Drona Parva: Chapter 125

ದ್ರೋಣ ಪರ್ವ: ಜಯದ್ರಥವಧ ಪರ್ವ

೧೨೫

ದುರ್ಯೋಧನನು ಅನುತಾಪಗೊಂಡು ದ್ರೋಣನಲ್ಲಿ ಹೇಳಿಕೊಂಡಿದುದು (೧-೩೩).

07125001 ಸಂಜಯ ಉವಾಚ|

07125001a ಸೈಂಧವೇ ನಿಹತೇ ರಾಜನ್ಪುತ್ರಸ್ತವ ಸುಯೋಧನಃ|

07125001c ಅಶ್ರುಕ್ಲಿನ್ನಮುಖೋ ದೀನೋ ನಿರುತ್ಸಾಹೋ ದ್ವಿಷಜ್ಜಯೇ|

ಸಂಜಯನು ಹೇಳಿದನು: “ರಾಜನ್! ಸೈಂಧವನು ಹತನಾಗಲು ನಿನ್ನ ಪುತ್ರ ಸುಯೋಧನನು ಕಣ್ಣೀರುತುಂಬಿ, ಬೇಸರದ ಮುಖದಲ್ಲಿ ದೀನನೂ, ಶತ್ರುಗಳನ್ನು ಜಯಿಸಲು ನಿರುತ್ಸಾಹಿಯೂ ಆದನು.

07125001e ಅಮನ್ಯತಾರ್ಜುನಸಮೋ ಯೋಧೋ ಭುವಿ ನ ವಿದ್ಯತೇ||

07125002a ನ ದ್ರೋಣೋ ನ ಚ ರಾಧೇಯೋ ನಾಶ್ವತ್ಥಾಮಾ ಕೃಪೋ ನ ಚ|

07125002c ಕ್ರುದ್ಧಸ್ಯ ಪ್ರಮುಖೇ ಸ್ಥಾತುಂ ಪರ್ಯಾಪ್ತಾ ಇತಿ ಮಾರಿಷ||

ಅರ್ಜುನನ ಸಮನಾದ ಯೋಧನು ಭುವಿಯಲ್ಲಿಯೇ ಇಲ್ಲ ಮತ್ತು ಮಾರಿಷ! ಕ್ರುದ್ಧನಾದ ಅವನನ್ನು ಎದುರಿಸಿ ನಿಲ್ಲನು ದ್ರೋಣನಾಗಲೀ, ರಾಧೇಯನಾಗಲೀ, ಅಶ್ವತ್ಥಾಮನಾಗಲೀ ಪರ್ಯಾಪ್ತರಲ್ಲ ಎಂದು ಅವನು ಒಪ್ಪಿಕೊಂಡನು.

07125003a ನಿರ್ಜಿತ್ಯ ಹಿ ರಣೇ ಪಾರ್ಥಃ ಸರ್ವಾನ್ಮಮ ಮಹಾರಥಾನ್|

07125003c ಅವಧೀತ್ಸೈಂಧವಂ ಸಂಖ್ಯೇ ನೈನಂ ಕಶ್ಚಿದವಾರಯತ್||

“ನನ್ನ ಸರ್ವ ಮಹಾರಥರನ್ನೂ ರಣದಲ್ಲಿ ಸೋಲಿಸಿ ಸೈಂಧವನನ್ನು ಸಂಹರಿಸಿದನು. ರಣದಲ್ಲಿ ಯಾರೂ ಅವನನ್ನು ತಡೆಯಲಾಗಲಿಲ್ಲ.

07125004a ಸರ್ವಥಾ ಹತಮೇವೈತತ್ಕೌರವಾಣಾಂ ಮಹದ್ಬಲಂ|

07125004c ನ ಹ್ಯಸ್ಯ ವಿದ್ಯತೇ ತ್ರಾತಾ ಸಾಕ್ಷಾದಪಿ ಪುರಂದರಃ||

ಕೌರವರ ಈ ಮಹಾಸೇನೆಯು ಸರ್ವಥಾ ನಾಶವಾಗಿಹೋಯಿತು. ಸಾಕ್ಷಾತ್ ಪುರಂದರನೇ ಬಂದರೂ ಇದನ್ನು ರಕ್ಷಿಸಲಾರನು!

07125005a ಯಮುಪಾಶ್ರಿತ್ಯ ಸಂಗ್ರಾಮೇ ಕೃತಃ ಶಸ್ತ್ರಸಮುದ್ಯಮಃ|

07125005c ಸ ಕರ್ಣೋ ನಿರ್ಜಿತಃ ಸಂಖ್ಯೇ ಹತಶ್ಚೈವ ಜಯದ್ರಥಃ||

ಯಾರನ್ನು ಉಪಾಶ್ರಯಿಸಿ ನಾನು ಈ ಸಂಗ್ರಾಮಕ್ಕೆ ಶಸ್ತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆನೋ ಅದೇ ಕರ್ಣನೇ ರಣದಲ್ಲಿ ಪರಾಜಿತನಾಗಿ ಜಯದ್ರಥನು ಹತನಾದನು!

07125006a ಪರುಷಾಣಿ ಸಭಾಮಧ್ಯೇ ಪ್ರೋಕ್ತವಾನ್ಯಃ ಸ್ಮ ಪಾಂಡವಾನ್|

07125006c ಸ ಕರ್ಣೋ ನಿರ್ಜಿತಃ ಸಂಖ್ಯೇ ಸೈಂಧವಶ್ಚ ನಿಪಾತಿತಃ||

ಸಭಾಮಧ್ಯದಲ್ಲಿ ಪಾಂಡವರಿಗೆ ಕ್ರೂರವಾಗಿ ಮಾತನಾಡಿದ ಆ ಕರ್ಣನೇ ರಣದಲ್ಲಿ ಪರಾಜಿತನಾಗಿ ಜಯದ್ರಥನು ಹತನಾದನು!

07125007a ಯಸ್ಯ ವೀರ್ಯಂ ಸಮಾಶ್ರಿತ್ಯ ಶಮಂ ಯಾಚಂತಮಚ್ಯುತಂ|

07125007c ತೃಣವತ್ತಮಹಂ ಮನ್ಯೇ ಸ ಕರ್ಣೋ ನಿರ್ಜಿತೋ ಯುಧಿ||

ಯಾರ ವೀರ್ಯವನ್ನು ಆಶ್ರಯಿಸಿ ಶಾಂತಿಯನ್ನು ಯಾಚಿಸುತ್ತಿದ್ದ ಅಚ್ಯುತನನ್ನು ತೃಣಕ್ಕೆ ಸಮಾನವಾಗಿ ಕಂಡೆನೋ ಆ ಕರ್ಣನೇ ಯುದ್ಧದಲ್ಲಿ ಪರಾಜಿತನಾಗಿದ್ದಾನೆ!”

07125008a ಏವಂ ಕ್ಲಾಂತಮನಾ ರಾಜನ್ನುಪಾಯಾದ್ದ್ರೋಣಮೀಕ್ಷಿತುಂ|

07125008c ಆಗಸ್ಕೃತ್ಸರ್ವಲೋಕಸ್ಯ ಪುತ್ರಸ್ತೇ ಭರತರ್ಷಭ||

ರಾಜನ್! ಭರತರ್ಷಭ! ಹೀಗೆ ಬೇಸತ್ತ ಮನಸ್ಸಿನಿಂದ ನಿನ್ನ ಮಗನು ಸರ್ವಲೋಕವನ್ನೂ ತಿರಸ್ಕರಿಸಿ ದ್ರೋಣನನ್ನು ಕಾಣಲು ಹೋದನು.

07125009a ತತಸ್ತತ್ಸರ್ವಮಾಚಖ್ಯೌ ಕುರೂಣಾಂ ವೈಶಸಂ ಮಹತ್|

07125009c ಪರಾನ್ವಿಜಯತಶ್ಚಾಪಿ ಧಾರ್ತರಾಷ್ಟ್ರಾನ್ನಿಮಜ್ಜತಃ||

ಆಗ ಅವನಿಗೆ ಕುರುಗಳ ಮಹಾನಾಶವನ್ನೂ, ಶತ್ರುಗಳ ವಿಜಯವನ್ನೂ, ಧಾರ್ತರಾಷ್ಟ್ರರು ಶೋಕದಲ್ಲಿ ಮುಳುಗಿರುವುದನ್ನೂ ಹೇಳಿದನು.

07125010 ದುರ್ಯೋಧನ ಉವಾಚ|

07125010a ಪಶ್ಯ ಮೂರ್ಧಾವಸಿಕ್ತಾನಾಮಾಚಾರ್ಯ ಕದನಂ ಕೃತಂ|

07125010c ಕೃತ್ವಾ ಪ್ರಮುಖತಃ ಶೂರಂ ಭೀಷ್ಮಂ ಮಮ ಪಿತಾಮಹಂ||

ದುರ್ಯೋಧನನು ಹೇಳಿದನು: “ಆಚಾರ್ಯ! ನಾಯಕನಾಗಿ ಅಭಿಷೇಕಗೊಂಡು ಕದನವನ್ನಾಡಿದ ನನ್ನ ಪಿತಾಮಹ ಶೂರ ಭೀಷ್ಮನನ್ನು ನೋಡಿರಿ!

07125011a ತಂ ನಿಹತ್ಯ ಪ್ರಲುಬ್ಧೋಽಯಂ ಶಿಖಂಡೀ ಪೂರ್ಣಮಾನಸಃ|

07125011c ಪಾಂಚಾಲೈಃ ಸಹಿತಃ ಸರ್ವೈಃ ಸೇನಾಗ್ರಮಭಿಕರ್ಷತಿ||

ಅವನನ್ನು ಕೊಂದು ಪ್ರಲುಬ್ಧನಾದ ಈ ಶಿಖಂಡಿಯು ಸಂಪೂರ್ಣ ಮನಸ್ಕನಾಗಿ ಎಲ್ಲ ಪಾಂಚಾಲರೊಂದಿಗೆ ಎದಿರುನಿಂತು ಸೇನೆಗಳನ್ನು ನಡೆಸುತ್ತಿದ್ದಾನೆ!

07125012a ಅಪರಶ್ಚಾಪಿ ದುರ್ಧರ್ಷಃ ಶಿಷ್ಯಸ್ತೇ ಸವ್ಯಸಾಚಿನಾ|

07125012c ಅಕ್ಷೌಹಿಣೀಃ ಸಪ್ತ ಹತ್ವಾ ಹತೋ ರಾಜಾ ಜಯದ್ರಥಃ||

ಅನಂತರವೂ ಕೂಡ ನಿಮ್ಮ ಶಿಷ್ಯ ದುರ್ಧರ್ಷ ಸವ್ಯಸಾಚಿಯು ಏಳು ಅಕ್ಷೌಹಿಣಿಗಳನ್ನು ಸಂಹರಿಸಿ, ರಾಜಾ ಜಯದ್ರಥನನ್ನು ವಧಿಸಿದನು.

07125013a ಅಸ್ಮದ್ವಿಜಯಕಾಮಾನಾಂ ಸುಹೃದಾಮುಪಕಾರಿಣಾಂ|

07125013c ಗಂತಾಸ್ಮಿ ಕಥಮಾನೃಣ್ಯಂ ಗತಾನಾಂ ಯಮಸಾದನಂ||

ನಮಗೆ ವಿಜಯವನ್ನು ಬಯಸಿ ಯಮಸಾದನಕ್ಕೆ ಹೋದ ಆ ಉಪಕಾರೀ ಸುಹೃದಯರ ಋಣವನ್ನು ಹೇಗೆ ತೀರಿಸಲಿ?

07125014a ಯೇ ಮದರ್ಥಂ ಪರೀಪ್ಸಂತಿ ವಸುಧಾಂ ವಸುಧಾಧಿಪಾಃ|

07125014c ತೇ ಹಿತ್ವಾ ವಸುಧೈಶ್ವರ್ಯಂ ವಸುಧಾಮಧಿಶೇರತೇ||

ನನಗಾಗಿ ಈ ವಸುಂಧರೆಯನ್ನು ಯಾರು ಬಯಸಿದ್ದರೋ ಆ ವಸುಧಾಧಿಪರೇ ಈ ವಸುಧೆಯ ಐಶ್ವರ್ಯವನ್ನು ತೊರೆದು ವಸುಧೆಯ ಮೇಲೆ ಮಲಗಿದ್ದಾರೆ!

07125015a ಸೋಽಹಂ ಕಾಪುರುಷಃ ಕೃತ್ವಾ ಮಿತ್ರಾಣಾಂ ಕ್ಷಯಮೀದೃಶಂ|

07125015c ನಾಶ್ವಮೇಧಸಹಸ್ರೇಣ ಪಾತುಮಾತ್ಮಾನಮುತ್ಸಹೇ||

ಮಿತ್ರರ ಈ ರೀತಿಯ ವಿನಾಶವನ್ನೆಸಗಿ ಹೇಡಿಯಾದ ನಾನು ಸಹಸ್ರ ಅಶ್ವಮೇಧಗಳನ್ನು ಮಾಡಿಯೂ ನನ್ನ ಈ ಪಾಪವನ್ನು ತೊಳೆದು ಪುನೀತನಾಗಲಾರೆನು.

07125016a ಮಮ ಲುಬ್ಧಸ್ಯ ಪಾಪಸ್ಯ ತಥಾ ಧರ್ಮಾಪಚಾಯಿನಃ|

07125016c ವ್ಯಾಯಚ್ಚಂತೋ ಜಿಗೀಷಂತಃ ಪ್ರಾಪ್ತಾ ವೈವಸ್ವತಕ್ಷಯಂ||

ಲುಬ್ಧನಾದ, ಪಾಪಿಯಾದ, ಮತ್ತು ಧರ್ಮನಾಶಕನಾದ ನನಗೆ ವಿಜಯವನ್ನು ಬಯಸಿ ಹೋರಾಡುತ್ತಿದ್ದವರು ಯಮಲೋಕಕ್ಕೆ ಹೊರಟುಹೋದರು.

07125017a ಕಥಂ ಪತಿತವೃತ್ತಸ್ಯ ಪೃಥಿವೀ ಸುಹೃದಾಂ ದ್ರುಹಃ|

07125017c ವಿವರಂ ನಾಶಕದ್ದಾತುಂ ಮಮ ಪಾರ್ಥಿವಸಂಸದಿ||

ಪತಿತನಂತೆ ನಡೆದುಕೊಂಡಿರುವ, ಸುಹೃದರಿಗೆ ದ್ರೋಹವನ್ನೆಸಗಿದ ನನಗೆ ಪಾರ್ಥಿವಸಂಸದಿಯಲ್ಲಿ ಈ ಭೂಮಿಯು ಏಕೆ ಸೀಳಿಹೋಗಿ ಅವಕಾಶಮಾಡಿಕೊಡುವುದಿಲ್ಲ?

07125018a ಸೋಽಹಂ ರುಧಿರಸಿಕ್ತಾಂಗಂ ರಾಜ್ಞಾಂ ಮಧ್ಯೇ ಪಿತಾಮಹಂ|

07125018c ಶಯಾನಂ ನಾಶಕಂ ತ್ರಾತುಂ ಭೀಷ್ಮಮಾಯೋಧನೇ ಹತಂ||

ರಾಜರ ಮಧ್ಯೆ ಯುದ್ಧಮಾಡುತ್ತಾ, ಅವನ ಅಂಗಗಳು ರಕ್ತದಿಂದ ತೋಯುತ್ತಿರಲು ಪಿತಾಮಹ ಭೀಷ್ಮನು ಹತನಾಗಿ ಮಲಗಿದಾಗ ನಾನು ಅವನನ್ನು ರಕ್ಷಿಸಲು ಶಕ್ತನಾಗಲಿಲ್ಲ.

07125019a ತಂ ಮಾಮನಾರ್ಯಪುರುಷಂ ಮಿತ್ರದ್ರುಹಮಧಾರ್ಮಿಕಂ|

07125019c ಕಿಂ ಸ ವಕ್ಷ್ಯತಿ ದುರ್ಧರ್ಷಃ ಸಮೇತ್ಯ ಪರಲೋಕಜಿತ್||

ಆ ದುರ್ಧರ್ಷ ಪರಲೋಕವನ್ನು ಜಯಿಸಿರುವವನು ಈ ಅನಾರ್ಯಪುರುಷ, ಮಿತ್ರದ್ರೋಹಿ, ಅಧಾರ್ಮಿಕ ನನಗೆ ಏನು ಹೇಳಿಯಾನು?

07125020a ಜಲಸಂಧಂ ಮಹೇಷ್ವಾಸಂ ಪಶ್ಯ ಸಾತ್ಯಕಿನಾ ಹತಂ|

07125020c ಮದರ್ಥಮುದ್ಯತಂ ಶೂರಂ ಪ್ರಾಣಾಂಸ್ತ್ಯಕ್ತ್ವಾ ಮಹಾರಥಂ||

ನನಗಾಗಿ ಪ್ರಾಣವನ್ನು ತ್ಯಜಿಸಿ ಹೋರಾಡಿದ ಮಹಾರಥ ಶೂರ ಮಹೇಷ್ವಾಸ ಜಲಸಂಧನನ್ನು ಸಾತ್ಯಕಿಯು ಸಂಹರಿಸಿದುದನ್ನು ನೋಡು!

07125021a ಕಾಂಬೋಜಂ ನಿಹತಂ ದೃಷ್ಟ್ವಾ ತಥಾಲಂಬುಸಮೇವ ಚ|

07125021c ಅನ್ಯಾನ್ಬಹೂಂಶ್ಚ ಸುಹೃದೋ ಜೀವಿತಾರ್ಥೋಽದ್ಯ ಕೋ ಮಮ||

ಕಾಂಬೋಜ, ಅಲಂಬುಸ ಮತ್ತು ಇನ್ನೂ ಅನೇಕ ಸುಹೃದಯರು ಹತರಾದುದನ್ನು ನೋಡಿ ಇಂದು ನಾನು ಬದುಕಿರುವುದರ ಅರ್ಥವೇನು?

07125022a ವ್ಯಾಯಚ್ಚಂತೋ ಹತಾಃ ಶೂರಾ ಮದರ್ಥೇ ಯೇಽಪರಾಙ್ಮುಖಾಃ|

07125022c ಯತಮಾನಾಃ ಪರಂ ಶಕ್ತ್ಯಾ ವಿಜೇತುಮಹಿತಾನ್ಮಮ||

ನನ್ನ ವಿಜಯಕ್ಕಾಗಿ ಹಿತಕ್ಕಾಗಿ ಪರಾಙ್ಮುಖರಾಗದೇ ಪರಮ ಶಕ್ತಿಯಿಂದ ಪ್ರಯತ್ನಮಾಡಿದ ಶೂರರು ಹತರಾದರು.

07125023a ತೇಷಾಂ ಗತ್ವಾಹಮಾನೃಣ್ಯಮದ್ಯ ಶಕ್ತ್ಯಾ ಪರಂತಪ|

07125023c ತರ್ಪಯಿಷ್ಯಾಮಿ ತಾನೇವ ಜಲೇನ ಯಮುನಾಮನು||

ಪರಂತಪ! ಇಂದು ಹೊರಟುಹೋಗಿರುವ ಅವರ ಋಣವನ್ನು ನಾನು ಶಕ್ತಿಯಿಂದ ಯಮುನೆಯ ಜಲದಿಂದ ತರ್ಪಣಗಳನ್ನಿತ್ತು ತೀರಿಸಿಕೊಳ್ಳುತ್ತೇನೆ.

07125024a ಸತ್ಯಂ ತೇ ಪ್ರತಿಜಾನಾಮಿ ಸರ್ವಶಸ್ತ್ರಭೃತಾಂ ವರ|

07125024c ಇಷ್ಟಾಪೂರ್ತೇನ ಚ ಶಪೇ ವೀರ್ಯೇಣ ಚ ಸುತೈರಪಿ||

ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನೇ! ನಿನಗೆ ಸತ್ಯವಾದುದನ್ನು ಪ್ರತಿಜ್ಞೆಮಾಡಿ ಹೇಳುತ್ತೇನೆ. ನನ್ನ ವೀರ್ಯ ಮತ್ತು ಸುತರ ಮೇಲೆ ಆಣೆಯಿಟ್ಟು ಇಷ್ಟಾಪೂರ್ತಿಯಿಂದ ಶಪಥ ಮಾಡುತ್ತೇನೆ.

07125025a ನಿಹತ್ಯ ತಾನ್ರಣೇ ಸರ್ವಾನ್ಪಾಂಚಾಲಾನ್ಪಾಂಡವೈಃ ಸಹ|

07125025c ಶಾಂತಿಂ ಲಬ್ಧಾಸ್ಮಿ ತೇಷಾಂ ವಾ ರಣೇ ಗಂತಾ ಸಲೋಕತಾಂ||

ರಣದಲ್ಲಿ ಆ ಎಲ್ಲ ಪಾಂಚಾಲರನ್ನೂ ಪಾಂಡವರೊಂದಿಗೆ ಸಂಹರಿಸಿ ಶಾಂತಿಯನ್ನು ಪಡೆಯುತ್ತೇನೆ ಅಥವಾ ಅವರು ಹೋಗಿರುವ ಲೋಕಗಳಿಗೆ ಹೋಗುತ್ತೇನೆ.

07125026a ನ ಹೀದಾನೀಂ ಸಹಾಯಾ ಮೇ ಪರೀಪ್ಸಂತ್ಯನುಪಸ್ಕೃತಾಃ|

07125026c ಶ್ರೇಯೋ ಹಿ ಪಾಂಡೂನ್ಮನ್ಯಂತೇ ನ ತಥಾಸ್ಮಾನ್ಮಹಾಭುಜ||

ಮಹಾಭುಜ! ನನ್ನನ್ನು ಅನುಸರಿಸಿಬಂದವರು ಈಗ ನನಗೆ ಸಹಾಯವನ್ನು ಮಾಡಲು ಬಯಸುತ್ತಿಲ್ಲ. ಏಕೆಂದರೆ ಈಗ ಅವರು ನಮ್ಮನ್ನಲ್ಲ - ಪಾಂಡವರನ್ನೇ ಶ್ರೇಷ್ಠರೆಂದು ತಿಳಿದಿದ್ದಾರೆ.

07125027a ಸ್ವಯಂ ಹಿ ಮೃತ್ಯುರ್ವಿಹಿತಃ ಸತ್ಯಸಂಧೇನ ಸಂಯುಗೇ|

07125027c ಭವಾನುಪೇಕ್ಷಾಂ ಕುರುತೇ ಸುಶಿಷ್ಯತ್ವಾದ್ಧನಂಜಯೇ||

ಆ ಸತ್ಯಸಂಧ ಭೀಷ್ಮನು ಸಂಯುಗದಲ್ಲಿ ತಾನೇ ತನಗೆ ಮೃತ್ಯುವನ್ನು ತಂದುಕೊಂಡನು. ನೀವು ನಿಮ್ಮ ಪ್ರಿಯ ಶಿಷ್ಯ ಧನಂಜಯನಿಂದಾಗಿ ಉಪೇಕ್ಷೆ ಮಾಡುತ್ತಿದ್ದೀರಿ.

07125028a ಅತೋ ವಿನಿಹತಾಃ ಸರ್ವೇ ಯೇಽಸ್ಮಜ್ಜಯಚಿಕೀರ್ಷವಃ|

07125028c ಕರ್ಣಮೇವ ತು ಪಶ್ಯಾಮಿ ಸಂಪ್ರತ್ಯಸ್ಮಜ್ಜಯೈಷಿಣಂ||

ನಮಗೆ ಜಯವನ್ನು ಬಯಸಿದವರೆಲ್ಲರೂ ಈಗ ಹತರಾಗಿಬಿಟ್ಟಿದ್ದಾರೆ. ಆದರೆ ಸದ್ಯದಲ್ಲಿ ಕರ್ಣನಲ್ಲಿ ಮಾತ್ರ ನನಗೆ ಜಯವನ್ನು ತರುವ ಬಯಕೆಯನ್ನು ಕಾಣುತ್ತಿದ್ದೇನೆ.

07125029a ಯೋ ಹಿ ಮಿತ್ರಮವಿಜ್ಞಾಯ ಯಾಥಾತಥ್ಯೇನ ಮಂದಧೀಃ|

07125029c ಮಿತ್ರಾರ್ಥೇ ಯೋಜಯತ್ಯೇನಂ ತಸ್ಯ ಸೋಽರ್ಥೋಽವಸೀದತಿ||

ಯಾವ ಮಂದಬುದ್ಧಿಯು ಮಿತ್ರನು ಹೇಗಿದ್ದಾನೆಂದು ಸರಿಯಾಗಿ ತಿಳಿದುಕೊಳ್ಳದೇ ಮಿತ್ರರು ಮಾಡುವ ಕೆಲಸವನ್ನು ಅವನಿಗೆ ವಹಿಸಿದರೆ ಅದು ಹಾಳಾಗಿ ಹೋಗುತ್ತದೆ.

07125030a ತಾದೃಗ್ರೂಪಮಿದಂ ಕಾರ್ಯಂ ಕೃತಂ ಮಮ ಸುಹೃದ್ಬ್ರುವೈಃ|

07125030c ಮೋಹಾಲ್ಲುಬ್ಧಸ್ಯ ಪಾಪಸ್ಯ ಜಿಹ್ಮಾಚಾರೈಸ್ತತಸ್ತತಃ||

ಲುಬ್ಧ, ಪಾಪಿ, ಕುಟಿಲ, ಧನಲೋಭಿಯಾದ ನನ್ನ ಕಾರ್ಯಗಳೂ ಸುಹೃದಯರೆಂದು ಹೇಳಿಸಿಕೊಳ್ಳುವವರಿಂದ ಹೀಗೆಯೇ ಹಾಳಾಗಿ ಹೋಯಿತು.

07125031a ಹತೋ ಜಯದ್ರಥಶ್ಚೈವ ಸೌಮದತ್ತಿಶ್ಚ ವೀರ್ಯವಾನ್|

07125031c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ||

ಜಯದ್ರಥ, ವೀರ್ಯವಾನ್ ಸೌಮದತ್ತಿ, ಅಭೀಷಾಹರು, ಶೂರಸೇನರು, ಶಿಬಿಗಳು ಮತ್ತು ವಸಾಹತರು ಹತರಾದರು.

07125032a ಸೋಽಹಮದ್ಯ ಗಮಿಷ್ಯಾಮಿ ಯತ್ರ ತೇ ಪುರುಷರ್ಷಭಾಃ|

07125032c ಹತಾ ಮದರ್ಥಂ ಸಂಗ್ರಾಮೇ ಯುಧ್ಯಮಾನಾಃ ಕಿರೀಟಿನಾ||

ನನಗಾಗಿ ಸಂಗ್ರಾಮದಲ್ಲಿ ಹೋರಾಡುತ್ತಾ ಆ ಪುರುಷರ್ಷಭರು ಕಿರೀಟಿಯಿಂದ ಹತರಾಗಿ ಎಲ್ಲಿಗೆ ಹೋಗಿರುವರೋ ಅಲ್ಲಿಗೆ ನಾನೂ ಕೂಡ ಇಂದು ಹೋಗುತ್ತೇನೆ.

07125033a ನ ಹಿ ಮೇ ಜೀವಿತೇನಾರ್ಥಸ್ತಾನೃತೇ ಪುರುಷರ್ಷಭಾನ್|

07125033c ಆಚಾರ್ಯಃ ಪಾಂಡುಪುತ್ರಾಣಾಮನುಜಾನಾತು ನೋ ಭವಾನ್||

ಆ ಪುರುಷರ್ಷಭರು ಇಲ್ಲದೇ ನಾನು ಬದುಕಿರುವುದರಲ್ಲಿ ಅರ್ಥವಿಲ್ಲ. ಪಾಂಡುಪುತ್ರರ ಆಚಾರ್ಯರಾದ ನೀವು ನನಗೆ ಅನುಮತಿಯನ್ನು ನೀಡಬೇಕು.””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಾನುತಾಪೇ ಪಂಚವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಾನುತಾಪ ಎನ್ನುವ ನೂರಾಇಪ್ಪತ್ತೈದನೇ ಅಧ್ಯಾಯವು.

Image result for lotus against white background

Comments are closed.