Drona Parva: Chapter 111

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೧

ಭೀಮಸೇನನು ಧೃತರಾಷ್ಟ್ರನ ಏಳು ಮಕ್ಕಳನ್ನು - ಚಿತ್ರ, ಉಪಚಿತ್ರ, ಚಿತ್ರಾಕ್ಷ, ಚಾರುಚಿತ್ರ, ಶರಾಸನ, ಚಿತ್ರಾಯುಧ ಮತ್ತು ಚಿತ್ರವರ್ಮ – ಸಂಹರಿಸಿದುದು (೧-೧೯). ಭೀಮಸೇನ-ಕರ್ಣರ ಯುದ್ಧ (೨೦-೩೫).

07111001 ಸಂಜಯ ಉವಾಚ|  

07111001a ತವಾತ್ಮಜಾಂಸ್ತು ಪತಿತಾನ್ದೃಷ್ಟ್ವಾ ಕರ್ಣಃ ಪ್ರತಾಪವಾನ್|

07111001c ಕ್ರೋಧೇನ ಮಹತಾವಿಷ್ಟೋ ನಿರ್ವಿಣ್ಣೋಽಭೂತ್ಸ ಜೀವಿತಾತ್||

ಸಂಜಯನು ಹೇಳಿದನು: “ನಿನ್ನ ಮಕ್ಕಳು ಬಿದ್ದುದನ್ನು ನೋಡಿ ಪ್ರತಾಪವಾನ ಕರ್ಣನು ಮಹಾ ಕ್ರೋಧದಿಂದ ಆವಿಷ್ಟನಾದನು ಮತ್ತು ತನ್ನ ಜೀವನದಲ್ಲಿಯೇ ಜಿಗುಪ್ಸೆತಾಳಿದನು.

07111002a ಆಗಸ್ಕೃತಮಿವಾತ್ಮಾನಂ ಮೇನೇ ಚಾಧಿರಥಿಸ್ತದಾ|

07111002c ಭೀಮಸೇನಂ ತತಃ ಕ್ರುದ್ಧಃ ಸಮಾದ್ರವತ ಸಂಭ್ರಮಾತ್||

ಆಗ ಆಧಿರಥನು ತಾನೇ ತಪ್ಪಿತಸ್ಥನು ಎಂದು ಕೊಂಡನು. ಅನಂತರ ಕ್ರುದ್ಧನಾಗಿ ಉತ್ತೇಜದಿಂದ ಭೀಮಸೇನನನ್ನು ಆಕ್ರಮಣಿಸಿದನು.

07111003a ಸ ಭೀಮಂ ಪಂಚಭಿರ್ವಿದ್ಧ್ವಾ ರಾಧೇಯಃ ಪ್ರಹಸನ್ನಿವ|

07111003c ಪುನರ್ವಿವ್ಯಾಧ ಸಪ್ತತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ||

ರಾಧೇಯನು ನಗುತ್ತಾ ಭೀಮನನ್ನು ಐದರಿಂದ ಹೊಡೆದು ಪುನಃ ಏಳು ಸ್ವರ್ಣಪುಂಖ[1] ಶಿಲಾಶಿತಬಾಣಗಳಿಂದ ಹೊಡೆದನು.

07111004a ಅವಹಾಸಂ ತು ತಂ ಪಾರ್ಥೋ ನಾಮೃಷ್ಯತ ವೃಕೋದರಃ|

07111004c ತತೋ ವಿವ್ಯಾಧ ರಾಧೇಯಂ ಶತೇನ ನತಪರ್ವಣಾಂ||

ಅವನ ಆ ಅವಹೇಳನವನ್ನು ಪಾರ್ಥ ವೃಕೋದರನು ಸಹಿಸಿಕೊಳ್ಳಲಿಲ್ಲ. ಆಗ ಅವನು ರಾಧೇಯನನ್ನು ನೂರು ನತಪರ್ವಗಳಿಂದ ಹೊಡೆದನು.

07111005a ಪುನಶ್ಚ ವಿಶಿಖೈಸ್ತೀಕ್ಷ್ಣೈರ್ವಿದ್ಧ್ವಾ ಪಂಚಭಿರಾಶುಶುಗೈಃ|

07111005c ಧನುಶ್ಚಿಚ್ಚೇದ ಭಲ್ಲೇನ ಸೂತಪುತ್ರಸ್ಯ ಮಾರಿಷ||

ಮಾರಿಷ! ಪುನಃ ಅವನು ಐದು ತೀಕ್ಷ್ಣ ವಿಶಿಖ ಆಶುಶುಗಗಳಿಂದ ಹೊಡೆದು ಭಲ್ಲದಿಂದ ಸೂತಪುತ್ರನ ಬಿಲ್ಲನ್ನು ಕತ್ತರಿಸಿದನು.

07111006a ಅಥಾನ್ಯದ್ಧನುರಾದಾಯ ಕರ್ಣೋ ಭಾರತ ದುರ್ಮನಾಃ|

07111006c ಇಷುಭಿಶ್ಚಾದಯಾಮಾಸ ಭೀಮಸೇನಂ ಸಮಂತತಃ||

ಭಾರತ! ಆಗ ದುಃಖಿತನಾದ ಕರ್ಣನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಬಾಣಗಳಿಂದ ಭೀಮಸೇನನನ್ನು ಎಲ್ಲ ಕಡೆಗಳಿಂದ ಮುಚ್ಚಿದನು.

07111007a ತಸ್ಯ ಭೀಮೋ ಹಯಾನ್ ಹತ್ವಾ ವಿನಿಹತ್ಯ ಚ ಸಾರಥಿಂ|

07111007c ಪ್ರಜಹಾಸ ಮಹಾಹಾಸಂ ಕೃತೇ ಪ್ರತಿಕೃತಂ ಪುನಃ||

ಭೀಮನು ಅವನ ಕುದುರೆಗಳನ್ನು ಕೊಂದು, ಸಾರಥಿಯನ್ನೂ ಸಂಹರಿಸಿ ಮಾಡಿದುದಕ್ಕೆ ಪ್ರತೀಕಾರ ಮಾಡಿದನೆಂದು ಅಟ್ಟಹಾಸದ ನಗುವನ್ನು ನಕ್ಕನು.

07111008a ಇಷುಭಿಃ ಕಾರ್ಮುಕಂ ಚಾಸ್ಯ ಚಕರ್ತ ಪುರುಷರ್ಷಭಃ|

07111008c ತತ್ಪಪಾತ ಮಹಾರಾಜ ಸ್ವರ್ಣಪೃಷ್ಠಂ ಮಹಾಸ್ವನಂ||

ಮಹಾರಾಜ! ಆ ಪುರುಷರ್ಷಭ ಭೀಮನು ಬಾಣಗಳಿಂದ ಕರ್ಣನ ಧನುಸ್ಸನ್ನು ಕತ್ತರಿಸಲು ಆ ಸ್ವರ್ಣದ ಹಿಡಿಯಿದ್ದ, ಜೋರಾಗಿ ಟೇಂಕರಿಸುತ್ತಿದ್ದ ಬಿಲ್ಲು ಕೆಳಕ್ಕೆ ಬಿದ್ದಿತು.

07111009a ಅವಾರೋಹದ್ರಥಾತ್ತಸ್ಮಾದಥ ಕರ್ಣೋ ಮಹಾರಥಃ|

07111009c ಗದಾಂ ಗೃಹೀತ್ವಾ ಸಮರೇ ಭೀಮಸೇನಾಯ ಚಾಕ್ಷಿಪತ್||

ಆಗ ಮಹಾರಥಿ ಕರ್ಣನು ರಥದಿಂದ ಇಳಿದು ಸಮರದಲ್ಲಿ ಗದೆಯನ್ನು ಹಿಡಿದು ಭೀಮಸೇನನ ಮೇಲೆ ಎಸೆದನು.

07111010a ತಾಮಾಪತಂತೀಂ ಸಹಸಾ ಗದಾಂ ದೃಷ್ಟ್ವಾ ವೃಕೋದರಃ|

07111010c ಶರೈರವಾರಯದ್ರಾಜನ್ಸರ್ವಸೈನ್ಯಸ್ಯ ಪಶ್ಯತಃ||

ರಾಜನ್! ಮೇಲಿಂದ ಬೀಳುತ್ತಿದ್ದ ಆ ಗದೆಯನ್ನು ನೋಡಿ ಕೂಡಲೇ ವೃಕೋದರನು ಸರ್ವಸೇನೆಗಳೂ ನೋಡುತ್ತಿದ್ದಂತೆಯೇ ಶರಗಳಿಂದ ಅದನ್ನು ತಡೆದನು.

07111011a ತತೋ ಬಾಣಸಹಸ್ರಾಣಿ ಪ್ರೇಷಯಾಮಾಸ ಪಾಂಡವಃ|

07111011c ಸೂತಪುತ್ರವಧಾಕಾಂಕ್ಷೀ ತ್ವರಮಾಣಃ ಪರಾಕ್ರಮೀ||

ಆಗ ಪರಾಕ್ರಮೀ ಪಾಂಡವನು ಸೂತಪುತ್ರನ ವಧೆಯನ್ನು ಬಯಸಿ ತ್ವರೆಮಾಡಿ ಸಹಸ್ರಾರು ಬಾಣಗಳನ್ನು ಪ್ರಯೋಗಿಸಿದನು.

07111012a ತಾನಿಷೂನಿಷುಭಿಃ ಕರ್ಣೋ ವಾರಯಿತ್ವಾ ಮಹಾಮೃಧೇ|

07111012c ಕವಚಂ ಭೀಮಸೇನಸ್ಯ ಪಾತಯಾಮಾಸ ಸಾಯಕೈಃ||

ಮಹಾರಣದಲ್ಲಿ ಆ ಬಾಣಗಳನ್ನು ಬಾಣಗಳಿಂದಲೇ ತಡೆದು ಕರ್ಣನು ಸಾಯಕಗಳಿಂದ ಭೀಮಸೇನನ ಕವಚವನ್ನು ಬೀಳಿಸಿದನು.

07111013a ಅಥೈನಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾರ್ಪಯತ್|

07111013c ಪಶ್ಯತಾಂ ಸರ್ವಭೂತಾನಾಂ ತದದ್ಭುತಮಿವಾಭವತ್||

ಇನ್ನೂ ಇಪ್ಪತ್ತೈದು ಕ್ಷುದ್ರಕ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು. ನೋಡುತ್ತಿರುವ ಸರ್ವಭೂತಗಳಿಗೂ ಅದೊಂದು ಅದ್ಭುತವೆನಿಸಿತು.

07111014a ತತೋ ಭೀಮೋ ಮಹಾರಾಜ ನವಭಿರ್ನತಪರ್ವಣಾಂ|

07111014c ರಣೇಽಪ್ರೇಷಯತ ಕ್ರುದ್ಧಃ ಸೂತಪುತ್ರಸ್ಯ ಮಾರಿಷ||

ಮಾರಿಷ! ಮಹಾರಾಜ! ಆಗ ರಣದಲ್ಲಿ ಕ್ರುದ್ಧನಾದ ಭೀಮನು ಒಂಭತ್ತು ನತಪರ್ವಗಳನ್ನು ಸೂತಪುತ್ರನ ಮೇಲೆ ಪ್ರಯೋಗಿಸಿದನು.

07111015a ತೇ ತಸ್ಯ ಕವಚಂ ಭಿತ್ತ್ವಾ ತಥಾ ಬಾಹುಂ ಚ ದಕ್ಷಿಣಂ|

07111015c ಅಭ್ಯಗುರ್ಧರಣೀಂ ತೀಕ್ಷ್ಣಾ ವಲ್ಮೀಕಮಿವ ಪನ್ನಗಾಃ||

ಆ ತೀಕ್ಷ್ಣ ಬಾಣಗಳು ಅವನ ಕವಚವನ್ನು ಮತ್ತು ಬಲ ಬಾಹುವನ್ನು ಸೀಳಿ ಹಾವುಗಳು ಹುತ್ತವನ್ನು ಹೊಗುವಂತೆ ನೆಲವನ್ನು ಹೊಕ್ಕವು.

07111016a ರಾಧೇಯಂ ತು ರಣೇ ದೃಷ್ಟ್ವಾ ಪದಾತಿನಮವಸ್ಥಿತಂ|

07111016c ಭೀಮಸೇನೇನ ಸಂರಬ್ಧಂ ರಾಜಾ ದುರ್ಯೋಧನೋಽಬ್ರವೀತ್|

07111016e ತ್ವರಧ್ವಂ ಸರ್ವತೋ ಯತ್ತಾ ರಾಧೇಯಸ್ಯ ರಥಂ ಪ್ರತಿ||

ರಣದಲ್ಲಿ ರಾಧೇಯನು ಭೀಮಸೇನನಿಂದ ಗಾಬರಿಗೊಂಡು ನೆಲದಮೇಲೆ ನಿಂತಿರುವುದನ್ನು ನೋಡಿ ದುರ್ಯೋಧನನು “ಎಲ್ಲರೂ ರಾಧೇಯನ ರಥದ ಕಡೆ ತ್ವರೆಮಾಡಿ!” ಎಂದು ಹೇಳಿದನು.

07111017a ತತಸ್ತವ ಸುತಾ ರಾಜನ್ ಶ್ರುತ್ವಾ ಭ್ರಾತುರ್ವಚೋ ದ್ರುತಂ|

07111017c ಅಭ್ಯಯುಃ ಪಾಂಡವಂ ಯುದ್ಧೇ ವಿಸೃಜಂತಃ ಶಿತಾಂ ಶರಾನ್||

07111018a ಚಿತ್ರೋಪಚಿತ್ರಶ್ಚಿತ್ರಾಕ್ಷಶ್ಚಾರುಚಿತ್ರಃ ಶರಾಸನಃ|

07111018c ಚಿತ್ರಾಯುಧಶ್ಚಿತ್ರವರ್ಮಾ ಸಮರೇ ಚಿತ್ರಯೋಧಿನಃ||

ರಾಜನ್! ಅಣ್ಣನ ಮಾತನ್ನು ಕೇಳಿದ ನಿನ್ನ ಮಕ್ಕಳು - ಚಿತ್ರ, ಉಪಚಿತ್ರ, ಚಿತ್ರಾಕ್ಷ, ಚಾರುಚಿತ್ರ, ಶರಾಸನ, ಚಿತ್ರಾಯುಧ ಮತ್ತು ಸಮರದಲ್ಲಿ ಚಿತ್ರಯೋಧೀ ಚಿತ್ರವರ್ಮ ಇವರು ಯುದ್ಧದಲ್ಲಿ ನಿಶಿತ ಶರಗಳನ್ನು ಪ್ರಯೋಗಿಸುತ್ತಾ ಪಾಂಡವನನ್ನು ಆಕ್ರಮಣಿಸಿದರು.

07111019a ಆಗಚ್ಚತಸ್ತಾನ್ಸಹಸಾ ಭೀಮೋ ರಾಜನ್ಮಹಾರಥಃ|

07111019c ಸಾಶ್ವಸೂತಧ್ವಜಾನ್ಯತ್ತಾನ್ಪಾತಯಾಮಾಸ ಸಂಯುಗೇ|

07111019e ತೇ ಹತಾ ನ್ಯಪತನ್ಭೂಮೌ ವಾತನುನ್ನಾ ಇವ ದ್ರುಮಾಃ||

ರಾಜನ್! ಮಹಾರಥ ಭೀಮನು ಸಂಯುಗದಲ್ಲಿ ಬರುತ್ತಿದ್ದ ಅವರನ್ನು ಕೂಡಲೇ ಕುದುರೆಗಳು, ಸೂತರು ಮತ್ತು ಧ್ವಜಗಳೊಂದಿಗೆ ಉರುಳಿಸಿದನು. ಭಿರುಗಾಳಿಗೆ ಸಿಲುಕಿದ ಮರಗಳಂತೆ ಅವರು ಹತರಾಗಿ ನೆಲದ ಮೇಲೆ ಬಿದ್ದರು.

07111020a ದೃಷ್ಟ್ವಾ ವಿನಿಹತಾನ್ಪುತ್ರಾಂಸ್ತವ ರಾಜನ್ಮಹಾರಥಾನ್|

07111020c ಅಶ್ರುಪೂರ್ಣಮುಖಃ ಕರ್ಣಃ ಕಶ್ಮಲಂ ಸಮಪದ್ಯತ||

ರಾಜನ್! ನಿನ್ನ ಮಹಾರಥ ಪುತ್ರರು ಹತರಾದುದನ್ನು ಕಂಡು ಕರ್ಣನು ಕಣ್ಣೀರುತುಂಬಿದವನಾಗಿ ಶೋಕಭರಿತನಾದನು.

07111021a ರಥಮನ್ಯಂ ಸಮಾಸ್ಥಾಯ ವಿಧಿವತ್ಕಲ್ಪಿತಂ ಪುನಃ|

07111021c ಅಭ್ಯಯಾತ್ಪಾಂಡವಂ ಯುದ್ಧೇ ತ್ವರಮಾಣಃ ಪರಾಕ್ರಮೀ||

ಆ ಪರಾಕ್ರಮಿಯು ವಿಧಿವತ್ತಾಗಿ ಸಜ್ಜುಗೊಳಿಸಿದ್ದ ಇನ್ನೊಂದು ರಥವನ್ನೇರಿ ಯುದ್ಧದಲ್ಲಿ ತ್ವರೆಮಾಡುತ್ತಾ ಪುನಃ ಪಾಂಡವ ಭೀಮನನ್ನು ಎದುರಿಸಿದನು.

07111022a ತಾವನ್ಯೋನ್ಯಂ ಶರೈರ್ವಿದ್ಧ್ವಾ ಸ್ವರ್ಣಪುಂಖೈಃ ಶಿಲಾಶಿತೈಃ|

07111022c ವ್ಯಭ್ರಾಜೇತಾಂ ಮಹಾರಾಜ ಪುಷ್ಪಿತಾವಿವ ಕಿಂಶುಕ||

ಮಹಾರಾಜ! ಅನ್ಯೋನ್ಯರನ್ನು ಸ್ವರ್ಣಪುಂಖಗಳ ಶಿಲಾಶಿತ ಶರಗಳಿಂದ ಹೊಡೆದು ಗಾಯಗೊಳಿಸಿದ ಅವರು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಕಂಗೊಳಿಸಿದರು.

07111023a ಷಟ್ತ್ರಿಂಶದ್ಭಿಸ್ತತೋ ಭಲ್ಲೈರ್ನಿಶಿತೈಸ್ತಿಗ್ಮತೇಜನೈಃ|

07111023c ವ್ಯಧಮತ್ಕವಚಂ ಕ್ರುದ್ಧಃ ಸೂತಪುತ್ರಸ್ಯ ಪಾಂಡವಃ||

ಆಗ ಪಾಂಡವನು ಕ್ರುದ್ಧನಾಗಿ ಮೂವತ್ತಾರು ತಿಗ್ಮತೇಜಸ್ಸಿನ ನಿಶಿತ ಭಲ್ಲಗಳಿಂದ ಸೂತಪುತ್ರನ ಕವಚವನ್ನು ತುಂಡರಿಸಿದನು.

07111024a ರಕ್ತಚಂದನದಿಗ್ಧಾಂಗೌ ಶರೈಃ ಕೃತಮಹಾವ್ರಣೌ|

07111024c ಶೋಣಿತಾಕ್ತೌ ವ್ಯರಾಜೇತಾಂ ಕಾಲಸೂರ್ಯಾವಿವೋದಿತೌ||

ರಕ್ತ-ಚಂದನಗಳಿಂದ ಲೇಪಿತಗೊಂಡ, ಶರಗಳಿಂದ ತುಂಬಾ ಗಾಯಮಾಡಿಕೊಂಡು ಕೆಂಪಾಗಿದ್ದ ಅವರಿಬ್ಬರೂ ಉದಯಿಸುತ್ತಿರುವ ಪ್ರಳಯಕಾಲದ ಸೂರ್ಯರಂತೆ ರಾರಾಜಿಸಿದರು.

07111025a ತೌ ಶೋಣಿತೋಕ್ಷಿತೈರ್ಗಾತ್ರೈಃ ಶರೈಶ್ಚಿನ್ನತನುಚ್ಚದೌ|

07111025c ವಿವರ್ಮಾಣೌ ವ್ಯರಾಜೇತಾಂ ನಿರ್ಮುಕ್ತಾವಿವ ಪನ್ನಗೌ||

ರಕ್ತದಿಂದ ಅಂಗಾಂಗಳು ತೋಯ್ದುಹೋಗಿದ್ದ, ಶರಗಳು ತಾಗಿ ಚರ್ಮವು ಹರಿದುಹೋಗಿದ್ದ, ಕವಚಗಳನ್ನು ಕಳೆದುಕೊಂಡಿದ್ದ ಅವರಿಬ್ಬರು ಪೊರೆಬಿಟ್ಟ ಸರ್ಪಗಳಂತೆ ರಾಜಿಸುತ್ತಿದ್ದರು.

07111026a ವ್ಯಾಘ್ರಾವಿವ ನರವ್ಯಾಘ್ರೌ ದಂಷ್ಟ್ರಾಭಿರಿತರೇತರಂ|

07111026c ಶರದಂಷ್ಟ್ರಾ ವಿಧುನ್ವಾನೌ ತತಕ್ಷತುರರಿಂದಮೌ||

ಹುಲಿಗಳು ತಮ್ಮ ಕೋರೆದಾಡೆಗಳಿಂದ ಪರಸ್ಪರರನ್ನು ಗಾಯಗೊಳಿಸುವಂತೆ ಆ ಇಬ್ಬರು ಅರಿಂದಮ ನರವ್ಯಾಘ್ರರು ಶರಗಳೆಂಬ ತಮ್ಮ ಹಲ್ಲುಗಳಿಂದ ಪರೆದಾಡಿಕೊಂಡು ಗಾಯಮಾಡಿದರು.

07111027a ವಾರಣಾವಿವ ಸಂಸಕ್ತೌ ರಂಗಮಧ್ಯೇ ವಿರೇಜತುಃ|

07111027c ತುದಂತೌ ವಿಶಿಖೈಸ್ತೀಕ್ಷ್ಣೈರ್ಮತ್ತವಾರಣವಿಕ್ರಮೌ||

ರಂಗಮಧ್ಯದಲ್ಲಿ ತಮ್ಮ ದಂತಗಳಿಂದ ತಿವಿದು ಕಾದಾಡುವ ಆನೆಗಳಂತೆ ಆ ಇಬ್ಬರು ಮತ್ತವಾರಣವಿಕ್ರಮಿಗಳು ತೀಕ್ಷ್ಣ ವಿಶಿಖಗಳಿಂದ ಕಾದಾಡಿ ವಿರಾಜಿಸಿದರು.

07111028a ಪ್ರಚ್ಚಾದಯಂತೌ ಸಮರೇ ಶರಜಾಲೈಃ ಪರಸ್ಪರಂ|

07111028c ರಥಾಭ್ಯಾಂ ನಾದಯಂತೌ ಚ ದಿಶಃ ಸರ್ವಾ ವಿಚೇರತುಃ||

ಸಮರದಲ್ಲಿ ಪರಸ್ಪರರನ್ನು ಶರಜಾಲಗಳಿಂದ ಮುಚ್ಚಿಬಿಡುತ್ತಾ, ಗರ್ಜಿಸುತ್ತಾ ಅವರಿಬ್ಬರೂ ರಥಗಳೆರಡರಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿದ್ದರು.

07111029a ತೌ ರಥಾಭ್ಯಾಂ ಮಹಾರಾಜ ಮಂಡಲಾವರ್ತನಾದಿಷು|

07111029c ವ್ಯರೋಚೇತಾಂ ಮಹಾತ್ಮಾನೌ ವೃತ್ರವಜ್ರಧರಾವಿವ||

ಮಹಾರಾಜ! ಮಂಡಲಾಕಾರದಲ್ಲಿ ಆ ಎರಡು ರಥಗಳೂ ತಿರುಗುತ್ತಿರಲು ಅವರಿಬ್ಬರು ಮಹಾತ್ಮರೂ ವೃತ-ವಜ್ರಧರರಂತೆ ರಾರಾಜಿಸಿದರು.

07111030a ಸಹಸ್ತಾಭರಣಾಭ್ಯಾಂ ತು ಭುಜಾಭ್ಯಾಂ ವಿಕ್ಷಿಪನ್ಧನುಃ|

07111030c ವ್ಯರೋಚತ ರಣೇ ಭೀಮಃ ಸವಿದ್ಯುದಿವ ತೋಯದಃ||

ಹಸ್ತಾಭರಣ ಯುಕ್ತ ಎರಡೂ ಭುಜಗಳಿಂದ ಧನುಸ್ಸನ್ನು ಸೆಳೆಯುತ್ತಿದ್ದ ಭೀಮನು ರಣದಲ್ಲಿ ಮಿಂಚಿನಿಂದ ಕೂಡಿದ ಮೋಡದಂತೆ ಪ್ರಕಾಶಿಸಿದನು.

07111031a ಸ ಚಾಪಘೋಷಸ್ತನಿತಃ ಶರಧಾರಾಂಬುದೋ ಮಹಾನ್|

07111031c ಭೀಮಮೇಘೋ ಮಹಾರಾಜ ಕರ್ಣಪರ್ವತಮಭ್ಯಯಾತ್||

ಮಹಾರಾಜ! ಗುಡುಗುವ ಮಳೆಸುರಿಸುವ ಮಹಾ ಮೋಡದಂತೆ ಚಾಪಘೋಷಯುಕ್ತ ಭೀಮನೆಂಬ ಮೇಘವು ಕರ್ಣವೆಂಬ ಪರ್ವತವನ್ನೇ ಮುಸುಕಿ ಹಾಕಿತು.

07111032a ತತಃ ಶರಸಹಸ್ರೇಣ ಧನುರ್ಮುಕ್ತೇನ ಭಾರತ|

07111032c ಪಾಂಡವೋ ವ್ಯಕಿರತ್ಕರ್ಣಂ ಘನೋಽದ್ರಿಮಿವ ವೃಷ್ಟಿಭಿಃ||

ಆಗ ಭಾರತ! ಧನುಸ್ಸಿನಿಂದ ಬಿಟ್ಟ ಸಹಸ್ರ ಬಾಣಗಳಿಂದ ಪಾಂಡವನು ಮೋಡವು ಪರ್ವತವನ್ನು ಮಳೆಯಿಂದ ಹೇಗೋ ಹಾಗೆ ಕರ್ಣನನ್ನು ಮುಚ್ಚಿಬಿಟ್ಟನು.

07111033a ತತ್ರಾವೈಕ್ಷಂತ ಪುತ್ರಾಸ್ತೇ ಭೀಮಸೇನಸ್ಯ ವಿಕ್ರಮಂ|

07111033c ಸುಪುಂಖೈಃ ಕಂಕವಾಸೋಭಿರ್ಯತ್ಕರ್ಣಂ ಚಾದಯಚ್ಚರೈಃ||

ಪುಂಖಗಳಿದ್ದ ಕಂಕವಾಸ ಶರಗಳಿಂದ ಕರ್ಣನನ್ನು ಮುಸುಕಿಹಾಕಿದ ಭೀಮಸೇನನ ವಿಕ್ರಮವನ್ನು ನಿನ್ನ ಪುತ್ರರೂ ನೋಡುತ್ತಿದ್ದರು.

07111034a ಸ ನಂದಯನ್ರಣೇ ಪಾರ್ಥಂ ಕೇಶವಂ ಚ ಯಶಸ್ವಿನಂ|

07111034c ಸಾತ್ಯಕಿಂ ಚಕ್ರರಕ್ಷೌ ಚ ಭೀಮಃ ಕರ್ಣಮಯೋಧಯತ್||

ಕರ್ಣನೊಡನೆ ಯುದ್ಧಮಾಡಿ ಭೀಮನು ರಣದಲ್ಲಿ ಅರ್ಜುನ ಮತ್ತು ಯಶಸ್ವಿ ಕೇಶವನಿಗೂ, ಸಾತ್ಯಕಿಗೂ, ಚಕ್ರರಕ್ಷಕರಿಗೂ ಆನಂದವನ್ನುಂಟುಮಾಡಿದನು.

07111035a ವಿಕ್ರಮಂ ಭುಜಯೋರ್ವೀರ್ಯಂ ಧೈರ್ಯಂ ಚ ವಿದಿತಾತ್ಮನಃ|

07111035c ಪುತ್ರಾಸ್ತವ ಮಹಾರಾಜ ದದೃಶುಃ ಪಾಂಡವಸ್ಯ ಹ||

ಮಹಾರಾಜ! ಪಾಂಡವ ಭೀಮನ ವಿಕ್ರಮವನ್ನೂ, ಭುಜಗಳ ವೀರ್ಯವನ್ನೂ, ಧೈರ್ಯವನ್ನೂ ನಿನ್ನ ಪುತ್ರರು ತಾವೇ ನೋಡಿ ಅರ್ಥಮಾಡಿಕೊಂಡರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಯುದ್ಧೇ ಏಕಾದಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಯುದ್ಧ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.

Image result for lotus against white background

[1] ಸ್ವರ್ಣಪುಂಖಾಃ, ಶಿಲಾಶಿತಾಃ, ನತಪರ್ವಣಾಃ, ವಿಶಿಖಾಃ, ಆಶಿಶುಗಾಃ, ಭಲ್ಲ, ಇಷು, ಸಾಯಕಾಃ, ಪತ್ರಿ

Comments are closed.