Drona Parva: Chapter 109

ದ್ರೋಣ ಪರ್ವ: ಜಯದ್ರಥವಧ ಪರ್ವ

೧೦೯

ಭೀಮಸೇನನಿಂದ ಧೃತರಾಷ್ಟ್ರ ಪುತ್ರ ದುರ್ಮುಖನ ವಧೆ; ಕರ್ಣನ ಪಲಾಯನ (೧-೩೪).

07109001 ಸಂಜಯ ಉವಾಚ|

07109001a ಸ ತಥಾ ವಿರಥಃ ಕರ್ಣಃ ಪುನರ್ಭೀಮೇನ ನಿರ್ಜಿತಃ|

07109001c ರಥಮನ್ಯಂ ಸಮಾಸ್ಥಾಯ ಸದ್ಯೋ ವಿವ್ಯಾಧ ಪಾಂಡವಂ||

ಸಂಜಯನು ಹೇಳಿದನು: “ಭೀಮನಿಂದ ಹೀಗೆ ಸೋತು ವಿರಥನಾದ ಕರ್ಣನು ಪುನಃ ಇನ್ನೊಂದು ರಥವನ್ನೇರಿ ಸದ್ಯದಲ್ಲಿಯೇ ಪಾಂಡವನನ್ನು ಹೊಡೆದನು.

07109002a ಮಹಾಗಜಾವಿವಾಸಾದ್ಯ ವಿಷಾಣಾಗ್ರೈಃ ಪರಸ್ಪರಂ|

07109002c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ||

ತಮ್ಮ ದಂತಗಳ ತುದಿಯಿಂದ ಪರಸ್ಪರರನ್ನು ಚುಚ್ಚಿ ಸೆಣಸಾಡುವ ಮಹಾಗಜಗಳಿಂತೆ ಅವರಿಬ್ಬರೂ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಅನ್ಯೋನ್ಯರನ್ನು ಹೊಡೆದರು.

07109003a ಅಥ ಕರ್ಣಃ ಶರವ್ರಾತೈರ್ಭೀಮಂ ಬಲವದರ್ದಯತ್|

07109003c ನನಾದ ಬಲವನ್ನಾದಂ ಪುನರ್ವಿವ್ಯಾಧ ಚೋರಸಿ||

ಆಗ ಕರ್ಣನು ಶರವ್ರಾತಗಳಿಂದ ಭೀಮನನ್ನು ಜೋರಾಗಿ ಹೊಡೆದನು. ಪುನಃ ಅವನ ಎದೆಯ ಮೇಲೆ ಹೊಡೆದು ಜೋರಾಗಿ ಗರ್ಜಿಸಿದನು.

07109004a ತಂ ಭೀಮೋ ದಶಭಿರ್ಬಾಣೈಃ ಪ್ರತ್ಯವಿಧ್ಯದಜಿಹ್ಮಗೈಃ|

07109004c ಪುನರ್ವಿವ್ಯಾಧ ವಿಂಶತ್ಯಾ ಶರಾಣಾಂ ನತಪರ್ವಣಾಂ||

ಪ್ರತಿಯಾಗಿ ಭೀಮನು ಅವನನ್ನು ಹತ್ತು ಬಾಣಗಳಿಂದ ಹೊಡೆದನು. ಪುನಃ ಇಪ್ಪತ್ತು ನತಪರ್ವಣ ಶರಗಳಿಂದ ಹೊಡೆದನು.

07109005a ಕರ್ಣಸ್ತು ನವಭಿರ್ಭೀಮಂ ವಿದ್ಧ್ವಾ ರಾಜನ್ಸ್ತನಾಂತರೇ|

07109005c ಧ್ವಜಮೇಕೇನ ವಿವ್ಯಾಧ ಸಾಯಕೇನ ಶಿತೇನ ಹ||

ರಾಜನ್! ಕರ್ಣನಾದರೋ ಭೀಮನ ಸ್ತನಾಂತರವನ್ನು ಒಂಭತ್ತರಿಂದ ಹೊಡೆದು ಒಂದೇ ನಿಶಿತ ಸಾಯಕದಿಂದ ಧ್ವಜಕ್ಕೂ ಹೊಡೆದನು.

07109006a ಸಾಯಕಾನಾಂ ತತಃ ಪಾರ್ಥಸ್ತ್ರಿಷಷ್ಟ್ಯಾ ಪ್ರತ್ಯವಿಧ್ಯತ|

07109006c ತೋತ್ತ್ರೈರಿವ ಮಹಾನಾಗಂ ಕಶಾಭಿರಿವ ವಾಜಿನಂ||

ಪ್ರತಿಯಾಗಿ ಪಾರ್ಥ ಭೀಮನು ಅಂಕುಶದಿಂದ ಮಹಾ ಆನೆಯನ್ನು ಅಥವಾ ಚಾವಟಿಯಿಂದ ಕುದುರೆಯನ್ನು ಹೊಡೆಯುವ ಹಾಗೆ ಕರ್ಣನನ್ನು ಅರತ್ಮೂರು ಸಾಯಕಗಳಿಂದ ಹೊಡೆದನು.

07109007a ಸೋಽತಿವಿದ್ಧೋ ಮಹಾರಾಜ ಪಾಂಡವೇನ ಯಶಸ್ವಿನಾ|

07109007c ಸೃಕ್ವಿಣೀ ಲೇಲಿಹನ್ವೀರಃ ಕ್ರೋಧಸಂರಕ್ತಲೋಚನಃ||

ಮಹಾರಾಜ! ಯಶಸ್ವೀ ಪಾಂಡವನಿಂದ ಅತಿಯಾಗಿ ಗಾಯಗೊಂಡ ವೀರ ಕರ್ಣನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಕಟವಾಯಿಯನ್ನು ನೆಕ್ಕತೊಡಗಿದನು.

07109008a ತತಃ ಶರಂ ಮಹಾರಾಜ ಸರ್ವಕಾಯಾವದಾರಣಂ|

07109008c ಪ್ರಾಹಿಣೋದ್ಭೀಮಸೇನಾಯ ಬಲಾಯೇಂದ್ರ ಇವಾಶನಿಂ||

ಆಗ ಮಹಾರಾಜ! ಕರ್ಣನು ಭೀಮಸೇನನನ್ನು ಕೊಲ್ಲಲು ಇಂದ್ರನು ವಜ್ರವನ್ನು ಹೇಗೋ ಹಾಗೆ ಸರ್ವ ದೇಹಗಳನ್ನೂ ಭೇದಿಸಬಲ್ಲ ಶರವನ್ನು ಬಲವಾಗಿ ಪ್ರಯೋಗಿಸಿದನು.

07109009a ಸ ನಿರ್ಭಿದ್ಯ ರಣೇ ಪಾರ್ಥಂ ಸೂತಪುತ್ರಧನುಶ್ಚ್ಯುತಃ|

07109009c ಅಗಚ್ಚದ್ದಾರಯನ್ಭೂಮಿಂ ಚಿತ್ರಪುಂಖಃ ಶಿಲೀಮುಖಃ||

ರಣದಲ್ಲಿ ಸೂತಪುತ್ರನ ಧನುಸ್ಸಿನಿಂದ ಹೊರಟ ಚಿತ್ರಪುಂಖವುಳ್ಳ ಶಿಲೀಮುಖ ಬಾಣವು ಪಾರ್ಥ ಭೀಮನನ್ನು ಭೇದಿಸಿ ಭೂಮಿಯನ್ನು ಅಗೆದು ಹೊಕ್ಕಿತು.

07109010a ಸರ್ವಶೈಕ್ಯಾಂ ಚತುಷ್ಕಿಷ್ಕುಂ ಗುರ್ವೀಂ ರುಕ್ಮಾಂಗದಾಂ ಗದಾಂ|

07109010c ಪ್ರಾಹಿಣೋತ್ಸೂತಪುತ್ರಾಯ ಷಡಸ್ರಾಮವಿಚಾರಯನ್||

ಆಗ ಒಂದು ಕ್ಷಣವೂ ವಿಚಾರಿಸದೇ ಭೀಮನು ಪೂರ್ಣವಾಗಿ ನಾಲ್ಕು ಕಿಷ್ಕು ಉದ್ದವಿರುವ ಆರು ಕಡೆಗಳಲ್ಲಿ ಮೊನಚಾಗಿರುವ, ಬಂಗಾರದ ಹಿಡಿಯುಳ್ಳ ಭಾರವಾದ ಗದೆಯನ್ನು ಸೂತಪುತ್ರನ ಮೇಲೆ ಎಸೆದನು.

07109011a ತಯಾ ಜಘಾನಾಧಿರಥೇಃ ಸದಶ್ವಾನ್ಸಾಧುವಾಹಿನಃ|

07109011c ಗದಯಾ ಭಾರತಃ ಕ್ರುದ್ಧೋ ವಜ್ರೇಣೇಂದ್ರ ಇವಾಸುರಾನ್||

ಕ್ರುದ್ಧ ಇಂದ್ರನು ವಜ್ರದಿಂದ ಅಸುರರನ್ನು ಹೇಗೋ ಹಾಗೆ ಭಾರತ ಭೀಮನು ಆ ಗದೆಯಿಂದ ಆಧಿರಥ ಕರ್ಣನ ಉತ್ತಮ ಕುದುರೆಗಳನ್ನು ಸಂಹರಿಸಿದನು.

07109012a ತತೋ ಭೀಮೋ ಮಹಾಬಾಹುಃ ಕ್ಷುರಾಭ್ಯಾಂ ಭರತರ್ಷಭ|

07109012c ಧ್ವಜಮಾಧಿರಥೇಶ್ಚಿತ್ತ್ವಾ ಸೂತಮಭ್ಯಹನತ್ತದಾ||

ಭರತರ್ಷಭ! ಆಗ ಮಹಾಬಾಹು ಭೀಮನು ಎರಡು ಕ್ಷುರಗಳಿಂದ ಆದಿರಥಿಯ ಧ್ವಜವನ್ನು ಕತ್ತರಿಸಿ ಸೂತನನ್ನು ಸಂಹರಿಸಿದನು.

07109013a ಹತಾಶ್ವಸೂತಮುತ್ಸೃಜ್ಯ ರಥಂ ಸ ಪತಿತಧ್ವಜಂ|

07109013c ವಿಸ್ಫಾರಯನ್ಧನುಃ ಕರ್ಣಸ್ತಸ್ಥೌ ಭಾರತ ದುರ್ಮನಾಃ||

ಭಾರತ! ಕುದುರೆ-ಸಾರಥಿಗಳು ಹತರಾಗಿದ್ದ, ಧ್ವಜವೂ ಬಿದ್ದುಹೋಗಿದ್ದ ಆ ರಥವನ್ನು ಬಿಟ್ಟು ಕರ್ಣನು ಧನುಸ್ಸನ್ನು ಟೇಂಕರಿಸಿ ದುಃಖದಿಂದ ನಿಂತುಬಿಟ್ಟನು.

07109014a ತತ್ರಾದ್ಭುತಮಪಶ್ಯಾಮ ರಾಧೇಯಸ್ಯ ಪರಾಕ್ರಮಂ|

07109014c ವಿರಥೋ ರಥಿನಾಂ ಶ್ರೇಷ್ಠೋ ವಾರಯಾಮಾಸ ಯದ್ರಿಪುಂ||

ಅಲ್ಲಿ ನಾವು ವಿರಥನಾಗಿದ್ದರೂ ಶತ್ರುವನ್ನು ತಡೆದು ಎದುರಿಸಿದ ರಥಿಗಳಲ್ಲಿ ಶ್ರೇಷ್ಠ ರಾಧೇಯನ ಪರಾಕ್ರಮವನ್ನು ನೋಡಿದೆವು.

07109015a ವಿರಥಂ ತಂ ರಥಶ್ರೇಷ್ಠಂ ದೃಷ್ಟ್ವಾಧಿರಥಿಮಾಹವೇ|

07109015c ದುರ್ಯೋಧನಸ್ತತೋ ರಾಜನ್ನಭ್ಯಭಾಷತ ದುರ್ಮುಖಂ||

ರಾಜನ್! ಆಹವದಲ್ಲಿ ವಿರಥನಾಗಿರುವ ರಥಶ್ರೇಷ್ಠ ಆಧಿರಥಿಯನ್ನು ನೋಡಿದ ದುರ್ಯೋಧನನು ದುರ್ಮುಖನಿಗೆ ಹೇಳಿದನು:

07109016a ಏಷ ದುರ್ಮುಖ ರಾಧೇಯೋ ಭೀಮೇನ ವಿರಥೀಕೃತಃ|

07109016c ತಂ ರಥೇನ ನರಶ್ರೇಷ್ಠಂ ಸಂಪಾದಯ ಮಹಾರಥಂ||

“ದುರ್ಮುಖ! ಇಗೋ ರಾಧೇಯನು ಭೀಮನಿಂದ ವಿರಥೀಕೃತನಾಗಿದ್ದಾನೆ. ಆ ನರಶ್ರೇಷ್ಠ ಮಹಾರಥನಿಗೆ ರಥವನ್ನು ಒದಗಿಸಿ ಕೊಡು!”

07109017a ದುರ್ಯೋಧನವಚಃ ಶ್ರುತ್ವಾ ತತೋ ಭಾರತ ದುರ್ಮುಖಃ|

07109017c ತ್ವರಮಾಣೋಽಬ್ಯಯಾತ್ಕರ್ಣಂ ಭೀಮಂ ಚಾವಾರಯಚ್ಚರೈಃ||

ಭಾರತ! ದುರ್ಯೋಧನನ ಮಾತನ್ನು ಕೇಳಿ ದುರ್ಮುಖನು ತ್ವರೆಮಾಡಿ ಕರ್ಣನ ಬಳಿಸಾರಿ ಭೀಮನನ್ನು ಶರಗಳಿಂದ ಮುಚ್ಚಿದನು.

07109018a ದುರ್ಮುಖಂ ಪ್ರೇಕ್ಷ್ಯ ಸಂಗ್ರಾಮೇ ಸೂತಪುತ್ರಪದಾನುಗಂ|

07109018c ವಾಯುಪುತ್ರಃ ಪ್ರಹೃಷ್ಟೋಽಭೂತ್ಸೃಕ್ಕಿಣೀ ಪರಿಲೇಲಿಹನ್||

ಸಂಗ್ರಾಮದಲ್ಲಿ ಸೂತಪುತ್ರನ ಸಹಾಯಕ್ಕೆಂದು ಬಂದ ದುರ್ಮುಖನನ್ನು ನೋಡಿ ವಾಯುಪುತ್ರನು ಹರ್ಷಗೊಂಡು ನಾಲಿಗೆಯಿಂದ ಕಟವಾಯಿಯನ್ನು ಸವರಿದನು.

07109019a ತತಃ ಕರ್ಣಂ ಮಹಾರಾಜ ವಾರಯಿತ್ವಾ ಶಿಲೀಮುಖೈಃ|

07109019c ದುರ್ಮುಖಾಯ ರಥಂ ಶೀಘ್ರಂ ಪ್ರೇಷಯಾಮಾಸ ಪಾಂಡವಃ||

ಮಹಾರಾಜ! ಆಗ ಪಾಂಡವ ಭೀಮನು ಶಿಲೀಮುಖಗಳಿಂದ ಕರ್ಣನನ್ನು ತಡೆದು ಶೀಘ್ರದಲ್ಲಿಯೇ ರಥವನ್ನು ದುರ್ಮುಖನ ಕಡೆ ತಿರುಗಿಸಿದನು.

07109020a ತಸ್ಮಿನ್ ಕ್ಷಣೇ ಮಹಾರಾಜ ನವಭಿರ್ನತಪರ್ವಭಿಃ|

07109020c ಸುಪುಂಖೈರ್ದುರ್ಮುಖಂ ಭೀಮಃ ಶರೈರ್ನಿನ್ಯೇ ಯಮಕ್ಷಯಂ||

ಮಹಾರಾಜ! ಅದೇ ಕ್ಷಣದಲ್ಲಿಯೇ ಭೀಮನು ಸುಂದರ ಪುಂಖಗಳುಳ್ಳ ಒಂಭತ್ತು ನತಪರ್ವ ಶರಗಳಿಂದ ದುರ್ಮುಖನನ್ನು ಯಮಕ್ಷಯಕ್ಕೆ ಕಳುಹಿಸಿಬಿಟ್ಟನು.

07109021a ತತಸ್ತಂ ಏವಾಧಿರಥಿಃ ಸ್ಯಂದನಂ ದುರ್ಮುಖೇ ಹತೇ|

07109021c ಆಸ್ಥಿತಃ ಪ್ರಬಭೌ ರಾಜನ್ದೀಪ್ಯಮಾನ ಇವಾಂಶುಮಾನ್||

ರಾಜನ್! ದುರ್ಮುಖನು ಹತನಾಗಲು ಆಧಿರಥಿಯು ಅವನ ರಥವನ್ನೇರಿ ಸೂರ್ಯನಂತೆ ಬೆಳಗುತ್ತಾ ಪ್ರಕಾಶಿಸಿದನು.

07109022a ಶಯಾನಂ ಭಿನ್ನಮರ್ಮಾಣಂ ದುರ್ಮುಖಂ ಶೋಣಿತೋಕ್ಷಿತಂ|

07109022c ದೃಷ್ಟ್ವಾ ಕರ್ಣೋಽಶ್ರುಪೂರ್ಣಾಕ್ಷೋ ಮುಹೂರ್ತಂ ನಾಭ್ಯವರ್ತತ||

ಕವಚವು ಒಡೆದು ರಕ್ತದಲ್ಲಿ ತೋಯ್ದು ಮಲಗಿದ್ದ ದುರ್ಮುಖನನ್ನು ನೋಡಿ ಕರ್ಣನು ಕಣ್ಣೀರು ತುಂಬಿದವನಾಗಿ ಕ್ಷಣಕಾಲ ಯುದ್ಧವನ್ನೇ ಮಾಡಲಿಲ್ಲ.

07109023a ತಂ ಗತಾಸುಮತಿಕ್ರಮ್ಯ ಕೃತ್ವಾ ಕರ್ಣಃ ಪ್ರದಕ್ಷಿಣಂ|

07109023c ದೀರ್ಘಮುಷ್ಣಂ ಶ್ವಸನ್ವೀರೋ ನ ಕಿಂ ಚಿತ್ಪ್ರತ್ಯಪದ್ಯತ||

ಸತ್ತು ಬಿದ್ದಿರುವ ಅವನನ್ನು ಪ್ರದಕ್ಷಿಣೆ ಮಾಡಿ ಮುಂದುವರೆದು ವೀರ ಕರ್ಣನು ದೀರ್ಘವಾದ ಬಿಸಿ ನಿಟ್ಟುಸಿರನ್ನು ಬಿಟ್ಟನು. ಏನು ಮಾಡಬೇಕೆಂದೇ ಅವನಿಗೆ ತೋಚದಾಯಿತು.

07109024a ತಸ್ಮಿಂಸ್ತು ವಿವರೇ ರಾಜನ್ನಾರಾಚಾನ್ಗಾರ್ಧ್ರವಾಸಸಃ|

07109024c ಪ್ರಾಹಿಣೋತ್ಸೂತಪುತ್ರಾಯ ಭೀಮಸೇನಶ್ಚತುರ್ದಶ||

ರಾಜನ್! ಅದರ ಮಧ್ಯದಲ್ಲಿ[1] ಭೀಮಸೇನನು ಸೂತಪುತ್ರನ ಮೇಲೆ ಹದ್ದಿನ ಗರಿಗಳುಳ್ಳ ಹದಿನಾಲ್ಕು ನಾರಾಚಗಳನ್ನು ಪ್ರಯೋಗಿಸಿದನು.

07109025a ತೇ ತಸ್ಯ ಕವಚಂ ಭಿತ್ತ್ವಾ ಸ್ವರ್ಣಪುಂಖಾ ಮಹೌಜಸಃ|

07109025c ಹೇಮಚಿತ್ರಾ ಮಹಾರಾಜ ದ್ಯೋತಯಂತೋ ದಿಶೋ ದಶ||

07109026a ಅಪಿಬನ್ಸೂತಪುತ್ರಸ್ಯ ಶೋಣಿತಂ ರಕ್ತಭೋಜನಾಃ|

07109026c ಕ್ರುದ್ಧಾ ಇವ ಮನುಷ್ಯೇಂದ್ರ ಭುಜಗಾಃ ಕಾಲಚೋದಿತಾಃ||

07109027a ಪ್ರಸರ್ಪಮಾಣಾ ಮೇದಿನ್ಯಾಂ ತೇ ವ್ಯರೋಚಂತ ಮಾರ್ಗಣಾಃ|

07109027c ಅರ್ಧಪ್ರವಿಷ್ಟಾಃ ಸಂರಬ್ಧಾ ಬಿಲಾನೀವ ಮಹೋರಗಾಃ||

ಮಹಾರಾಜ! ಆ ಬಣ್ಣದ ಸ್ವರ್ಣಪುಂಖಗಳ ಮಹೌಜಸ ರಕ್ತವನ್ನು ಕುಡಿಯುವ ಕಾಲಚೋದಿತ ಬಾಣಗಳು ಕ್ರುದ್ಧ ಸರ್ಪಗಳಂತೆ ಹತ್ತು ದಿಕ್ಕುಗಳನ್ನೂ ಬೆಳಗಿಸುತ್ತ ಸೂತಪುತ್ರ ಕರ್ಣನ ಕವಚವನ್ನು ಒಡೆದು ಅವನ ರಕ್ತವನ್ನು ಕುಡಿದು ಭೂಮಿಯನ್ನು ಕೊರೆದು ಒಳಹೊಕ್ಕಿದವು. ಆ ಮಾರ್ಗಣಗಳು ಬಿಲವನ್ನು ಅರ್ಧವೇ ಪ್ರವೇಶಿಸಿದ ಕ್ರುದ್ಧ ಮಹಾಸರ್ಪಗಳಂತೆ ಕಂಡವು.

07109028a ತಂ ಪ್ರತ್ಯವಿಧ್ಯದ್ರಾಧೇಯೋ ಜಾಂಬೂನದವಿಭೂಷಿತೈಃ|

07109028c ಚತುರ್ದಶಭಿರತ್ಯುಗ್ರೈರ್ನಾರಾಚೈರವಿಚಾರಯನ್||

ಅದಕ್ಕೆ ಪ್ರತಿಯಾಗಿ ರಾಧೇಯನು ಏನೂಂದನ್ನೂ ವಿಚಾರಿಸದೇ ಬಂಗಾರದಿಂದ ವಿಭೂಷಿತ ಹದಿನಾಲ್ಕು ಉಗ್ರ ನಾರಾಚಗಳಿಂದ ಭೀಮನನ್ನು ಹೊಡೆದನು.

07109029a ತೇ ಭೀಮಸೇನಸ್ಯ ಭುಜಂ ಸವ್ಯಂ ನಿರ್ಭಿದ್ಯ ಪತ್ರಿಣಃ|

07109029c ಪ್ರಾವಿಶನ್ಮೇದಿನೀಂ ಭೀಮಾಃ ಕ್ರೌಂಚಂ ಪತ್ರರಥಾ ಇವ||

ಆ ಭಯಂಕರ ಪತ್ರಿಗಳು ಭೀಮಸೇನನ ಬಲಭುಜವನ್ನು ಸೀಳಿ ಕ್ರೌಂಚ ಪಕ್ಷಿಗಳು ವೃಕ್ಷಸಮೂಹಗಳನ್ನು ಹೊಗುವಂತೆ ಮೇದಿನಿಯನ್ನು ಪ್ರವೇಶಿಸಿದವು.

07109030a ತೇ ವ್ಯರೋಚಂತ ನಾರಾಚಾಃ ಪ್ರವಿಶಂತೋ ವಸುಂಧರಾಂ|

07109030c ಗಚ್ಚತ್ಯಸ್ತಂ ದಿನಕರೇ ದೀಪ್ಯಮಾನಾ ಇವಾಂಶವಃ||

ವಸುಂಧರೆಯನ್ನು ಪ್ರವೇಶಿಸಿದ ಆ ನಾರಾಚಗಳು ಅಸ್ತಗಿರಿಯನ್ನು ಸೇರುವ ದಿನಕರನ ಕಿರಣಗಳಂತೆ ಬೆಳಗಿ ರಾರಾಜಿಸಿದವು.

07109031a ಸ ನಿರ್ಭಿನ್ನೋ ರಣೇ ಭೀಮೋ ನಾರಾಚೈರ್ಮರ್ಮಭೇದಿಭಿಃ|

07109031c ಸುಸ್ರಾವ ರುಧಿರಂ ಭೂರಿ ಪರ್ವತಃ ಸಲಿಲಂ ಯಥಾ||

ಆ ಮರ್ಮಭೇದಿ ನಾರಾಚಗಳಿಂದ ಗಾಯಗೊಂಡ ಭೀಮನು ರಣದಲ್ಲಿ ಪರ್ವತವು ನದಿಯನ್ನು ಸುರಿಸುವಂತೆ ರಕ್ತವನ್ನು ಸುರಿಸಿದನು.

07109032a ಸ ಭೀಮಸ್ತ್ರಿಭಿರಾಯಸ್ತಃ ಸೂತಪುತ್ರಂ ಪತತ್ರಿಭಿಃ|

07109032c ಸುಪರ್ಣವೇಗೈರ್ವಿವ್ಯಾಧ ಸಾರಥಿಂ ಚಾಸ್ಯ ಸಪ್ತಭಿಃ||

ಆಗ ಭೀಮನು ಸೂತಪುತ್ರನನ್ನು ಗರುಡನ ವೇಗವುಳ್ಳ ಏಳು ಪತತ್ರಿಗಳಿಂದ ಮತ್ತು ಅವನ ಸಾರಥಿಯನ್ನು ಏಳರಿಂದ ಹೊಡೆದನು.

07109033a ಸ ವಿಹ್ವಲೋ ಮಹಾರಾಜ ಕರ್ಣೋ ಭೀಮಬಲಾರ್ದಿತಃ|

07109033c ಪ್ರಾದ್ರವಜ್ಜವನೈರಶ್ವೈ ರಣಂ ಹಿತ್ವಾ ಮಹಾಯಶಾಃ||

ಮಹಾರಾಜ! ಭೀಮನ ಬಲದಿಂದ ಪೀಡಿತನಾದ ಮಹಾಯಶಸ್ವಿ ಕರ್ಣನು ವೇಗವಾಗಿ ಹೋಗುವ ಕುದುರೆಗಳೊಂದಿಗೆ ರಣವನ್ನು ತೊರೆದು ಹೊರಟುಹೋದನು.

07109034a ಭೀಮಸೇನಸ್ತು ವಿಸ್ಫಾರ್ಯ ಚಾಪಂ ಹೇಮಪರಿಷ್ಕೃತಂ|

07109034c ಆಹವೇಽತಿರಥೋಽತಿಷ್ಠಜ್ಜ್ವಲನ್ನಿವ ಹುತಾಶನಃ||

ಅತಿರಥ ಭೀಮಸೇನನಾದರೋ ಬಂಗಾರದಿಂದ ಮಾಡಲ್ಪಟ್ಟ ಧನುಸ್ಸನ್ನು ಟೇಂಕರಿಸಿ ಪ್ರಜ್ವಲಿಸುವ ಹುತಾಶನನಂತೆ ರಣರಂಗದಲ್ಲಿ ನಿಂತುಬಿಟ್ಟನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಕರ್ಣಾಪಯಾನೇ ನವಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಕರ್ಣಾಪಯಾನ ಎನ್ನುವ ನೂರಾಒಂಭತ್ತನೇ ಅಧ್ಯಾಯವು.

Image result for lotus against white background

[1] ಆ ಅವಕಾಶವನ್ನು ನೋಡಿಕೊಂಡು

Comments are closed.