Drona Parva: Chapter 119

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೯

ಸಾತ್ಯಕಿ-ಭೂರಿಶ್ರವಸರ ಉತ್ಪತ್ತಿ; ವೃಷ್ಣಿಗಳ ಪ್ರಶಂಸೆ (೧-೨೮).

07119001 ಧೃತರಾಷ್ಟ್ರ ಉವಾಚ|

07119001a ಅಜಿತೋ ದ್ರೋಣರಾಧೇಯವಿಕರ್ಣಕೃತವರ್ಮಭಿಃ|

07119001c ತೀರ್ಣಃ ಸೈನ್ಯಾರ್ಣವಂ ವೀರಃ ಪ್ರತಿಶ್ರುತ್ಯ ಯುಧಿಷ್ಠಿರೇ||

ಧೃತರಾಷ್ಟ್ರನು ಹೇಳಿದನು: “ಯುಧಿಷ್ಠಿರನಿಗೆ ಪ್ರತಿಯಾಗಿ ಹೇಳಿ ಆ ವೀರನು ದ್ರೋಣ-ರಾಧೇಯ-ವಿಕರ್ಣ-ಕೃತವರ್ಮರಿಗೂ ಸೋಲದೇ ಆ ಸೈನ್ಯವೆಂಬ ಸಾಗರವನ್ನು ದಾಟಿದನು.

07119002a ಸ ಕಥಂ ಕೌರವೇಯೇಣ ಸಮರೇಷ್ವನಿವಾರಿತಃ|

07119002c ನಿಗೃಹ್ಯ ಭೂರಿಶ್ರವಸಾ ಬಲಾದ್ಭುವಿ ನಿಪಾತಿತಃ||

ಸಮರದಲ್ಲಿ ಕೌರವೇಯರ್ಯಾರಿಂದಲೂ ತಡೆಯಲ್ಪಡದ ಅವನು ಹೇಗೆ ತಾನೇ ಭೂರಿಶ್ರವಸನ ಹಿಡಿತಕ್ಕೆ ಬಂದು ಬಲಾತ್ಕಾರವಾಗಿ ಭೂಮಿಯ ಮೇಲೆ ಕೆಡವಲ್ಪಟ್ಟನು?”

07119003 ಸಂಜಯ ಉವಾಚ|

07119003a ಶೃಣು ರಾಜನ್ನಿಹೋತ್ಪತ್ತಿಂ ಶೈನೇಯಸ್ಯ ಯಥಾ ಪುರಾ|

07119003c ಯಥಾ ಚ ಭೂರಿಶ್ರವಸೋ ಯತ್ರ ತೇ ಸಂಶಯೋ ನೃಪ||

ಸಂಜಯನು ಹೇಳಿದನು: “ರಾಜನ್! ನೃಪ! ನಿನಗೆ ಏನು ಸಂಶಯವಿದೆಯೋ ಅದನ್ನು ಹಿಂದೆ ನಡೆದ ಶೈನೇಯನ ಮತ್ತು ಭೂರಿಶ್ರವಸನ ಉತ್ಪತ್ತಿಯ ಕುರಿತು ಹೇಳಿ ಹೋಗಲಾಡಿಸುತ್ತೇನೆ. ಕೇಳು.

07119004a ಅತ್ರೇಃ ಪುತ್ರೋಽಭವತ್ಸೋಮಃ ಸೋಮಸ್ಯ ತು ಬುಧಃ ಸ್ಮೃತಃ|

07119004c ಬುಧಸ್ಯಾಸೀನ್ಮಹೇಂದ್ರಾಭಃ ಪುತ್ರ ಏಕಃ ಪುರೂರವಾಃ||

ಅತ್ರಿಯ ಮಗನು ಸೋಮ. ಸೋಮನ ಮಗ ಬುಧನೆಂದು ಕೇಳಿದ್ದೇವೆ. ಬುಧನಿಗೆ ಮಹೇಂದ್ರ ಪ್ರಕಾಶದ ಪುರೂರವನೆಂಬ ಒಬ್ಬ ಮಗನಿದ್ದನು.

07119005a ಪುರೂರವಸ ಆಯುಸ್ತು ಆಯುಷೋ ನಹುಷಃ ಸ್ಮೃತಃ|

07119005c ನಹುಷಸ್ಯ ಯಯಾತಿಸ್ತು ರಾಜರ್ಷಿರ್ದೇವಸಮ್ಮಿತಃ||

ಪುರೂರವನ ಮಗ ಆಯು. ಆಯುವಿನ ಮಗ ನಹುಷನೆಂದು ಹೇಳುತ್ತಾರೆ. ನಹುಷನಿಗೆ ಯಯಾತಿ – ರಾಜರ್ಷಿ ದೇವಸಮ್ಮಿತ - ಮಗನು.

07119006a ಯಯಾತೇದೇವಯಾನ್ಯಾಂ ತು ಯದುರ್ಜ್ಯೇಷ್ಠೋಽಭವತ್ಸುತಃ|

07119006c ಯದೋರಭೂದನ್ವವಾಯೇ ದೇವಮೀಢ ಇತಿ ಶ್ರುತಃ||

ಯಯಾತಿಗೆ ದೇವಯಾನಿಯಲ್ಲಿ ಯದುವೆಂಬ ಜ್ಯೇಷ್ಠಮಗನಾದನು. ಯದುವಿನ ವಂಶದಲ್ಲಿ ದೇವಮೀಢನೆಂಬ ಪ್ರಸಿದ್ಧನಾದವನು ಹುಟ್ಟಿದನು.

07119007a ಯಾದವಸ್ತಸ್ಯ ಚ ಸುತಃ ಶೂರಸ್ತ್ರೈಲೋಕ್ಯಸಮ್ಮತಃ|

07119007c ಶೂರಸ್ಯ ಶೌರಿರ್ನೃವರೋ ವಸುದೇವೋ ಮಹಾಯಶಾಃ||

ಯಾದವನಾದ ಅವನ ಮಗನೇ ತ್ರೈಲೋಕ್ಯಸಮ ಶೂರ. ಶೂರನ ಮಗ ಶೌರಿ - ವಾಸುದೇವನೆಂದೂ ಪ್ರಸಿದ್ಧನಾದವನು.

07119008a ಧನುಷ್ಯನವರಃ ಶೂರಃ ಕಾರ್ತವೀರ್ಯಸಮೋ ಯುಧಿ|

07119008c ತದ್ವೀರ್ಯಶ್ಚಾಪಿ ತತ್ರೈವ ಕುಲೇ ಶಿನಿರಭೂನ್ನೃಪಃ||

ಅವನು ಧನುರ್ವಿದ್ಯೆಯಲ್ಲಿ ಶ್ರೇಷ್ಠನೂ, ಯುದ್ಧದಲ್ಲಿ ಕಾರ್ತವೀರ್ಯಸಮನೂ ಆಗಿದ್ದನು. ಅದೇ ವೀರ್ಯ ಕುಲದಲ್ಲಿ ಶಿನಿಯೆಂಬ ರಾಜನೂ ಹುಟ್ಟಿದನು.

07119009a ಏತಸ್ಮಿನ್ನೇವ ಕಾಲೇ ತು ದೇವಕಸ್ಯ ಮಹಾತ್ಮನಃ|

07119009c ದುಹಿತುಃ ಸ್ವಯಂವರೇ ರಾಜನ್ಸರ್ವಕ್ಷತ್ರಸಮಾಗಮೇ||

ರಾಜನ್! ಇದೇ ಸಮಯದಲ್ಲಿ ಮಹಾತ್ಮ ದೇವಕನ ಮಗಳ ಸ್ವಯಂವರಕ್ಕೆ ಸರ್ವ ಕ್ಷತ್ರಿಯರೂ ಬಂದು ಸೇರಿದ್ದರು.

07119010a ತತ್ರ ವೈ ದೇವಕೀಂ ದೇವೀಂ ವಸುದೇವಾರ್ಥಮಾಪ್ತವಾನ್|

07119010c ನಿರ್ಜಿತ್ಯ ಪಾರ್ಥಿವಾನ್ಸರ್ವಾನ್ರಥಮಾರೋಪಯಚ್ಚಿನಿಃ||

ಅಲ್ಲಿ ದೇವೀ ದೇವಕಿಯನ್ನು ವಸುದೇವನಿಗೋಸ್ಕರವಾಗಿ ಶಿನಿಯು ಸರ್ವ ಪಾರ್ಥಿವರನ್ನೂ ಸೋಲಿಸಿ ತನ್ನ ರಥದ ಮೇಲೆ ಏರಿಸಿಕೊಂಡನು.

07119011a ತಾಂ ದೃಷ್ಟ್ವಾ ದೇವಕೀಂ ಶೌರೇ ರಥಸ್ಥಾಂ ಪುರುಷರ್ಷಭಃ|

07119011c ನಾಮೃಷ್ಯತ ಮಹಾತೇಜಾಃ ಸೋಮದತ್ತಃ ಶಿನೇರ್ನೃಪ||

ಶೌರಿ ಶಿನಿಯ ರಥದಲ್ಲಿ ದೇವಕಿಯನ್ನು ಕಂಡು ಪುರುಷರ್ಷಭ  ಮಹಾತೇಜಸ್ವಿ ನೃಪ ಸೋಮದತ್ತನು ಸಹಿಸಿಕೊಳ್ಳಲಿಲ್ಲ.

07119012a ತಯೋರ್ಯುದ್ಧಮಭೂದ್ರಾಜನ್ದಿನಾರ್ಧಂ ಚಿತ್ರಮದ್ಭುತಂ|

07119012c ಬಾಹುಯುದ್ಧಂ ಸುಬಲಿನೋಃ ಶಕ್ರಪ್ರಹ್ರಾದಯೋರಿವ||

ರಾಜನ್! ಅವರಿಬ್ಬರು ಬಲಶಾಲಿಗಳ ನಡುವೆ ಶಕ್ರ-ಪ್ರಹ್ರಾದರ ನಡುವೆ ಹೇಗೋ ಹಾಗೆ ಅರ್ಧದಿನದ ವಿಚಿತ್ರವೂ ಅದ್ಭುತವೂ ಆದ ಬಾಹುಯುದ್ಧವು ನಡೆಯಿತು.

07119013a ಶಿನಿನಾ ಸೋಮದತ್ತಸ್ತು ಪ್ರಸಹ್ಯ ಭುವಿ ಪಾತಿತಃ|

07119013c ಅಸಿಮುದ್ಯಮ್ಯ ಕೇಶೇಷು ಪ್ರಗೃಹ್ಯ ಚ ಪದಾ ಹತಃ||

ಶಿನಿಯು ಜೋರಾಗಿ ನಗುತ್ತಾ ಸೋಮದತ್ತನನ್ನು ನೆಲದ ಮೇಲೆ ಕೆಡವಿ ಕೂದಲುಗಳನ್ನು ಹಿಡಿದು ಖಡ್ಗವನ್ನೆತ್ತಿ ಕಾಲಿನಿಂದ ಒದೆದನು.

07119014a ಮಧ್ಯೇ ರಾಜಸಹಸ್ರಾಣಾಂ ಪ್ರೇಕ್ಷಕಾಣಾಂ ಸಮಂತತಃ|

07119014c ಕೃಪಯಾ ಚ ಪುನಸ್ತೇನ ಜೀವೇತಿ ಸ ವಿಸರ್ಜಿತಃ||

ಸುತ್ತಲೂ ನೆರೆದಿದ್ದ ಸಹಸ್ರಾರು ರಾಜರುಗಳು ನೋಡುತ್ತಿರಲು ಮಧ್ಯದಲ್ಲಿದ್ದ ಅವನನ್ನು “ಪುನಃ ಜೀವಿಸು!” ಎಂದು ಹೇಳಿ ಬಿಟ್ಟುಬಿಟ್ಟನು.

07119015a ತದವಸ್ಥಃ ಕೃತಸ್ತೇನ ಸೋಮದತ್ತೋಽಥ ಮಾರಿಷ|

07119015c ಪ್ರಸಾದಯನ್ಮಹಾದೇವಮಮರ್ಷವಶಮಾಸ್ಥಿತಃ||

ಮಾರಿಷ! ಅವನಿಂದ ಆ ಅವಸ್ಥೆಗೆ ತರಿಸಲ್ಪಟ್ಟ ಸೋಮದತ್ತನು ಕೋಪಾವಿಷ್ಟನಾಗಿ ಮಹಾದೇವನನ್ನು ಒಲಿಸಿದನು.

07119016a ತಸ್ಯ ತುಷ್ಟೋ ಮಹಾದೇವೋ ವರಾಣಾಂ ವರದಃ ಪ್ರಭುಃ|

07119016c ವರೇಣ ಚಂದಯಾಮಾಸ ಸ ತು ವವ್ರೇ ವರಂ ನೃಪಃ||

ಆಗ ವರಗಳ ವರದ ಪ್ರಭು ಮಹಾದೇವನು ಅವನ ಮೇಲೆ ತುಷ್ಟನಾಗಿ ವರವನ್ನು ನೀಡಲು ಆ ನೃಪನು ಈ ವರವನ್ನು ಬೇಡಿಕೊಂಡನು:

07119017a ಪುತ್ರಮಿಚ್ಚಾಮಿ ಭಗವನ್ಯೋ ನಿಹನ್ಯಾಚ್ಚಿನೇಃ ಸುತಂ[1]|

07119017c ಮಧ್ಯೇ ರಾಜಸಹಸ್ರಾಣಾಂ ಪದಾ ಹನ್ಯಾಚ್ಚ ಸಂಯುಗೇ||

“ಭಗವನ್! ರಾಜಸಹಸ್ರರ ಮಧ್ಯೆ ಶಿನಿಯ ಮಗನನ್ನು ಸಂಯುಗದಲ್ಲಿ ಕಾಲಿನಿಂದ ಒದೆದು ಸಂಹರಿಸುವಂಥಹ ಮಗನನ್ನು ಬಯಸುತ್ತೇನೆ.”

07119018a ತಸ್ಯ ತದ್ವಚನಂ ಶ್ರುತ್ವಾ ಸೋಮದತ್ತಸ್ಯ ಪಾರ್ಥಿವ|

07119018c ಏವಮಸ್ತ್ವಿತಿ ತತ್ರೋಕ್ತ್ವಾ ಸ ದೇವೋಽಂತರಧೀಯತ||

ಪಾರ್ಥಿವ! ಸೋಮದತ್ತನ ಆ ಮಾತನ್ನು ಕೇಳಿ “ಹೀಗೆಯೇ ಆಗಲಿ!” ಎಂದು ಹೇಳಿ ದೇವನು ಅಂತರ್ಧಾನನಾದನು.

07119019a ಸ ತೇನ ವರದಾನೇನ ಲಬ್ಧವಾನ್ಭೂರಿದಕ್ಷಿಣಂ|

07119019c ನ್ಯಪಾತಯಚ್ಚ ಸಮರೇ ಸೌಮದತ್ತಿಃ ಶಿನೇಃ ಸುತಂ||

ಅದೇ ವರದಾನದಿಂದ ಅವನು ಭೂರಿದಕ್ಷಿಣನನ್ನು ಪಡೆದನು. ಮತ್ತು ಸಮರದಲ್ಲಿ ಸೌಮದತ್ತಿಯು ಶಿನಿಯ ಮಗನನ್ನು ಕೆಡವಿದನು.

07119020a ಏತತ್ತೇ ಕಥಿತಂ ರಾಜನ್ಯನ್ಮಾಂ ತ್ವಂ ಪರಿಪೃಚ್ಚಸಿ|

07119020c ನ ಹಿ ಶಕ್ಯಾ ರಣೇ ಜೇತುಂ ಸಾತ್ವತಾ ಮನುಜರ್ಷಭ||

ರಾಜನ್! ಕೇಳಿದೆಯೆಂದು ನಾನು ನಿನಗೆ ಈ ಕಥೆಯನ್ನು ಹೇಳಿದ್ದೇನೆ. ಮನುಜರ್ಷಭ! ರಣದಲ್ಲಿ ಸಾತ್ವತನನ್ನು ಗೆಲ್ಲುವುದು ಶಕ್ಯವಿಲ್ಲ.

07119021a ಲಬ್ಧಲಕ್ಷ್ಯಾಶ್ಚ ಸಂಗ್ರಾಮೇ ಬಹವಶ್ಚಿತ್ರಯೋಧಿನಃ|

07119021c ದೇವದಾನವಗಂಧರ್ವಾನ್ವಿಜೇತಾರೋ ಹ್ಯವಿಸ್ಮಿತಾಃ|

07119021e ಸ್ವವೀರ್ಯವಿಜಯೇ ಯುಕ್ತಾ ನೈತೇ ಪರಪರಿಗ್ರಹಾಃ||

ಸಂಗ್ರಾಮದಲ್ಲಿ ಲಕ್ಷ್ಯವನ್ನು ಹಿಡಿದಿಟ್ಟುಕೊಳ್ಳುವವರೂ, ಬಹಳ ವಿಚಿತ್ರ ಯೋಧಿಗಳೂ ಆದ ಇವರು ದೇವ-ದಾನವ-ಗಂಧರ್ವರಿಗೂ ಅಜೇಯರು. ಆದರೂ ಇವರಲ್ಲಿ ಗರ್ವವಿಲ್ಲ. ತಮ್ಮದೇ ವೀರ್ಯವನ್ನು ಬಳಸಿ ವಿಜಯಹೊಂದುವವರು. ಪರಾಧೀನರಾಗತಕ್ಕವರಲ್ಲ.

07119022a ನ ತುಲ್ಯಂ ವೃಷ್ಣಿಭಿರಿಹ ದೃಶ್ಯತೇ ಕಿಂ ಚನ ಪ್ರಭೋ|

07119022c ಭೂತಂ ಭವ್ಯಂ ಭವಿಷ್ಯಚ್ಚ ಬಲೇನ ಭರತರ್ಷಭ||

ಭರತರ್ಷಭ! ಪ್ರಭೋ! ಬಲದಲ್ಲಿ ವೃಷ್ಣಿಗಳಿಗೆ ಸಮಾನರಾದವರು ಯಾರೂ ಇರಲಿಲ್ಲ, ಇಲ್ಲ ಮತ್ತು ಇರುವುದಿಲ್ಲ.

07119023a ನ ಜ್ಞಾತಿಮವಮನ್ಯಂತೇ ವೃದ್ಧಾನಾಂ ಶಾಸನೇ ರತಾಃ|

07119023c ನ ದೇವಾಸುರಗಂಧರ್ವಾ ನ ಯಕ್ಷೋರಗರಾಕ್ಷಸಾಃ|

07119023e ಜೇತಾರೋ ವೃಷ್ಣಿವೀರಾಣಾಂ ನ ಪುನರ್ಮಾನುಷಾ ರಣೇ||

ತಮ್ಮವರನ್ನು ಅಪಮಾನಿಸದ, ವೃದ್ಧರ ಶಾಸನದಲ್ಲಿ ನಡೆದುಕೊಳ್ಳುವ ವೃಷ್ಣಿವೀರರನ್ನು ಜಯಿಸುವವರು ದೇವ-ಅಸುರ-ಗಂಧರ್ವ-ಯಕ್ಷ-ಉರಗ-ರಾಕ್ಷಸರಲ್ಲಿ ಇಲ್ಲ. ಇನ್ನು ಮನುಷ್ಯರ ರಣದಲ್ಲಿಯೂ ಇಲ್ಲ.

07119024a ಬ್ರಹ್ಮದ್ರವ್ಯೇ ಗುರುದ್ರವ್ಯೇ ಜ್ಞಾತಿದ್ರವ್ಯೇಽಪ್ಯಹಿಂಸಕಾಃ|

07119024c ಏತೇಷಾಂ ರಕ್ಷಿತಾರಶ್ಚ ಯೇ ಸ್ಯುಃ ಕಸ್ಯಾಂ ಚಿದಾಪದಿ||

ಬ್ರಾಹ್ಮಣ-ಗುರು-ದಾಯಾದಿಗಳ ಆಸ್ತಿಗೆ ಅಸೆಪಟ್ಟು ಹಿಂಸೆಮಾಡುವವರಲ್ಲ. ಬದಲಾಗಿ ಇವರನ್ನು ರಕ್ಷಿಸುವವರು. ಆಪತ್ತಿನಲ್ಲಿ ಸಹಾಯಮಾಡುವವರು.

07119025a ಅರ್ಥವಂತೋ ನ ಚೋತ್ಸಿಕ್ತಾ ಬ್ರಹ್ಮಣ್ಯಾಃ ಸತ್ಯವಾದಿನಃ|

07119025c ಸಮರ್ಥಾನ್ನಾವಮನ್ಯಂತೇ ದೀನಾನಭ್ಯುದ್ಧರಂತಿ ಚ||

ಧನವಂತರಾಗಿದ್ದರೂ ಅಭಿಮಾನವುಳ್ಳದವರು. ಬ್ರಹ್ಮಣ್ಯರು. ಸತ್ಯವಾದಿಗಳು. ಸಮರ್ಥರನ್ನು ಅಪಮಾನಿಸದವರು. ದೀನರನ್ನು ಅಭಿವೃದ್ಧಿಗೊಳಿಸುವವರು.

07119026a ನಿತ್ಯಂ ದೇವಪರಾ ದಾಂತಾ ದಾತಾರಶ್ಚಾವಿಕತ್ಥನಾಃ|

07119026c ತೇನ ವೃಷ್ಣಿಪ್ರವೀರಾಣಾಂ ಚಕ್ರಂ ನ ಪ್ರತಿಹನ್ಯತೇ||

ನಿತ್ಯವೂ ದೇವಪರರು. ದಾಂತರು. ದಾತಾರರು. ಕೊಚ್ಚಿಕೊಳ್ಳದವರು. ಆ ವೃಷ್ಣಿಪ್ರವೀರರು ನಾಶಹೊಂದದವರು.

07119027a ಅಪಿ ಮೇರುಂ ವಹೇತ್ಕಶ್ಚಿತ್ತರೇದ್ವಾ ಮಕರಾಲಯಂ|

07119027c ನ ತು ವೃಷ್ಣಿಪ್ರವೀರಾಣಾಂ ಸಮೇತ್ಯಾಂತಂ ವ್ರಜೇನ್ನೃಪ||

ನೃಪ! ಮೇರು ಪರ್ವತವನ್ನಾದರೂ ಎತ್ತಿಬಿಡಬಹುದು. ಸಮುದ್ರವನ್ನಾದರೂ ಈಜಿ ದಾಟಬಹುದು. ಆದರೆ ವೃಷ್ಣಿಪ್ರವೀರರ ಸಂಘವನ್ನು ಗೆಲ್ಲಲಾಗದು.

07119028a ಏತತ್ತೇ ಸರ್ವಮಾಖ್ಯಾತಂ ಯತ್ರ ತೇ ಸಂಶಯೋ ವಿಭೋ|

07119028c ಕುರುರಾಜ ನರಶ್ರೇಷ್ಠ ತವ ಹ್ಯಪನಯೋ ಮಹಾನ್||

ವಿಭೋ! ಕುರುರಾಜ! ನರಶ್ರೇಷ್ಠ! ನಿನಗೆ ಸಂಶವಿರುವಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಏಕೆಂದರೆ ಇದು ನಿನ್ನ ದೊಡ್ಡ ತಪ್ಪು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರಶಂಸಾಯಾಂ ಏಕೋನವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರಶಂಸಾ ಎನ್ನುವ ನೂರಾಹತ್ತೊಂಭತ್ತನೇ ಅಧ್ಯಾಯವು.

Image result for lotus against white background

[1] ಕುಂಭಕೋಣ/ನೀಲಕಂಠೀಯಗಳಲ್ಲಿ “ಪುತ್ರಮಿಚ್ಛಾಮಿ ಭಗವನ್ನೋ ನಿಪಾತ್ಯ ಶಿನೇಃ ಸುತಂ!” ಎಂದಿದೆ. “ನಿಹನ್ಯಾ” ಎನ್ನುವುದರ ಬದಲಾಗಿ “ನಿಪಾತ್ಯ” ಎನ್ನುವುದೇ ಸರಿಯಾಗಿದ್ದಿರಬಹುದು.

Comments are closed.