Drona Parva: Chapter 110

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೦

ಧೃತರಾಷ್ಟ್ರನ ಪಶ್ಚಾತ್ತಾಪ (೧-೨೩). ಭೀಮಸೇನನಿಂದ ಐವರು ಧಾರ್ತರಾಷ್ಟ್ರರ - ದುರ್ಮರ್ಷಣ, ದುಃಸ್ಸಹ, ದುರ್ಮದ, ದುರ್ಧರ ಮತ್ತು ಜಯ – ವಧೆ (೨೪-೩೯).

07110001 ಧೃತರಾಷ್ಟ್ರ ಉವಾಚ|

07110001a ದೈವಮೇವ ಪರಂ ಮನ್ಯೇ ಧಿಕ್ಪೌರುಷಮನರ್ಥಕಂ|

07110001c ಯತ್ರಾಧಿರಥಿರಾಯಸ್ತೋ ನಾತರತ್ಪಾಂಡವಂ ರಣೇ||

ಧೃತರಾಷ್ಟ್ರನು ಹೇಳಿದನು: “ಪ್ರಯತ್ನಪಟ್ಟು ಹೋರಾಡುತ್ತಿರುವ ಆಧಿರಥಿ ಕರ್ಣನೂ ರಣದಲ್ಲಿ ಪಾಂಡವ ಭೀಮನನ್ನು ಮೀರಿಸಲಾರನೆಂದರೆ ದೈವವೇ ಮೇಲೆಂದು ಸ್ವೀಕರಿಸಬೇಕು. ಅರ್ಥವಿಲ್ಲದ ಪೌರುಷಕ್ಕೆ ಧಿಕ್ಕಾರ!

07110002a ಕರ್ಣಃ ಪಾರ್ಥಾನ್ಸಗೋವಿಂದಾಂ ಜೇತುಮುತ್ಸಹತೇ ರಣೇ|

07110002c ನ ಚ ಕರ್ಣಸಮಂ ಯೋಧಂ ಲೋಕೇ ಪಶ್ಯಾಮಿ ಕಂ ಚನ|

07110002e ಇತಿ ದುರ್ಯೋಧನಸ್ಯಾಹಮಶ್ರೌಷಂ ಜಲ್ಪತೋ ಮುಹುಃ||

“ಕರ್ಣನು ಗೋವಿಂದನೊಡನೆ ಪಾರ್ಥರನ್ನು ರಣದಲ್ಲಿ ಗೆಲ್ಲುವ ಉತ್ಸಾಹದಿಂದ ಇದ್ದಾನೆ. ಲೋಕದಲ್ಲಿ ಕರ್ಣನ ಸಮನಾದ ಯೋಧನು ಯಾರನ್ನೂ ಕಾಣೆನು!” ಎಂದು ದುರ್ಬುದ್ಧಿ ದುರ್ಯೋಧನನು ಮತ್ತೆ ಮತ್ತೆ ಹೇಳುತ್ತಿದ್ದನು.

07110003a ಕರ್ಣೋ ಹಿ ಬಲವಾನ್ ಶೂರೋ ದೃಢಧನ್ವಾ ಜಿತಕ್ಲಮಃ|

07110003c ಇತಿ ಮಾಮಬ್ರವೀತ್ಸೂತ ಮಂದೋ ದುರ್ಯೋಧನಃ ಪುರಾ||

ಸೂತ! “ಕರ್ಣನು ಬಲವಂತ. ಶೂರ. ದೃಢಧನ್ವಿ. ಆಯಾಸಗೊಳ್ಳದವ.” ಎಂದೆಲ್ಲ ಹಿಂದೆ ನನಗೆ ಮಂದ ದುರ್ಯೋಧನನು ಹೇಳುತ್ತಿದ್ದನು.

07110004a ವಸುಷೇಣಸಹಾಯಂ ಮಾಂ ನಾಲಂ ದೇವಾಪಿ ಸಂಯುಗೇ|

07110004c ಕಿಮು ಪಾಂಡುಸುತಾ ರಾಜನ್ಗತಸತ್ತ್ವಾ ವಿಚೇತಸಃ||

“ರಾಜನ್! ವಸುಷೇಣನ ಸಹಾಯವೊಂದಿದ್ದರೆ ನನಗೆ ಯುದ್ಧದಲ್ಲಿ ದೇವತೆಗಳೂ ಸಮರಲ್ಲ. ಇನ್ನು ಸತ್ತ್ವವನ್ನು ಕಳೆದುಕೊಂಡಿರುವ ವಿಚೇತಸ ಪಾಂಡುಸುತರು ಯಾವ ಲೆಖ್ಕಕ್ಕೆ?”

07110005a ತತ್ರ ತಂ ನಿರ್ಜಿತಂ ದೃಷ್ಟ್ವಾ ಭುಜಂಗಮಿವ ನಿರ್ವಿಷಂ|

07110005c ಯುದ್ಧಾತ್ಕರ್ಣಮಪಕ್ರಾಂತಂ ಕಿಂ ಸ್ವಿದ್ದುರ್ಯೋಧನೋಽಬ್ರವೀತ್||

ಅಲ್ಲಿ ಸೋತು ವಿಷವಿಲ್ಲದ ಸರ್ಪದಂತೆ ಯುದ್ಧದಿಂದ ನುಸುಳಿಕೊಂಡು ಹೋದ ಕರ್ಣನನ್ನು ನೋಡಿ ದುರ್ಯೋಧನನು ಏನನ್ನಾದರೂ ಹೇಳಿದನೇ?

07110006a ಅಹೋ ದುರ್ಮುಖಮೇವೈಕಂ ಯುದ್ಧಾನಾಮವಿಶಾರದಂ|

07110006c ಪ್ರಾವೇಶಯದ್ಧುತವಹಂ ಪತಂಗಮಿವ ಮೋಹಿತಃ||

ಅಯ್ಯೋ! ಮೋಹಿತ ದುರ್ಯೋಧನನು ಯುದ್ಧದಲ್ಲಿ ಹೆಚ್ಚು ಪಳಗಿರದ ದುರ್ಮುಖನೊಬ್ಬನನ್ನೇ ಪತಂಗವನ್ನು ಬೆಂಕಿಯಲ್ಲಿ ಹಾಕುವಂತೆ ಭೀಮನೊಡನೆ ಯುದ್ಧಮಾಡಲು ಕಳುಹಿಸಿದನು.

07110007a ಅಶ್ವತ್ಥಾಮಾ ಮದ್ರರಾಜಃ ಕೃಪಃ ಕರ್ಣಶ್ಚ ಸಂಗತಾಃ|

07110007c ನ ಶಕ್ತಾಃ ಪ್ರಮುಖೇ ಸ್ಥಾತುಂ ನೂನಂ ಭೀಮಸ್ಯ ಸಂಜಯ||

ಸಂಜಯ! ಭೀಮನ ಮುಂದೆ ಅಶ್ವತ್ಥಾಮ, ಮದ್ರರಾಜ, ಕೃಪ ಮತ್ತು ಕರ್ಣರು ಒಂದಾಗಿಯೂ ನಿಲ್ಲಲು ಶಕ್ಯರಾಗಲಿಲ್ಲ.

07110008a ತೇಽಪಿ ಚಾಸ್ಯ ಮಹಾಘೋರಂ ಬಲಂ ನಾಗಾಯುತೋಪಮಂ|

07110008c ಜಾನಂತೋ ವ್ಯವಸಾಯಂ ಚ ಕ್ರೂರಂ ಮಾರುತತೇಜಸಃ||

ಅವರೂ ಕೂಡ ಈ ಮಾರುತತೇಜಸ್ವಿಯ ಸಾವಿರ ಆನೆಗಳ ಸಮನಾದ ಮಹಾಘೋರ ಬಲವನ್ನೂ, ಅವನ ಕ್ರೂರ ಕಸರತ್ತುಗಳನ್ನೂ ಬಲ್ಲರು.

07110009a ಕಿಮರ್ಥಂ ಕ್ರೂರಕರ್ಮಾಣಂ ಯಮಕಾಲಾಂತಕೋಪಮಂ|

07110009c ಬಲಸಂರಂಭವೀರ್ಯಜ್ಞಾಃ ಕೋಪಯಿಷ್ಯಂತಿ ಸಂಯುಗೇ||

ಆ ಕ್ರೂರಕರ್ಮಿ, ಪ್ರಳಯಕಾಲದ ಯಮನಂತಿರುವವನನ್ನು ಅವನ ಬಲ-ಉತ್ಸಾಹ-ವೀರ್ಯಗಳನ್ನು ತಿಳಿದವರೂ ರಣದಲ್ಲಿ ಏಕೆ ಕೆರಳಿಸಿದರು?

07110010a ಕರ್ಣಸ್ತ್ವೇಕೋ ಮಹಾಬಾಹುಃ ಸ್ವಬಾಹುಬಲಮಾಶ್ರಿತಃ|

07110010c ಭೀಮಸೇನಮನಾದೃತ್ಯ ರಣೇಽಯುಧ್ಯತ ಸೂತಜಃ||

ಸೂತಜ! ಮಹಾಬಾಹು ಕರ್ಣನು ಭೀಮಸೇನನ ಬಲವನ್ನು ಲೆಕ್ಕಿಸದೇ ತಾನೊಬ್ಬನೇ ತನ್ನ ಬಲವನ್ನು ಮಾತ್ರ ಅವಲಂಬಿಸಿಕೊಂಡು ರಣದಲ್ಲಿ ಯುದ್ಧಮಾಡಿದನು.

07110011a ಯೋಽಜಯತ್ಸಮರೇ ಕರ್ಣಂ ಪುರಂದರ ಇವಾಸುರಂ|

07110011c ನ ಸ ಪಾಂಡುಸುತೋ ಜೇತುಂ ಶಕ್ಯಃ ಕೇನ ಚಿದಾಹವೇ||

ಸಮರದಲ್ಲಿ ಪುರಂದರನು ಅಸುರನನ್ನು ಹೇಗೋ ಹಾಗೆ ಕರ್ಣನನ್ನು ಗೆದ್ದ ಆ ಪಾಂಡುಸುತನನ್ನು ಯುದ್ಧದಲ್ಲಿ ಗೆಲ್ಲಲು ಯಾರಿಗೂ ಸಾಧ್ಯವಿಲ್ಲ.

07110012a ದ್ರೋಣಂ ಯಃ ಸಂಪ್ರಮಥ್ಯೈಕಃ ಪ್ರವಿಷ್ಟೋ ಮಮ ವಾಹಿನೀಂ|

07110012c ಭೀಮೋ ಧನಂಜಯಾನ್ವೇಷೀ ಕಸ್ತಮರ್ಚೇಜ್ಜಿಜೀವಿಷುಃ||

ಧನಂಜಯನನ್ನು ಹುಡುಕುತ್ತಾ ದ್ರೋಣನನ್ನೇ ಸದೆಬಡಿದು ಏಕಾಂಗಿಯಾಗಿ ನನ್ನ ಸೇನೆಗಳನ್ನು ಹೊಕ್ಕಿದ ಆ ಭೀಮನನ್ನು ಜೀವಿಸಲು ಬಯಸಿದ ಯಾರುತಾನೇ ಎದುರಿಸಿಯಾರು?

07110013a ಕೋ ಹಿ ಸಂಜಯ ಭೀಮಸ್ಯ ಸ್ಥಾತುಮುತ್ಸಹತೇಽಗ್ರತಃ|

07110013c ಉದ್ಯತಾಶನಿವಜ್ರಸ್ಯ ಮಹೇಂದ್ರಸ್ಯೇವ ದಾನವಃ||

ಸಂಜಯ! ಭೀಮನ ಎದಿರು ನಿಲ್ಲಲು ಯಾರು ತಾನೇ ಉತ್ಸಾಹಿತರಾಗಿದ್ದಾರೆ? ವಜ್ರವನ್ನು ಎತ್ತಿ ಹಿಡಿದಿರುವ ಮಹೇಂದ್ರನನ್ನು ಯಾವ ದಾನವನು ಎದುರಿಸಿಯಾನು?

07110014a ಪ್ರೇತರಾಜಪುರಂ ಪ್ರಾಪ್ಯ ನಿವರ್ತೇತಾಪಿ ಮಾನವಃ|

07110014c ನ ಭೀಮಸೇನಂ ಸಂಪ್ರಾಪ್ಯ ನಿವರ್ತೇತ ಕದಾ ಚನ||

ಯುಮರಾಜನ ಪುರವನ್ನು ಸೇರಿದ ಮನುಷ್ಯರೂ ಹಿಂದಿರುಗಿ ಬಂದು ಬಿಡಬಹುದು. ಆದರೆ ಭೀಮಸೇನನನ್ನು ಎದುರಿಸಿ ಯಾರೂ ಹಿಂದಿರುಗುವುದಿಲ್ಲ.

07110015a ಪತಂಗಾ ಇವ ವಹ್ನಿಂ ತೇ ಪ್ರಾವಿಶನ್ನಲ್ಪಚೇತಸಃ|

07110015c ಯೇ ಭೀಮಸೇನಂ ಸಂಕ್ರುದ್ಧಮಭ್ಯಧಾವನ್ವಿಮೋಹಿತಾಃ||

ಸಂಕ್ರುದ್ಧ ಭೀಮಸೇನನನ್ನು ಅಲ್ಪಚೇತಸ ವಿಮೋಹಿತ ಯಾರು ಆಕ್ರಮಣಿಸುತ್ತಾರೋ ಅವರು ಅಗ್ನಿಯನ್ನು ಪ್ರವೇಶಿಸುವ ಪತಂಗಗಳಂತೆ.

07110016a ಯತ್ತತ್ಸಭಾಯಾಂ ಭೀಮೇನ ಮಮ ಪುತ್ರವಧಾಶ್ರಯಂ|

07110016c ಶಪ್ತಂ ಸಂರಂಭಿಣೋಗ್ರೇಣ ಕುರೂಣಾಂ ಶೃಣ್ವತಾಂ ತದಾ||

07110017a ತನ್ನೂನಮಭಿಸಂಚಿಂತ್ಯ ದೃಷ್ಟ್ವಾ ಕರ್ಣಂ ಚ ನಿರ್ಜಿತಂ|

07110017c ದುಃಶಾಸನಃ ಸಹ ಭ್ರಾತ್ರಾ ಭಯಾದ್ಭೀಮಾದುಪಾರಮತ್||

ಅಂದು ಸಭೆಯಲ್ಲಿ ಕೋಪದಿಂದ ಉಗ್ರನಾಗಿದ್ದ ಭೀಮನು ಕುರುಗಳು ಕೇಳಿಸಿಕೊಳ್ಳುವಂತೆ ನನ್ನ ಮಕ್ಕಳ ವಧೆಯ ಕುರಿತು ಮಾಡಿದ ಶಪಥವನ್ನು ನೆನಪಿಸಿಕೊಂಡೇ ಮತ್ತು ಕರ್ಣನೂ ಅವನಿಂದ ಸೋತಿರುವುದನ್ನು ನೋಡಿ ಹೆದರಿಯೇ ಸಹೋದರರೊಂದಿಗೆ ದುಃಶಾಸನನು ಅವನಿಂದ ದೂರವಿದ್ದಿರಬೇಕು.

07110018a ಯಶ್ಚ ಸಂಜಯ ದುರ್ಬುದ್ಧಿರಬ್ರವೀತ್ಸಮಿತೌ ಮುಹುಃ|

07110018c ಕರ್ಣೋ ದುಃಶಾಸನೋಽಹಂ ಚ ಜೇಷ್ಯಾಮೋ ಯುಧಿ ಪಾಂಡವಾನ್||

ಸಂಜಯ! “ಯುದ್ಧದಲ್ಲಿ ಕರ್ಣ, ದುಃಶಾಸನ ಮತ್ತು ನಾನು ಪಾಂಡವರನ್ನು ಗೆಲ್ಲುತ್ತೇವೆ!” ಎಂದು ಸಮಿತಿಯಲ್ಲಿ ಆ ದುರ್ಬುದ್ಧಿ ದುರ್ಯೋಧನನು ಮತ್ತೆ ಮತ್ತೆ ಹೇಳುತ್ತಿದ್ದನು.

07110019a ಸ ನೂನಂ ವಿರಥಂ ದೃಷ್ಟ್ವಾ ಕರ್ಣಂ ಭೀಮೇನ ನಿರ್ಜಿತಂ|

07110019c ಪ್ರತ್ಯಾಖ್ಯಾನಾಚ್ಚ ಕೃಷ್ಣಸ್ಯ ಭೃಶಂ ತಪ್ಯತಿ ಸಂಜಯ||

ಸಂಜಯ! ಕರ್ಣನು ಭೀಮನಿಂದ ಸೋತು ವಿರಥನಾದುದನ್ನು ನೋಡಿ ದುರ್ಯೋಧನನು ಕೃಷ್ಣನಿಗೆ ಹೇಳಿದುದರ ಕುರಿತು ಪಶ್ಚಾತ್ತಾಪಪಡುತ್ತಿರಬಹುದು.

07110020a ದೃಷ್ಟ್ವಾ ಭ್ರಾತೄನ್ಹತಾನ್ಯುದ್ಧೇ ಭೀಮಸೇನೇನ ದಂಶಿತಾನ್|

07110020c ಆತ್ಮಾಪರಾಧಾತ್ಸುಮಹನ್ನೂನಂ ತಪ್ಯತಿ ಪುತ್ರಕಃ||

ತನ್ನ ಕವಚಧಾರಿ ಸಹೋದರರು ಯುದ್ಧದಲ್ಲಿ ಭೀಮಸೇನನಿಂದ ಹತರಾದುದನ್ನು ನೋಡಿ ನನ್ನ ಮಗನು ತನ್ನ ಅಪರಾಧದಿಂದ ಬಹಳವಾಗಿ ಪರಿತಪಿಸುತ್ತಿರಬಹುದು.

07110021a ಕೋ ಹಿ ಜೀವಿತಮನ್ವಿಚ್ಚನ್ಪ್ರತೀಪಂ ಪಾಂಡವಂ ವ್ರಜೇತ್|

07110021c ಭೀಮಂ ಭೀಮಾಯುಧಂ ಕ್ರುದ್ಧಂ ಸಾಕ್ಷಾತ್ಕಾಲಮಿವ ಸ್ಥಿತಂ||

ಜೀವಂತವಾಗಿರಲು ಬಯಸಿದ ಯಾರು ತಾನೇ ಕ್ರುದ್ಧನಾಗಿ ಉರಿಯುತ್ತಿರುವ ಸಾಕ್ಷಾತ್ ಅಂತಕನಂತೆ ನಿಂತಿರುವ ಭೀಮಾಯುಧ ಪಾಂಡವ ಭೀಮನನ್ನು ಕೆರಳಿಸುತ್ತಾರೆ?

07110022a ವಡವಾಮುಖಮಧ್ಯಸ್ಥೋ ಮುಚ್ಯೇತಾಪಿ ಹಿ ಮಾನವಃ|

07110022c ನ ಭೀಮಮುಖಸಂಪ್ರಾಪ್ತೋ ಮುಚ್ಯೇತೇತಿ ಮತಿರ್ಮಮ||

ವಡವ ಅಗ್ನಿಯ ಮಧ್ಯದಿಂದಲಾದರೂ ಮನುಷ್ಯನು ಹೊರಬರಬಹುದು. ಆದರೆ ಭೀಮನ ಎದುರಿನಿಂದ ಬಿಡುಗಡೆಯಿಲ್ಲ ಎಂದು ನನ್ನ ಅಭಿಪ್ರಾಯ.

07110023a ನ ಪಾಂಡವಾ ನ ಪಾಂಚಾಲಾ ನ ಚ ಕೇಶವಸಾತ್ಯಕೀ|

07110023c ಜಾನಂತಿ ಯುಧಿ ಸಂರಬ್ಧಾ ಜೀವಿತಂ ಪರಿರಕ್ಷಿತುಂ||

ಯುದ್ಧದಲ್ಲಿ ಕ್ರುದ್ಧ ಪಾಂಡವರಾಗಲೀ, ಪಾಂಚಲರಾಗಲೀ, ಕೇಶವ-ಸಾತ್ಯಕಿಯರಾಗಲೀ, ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ನೋಡುವುದಿಲ್ಲ.”

07110024 ಸಂಜಯ ಉವಾಚ|

07110024a ಯತ್ಸಂಶೋಚಸಿ ಕೌರವ್ಯ ವರ್ತಮಾನೇ ಜನಕ್ಷಯೇ|

07110024c ತ್ವಮಸ್ಯ ಜಗತೋ ಮೂಲಂ ವಿನಾಶಸ್ಯ ನ ಸಂಶಯಃ||

ಸಂಜಯನು ಹೇಳಿದನು: “ಕೌರವ್ಯ! ನಡೆಯುತ್ತಿರುವ ಈ ಜನಕ್ಷಯವನ್ನೇನು ನೀನು ಶೋಕಿಸುತ್ತಿರುವೆಯೋ ಆ ಜಗತ್ತಿನ ವಿನಾಶಕ್ಕೆ ಮೂಲಕಾರಣನು ನೀನೇ ಎನ್ನುವುದರಲ್ಲಿ ಸಂಶಯವಿಲ್ಲ.

07110025a ಸ್ವಯಂ ವೈರಂ ಮಹತ್ಕೃತ್ವಾ ಪುತ್ರಾಣಾಂ ವಚನೇ ಸ್ಥಿತಃ|

07110025c ಉಚ್ಯಮಾನೋ ನ ಗೃಹ್ಣೀಷೇ ಮರ್ತ್ಯಃ ಪಥ್ಯಮಿವೌಷಧಂ||

ಮಕ್ಕಳ ಮಾತಿಗೆ ಬಂದು ಸ್ವಯಂ ನೀನೇ ಈ ಮಹಾ ವೈರವನ್ನು ಕಟ್ಟಿಕೊಂಡಿದ್ದೀಯೆ. ಹಿತವಾದುದನ್ನು ಒತ್ತಿ ಹೇಳಿದರೂ ಸಾಯುವವನು ಒತ್ತಾಯವಾಗಿ ಕುಡಿಸುವ ಔಷಧವನ್ನು ಹೇಗೋ ಹಾಗೆ ನೀನು ಅದನ್ನು ಸ್ವೀಕರಿಸಲಿಲ್ಲ.

07110026a ಸ್ವಯಂ ಪೀತ್ವಾ ಮಹಾರಾಜ ಕಾಲಕೂಟಂ ಸುದುರ್ಜರಂ|

07110026c ತಸ್ಯೇದಾನೀಂ ಫಲಂ ಕೃತ್ಸ್ನಮವಾಪ್ನುಹಿ ನರೋತ್ತಮ||

ನರೋತ್ತಮ! ಮಹಾರಾಜ! ಜೀರ್ಣಿಸಿಕೊಳ್ಳಲು ಅಸಾಧ್ಯವಾದ ಕಾಲಕೂಟ ವಿಷವನ್ನು ಸ್ವಯಂ ನೀನೇ ಕುಡಿದು ಅದರ ಈ ಪರಿಣಾಮಗಳನ್ನು ಅನುಭವಿಸುತ್ತಿದ್ದೀಯೆ.

07110027a ಯತ್ತು ಕುತ್ಸಯಸೇ ಯೋಧಾನ್ಯುಧ್ಯಮಾನಾನ್ಯಥಾಬಲಂ|

07110027c ಅತ್ರ ತೇ ವರ್ಣಯಿಷ್ಯಾಮಿ ಯಥಾ ಯುದ್ಧಮವರ್ತತ||

ಅವರಿಗೆ ಬಲವಿದ್ದಷ್ಟೂ ಯೋಧರು ಯುದ್ಧಮಾಡುತ್ತಿದ್ದರೂ ನೀನು ಅವರ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದೀಯೆ. ಅಲ್ಲಿ ಹೇಗೆ ಯುದ್ಧವು ನಡೆಯಿತೋ ಹಾಗೆ ನಿನಗೆ ವರ್ಣಿಸುತ್ತೇನೆ.

07110028a ದೃಷ್ಟ್ವಾ ಕರ್ಣಂ ತು ಪುತ್ರಾಸ್ತೇ ಭೀಮಸೇನಪರಾಜಿತಂ|

07110028c ನಾಮೃಷ್ಯಂತ ಮಹೇಷ್ವಾಸಾಃ ಸೋದರ್ಯಾಃ ಪಂಚ ಮಾರಿಷ||

ಮಾರಿಷ! ಭೀಮಸೇನನಿಂದ ಕರ್ಣನು ಸೋತುದನ್ನು ನೋಡಿ ಐವರು ಮಹೇಷ್ವಾಸ ಸೋದರರು ಸಹಿಸಿಕೊಳ್ಳಲಿಲ್ಲ.

07110029a ದುರ್ಮರ್ಷಣೋ ದುಃಸ್ಸಹಶ್ಚ ದುರ್ಮದೋ ದುರ್ಧರೋ ಜಯಃ|

07110029c ಪಾಂಡವಂ ಚಿತ್ರಸನ್ನಾಹಾಸ್ತಂ ಪ್ರತೀಪಮುಪಾದ್ರವನ್||

ಬಣ್ಣದ ಕವಚಗಳನ್ನು ಧರಿಸಿದ ದುರ್ಮರ್ಷಣ, ದುಃಸ್ಸಹ, ದುರ್ಮದ, ದುರ್ಧರ ಮತ್ತು ಜಯ ಇವರು ಬೆಳಗುತ್ತಿರುವ ಪಾಂಡವನನ್ನು ಆಕ್ರಮಣಿಸಿದರು.

07110030a ತೇ ಸಮಂತಾನ್ಮಹಾಬಾಹುಂ ಪರಿವಾರ್ಯ ವೃಕೋದರಂ|

07110030c ದಿಶಃ ಶರೈಃ ಸಮಾವೃಣ್ವಂ ಶಲಭಾನಾಮಿವ ವ್ರಜೈಃ||

ಅವರು ಮಹಾಬಾಹು ವೃಕೋದರನನ್ನು ಎಲ್ಲಕಡೆಗಳಿಂದ ಸುತ್ತುವರೆದು ಹಾರಾಡುವ ಮಿಡಿತೆಗಳಂತಿದ್ದ ಶರಗಳಿಂದ ದಿಕ್ಕುಗಳನ್ನೇ ತುಂಬಿಬಿಟ್ಟರು.

07110031a ಆಗಚ್ಚತಸ್ತಾನ್ಸಹಸಾ ಕುಮಾರಾನ್ದೇವರೂಪಿಣಃ|

07110031c ಪ್ರತಿಜಗ್ರಾಹ ಸಮರೇ ಭೀಮಸೇನೋ ಹಸನ್ನಿವ||

ಸಮರದಲ್ಲಿ ಒಮ್ಮಿಂದೊಮ್ಮೆಲೇ ಮೇಲೆ ಎರಗಿದ ಆ ದೇವರೂಪೀ ಕುಮಾರರನ್ನು ಭೀಮಸೇನನು ನಗುತ್ತಲೇ ಎದುರಿಸಿದನು.

07110032a ತವ ದೃಷ್ಟ್ವಾ ತು ತನಯಾನ್ಭೀಮಸೇನಸಮೀಪಗಾನ್|

07110032c ಅಭ್ಯವರ್ತತ ರಾಧೇಯೋ ಭೀಮಸೇನಂ ಮಹಾಬಲಂ||

ನಿನ್ನ ಮಕ್ಕಳು ಭೀಮಸೇನನ ಸಮೀಪಹೋದುದನ್ನು ನೋಡಿ ರಾಧೇಯನು ಮಹಾಬಲ ಭೀಮಸೇನನನ್ನು ಆಕ್ರಮಣಿಸಿದನು.

07110033a ವಿಸೃಜನ್ವಿಶಿಖಾನ್ರಾಜನ್ಸ್ವರ್ಣಪುಂಖಾಂ ಶಿಲಾಶಿತಾನ್|

07110033c ತಂ ತು ಭೀಮೋಽಭ್ಯಯಾತ್ತೂರ್ಣಂ ವಾರ್ಯಮಾಣಃ ಸುತೈಸ್ತವ||

ರಾಜನ್! ಸ್ವರ್ಣಪುಂಖಗಳ ಶಿಲಾಶಿತ ವಿಶಿಖಗಳನ್ನು ಬಿಡುತ್ತಾ ಅವನು ನಿನ್ನ ಮಕ್ಕಳು ತಡೆಯುತ್ತಿದ್ದ ಭೀಮಸೇನನನ್ನು ಬೇಗನೆ ಆಕ್ರಮಣಿಸಿದನು.

07110034a ಕುರವಸ್ತು ತತಃ ಕರ್ಣಂ ಪರಿವಾರ್ಯ ಸಮಂತತಃ|

07110034c ಅವಾಕಿರನ್ಭೀಮಸೇನಂ ಶರೈಃ ಸನ್ನತಪರ್ವಭಿಃ||

ಆಗ ಕುರುಗಳು ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದು ಭೀಮಸೇನನನ್ನು ಸನ್ನತಪರ್ವ ಶರಗಳಿಂದ ಮುಚ್ಚಿದರು.

07110035a ತಾನ್ಬಾಣೈಃ ಪಂಚವಿಂಶತ್ಯಾ ಸಾಶ್ವಾನ್ರಾಜನ್ನರರ್ಷಭಾನ್|

07110035c ಸಸೂತಾನ್ಭೀಮಧನುಷೋ ಭೀಮೋ ನಿನ್ಯೇ ಯಮಕ್ಷಯಂ||

ರಾಜನ್! ಭೀಮಧನುಷೀ ಭೀಮನು ಇಪ್ಪತ್ತೈದು ಬಾಣಗಳಿಂದ ಆ ನರರ್ಷಭರನ್ನು ಅವರ ಕುದುರೆ-ಸಾರಥಿಯರೊಂದಿಗೆ ಯಮಲೋಕಕ್ಕೆ ಕಳುಹಿಸಿದನು.

07110036a ಪ್ರಾಪತನ್ಸ್ಯಂದನೇಭ್ಯಸ್ತೇ ಸಾರ್ಧಂ ಸೂತೈರ್ಗತಾಸವಃ|

07110036c ಚಿತ್ರಪುಷ್ಪಧರಾ ಭಗ್ನಾ ವಾತೇನೇವ ಮಹಾದ್ರುಮಾಃ||

ರಥದ ಮೇಲಿಂದ ಅಸುನೀಗಿ ಅವರು ಸೂತರೊಂದಿಗೆ ರಥದ ಮೇಲಿಂದ ಬೀಳುವಾಗ ಅವರು ಬಣ್ಣ ಬಣ್ಣದ ಹೂಗಳು ತುಂಬಿದ್ದ ಮಹಾವೃಕ್ಷವು ಭಿರುಗಾಳಿಗೆ ತುಂಡಾಗಿ ಬಿದ್ದಂತೆ ತೋರಿದರು.

07110037a ತತ್ರಾದ್ಭುತಮಪಶ್ಯಾಮ ಭೀಮಸೇನಸ್ಯ ವಿಕ್ರಮಂ|

07110037c ಸಂವಾರ್ಯಾಧಿರಥಿಂ ಬಾಣೈರ್ಯಜ್ಜಘಾನ ತವಾತ್ಮಜಾನ್||

ಆಧಿರಥಿ ಕರ್ಣನ ಸುತ್ತಲೂ ಇದ್ದ ನಿನ್ನ ಮಕ್ಕಳನ್ನು ಬಾಣಗಳಿಂದ ಸಂಹರಿಸಿದ ಭೀಮಸೇನನ ವಿಕ್ರಮವನ್ನು ಅಲ್ಲಿ ನೋಡಿದೆವು.

07110038a ಸ ವಾರ್ಯಮಾಣೋ ಭೀಮೇನ ಶಿತೈರ್ಬಾಣೈಃ ಸಮಂತತಃ|

07110038c ಸೂತಪುತ್ರೋ ಮಹಾರಾಜ ಭೀಮಸೇನಮವೈಕ್ಷತ||

ಮಹಾರಾಜ! ಭೀಮನ ನಿಶಿತ ಬಾಣಗಳಿಂದ ಎಲ್ಲ ಕಡೆಗಳಿಂದಲೂ ತಡೆಯಲ್ಪಟ್ಟ ಸೂತಪುತ್ರನು ಭೀಮಸೇನನನ್ನು ನೋಡುತ್ತ ನಿಂತುಬಿಟ್ಟನು.

07110039a ತಂ ಭೀಮಸೇನಃ ಸಂರಂಭಾತ್ಕ್ರೋಧಸಂರಕ್ತಲೋಚನಃ|

07110039c ವಿಸ್ಫಾರ್ಯ ಸುಮಹಚ್ಚಾಪಂ ಮುಹುಃ ಕರ್ಣಮವೈಕ್ಷತ||

ಭೀಮಸೇನನೂ ಕೂಡ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಮಹಾ ಚಾಪವನ್ನು ಮತ್ತೆ ಮತ್ತೆ ಟೇಂಕರಿಸುತ್ತಾ ಕರ್ಣನನ್ನು ದುರುಗುಟ್ಟಿ ನೋಡಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಸೇನಪರಾಕ್ರಮೇ ದಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪರಾಕ್ರಮ ಎನ್ನುವ ನೂರಾಹತ್ತನೇ ಅಧ್ಯಾಯವು.

Image result for lotus against white background

Comments are closed.