Drona Parva: Chapter 106

ದ್ರೋಣ ಪರ್ವ: ಜಯದ್ರಥವಧ ಪರ್ವ

೧೦೬

ಭೀಮಸೇನ-ಕರ್ಣರ ಯುದ್ಧದ ಕುರಿತು ಧೃತರಾಷ್ಟ್ರನ ಪ್ರಶ್ನೆಗಳು (೧-೧೬). ಭೀಮಸೇನನಿಂದ ಕರ್ಣನ ಪರಾಜಯ (೧೭-೫೪).

07106001 ಧೃತರಾಷ್ಟ್ರ ಉವಾಚ|

07106001a ಯೌ ತೌ ಕರ್ಣಶ್ಚ ಭೀಮಶ್ಚ ಸಂಪ್ರಯುದ್ಧೌ ಮಹಾಬಲೌ|

07106001c ಅರ್ಜುನಸ್ಯ ರಥೋಪಾಂತೇ ಕೀದೃಶಃ ಸೋಽಭವದ್ರಣಃ||

ಧೃತರಾಷ್ಟ್ರನು ಹೇಳಿದನು: “ಅರ್ಜುನನ ರಥದ ಬಳಿಯಲ್ಲಿ ಮಹಾಬಲ ಕರ್ಣ ಮತ್ತು ಭೀಮರು ಯುದ್ಧಮಾಡುತ್ತಿರುವಾಗ ರಣವು ಯಾವ ರೂಪವನ್ನು ತಳೆಯಿತು?

07106002a ಪೂರ್ವಂ ಹಿ ನಿರ್ಜಿತಃ ಕರ್ಣೋ ಭೀಮಸೇನೇನ ಸಂಯುಗೇ|

07106002c ಕಥಂ ಭೂಯಸ್ತು ರಾಧೇಯೋ ಭೀಮಮಾಗಾನ್ಮಹಾರಥಃ||

ಹಿಂದೆಯೇ ಸಮರದಲ್ಲಿ ಕರ್ಣನು ಭೀಮಸೇನನಿಂದ ಸೋತಿದ್ದನು. ಪುನಃ ಹೇಗೆ ಮಹಾರಥ ರಾಧೇಯನು ಭೀಮನನ್ನು ಎದುರಿಸಿದನು.

07106003a ಭೀಮೋ ವಾ ಸೂತತನಯಂ ಪ್ರತ್ಯುದ್ಯಾತಃ ಕಥಂ ರಣೇ|

07106003c ಮಹಾರಥಸಮಾಖ್ಯಾತಂ ಪೃಥಿವ್ಯಾಂ ಪ್ರವರಂ ರಥಂ||

ಅಥವಾ ಭೀಮನಾದರೋ ಮಹಾರಥನೆಂದು ಭುವಿಯಲ್ಲಿಯೇ ಪ್ರಖ್ಯಾತನಾದ ಶ್ರೇಷ್ಠ ರಥ ಸೂತತನಯನನ್ನು ರಣದಲ್ಲಿ ಹೇಗೆ ಎದುರಿಸಿದನು.

07106004a ಭೀಷ್ಮದ್ರೋಣಾವತಿಕ್ರಮ್ಯ ಧರ್ಮಪುತ್ರೋ ಯುಧಿಷ್ಠಿರಃ|

07106004c ನಾನ್ಯತೋ ಭಯಮಾದತ್ತ ವಿನಾ ಕರ್ಣಂ ಧನುರ್ಧರಂ||

ಭೀಷ್ಮ-ದ್ರೋಣರನ್ನು ಬಿಟ್ಟು ಧನುರ್ಧರ ಕರ್ಣನಲ್ಲದೇ ಬೇರೆ ಯಾರಿಗೂ ಧರ್ಮಪುತ್ರ ಯುಧಿಷ್ಠಿರನು ಹೆದರುವುದಿಲ್ಲ.

07106005a ಭಯಾನ್ನ ಶೇತೇ ಸತತಂ ಚಿಂತಯನ್ವೈ ಮಹಾರಥಂ|

07106005c ತಂ ಕಥಂ ಸೂತಪುತ್ರಂ ಹಿ ಭೀಮೋಽಯುಧ್ಯತ ಸಂಯುಗೇ||

ಆ ಮಹಾರಥನ ಭಯದಿಂದ ಸತತವೂ ಚಿಂತೆಗೊಳಗಾಗಿ ಅವನು ನಿದ್ದೆ ಮಾಡುವುದಿಲ್ಲ. ಅಂಥಹ ಸೂತಪುತ್ರನೊಂದಿಗೆ ಭೀಮನು ಹೇಗೆ ರಣರಂಗದಲ್ಲಿ ಯುದ್ಧಮಾಡಿದನು?

07106006a ಬ್ರಹ್ಮಣ್ಯಂ ವೀರ್ಯಸಂಪನ್ನಂ ಸಮರೇಷ್ವನಿವರ್ತಿನಂ|

07106006c ಕಥಂ ಕರ್ಣಂ ಯುಧಾಂ ಶ್ರೇಷ್ಠಂ ಭೀಮೋಽಯುಧ್ಯತ ಸಂಯುಗೇ||

ಬ್ರಹ್ಮಣ್ಯ, ವೀರ್ಯಸಂಪನ್ನ, ಸಮರದಿಂದ ಪಲಾಯನಮಾಡದ, ಯೋಧರಲ್ಲಿ ಶ್ರೇಷ್ಠ ಕರ್ಣನೊಡನೆ ರಣದಲ್ಲಿ ಹೇಗೆ ಯುದ್ಧಮಾಡಿದನು?

07106007a ಯೌ ತೌ ಸಮೀಯತುರ್ವೀರಾವರ್ಜುನಸ್ಯ ರಥಂ ಪ್ರತಿ|

07106007c ಕಥಂ ನು ತಾವಯುಧ್ಯೇತಾಂ ಸೂತಪುತ್ರವೃಕೋದರೌ||

ಅರ್ಜುನನ ರಥದ ಸಮೀಪದಲ್ಲಿಯೇ ನಡೆದ ಸೂತಪುತ್ರ-ವೃಕೋದರರ ಯುದ್ಧವು ಹೇಗಾಯಿತು?

07106008a ಭ್ರಾತೃತ್ವಂ ದರ್ಶಿತಂ ಪೂರ್ವಂ ಘೃಣೀ ಚಾಪಿ ಸ ಸೂತಜಃ|

07106008c ಕಥಂ ಭೀಮೇನ ಯುಯುಧೇ ಕುಂತ್ಯಾ ವಾಕ್ಯಮನುಸ್ಮರನ್||

ಮೊದಲೇ ಭೀಮನಲ್ಲಿ ಭ್ರಾತೃತ್ವವನ್ನು ಕಂಡುಕೊಂಡ ಕರುಣಿ ಸೂತಜನು ಕುಂತಿಯ ವಾಕ್ಯವನ್ನು ಸ್ಮರಿಸಿಕೊಂಡು ಭೀಮನೊಂದಿಗೆ ಹೇಗೆ ಯುದ್ಧಮಾಡಿದನು?

07106009a ಭೀಮೋ ವಾ ಸೂತಪುತ್ರೇಣ ಸ್ಮರನ್ವೈರಂ ಪುರಾ ಕೃತಂ|

07106009c ಸೋಽಯುಧ್ಯತ ಕಥಂ ವೀರಃ ಕರ್ಣೇನ ಸಹ ಸಂಯುಗೇ||

ವೀರ ಭೀಮನಾದರೋ ಸೂತಪುತ್ರನು ಹಿಂದೆ ಮಾಡಿದ ವೈರವನ್ನು ಸ್ಮರಿಸಿಕೊಂಡು ಕರ್ಣನೊಂದಿಗೆ ಸಮರದಲ್ಲಿ ಹೇಗೆ ಯುದ್ಧಮಾಡಿದನು?

07106010a ಆಶಾಸ್ತೇ ಚ ಸದಾ ಸೂತ ಪುತ್ರೋ ದುರ್ಯೋಧನೋ ಮಮ|

07106010c ಕರ್ಣೋ ಜೇಷ್ಯತಿ ಸಂಗ್ರಾಮೇ ಸಹಿತಾನ್ಪಾಂಡವಾನಿತಿ||

ಸೂತ! ನನ್ನ ಮಗ ದುರ್ಯೋಧನನು ಸಂಗ್ರಾಮದಲ್ಲಿ ಪಾಂಡವರನ್ನು ಒಟ್ಟಿಗೇ ಕರ್ಣನು ಜಯಿಸುತ್ತಾನೆ ಎಂದು ಆಶಿಸಿದ್ದನು.

07106011a ಜಯಾಶಾ ಯತ್ರ ಮಂದಸ್ಯ ಪುತ್ರಸ್ಯ ಮಮ ಸಂಯುಗೇ|

07106011c ಸ ಕಥಂ ಭೀಮಕರ್ಮಾಣಂ ಭೀಮಸೇನಮಯುಧ್ಯತ||

ಸಂಯುಗದಲ್ಲಿ ನನ್ನ ಮಗನ ಜಯದ ಆಶಯನಾಗಿದ್ದ ಕರ್ಣನು ಹೇಗೆ ಭೀಮಕರ್ಮಿ ಭೀಮಸೇನನೊಂದಿಗೆ ಯುದ್ಧಮಾಡಿದನು?

07106012a ಯಂ ಸಮಾಶ್ರಿತ್ಯ ಪುತ್ರೈರ್ಮೇ ಕೃತಂ ವೈರಂ ಮಹಾರಥೈಃ|

07106012c ತಂ ಸೂತತನಯಂ ತಾತ ಕಥಂ ಭೀಮೋ ಹ್ಯಯೋಧಯತ್||

ಯಾರನ್ನು ಆಶ್ರಯಿಸಿ ನನ್ನ ಮಕ್ಕಳು ಆ ಮಹಾರಥರೊಂದಿಗೆ ವೈರವನ್ನು ಸಾಧಿಸಿದರೋ ಆ ಸೂತತನಯನೊಡನೆ ಭೀಮನು ಹೇಗೆ ಯುದ್ಧಮಾಡಿದನು?

07106013a ಅನೇಕಾನ್ವಿಪ್ರಕಾರಾಂಶ್ಚ ಸೂತಪುತ್ರಸಮುದ್ಭವಾನ್|

07106013c ಸ್ಮರಮಾಣಃ ಕಥಂ ಭೀಮೋ ಯುಯುಧೇ ಸೂತಸೂನುನಾ||

ಸೂತಪುತ್ರನಿಂದ ಉಂಟಾದ ಅನೇಕ ಪ್ರಕರಣಗಳನ್ನು ನೆನಪಿಸಿಕೊಳ್ಳುತ್ತಾ ಭೀಮನು ಸೂತಸೂನುವಿನೊಂದಿಗೆ ಹೇಗೆ ಯುದ್ಧಮಾಡಿದನು?

07106014a ಯೋಽಜಯತ್ಪೃಥಿವೀಂ ಸರ್ವಾನ್ರಥೇನೈಕೇನ ವೀರ್ಯವಾನ್|

07106014c ತಂ ಸೂತತನಯಂ ಯುದ್ಧೇ ಕಥಂ ಭೀಮೋ ಹ್ಯಯೋಧಯತ್||

ಪೃಥ್ವಿಯ ಸರ್ವರನ್ನೂ ಒಂದೇ ರಥದಲ್ಲಿ ಗೆದ್ದ ವೀರ್ಯವಾನ್ ಸೂತತನಯನನ್ನು ಯುದ್ಧದಲ್ಲಿ ಭೀಮನು ಹೇಗೆ ಎದುರಿಸಿದನು?

07106015a ಯೋ ಜಾತಃ ಕುಂಡಲಾಭ್ಯಾಂ ಚ ಕವಚೇನ ಸಹೈವ ಚ|

07106015c ತಂ ಸೂತಪುತ್ರಂ ಸಮರೇ ಭೀಮಃ ಕಥಮಯೋಧಯತ್||

ಕುಂಡಲಗಳು ಮತ್ತು ಕವಚದೊಂದಿಗೆ ಹುಟ್ಟಿದ್ದ ಆ ಸೂತಪುತ್ರನೊಂದಿಗೆ ಸಮರದಲ್ಲಿ ಭೀಮನು ಹೇಗೆ ಯುದ್ಧಮಾಡಿದನು?

07106016a ಯಥಾ ತಯೋರ್ಯುದ್ಧಮಭೂದ್ಯಶ್ಚಾಸೀದ್ವಿಜಯೀ ತಯೋಃ|

07106016c ತನ್ಮಮಾಚಕ್ಷ್ವ ತತ್ತ್ವೇನ ಕುಶಲೋ ಹ್ಯಸಿ ಸಂಜಯ||

ಅವರಿಬ್ಬರ ನಡುವೆ ಯುದ್ಧವು ಹೇಗೆ ನಡೆಯಿತು ಮತ್ತು ಅವರಿಬ್ಬರಲ್ಲಿ ಯಶಸ್ಸು ಯಾರದ್ದಾಯಿತು ಎನ್ನುವುದನ್ನು ನನಗೆ ಹೇಳು ಸಂಜಯ! ಹೇಳುವುದರಲ್ಲಿ ನೀನು ಕುಶಲನಾಗಿದ್ದೀಯೆ.”

07106017 ಸಂಜಯ ಉವಾಚ|

07106017a ಭೀಮಸೇನಸ್ತು ರಾಧೇಯಮುತ್ಸೃಜ್ಯ ರಥಿನಾಂ ವರಂ|

07106017c ಇಯೇಷ ಗಂತುಂ ಯತ್ರಾಸ್ತಾಂ ವೀರೌ ಕೃಷ್ಣಧನಂಜಯೌ||

ಸಂಜಯನು ಹೇಳಿದನು: “ಭೀಮಸೇನನಾದರೋ ರಥಿಗಳಲ್ಲಿ ಶ್ರೇಷ್ಠ ರಾಧೇಯನನ್ನು ಬಿಟ್ಟು ವೀರರಾದ ಕೃಷ್ಣ-ಧನಂಜಯರು ಇರುವಲ್ಲಿ ಹೋಗ ಬಯಸಿದನು.

07106018a ತಂ ಪ್ರಯಾಂತಮಭಿದ್ರುತ್ಯ ರಾಧೇಯಃ ಕಂಕಪತ್ರಿಭಿಃ|

07106018c ಅಭ್ಯವರ್ಷನ್ಮಹಾರಾಜ ಮೇಘೋ ವೃಷ್ಟ್ಯೇವ ಪರ್ವತಂ||

ಮಹಾರಾಜ! ಹಾಗೆ ಹೋಗುತ್ತಿರುವ ಅವನನ್ನು ತಡೆಗಟ್ಟಿ ರಾಧೇಯನು ಮೇಘಗಳು ಪರ್ವತದ ಮೇಲೆ ಹೇಗೋ ಹಾಗೆ ಭೀಮಸೇನನ ಮೇಲೆ ಕಂಕಪತ್ರಿಗಳನ್ನು ಸುರಿಸಿದನು.

07106019a ಫುಲ್ಲತಾ ಪಂಕಜೇನೇವ ವಕ್ತ್ರೇಣಾಭ್ಯುತ್ಸ್ಮಯನ್ಬಲೀ|

07106019c ಆಜುಹಾವ ರಣೇ ಯಾಂತಂ ಭೀಮಮಾಧಿರಥಿಸ್ತದಾ||

ಬಲಶಾಲಿ ಆಧಿರಥಿಯು ಅರಳುತ್ತಿರುವ ಕಮಲದಂತಹ ಮುಖದಲ್ಲಿ ನಗೆಯಾಡುತ್ತಾ ಹೋಗುತ್ತಿದ್ದ ಭೀಮನನ್ನು ಯುದ್ಧಕ್ಕೆ ಆಹ್ವಾನಿಸಿದನು.

[1]07106020a ಭೀಮಸೇನಸ್ತದಾಹ್ವಾನಂ ಕರ್ಣಾನ್ನಾಮರ್ಷಯದ್ಯುಧಿ|

07106020c ಅರ್ಧಮಂಡಲಮಾವೃತ್ಯ ಸೂತಪುತ್ರಮಯೋಧಯತ್||

ಕರ್ಣನು ಯುದ್ಧಕ್ಕೆ ನೀಡಿದ ಆ ಆಹ್ವಾನವನ್ನು ಕೇಳಿ ರೋಷಗೊಂಡ ಭೀಮಸೇನನು ಅರ್ಧಮಂಡಲಪರ್ಯಂತ ತಿರುಗಿ ಸೂತಪುತ್ರನನ್ನು ಎದುರಿಸಿ ಯುದ್ಧಮಾಡತೊಡಗಿದನು.

07106021a ಅವಕ್ರಗಾಮಿಭಿರ್ಬಾಣೈರಭ್ಯವರ್ಷನ್ಮಹಾಯಸೈಃ|

07106021c ದ್ವೈರಥೇ ದಂಶಿತಂ ಯತ್ತಂ ಸರ್ವಶಸ್ತ್ರಭೃತಾಂ ವರಂ||

ದ್ವೈರಥಯುದ್ಧಕ್ಕೆ ಪ್ರಯತ್ನಿಸುತ್ತಿದ್ದ ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ ಕವಚಧಾರಿ ಕರ್ಣನನ್ನು ಭೀಮಸೇನನು ನೇರವಾಗಿ ಹೋಗುವ ಬಾಣಗಳ ಮಳೆಗರೆದು ಮುಚ್ಚಿಬಿಟ್ಟನು.

07106022a ವಿಧಿತ್ಸುಃ ಕಲಹಸ್ಯಾಂತಂ ಜಿಘಾಂಸುಃ ಕರ್ಣಮಕ್ಷಿಣೋತ್|

07106022c ತಂ ಚ ಹತ್ವೇತರಾನ್ಸರ್ವಾನ್ ಹಂತುಕಾಮೋ ಮಹಾಬಲಃ||

ಶೀಘ್ರವಾಗಿ ಕಲಹವನ್ನು ಕಡೆಗಾಣಿಸಲು ಮತ್ತು ಕರ್ಣ ಹಾಗೂ ಅವನ ಇತರ ಅನುಯಾಯಿಗಳೆಲ್ಲರನ್ನೂ ಸಂಹರಿಸಿಬಿಡಲು ಮಹಾಬಲ ಭೀಮಸೇನನು ಯೋಚಿಸಿದನು.

07106023a ತಸ್ಮೈ ಪ್ರಾಸೃಜದುಗ್ರಾಣಿ ವಿವಿಧಾನಿ ಪರಂತಪಃ|

07106023c ಅಮರ್ಷೀ ಪಾಂಡವಃ ಕ್ರುದ್ಧಃ ಶರವರ್ಷಾಣಿ ಮಾರಿಷ||

ಅಸಹನೆಯಿಂದ ಪರಮ ಕ್ರುದ್ಧನಾದ ಪರಂತಪ ಪಾಂಡವನು ಕರ್ಣನ ಮೇಲೆ ವಿವಿಧ ಉಗ್ರ ಬಾಣಗಳ ಮಳೆಯನ್ನೇ ಸುರಿಸಿದನು.

07106024a ತಸ್ಯ ತಾನೀಷುವರ್ಷಾಣಿ ಮತ್ತದ್ವಿರದಗಾಮಿನಃ|

07106024c ಸೂತಪುತ್ರೋಽಸ್ತ್ರಮಾಯಾಭಿರಗ್ರಸತ್ಸುಮಹಾಯಶಾಃ||

ಸುಮಹಾಯಶಸ್ವಿ ಸೂತಪುತ್ರನು ಮತ್ತಗಜದ ನಡುಗೆಯುಳ್ಳ ಭೀಮಸೇನನ ಆ ಬಾಣಗಳ ಮಳೆಯನ್ನೂ ಅಸ್ತ್ರಮಾಯೆಗಳನ್ನೂ ನಿರಸನಗೊಳಿಸಿಬಿಟ್ಟನು.

07106025a ಸ ಯಥಾವನ್ಮಹಾರಾಜ ವಿದ್ಯಯಾ ವೈ ಸುಪೂಜಿತಃ|

07106025c ಆಚಾರ್ಯವನ್ಮಹೇಷ್ವಾಸಃ ಕರ್ಣಃ ಪರ್ಯಚರದ್ರಣೇ||

ಮಹಾರಾಜ! ವಿದ್ಯೆಯಲ್ಲಿ ಆಚಾರ್ಯನಷ್ಟೇ ಗೌರವಾನ್ವಿತನಾದ ಮಹೇಷ್ವಾಸ ಕರ್ಣನು ರಣದಲ್ಲಿ ಸಂಚರಿಸುತ್ತಿದ್ದನು.

07106026a ಸಂರಂಭೇಣ ತು ಯುಧ್ಯಂತಂ ಭೀಮಸೇನಂ ಸ್ಮಯನ್ನಿವ|

07106026c ಅಭ್ಯಪದ್ಯತ ರಾಧೇಯಸ್ತಮಮರ್ಷೀ ವೃಕೋದರಂ||

ಕ್ರೋಧದಿಂದ ಯುದ್ಧಮಾಡುತ್ತಿದ್ದ ಅಸಹನಶೀಲ ವೃಕೋದರ ಭೀಮಸೇನನನ್ನು ರಾಧೇಯನು ನಗುತ್ತಲೇ ಎದುರಿಸಿದನು.

07106027a ತನ್ನಾಮೃಷ್ಯತ ಕೌಂತೇಯಃ ಕರ್ಣಸ್ಯ ಸ್ಮಿತಮಾಹವೇ|

07106027c ಯುಧ್ಯಮಾನೇಷು ವೀರೇಷು ಪಶ್ಯತ್ಸು ಚ ಸಮಂತತಃ||

ಸುತ್ತಲೂ ವೀರರೆಲ್ಲರೂ ಯುದ್ಧವನ್ನು ನೋಡುತ್ತಿರುವಾಗ ರಣದಲ್ಲಿ ಕರ್ಣನು ನಗುತ್ತಿರುವುದನ್ನು ಕೌಂತೇಯ ಭೀಮಸೇನನು ಸಹಿಸಿಕೊಳ್ಳಲಿಲ್ಲ.

07106028a ತಂ ಭೀಮಸೇನಃ ಸಂಪ್ರಾಪ್ತಂ ವತ್ಸದಂತೈಃ ಸ್ತನಾಂತರೇ|

07106028c ವಿವ್ಯಾಧ ಬಲವಾನ್ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ||

ಮಾವುತನು ಮಹಾ ಗಜವನ್ನು ಅಂಕುಶದಿಂದ ತಿವಿಯುವಂತೆ ಬಲವಾನ್ ಭೀಮಸೇನನು ಕ್ರುದ್ಧನಾಗಿ ಕರ್ಣನ ಎದೆಗೆ ಕರುವಿನ ದಂತಗಳಿಂದ ತಯಾರಿಸಿದ ಬಾಣಗಳಿಂದ ಹೊಡೆದನು.

07106029a ಸೂತಂ ತು ಸೂತಪುತ್ರಸ್ಯ ಸುಪುಂಖೈರ್ನಿಶಿತೈಃ ಶರೈಃ|

07106029c ಸುಮುಕ್ತೈಶ್ಚಿತ್ರವರ್ಮಾಣಂ ನಿರ್ಬಿಭೇದ ತ್ರಿಸಪ್ತಭಿಃ||

ಬಣ್ಣದ ಕವಚವನ್ನು ಧರಿಸಿದ್ದ ಸೂತಪುತ್ರನ ಸಾರಥಿಯನ್ನಾದರೂ ಚೆನ್ನಾಗಿ ಪ್ರಯೋಗಿಸಿದ, ಸುಂದರ ಪುಂಖಗಳುಳ್ಳ ಎಪ್ಪತ್ಮೂರು ನಿಶಿತ ಶರಗಳಿಂದ ಭೇದಿಸಿದನು.

07106030a ಕರ್ಣೋ ಜಾಂಬೂನದೈರ್ಜಾಲೈಃ ಸಂಚನ್ನಾನ್ವಾತರಂಹಸಃ|

07106030c ವಿವ್ಯಾಧ ತುರಗಾನ್ವೀರಃ ಪಂಚಭಿಃ ಪಂಚಭಿಃ ಶರೈಃ||

ಅನಂತರ ಗಾಳಿಯ ವೇಗದಲ್ಲಿ ಹೋಗುವ ಬಂಗಾರದ ಬಾಣಗಳ ಜಾಲದಿಂದ ಕರ್ಣನನ್ನೂ, ಐದೈದು ಬಾಣಗಳಿಂದ ಅವನ ಕುದುರೆಗಳನ್ನೂ ವೀರ ಭೀಮನು ಹೊಡೆದನು.

07106031a ತತೋ ಬಾಣಮಯಂ ಜಾಲಂ ಭೀಮಸೇನರಥಂ ಪ್ರತಿ|

07106031c ಕರ್ಣೇನ ವಿಹಿತಂ ರಾಜನ್ನಿಮೇಷಾರ್ಧಾದದೃಶ್ಯತ||

ರಾಜನ್! ಆಗ ನಿಮಿಷಾರ್ಧದಲ್ಲಿ ಭೀಮಸೇನನ ರಥದ ಬಳಿ ಕರ್ಣನು ಪ್ರಯೋಗಿಸಿದ ಬಾಣಮಯ ಜಾಲವು ಕಂಡಿತು.

07106032a ಸರಥಃ ಸಧ್ವಜಸ್ತತ್ರ ಸಸೂತಃ ಪಾಂಡವಸ್ತದಾ|

07106032c ಪ್ರಾಚ್ಚಾದ್ಯತ ಮಹಾರಾಜ ಕರ್ಣಚಾಪಚ್ಯುತೈಃ ಶರೈಃ||

ಮಹಾರಾಜ! ಕರ್ಣನ ಧನುಸ್ಸಿನಿಂದ ಹೊರಟ ಬಾಣಗಳಿಂದ ಪಾಂಡವನು ರಥ-ಧ್ವಜ-ಸೂತನೊಂದಿಗೆ ಮುಚ್ಚಿ ಹೋದನು.

07106033a ತಸ್ಯ ಕರ್ಣಶ್ಚತುಃಷಷ್ಟ್ಯಾ ವ್ಯಧಮತ್ಕವಚಂ ದೃಢಂ|

07106033c ಕ್ರುದ್ಧಶ್ಚಾಪ್ಯಹನತ್ಪಾರ್ಶ್ವೇ ನಾರಾಚೈರ್ಮರ್ಮಭೇದಿಭಿಃ||

ಕರ್ಣನು ಕ್ರುದ್ಧನಾಗಿ ಅರವತ್ನಾಲ್ಕರಿಂದ ಭೀಮನ ದೃಢ ಕವಚವನ್ನು ಹೊಡೆದನು. ಹಾಗೆಯೇ ಮರ್ಮಭೇದೀ ನಾರಾಚಗಳಿಂದ ಅವನನ್ನೂ ಹೊಡೆದನು.

07106034a ತತೋಽಚಿಂತ್ಯ ಮಹಾವೇಗಾನ್ಕರ್ಣಕಾರ್ಮುಕನಿಃಸೃತಾನ್|

07106034c ಸಮಾಶ್ಲಿಷ್ಯದಸಂಭ್ರಾಂತಃ ಸೂತಪುತ್ರಂ ವೃಕೋದರಃ||

ಆದರೆ ಕರ್ಣನ ಬಿಲ್ಲಿನಿಂದ ಹೊರಟು ಮಹಾವೇಗದ ಬಾಣಗಳ ಕುರಿತು ಯೋಚಿಸಿ ಸ್ವಲ್ಪವೂ ಗಾಬರಿಗೊಳ್ಳದೇ ವೃಕೋದರನು ಸೂತಪುತ್ರನನ್ನು ಆಕ್ರಮಣಿಸಿದನು.

07106035a ಸ ಕರ್ಣಚಾಪಪ್ರಭವಾನಿಷೂನಾಶೀವಿಷೋಪಮಾನ್|

07106035c ಬಿಭ್ರದ್ಭೀಮೋ ಮಹಾರಾಜ ನ ಜಗಾಮ ವ್ಯಥಾಂ ರಣೇ||

ಮಹಾರಾಜ! ರಣದಲ್ಲಿ ಕರ್ಣನ ಚಾಪದಿಂದ ಹೊರಟ ಹಾವಿನ ವಿಷಗಳಂತಿದ್ದ ಬಾಣಗಳಿಂದ ಭೀಮನು ಭಯಪಡಲಿಲ್ಲ ಮತ್ತು ವ್ಯಥೆಗೊಳ್ಳಲಿಲ್ಲ.

07106036a ತತೋ ದ್ವಾತ್ರಿಂಶತಾ ಭಲ್ಲೈರ್ನಿಶಿತೈಸ್ತಿಗ್ಮತೇಜನೈಃ|

07106036c ವಿವ್ಯಾಧ ಸಮರೇ ಕರ್ಣಂ ಭೀಮಸೇನಃ ಪ್ರತಾಪವಾನ್||

ಆಗ ಸಮರದಲ್ಲಿ ಪ್ರತಾಪವಾನ್ ಭೀಮಸೇನನು ತಿಗ್ಮ ತೇಜಸ್ಸುಳ್ಳ ನಿಶಿತ ಮೂವತ್ತೆರಡು ಭಲ್ಲಗಳಿಂದ ಕರ್ಣನನ್ನು ಹೊಡೆದನು.

07106037a ಅಯತ್ನೇನೈವ ತಂ ಕರ್ಣಃ ಶರೈರುಪ ಸಮಾಕಿರತ್|

07106037c ಭೀಮಸೇನಂ ಮಹಾಬಾಹುಂ ಸೈಂಧವಸ್ಯ ವಧೈಷಿಣಂ||

ಅದಕ್ಕೆ ಪ್ರತಿಯಾಗಿ ಕರ್ಣನು ಹೆಚ್ಚೇನೂ ಪ್ರಯತ್ನಪಡದೇ ಸೈಂಧವನ ವಧೈಷಿಣಿ ಮಹಾಬಾಹು ಭೀಮಸೇನನನ್ನು ಶರಗಳಿಂದ ಮುಚ್ಚಿಬಿಟ್ಟನು.

07106038a ಮೃದುಪೂರ್ವಂ ಚ ರಾಧೇಯೋ ಭೀಮಮಾಜಾವಯೋಧಯತ್|

07106038c ಕ್ರೋಧಪೂರ್ವಂ ತಥಾ ಭೀಮಃ ಪೂರ್ವವೈರಮನುಸ್ಮರನ್||

ರಾಧೇಯನು ಭೀಮನೊಂದಿಗೆ ಮೃದುವಾಗಿ ಹೋರಾಡುತ್ತಿದ್ದನು. ಆದರೆ ಹಿಂದಿನ ವೈರವನ್ನು ಸ್ಮರಿಸಿಕೊಳ್ಳುತ್ತಾ ಭೀಮನು ಕ್ರೋಧದಿಂದ ಹೋರಾಡುತ್ತಿದ್ದನು.

07106039a ತಂ ಭೀಮಸೇನೋ ನಾಮೃಷ್ಯದವಮಾನಮಮರ್ಷಣಃ|

07106039c ಸ ತಸ್ಮೈ ವ್ಯಸೃಜತ್ತೂರ್ಣಂ ಶರವರ್ಷಮಮಿತ್ರಜಿತ್||

ಭೀಮಸೇನನು ಅವನ ಆ ಅಪಮಾನವನ್ನು[2] ಸ್ವಲ್ಪವೂ ಸಹಿಸಿಕೊಳ್ಳಲಿಲ್ಲ. ಆ ಅಮಿತ್ರಜಿತುವು ಕರ್ಣನ ಮೇಲೆ ಬೇಗನೇ ಶರವರ್ಷವನ್ನು ಸುರಿಸಿದನು.

07106040a ತೇ ಶರಾಃ ಪ್ರೇಷಿತಾ ರಾಜನ್ಭೀಮಸೇನೇನ ಸಂಯುಗೇ|

07106040c ನಿಪೇತುಃ ಸರ್ವತೋ ಭೀಮಾಃ ಕೂಜಂತ ಇವ ಪಕ್ಷಿಣಃ||

ರಾಜನ್! ರಣದಲ್ಲಿ ಭೀಮಸೇನನಿಂದ ಕಳುಹಿಸಲ್ಪಟ್ಟ ಆ ಬಾಣಗಳು ಕರ್ಣನ ಮೇಲೆ ಎಲ್ಲ ಕಡೆ ಕೂಗುತ್ತಿರುವ ಪಕ್ಷಿಗಳಂತೆ ಬಿದ್ದವು.

07106041a ಹೇಮಪುಂಖಾ ಮಹಾರಾಜ ಭೀಮಸೇನಧನುಶ್ಚ್ಯುತಾಃ|

07106041c ಅಭ್ಯದ್ರವಂಸ್ತೇ ರಾಧೇಯಂ ವೃಕಾಃ ಕ್ಷುದ್ರಮೃಗಂ ಯಥಾ||

ಮಹಾರಾಜ! ಭೀಮಸೇನನ ಧನುಸ್ಸಿನಿಂದ ಹೊರಟ ಆ ಹೇಮಪುಂಖದ ಬಾಣಗಳು ತೋಳಗಳು ಕ್ಷುದ್ರ ಮೃಗವನ್ನು ಹೇಗೋ ಹಾಗೆ ಆಕ್ರಮಣಿಸಿದವು.

07106042a ಕರ್ಣಸ್ತು ರಥಿನಾಂ ಶ್ರೇಷ್ಠಶ್ಚಾದ್ಯಮಾನಃ ಸಮಂತತಃ|

07106042c ರಾಜನ್ವ್ಯಸೃಜದುಗ್ರಾಣಿ ಶರವರ್ಷಾಣಿ ಸಂಯುಗೇ||

ರಾಜನ್! ಸಂಯುಗದಲ್ಲಿ ಎಲ್ಲ ಕಡೆಯಿಂದ ಮುತ್ತಲ್ಪಟ್ಟ ರಥಿಗಳಲ್ಲಿ ಶ್ರೇಷ್ಠ ಕರ್ಣನಾದರೋ ಭೀಮನ ಮೇಲೆ ಉಗ್ರ ಶರವರ್ಷಗಳನ್ನು ಸುರಿಸಿದನು.

07106043a ತಸ್ಯ ತಾನಶನಿಪ್ರಖ್ಯಾನಿಷೂನ್ಸಮರಶೋಭಿನಃ|

07106043c ಚಿಚ್ಚೇದ ಬಹುಭಿರ್ಭಲ್ಲೈರಸಂಪ್ರಾಪ್ತಾನ್ವೃಕೋದರಃ||

ಆವನ ಆ ವಜ್ರಗಳಂತಿರುವ ಬಾಣಗಳನ್ನು ಅವು ತನಗೆ ತಾಗುವುದರೊಳಗೇ ಅನೇಕ ಭಲ್ಲಗಳಿಂದ ಸಮರಶೋಭಿ ವೃಕೋದರನು ಕತ್ತರಿಸಿಬಿಟ್ಟನು.

07106044a ಪುನಶ್ಚ ಶರವರ್ಷೇಣ ಚಾದಯಾಮಾಸ ಭಾರತ|

07106044c ಕರ್ಣೋ ವೈಕರ್ತನೋ ಯುದ್ಧೇ ಭೀಮಸೇನಂ ಮಹಾರಥಂ||

ಭಾರತ! ಯುದ್ಧದಲ್ಲಿ ಪುನಃ ಕರ್ಣ ವೈಕರ್ತನನು ಮಹಾರಥ ಭೀಮಸೇನನನ್ನು ಶರವರ್ಷಗಳಿಂದ ಮುಚ್ಚಿ ಬಿಟ್ಟನು.

07106045a ತತ್ರ ಭಾರತ ಭೀಮಂ ತು ದೃಷ್ಟವಂತಃ ಸ್ಮ ಸಾಯಕೈಃ|

07106045c ಸಮಾಚಿತತನುಂ ಸಂಖ್ಯೇ ಶ್ವಾವಿಧಂ ಶಲಲೈರಿವ||

ಭಾರತ! ಅಲ್ಲಿ ನಾವು ಮುಳ್ಳುಗಳು ನಿಗುರಿನಿಂತ ಮುಳ್ಳು ಹಂದಿಯಂತೆ ಸಾಯಕಗಳಿಂದ ಚುಚ್ಚಲ್ಪಟ್ಟ ಭೀಮನನ್ನು ನೋಡಿದೆವು.

07106046a ಹೇಮಪುಂಖಾನ್ಶಿಲಾಧೌತಾನ್ಕರ್ಣಚಾಪಚ್ಯುತಾಂ ಶರಾನ್|

07106046c ದಧಾರ ಸಮರೇ ವೀರಃ ಸ್ವರಶ್ಮೀನಿವ ಭಾಸ್ಕರಃ||

ಕರ್ಣನ ಚಾಪದಿಂದ ಹೊರಟ ಹೇಮಪುಂಖಗಳ ಶಿಲಾಧೌತ ಶರಗಳನ್ನು ಸಮರದಲ್ಲಿ ವೀರ ಭೀಮನು ಭಾಸ್ಕರನು ತನ್ನ ಕಿರಣಗಳನ್ನು ಹೇಗೋ ಹಾಗೆ ಸಹಿಸಿಕೊಂಡನು.

07106047a ರುಧಿರೋಕ್ಷಿತಸರ್ವಾಂಗೋ ಭೀಮಸೇನೋ ವ್ಯರೋಚತ|

07106047c ತಪನೀಯನಿಭೈಃ ಪುಷ್ಪೈಃ ಪಲಾಶ ಇವ ಕಾನನೇ||

ರಕ್ತದಲ್ಲಿ ಸರ್ವಾಂಗಗಳೂ ತೋಯ್ದುಹೋಗಿರಲು ಭೀಮಸೇನನು ಕಾನನದಲ್ಲಿ ಕೆಂಪುಹೂಗಳು ಬಿಟ್ಟಿರುವ ಪಲಾಶ ವೃಕ್ಷದಂತೆ ರಾರಾಜಿಸಿದನು.

07106048a ತತ್ತು ಭೀಮೋ ಮಹಾರಾಜ ಕರ್ಣಸ್ಯ ಚರಿತಂ ರಣೇ|

07106048c ನಾಮೃಷ್ಯತ ಮಹೇಷ್ವಾಸಃ ಕ್ರೋಧಾದುದ್ವೃತ್ಯ ಚಕ್ಷುಷೀ||

ಮಹಾರಾಜ! ಆದರೆ ರಣದಲ್ಲಿ ಕರ್ಣನ ನಡತೆಯನ್ನು ಮಹೇಷ್ವಾಸ ಭೀಮನು ಸ್ವಲ್ಪವೂ ಸಹಿಸಿಕೊಳ್ಳಲಿಲ್ಲ. ಕ್ರೋಧದಿಂದ ಕಣ್ಣುಗಳನ್ನು ತಿರುಗಿಸಿದನು.

07106049a ಸ ಕರ್ಣಂ ಪಂಚವಿಂಶತ್ಯಾ ನಾರಾಚಾನಾಂ ಸಮಾರ್ಪಯತ್|

07106049c ಮಹೀಧರಮಿವ ಶ್ವೇತಂ ಗೂಢಪಾದೈ[3]ರ್ವಿಷೋಲ್ಬಣೈಃ||

ಅವನು ಕರ್ಣನನ್ನು ಇಪ್ಪತ್ತೈದು ನಾರಾಚಗಳಿಂದ ಹೊಡೆದನು. ಆಗ ಅವನು ವಿಷಯುಕ್ತ ಸರ್ಪಗಳಿಂದ ಕೂಡಿದ ಶ್ವೇತಪರ್ವತದಂತೆ ಶೋಭಿಸಿದನು.

07106050a ತಂ ವಿವ್ಯಾಧ ಪುನರ್ಭೀಮಃ ಷಡ್ಭಿರಷ್ಟಾಭಿರೇವ ಚ|

07106050c ಮರ್ಮಸ್ವಮರವಿಕ್ರಾಂತಃ ಸೂತಪುತ್ರಂ ಮಹಾರಣೇ||

ಅಮರವಿಕ್ರಾಂತ[4] ಭೀಮನು ಮಹಾರಣದಲ್ಲಿ ಸೂತಪುತ್ರನ ಮರ್ಮಗಳಿಗೆ ಹದಿನಾಲ್ಕು ಬಾಣಗಳಿಂದ ಹೊಡೆದನು.

07106051a ತತಃ ಕರ್ಣಸ್ಯ ಸಂಕ್ರುದ್ಧೋ ಭೀಮಸೇನಃ ಪ್ರತಾಪವಾನ್|

07106051c ಚಿಚ್ಚೇದ ಕಾರ್ಮುಕಂ ತೂರ್ಣಂ ಸರ್ವೋಪಕರಣಾನಿ ಚ||

ಆಗ ತಕ್ಷಣವೇ ಸಂಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಕರ್ಣನ ಧನುಸ್ಸನ್ನೂ ಸರ್ವೋಪಕರಣಗಳನ್ನೂ ತುಂಡರಿಸಿದನು.

07106052a ಜಘಾನ ಚತುರಶ್ಚಾಶ್ವಾನ್ಸೂತಂ ಚ ತ್ವರಿತಃ ಶರೈಃ|

07106052c ನಾರಾಚೈರರ್ಕರಶ್ಮ್ಯಾಭೈಃ ಕರ್ಣಂ ವಿವ್ಯಾಧ ಚೋರಸಿ||

ಅನಂತರ ತ್ವರೆಮಾಡಿ ಶರಗಳಿಂದ ಅವನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿದನು. ಸೂರ್ಯನ ರಶ್ಮಿಗಳಂತೆ ಪ್ರಕಾಶಿಸುವ ನಾರಾಚಗಳಿಂದ ಕರ್ಣನ ಎದೆಗೂ ಹೊಡೆದನು.

07106053a ತೇ ಜಗ್ಮುರ್ಧರಣೀಂ ಸರ್ವೇ ಕರ್ಣಂ ನಿರ್ಭಿದ್ಯ ಮಾರಿಷ|

07106053c ಯಥಾ ಹಿ ಜಲದಂ ಭಿತ್ತ್ವಾ ರಾಜನ್ಸೂರ್ಯಸ್ಯ ರಶ್ಮಯಃ||

ಮಾರಿಷ! ರಾಜನ್! ಸೂರ್ಯನ ರಶ್ಮಿಗಳು ಮೋಡವನ್ನು ಭೇದಿಸುವಂತೆ ಆ ಶರಗಳು ಎಲ್ಲವೂ ಕರ್ಣನನ್ನು ಭೇದಿಸಿ ನೆಲವನ್ನು ಹೊಕ್ಕವು.

07106054a ಸ ವೈಕಲ್ಯಂ ಮಹತ್ಪ್ರಾಪ್ಯ ಚಿನ್ನಧನ್ವಾ ಶರಾರ್ದಿತಃ|

07106054c ತಥಾ ಪುರುಷಮಾನೀ ಸ ಪ್ರತ್ಯಪಾಯಾದ್ರಥಾಂತರಂ||

ಧನುಸ್ಸು ತುಂಡಾಗಿ, ಶರಗಳಿಂದ ನೋವುತಿಂದು ಅತೀವ ಕಷ್ಟಕ್ಕೊಳಗಾದ ಆ ಪುರುಷಮಾನೀ ಕರ್ಣನು ಮತ್ತೊಂದು ರಥವನ್ನೇರಿ ಅಲ್ಲಿಂದ ಹೊರಟುಹೋದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಕರ್ಣಪರಾಜಯೇ ಷಡಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಕರ್ಣಪರಾಜಯ ಎನ್ನುವ ನೂರಾಆರನೇ ಅಧ್ಯಾಯವು.

Image result for lotus against white background

[1] ನೀಲಕಂಠೀಯದಲ್ಲಿ ಈ ಶ್ಲೋಕದ ಮೊದಲು ಕರ್ಣನು ಮೂದಲಿಸಿ ಭೀಮನನ್ನು ಯುದ್ಧಕ್ಕೆ ಆಹ್ವಾನಿಸಿದಿದೆ.

[2] ಕರ್ಣನು ತನ್ನೊಡನೆ ಮೃದುತ್ವದಿಂದ ಯುದ್ಧಮಾಡಿ ತನಗೆ ಉದ್ದೇಶಪೂರ್ವಕವಾಗಿ ಅಪಮಾನಮಾಡುತ್ತಿದ್ದಾನೆಂದು ಭಾವಿಸಿದನು.

[3] ಕಣ್ಣಿಗೆ ಕಾಣಿಸದ ನಿಗೂಢ ಕಾಲಿರುವವು - ಸರ್ಪಗಳು

[4] ದೇವತೆಗಳ ಪರಾಕ್ರಮಕ್ಕೆ ಸಮಾನ ಪರಾಕ್ರಮಿಯಾದ

Comments are closed.