Drona Parva: Chapter 113

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೩

ಭೀಮ-ಕರ್ಣರ ಯುದ್ಧ (೧-೨೬).

07113001 ಧೃತರಾಷ್ಟ್ರ ಉವಾಚ|

07113001a ಮಹಾನಪನಯಃ ಸೂತ ಮಮೈವಾತ್ರ ವಿಶೇಷತಃ|

07113001c ಸ ಇದಾನೀಮನುಪ್ರಾಪ್ತೋ ಮನ್ಯೇ ಸಂಜಯ ಶೋಚತಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಸೂತ! ಮಹಾ ಅನ್ಯಾಯವಾಗಿ ಹೋಯಿತು. ವಿಶೇಷತಃ ನನ್ನಿಂದ! ದುಃಖದಲ್ಲಿ ಸಿಕ್ಕಿಹಾಕಿಕೊಂಡಿರುವ ನಾನು ಈಗ ಇದನ್ನು ಮನಗಾಣುತ್ತಿದ್ದೇನೆ.

07113002a ಯದ್ಗತಂ ತದ್ಗತಮಿತಿ ಮಮಾಸೀನ್ಮನಸಿ ಸ್ಥಿತಂ|

07113002c ಇದಾನೀಮತ್ರ ಕಿಂ ಕಾರ್ಯಂ ಪ್ರಕರಿಷ್ಯಾಮಿ ಸಂಜಯ||

ಸಂಜಯ! ಏನು ನಡೆಯಿತೋ ಅದು ನಡೆದು ಹೋಯಿತು ಎಂಬ ಅಭಿಪ್ರಾಯದಿಂದಲೇ ನಾನು ಈಗ ಯೋಚಿಸುತ್ತಿದ್ದೇನೆ. ಈಗ ಇಲ್ಲಿ ನಾನು ಏನು ಮಾಡಬಹುದು ಹೇಳು! ಅದನ್ನು ಮಾಡುತ್ತೇನೆ.

07113003a ಯಥಾ ತ್ವೇಷ ಕ್ಷಯೋ ವೃತ್ತೋ ಮಮಾಪನಯಸಂಭವಃ|

07113003c ವೀರಾಣಾಂ ತನ್ಮಮಾಚಕ್ಷ್ವ ಸ್ಥಿರೀಭೂತೋಽಸ್ಮಿ ಸಂಜಯ||

ಸಂಜಯ! ನೀನು ಏನು ನಾಶದ ವರದಿಯನ್ನು ಮಾಡುತ್ತಿದ್ದೀಯೋ ಆ ವೀರರ ನಾಶವು ನನ್ನ ಅಪರಾಧದಿಂದಲೇ ನಡೆಯುತ್ತಿದೆ. ಅದರ ಕುರಿತು ಹೇಳು. ಮನಸ್ಸನ್ನು ಗಟ್ಟಿಮಾಡಿಕೊಂಡಿದ್ದೇನೆ!”

07113004 ಸಂಜಯ ಉವಾಚ|

07113004a ಕರ್ಣಭೀಮೌ ಮಹಾರಾಜ ಪರಾಕ್ರಾಂತೌ ಮಹಾಹವೇ|

07113004c ಬಾಣವರ್ಷಾಣ್ಯವರ್ಷೇತಾಂ ವೃಷ್ಟಿಮಂತಾವಿವಾಂಬುದೌ||

ಸಂಜಯನು ಹೇಳಿದನು: “ಮಹಾರಾಜ! ಮಹಾಯುದ್ಧದಲ್ಲಿ ಪರಾಕ್ರಾಂತ ಕರ್ಣ-ಭೀಮರಿಬ್ಬರೂ ಮಳೆಗರೆಯುವ ಮೋಡಗಳಂತೆ ಪರಸ್ಪರರ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು.

07113005a ಭೀಮನಾಮಾಂಕಿತಾ ಬಾಣಾಃ ಸ್ವರ್ಣಪುಂಖಾಃ ಶಿಲಾಶಿತಾಃ|

07113005c ವಿವಿಶುಃ ಕರ್ಣಮಾಸಾದ್ಯ ಭಿಂದಂತ ಇವ ಜೀವಿತಂ||

“ಭೀಮ!” ಎಂಬ ನಾಮಾಂಕಿತ ಸ್ವರ್ಣಪುಂಖಗಳ ಶಿಲಾಶಿತ ಬಾಣಗಳು ಜೀವವನ್ನೇ ಹರಣಮಾಡುವವೋ ಎಂಬಂತೆ ಕರ್ಣನ ಶರೀರವನ್ನು ಹೊಕ್ಕವು.

07113006a ತಥೈವ ಕರ್ಣನಿರ್ಮುಕ್ತೈಃ ಸವಿಷೈರಿವ ಪನ್ನಗೈಃ|

07113006c ಆಕೀರ್ಯತ ರಣೇ ಭೀಮಃ ಶತಶೋಽಥ ಸಹಸ್ರಶಃ||

ಹಾಗೆಯೇ ರಣದಲ್ಲಿ ಕರ್ಣನು ಪ್ರಯೋಗಿಸಿದ ಹಾವಿನ ವಿಷಗಳಂತಿದ್ದ ನೂರಾರು ಸಹಸ್ರಾರು ಬಾಣಗಳು ಭೀಮನನ್ನು ಮುಚ್ಚಿಬಿಟ್ಟವು.

07113007a ತಯೋಃ ಶರೈರ್ಮಹಾರಾಜ ಸಂಪತದ್ಭಿಃ ಸಮಂತತಃ|

07113007c ಬಭೂವ ತವ ಸೈನ್ಯಾನಾಂ ಸಂಕ್ಷೋಭಃ ಸಾಗರೋಪಮಃ||

ಮಹಾರಾಜ! ಎಲ್ಲಕಡೆಗಳಲ್ಲಿ ಬೀಳುತ್ತಿದ್ದ ಅವರ ಶರಗಳಿಂದಾಗಿ ಸಾಗರದಂತಿದ್ದ ನಿನ್ನ ಸೇನೆಯಲ್ಲಿ ಅಲ್ಲೋಲಕಲ್ಲೋಲವುಂಟಾಯಿತು.

07113008a ಭೀಮಚಾಪಚ್ಯುತೈರ್ಬಾಣೈಸ್ತವ ಸೈನ್ಯಮರಿಂದಮ|

07113008c ಅವಧ್ಯತ ಚಮೂಮಧ್ಯೇ ಘೋರೈರಾಶೀವಿಷೋಪಮೈಃ||

ಅರಿಂದಮ! ಭೀಮನ ಚಾಪದಿಂದ ಹೊರಟ ಘೋರ ಸರ್ಪಗಳ ವಿಷಕ್ಕೆ ಸಮಾನ ಬಾಣಗಳು ನಿನ್ನ ಸೇನೆಗಳ ಚಮೂಮಧ್ಯದಲ್ಲಿ ಅನೇಕರನ್ನು ಸಂಹರಿದವು.

07113009a ವಾರಣೈಃ ಪತಿತೈ ರಾಜನ್ವಾಜಿಭಿಶ್ಚ ನರೈಃ ಸಹ|

07113009c ಅದೃಶ್ಯತ ಮಹೀ ಕೀರ್ಣಾ ವಾತನುನ್ನೈರ್ದ್ರುಮೈರಿವ||

ರಾಜನ್! ಹರಡಿ ಬಿದ್ದಿದ್ದ ಆನೆ-ಕುದುರೆಗಳಿಂದ ಮತ್ತು ಮನುಷ್ಯರಿಂದ ರಣಭೂಮಿಯು ಚಂಡಮಾರುತಕ್ಕೆ ಸಿಲುಕಿ ಮರಗಳು ಉರುಳಿ ಬಿದ್ದಿರುವಂತೆ ತೋರಿತು.

07113010a ತೇ ವಧ್ಯಮಾನಾಃ ಸಮರೇ ಭೀಮಚಾಪಚ್ಯುತೈಃ ಶರೈಃ|

07113010c ಪ್ರಾದ್ರವಂಸ್ತಾವಕಾ ಯೋಧಾಃ ಕಿಮೇತದಿತಿ ಚಾಬ್ರುವನ್||

ಸಮರದಲ್ಲಿ ಭೀಮನ ಚಾಪದಿಂದ ಹೊರಟ ಶರಗಳಿಂದ ವಧಿಸಲ್ಪಡುತ್ತಿದ್ದ ನಿನ್ನಕಡೆಯ ಯೋಧರು “ಇದೇನಿದು?” ಎಂದು ಹೇಳುತ್ತಾ ಓಡಿಹೋಗುತ್ತಿದ್ದರು.

07113011a ತತೋ ವ್ಯುದಸ್ತಂ ತತ್ಸೈನ್ಯಂ ಸಿಂಧುಸೌವೀರಕೌರವಂ|

07113011c ಪ್ರೋತ್ಸಾರಿತಂ ಮಹಾವೇಗೈಃ ಕರ್ಣಪಾಂಡವಯೋಃ ಶರೈಃ||

ಹೀಗೆ ಕರ್ಣ-ಪಾಂಡವರ ಶರಗಳ ಮಹಾವೇಗದಿಂದ ಸಿಂಧು-ಸೌವೀರ-ಕೌರವ ಸೇನೆಗಳು ಭಗ್ನವಾಗಿ ಪಲಾಯನಗೈದವು.

07113012a ತೇ ಶರಾತುರಭೂಯಿಷ್ಠಾ ಹತಾಶ್ವನರವಾಹನಾಃ|

07113012c ಉತ್ಸೃಜ್ಯ ಕರ್ಣಂ ಭೀಮಂ ಚ ಪ್ರಾದ್ರವನ್ಸರ್ವತೋದಿಶಂ||

ಅವರ ಶರಗಳಿಂದ ಹತರಾಗದೇ ಉಳಿದಿದ್ದ ಅಶ್ವ-ರಥ-ಗಜ-ಪದಾತಿಗಳು ಕರ್ಣ-ಭೀಮರನ್ನು ಅಲ್ಲಿಯೇ ಬಿಟ್ಟು ಎಲ್ಲ ದಿಕ್ಕುಗಳಿಗೂ ಓಡಿ ಹೋದವು.

07113013a ನೂನಂ ಪಾರ್ಥಾರ್ಥಂ ಏವಾಸ್ಮಾನ್ಮೋಹಯಂತಿ ದಿವೌಕಸಃ|

07113013c ಯತ್ಕರ್ಣಭೀಮಪ್ರಭವೈರ್ವಧ್ಯತೇ ನೋ ಬಲಂ ಶರೈಃ||

07113014a ಏವಂ ಬ್ರುವಂತೋ ಯೋಧಾಸ್ತೇ ತಾವಕಾ ಭಯಪೀಡಿತಾಃ|

07113014c ಶರಪಾತಂ ಸಮುತ್ಸೃಜ್ಯ ಸ್ಥಿತಾ ಯುದ್ಧದಿದೃಕ್ಷವಃ||

“ನಿಜವಾಗಿಯೂ ಪಾರ್ಥರ ಹಿತಕ್ಕಾಗಿಯೇ ದಿವೌಕಸರು ನಮ್ಮನ್ನು ಹೀಗೆ ಭ್ರಾಂತರನ್ನಾಗಿಸಿದ್ದಾರೆ! ಕರ್ಣ-ಭೀಮರಿಂದ ಹೊರಟ ಬಾಣಗಳು ನಮ್ಮ ಸೇನೆಗಳನ್ನೇ ವಧಿಸುತ್ತಿವೆ.” ಹೀಗೆ ಹೇಳುತ್ತಾ ಭಯಪೀಡಿತ ನಿನ್ನವರು ಶರಗಳು ಬೀಳುತ್ತಿರುವ ಪ್ರದೇಶವನ್ನು ಬಿಟ್ಟು  ದೂರದಲ್ಲಿ ಯುದ್ಧಪ್ರೇಕ್ಷಕರಾಗಿ ನಿಂತುಬಿಟ್ಟರು.

07113015a ತತಃ ಪ್ರಾವರ್ತತ ನದೀ ಘೋರರೂಪಾ ಮಹಾಹವೇ|

07113015c ಬಭೂವ ಚ ವಿಶೇಷೇಣ ಭೀರೂಣಾಂ ಭಯವರ್ಧಿನೀ||

ಆಗ ಮಹಾಹವದಲ್ಲಿ ವಿಶೇಷವಾಗಿ ರಣಹೇಡಿಗಳ ಭಯವನ್ನು ಹೆಚ್ಚಿಸುವ ಘೋರರೂಪದ ನದಿಯು ಪ್ರವಹಿಸತೊಡಗಿತು.

07113016a ವಾರಣಾಶ್ವಮನುಷ್ಯಾಣಾಂ ರುಧಿರೌಘಸಮುದ್ಭವಾ|

07113016c ಸಂವೃತಾ ಗತಸತ್ತ್ವೈಶ್ಚ ಮನುಷ್ಯಗಜವಾಜಿಭಿಃ||

ಆನೆ-ಕುದುರೆ-ಮನುಷ್ಯರ ರಕ್ತದಿಂದ ಹುಟ್ಟಿದ ಆ ನದಿಯು ಸತ್ತುಹೋಗಿದ್ದ ಮನುಷ್ಯ-ಆನೆ-ಕುದುರೆಗಳಿಂದ ತುಂಬಿಹೋಗಿತ್ತು.

07113017a ಸಾನುಕರ್ಷಪತಾಕೈಶ್ಚ ದ್ವಿಪಾಶ್ವರಥಭೂಷಣೈಃ|

07113017c ಸ್ಯಂದನೈರಪವಿದ್ಧೈಶ್ಚ ಭಗ್ನಚಕ್ರಾಕ್ಷಕೂಬರೈಃ||

07113018a ಜಾತರೂಪಪರಿಷ್ಕಾರೈರ್ಧನುರ್ಭಿಃ ಸುಮಹಾಧನೈಃ|

07113018c ಸುವರ್ಣಪುಂಖೈರಿಷುಭಿರ್ನಾರಾಚೈಶ್ಚ ಸಹಸ್ರಶಃ||

07113019a ಕರ್ಣಪಾಂಡವನಿರ್ಮುಕ್ತೈರ್ನಿರ್ಮುಕ್ತೈರಿವ ಪನ್ನಗೈಃ|

07113019c ಪ್ರಾಸತೋಮರಸಂಘಾತೈಃ ಖಡ್ಗೈಶ್ಚ ಸಪರಶ್ವಧೈಃ||

07113020a ಸುವರ್ಣವಿಕೃತೈಶ್ಚಾಪಿ ಗದಾಮುಸಲಪಟ್ಟಿಶೈಃ|

07113020c ವಜ್ರೈಶ್ಚ ವಿವಿಧಾಕಾರೈಃ ಶಕ್ತಿಭಿಃ ಪರಿಘೈರಪಿ|

07113020e ಶತಘ್ನೀಭಿಶ್ಚ ಚಿತ್ರಾಭಿರ್ಬಭೌ ಭಾರತ ಮೇದಿನೀ||

07113021a ಕನಕಾಂಗದಕೇಯೂರೈಃ ಕುಂಡಲೈರ್ಮಣಿಭಿಃ ಶುಭೈಃ|

07113021c ತನುತ್ರೈಃ ಸತಲತ್ರೈಶ್ಚ ಹಾರೈರ್ನಿಷ್ಕೈಶ್ಚ ಭಾರತ||

07113022a ವಸ್ತ್ರೈಶ್ಚತ್ರೈಶ್ಚ ವಿಧ್ವಸ್ತೈಶ್ಚಾಮರವ್ಯಜನೈರಪಿ|

07113022c ಗಜಾಶ್ವಮನುಜೈರ್ಭಿನ್ನೈಃ ಶಸ್ತ್ರೈಃ ಸ್ಯಂದನಭೂಷಣೈಃ||

07113023a ತೈಸ್ತೈಶ್ಚ ವಿವಿಧೈರ್ಭಾವೈಸ್ತತ್ರ ತತ್ರ ವಸುಂಧರಾ|

07113023c ಪತಿತೈರಪವಿದ್ಧೈಶ್ಚ ಸಂಬಭೌ ದ್ಯೌರಿವ ಗ್ರಹೈಃ||

ಭಾರತ! ತೋಳುಮರಗಳು, ಪತಾಕೆಗಳು, ಆನೆ-ಕುದುರೆ-ರಥಗಳ ಭೂಷಣಗಳು, ಪುಡಿಯಾಗಿದ್ದ ರಥಗಳು, ಮುರಿದುಹೋಗಿದ್ದ ರಥಚಕ್ರಗಳು, ನೊಗಗಳು, ಬಂಗಾರದಿಂದ ಮಾಡಲ್ಪಟ್ಟ ಮಹಾಮೌಲ್ಯದ ಧನುಸ್ಸುಗಳು, ಕರ್ಣ-ಪಾಂಡವರು ಬಿಟ್ಟ ಪೊರೆಬಿಟ್ಟ ಹಾವುಗಳಂತಿರುವ ಸಾವಿರಾರು ಸುವರ್ಣಪುಂಖ ನಾರಾಚ ಬಾಣಗಳು, ಒಡೆದು ಬಿದ್ದಿದ್ದ ಪ್ರಾಸ-ತೋಮರ-ಖಡ್ಗ ಮತ್ತು ಪರಶಾಯುಧಗಳು, ಬಂಗಾರದಿಂದ ಮಾಡಲ್ಪಟ್ಟ ಗದೆ-ಮುಸಲ-ಪಟ್ಟಿಶಗಳು, ವಿವಿಧಾಕಾರದ ವಜ್ರಗಳು, ಪರಿಘ-ಶಕ್ತಿಗಳು, ಶತಘ್ನೀ-ಚಕ್ರಗಳು, ಕನಕಾಂಗದ-ಕೇಯೂರಗಳು, ಶುಭ ಕುಂಡಲ ಮಣಿಗಳು, ಕವಚಗಳು, ಬಳೆಗಳು, ಉಂಗುರಗಳು, ಕೈಚೀಲಗಳಿಂದ, ಹಾರಗಳಿಂದ, ನಿಷ್ಕಗಳಿಂದ, ವಸ್ತ್ರ-ಚತ್ರಗಳಿಂದ, ಮುರಿದಿದ್ದ ಚಾಮರ-ವ್ಯಜಗಳಿಂದ, ಛಿನ್ನ-ಛಿನ್ನರಾಗಿದ ಗಜ-ಅಶ್ವ-ಮನುಷ್ಯರಿಂದ, ಶಸ್ತ್ರಗಳಿಂದ, ರಥಭೂಷಣಗಳಿಂದ, ವಿವಿಧ ಭಾವ್ಗಳಿಂದ ಅಲ್ಲಲ್ಲಿ ಬಿದ್ದಿದ್ದ ಇನ್ನೂ ಅನೇಕ ವಸ್ತುಗಳಿಂದ ವ್ಯಾಪ್ತವಾಗಿದ್ದ ರಣಾಂಗಣವು ಗ್ರಹಗಳಿಂದ ತುಂಬಿದ್ದ ಆಕಾಶದಂತೆ ಪ್ರಕಾಶಿಸುತ್ತಿತ್ತು.

07113024a ಅಚಿಂತ್ಯಮದ್ಭುತಂ ಚೈವ ತಯೋಃ ಕರ್ಮಾತಿಮಾನುಷಂ|

07113024c ದೃಷ್ಟ್ವಾ ಚಾರಣಸಿದ್ಧಾನಾಂ ವಿಸ್ಮಯಃ ಸಮಪದ್ಯತ||

ಯೋಚನೆಗೆ ಸಿಲುಕದ ಅವರಿಬ್ಬರ ಅದ್ಭುತ ಅಮಾನುಷ ಕೃತ್ಯಗಳನ್ನು ನೋಡಿ ಚಾರಣ-ಸಿದ್ಧರಲ್ಲಿ ವಿಸ್ಮಯವುಂಟಾಯಿತು.

07113025a ಅಗ್ನೇರ್ವಾಯುಸಹಾಯಸ್ಯ ಗತಿಃ ಕಕ್ಷ ಇವಾಹವೇ|

07113025c ಆಸೀದ್ಭೀಮಸಹಾಯಸ್ಯ ರೌದ್ರಮಾಧಿರಥೇರ್ಗತಂ||

ಒಣಮರಗಳಿರುವ ವನದಲ್ಲಿ ಅಗ್ನಿಯ ಮುನ್ನಡೆಯು ಗಾಳಿಯ ಸಹಾಯದಿಂದ ಬಹಳ ಭಯಂಕರವಾಗಿ ಪರಿಣಮಿಸುವಂತೆ ಯುದ್ಧದಲ್ಲಿ ಭೀಮನ ಸಹಾಯವನ್ನು ಪಡೆದ ಆಧಿರಥ ಕರ್ಣನ ಗಮನವು ಬಹಳ ಭಯಂಕರವಾಗಿ ಪರಿಣಮಿಸಿತು.

07113025e ನಿಪಾತಿತಧ್ವಜರಥಂ ಹತವಾಜಿನರದ್ವಿಪಂ|

07113026a ಗಜಾಭ್ಯಾಂ ಸಂಪ್ರಯುಕ್ತಾಭ್ಯಾಮಾಸೀನ್ನಡವನಂ ಯಥಾ||

ಅಂಕುಶಪ್ರಹಾರದಿಂದ ಪ್ರೇರಿತ ಎರಡು ಆನೆಗಳು ಜೊಂಡುಹುಲ್ಲಿನ ವನವನ್ನು ಧ್ವಂಸಮಾಡುವಂತೆ ಅವರಿಬ್ಬರು ಧ್ವಜ-ರಥಗಳನ್ನು ಕೆಳಗುರುಳಿಸಿ ಅಶ್ವ-ನರ-ಗಜಗಳನ್ನು ಸಂಹರಿಸಿದರು.

07113026c ತಥಾಭೂತಂ ಮಹತ್ಸೈನ್ಯಮಾಸೀದ್ಭಾರತ ಸಂಯುಗೇ|

07113026e ವಿಮರ್ದಃ ಕರ್ಣಭೀಮಾಭ್ಯಾಮಾಸೀಚ್ಚ ಪರಮೋ ರಣೇ||

ಆಗ ಭಾರತ! ಸಂಯುಗದಲ್ಲಿ ಕರ್ಣ-ಭೀಮರಿಂದ ಆ ಮಹಾಸೇನೆಯು ಸಂಪೂರ್ಣವಾಗಿ ನಾಶಗೊಂಡಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಕರ್ಣಯುದ್ಧೇ ತ್ರಯೋದಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಕರ್ಣಯುದ್ಧ ಎನ್ನುವ ನೂರಾಹದಿಮೂರನೇ ಅಧ್ಯಾಯವು.

Image result for lotus against white background

Comments are closed.