನೊಂದಿಗೆ ಯುದ್ಧಮಾಡದೇ ದಾರಿಮಾಡಿಕೊಟ್ಟನು!

07127008a ಅಭಯಂ ಸೈಂಧವಸ್ಯಾಜೌ ದತ್ತ್ವಾ ದ್ರೋಣಃ ಪರಂತಪಃ|

07127008c ಪ್ರಾದಾತ್ಕಿರೀಟಿನೇ ದ್ವಾರಂ ಪಶ್ಯ ನಿರ್ಗುಣತಾಂ ಮಮ||

ಪರಂತಪ ದ್ರೋಣನು ಸೈಂಧವನಿಗೆ ಅಭಯವನ್ನಿತ್ತು ಕಿರೀಟಿಗೆ ದ್ವಾರವನ್ನು ತೆರೆದನು. ನನ್ನ ನಿರ್ಗುಣತೆಯನ್ನು ನೋಡು!

07127009a ಯದ್ಯದಾಸ್ಯಮನುಜ್ಞಾಂ ವೈ ಪೂರ್ವಮೇವ ಗೃಹಾನ್ಪ್ರತಿ|

07127009c ಸಿಂಧುರಾಜಸ್ಯ ಸಮರೇ ನಾಭವಿಷ್ಯಜ್ಜನಕ್ಷಯಃ||

ಒಂದುವೇಳೆ ಮೊದಲೇ ಮನೆಗೆ ಹೋಗಲು ಸಿಂಧುರಾಜನಿಗೆ ಅನುಮತಿಯನ್ನಿತ್ತಿದ್ದರೆ ಸಮರದಲ್ಲಿ ಈ ಜನಕ್ಷಯವು ನಡೆಯುತ್ತಿರಲಿಲ್ಲ.

07127010a ಜಯದ್ರಥೋ ಜೀವಿತಾರ್ಥೀ ಗಚ್ಚಮಾನೋ ಗೃಹಾನ್ಪ್ರತಿ|

07127010c ಮಯಾನಾರ್ಯೇಣ ಸಂರುದ್ಧೋ ದ್ರೋಣಾತ್ಪ್ರಾಪ್ಯಾಭಯಂ ರಣೇ||

ಆದರೆ ನಾನು ಅನಾರ್ಯನಂತೆ ರಣದಲ್ಲಿ ಸಂರುದ್ಧ ದ್ರೋಣನ ಅಭಯವನ್ನು ಪಡೆದು ಜೀವಿತಾರ್ಥ ಜಯದ್ರಥನನ್ನು ಮನೆಗೆ ಹೋಗದಂತೆ ತಡೆದೆನು.

07127011a ಅದ್ಯ ಮೇ ಭ್ರಾತರಃ ಕ್ಷೀಣಾಶ್ಚಿತ್ರಸೇನಾದಯೋ ಯುಧಿ|

07127011c ಭೀಮಸೇನಂ ಸಮಾಸಾದ್ಯ ಪಶ್ಯತಾಂ ನೋ ದುರಾತ್ಮನಾಂ||

ನಾವೆಲ್ಲ ದುರಾತ್ಮರು ನೋಡುತ್ತಿದ್ದಂತೆಯೇ ಇಂದು ಯುದ್ಧದಲ್ಲಿ ಭೀಮಸೇನನನ್ನು ಎದುರಿಸಿ ಚಿತ್ರಸೇನನೇ ಮೊದಲಾದ ನನ್ನ ತಮ್ಮಂದಿರು ಅಸುನೀಗಿದರು!”

07127012 ಕರ್ಣ ಉವಾಚ|

07127012a ಆಚಾರ್ಯಂ ಮಾ ವಿಗರ್ಹಸ್ವ ಶಕ್ತ್ಯಾ ಯುಧ್ಯತ್ಯಸೌ ದ್ವಿಜಃ|

07127012c ಅಜಯ್ಯಾನ್ಪಾಂಡವಾನ್ಮನ್ಯೇ ದ್ರೋಣೇನಾಸ್ತ್ರವಿದಾ ಮೃಧೇ||

ಕರ್ಣನು ಹೇಳಿದನು: “ಆಚಾರ್ಯನನ್ನು ನಿಂದಿಸದಿರು. ಆ ದ್ವಿಜನು ಪರಮ ಶಕ್ತಿಯಿಂದ ಯುದ್ಧಮಾಡುತ್ತಿದ್ದಾನೆ. ಯುದ್ಧದಲ್ಲಿ ಪಾಂಡವರು ಅಸ್ತ್ರವಿದ ದ್ರೋಣನಿಂದ ಅಜೇಯರೆಂದು ತಿಳಿ.

07127013a ತಥಾ ಹ್ಯೇನಮತಿಕ್ರಮ್ಯ ಪ್ರವಿಷ್ಟಃ ಶ್ವೇತವಾಹನಃ|

07127013c ದೈವದೃಷ್ಟೋಽನ್ಯಥಾಭಾವೋ ನ ಮನ್ಯೇ ವಿದ್ಯತೇ ಕ್ವ ಚಿತ್||

ಹೇಗೆ ಅವನನ್ನು ಅತಿಕ್ರಮಿಸಿ ಶ್ವೇತವಾಹನನು ಪ್ರವೇಶಿಸಿದನೋ ಅದು ದೈವದೃಷ್ಟವೇ ಹೊರತು ಅನ್ಯಥಾ ಅದನ್ನು ತಿಳಿದುಕೊಳ್ಳಬಾರದು. ಬೇರೆ ಏನೂ ಅದರಲ್ಲಿಲ್ಲ.

07127014a ತತೋ ನೋ ಯುಧ್ಯಮಾನಾನಾಂ ಪರಂ ಶಕ್ತ್ಯಾ ಸುಯೋಧನ|

07127014c ಸೈಂಧವೋ ನಿಹತೋ ರಾಜನ್ದೈವಮತ್ರ ಪರಂ ಸ್ಮೃತಂ||

ಸುಯೋಧನ! ರಾಜನ್! ಪರಮ ಶಕ್ತಿಯಿಂದ ನಾವು ಯುದ್ಧಮಾಡುತ್ತಿದ್ದರೂ ಸೈಂಧವನು ಹತನಾದನೆಂದರೆ ಅದರಲ್ಲಿ ದೈವವೇ ಮೇಲು ಎನ್ನುವುದನ್ನು ನೆನಪಿಸಿಕೊಳ್ಳಬೇಕು.

07127015a ಪರಂ ಯತ್ನಂ ಕುರ್ವತಾಂ ಚ ತ್ವಯಾ ಸಾರ್ಧಂ ರಣಾಜಿರೇ|

07127015c ಹತ್ವಾಸ್ಮಾಕಂ ಪೌರುಷಂ ಹಿ ದೈವಂ ಪಶ್ಚಾತ್ಕರೋತಿ ನಃ|

07127015e ಸತತಂ ಚೇಷ್ಟಮಾನಾನಾಂ ನಿಕೃತ್ಯಾ ವಿಕ್ರಮೇಣ ಚ||

ರಣಾಂಗಣದಲ್ಲಿ ನಿನ್ನ ಜೊತೆಗೇ ಪರಮ ಯತ್ನವನ್ನು ಮಾಡುತ್ತಿರುವ, ಸತತವೂ ಮೋಸದಿಂದ ಅಥವಾ ವಿಕ್ರಮದಿಂದ ನಡೆದುಕೊಳ್ಳುತ್ತಿರುವ ನಮ್ಮ ಈ ಪೌರುಷವನ್ನು ಕೊಂದು ದೈವವು ಮೇಲುಗೈ ಮಾಡುತ್ತಿದೆ.

07127016a ದೈವೋಪಸೃಷ್ಟಃ ಪುರುಷೋ ಯತ್ಕರ್ಮ ಕುರುತೇ ಕ್ವ ಚಿತ್|

07127016c ಕೃತಂ ಕೃತಂ ಸ್ಮ ತತ್ತಸ್ಯ ದೈವೇನ ವಿನಿಹನ್ಯತೇ||

ದೈವದಿಂದ ಪೀಡಿತ ಪುರುಷನು ಯಾವುದೇ ಕರ್ಮವನ್ನು ಮಾಡಲು ತೊಡಗಿದರೂ ಅವನ ಒಂದೊಂದು ಕೆಲಸವನ್ನೂ ದೈವವು ಹಾಳುಮಾಡುತ್ತದೆ.

07127017a ಯತ್ಕರ್ತವ್ಯಂ ಮನುಷ್ಯೇಣ ವ್ಯವಸಾಯವತಾ ಸತಾ|

07127017c ತತ್ಕಾರ್ಯಮವಿಶಂಕೇನ ಸಿದ್ಧಿರ್ದೈವೇ ಪ್ರತಿಷ್ಠಿತಾ||

ಮನುಷ್ಯನು ಸದಾ ಉದ್ಯೋಗಶೀಲನಾಗಿ ಕಾರ್ಯವು ಸಿದ್ಧಿಯಾಗುವುದೋ ಇಲ್ಲವೋ ಎಂಬ ಶಂಕೆಯಿಲ್ಲದೇ ಕರ್ತವ್ಯವನ್ನು ಮಾಡುತ್ತಿರಬೇಕು. ಅದರ ಸಿದ್ಧಿಯು ದೈವಾಧೀನವಾದುದು.

07127018a ನಿಕೃತ್ಯಾ ನಿಕೃತಾಃ ಪಾರ್ಥಾ ವಿಷಯೋಗೈಶ್ಚ ಭಾರತ|

07127018c ದಗ್ಧಾ ಜತುಗೃಹೇ ಚಾಪಿ ದ್ಯೂತೇನ ಚ ಪರಾಜಿತಾಃ||

ಭಾರತ! ಪಾರ್ಥರನ್ನು ನಾವು ವಿಷಕೊಡುವುದರಿಂದ ಮತ್ತು ಮೋಸದಿಂದ ವಂಚಿಸಿದ್ದೇವೆ. ಜತುಗೃಹದಲ್ಲಿ ಸುಟ್ಟೆವು ಮತ್ತು ದ್ಯೂತದಲ್ಲಿ ಸೋಲಿಸಿದೆವು.

07127019a ರಾಜನೀತಿಂ ವ್ಯಪಾಶ್ರಿತ್ಯ ಪ್ರಹಿತಾಶ್ಚೈವ ಕಾನನಂ|

07127019c ಯತ್ನೇನ ಚ ಕೃತಂ ಯತ್ತೇ ದೈವೇನ ವಿನಿಪಾತಿತಂ||

ರಾಜನೀತಿಯನ್ನು ಆಶ್ರಯಿಸಿ ಅವರನ್ನು ಕಾನನಕ್ಕೆ ಕಳುಹಿಸಿಯೂ ಆಯಿತು. ಪ್ರಯತ್ನಪೂರ್ವಕವಾಗಿ ಮಾಡಿದ ಈ ಎಲ್ಲವನ್ನು ದೈವವು ಮಣ್ಣುಗೂಡಿಸಿತು.

07127020a ಯುಧ್ಯಸ್ವ ಯತ್ನಮಾಸ್ಥಾಯ ಮೃತ್ಯುಂ ಕೃತ್ವಾ ನಿವರ್ತನಂ|

07127020c ಯತತಸ್ತವ ತೇಷಾಂ ಚ ದೈವಂ ಮಾರ್ಗೇಣ ಯಾಸ್ಯತಿ||

ಮೃತ್ಯುವನ್ನು ಹಿಂದೆ ಹಾಕಿ ಪ್ರಯತ್ನಪೂರ್ವಕವಾಗಿ ಯುದ್ಧಮಾಡು. ಪ್ರಯತ್ನಿಸುತ್ತಿರುವ ನಿನ್ನ ಮತ್ತು ಅವರ ಮಾರ್ಗದಲ್ಲಿ ದೈವವು ಹೋಗುತ್ತದೆ.

07127021a ನ ತೇಷಾಂ ಮತಿಪೂರ್ವಂ ಹಿ ಸುಕೃತಂ ದೃಶ್ಯತೇ ಕ್ವ ಚಿತ್|

07127021c ದುಷ್ಕೃತಂ ತವ ವಾ ವೀರ ಬುದ್ಧ್ಯಾ ಹೀನಂ ಕುರೂದ್ವಹ||

ಕುರೂದ್ವಹ! ಅವರು ಬುದ್ಧಿಪೂರ್ವಕವಾಗಿ ಮಾಡಿರಬಹುದಾದ ಸುಕೃತವು ನಮಗೆ ಏನೂ ಕಾಣುವುದಿಲ್ಲ. ಹಾಗೆಯೇ ವೀರ! ಬುದ್ಧಿಹೀನತೆಯಿಂದ ನೀನು ಮಾಡಿರುವ ದುಷ್ಕೃತಗಳೂ ಕಾಣುವುದಿಲ್ಲ.

07127022a ದೈವಂ ಪ್ರಮಾಣಂ ಸರ್ವಸ್ಯ ಸುಕೃತಸ್ಯೇತರಸ್ಯ ವಾ|

07127022c ಅನನ್ಯಕರ್ಮ ದೈವಂ ಹಿ ಜಾಗರ್ತಿ ಸ್ವಪತಾಮಪಿ||

ಸುಕೃತ-ದುಷ್ಕೃತಗಳೆಲ್ಲವಕ್ಕೂ ದೈವವೇ ಪ್ರಮಾಣವಾಗಿರುತ್ತದೆ. ನಿದ್ದೆಮಾಡುತ್ತಿರುವಾಗಲೂ ಜಾಗೃತವಾಗಿದ್ದು ದೈವವು ಅನನ್ಯವಾಗಿ ಇದೇ ಕೆಲಸವನ್ನು ಮಾಡುತ್ತಿರುತ್ತದೆ.

07127023a ಬಹೂನಿ ತವ ಸೈನ್ಯಾನಿ ಯೋಧಾಶ್ಚ ಬಹವಸ್ತಥಾ|

07127023c ನ ತಥಾ ಪಾಂಡುಪುತ್ರಾಣಾಮೇವಂ ಯುದ್ಧಮವರ್ತತ||

ಆಗ ನಿನ್ನಲ್ಲಿ ಸೈನ್ಯಗಳೂ ಬಹಳವಾಗಿದ್ದವು. ಯೋಧರೂ ಬಹಳವಾಗಿದ್ದರು. ಪಾಂಡುಪುತ್ರರದ್ದು ಹಾಗಿರದಿದ್ದರೂ ಯುದ್ಧವು ನಡೆಯಿತು.

07127024a ತೈರಲ್ಪೈರ್ಬಹವೋ ಯೂಯಂ ಕ್ಷಯಂ ನೀತಾಃ ಪ್ರಹಾರಿಣಃ|

07127024c  ಶಂಕೇ ದೈವಸ್ಯ ತತ್ಕರ್ಮ ಪೌರುಷಂ ಯೇನ ನಾಶಿತಂ||

ಅಲ್ಪರಾಗಿದ್ದ ಅವರಿಂದ ಬಹಳವಾಗಿದ್ದ ನಾವು ಕ್ಷಯಹೊಂದುತ್ತಿದ್ದೇವೆ. ನಮ್ಮ ಪೌರುಷವನ್ನು ನಾಶಮಾಡಿದ ಇದು ದೈವದ ಕೆಲಸವೆಂದು ಶಂಕೆಯಾಗುತ್ತಿದೆ.””

07127025 ಸಂಜಯ ಉವಾಚ|

07127025a ಏವಂ ಸಂಭಾಷಮಾಣಾನಾಂ ಬಹು ತತ್ತಜ್ಜನಾಧಿಪ|

07127025c ಪಾಂಡವಾನಾಮನೀಕಾನಿ ಸಮದೃಶ್ಯಂತ ಸಂಯುಗೇ||

ಸಂಜಯನು ಹೇಳಿದನು: “ಜನಾಧಿಪ! ಹೀಗೆ ಅವರು ಬಹಳವಾಗಿ ಮಾತನಾಡಿಕೊಳ್ಳುತ್ತಿದ್ದಾಗ ಸಂಯುಗದಲ್ಲಿ ಪಾಂಡವರ ಸೇನೆಗಳು ಕಾಣಿಸಿಕೊಂಡವು.

07127026a ತತಃ ಪ್ರವವೃತೇ ಯುದ್ಧಂ ವ್ಯತಿಷಕ್ತರಥದ್ವಿಪಂ|

07127026c ತಾವಕಾನಾಂ ಪರೈಃ ಸಾರ್ಧಂ ರಾಜನ್ದುರ್ಮಂತ್ರಿತೇ ತವ||

ಆಗ ರಾಜನ್! ನಿನ್ನ ದುರ್ಮಂತ್ರದಿಂದಾದ, ನಿನ್ನವರ ಮತ್ತು ಪರರ ನಡುವೆ ರಥ-ಗಜಗಳ ಸಮ್ಮಿಶ್ರ ಯುದ್ಧವು ಪ್ರಾರಂಭವಾಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಪುನರ್ಯುದ್ಧಾರಂಭೇ ಸಪ್ತವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಪುನರ್ಯುದ್ಧಾರಂಭ ಎನ್ನುವ ನೂರಾಇಪ್ಪತ್ತೇಳನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೬೯/೧೦೦, ಅಧ್ಯಾಯಗಳು-೧೧೦೪/೧೯೯೫, ಶ್ಲೋಕಗಳು-೩೮೭೦೩/೭೩೭೮೪

Image result for lotus against white background

Comments are closed.