Drona Parva: Chapter 112

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೨

ಶತ್ರುಂಜಯ, ಶತ್ರುಸಹ, ಚಿತ್ರ, ಚಿತ್ರಾಯುಧ, ದೃಢ, ಚಿತ್ರಸೇನ, ವಿಕರ್ಣ ಈ ಏಳುಮಂದಿ ಧಾರ್ತರಾಷ್ಟ್ರರನ್ನು ಭೀಮಸೇನನು ವಧಿಸಿದುದು (೧-೪೫).

07112001 ಸಂಜಯ ಉವಾಚ|

07112001a ಭೀಮಸೇನಸ್ಯ ರಾಧೇಯಃ ಶ್ರುತ್ವಾ ಜ್ಯಾತಲನಿಸ್ವನಂ|

07112001c ನಾಮೃಷ್ಯತ ಯಥಾ ಮತ್ತೋ ಗಜಃ ಪ್ರತಿಗಜಸ್ವನಂ||

ಸಂಜಯನು ಹೇಳಿದನು: “ಭೀಮಸೇನನ ಮೌರ್ವಿಯ ಟೇಂಕಾರಶಬ್ಧವನ್ನು ಕೇಳಿ ರಾಧೇಯನು ಮದಿಸಿದ ಆನೆಯು ಎದುರಾಳಿ ಸಲಗದ ಘೀಂಕಾರವನ್ನು ಹೇಗೋ ಹಾಗೆ ಸಹಿಸಿಕೊಳ್ಳಲಿಲ್ಲ.

07112002a ಅಪಕ್ರಮ್ಯ ಸ ಭೀಮಸ್ಯ ಮುಹೂರ್ತಂ ಶರಗೋಚರಾತ್|

07112002c ತವ ಚಾಧಿರಥಿರ್ದೃಷ್ಟ್ವಾ ಸ್ಯಂದನೇಭ್ಯಶ್ಚ್ಯುತಾನ್ಸುತಾನ್||

07112003a ಭೀಮಸೇನೇನ ನಿಹತಾನ್ವಿಮನಾ ದುಃಖಿತೋಽಭವತ್|

07112003c ನಿಃಶ್ವಸನ್ದೀರ್ಘಮುಷ್ಣಂ ಚ ಪುನಃ ಪಾಂಡವಮಭ್ಯಯಾತ್||

ಮುಹೂರ್ತಕಾಲ ಆಧಿರಥನು ಭೀಮಸೇನನ ಬಾಣಗಳ ದೃಷ್ಟಿಗೆ ದೂರದಲ್ಲಿಯೇ ಇದ್ದು ಭೀಮಸೇನನಿಂದ ನಿಹತರಾಗಿ ರಥದಿಂದ ಬಿದ್ದಿದ್ದ ನಿನ್ನ ಮಕ್ಕಳನ್ನು ನೋಡಿ ವಿಮನಸ್ಕನೂ ದುಃಖಿತನೂ ಆದನು. ದೀರ್ಘ ಬಿಸಿ ನಿಟ್ಟುಸಿರು ಬಿಡುತ್ತಾ ಪುನಃ ಪಾಂಡವ ಭೀಮನನ್ನು ಆಕ್ರಮಣಿಸಿದನು.

07112004a ಸ ತಾಮ್ರನಯನಃ ಕ್ರೋಧಾಚ್ಚ್ವಸನ್ನಿವ ಮಹೋರಗಃ|

07112004c ಬಭೌ ಕರ್ಣಃ ಶರಾನಸ್ಯನ್ರಶ್ಮಿವಾನಿವ ಭಾಸ್ಕರಃ||

ಕ್ರೋಧದಿಂದ ರಕ್ತಾಕ್ಷನಾದ ಕರ್ಣನು ಘಟಸರ್ಪದಂತೆ ಭುಸುಗುಟ್ಟುತ್ತಾ ಶರಗಳನ್ನು ಪ್ರಯೋಗಿಸುತ್ತಿದ್ದ ಕರ್ಣನು ಕಿರಣಗಳನ್ನು ಸೂಸುವ ಭಾಸ್ಕರನಂತೆ ಪ್ರಕಾಶಿಸಿದನು.

07112005a ರಶ್ಮಿಜಾಲೈರಿವಾರ್ಕಸ್ಯ ವಿತತೈರ್ಭರತರ್ಷಭ|

07112005c ಕರ್ಣಚಾಪಚ್ಯುತೈರ್ಬಾಣೈಃ ಪ್ರಾಚ್ಚಾದ್ಯತ ವೃಕೋದರಃ||

ಭರತರ್ಷಭ! ಸೂರ್ಯನ ಕಿರಣಗಳ ಜಾಲಗಳಿಂದ ಪರ್ವತವು ಆಚ್ಛಾದಿದವಾಗುವಂತೆ ಕರ್ಣನ ಚಾಪದಿಂದ ಹೊರಟ ಬಾಣಗಳಿಂದ ವೃಕೋದರನು ಆಚ್ಛಾದಿತನಾದನು.

07112006a ಕರ್ಣಚಾಪಚ್ಯುತಾಶ್ಚಿತ್ರಾಃ ಶರಾ ಬರ್ಹಿಣವಾಸಸಃ|

07112006c ವಿವಿಶುಃ ಸರ್ವತಃ ಪಾರ್ಥಂ ವಾಸಾಯೇವಾಂಡಜಾ ದ್ರುಮಂ||

ಕರ್ಣನ ಚಾಪದಿಂದ ಹೊರಟ ಬಣ್ಣದ ನವಿಲುಗರಿಗಳಿದ್ದ ಶರಗಳು ಪಕ್ಷಿಗಳು ವೃಕ್ಷವನ್ನು ಹೊಗುವಂತೆ ಪಾರ್ಥನನ್ನು ಎಲ್ಲಕಡೆಗಳಿಂದ ಪ್ರವೇಶಿಸಿದವು.

07112007a ಕರ್ಣಚಾಪಚ್ಯುತಾ ಬಾಣಾಃ ಸಂಪತಂತಸ್ತತಸ್ತತಃ|

07112007c ರುಕ್ಮಪುಂಖಾ ವ್ಯರಾಜಂತ ಹಂಸಾಃ ಶ್ರೇಣೀಕೃತಾ ಇವ||

ಕರ್ಣನ ಚಾಪದಿಂದ ಹೊರಟ ರುಕ್ಮಪುಂಖ ಬಾಣಗಳು ಅಲ್ಲಿಂದ ಇಲ್ಲಿಗೆ ಹಾರಾಡುವ ಹಂಸಗಳ ಸಾಲಿನಂತೆ ವಿರಾಜಿಸಿದವು.

07112008a ಚಾಪಧ್ವಜೋಪಸ್ಕರೇಭ್ಯಶ್ಚತ್ರಾದೀಷಾಮುಖಾದ್ಯುಗಾತ್|

07112008c ಪ್ರಭವಂತೋ ವ್ಯದೃಶ್ಯಂತ ರಾಜನ್ನಾಧಿರಥೇಃ ಶರಾಃ||

ರಾಜನ್! ಆಧಿರಥನ ಶರಗಳು ಧನುಸ್ಸು, ಧ್ವಜ, ಇತರ ಸಾಮಗ್ರಿಗಳು, ಚತ್ರ, ಈಷಾದಂಡ, ಮೂಕಿ, ನೊಗ ಇವುಗಳಿಂದಲೂ ಬರುತ್ತಿವೆಯೋ ಎಂಬಂತೆ ಕಾಣುತ್ತಿದ್ದವು.

07112009a ಖಂ ಪೂರಯನ್ಮಹಾವೇಗಾನ್ಖಗಮಾನ್ಖಗವಾಸಸಃ|

07112009c ಸುವರ್ಣವಿಕೃತಾಂಶ್ಚಿತ್ರಾನ್ಮುಮೋಚಾಧಿರಥಿಃ ಶರಾನ್||

ಆಧಿರಥಿಯು ರಣಹದ್ದಿನ ರೆಕ್ಕೆಗಳಿದ್ದ ಸುವರ್ಣ ಚಿತ್ರಿತ ಮಹಾವೇಗಯುಕ್ತ ಆಕಾಶಗಾಮೀ ಬಾಣಗಳನ್ನು ಪ್ರಯೋಗಿಸಿ ಆಕಾಶವನ್ನೇ ತುಂಬಿಸಿದನು.

07112010a ತಮಂತಕಮಿವಾಯಸ್ತಮಾಪತಂತಂ ವೃಕೋದರಃ|

07112010c ತ್ಯಕ್ತ್ವಾ ಪ್ರಾಣಾನಭಿಕ್ರುಧ್ಯ ವಿವ್ಯಾಧ ನವಭಿಃ ಶರೈಃ||

ಅಂತಕನಂತೆ ಮೇಲೆ ಬೀಳುತ್ತಿದ್ದ ಕರ್ಣನನ್ನು ವೃಕೋದರನು ಪ್ರಾಣಗಳನ್ನೂ ಕಡೆಗಣಿಸಿ ಕ್ರೋಧದಿಂದ ಒಂಭತ್ತು ಶರಗಳಿಂದ ಹೊಡೆದನು.

07112011a ತಸ್ಯ ವೇಗಮಸಂಸಹ್ಯಂ ದೃಷ್ಟ್ವಾ ಕರ್ಣಸ್ಯ ಪಾಂಡವಃ|

07112011c ಮಹತಶ್ಚ ಶರೌಘಾಂಸ್ತಾನ್ನೈವಾವ್ಯಥತ ವೀರ್ಯವಾನ್||

ಕರ್ಣನ ವೇಗವು ಅಸಹನೀಯವಾದುದೆಂದು ನೋಡಿದ ವೀರ್ಯವಾನ್ ಪಾಂಡವನು ಅನ್ಯ ಮಹತ್ತರ ಶರೌಘಗಳಿಂದ ಅವನ ಶರಗಳನ್ನು ನಿರಸನಗೊಳಿಸಿದನು.

07112012a ತತೋ ವಿಧಮ್ಯಾಧಿರಥೇಃ ಶರಜಾಲಾನಿ ಪಾಂಡವಃ|

07112012c ವಿವ್ಯಾಧ ಕರ್ಣಂ ವಿಂಶತ್ಯಾ ಪುನರನ್ಯೈಃ ಶಿತೈಃ ಶರೈಃ||

ಆಗ ಆಧಿರಥ ಕರ್ಣನ ಶರಜಾಲಗಳನ್ನು ದ್ವಂಸಮಾಡಿ ಪಾಂಡವನು ಪುನಃ ಅನ್ಯ ಇಪ್ಪತ್ತು ನಿಶಿತ ಶರಗಳಿಂದ ಕರ್ಣನನ್ನು ಹೊಡೆದನು.

07112013a ಯಥೈವ ಹಿ ಶರೈಃ ಪಾರ್ಥಃ ಸೂತಪುತ್ರೇಣ ಚಾದಿತಃ|

07112013c ತಥೈವ ಕರ್ಣಂ ಸಮರೇ ಚಾದಯಾಮಾಸ ಪಾಂಡವಃ||

ಸೂತಪುತ್ರನ ಶರಗಳಿಂದ ಹೇಗೆ ಭೀಮನು ಮುಚ್ಚಲ್ಪಟ್ಟಿದ್ದನೋ ಅದೇ ರೀತಿಯಲ್ಲಿ ಸಮರದಲ್ಲಿ ಪಾಂಡವನು ಕರ್ಣನನ್ನು ಮುಚ್ಚಿದನು.

07112014a ದೃಷ್ಟ್ವಾ ತು ಭೀಮಸೇನಸ್ಯ ವಿಕ್ರಮಂ ಯುಧಿ ಭಾರತ|

07112014c ಅಭ್ಯನಂದಂಸ್ತ್ವದೀಯಾಶ್ಚ ಸಂಪ್ರಹೃಷ್ಟಾಶ್ಚ ಚಾರಣಾಃ||

ಭಾರತ! ಯುದ್ದದಲ್ಲಿ ಭೀಮಸೇನನ ವಿಕ್ರಮವನ್ನು ನೋಡಿ ನಿನ್ನವರು ಆನಂದಿತರಾದರು ಮತ್ತು ಚಾರಣರು ಹರ್ಷಿತರಾದರು.

07112015a ಭೂರಿಶ್ರವಾಃ ಕೃಪೋ ದ್ರೌಣಿರ್ಮದ್ರರಾಜೋ ಜಯದ್ರಥಃ|

07112015c ಉತ್ತಮೌಜಾ ಯುಧಾಮನ್ಯುಃ ಸಾತ್ಯಕಿಃ ಕೇಶವಾರ್ಜುನೌ||

07112016a ಕುರುಪಾಂಡವಾನಾಂ ಪ್ರವರಾ ದಶ ರಾಜನ್ಮಹಾರಥಾಃ|

07112016c ಸಾಧು ಸಾಧ್ವಿತಿ ವೇಗೇನ ಸಿಂಹನಾದಮಥಾನದನ್||

ರಾಜನ್! ಕುರುಪಾಂಡವರ ಹತ್ತು ಪ್ರವರ ಮಹಾರಥರು - ಭೂರಿಶ್ರವ, ಕೃಪ, ದ್ರೌಣಿ, ಮದ್ರರಾಜ, ಜಯದ್ರಥ, ಉತ್ತಮೌಜ, ಯುಧಾಮನ್ಯು, ಸಾತ್ಯಕಿ ಮತ್ತು ಕೇಶವ-ಅರ್ಜುನರು - ವೇಗದಿಂದ “ಸಾಧು! ಸಾಧು!” ಎಂದು ಸಿಂಹನಾದಗೈದರು.

07112017a ತಸ್ಮಿಂಸ್ತು ತುಮುಲೇ ಶಬ್ದೇ ಪ್ರವೃತ್ತೇ ಲೋಮಹರ್ಷಣ|

07112017c ಅಭ್ಯಭಾಷತ ಪುತ್ರಾಂಸ್ತೇ ರಾಜನ್ದುರ್ಯೋಧನಸ್ತ್ವರನ್||

ಆ ರೋಮಾಂಚಕಾರಿ ತುಮುಲ ಶಬ್ಧವು ಹುಟ್ಟಿಕೊಳ್ಳಲು ದುರ್ಯೋಧನನು ನಿನ್ನ ಮಕ್ಕಳಿಗೆ ತ್ವರೆಮಾಡಿ ಹೇಳಿದನು:

07112018a ರಾಜ್ಞಶ್ಚ ರಾಜಪುತ್ರಾಂಶ್ಚ ಸೋದರ್ಯಾಂಶ್ಚ ವಿಶೇಷತಃ|

07112018c ಕರ್ಣಂ ಗಚ್ಚತ ಭದ್ರಂ ವಃ ಪರೀಪ್ಸಂತೋ ವೃಕೋದರಾತ್||

“ರಾಜರು, ರಾಜಪುತ್ರರು ಮತ್ತು ವಿಶೇಷವಾಗಿ ಸೋದರರು ಕರ್ಣನಲ್ಲಿಗೆ ಹೋಗಿ ವೃಕೋದರನಿಂದ ಅವನನ್ನು ರಕ್ಷಿಸಿ. ನಿಮಗೆ ಮಂಗಳವಾಗಲಿ!

07112019a ಪುರಾ ನಿಘ್ನಂತಿ ರಾಧೇಯಂ ಭೀಮಚಾಪಚ್ಯುತಾಃ ಶರಾಃ|

07112019c ತೇ ಯತಧ್ವಂ ಮಹೇಷ್ವಾಸಾಃ ಸೂತಪುತ್ರಸ್ಯ ರಕ್ಷಣೇ||

ಮಹೇಷ್ವಾಸರೇ! ಭೀಮಸೇನನ ಚಾಪದಿಂದ ಹೊರಟ ಶರಗಳು ರಾಧೇಯನನ್ನು ಸಂಹರಿಸುವ ಮೊದಲೇ ಸೂತಪುತ್ರನ ರಕ್ಷಣೆಗೆ ಪ್ರಯತ್ನಿಸಿ!”

07112020a ದುರ್ಯೋಧನಸಮಾದಿಷ್ಟಾಃ ಸೋದರ್ಯಾಃ ಸಪ್ತ ಮಾರಿಷ|

07112020c ಭೀಮಸೇನಮಭಿದ್ರುತ್ಯ ಸಂರಬ್ಧಾಃ ಪರ್ಯವಾರಯನ್||

ಮಾರಿಷ! ದುರ್ಯೋಧನನಿಂದ ಆದೇಶಪಡೆದ ಏಳು ಸಹೋದರರು ಸಂರಬ್ಧರಾಗಿ ಭೀಮಸೇನನನ್ನು ಸುತ್ತುವರೆದು ಆಕ್ರಮಣಿಸಿದರು.

07112021a ತೇ ಸಮಾಸಾದ್ಯ ಕೌಂತೇಯಮಾವೃಣ್ವಂ ಶರವೃಷ್ಟಿಭಿಃ|

07112021c ಪರ್ವತಂ ವಾರಿಧಾರಾಭಿಃ ಪ್ರಾವೃಷೀವ ಬಲಾಹಕಾಃ||

ಅವರು ಕೌಂತೇಯನನ್ನು ಎದುರಿಸಿ ಮೋಡಗಳು ಪರ್ವತವನ್ನು ಮಳೆಯ ನೀರಿನಿಂದ ಮುಚ್ಚಿಬಿಡುವಂತೆ ಶರವೃಷ್ಟಿಗಳಿಂದ ಅವನನ್ನು ಮುಚ್ಚಿದರು.

07112022a ತೇಽಪೀಡಯನ್ಭೀಮಸೇನಂ ಕ್ರುದ್ಧಾಃ ಸಪ್ತ ಮಹಾರಥಾಃ|

07112022c ಪ್ರಜಾಸಂಹರಣೇ ರಾಜನ್ಸೋಮಂ ಸಪ್ತ ಗ್ರಹಾ ಇವ||

ರಾಜನ್! ಪ್ರಜಾಸಂಹರಣಕಾಲದಲ್ಲಿ ಏಳು ಗ್ರಹಗಳು ಸೇರಿಕೊಂಡು ಚಂದ್ರನನ್ನು ಕಾಡುವಂತೆ ಕ್ರುದ್ಧರಾದ ಆ ಏಳು ಮಹಾರಥರು ಭೀಮಸೇನನನ್ನು ಪೀಡಿಸಿದರು.

07112023a ತತೋ ವಾಮೇನ ಕೌಂತೇಯಃ ಪೀಡಯಿತ್ವಾ ಶರಾಸನಂ|

07112023c ಮುಷ್ಟಿನಾ ಪಾಂಡವೋ ರಾಜನ್ದೃಢೇನ ಸುಪರಿಷ್ಕೃತಂ||

07112024a ಮನುಷ್ಯಸಮತಾಂ ಜ್ಞಾತ್ವಾ ಸಪ್ತ ಸಂಧಾಯ ಸಾಯಕಾನ್|

07112024c ತೇಭ್ಯೋ ವ್ಯಸೃಜದಾಯಸ್ತಃ ಸೂರ್ಯರಶ್ಮಿನಿಭಾನ್ಪ್ರಭುಃ||

07112025a ನಿರಸ್ಯನ್ನಿವ ದೇಹೇಭ್ಯಸ್ತನಯಾನಾಮಸೂಂಸ್ತವ|

07112025c ಭೀಮಸೇನೋ ಮಹಾರಾಜ ಪೂರ್ವವೈರಮನುಸ್ಮರನ್||

ರಾಜನ್! ಮಹಾರಾಜ! ಆಗ ಕೌಂತೇಯ ಪಾಂಡವ ಪ್ರಭು ಭೀಮಸೇನನು ಎಡ ಮುಷ್ಟಿಯಿಂದ ಸುಪರಿಷ್ಕೃತ ಧನುಸ್ಸನ್ನು ದೃಢವಾಗಿ ಮೀಟಿ, ಅವರು ಸಾಮಾನ್ಯ ಮನುಷ್ಯರೆಂದೇ ತಿಳಿದುಕೊಂಡು, ಹಿಂದಿನ ವೈರವನ್ನು ಸ್ಮರಿಸಿಕೊಂಡು, ಏಳು ಸಾಯಕಗಳನ್ನು ಹೂಡಿ ಸೂರ್ಯನ ಕಿರಣಗಳಂತೆ ಪ್ರಕಾಶಿಸುತ್ತಿರುವ ಅವುಗಳನ್ನು ನಿನ್ನ ಪುತ್ರರ ದೇಹದಿಂದ ಪ್ರಾಣಗಳನ್ನು ಹೀರುತ್ತಿರುವನೋ ಎಂಬಂತೆ ಅವರ ಮೇಲೆ ಪ್ರಯೋಗಿಸಿದನು.

07112026a ತೇ ಕ್ಷಿಪ್ತಾ ಭೀಮಸೇನೇನ ಶರಾ ಭಾರತ ಭಾರತಾನ್|

07112026c ವಿದಾರ್ಯ ಖಂ ಸಮುತ್ಪೇತುಃ ಸ್ವರ್ಣಪುಂಖಾಃ ಶಿಲಾಶಿತಾಃ||

ಭಾರತ! ಭೀಮಸೇನನು ಎಸೆದ ಆ ಸ್ವರ್ಣಪುಂಖ ಶಿಲಾಶಿತ ಬಾಣಗಳು ಆ ಭಾರತರನ್ನು ಭೇದಿಸಿ ಆಕಾಶಕ್ಕೆ ಹಾರಿದವು.

07112027a ತೇಷಾಂ ವಿದಾರ್ಯ ಚೇತಾಂಸಿ ಶರಾ ಹೇಮವಿಭೂಷಿತಾಃ|

07112027c ವ್ಯರಾಜಂತ ಮಹಾರಾಜ ಸುಪರ್ಣಾ ಇವ ಖೇಚರಾಃ||

ಮಹಾರಾಜ! ಅವರ ಚೇತನಗಳನ್ನು ಸೀಳಿದ ಆ ಹೇಮವಿಭೂಷಿತ ಶರಗಳು ಪಕ್ಷಿ ಗರುಡನಂತೆ ರಾಜಿಸಿದವು.

07112028a ಶೋಣಿತಾದಿಗ್ಧವಾಜಾಗ್ರಾಃ ಸಪ್ತ ಹೇಮಪರಿಷ್ಕೃತಾಃ|

07112028c ಪುತ್ರಾಣಾಂ ತವ ರಾಜೇಂದ್ರ ಪೀತ್ವಾ ಶೋಣಿತಮುದ್ಗತಾಃ||

ರಾಜೇಂದ್ರ! ಆ ಏಳು ಸುವರ್ಣಭೂಷಿತ ಬಾಣಗಳು ನಿನ್ನ ಪುತ್ರರ ರಕ್ತವನ್ನು ಕುಡಿದು ಹೊರಬಂದು ರಕ್ತದಿಂದ ಲೇಪಿತ ಅಗ್ರಭಾಗ-ರೆಕ್ಕೆಗಳಿಂದ ಪ್ರಕಾಶಿಸಿದವು.

07112029a ತೇ ಶರೈರ್ಭಿನ್ನಮರ್ಮಾಣೋ ರಥೇಭ್ಯಃ ಪ್ರಾಪತನ್ ಕ್ಷಿತೌ|

07112029c ಗಿರಿಸಾನುರುಹಾ ಭಗ್ನಾ ದ್ವಿಪೇನೇವ ಮಹಾದ್ರುಮಾಃ||

ಪರ್ವತದ ತಪ್ಪಲು ಪ್ರದೇಶದಲ್ಲಿದ್ದ ಮಹಾವೃಕ್ಷಗಳು ಆನೆಗಳಿಂದ ಮುರಿದು ಬೀಳುವಂತೆ ಆ ಶರಗಳಿಂದ ಕವಚಗಳು ಒಡೆದು ನಿನ್ನ ಮಕ್ಕಳು ರಥದಿಂದ ಉರುಳಿ ಭೂಮಿಯಮೇಲೆ ಬಿದ್ದರು.

07112030a ಶತ್ರುಂಜಯಃ ಶತ್ರುಸಹಶ್ಚಿತ್ರಶ್ಚಿತ್ರಾಯುಧೋ ದೃಢಃ|

07112030c ಚಿತ್ರಸೇನೋ ವಿಕರ್ಣಶ್ಚ ಸಪ್ತೈತೇ ವಿನಿಪಾತಿತಾಃ||

ಶತ್ರುಂಜಯ, ಶತ್ರುಸಹ, ಚಿತ್ರ, ಚಿತ್ರಾಯುಧ, ದೃಢ, ಚಿತ್ರಸೇನ, ವಿಕರ್ಣ[1] ಈ ಏಳುಮಂದಿ ಕೆಳಗುರುಳಿದರು.

07112031a ತಾನ್ನಿಹತ್ಯ ಮಹಾಬಾಹೂ ರಾಧೇಯಸ್ಯೈವ ಪಶ್ಯತಃ|

07112031c ಸಿಂಹನಾದರವಂ ಘೋರಮಸೃಜತ್ಪಾಂಡುನಂದನಃ||

ಮಹಾಬಾಹು ರಾಧೇಯನು ನೋಡುತ್ತಿದ್ದಂತೆಯೇ ಅವರನ್ನು ಸಂಹರಿಸಿದ ಪಾಂಡುನಂದನನು ಘೋರ ಸಿಂಹನಾದಗೈದನು.

07112032a ಸ ರವಸ್ತಸ್ಯ ಶೂರಸ್ಯ ಧರ್ಮರಾಜಸ್ಯ ಭಾರತ|

07112032c ಆಚಖ್ಯಾವಿವ ತದ್ಯುದ್ಧಂ ವಿಜಯಂ ಚಾತ್ಮನೋ ಮಹತ್||

ಭಾರತ! ಆ ಶೂರನ ಕೂಗು ಯುದ್ಧದಲ್ಲಿ ಅವನು ಗಳಿಸಿರುವ ತನ್ಮೂಲಕವಾಗಿ ತನಗೂ ದೊರಕಿರುವ ಮಹಾ ವಿಜಯವನ್ನು ಧರ್ಮರಾಜನಿಗೆ ಸೂಚಿಸಿತು.

07112033a ತಂ ಶ್ರುತ್ವಾ ಸುಮಹಾನಾದಂ ಭೀಮಸೇನಸ್ಯ ಧನ್ವಿನಃ|

07112033c ಬಭೂವ ಪರಮಾ ಪ್ರೀತಿರ್ಧರ್ಮರಾಜಸ್ಯ ಸಂಯುಗೇ||

ಧನ್ವಿ ಭೀಮಸೇನನ ಆ ಸುಮಹಾನಾದವನ್ನು ಕೇಳಿ ರಣದಲ್ಲಿದ್ದ ಧರ್ಮರಾಜನಿಗೆ ಮಹದಾನಂದವುಂಟಾಯಿತು.

07112034a ತತೋ ಹೃಷ್ಟೋ ಮಹಾರಾಜ ವಾದಿತ್ರಾಣಾಂ ಮಹಾಸ್ವನೈಃ|

07112034c ಭೀಮಸೇನರವಂ ಪಾರ್ಥಃ ಪ್ರತಿಜಗ್ರಾಹ ಸರ್ವಶಃ||

ಮಹಾರಾಜ! ಆಗ ಹೃಷ್ಟನಾದ ಪಾರ್ಥ ಯುಧಿಷ್ಠಿರನು ಎಲ್ಲಕಡೆ ರಣವಾದ್ಯ ಘೋಷಗಳನ್ನು ಮೊಳಗಿಸಿ ಭೀಮಸೇನನ ಸಿಂಹನಾದವನ್ನು ಪ್ರತಿಗ್ರಹಿಸಿದನು.

07112035a ಅಭ್ಯಯಾಚ್ಚೈವ ಸಮರೇ ದ್ರೋಣಮಸ್ತ್ರಭೃತಾಂ ವರಂ|

07112035c ಹರ್ಷೇಣ ಮಹತಾ ಯುಕ್ತಃ ಕೃತಸಂಜ್ಞೇ ವೃಕೋದರೇ||

ತಾನು ಮಹಾ ಸಂತೋಷಗೊಂಡಿದ್ದೇನೆ ಎಂದು ವೃಕೋದರನಿಗೆ ಸಂಜ್ಞೆಯನ್ನಿತ್ತು ಧರ್ಮರಾಜನು ಸಮರದಲ್ಲಿ ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನನ್ನು ಎದುರಿಸಿದನು.

07112036a ಏಕತ್ರಿಂಶನ್ಮಹಾರಾಜ ಪುತ್ರಾಂಸ್ತವ ಮಹಾರಥಾನ್|

07112036c ಹತಾನ್ದುರ್ಯೋಧನೋ ದೃಷ್ಟ್ವಾ ಕ್ಷತ್ತುಃ ಸಸ್ಮಾರ ತದ್ವಚಃ||

ಮಹಾರಾಜ! ಮೂವತ್ತೊಂದು[2] ನಿನ್ನ ಮಹಾರಥ ಪುತ್ರರು ಹತರಾದುದನ್ನು ನೋಡಿ ದುರ್ಯೋಧನನು ಕ್ಷತ್ತ ವಿದುರನ ಆ ಮಾತುಗಳನ್ನು ನೆನಪಿಸಿಕೊಂಡನು.

07112037a ತದಿದಂ ಸಮನುಪ್ರಾಪ್ತಂ ಕ್ಷತ್ತುರ್ಹಿತಕರಂ ವಚಃ|

07112037c ಇತಿ ಸಂಚಿಂತ್ಯ ರಾಜಾಸೌ ನೋತ್ತರಂ ಪ್ರತ್ಯಪದ್ಯತ||

“ಕ್ಷತ್ತನ ಹಿತಕರವಚನವನ್ನೇನು ಹೇಳಿದ್ದನೋ ಅವೆಲ್ಲವೂ ಈಗ ನಡೆಯುತ್ತಿವೆ!” ಎಂದು ಚಿಂತಿಸಿದ ರಾಜನಿಗೆ ಉತ್ತರವೊಂದೂ ದೊರಕಲಿಲ್ಲ.

07112038a ಯದ್ದ್ಯೂತಕಾಲೇ ದುರ್ಬುದ್ಧಿರಬ್ರವೀತ್ತನಯಸ್ತವ|

07112038c ಯಚ್ಚ ಕರ್ಣೋಽಬ್ರವೀತ್ಕೃಷ್ಣಾಂ ಸಭಾಯಾಂ ಪರುಷಂ ವಚಃ||

07112039a ಪ್ರಮುಖೇ ಪಾಂಡುಪುತ್ರಾಣಾಂ ತವ ಚೈವ ವಿಶಾಂ ಪತೇ|

07112039c ಕೌರವಾಣಾಂ ಚ ಸರ್ವೇಷಾಮಾಚಾರ್ಯಸ್ಯ ಚ ಸನ್ನಿಧೌ||

07112040a ವಿನಷ್ಟಾಃ ಪಾಂಡವಾಃ ಕೃಷ್ಣೇ ಶಾಶ್ವತಂ ನರಕಂ ಗತಾಃ|

07112040c ಪತಿಮನ್ಯಂ ವೃಣೀಷ್ವೇತಿ ತಸ್ಯೇದಂ ಫಲಮಾಗತಂ||

ವಿಶಾಂಪತೇ! ದ್ಯೂತದ ಸಮಯದಲ್ಲಿ ನಿನ್ನ ದುರ್ಬುದ್ಧಿ ಮಗ ಮತ್ತು ಕರ್ಣರು ಸಭೆಯಲ್ಲಿ ಪಾಂಡುಪುತ್ರರ ಮತ್ತು ನಿನ್ನ ಪ್ರಮುಖದಲ್ಲಿ, ಸರ್ವ ಕೌರವರ ಮತ್ತು ಆಚಾರ್ಯನ ಸನ್ನಿಧಿಯಲ್ಲಿ ಕೃಷ್ಣೆ ದ್ರೌಪದಿಗೆ ಏನನ್ನು ಹೇಳಿದ್ದರೋ - “ಕೃಷ್ಣೇ! ಪಾಂಡವರು ಹಾಳಾಗಿ ಹೋದರು! ಶಾಶ್ವತ ನರಕಕ್ಕೆ ಹೋಗಿದ್ದಾರೆ! ಬೇರೆ ಯಾರನ್ನಾದರೂ ಪತಿಯನ್ನಾಗಿ ವರಿಸು!” ಎಂದು ಹೇಳಿದ್ದುದರ ಫಲವು ಈಗ ದೊರಕುತ್ತಿದೆ.

07112041a ಯತ್ಸ್ಮ ತಾಂ ಪರುಷಾಣ್ಯಾಹುಃ ಸಭಾಮಾನಾಯ್ಯ ದ್ರೌಪದೀಂ|

07112041c ಪಾಂಡವಾನುಗ್ರಧನುಷಃ ಕ್ರೋಧಯಂತಸ್ತವಾತ್ಮಜಾಃ||

ದ್ರೌಪದಿಯನ್ನು ಸಭೆಗೆ ಎಳೆದು ತಂದು ನಿನ್ನ ಪುತ್ರರು ಏನೆಲ್ಲ ಕಠೋರ ಮಾತುಗಳನ್ನಾಡಿದ್ದರೋ ಅವು ಪಾಂಡವರ ಉಗ್ರಧನ್ವಿ ಭೀಮಸೇನನನ್ನು ಕೆರಳಿಸಿವೆ.

07112042a ತಂ ಭೀಮಸೇನಃ ಕ್ರೋಧಾಗ್ನಿಂ ತ್ರಯೋದಶ ಸಮಾಃ ಸ್ಥಿತಂ|

07112042c ವಿಸೃಜಂಸ್ತವ ಪುತ್ರಾಣಾಮಂತಂ ಗಚ್ಚತಿ ಕೌರವ||

ಕೌರವ! ಹದಿಮೂರು ವರ್ಷಗಳು ಹುಗಿದಿರಿಸಿಕೊಂಡಿದ್ದ ಆ ಕ್ರೋಧಾಗ್ನಿಯನ್ನು ಭೀಮಸೇನನು ನಿನ್ನ ಮಕ್ಕಳ ಮೇಲೆ ಹರಿಸುತ್ತಾ ಅಂತ್ಯಗೊಳಿಸುತ್ತಿದ್ದಾನೆ.

07112043a ವಿಲಪಂಶ್ಚ ಬಹು ಕ್ಷತ್ತಾ ಶಮಂ ನಾಲಭತ ತ್ವಯಿ|

07112043c ಸಪುತ್ರೋ ಭರತಶ್ರೇಷ್ಠ ತಸ್ಯ ಭುಂಕ್ಷ್ವ ಫಲೋದಯಂ||

ಬಹುವಾಗಿ ವಿಲಪಿಸುತ್ತಿದ್ದ ಕ್ಷತ್ತನು ನಿನ್ನಲ್ಲಿ ಶಾಂತಿಯನ್ನು ಕಾಣಲಿಲ್ಲ. ಭರತಶ್ರೇಷ್ಠ! ಅದರಿಂದಾದ ಫಲವನ್ನು ನಿನ್ನ ಪುತ್ರರೊಂದಿಗೆ ಅನುಭವಿಸು.

07112043e ಹತೋ ವಿಕರ್ಣೋ ರಾಜೇಂದ್ರ ಚಿತ್ರಸೇನಶ್ಚ ವೀರ್ಯವಾನ್|

07112044a ಪ್ರವರಾನಾತ್ಮಜಾನಾಂ ತೇ ಸುತಾಂಶ್ಚಾನ್ಯಾನ್ಮಹಾರಥಾನ್||

ರಾಜೇಂದ್ರ! ವಿಕರ್ಣ ಮತ್ತು ವೀರ್ಯವಾನ್ ಚಿತ್ರಸೇನರು ಹಾಗೆಯೇ ನಿನ್ನ ಅನ್ಯ ಪ್ರಮುಖ ಮಕ್ಕಳೂ ಅನ್ಯ ಮಹಾರಥರೂ ಹತರಾದರು.

07112044c ಯಾನ್ಯಾಂಶ್ಚ ದದೃಶೇ ಭೀಮಶ್ಚಕ್ಷುರ್ವಿಷಯಮಾಗತಾನ್|

07112044e ಪುತ್ರಾಂಸ್ತವ ಮಹಾಬಾಹೋ ತ್ವರಯಾ ತಾಂ ಜಘಾನ ಹ||

ಮಹಾಬಾಹೋ! ನಿನ್ನ ಪುತ್ರರಲ್ಲಿ ಯಾರ್ಯಾರು ಭೀಮನ ದೃಷ್ಟಿಯ ಪರಿಧಿಯಲ್ಲಿ ಬರುತ್ತಿದ್ದರೋ ಅವರನ್ನು ತ್ವರೆಮಾಡಿ ಅವನು ಸಂಹರಿಸುತ್ತಿದ್ದನು.

07112045a ತ್ವತ್ಕೃತೇ ಹ್ಯಹಮದ್ರಾಕ್ಷಂ ದಹ್ಯಮಾನಾಂ ವರೂಥಿನೀಂ|

07112045c ಸಹಸ್ರಶಃ ಶರೈರ್ಮುಕ್ತೈಃ ಪಾಂಡವೇನ ವೃಷೇಣ ಚ||

ನೀನು ಮಾಡಿದುದರ ಪರಿಣಾಮವಾಗಿಯೇ ಇಂದು ಪಾಂಡವ ಭೀಮಸೇನ ಮತ್ತು ವೃಷ ಕರ್ಣನಿಂದ ಪ್ರಯೋಗಿಸಲ್ಪಟ್ಟ ಸಹಸ್ರಾರು ಶರಗಳು ಸೇನೆಗಳನ್ನು ಸುಡುತ್ತಿರುವುದನ್ನು ನೋಡುತ್ತಿದ್ದೇನೆ.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಯುದ್ಧೇ ದ್ವಾದಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಯುದ್ಧ ಎನ್ನುವ ನೂರಾಹನ್ನೆರಡನೇ ಅಧ್ಯಾಯವು.

Image result for lotus against white background

[1] ಹತರಾದ ಏಳುಮಂದಿಗಳಲ್ಲಿ ವಿಕರ್ಣನೂ ಸೇರಿರುವುದನ್ನು ಕಂಡು ಭೀಮಸೇನನು ಶೋಕಿಸಿದ ವಿಷಯವು ಕುಂಭಕೋಣ-ನೀಲಕಂಠೀಯಗಳಲ್ಲಿವೆ. ಆದರೆ ಪುಣೆಯ ಸಂಪುಟದಲ್ಲಿ ಇಲ್ಲ.

[2] ಯುದ್ಧದ ಹದಿನಾಲ್ಕನೆಯ ದಿನದಲ್ಲಿ ಹತರಾದ ಧೃತರಾಷ್ಟ್ರನ ಮುಕ್ಕಳ ಸಂಖ್ಯೆ ಮೂವತ್ತೆರಡು – ಅಧ್ಯಾಯ 102ರಲ್ಲಿ ಕುಂಡಭೇದಿ, ವಿಂದ, ಅನುವಿಂದ, ಸುದರ್ಶನ, ವೃಂದಾರಕ, ಸುಷೇಣ, ಅಭಯ, ರೌದ್ರಕರ್ಮ, ಸುವರ್ಮ, ದುರ್ವಿಮೋಚನ (೧೧), ಅಧ್ಯಾಯ 108ರಲ್ಲಿ ದುರ್ಜಯ (೧), ಅಧ್ಯಾಯ 109ರಲ್ಲಿ ದುರ್ಮುಖ (೧), ಅಧ್ಯಾಯ 110ರಲ್ಲಿ ದುರ್ಮರ್ಷಣ, ದುಃಸಹ, ದುರ್ಮದ, ದುರ್ಧರ, ಜಯ (೫), ಅಧ್ಯಾಯ 111ರಲ್ಲಿ ಚಿತ್ರ, ಉಪಚಿತ್ರ, ಚಿತ್ರಾಕ್ಷ, ಚಾರುಚಿತ್ರ, ಶರಾಸನ, ಚಿತ್ರಾಯುಧ, ಚಿತ್ರವರ್ಮ (೭), ಈ ಅಧ್ಯಾಯದಲ್ಲಿ ಶತ್ರುಂಜಯ, ಶತ್ರುಸಹ, ಚಿತ್ರ (ಚಿತ್ರಬಾಣ), ಚಿತ್ರಾಯುಧ (ಅಗ್ರಾಯುಧ), ದೃಢ (ದೃಢವರ್ಮ), ಚಿತ್ರಸೇನ (ಉಗ್ರಸೇನ) ಮತ್ತು ವಿಕರ್ಣ (೭).

Comments are closed.