Drona Parva: Chapter 115

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೫

ಸಾತ್ಯಕಿಯಿಂದ ಅಲಂಬುಸನ ವಧೆ (೧-೨೪).

07115001 ಧೃತರಾಷ್ಟ್ರ ಉವಾಚ|

07115001a ಅಹನ್ಯಹನಿ ಮೇ ದೀಪ್ತಂ ಯಶಃ ಪತತಿ ಸಂಜಯ|

07115001c ಹತಾ ಮೇ ಬಹವೋ ಯೋಧಾ ಮನ್ಯೇ ಕಾಲಸ್ಯ ಪರ್ಯಯಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ದಿನ ದಿನವೂ ನನ್ನ ಯಶಸ್ಸಿನ ದೀಪವು ಕಂದುತ್ತಿದೆ. ನನ್ನ ಬಹಳಷ್ಟು ಯೋಧರು ಹತರಾಗಿದ್ದಾರೆ. ಇದು ಕಾಲದ ಪರ್ಯಯವೆಂದು ನನಗನ್ನಿಸುತ್ತದೆ.

07115002a ಧನಂಜಯಸ್ತು ಸಂಕ್ರುದ್ಧಃ ಪ್ರವಿಷ್ಟೋ ಮಾಮಕಂ ಬಲಂ|

07115002c ರಕ್ಷಿತಂ ದ್ರೋಣಕರ್ಣಾಭ್ಯಾಮಪ್ರವೇಶ್ಯಂ ಸುರೈರಪಿ||

ದ್ರೋಣ-ಕರ್ಣಾದಿಗಳಿಂದ ರಕ್ಷಿಸಲ್ಪಟ್ಟ, ಸುರರಿಗೂ ಪ್ರವೇಶಿಸಲು ಅಸಾಧ್ಯವಾದ ನನ್ನ ಸೇನೆಯನ್ನು ಸಂಕ್ರುದ್ಧ ಧನಂಜಯನು ಪ್ರವೇಶಿಸಿಬಿಟ್ಟನು.

07115003a ತಾಭ್ಯಾಂ ಊರ್ಜಿತವೀರ್ಯಾಭ್ಯಾಮಾಪ್ಯಾಯಿತಪರಾಕ್ರಮಃ|

07115003c ಸಹಿತಃ ಕೃಷ್ಣಭೀಮಾಭ್ಯಾಂ ಶಿನೀನಾಂ ಋಷಭೇಣ ಚ||

ಕೃಷ್ಣ-ಭೀಮರ ಮತ್ತು ಶಿನಿಗಳ ವೃಷಭ ವೀರ್ಯ ಮತ್ತು ಪರಾಕ್ರಮಗಳೊಡನೆ ಸೇರಿ ಇವನ ವೀರ್ಯ ಪರಾಕ್ರಮಗಳು ಇನ್ನೂ ಹೆಚ್ಚಾಗಿವೆ.

07115004a ತದಾ ಪ್ರಭೃತಿ ಮಾ ಶೋಕೋ ದಹತ್ಯಗ್ನಿರಿವಾಶಯಂ|

07115004c ಗ್ರಸ್ತಾನ್ ಹಿ ಪ್ರತಿಪಶ್ಯಾಮಿ ಭೂಮಿಪಾಲಾನ್ಸಸೈಂಧವಾನ್||

ಆವಾಗಿನಿಂದ ಅಗ್ನಿಯಂತೆ ಶೋಕವು ನನ್ನನ್ನು ಸುಡುತ್ತಿದೆ. ಸೈಂಧವನೊಂದಿಗೆ ಎಲ್ಲ ಭೂಮಿಪಾಲರೂ ಗ್ರಸ್ತರಾಗಿರುವುದನ್ನು ನೋಡುತ್ತಿದ್ದೇನೆ.

07115005a ಅಪ್ರಿಯಂ ಸುಮಹತ್ಕೃತ್ವಾ ಸಿಂಧುರಾಜಃ ಕಿರೀಟಿನಃ|

07115005c ಚಕ್ಷುರ್ವಿಷಯಮಾಪನ್ನಃ ಕಥಂ ಮುಚ್ಯೇತ ಜೀವಿತಃ||

ಕಿರೀಟಿಗೆ ಮಹಾ ಅಪ್ರಿಯ ಕಾರ್ಯವನ್ನು ಮಾಡಿ ಸಿಂಧುರಾಜನು ಅವನ ಕಣ್ಣಿಗೆ ಬಿದ್ದು ಹೇಗೆ ತಾನೇ ಜೀವಂತ ಉಳಿದಾನು?

07115006a ಅನುಮಾನಾಚ್ಚ ಪಶ್ಯಾಮಿ ನಾಸ್ತಿ ಸಂಜಯ ಸೈಂಧವಃ|

07115006c ಯುದ್ಧಂ ತು ತದ್ಯಥಾ ವೃತ್ತಂ ತನ್ಮಮಾಚಕ್ಷ್ವ ಪೃಚ್ಚತಃ||

ಸಂಜಯ! ಅನುಮಾನದಿಂದ ನನಗೆ ಸೈಂಧವನು ಈಗಲೇ ಇಲ್ಲವಾಗಿದ್ದಾನೆ ಎಂದು ತೋರುತ್ತಿದೆ. ಯುದ್ಧವಾದರೋ ಹೇಗೆ ನಡೆಯಿತೋ ಹಾಗೆಯೇ ಕೇಳುತ್ತಿರುವ ನನಗೆ ಹೇಳು.

07115007a ಯಚ್ಚ ವಿಕ್ಷೋಭ್ಯ ಮಹತೀಂ ಸೇನಾಂ ಸಂಲೋಡ್ಯ ಚಾಸಕೃತ್|

07115007c ಏಕಃ ಪ್ರವಿಷ್ಟಃ ಸಂಕ್ರುದ್ಧೋ ನಲಿನೀಮಿವ ಕುಂಜರಃ||

07115008a ತಸ್ಯ ವೃಷ್ಣಿಪ್ರವೀರಸ್ಯ ಬ್ರೂಹಿ ಯುದ್ಧಂ ಯಥಾತಥಂ|

07115008c ಧನಂಜಯಾರ್ಥೇ ಯತ್ತಸ್ಯ ಕುಶಲೋ ಹ್ಯಸಿ ಸಂಜಯ||

ಧನಂಜಯನಿಗಾಗಿ ಪ್ರಯತ್ನಪಡುತ್ತಾ, ಸಂಕ್ರುದ್ಧ ಆನೆಯೊಂದು ಕಮಲಗಳಿಂದ ಕೂಡಿದ ಸರೋವರವನ್ನು ಹೇಗೋ ಹಾಗೆ ಮಹಾ ಸೇನೆಯನ್ನು ಅಲ್ಲೋಲಕಲ್ಲೋಲಗೊಳಿಸಿದ ಆ ವೃಷ್ಣಿಪ್ರವೀರನ ಯುದ್ಧವನ್ನು ಯಥಾವತ್ತಾಗಿ ಹೇಳು. ಸಂಜಯ! ನೀನು ಹೇಳುವುದರಲ್ಲಿ ಕುಶಲನಾಗಿದ್ದೀಯೆ.”

07115009 ಸಂಜಯ ಉವಾಚ|

07115009a ತಥಾ ತು ವೈಕರ್ತನಪೀಡಿತಂ ತಂ

         ಭೀಮಂ ಪ್ರಯಾಂತಂ ಪುರುಷಪ್ರವೀರಂ|

07115009c ಸಮೀಕ್ಷ್ಯ ರಾಜನ್ನರವೀರಮಧ್ಯೇ

         ಶಿನಿಪ್ರವೀರೋಽನುಯಯೌ ರಥೇನ||

ಸಂಜಯನು ಹೇಳಿದನು: “ರಾಜನ್! ಹಾಗೆ ವೈಕರ್ತನನಿಂದ ಪೀಡಿತನಾಗಿ ನರವೀರರ ಮಧ್ಯೆ ಹೋಗುತ್ತಿದ್ದ ಪುರುಷಪ್ರವೀರ ಭೀಮನನ್ನು ನೋಡಿ ಶಿನಿಪ್ರವೀರನು ಅವನನ್ನು ರಥದಲ್ಲಿ ಹಿಂಬಾಲಿಸಿದನು.

07115010a ನದನ್ಯಥಾ ವಜ್ರಧರಸ್ತಪಾಂತೇ

         ಜ್ವಲನ್ಯಥಾ ಜಲದಾಂತೇ ಚ ಸೂರ್ಯಃ|

07115010c ನಿಘ್ನನ್ನಮಿತ್ರಾನ್ಧನುಷಾ ದೃಢೇನ

         ಸಂಕಂಪಯಂಸ್ತವ ಪುತ್ರಸ್ಯ ಸೇನಾಂ||

ಬೇಸಗೆಯ ಅಂತ್ಯದಲ್ಲಿ ವಜ್ರಧರನು ಹೇಗೆ ಗುಡುಗುವನೋ, ಮಳೆಗಾಲದ ಅಂತ್ಯದಲ್ಲಿ ಸೂರ್ಯನು ಹೇಗೆ ಸುಡುವನೋ ಹಾಗೆ ದೃಢ ಧನುಸ್ಸಿನಿಂದ ಶತ್ರುಗಳನ್ನು ವಧಿಸುತ್ತಾ ಅವನು ನಿನ್ನ ಮಗನ ಸೇನೆಯನ್ನು ನಡುಗಿಸಿದನು.

07115011a ತಂ ಯಾಂತಮಶ್ವೈ ರಜತಪ್ರಕಾಶೈರ್

         ಆಯೋಧನೇ ನರವೀರಂ ಚರಂತಂ|

07115011c ನಾಶಕ್ನುವನ್ವಾರಯಿತುಂ ತ್ವದೀಯಾಃ

         ಸರ್ವೇ ರಥಾ ಭಾರತ ಮಾಧವಾಗ್ರ್ಯಂ||

ಭಾರತ! ಬೆಳ್ಳಿಯ ಪ್ರಕಾಶದ ಕುದುರೆಗಳೊಂದಿಗೆ ಗರ್ಜಿಸುತ್ತಾ ಬರುತ್ತಿದ್ದ, ರಣದಲ್ಲಿ ಸಂಚರಿಸುತ್ತಿದ್ದ ನರವೀರ ಮಾಧವಾಗ್ರನನ್ನು ನಿನ್ನ ಕಡೆಯ ಎಲ್ಲ ರಥರಿಗೂ ತಡೆಯಲು ಸಾದ್ಯವಾಗಲಿಲ್ಲ.

07115012a ಅಮರ್ಷಪೂರ್ಣಸ್ತ್ವನಿವೃತ್ತಯೋಧೀ

         ಶರಾಸನೀ ಕಾಂಚನವರ್ಮಧಾರೀ|

07115012c ಅಲಂಬುಸಃ ಸಾತ್ಯಕಿಂ ಮಾಧವಾಗ್ರ್ಯಂ

         ಅವಾರಯದ್ರಾಜವರೋಽಭಿಪತ್ಯ||

ಆಗ ರಾಜವರ, ಕೋಪದಿಂದ ತುಂಬಿಕೊಂಡಿದ್ದ, ಪಲಾಯನಗೈಯದ ಯೋಧ, ಧನುಸ್ಸನ್ನು ಹಿಡಿದ, ಕಾಂಚನದ ಕವಚವನ್ನು ಧರಿಸಿದ್ದ ಅಲಂಬುಸ[1]ನು ಮಾಧವಾಗ್ರ ಸಾತ್ಯಕಿಯನ್ನು ಎದುರಿಸಿ ತಡೆದನು.

07115013a ತಯೋರಭೂದ್ಭಾರತ ಸಂಪ್ರಹಾರಸ್

         ತಥಾಗತೋ ನೈವ ಬಭೂವ ಕಶ್ಚಿತ್|

07115013c ಪ್ರೈಕ್ಷಂತ ಏವಾಹವಶೋಭಿನೌ ತೌ

         ಯೋಧಾಸ್ತ್ವದೀಯಾಶ್ಚ ಪರೇ ಚ ಸರ್ವೇ||

ಅವರಿಬ್ಬರ ನಡುವೆ ಹಿಂದೆಂದೂ ನಡೆಯದ ಪ್ರಹಾರಗಳು ನಡೆದವು. ಈ ಇಬ್ಬರು ಆಹವಶೋಭರನ್ನು ನಿನ್ನವರು ಮತ್ತು ಶತ್ರುಸೇನೆಯವರು ನೋಡುತ್ತಿದ್ದರು.

07115014a ಅವಿಧ್ಯದೇನಂ ದಶಭಿಃ ಪೃಷತ್ಕೈರ್

         ಅಲಂಬುಸೋ ರಾಜವರಃ ಪ್ರಸಹ್ಯ|

07115014c ಅನಾಗತಾನೇವ ತು ತಾನ್ಪೃಷತ್ಕಾಂಶ್

         ಚಿಚ್ಚೇದ ಬಾಣೈಃ ಶಿನಿಪುಂಗವೋಽಪಿ||

ರಾಜವರ ಅಲಂಬುಸನು ಜೋರಾಗಿ ನಕ್ಕು ಅವನನ್ನು ಹತ್ತು ಪೃಷತ್ಕರಗಳಿಂದ ಹೊಡೆದನು. ಆದರೆ ಶಿನಿಪುಂಗವನು ಆ ಪೃಷತ್ಕಗಳನ್ನು ಬಂದು ತಲುಪುವುದರೊಳಗೇ ಬಾಣಗಳಿಂದ ತುಂಡರಿಸಿದನು.

07115015a ಪುನಃ ಸ ಬಾಣೈಸ್ತ್ರಿಭಿರಗ್ನಿಕಲ್ಪೈರ್

         ಆಕರ್ಣಪೂರ್ಣೈರ್ನಿಶಿತೈಃ ಸುಪುಂಖೈಃ|

07115015c ವಿವ್ಯಾಧ ದೇಹಾವರಣಂ ವಿದಾರ್ಯ

         ತೇ ಸಾತ್ಯಕೇರಾವಿವಿಶುಃ ಶರೀರಂ||

ಪುನಃ ಅವನು ಅಗ್ನಿಯಂತಿದ್ದ ಪುಂಖಗಳ ಮೂರು ನಿಶಿತ ಬಾಣಗಳನ್ನು ಆಕರ್ಣಪೂರ್ಣವಾಗಿ ಎಳೆದು ಹೊಡೆಯಲು ಅವು ಸಾತ್ಯಕಿಯ ಕವಚವನ್ನು ಸೀಳಿ ಶರೀರವನ್ನು ಪ್ರವೇಶಿಸಿದವು.

07115016a ತೈಃ ಕಾಯಮಸ್ಯಾಗ್ನ್ಯನಿಲಪ್ರಭಾವೈರ್

         ವಿದಾರ್ಯ ಬಾಣೈರಪರೈರ್ಜ್ವಲದ್ಭಿಃ|

07115016c ಆಜಘ್ನಿವಾಂಸ್ತಾನ್ರಜತಪ್ರಕಾಶಾನ್

         ಅಶ್ವಾಂಶ್ಚತುರ್ಭಿಶ್ಚತುರಃ ಪ್ರಸಹ್ಯ||

ಅನಿಲ-ಅಗ್ನಿಯರ ಪ್ರಭಾವದ ಆ ಬಾಣಗಳಿಂದ ಅವನ ದೇಹವನ್ನು ಸೀಳಿ, ಅಲಂಬುಸನು ಉರಿಯುತ್ತಿರುವ ಬಾಣಗಳಿಂದ ಅವನ ಬೆಳ್ಳಿಯ ಪ್ರಕಾಶದ ನಾಲ್ಕು ಕುದುರೆಗಳನ್ನೂ ಹೊಡೆದು ಜೋರಾಗಿ ನಕ್ಕನು.

07115017a ತಥಾ ತು ತೇನಾಭಿಹತಸ್ತರಸ್ವೀ

         ನಪ್ತಾ ಶಿನೇಶ್ಚಕ್ರಧರಪ್ರಭಾವಃ|

07115017c ಅಲಂಬುಸಸ್ಯೋತ್ತಮವೇಗವದ್ಭಿರ್

         ಹಯಾಂಶ್ಚತುರ್ಭಿರ್ನಿಜಘಾನ ಬಾಣೈಃ||

ಹಾಗೆ ಅವನಿಂದ ಹೊಡೆಯಲ್ಪಟ್ಟ ಚಕ್ರಧರ ಕೃಷ್ಣನ ಪ್ರಭಾವವಿದ್ದ ತರಸ್ವೀ ಶಿನಿಯ ಮೊಮ್ಮಗನು ಉತ್ತಮ ವೇಗದ ಬಾಣಗಳಿಂದ ಅಲಂಬುಸನ ನಾಲ್ಕು ಕುದುರೆಗಳನ್ನು ಸಂಹರಿಸಿದನು.

07115018a ಅಥಾಸ್ಯ ಸೂತಸ್ಯ ಶಿರೋ ನಿಕೃತ್ಯ

         ಭಲ್ಲೇನ ಕಾಲಾನಲಸನ್ನಿಭೇನ|

07115018c ಸಕುಂಡಲಂ ಪೂರ್ಣಶಶಿಪ್ರಕಾಶಂ

         ಭ್ರಾಜಿಷ್ಣು ವಕ್ತ್ರಂ ನಿಚಕರ್ತ ದೇಹಾತ್||

ಆಗ ಅವನ ಸೂತನ ಶಿರವನ್ನು ಕತ್ತರಿಸಿ, ಕಾಲಾಗ್ನಿಯಂತೆ ಬೆಳಗುತ್ತಿದ್ದ ಭಲ್ಲದಿಂದ, ಪೂರ್ಣಚಂದ್ರನಂತೆ ಪ್ರಕಾಶಿಸುತ್ತಾ ಎಲ್ಲೆಡೆ ಹೊಳೆಯುತ್ತಿದ್ದ ಅವನ ಕುಂಡಲಸಹಿತ ಮುಖವನ್ನು ದೇಹದಿಂದ ಕತ್ತರಿಸಿದನು.

07115019a ನಿಹತ್ಯ ತಂ ಪಾರ್ಥಿವಪುತ್ರಪೌತ್ರಂ

         ಸಂಖ್ಯೇ ಮಧೂನಾಂ ಋಷಭಃ ಪ್ರಮಾಥೀ|

07115019c ತತೋಽನ್ವಯಾದರ್ಜುನಮೇವ ವೀರಃ

         ಸೈನ್ಯಾನಿ ರಾಜಂಸ್ತವ ಸನ್ನಿವಾರ್ಯ||

ರಾಜನ್! ರಣದಲ್ಲಿ ಆ ರಾಜಪುತ್ರಪೌತ್ರನನ್ನು ಸಂಹರಿಸಿ ಮಧುಗಳ ಋಷಭ ಪ್ರಮಾಥಿ ವೀರನು ನಿನ್ನ ಸೇನೆಗಳನ್ನು ಹಿಂದೆ ಸರಿಸಿ ಅರ್ಜುನನ ಬಳಿ ಹೋದನು.

07115020a ಅನ್ವಾಗತಂ ವೃಷ್ಣಿವರಂ ಸಮೀಕ್ಷ್ಯ

         ತಥಾರಿಮಧ್ಯೇ ಪರಿವರ್ತಮಾನಂ|

07115020c ಘ್ನಂತಂ ಕುರೂಣಾಮಿಷುಭಿರ್ಬಲಾನಿ

         ಪುನಃ ಪುನರ್ವಾಯುರಿವಾಭ್ರಪೂಗಾನ್||

ಮುಂದೆಹೋಗುತ್ತಿರುವ ಆ ವೃಷ್ಣಿವರನು ಶತ್ರುಗಳ ಮಧ್ಯೆ ಹೋಗುವಾಗ ಪುನಃ ಪುನಃ ಭಿರುಗಾಳಿಯು ಮೋಡಗಳ ರಾಶಿಯನ್ನು ಚದುರಿಬಿಡುವಂತೆ ಬಾಣಗಳಿಂದ ಕುರುಗಳ ಸೇನೆಯನ್ನು ಸಂಹರಿಸುತ್ತಿದ್ದನು.

07115021a ತತೋಽವಹನ್ಸೈಂಧವಾಃ ಸಾಧು ದಾಂತಾ

         ಗೋಕ್ಷೀರಕುಂದೇಂದುಹಿಮಪ್ರಕಾಶಾಃ|

07115021c ಸುವರ್ಣಜಾಲಾವತತಾಃ ಸದಶ್ವಾ

         ಯತೋ ಯತಃ ಕಾಮಯತೇ ನೃಸಿಂಹಃ||

ಆ ನರಸಿಂಹನು ಎಲ್ಲೆಲ್ಲಿ ಹೋಗಲು ಬಯಸುತ್ತಿದ್ದನೋ ಅಲ್ಲಲ್ಲಿಗೆ ಸಿಂಧುದೇಶದ, ಸಾಧು, ತಾಳ್ಮೆಯುಳ್ಳ, ಗೋವಿನ ಹಾಲು-ಕುಂದ-ಚಂದ್ರ-ಹಿಮಗಳ ಪ್ರಕಾಶವುಳ್ಳ, ಸುವರ್ಣಜಾಲೆಗಳಿಂದ ಅಲಂಕೃತಗೊಂಡ ಅವನ ಕುದುರೆಗಳು ಕೊಂಡೊಯ್ಯುತ್ತಿದ್ದವು.

07115022a ಅಥಾತ್ಮಜಾಸ್ತೇ ಸಹಿತಾಭಿಪೇತುರ್

         ಅನ್ಯೇ ಚ ಯೋಧಾಸ್ತ್ವರಿತಾಸ್ತ್ವದೀಯಾಃ|

07115022c ಕೃತ್ವಾ ಮುಖಂ ಭಾರತ ಯೋಧಮುಖ್ಯಂ

         ದುಃಶಾಸನಂ ತ್ವತ್ಸುತಮಾಜಮೀಢ||

ಆಜಮೀಢ! ಭಾರತ! ಆಗ ನಿನ್ನ ಸುತ ದುಃಶಾಸನನ್ನು ಯೋಧಮಖ್ಯನನ್ನಾಗಿ ಮಾಡಿಕೊಂಡು ನಿನ್ನ ಮಕ್ಕಳು ಮತ್ತು ಅನ್ಯ ಯೋಧರು ತ್ವರೆಮಾಡಿ ಅವನನ್ನು ಮುತ್ತಿದರು.

07115023a ತೇ ಸರ್ವತಃ ಸಂಪರಿವಾರ್ಯ ಸಂಖ್ಯೇ

         ಶೈನೇಯಮಾಜಘ್ನುರನೀಕಸಾಹಾಃ|

07115023c ಸ ಚಾಪಿ ತಾನ್ಪ್ರವರಃ ಸಾತ್ವತಾನಾಂ

         ನ್ಯವಾರಯದ್ಬಾಣಜಾಲೇನ ವೀರಃ||

ಅವರು ಶೈನೇಯನನ್ನು ಎಲ್ಲ ಕಡೆಗಳಿಂದ ಸುತ್ತುವರೆದು ರಣದಲ್ಲಿ ಸೇನೆಗಳ ಸಹಾಯದಿಂದ ಆಕ್ರಮಣಿಸಿದರು. ಸಾತ್ವತರ ಪ್ರವರ ಆ ವೀರನೂ ಕೂಡ ಬಾಣಜಾಲಗಳಿಂದ ಅವರನ್ನು ತಡೆದನು.

07115024a ನಿವಾರ್ಯ ತಾಂಸ್ತೂರ್ಣಮಮಿತ್ರಘಾತೀ

         ನಪ್ತಾ ಶಿನೇಃ ಪತ್ರಿಭಿರಗ್ನಿಕಲ್ಪೈಃ|

07115024c ದುಃಶಾಸನಸ್ಯಾಪಿ ಜಘಾನ ವಾಹಾನ್

         ಉದ್ಯಮ್ಯ ಬಾಣಾಸನಮಾಜಮೀಢ||

ಆಜಮೀಢ! ಆ ಅಮಿತ್ರಘಾತಿ ಶೈನಿಯು ತಕ್ಷಣವೇ ಅಗ್ನಿಕಲ್ಪ ಪತ್ರಿಯಿಂದ ಅವರನ್ನು ತಡೆದು ಬಿಲ್ಲನ್ನು ಎತ್ತಿ ದುಃಶಾಸನನ ಕುದುರೆಗಳನ್ನು ಸಂಹರಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅಲಂಬುಷವಧೇ ಪಂಚದಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅಲಂಬುಷವಧ ಎನ್ನುವ ನೂರಾಹದಿನೈದನೇ ಅಧ್ಯಾಯವು.

Image result for lotus against white background

[1] ಇವನು ಇದೇ ದ್ರೋಣಪರ್ವದ ೮೪ನೆಯ ಅಧ್ಯಾಯದಲ್ಲಿ ಘಟೋತ್ಕಚನಿಂದ ವಧಿಸಲ್ಪಟ್ಟ ಅಲಂಬುಸನೆಂಬ ಹೆಸರಿನ ರಾಕ್ಷಸನಲ್ಲ. ಅದೇ ಹೆಸರಿನ ಒಬ್ಬ ರಾಜ.

Comments are closed.