Drona Parva: Chapter 107

ದ್ರೋಣ ಪರ್ವ: ಜಯದ್ರಥವಧ ಪರ್ವ

೧೦೭

ಭೀಮ-ಕರ್ಣರ ಪುನಃ ಯುದ್ಧ (೧-೩೯).

07107001 ಧೃತರಾಷ್ಟ್ರ ಉವಾಚ|

07107001a ಯಸ್ಮಿನ್ಜಯಾಶಾ ಸತತಂ ಪುತ್ರಾಣಾಂ ಮಮ ಸಂಜಯ|

07107001c ತಂ ದೃಷ್ಟ್ವಾ ವಿಮುಖಂ ಸಂಖ್ಯೇ ಕಿಂ ನು ದುರ್ಯೋಧನೋಽಬ್ರವೀತ್|

07107001e ಕರ್ಣೋ ವಾ ಸಮರೇ ತಾತ ಕಿಮಕಾರ್ಷೀದತಃ ಪರಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ನನ್ನ ಮಕ್ಕಳು ಸತತವೂ ಯಾರ ಮೇಲೆ ಜಯದ ಆಸೆಯನ್ನಿಟ್ಟಿದ್ದರೋ ಅವನೇ ಯುದ್ಧದಿಂದ ವಿಮುಖನಾದುದನ್ನು ನೋಡಿ ದುರ್ಯೋಧನನು ಏನು ಹೇಳಿದನು? ಅಯ್ಯಾ! ಸಮರದಲ್ಲಿ ಕರ್ಣನಾದರೋ ಅದರ ನಂತರ ಏನು ಮಾಡಿದನು?”

7107002 ಸಂಜಯ ಉವಾಚ|

07107002a ಭೀಮಸೇನಂ ರಣೇ ದೃಷ್ಟ್ವಾ ಜ್ವಲಂತಮಿವ ಪಾವಕಂ|

07107002c ರಥಮನ್ಯಂ ಸಮಾಸ್ಥಾಯ ವಿಧಿವತ್ಕಲ್ಪಿತಂ ಪುನಃ|

07107002e ಅಭ್ಯಯಾತ್ಪಾಂಡವಂ ಕರ್ಣೋ ವಾತೋದ್ಧೂತ ಇವಾರ್ಣವಃ||

ಸಂಜಯನು ಹೇಳಿದನು: “ಪ್ರಜ್ವಲಿಸುವ ಅಗ್ನಿಯಂತಿರುವ ಭೀಮಸೇನನನ್ನು ರಣದಲ್ಲಿ ನೋಡಿ ಕರ್ಣನು ವಿಧಿವತ್ತಾಗಿ ಸಿದ್ಧಗೊಳಿಸಿದ ಇನ್ನೊಂದು ರಥವನ್ನೇರಿ ಭಿರುಗಾಳಿಗೆ ಸಿಲುಕಿದ ಸಾಗರದಂತೆ ಪಾಂಡವನನ್ನು ಆಕ್ರಮಣಿಸಿದನು.

07107003a ಕ್ರುದ್ಧಮಾಧಿರಥಿಂ ದೃಷ್ಟ್ವಾ ಪುತ್ರಾಸ್ತವ ವಿಶಾಂ ಪತೇ|

07107003c ಭೀಮಸೇನಮಮನ್ಯಂತ ವೈವಸ್ವತಮುಖೇ ಹುತಂ||

ವಿಶಾಂಪತೇ! ಕ್ರುದ್ಧ ಆಧಿರಥಿಯನ್ನು ನೋಡಿ ಭೀಮಸೇನನು ವೈವಸ್ವತನ ಯಾಗದಲ್ಲಿ ಹುತನಾದನೆಂದೇ ತಿಳಿದುಕೊಂಡರು.

07107004a ಚಾಪಶಬ್ದಂ ಮಹತ್ಕೃತ್ವಾ ತಲಶಬ್ದಂ ಚ ಭೈರವಂ|

07107004c ಅಭ್ಯವರ್ತತ ರಾಧೇಯೋ ಭೀಮಸೇನರಥಂ ಪ್ರತಿ||

ಧನುಸ್ಸನ್ನು ಜೋರಾಗಿ ಟೇಂಕರಿಸುತ್ತಾ ಭೈರವ ಚಪ್ಪಾಳೆ ಶಬ್ಧವನ್ನು ಮಾಡುತ್ತಾ ರಾಧೇಯನು ಭೀಮಸೇನನ ರಥದ ಕಡೆ ನುಗ್ಗಿದನು.

07107005a ಪುನರೇವ ತತೋ ರಾಜನ್ಮಹಾನಾಸೀತ್ಸುದಾರುಣಃ|

07107005c ವಿಮರ್ದಃ ಸೂತಪುತ್ರಸ್ಯ ಭೀಮಸ್ಯ ಚ ವಿಶಾಂ ಪತೇ||

ರಾಜನ್! ವಿಶಾಂಪತೇ! ಆಗ ಪುನಃ ಸೂತಪುತ್ರ ಮತ್ತು ಭೀಮಸೇನರ ನಡುವೆ ಮಹಾ ದಾರುಣ ಹೋರಾಟವು ನಡೆಯಿತು.

07107006a ಸಂರಬ್ಧೌ ಹಿ ಮಹಾಬಾಹೂ ಪರಸ್ಪರವಧೈಷಿಣೌ|

07107006c ಅನ್ಯೋನ್ಯಮೀಕ್ಷಾಂ ಚಕ್ರಾತೇ ದಹಂತಾವಿವ ಲೋಚನೈಃ||

ಮಹಾಬಾಹೋ! ಪರಸ್ಪರರನ್ನು ವಧಿಸಲು ಬಯಸಿ ಸಂರಬ್ಧರಾದ ಅವರಿಬ್ಬರೂ ಕಣ್ಣುಗಳಿಂದಲೇ ಅನ್ಯೋನ್ಯರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಾ ತಿರುಗುತ್ತಿದ್ದರು.

07107007a ಕ್ರೋಧರಕ್ತೇಕ್ಷಣೌ ಕ್ರುದ್ಧೌ ನಿಃಶ್ವಸಂತೌ ಮಹಾರಥೌ|

07107007c ಯುದ್ಧೇಽನ್ಯೋನ್ಯಂ ಸಮಾಸಾದ್ಯ ತತಕ್ಷತುರರಿಂದಮೌ||

ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಕ್ರುದ್ಧರಾಗಿ ನಿಟ್ಟುಸಿರುಬಿಡುತ್ತಿದ್ದ ಆ ಮಹಾರಥ ಅರಿಂದಮರು ಯುದ್ಧದಲ್ಲಿ ಎದುರಿಸಿ ಅನ್ಯೋನ್ಯರನ್ನು ಗಾಯಗೊಳಿಸಿದರು.

07107008a ವ್ಯಾಘ್ರಾವಿವ ಸುಸಂರಬ್ಧೌ ಶ್ಯೇನಾವಿವ ಚ ಶೀಘ್ರಗೌ|

07107008c ಶರಭಾವಿವ ಸಂಕ್ರುದ್ಧೌ ಯುಯುಧಾತೇ ಪರಸ್ಪರಂ||

ವ್ಯಾಘ್ರಗಳಂತೆ ಸಂರಬ್ಧರಾಗಿ, ಗಿಡುಗಳಂತೆ ಶೀಘ್ರವಾಗಿ, ಶರಭಗಳಂತೆ ಸಂಕ್ರುದ್ಧರಾಗಿ ಪರಸ್ಪರರೊಡನೆ ಯುದ್ಧಮಾಡಿದರು.

07107009a ತತೋ ಭೀಮಃ ಸ್ಮರನ್ ಕ್ಲೇಶಾನಕ್ಷದ್ಯೂತೇ ವನೇಽಪಿ ಚ|

07107009c ವಿರಾಟನಗರೇ ಚೈವ ಪ್ರಾಪ್ತಂ ದುಃಖಮರಿಂದಮಃ||

07107010a ರಾಷ್ಟ್ರಾಣಾಂ ಸ್ಫೀತರತ್ನಾನಾಂ ಹರಣಂ ಚ ತವಾತ್ಮಜೈಃ|

07107010c ಸತತಂ ಚ ಪರಿಕ್ಲೇಶಾನ್ಸಪುತ್ರೇಣ ತ್ವಯಾ ಕೃತಾನ್||

07107011a ದಗ್ಧುಮೈಚ್ಚಶ್ಚ ಯತ್ಕುಂತೀಂ ಸಪುತ್ರಾಂ ತ್ವಮನಾಗಸಂ|

07107011c ಕೃಷ್ಣಾಯಾಶ್ಚ ಪರಿಕ್ಲೇಶಂ ಸಭಾಮಧ್ಯೇ ದುರಾತ್ಮಭಿಃ||

07107012a ಪತಿಮನ್ಯಂ ಪರೀಪ್ಸಸ್ವ ನ ಸಂತಿ ಪತಯಸ್ತವ|

07107012c ನರಕಂ ಪತಿತಾಃ ಪಾರ್ಥಾಃ ಸರ್ವೇ ಷಂಢತಿಲೋಪಮಾಃ||

07107013a ಸಮಕ್ಷಂ ತವ ಕೌರವ್ಯ ಯದೂಚುಃ ಕುರವಸ್ತದಾ|

07107013c ದಾಸೀಭೋಗೇನ ಕೃಷ್ಣಾಂ ಚ ಭೋಕ್ತುಕಾಮಾಃ ಸುತಾಸ್ತವ||

07107014a ಯಚ್ಚಾಪಿ ತಾನ್ಪ್ರವ್ರಜತಃ ಕೃಷ್ಣಾಜಿನನಿವಾಸಿನಃ|

07107014c ಪರುಷಾಣ್ಯುಕ್ತವಾನ್ಕರ್ಣಃ ಸಭಾಯಾಂ ಸನ್ನಿಧೌ ತವ||

07107015a ತೃಣೀಕೃತ್ಯ ಚ ಯತ್ಪಾರ್ಥಾಂಸ್ತವ ಪುತ್ರೋ ವವಲ್ಗ ಹ|

07107015c ವಿಷಮಸ್ಥಾನ್ಸಮಸ್ಥೋ ಹಿ ಸಂರಂಭಾದ್ಗತಚೇತಸಃ||

07107016a ಬಾಲ್ಯಾತ್ಪ್ರಭೃತಿ ಚಾರಿಘ್ನಸ್ತಾನಿ ದುಃಖಾನಿ ಚಿಂತಯನ್|

07107016c ನಿರವಿದ್ಯತ ಧರ್ಮಾತ್ಮಾ ಜೀವಿತೇನ ವೃಕೋದರಃ||

ಆಗ ಅರಿಂದಮ ಭೀಮನು ಅಕ್ಷದ್ಯೂತದಲ್ಲಿ, ನಂತರ ವನದಲ್ಲಿ ಮತ್ತು ವಿರಾಟನಗರದಲ್ಲಿಯೂ ಪಡೆದ ದುಃಖವನ್ನು ಸ್ಮರಿಸಿಕೊಂಡು; ರತ್ನ ಸಮೃದ್ಧ ರಾಷ್ಟ್ರಗಳನ್ನು ನಿನ್ನ ಪುತ್ರರು ಅಪಹರಿಸಿದುದನ್ನೂ, ಮಕ್ಕಳೊಂದಿಗೆ ನೀನು ಸತತವೂ ಅವರಿಗೆ ನೀಡಿದ ಪರಿಕ್ಲೇಶಗಳನ್ನೂ, ಮುಗ್ಧ ಕುಂತಿಯನ್ನು ಅವಳ ಮಕ್ಕಳೊಂದಿಗೆ ಸುಟ್ಟುಬಿಡಲು ಬಯಸಿದ ನಿನ್ನನ್ನೂ, ಸಭಾಮಧ್ಯದಲ್ಲಿ ದುರಾತ್ಮರು ಕೃಷ್ಣೆ ದ್ರೌಪದಿಗೆ ನೀಡಿದ ಕಷ್ಟಗಳನ್ನೂ, “ಪೊಳ್ಳು ಎಳ್ಳಿನಂತಿರುವ ಪಾರ್ಥರೆಲ್ಲರೂ ನರಕದಲ್ಲಿ ಬಿದ್ದಿದ್ದಾರೆ! ಇವರು ನಿನ್ನ ಗಂಡಂದಿರಾಗಿ ಉಳಿದಿಲ್ಲ! ಬೇರೆಯೇ ಪತಿಯನ್ನು ಸ್ವೀಕರಿಸು!” ಎಂದು ಕೌರವ್ಯ! ನಿನ್ನ ಸಮಕ್ಷಮದಲ್ಲಿ ಕುರುಗಳು ಹೇಳಿದ್ದುದನ್ನೂ; ಕೃಷ್ಣೆಯನ್ನು ದಾಸಿಯನ್ನಾಗಿಸಿಕೊಂಡು ಭೋಗಿಸಲು ಬಯಸಿದ ನಿನ್ನ ಮಕ್ಕಳನ್ನೂ; ಕೃಷ್ಣಾಜಿನಗಳನ್ನು ಧರಿಸಿ ಅವರು ಹೊರಡುತ್ತಿರುವಾಗ ಸಭೆಯಲ್ಲಿ ನಿನ್ನ ಸನ್ನಿಧಿಯಲ್ಲಿ ಕರ್ಣನಾಡಿದ ಕಠೋರ ಮಾತುಗಳನ್ನು; ಕಷ್ಟದಲ್ಲಿರುವ ಪಾರ್ಥರನ್ನು ತೃಣೀಕರಿಸಿ ದರ್ಪದಿಂದ ಅವಹೇಳನ ಮಾಡಿದ ಆ ಅಲ್ಪತೇಜಸನನ್ನೂ; ಬಾಲ್ಯದಿಂದಲೂ ನೀಡಿದ ಆ ದುಃಖಗಳನ್ನು ನೆನೆದು ಆ ಅರಿಘ್ನ ಧರ್ಮಾತ್ಮ ವೃಕೋದರನು ಜೀವವನ್ನೂ ಕಡೆಗಣಿಸಿದನು.

07107017a ತತೋ ವಿಸ್ಫಾರ್ಯ ಸುಮಹದ್ಧೇಮಪೃಷ್ಠಂ ದುರಾಸದಂ|

07107017c ಚಾಪಂ ಭರತಶಾರ್ದೂಲಸ್ತ್ಯಕ್ತಾತ್ಮಾ ಕರ್ಣಮಭ್ಯಯಾತ್||

ಆಗ ಬಂಗಾರದ ಬೆನ್ನಿದ್ದ ದುರಾಸದ ಮಹಾ ಧನುಸ್ಸನ್ನು ಟೇಂಕರಿಸಿ ಆ ಭರತಶಾರ್ದೂಲನು ತನ್ನ ಜೀವವನ್ನೇ ಕಡೆಗಣಿಸಿ ಕರ್ಣನನ್ನು ಆಕ್ರಮಣಿಸಿದನು.

07107018a ಸ ಸಾಯಕಮಯೈರ್ಜಾಲೈರ್ಭೀಮಃ ಕರ್ಣರಥಂ ಪ್ರತಿ|

07107018c ಭಾನುಮದ್ಭಿಃ ಶಿಲಾಧೌತೈರ್ಭಾನೋಃ ಪ್ರಚ್ಚಾದಯತ್ಪ್ರಭಾಂ||

ಕರ್ಣನ ರಥದ ಮೇಲೆ ಬೆಳಗುತ್ತಿದ್ದ ಶಿಲಾಧೌತ ಸಾಯಕಗಳ ಜಾಲಗಳನ್ನು ಪ್ರಯೋಗಿಸಿ ಭೀಮನು ಸೂರ್ಯನ ಪ್ರಭೆಯನ್ನೇ ಮಂಕುಗೊಳಿಸಿದನು.

07107019a ತತಃ ಪ್ರಹಸ್ಯಾಧಿರಥಿಸ್ತೂರ್ಣಮಸ್ಯಂ ಶಿತಾನ್ ಶರಾನ್|

07107019c ವ್ಯಧಮದ್ಭೀಮಸೇನಸ್ಯ ಶರಜಾಲಾನಿ ಪತ್ರಿಭಿಃ||

ಆಗ ಆಧಿರಥಿಯು ನಗುತ್ತಾ ತಕ್ಷಣವೇ ನಿಶಿತ ಶರಗಳಿಂದ ಭೀಮಸೇನನ ಪತ್ರಿಗಳ ಶರಜಾಲಗಳನ್ನು ನಾಶಗೊಳಿಸಿದನು.

07107020a ಮಹಾರಥೋ ಮಹಾಬಾಹುರ್ಮಹಾವೇಗೈರ್ಮಹಾಬಲಃ|

07107020c ವಿವ್ಯಾಧಾಧಿರಥಿರ್ಭೀಮಂ ನವಭಿರ್ನಿಶಿತೈಃ ಶರೈಃ||

ಮಹಾರಥ, ಮಹಾಬಾಹು, ಮಹಾವೇಗೀ, ಮಹಾಬಲ ಆಧಿರಥಿಯು ಭೀಮನನ್ನು ಒಂಭತ್ತು ನಿಶಿತ ಶರಗಳಿಂದ ಹೊಡೆದನು.

07107021a ಸ ತೋತ್ತ್ರೈರಿವ ಮಾತಂಗೋ ವಾರ್ಯಮಾಣಃ ಪತತ್ರಿಭಿಃ|

07107021c ಅಭ್ಯಧಾವದಸಂಭ್ರಾಂತಃ ಸೂತಪುತ್ರಂ ವೃಕೋದರಃ||

ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ಈ ಪತತ್ರಿಗಳಿಂದ ಹೊಡೆಯಲ್ಪಟ್ಟ ವೃಕೋದರನು ಸ್ವಲ್ಪವೂ ಗಾಭರಿಗೊಳ್ಳದೇ ಸೂತಪುತ್ರನನ್ನು ಆಕ್ರಮಣಿಸಿದನು.

07107022a ತಮಾಪತಂತಂ ವೇಗೇನ ರಭಸಂ ಪಾಂಡವರ್ಷಭಂ|

07107022c ಕರ್ಣಃ ಪ್ರತ್ಯುದ್ಯಯೌ ಯೋದ್ಧುಂ ಮತ್ತೋ ಮತ್ತಮಿವ ದ್ವಿಪಂ||

ವೇಗದಿಂದ ರಭಸವಾಗಿ ತನ್ನ ಮೇಲೆ ಬೀಳುತ್ತಿದ್ದ ಪಾಂಡವರ್ಷಭನೊಂದಿಗೆ, ಮದಿಸಿದ ಆನೆಯನ್ನು ಹೋರಾಡುವ ಇನ್ನೊಂದು ಮದಿಸಿದ ಆನೆಯಂತೆ, ಕರ್ಣನು ಪ್ರತಿಯಾಗಿ ಯುದ್ಧಮಾಡಿದನು.

07107023a ತತಃ ಪ್ರಧ್ಮಾಪ್ಯ ಜಲಜಂ ಭೇರೀಶತನಿನಾದಿತಂ|

07107023c ಅಕ್ಷುಭ್ಯತ ಬಲಂ ಹರ್ಷಾದುದ್ಧೂತ ಇವ ಸಾಗರಃ||

ಆಗ ಕರ್ಣನು ನೂರಾರು ಭೇರಿಗಳು ಒಮ್ಮೆಲೇ ಬಾರಿಸಿದರೆ ಉಂಟಾಗುವಷ್ಟು ಶಬ್ಧವನ್ನು ನೀಡುವ ಶಂಖವನ್ನು ಊದಿ ಹರ್ಷದಿಂದ ಸಾಗರದಂತಿರುವ ಭೀಮನ ಸೇನೆಯನ್ನು ಕ್ಷೋಭೆಗೊಳಿಸಿದನು.

07107024a ತದುದ್ಧೂತಂ ಬಲಂ ದೃಷ್ಟ್ವಾ ರಥನಾಗಾಶ್ವಪತ್ತಿಮತ್|

07107024c ಭೀಮಃ ಕರ್ಣಂ ಸಮಾಸಾದ್ಯ ಚಾದಯಾಮಾಸ ಸಾಯಕೈಃ||

ರಥ-ಗಜ-ಅಶ್ವ-ಪದಾತಿಗಳ ತನ್ನ ಸೇನೆಯು ಹೀಗೆ ಕ್ಷೋಭೆಗೊಂಡಿದುದನ್ನು ನೋಡಿ ಭೀಮನು ಹತ್ತಿರದಿಂದಲೇ ಕರ್ಣನನ್ನು ಸಾಯಕಗಳಿಂದ ಮುಚ್ಚಿದನು.

07107025a ಅಶ್ವಾನೃಶ್ಯಸವರ್ಣಾಂಸ್ತು ಹಂಸವರ್ಣೈರ್ಹಯೋತ್ತಮೈಃ|

07107025c ವ್ಯಾಮಿಶ್ರಯದ್ರಣೇ ಕರ್ಣಃ ಪಾಂಡವಂ ಚಾದಯಂ ಶರೈಃ||

ಆಗ ಕರ್ಣನು ತನ್ನ ಹಂಸವರ್ಣದ ಕುದುರೆಗಳು ಭೀಮನ ಕರಡೀಬಣ್ಣದ ಕುದುರೆಗಳೊಂದಿಗೆ ಬೆರೆಯುವಷ್ಟು ಹತ್ತಿರಕ್ಕೆ ಬಂದು ಪಾಂಡವನನ್ನು ಶರಗಳಿಂದ ಮುಚ್ಚಿಬಿಟ್ಟನು.

07107026a ಋಶ್ಯವರ್ಣಾನ್ ಹಯಾನ್ಕರ್ಕೈರ್ಮಿಶ್ರಾನ್ಮಾರುತರಂಹಸಃ|

07107026c ನಿರೀಕ್ಷ್ಯ ತವ ಪುತ್ರಾಣಾಂ ಹಾಹಾಕೃತಮಭೂದ್ಬಲಂ||

ಆ ಕರಡೀ ಬಣ್ಣದ ಕುದುರೆಗಳು ಗಾಳಿಯ ವೇಗದಲ್ಲಿ ಚಲಿಸುತ್ತಿರುವ ಹಂಸವರ್ಣದ ಕುದುರೆಗಳೊಂದಿಗೆ ಬೆರೆತುದನ್ನು ನೋಡಿ ನಿನ್ನ ಪುತ್ರರ ಸೇನೆಯಲ್ಲಿ ಹಾಹಾಕಾರವುಂಟಾಯಿತು.

07107027a ತೇ ಹಯಾ ಬಹ್ವಶೋಭಂತ ಮಿಶ್ರಿತಾ ವಾತರಂಹಸಃ|

07107027c ಸಿತಾಸಿತಾ ಮಹಾರಾಜ ಯಥಾ ವ್ಯೋಮ್ನಿ ಬಲಾಹಕಾಃ||

ಮಹಾರಾಜ! ಬೆರೆತುಹೋದ ಆ ಗಾಳಿಯ ವೇಗದ ಕುದುರೆಗಳು ಆಕಾಶದಲ್ಲಿ ತೋರುವ ಕಪ್ಪು-ಬಿಳೀ ಮೋಡಗಳಂತೆ ಅಧಿಕವಾಗಿ ಶೋಭಿಸಿದವು.

07107028a ಸಂರಬ್ಧೌ ಕ್ರೋಧತಾಮ್ರಾಕ್ಷೌ ಪ್ರೇಕ್ಷ್ಯ ಕರ್ಣವೃಕೋದರೌ|

07107028c ಸಂತ್ರಸ್ತಾಃ ಸಮಕಂಪಂತ ತ್ವದೀಯಾನಾಂ ಮಹಾರಥಾಃ||

ಕ್ರೋಧದಿಂದ ಕಣ್ಣುಗಳು ಕೆಂಪಾಗಿ ಸಂರಬ್ಧರಾಗಿದ್ದ ಕರ್ಣ-ವೃಕೋದರರನ್ನು ನೋಡಿ ನಿನ್ನ ಕಡೆಯ ಮಹಾರಥರು ಭಯದಿಂದ ತತ್ತರಿಸಿದರು.

07107029a ಯಮರಾಷ್ಟ್ರೋಪಮಂ ಘೋರಮಾಸೀದಾಯೋಧನಂ ತಯೋಃ|

07107029c ದುರ್ದರ್ಶಂ ಭರತಶ್ರೇಷ್ಠ ಪ್ರೇತರಾಜಪುರಂ ಯಥಾ||

ಭರತಶ್ರೇಷ್ಠ! ಅವರಿಬ್ಬರೂ ಹೋರಾಡುತ್ತಿದ್ದ ಯುದ್ಧಭೂಮಿಯು ಯಮರಾಷ್ಟ್ರದಂತೆ ಘೋರವಾಗಿ ಪರಿಣಮಿಸಿತು. ಪ್ರೇತರಾಜನ ಪುರದಂತೆ ದುರ್ದರ್ಶವಾಯಿತು.

07107030a ಸಮಾಜಮಿವ ತಚ್ಚಿತ್ರಂ ಪ್ರೇಕ್ಷಮಾಣಾ ಮಹಾರಥಾಃ|

07107030c ನಾಲಕ್ಷಯಂ ಜಯಂ ವ್ಯಕ್ತಮೇಕೈಕಸ್ಯ ನಿವಾರಣೇ||

ಚಿತ್ರವನ್ನು ನೋಡುತ್ತಿರುವ ಪ್ರೇಕ್ಷಕರಂತಿದ್ದ ಆ ಮಹಾರಥರ ಸಮಾಜಕ್ಕೆ ಯಾರೊಬ್ಬರಿಗೂ ನಿಶ್ಚಯಪೂರ್ವಕ ಜಯವು ದೊರಕುತ್ತದೆಯೆಂದು ಕಾಣಲಿಲ್ಲ.

07107031a ತಯೋಃ ಪ್ರೈಕ್ಷಂತ ಸಮ್ಮರ್ದಂ ಸನ್ನಿಕೃಷ್ಟಮಹಾಸ್ತ್ರಯೋಃ|

07107031c ತವ ದುರ್ಮಂತ್ರಿತೇ ರಾಜನ್ಸಪುತ್ರಸ್ಯ ವಿಶಾಂ ಪತೇ||

ರಾಜನ್! ವಿಶಾಂಪತೇ! ಅವರು ನಿನ್ನ ಮತ್ತು ನಿನ್ನ ಮಗನ ದುರ್ಮಂತ್ರದಿಂದಾಗಿ ನಡೆಯುತ್ತಿದ್ದ ಮಹಾ ಅಸ್ತ್ರಗಳ ಆ ಹೋರಾಟವನ್ನು ಮಾತ್ರ ನೋಡುತ್ತಿದ್ದರು.

07107032a ಚಾದಯಂತೌ ಹಿ ಶತ್ರುಘ್ನಾವನ್ಯೋನ್ಯಂ ಸಾಯಕೈಃ ಶಿತೈಃ|

07107032c ಶರಜಾಲಾವೃತಂ ವ್ಯೋಮ ಚಕ್ರಾತೇ ಶರವೃಷ್ಟಿಭಿಃ||

ಅವರಿಬ್ಬರು ಶತ್ರುಘ್ನರೂ ಪರಸ್ಪರರನ್ನು ನಿಶಿತ ಸಾಯಕಗಳಿಂದ ಮುಚ್ಚಿದರು. ಆಕಾಶವನ್ನು ಶರಜಾಲಗಳಿಂದ ತುಂಬಿಸಿ, ಬಾಣಗಳ ಮಳೆಯನ್ನೂ ಸುರಿಸಿದರು.

07107033a ತಾವನ್ಯೋನ್ಯಂ ಜಿಘಾಂಸಂತೌ ಶರೈಸ್ತೀಕ್ಷ್ಣೈರ್ಮಹಾರಥೌ|

07107033c ಪ್ರೇಕ್ಷಣೀಯತರಾವಾಸ್ತಾಂ ವೃಷ್ಟಿಮಂತಾವಿವಾಂಬುದೌ||

ಅನ್ಯೋನ್ಯರನ್ನು ಸಂಹರಿಸಲು ಬಯಸಿ ತೀಕ್ಷ್ಣಶರಗಳಿಂದ ಹೊಡೆದಾಡುತ್ತಿದ್ದ ಆ ಮಹಾರಥರಿಬ್ಬರೂ ಜೋರಾಗಿ ಮಳೆಸುರಿಸುತ್ತಿದ್ದ ಮೋಡಗಳಂತೆ ತುಂಬಾ ಪ್ರೇಕ್ಷಣೀಯರಾಗಿ ಕಾಣುತ್ತಿದ್ದರು.

07107034a ಸುವರ್ಣವಿಕೃತಾನ್ಬಾಣಾನ್ಪ್ರಮುಂಚಂತಾವರಿಂದಮೌ|

07107034c ಭಾಸ್ವರಂ ವ್ಯೋಮ ಚಕ್ರಾತೇ ವಃನ್ಯುಲ್ಕಾಭಿರಿವ ಪ್ರಭೋ||

ಪ್ರಭೋ! ಬಂಗಾರದಿಂದ ಮಾಡಲ್ಪಟ್ಟ ಬಾಣಗಳನ್ನು ಬಿಡುತ್ತಾ ಆ ಅರಿಂದಮರು ಆಕಾಶವನ್ನು ಉಲ್ಕೆಗಳಿಂದ ಪ್ರಕಾಶಿಸುವಂತೆ ಪ್ರಕಾಶಗೊಳಿಸಿದರು.

07107035a ತಾಭ್ಯಾಂ ಮುಕ್ತಾ ವ್ಯಕಾಶಂತ ಕಂಕಬರ್ಹಿಣವಾಸಸಃ|

07107035c ಪಂಕ್ತ್ಯಃ ಶರದಿ ಮತ್ತಾನಾಂ ಸಾರಸಾನಾಮಿವಾಂಬರೇ||

ಅವರು ಬಿಟ್ಟ ಹದ್ದಿನ ಗರಿಗಳ ಬಾಣಗಳು ಶರತ್ಕಾಲದ ಅಂಬರದಲ್ಲಿ ಸಾಗುವ ಮದಿಸಿದ ಸಾರಂಗಗಳ ಸಾಲುಗಳಂತೆ ಶೋಭಿಸುತ್ತಿದ್ದವು.

07107036a ಸಂಸಕ್ತಂ ಸೂತಪುತ್ರೇಣ ದೃಷ್ಟ್ವಾ ಭೀಮಮರಿಂದಮಂ|

07107036c ಅತಿಭಾರಮಮನ್ಯೇತಾಂ ಭೀಮೇ ಕೃಷ್ಣಧನಂಜಯೌ||

ಆಗ ಸೂತಪುತ್ರನೊಡನೆ ಯುದ್ಧಮಾಡುತ್ತಿದ್ದ ಅರಿಂದಮನನ್ನು ನೋಡಿ ಕೃಷ್ಣ-ಧನಂಜಯರು ಕರ್ಣನು ಭೀಮನಿಗೆ ಅತಿ ಭಾರಿ ಎಂದು ಅಂದುಕೊಂಡರು.

07107037a ತತ್ರಾಧಿರಥಿಭೀಮಾಭ್ಯಾಂ ಶರೈರ್ಮುಕ್ತೈರ್ದೃಢಾಹತಾಃ|

07107037c ಇಷುಪಾತಮತಿಕ್ರಮ್ಯ ಪೇತುರಶ್ವನರದ್ವಿಪಾಃ||

ಹೀಗೆ ಆಧಿರಥಿ ಮತ್ತು ಭೀಮರು ಶರಗಳನ್ನು ಪರಸ್ಪರರ ಮೇಲೆ ಬಿಡುತ್ತಿರಲು ಆ ಬಾಣಗಳಿಗೆ ಸಿಲುಕಿದ ಅನೇಕ ಕುದುರೆ, ಮನುಷ್ಯ, ಆನೆಗಳು ಸತ್ತು ಬಿದ್ದರು.

07107038a ಪತದ್ಭಿಃ ಪತಿತೈಶ್ಚಾನ್ಯೈರ್ಗತಾಸುಭಿರನೇಕಶಃ|

07107038c ಕೃತೋ ಮಹಾನ್ಮಹಾರಾಜ ಪುತ್ರಾಣಾಂ ತೇ ಜನಕ್ಷಯಃ||

ಮಹಾರಾಜ! ಸತ್ತು ಬಿದ್ದ ಮತ್ತು ಇನ್ನೂ ಬೀಳುತ್ತಿದ್ದ ಅನೇಕರಿಂದ ನಿನ್ನ ಮಕ್ಕಳಕಡೆ ಮಹಾ ಜನಕ್ಷಯವುಂಟಾಯಿತು.

07107039a ಮನುಷ್ಯಾಶ್ವಗಜಾನಾಂ ಚ ಶರೀರೈರ್ಗತಜೀವಿತೈಃ|

07107039c ಕ್ಷಣೇನ ಭೂಮಿಃ ಸಂಜಜ್ಞೇ ಸಂವೃತಾ ಭರತರ್ಷಭ||

ಭರತರ್ಷಭ! ಕ್ಷಣದಲ್ಲಿಯೇ ರಣಭೂಮಿಯು ಜೀವವನ್ನು ಕಳೆದುಕೊಂಡ ಮನುಷ್ಯ-ಅಶ್ವ-ಗಜಗಳಿಂದ ತುಂಬಿಬಿಟ್ಟಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಕರ್ಣಯುದ್ಧೇ ಸಪ್ತಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಕರ್ಣಯುದ್ಧ ಎನ್ನುವ ನೂರಾಏಳನೇ ಅಧ್ಯಾಯವು.

Image result for lotus against white background

Comments are closed.