Drona Parva: Chapter 11

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

೧೧

ದ್ರೋಣನ ಪ್ರತಿಜ್ಞೆ (೧-೩೧).

07011001 ಸಂಜಯ ಉವಾಚ|

07011001a ಹಂತ ತೇ ವರ್ಣಯಿಷ್ಯಾಮಿ ಸರ್ವಂ ಪ್ರತ್ಯಕ್ಷದರ್ಶಿವಾನ್|

07011001c ಯಥಾ ಸ ನ್ಯಪತದ್ದ್ರೋಣಃ ಸಾದಿತಃ ಪಾಂಡುಸೃಂಜಯೈಃ||

ಸಂಜಯನು ಹೇಳಿದನು: “ಪ್ರತ್ಯಕ್ಷವಾಗಿ ಎಲ್ಲವನ್ನೂ ಕಂಡ ನಾನು ನಿನಗೆ ಹೇಗೆ ಪಾಡವ-ಸೃಂಜಯರು ದ್ರೋಣನನ್ನು ಕೊಂದು ಕೆಳಗುರುಳಿಸಿದರು ಎನ್ನುವುದನ್ನು ಹೇಳುತ್ತೇನೆ.

07011002a ಸೇನಾಪತಿತ್ವಂ ಸಂಪ್ರಾಪ್ಯ ಭಾರದ್ವಾಜೋ ಮಹಾರಥಃ|

07011002c ಮಧ್ಯೇ ಸರ್ವಸ್ಯ ಸೈನ್ಯಸ್ಯ ಪುತ್ರಂ ತೇ ವಾಕ್ಯಮಬ್ರವೀತ್||

ಸೇನಾಪತಿತ್ವವನ್ನು ಪಡೆದು ಮಹಾರಥ ಭಾರದ್ವಾಜನು ಸರ್ವ ಸೇನೆಗಳ ಮಧ್ಯೆ ನಿನ್ನ ಮಗನಿಗೆ ಈ ಮಾತನ್ನಾಡಿದನು:

07011003a ಯತ್ಕೌರವಾಣಾಂ ಋಷಭಾದಾಪಗೇಯಾದನಂತರಂ|

07011003c ಸೇನಾಪತ್ಯೇನ ಮಾಂ ರಾಜನ್ನದ್ಯ ಸತ್ಕೃತವಾನಸಿ||

“ರಾಜನ್! ಕೌರವರ ಋಷಭ ಆಪಗೇಯನ ನಂತರ ನನ್ನನ್ನು ಸೇನಾಪತ್ಯದಿಂದ ಗೌರವಿಸಿದ್ದೀಯೆ.

07011004a ಸದೃಶಂ ಕರ್ಮಣಸ್ತಸ್ಯ ಫಲಂ ಪ್ರಾಪ್ನುಹಿ ಪಾರ್ಥಿವ|

07011004c ಕರೋಮಿ ಕಾಮಂ ಕಂ ತೇಽದ್ಯ ಪ್ರವೃಣೀಷ್ವ ಯಮಿಚ್ಚಸಿ||

ಈ ಕರ್ಮಕ್ಕೆ ತಕ್ಕುದಾದ ಫಲವನ್ನು ಪಡೆಯುತ್ತೀಯೆ. ಪಾರ್ಥಿವ! ನಿನ್ನ ಆಸೆ ಏನಿದೆ ಹೇಳು. ಅದನ್ನು ನಾನು ಇಂದು ಮಾಡುತ್ತೇನೆ. ಬೇಕಾದ ವರವನ್ನು ಕೇಳಿಕೋ!”

07011005a ತತೋ ದುರ್ಯೋಧನಶ್ಚಿಂತ್ಯ ಕರ್ಣದುಃಶಾಸನಾದಿಭಿಃ|

07011005c ತಮಥೋವಾಚ ದುರ್ಧರ್ಷಮಾಚಾರ್ಯಂ ಜಯತಾಂ ವರಂ||

ಆಗ ದುರ್ಯೋಧನನು ಕರ್ಣ-ದುಃಶಾಸನಾದಿಗಳೊಂದಿಗೆ ಚರ್ಚಿಸಿ ಆ ವಿಜಯಿಗಳಲ್ಲಿ ಶ್ರೇಷ್ಠ, ದುರ್ಧರ್ಷ ಆಚಾರ್ಯನಿಗೆ ಹೇಳಿದನು:

07011006a ದದಾಸಿ ಚೇದ್ವರಂ ಮಹ್ಯಂ ಜೀವಗ್ರಾಹಂ ಯುಧಿಷ್ಠಿರಂ|

07011006c ಗೃಹೀತ್ವಾ ರಥಿನಾಂ ಶ್ರೇಷ್ಠಂ ಮತ್ಸಮೀಪಮಿಹಾನಯ||

“ನನಗೆ ವರವನ್ನು ಕೊಡುವಿರಾದರೆ ಯುಧಿಷ್ಠಿರನನ್ನು ಜೀವಂತವಾಗಿ ಸೆರೆಹಿಡಿಯಿರಿ. ಆ ರಥಿಗಳಲ್ಲಿ ಶ್ರೇಷ್ಠನನ್ನು ಹಿಡಿದು ನನ್ನ ಬಳಿ ಕರೆದುಕೊಂಡು ಬನ್ನಿ.”

07011007a ತತಃ ಕುರೂಣಾಮಾಚಾರ್ಯಃ ಶ್ರುತ್ವಾ ಪುತ್ರಸ್ಯ ತೇ ವಚಃ|

07011007c ಸೇನಾಂ ಪ್ರಹರ್ಷಯನ್ಸರ್ವಾಮಿದಂ ವಚನಮಬ್ರವೀತ್||

ಆಗ ಕುರುಗಳ ಆಚಾರ್ಯನು ನಿನ್ನ ಮಗನ ಮಾತನ್ನು ಕೇಳಿ ಸರ್ವ ಸೇನೆಗಳನ್ನೂ ಹರ್ಷಗೊಳಿಸುತ್ತಾ ಈ ಮಾತನ್ನಾಡಿದನು:

07011008a ಧನ್ಯಃ ಕುಂತೀಸುತೋ ರಾಜಾ ಯಸ್ಯ ಗ್ರಹಣಮಿಚ್ಚಸಿ|

07011008c ನ ವಧಾರ್ಥಂ ಸುದುರ್ಧರ್ಷ ವರಮದ್ಯ ಪ್ರಯಾಚಸಿ||

“ಯಾರನ್ನು ಸೆರೆಹಿಡಿಯಲು ಬಯಸುತ್ತೀಯೋ ಆ ರಾಜಾ ಕುಂತೀಪುತ್ರನು ಧನ್ಯ. ಸುದುರ್ಧರ್ಷ! ಅವನ ವಧೆಯನ್ನು ಇಂದು ವರವನ್ನಾಗಿ ಕೇಳುತ್ತಿಲ್ಲವಲ್ಲ!

07011009a ಕಿಮರ್ಥಂ ಚ ನರವ್ಯಾಘ್ರ ನ ವಧಂ ತಸ್ಯ ಕಾಂಕ್ಷಸಿ|

07011009c ನಾಶಂಸಸಿ ಕ್ರಿಯಾಮೇತಾಂ ಮತ್ತೋ ದುರ್ಯೋಧನ ಧ್ರುವಂ||

ನರವ್ಯಾಘ್ರ! ಯಾವ ಕಾರಣಕ್ಕಾಗಿ ನೀನು ಅವನ ವಧೆಯನ್ನು ಬಯಸುತ್ತಿಲ್ಲ? ನಿಶ್ಚಯವಾಗಿ ದುರ್ಯೋಧನನು ಮತ್ತನಾಗಿ ಈ ಕೆಲಸವನ್ನು ಹೇಳುತ್ತಿಲ್ಲ ತಾನೇ?

07011010a ಆಹೋ ಸ್ವಿದ್ಧರ್ಮಪುತ್ರಸ್ಯ ದ್ವೇಷ್ಟಾ ತಸ್ಯ ನ ವಿದ್ಯತೇ|

07011010c ಯದಿಚ್ಚಸಿ ತ್ವಂ ಜೀವಂತಂ ಕುಲಂ ರಕ್ಷಸಿ ಚಾತ್ಮನಿ||

ಆಹಾ! ಧರ್ಮಪುತ್ರನ ವಧೆಯನ್ನು ಬಯಸುವವನು ಯಾರೂ ಇಲ್ಲವೆಂದರೆ ಅದೊಂದು ಅದ್ಭುತವೇ ಸರಿ. ಅವನನ್ನು ಜೀವಂತವಿರಿಸಿ ನೀನು ನಿನ್ನನ್ನೂ ನಿನ್ನ ಕುಲವನ್ನೂ ರಕ್ಷಿಸಲು ಬಯಸುತ್ತಿದ್ದೀಯಾ?

07011011a ಅಥ ವಾ ಭರತಶ್ರೇಷ್ಠ ನಿರ್ಜಿತ್ಯ ಯುಧಿ ಪಾಂಡವಾನ್|

07011011c ರಾಜ್ಯಾಂಶಂ ಪ್ರತಿದತ್ತ್ವಾ ಚ ಸೌಭ್ರಾತ್ರಂ ಕರ್ತುಮಿಚ್ಚಸಿ||

ಅಥವಾ ಭರತಶ್ರೇಷ್ಠ! ಯುದ್ಧದಲ್ಲಿ ಪಾಂಡವರನ್ನು ಸೋಲಿಸಿ ಅವರ ರಾಜ್ಯಾಂಶವನ್ನು ಅವರಿಗೆ ಹಿಂದಿರುಗಿಸಿ ಉತ್ತಮ ಸಹೋದರತ್ವವನ್ನು ಕಲ್ಪಿಸಲು ಬಯಸುತ್ತಿರುವೆಯಾ?

07011012a ಧನ್ಯಃ ಕುಂತೀಸುತೋ ರಾಜಾ ಸುಜಾತಾ ಚಾಸ್ಯ ಧೀಮತಃ|

07011012c ಅಜಾತಶತ್ರುತಾ ಸತ್ಯಾ ತಸ್ಯ ಯತ್ಸ್ನಿಹ್ಯತೇ ಭವಾನ್||

ಉತ್ತಮ ಕುಲದಲ್ಲಿ ಜನಿಸಿದ ಧೀಮತ ರಾಜಾ ಕುಂತೀಸುತನೇ ಧನ್ಯ. ನೀನೂ ಕೂಡ ಅವನಲ್ಲಿ ಸ್ನೇಹಭಾವವನ್ನು ತೋರಿಸುತ್ತಿರುವೆಯೆಂದರೆ ಅವನ ಅಜಾತಶತ್ರುತ್ವವು ಸತ್ಯವಾದಂತಾಯಿತು.”

07011013a ದ್ರೋಣೇನ ತ್ವೇವಮುಕ್ತಸ್ಯ ತವ ಪುತ್ರಸ್ಯ ಭಾರತ|

07011013c ಸಹಸಾ ನಿಃಸೃತೋ ಭಾವೋ ಯೋಽಸ್ಯ ನಿತ್ಯಂ ಪ್ರವರ್ತತೇ||

ಭಾರತ! ದ್ರೋಣನು ಹೀಗೆ ಹೇಳಲು ನಿತ್ಯವೂ ನಿನ್ನ ಪುತ್ರನಲ್ಲಿ ಮಲಗಿದ್ದ ನಿಜಭಾವನೆಯು ಒಮ್ಮಿಂದೊಮ್ಮೆಲೇ ಪ್ರಕಟವಾಯಿತು.

07011014a ನಾಕಾರೋ ಗೂಹಿತುಂ ಶಕ್ಯೋ ಬೃಹಸ್ಪತಿಸಮೈರಪಿ|

07011014c ತಸ್ಮಾತ್ತವ ಸುತೋ ರಾಜನ್ಪ್ರಹೃಷ್ಟೋ ವಾಕ್ಯಮಬ್ರವೀತ್||

ಬೃಹಸ್ಪತಿಯಂತಿರುವವನೂ ಕೂಡ ಅವನ ಆಕಾರವನ್ನು ಊಹಿಸಲು ಶಕ್ಯರಾಗಿರಲಿಲ್ಲ. ರಾಜನ್! ಅದಕ್ಕೆ ನಿನ್ನ ಮಗನು ಪ್ರಹೃಷ್ಟನಾಗಿ ಹೀಗೆ ಹೇಳಿದನು:

07011015a ವಧೇ ಕುಂತೀಸುತಸ್ಯಾಜೌ ನಾಚಾರ್ಯ ವಿಜಯೋ ಮಮ|

07011015c ಹತೇ ಯುಧಿಷ್ಠಿರೇ ಪಾರ್ಥೋ ಹನ್ಯಾತ್ಸರ್ವಾನ್ ಹಿ ನೋ ಧ್ರುವಂ||

“ಆಚಾರ್ಯ! ಕುಂತೀಸುತನ ವಧೆಯಲ್ಲಿ ನನ್ನ ವಿಜಯವಿಲ್ಲ. ಯುಧಿಷ್ಠಿರನು ಹತನಾದರೆ ಪಾರ್ಥನು ಸರ್ವರನ್ನೂ ಸಂಹರಿಸುತ್ತಾನೆ ಎನ್ನುವುದು ಖಂಡಿತ.

07011016a ನ ಚ ಶಕ್ಯೋ ರಣೇ ಸರ್ವೈರ್ನಿಹಂತುಮಮರೈರಪಿ|

07011016c ಯ ಏವ ಚೈಷಾಂ ಶೇಷಃ ಸ್ಯಾತ್ಸ ಏವಾಸ್ಮಾನ್ನ ಶೇಷಯೇತ್||

ರಣದಲ್ಲಿ ಅವರೆಲ್ಲರನ್ನು ಸಂಹರಿಸಲು ಅಮರರಿಂದಲೂ ಸಾಧ್ಯವಿಲ್ಲ. ಅವರಲ್ಲಿ ಯಾರು ಉಳಿದರೂ ಅವರು ನಮ್ಮೆಲ್ಲರನ್ನೂ ಉಳಿಯಗೊಡುವುದಿಲ್ಲ.

07011017a ಸತ್ಯಪ್ರತಿಜ್ಞೇ ತ್ವಾನೀತೇ ಪುನರ್ದ್ಯೂತೇನ ನಿರ್ಜಿತೇ|

07011017c ಪುನರ್ಯಾಸ್ಯಂತ್ಯರಣ್ಯಾಯ ಕೌಂತೇಯಾಸ್ತಮನುವ್ರತಾಃ||

ಆ ಸತ್ಯಪ್ರತಿಜ್ಞನನ್ನು ನೀನು ಕರೆದುಕೊಂಡು ಬಂದರೆ ಪುನಃ ದ್ಯೂತದಲ್ಲಿ ಅವನನ್ನು ಸೋಲಿಸಿ, ಪುನಃ ಅರಣ್ಯಕ್ಕೆ ಕಳುಹಿಸುತ್ತೇನೆ. ಕೌಂತೇಯರು ಅವನನ್ನು ಹಿಂಬಾಲಿಸಿ ಹೋಗುತ್ತಾರೆ.

07011018a ಸೋಽಯಂ ಮಮ ಜಯೋ ವ್ಯಕ್ತಂ ದೀರ್ಘಕಾಲಂ ಭವಿಷ್ಯತಿ|

07011018c ಅತೋ ನ ವಧಮಿಚ್ಚಾಮಿ ಧರ್ಮರಾಜಸ್ಯ ಕರ್ಹಿ ಚಿತ್||

ಅಂಥಹ ಜಯವು ನನಗೆ ದೀರ್ಘಕಾಲವುಳಿಯುತ್ತದೆ ಎಂದು ವ್ಯಕ್ತವಾಗುತ್ತಿದೆ. ಇದರಿಂದಾಗಿ ನಾನು ಎಂದೂ ಧರ್ಮರಾಜನ ವಧೆಯನ್ನು ಬಯಸುವುದಿಲ್ಲ.”

07011019a ತಸ್ಯ ಜಿಹ್ಮಮಭಿಪ್ರಾಯಂ ಜ್ಞಾತ್ವಾ ದ್ರೋಣೋಽರ್ಥತತ್ತ್ವವಿತ್|

07011019c ತಂ ವರಂ ಸಾಂತರಂ ತಸ್ಮೈ ದದೌ ಸಂಚಿಂತ್ಯ ಬುದ್ಧಿಮಾನ್||

ಅವನ ನಾಲಿಗೆಯಿಂದ ಅವನ ಅಭಿಪ್ರಾಯವನ್ನು ತಿಳಿದ ಅರ್ಥತತ್ವಗಳನ್ನು ತಿಳಿದಿದ್ದ ಬುದ್ಧಿಮಾನ್ ದ್ರೋಣನು ಕೂಡಲೇ ಯೋಚಿಸಿ ಅವನಿಗೆ ವರವನ್ನಿತ್ತನು.

07011020 ದ್ರೋಣ ಉವಾಚ|

07011020a ನ ಚೇದ್ಯುಧಿಷ್ಠಿರಂ ವೀರ ಪಾಲಯೇದರ್ಜುನೋ ಯುಧಿ|

07011020c ಮನ್ಯಸ್ವ ಪಾಂಡವಂ ಜ್ಯೇಷ್ಠಮಾನೀತಂ ವಶಮಾತ್ಮನಃ||

ದ್ರೋಣನು ಹೇಳಿದನು: “ವೀರ ಒಂದುವೇಳೆ ಅರ್ಜುನನು ಯುದ್ಧದಲ್ಲಿ ಯುಧಿಷ್ಠಿರನನ್ನು ರಕ್ಷಿಸುತ್ತಿಲ್ಲವಾದರೆ ಜ್ಯೇಷ್ಠ ಪಾಂಡವನನ್ನು ನಾನು ಸೆರೆಹಿಡಿದು ತರುತ್ತೇನೆ ಎಂದು ತಿಳಿ.

07011021a ನ ಹಿ ಪಾರ್ಥೋ ರಣೇ ಶಕ್ಯಃ ಸೇಂದ್ರೈರ್ದೇವಾಸುರೈರಪಿ|

07011021c ಪ್ರತ್ಯುದ್ಯಾತುಮತಸ್ತಾತ ನೈತದಾಮರ್ಷಯಾಮ್ಯಹಂ||

ರಣದಲ್ಲಿ ಪಾರ್ಥನನ್ನು ಜಯಿಸಲು ಇಂದ್ರಸಮೇತರಾದ ದೇವಾಸುರರಿಂದಲೂ ಶಕ್ಯವಾಗುವುದಿಲ್ಲ. ಆದುದರಿಂದ ಅವನ ಮೇಲೆ ಆಕ್ರಮಣಿಸಲಾಗಲೀ ಜಯಿಸಲಾಗಲೀ ನಾನು ಯಾವಾಗಲೂ ಯೋಚಿಸುವುದೇ ಇಲ್ಲ.

07011022a ಅಸಂಶಯಂ ಸ ಶಿಷ್ಯೋ ಮೇ ಮತ್ಪೂರ್ವಶ್ಚಾಸ್ತ್ರಕರ್ಮಣಿ|

07011022c ತರುಣಃ ಕೀರ್ತಿಯುಕ್ತಶ್ಚ ಏಕಾಯನಗತಶ್ಚ ಸಃ||

ಅವನು ನನ್ನ ಶಿಷ್ಯನೆಂಬುವುದರಲ್ಲಿ ಸಂಶಯವಿಲ್ಲ. ಅಸ್ತ್ರಗಳನ್ನು ಬೋಧಿಸಿದವರಲ್ಲಿ ಅವನಿಗೆ ನಾನೇ ಮೊದಲಿಗನು. ಅವನಿನ್ನೂ ತರುಣನು. ಅನೇಕ ಪುಣ್ಯಕಾರ್ಯಗಳನ್ನು ಮಾಡಿದ ಸುಕೃತನು.

07011023a ಅಸ್ತ್ರಾಣೀಂದ್ರಾಚ್ಚ ರುದ್ರಾಚ್ಚ ಭೂಯಾಂಸಿ ಸಮವಾಪ್ತವಾನ್|

07011023c ಅಮರ್ಷಿತಶ್ಚ ತೇ ರಾಜಂಸ್ತೇನ ನಾಮರ್ಷಯಾಮ್ಯಹಂ||

ಇನ್ನು ಹೆಚ್ಚಾಗಿ ಇಂದ್ರ ಮತ್ತು ರುದ್ರರಿಂದ ಅಸ್ತ್ರಗಳನ್ನು ಸಂಪಾದಿಸಿದ್ದಾನೆ. ರಾಜನ್! ನಿನ್ನ ಮೇಲೆ ಕುಪಿತನಾಗಿದ್ದಾನೆ. ನಾನು ಅವನ ಮೇಲೆ ಸಿಟ್ಟಾಗುವುದಿಲ್ಲ.

07011024a ಸ ಚಾಪಕ್ರಮ್ಯತಾಂ ಯುದ್ಧಾದ್ಯೇನೋಪಾಯೇನ ಶಕ್ಯತೇ|

07011024c ಅಪನೀತೇ ತತಃ ಪಾರ್ಥೇ ಧರ್ಮರಾಜೋ ಜಿತಸ್ತ್ವಯಾ||

ಯಾವುದಾದರೂ ಉಪಾಯವನ್ನು ಹೂಡಿ ಯುದ್ಧದಿಂದ ನೀನು ಪಾರ್ಥನನ್ನು ದೂರಕಳುಹಿಸಲು ಶಕ್ಯನಾದರೆ ನೀನು ಧರ್ಮರಾಜನನ್ನು ಗೆದ್ದಂತೆಯೇ.

07011025a ಗ್ರಹಣಂ ಚೇಜ್ಜಯಂ ತಸ್ಯ ಮನ್ಯಸೇ ಪುರುಷರ್ಷಭ|

07011025c ಏತೇನ ಚಾಭ್ಯುಪಾಯೇನ ಧ್ರುವಂ ಗ್ರಹಣಮೇಷ್ಯತಿ||

ಪುರುಷರ್ಷಭ! ಅವನನ್ನು ಹಿಡಿಯುವುದರಿಂದಲೇ ಜಯವೆಂದು ನೀನು ಅಭಿಪ್ರಾಯ ಪಟ್ಟಿದ್ದೀಯೇ. ಈ ಉಪಾಯದಿಂದ ಅವನನ್ನು ಹಿಡಿಯುವುದು ಖಂಡಿತ ಸಾಧ್ಯವಾಗುತ್ತದೆ.

07011026a ಅಹಂ ಗೃಹೀತ್ವಾ ರಾಜಾನಂ ಸತ್ಯಧರ್ಮಪರಾಯಣಂ|

07011026c ಆನಯಿಷ್ಯಾಮಿ ತೇ ರಾಜನ್ವಶಮದ್ಯ ನ ಸಂಶಯಃ||

07011027a ಯದಿ ಸ್ಥಾಸ್ಯತಿ ಸಂಗ್ರಾಮೇ ಮುಹೂರ್ತಮಪಿ ಮೇಽಗ್ರತಃ|

07011027c ಅಪನೀತೇ ನರವ್ಯಾಘ್ರೇ ಕುಂತೀಪುತ್ರೇ ಧನಂಜಯೇ||

ರಾಜನ್! ನರವ್ಯಾಘ್ರ ಕುಂತೀಪುತ್ರ ಧನಂಜಯನನ್ನು ದೂರಕ್ಕೆ ಒಯ್ದ ನಂತರ ಒಂದು ಕ್ಷಣಕಾಲವೂ ಅವನು ನನ್ನ ಎದಿರು ನಿಂತರೆ ಆ ಸತ್ಯಧರ್ಮಪರಾಯಣ ರಾಜನನ್ನು ಹಿಡಿದು ನಿನ್ನ ವಶದಲ್ಲಿ ಇಂದು ತರುತ್ತೇನೆ. ಅದರಲ್ಲಿ ಸಂಶಯ ಬೇಡ.

07011028a ಫಲ್ಗುನಸ್ಯ ಸಮಕ್ಷಂ ತು ನ ಹಿ ಪಾರ್ಥೋ ಯುಧಿಷ್ಠಿರಃ|

07011028c ಗ್ರಹೀತುಂ ಸಮರೇ ಶಕ್ಯಃ ಸೇಂದ್ರೈರಪಿ ಸುರಾಸುರೈಃ||

ಪಾರ್ಥ ಫಲ್ಗುನನು ನೋಡುತ್ತಿರುವಾಗಲೇ ಸಮರದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಲು ಇಂದ್ರನೊಂದಿಗೆ ಸುರಾಸುರರಿಗೂ ಸಾಧ್ಯವಿಲ್ಲ.””

07011029 ಸಂಜಯ ಉವಾಚ|

07011029a ಸಾಂತರಂ ತು ಪ್ರತಿಜ್ಞಾತೇ ರಾಜ್ಞೋ ದ್ರೋಣೇನ ನಿಗ್ರಹೇ|

07011029c ಗೃಹೀತಂ ತಮಮನ್ಯಂತ ತವ ಪುತ್ರಾಃ ಸುಬಾಲಿಶಾಃ||

ಸಂಜಯನು ಹೇಳಿದನು: “ರಾಜನನ್ನು ಸೆರೆಹಿಡಿಯಲು ದ್ರೋಣನು ಈ ರೀತಿ ನಿಬಂಧನೆಗಳೊಂದಿಗೆ ಪ್ರತಿಜ್ಞೆ ಮಾಡಲು ನಿನ್ನ ಪುತ್ರರು ಬಾಲಕರಂತೆ ಅವನು ಸೆರೆಹಿಡಿಯಲ್ಪಟ್ಟನೆಂದೇ ಭಾವಿಸಿದರು.

07011030a ಪಾಂಡವೇಷು ಹಿ ಸಾಪೇಕ್ಷಂ ದ್ರೋಣಂ ಜಾನಾತಿ ತೇ ಸುತಃ|

07011030c ತತಃ ಪ್ರತಿಜ್ಞಾಸ್ಥೈರ್ಯಾರ್ಥಂ ಸ ಮಂತ್ರೋ ಬಹುಲೀಕೃತಃ||

ಪಾಂಡವರೊಂದಿಗೆ ದ್ರೋಣನ ಪಕ್ಷಪಾತವಿದೆಯೆಂದು ನಿನ್ನ ಮಗನು ತಿಳಿದಿದ್ದನು. ಆದುದರಿಂದ ರಹಸ್ಯದಲ್ಲಿ ಮಾಡಿದ್ದ ಪ್ರತಿಜ್ಞೆಯನ್ನು ಬಹಿರಂಗಗೊಳಿಸಿದನು.

07011031a ತತೋ ದುರ್ಯೋಧನೇನಾಪಿ ಗ್ರಹಣಂ ಪಾಂಡವಸ್ಯ ತತ್|

07011031c ಸೈನ್ಯಸ್ಥಾನೇಷು ಸರ್ವೇಷು ವ್ಯಾಘೋಷಿತಮರಿಂದಮ||

ಅರಿಂದಮ! ಆಗ ದುರ್ಯೋಧನನು ಪಾಂಡವನ ಸೆರೆಹಿಡಿಯುವುದರ ಕುರಿತು ಎಲ್ಲ ಸೈನ್ಯ ಸ್ಥಾನಗಳಲ್ಲಿ ಘೋಷಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ದ್ರೋಣಪ್ರತಿಜ್ಞಾಯಾಂ ಏಕಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ದ್ರೋಣಪ್ರತಿಜ್ಞೆ ಎನ್ನುವ ಹನ್ನೊಂದನೇ ಅಧ್ಯಾಯವು.

Image result for indian motifs against white background

Comments are closed.