Drona Parva: Chapter 105

ದ್ರೋಣ ಪರ್ವ: ಜಯದ್ರಥವಧ ಪರ್ವ

೧೦೫

ದುರ್ಯೋಧನ-ದ್ರೋಣರ ಸಂವಾದ (೧-೨೧). ಯುಧಾಮನ್ಯು-ಉತ್ತಮೌಜರೊಂದಿಗೆ ದುರ್ಯೋಧನನ ಯುದ್ಧ, ಪರಾಜಯ (೨೨-೩೬).

07105001 ಸಂಜಯ ಉವಾಚ|

07105001a ತಸ್ಮಿನ್ವಿಲುಲಿತೇ ಸೈನ್ಯೇ ಸೈಂಧವಾಯಾರ್ಜುನೇ ಗತೇ|

07105001c ಸಾತ್ವತೇ ಭೀಮಸೇನೇ ಚ ಪುತ್ರಸ್ತೇ ದ್ರೋಣಮಭ್ಯಯಾತ್||

ಸಂಜಯನು ಹೇಳಿದನು: “ಆ ಸೇನೆಯು ಚದುರಿಹೋಗಲು, ಸೈಂಧವನಿಗಾಗಿ ಅರ್ಜುನ, ಸಾತ್ವತ ಸಾತ್ಯಕಿ ಮತ್ತು ಭೀಮಸೇನರು ಹೊರಟು ಹೋಗಲು ನಿನ್ನ ಮಗನು ದ್ರೋಣನ ಬಳಿಸಾರಿದನು.

07105001e ತ್ವರನ್ನೇಕರಥೇನೈವ ಬಹುಕೃತ್ಯಂ ವಿಚಿಂತಯನ್|

07105002a ಸ ರಥಸ್ತವ ಪುತ್ರಸ್ಯ ತ್ವರಯಾ ಪರಯಾ ಯುತಃ||

ಆಗ ನಿನ್ನ ಮಗನು ಒಬ್ಬನೇ ರಥದಲ್ಲಿ ಕುಳಿತುಕೊಂಡು ಅನೇಕ ಕೆಲಸಗಳ ಕುರಿತು ಚಿಂತಿಸುತ್ತಾ ಅತ್ಯಂತ ವೇಗದಿಂದ ಹೊರಟನು.

07105002c ತೂರ್ಣಮಭ್ಯಪತದ್ದ್ರೋಣಂ ಮನೋಮಾರುತವೇಗವಾನ್|

07105003a ಉವಾಚ ಚೈನಂ ಪುತ್ರಸ್ತೇ ಸಂರಂಭಾದ್ರಕ್ತಲೋಚನಃ||

ಮನಸ್ಸು-ಮಾರುತಗಳ ವೇಗದಿಂದ ಬೇಗನೆ ದ್ರೋಣನನ್ನು ಸಮೀಪಿಸಿದ ನಿನ್ನ ಮಗನು ಕ್ರೋಧದಿಂದ ರಕ್ತಲೋಚನನಾಗಿ ಹೀಗೆ ಹೇಳಿದನು:

07105003c ಅರ್ಜುನೋ ಭೀಮಸೇನಶ್ಚ ಸಾತ್ಯಕಿಶ್ಚಾಪರಾಜಿತಃ|

07105004a ವಿಜಿತ್ಯ ಸರ್ವಸೈನ್ಯಾನಿ ಸುಮಹಾಂತಿ ಮಹಾರಥಾಃ||

07105004c ಸಂಪ್ರಾಪ್ತಾಃ ಸಿಂಧುರಾಜಸ್ಯ ಸಮೀಪಮರಿಕರ್ಶನಾಃ|

07105004e ವ್ಯಾಯಚ್ಚಂತಿ ಚ ತತ್ರಾಪಿ ಸರ್ವ ಏವಾಪರಾಜಿತಾಃ||

“ಅರಿಕರ್ಶನರಾದ ಅರ್ಜುನ, ಭೀಮಸೇನ ಮತ್ತು ಅಪರಾಜಿತ ಸಾತ್ಯಕಿಯರು ಎಲ್ಲ ಮಹಾ ಸೇನೆಗಳನ್ನೂ, ಮಹಾರಥರನ್ನೂ ಸೋಲಿಸಿ ಸಿಂಧುರಾಜನ ಸಮೀಪಕ್ಕೆ ಹೋಗಿಯಾಯಿತು! ಅಲ್ಲಿಯೂ ಕೂಡ ಈ ಅಪರಾಜಿತರು ಎಲ್ಲರೂ ನಮ್ಮ ಮೇಲೆ ಆಕ್ರಮಣ ನಡೆಸಿದ್ದಾರೆ.

07105005a ಯದಿ ತಾವದ್ರಣೇ ಪಾರ್ಥೋ ವ್ಯತಿಕ್ರಾಂತೋ ಮಹಾರಥಃ|

07105005c ಕಥಂ ಸಾತ್ಯಕಿಭೀಮಾಭ್ಯಾಂ ವ್ಯತಿಕ್ರಾಂತೋಽಸಿ ಮಾನದ||

ಮಾನದ! ಮಹಾರಥ ಪಾರ್ಥನಾದರೋ ರಣದಲ್ಲಿ ತಮ್ಮನ್ನು ಅತಿಕ್ರಮಿಸಿ ಹೋರಟು ಹೋಗಿರಬಹುದು. ಆದರೆ ಸಾತ್ಯಕಿ-ಭೀಮಸೇನರು ನಿಮ್ಮನ್ನು ಹೇಗೆ ಅತಿಕ್ರಮಿಸಿ ಹೋದರು?

07105006a ಆಶ್ಚರ್ಯಭೂತಂ ಲೋಕೇಽಸ್ಮಿನ್ಸಮುದ್ರಸ್ಯೇವ ಶೋಷಣಂ|

07105006c ನಿರ್ಜಯಂ ತವ ವಿಪ್ರಾಗ್ರ್ಯ ಸಾತ್ವತೇನಾರ್ಜುನೇನ ಚ||

07105007a ತಥೈವ ಭೀಮಸೇನೇನ ಲೋಕಃ ಸಂವದತೇ ಭೃಶಂ|

07105007c ಕಥಂ ದ್ರೋಣೋ ಜಿತಃ ಸಂಖ್ಯೇ ಧನುರ್ವೇದಸ್ಯ ಪಾರಗಃ||

ವಿಪ್ರಾಗ್ರ್ಯ! ಸಾತ್ವತನಿಂದ ಮತ್ತು ಅರ್ಜುನನಿಂದ ಹಾಗೆಯೇ ಭೀಮಸೇನನಿಂದ ನೀವು ಸೋತಿರೆಂದರೆ ಈ ಲೋಕದಲ್ಲಿ ಸಮುದ್ರವು ಒಣಗಿಹೋದಷ್ಟೇ ಆಶ್ಚರ್ಯಕರ ವಿಷಯವಾಗಿದೆ. ಲೋಕದಲ್ಲಿ ಜನರು ಜೋರಾಗಿ ಕೇಳುತ್ತಿದ್ದಾರೆ - ಧನುರ್ವೇದದಲ್ಲಿ ಪಾರಂಗತ ದ್ರೋಣನು ಯುದ್ಧದಲ್ಲಿ ಹೇಗೆ ಸೋತ? ಎಂದು.

07105008a ನಾಶ ಏವ ತು ಮೇ ನೂನಂ ಮಂದಭಾಗ್ಯಸ್ಯ ಸಂಯುಗೇ|

07105008c ಯತ್ರ ತ್ವಾಂ ಪುರುಷವ್ಯಾಘ್ರಮತಿಕ್ರಾಂತಾಸ್ತ್ರಯೋ ರಥಾಃ||

ಆ ಮೂವರು ಪುರುಷವ್ಯಾಘ್ರ ರಥರು ನಿಮ್ಮನ್ನು ಅತಿಕ್ರಮಿಸಿ ಹೋದರೆಂದರೆ ಸಂಯುಗದಲ್ಲಿ ಈ ಮಂದಭಾಗ್ಯನ ನಾಶವಾಯಿತೆಂದೇ ಅಲ್ಲವೇ?

07105009a ಏವಂ ಗತೇ ತು ಕೃತ್ಯೇಽಸ್ಮಿನ್ಬ್ರೂಹಿ ಯತ್ತೇ ವಿವಕ್ಷಿತಂ|

07105009c ಯದ್ಗತಂ ಗತಮೇವೇಹ ಶೇಷಂ ಚಿಂತಯ ಮಾನದ||

ಮಾನದ! ಹೀಗೆ ನಡೆದಿರುವಾಗ ಮುಂದೇನು ಮಾಡುವುದಿದೆ ಎನ್ನುವುದನ್ನು ಹೇಳಿ. ಆದದ್ದು ಆಗಿಹೋಯಿತು. ಈಗ ಏನು ಮಾಡಬೇಕು ಎನ್ನುವುದನ್ನು ಯೋಚಿಸಿ.

07105010a ಯತ್ಕೃತ್ಯಂ ಸಿಂಧುರಾಜಸ್ಯ ಪ್ರಾಪ್ತಕಾಲಮನಂತರಂ|

07105010c ತದ್ಬ್ರವೀತು ಭವಾನ್ ಕ್ಷಿಪ್ರಂ ಸಾಧು ತತ್ಸಂವಿಧೀಯತಾಂ||

ಈ ಪರಿಸ್ಥಿತಿಯಲ್ಲಿ ಸಿಂಧುರಾಜನು ಏನು ಮಾಡಬೇಕು ಎನ್ನುವುದನ್ನು ಹೇಳಿ. ಅದನ್ನು ಬೇಗನೆ ವಿಧಿವತ್ತಾಗಿ ಕಾರ್ಯಗತಗೊಳಿಸಲಿ!”

07105011 ದ್ರೋಣ ಉವಾಚ|

07105011a ಚಿಂತ್ಯಂ ಬಹು ಮಹಾರಾಜ ಕೃತ್ಯಂ ಯತ್ತತ್ರ ಮೇ ಶೃಣು|

07105011c ತ್ರಯೋ ಹಿ ಸಮತಿಕ್ರಾಂತಾಃ ಪಾಂಡವಾನಾಂ ಮಹಾರಥಾಃ|

07105011e ಯಾವದೇವ ಭಯಂ ಪಶ್ಚಾತ್ತಾವದೇಷಾಂ ಪುರಃಸರಂ||

ದ್ರೋಣನು ಹೇಳಿದನು: “ಮಹಾರಾಜ! ಏನು ಮಾಡಬೇಕೆಂದು ನಾನು ಬಹಳವಾಗಿ ಯೋಚಿಸಿ ಹೇಳುವುದನ್ನು ಕೇಳು. ಕೇವಲ ಮೂವರು ಪಾಂಡವ ಮಹಾರಥರೇ ನನ್ನನ್ನು ಅತಿಕ್ರಮಿಸಿ ಹೋಗಿದ್ದಾರೆ. ಮುಂದೆ ಹೋಗಿರುವವರ ಕುರಿತು ಭಯಪಡುವಷ್ಟೇ ಹಿಂದೆ ಉಳಿದಿರುವವರ ಕುರಿತು ಭಯಪಡಬೇಕು.

07105012a ತದ್ಗರೀಯಸ್ತರಂ ಮನ್ಯೇ ಯತ್ರ ಕೃಷ್ಣಧನಂಜಯೌ|

07105012c ಸಾ ಪುರಸ್ತಾಚ್ಚ ಪಶ್ಚಾಚ್ಚ ಗೃಹೀತಾ ಭಾರತೀ ಚಮೂಃ||

ಆದರೆ ಎದಿರು ಕೃಷ್ಣ-ಧನಂಜಯರಿರುವಲ್ಲಿ ಇನ್ನೂ ಹೆಚ್ಚಿನ ಜಾಗ್ರತೆಯಿರಬೇಕೆಂದು ಅನಿಸುತ್ತದೆ. ಭಾರತೀ ಸೇನೆಯು ಮುಂದಿನಿಂದ ಮತ್ತು ಹಿಂದಿನಿಂದ ಎರಡೂ ಕಡೆಗಳಿಂದ ಆಕ್ರಮಣಿಸಲ್ಪಟ್ಟಿದೆ.

07105013a ತತ್ರ ಕೃತ್ಯಮಹಂ ಮನ್ಯೇ ಸೈಂಧವಸ್ಯಾಭಿರಕ್ಷಣಂ|

07105013c ಸ ನೋ ರಕ್ಷ್ಯತಮಸ್ತಾತ ಕ್ರುದ್ಧಾದ್ಭೀತೋ ಧನಂಜಯಾತ್||

ಸೈಂಧವನ ರಕ್ಷಣೆಯು ನಮ್ಮ ಮೊದಲ ಕರ್ತವ್ಯವೆಂದು ನಾನು ತಿಳಿಯುತ್ತೇನೆ. ಅಯ್ಯಾ! ಧನಂಜಯನಿಂದ ಭೀತನಾದ ಅವನು ನಮ್ಮ ರಕ್ಷಣೆಗೆ ಅರ್ಹನಾಗಿದ್ದಾನೆ.

07105014a ಗತೌ ಹಿ ಸೈಂಧವಂ ವೀರೌ ಯುಯುಧಾನವೃಕೋದರೌ|

07105014c ಸಂಪ್ರಾಪ್ತಂ ತದಿದಂ ದ್ಯೂತಂ ಯತ್ತಚ್ಚಕುನಿಬುದ್ಧಿಜಂ||

ವೀರರಾದ ಯುಯುಧಾನ-ವೃಕೋದರರಿಬ್ಬರೂ ಸೈಂಧವನಲ್ಲಿಗೆ ತಲುಪಿದ್ದಾರೆ. ಶಕುನಿಯ ಬುದ್ಧಿಯಿಂದ ಹುಟ್ಟಿದ ದ್ಯೂತದಿಂದಲೇ ನಮಗೆ ಈ ಪರಿಸ್ಥಿತಿಯು ಬಂದೊದಗಿದೆ.

07105015a ನ ಸಭಾಯಾಂ ಜಯೋ ವೃತ್ತೋ ನಾಪಿ ತತ್ರ ಪರಾಜಯಃ|

07105015c ಇಹ ನೋ ಗ್ಲಹಮಾನಾನಾಮದ್ಯ ತಾತ ಜಯಾಜಯೌ||

ಸಭೆಯಲ್ಲಿ ಆಟವಾಡಿದಾಗ ಅಲ್ಲಿ ಜಯವೂ ಇರಲಿಲ್ಲ, ಸೋಲೂ ಇರಲಿಲ್ಲ. ಅಯ್ಯಾ! ಆದರೆ ಆಡುತ್ತಿರುವ ಈ ಆಟದಲ್ಲಿ ಜಯ-ಪರಾಜಯಗಳಿವೆ.

07105016a ಯಾನ್ಸ್ಮ ತಾನ್ಗ್ಲಹತೇ ಘೋರಾಂ ಶಕುನಿಃ ಕುರುಸಂಸದಿ|

07105016c ಅಕ್ಷಾನ್ಸಮ್ಮನ್ಯಮಾನಃ ಸ ಪ್ರಾ ಕ್ಶರಾಸ್ತೇ ದುರಾಸದಾಃ||

07105017a ಯತ್ರ ತೇ ಬಹವಸ್ತಾತ ಕುರವಃ ಪರ್ಯವಸ್ಥಿತಾಃ|

ಅಯ್ಯಾ! ಕುರುಸಂಸದಿಯಲ್ಲಿ, ಅನೇಕ ಕುರುಗಳು ಸೇರಿದ್ದಲ್ಲಿ, ದಾಳಗಳೆಂದು ತಿಳಿದು ಆಟವಾಡುತ್ತಿದ್ದುದು ಮುಗ್ಧ ದಾಳಗಳಾಗಿರಲಿಲ್ಲ. ಅವು ಕಣ್ಣಿಗೆ ಕಾಣದೇ ಇರುವ ಘೋರ ದುರಾಸದ ಬಾಣಗಳಾಗಿದ್ದವು.

07105017c ಸೇನಾಂ ದುರೋದರಂ ವಿದ್ಧಿ ಶರಾನಕ್ಷಾನ್ವಿಶಾಂ ಪತೇ||

07105018a ಗ್ಲಹಂ ಚ ಸೈಂಧವಂ ರಾಜನ್ನತ್ರ ದ್ಯೂತಸ್ಯ ನಿಶ್ಚಯಃ|

07105018c ಸೈಂಧವೇ ಹಿ ಮಹಾದ್ಯೂತಂ ಸಮಾಸಕ್ತಂ ಪರೈಃ ಸಹ||

ವಿಶಾಂಪತೇ! ರಾಜನ್! ಈ ಸೇನೆಗಳೇ ಆಟಗಾರರೆಂದೂ, ಶರಗಳೇ ದಾಳಗಳೆಂದೂ, ಸೈಂಧವನೇ ದ್ಯೂತವನ್ನು ನಿಶ್ಚಯಿಸುವ ಪಣವೆಂದೂ ತಿಳಿ. ಸೈಂಧವನೇ ಈಗ ನಾವು ಶತ್ರುಗಳೊಂದಿಗೆ ಹೋರಾಡುತ್ತಿರುವ ಈ ಮಹಾದ್ಯೂತದ ಪಣ.

07105019a ಅತ್ರ ಸರ್ವೇ ಮಹಾರಾಜ ತ್ಯಕ್ತ್ವಾ ಜೀವಿತಮಾತ್ಮನಃ|

07105019c ಸೈಂಧವಸ್ಯ ರಣೇ ರಕ್ಷಾಂ ವಿಧಿವತ್ಕರ್ತುಮರ್ಹಥ|

07105019e ತತ್ರ ನೋ ಗ್ಲಹಮಾನಾನಾಂ ಧ್ರುವೌ ತಾತ ಜಯಾಜಯೌ||

ಮಹಾರಾಜ! ಆದುದರಿಂದ ನಾವೆಲ್ಲರೂ ನಮ್ಮ ಜೀವವನ್ನೇ ಮುಡುಪಾಗಿಟ್ಟು ರಣದಲ್ಲಿ ವಿಧಿವತ್ತಾಗಿ ರಕ್ಷಣೆಯನ್ನು ಮಾಡಬೇಕಾಗಿದೆ. ಅಯ್ಯಾ! ಅಲ್ಲಿ ಆಟವಾಡುವ ನಮ್ಮವರ ಜಯ-ಅಪಜಯಗಳು ನಿರ್ಧರಿಸಲ್ಪಡುತ್ತದೆ.

07105020a ಯತ್ರ ತೇ ಪರಮೇಷ್ವಾಸಾ ಯತ್ತಾ ರಕ್ಷಂತಿ ಸೈಂಧವಂ|

07105020c ತತ್ರ ಯಾಹಿ ಸ್ವಯಂ ಶೀಘ್ರಂ ತಾಂಶ್ಚ ರಕ್ಷಸ್ವ ರಕ್ಷಿಣಃ||

ಎಲ್ಲಿ ಆ ಪರಮೇಷ್ವಾಸರು ಸೈಂಧವನನ್ನು ಪ್ರಯತ್ನಪಟ್ಟು ರಕ್ಷಿಸುತ್ತಿದ್ದಾರೋ ಅಲ್ಲಿಗೆ ಶೀಘ್ರವಾಗಿ ಸ್ವಯಂ ನೀನು ಹೋಗು. ಆ ರಕ್ಷಕರನ್ನು ರಕ್ಷಿಸು!

07105021a ಇಹೈವ ತ್ವಹಮಾಸಿಷ್ಯೇ ಪ್ರೇಷಯಿಷ್ಯಾಮಿ ಚಾಪರಾನ್|

07105021c ನಿರೋತ್ಸ್ಯಾಮಿ ಚ ಪಾಂಚಾಲಾನ್ಸಹಿತಾನ್ಪಾಂಡುಸೃಂಜಯೈಃ||

ನಾನು ನಿನ್ನೊಂದಿಗೆ ಇತರರನ್ನು ಅಲ್ಲಿಗೆ ಕಳುಹಿಸುತ್ತೇನೆ ಮತ್ತು ಇಲ್ಲಿಯೇ ಇದ್ದುಕೊಂಡು ಪಾಂಚಾಲರೊಂದಿಗೆ ಪಾಂಡವ-ಸೃಂಜಯರನ್ನು ತಡೆಯುತ್ತೇನೆ.”

07105022a ತತೋ ದುರ್ಯೋಧನಃ ಪ್ರಾಯಾತ್ತೂರ್ಣಮಾಚಾರ್ಯಶಾಸನಾತ್|

07105022c ಉದ್ಯಮ್ಯಾತ್ಮಾನಮುಗ್ರಾಯ ಕರ್ಮಣೇ ಸಪದಾನುಗಃ||

ಆಗ ದುರ್ಯೋಧನನು ತಕ್ಷಣವೇ ಆಚಾರ್ಯನ ಶಾಸನದಂತೆ, ತನ್ನ ಅನುಯಾಯಿಗಳೊಂದಿಗೆ ಆ ಉಗ್ರ ಕರ್ಮವನ್ನು[1] ಮಾಡಲು ಉತ್ಸಾಹಿತನಾಗಿ ಹೊರಟನು.

07105023a ಚಕ್ರರಕ್ಷೌ ತು ಪಾಂಚಾಲ್ಯೌ ಯುಧಾಮನ್ಯೂತ್ತಮೌಜಸೌ|

07105023c ಬಾಹ್ಯೇನ ಸೇನಾಮಭ್ಯೇತ್ಯ ಜಗ್ಮತುಃ ಸವ್ಯಸಾಚಿನಂ||

ಆ ಸಮಯದಲ್ಲಿ ಚಕ್ರರಕ್ಷಕ ಪಾಂಚಾಲ್ಯ ಯುಧಾಮನ್ಯು-ಉತ್ತಮೌಜಸರು ಸೇನೆಯನ್ನು ಹೊರಗಿನಿಂದ ಭೇದಿಸಿ ಸವ್ಯಸಾಚಿಯ ಬಳಿ ಹೋಗುತ್ತಿದ್ದರು.

07105024a ತೌ ಹಿ ಪೂರ್ವಂ ಮಹಾರಾಜ ವಾರಿತೌ ಕೃತವರ್ಮಣಾ|

07105024c ಪ್ರವಿಷ್ಟೇ ತ್ವರ್ಜುನೇ ರಾಜಂಸ್ತವ ಸೈನ್ಯಂ ಯುಯುತ್ಸಯಾ||

ರಾಜನ್! ಮಹಾರಾಜ! ಇದಕ್ಕೂ ಮೊದಲು ಅರ್ಜುನನು ಯುದ್ಧಮಾಡುತ್ತಾ ನಿನ್ನ ಸೇನೆಯನ್ನು ಪ್ರವೇಶಿಸಿದಾಗ ಕೃತವರ್ಮನು ಇವರಿಬ್ಬರನ್ನೂ ತಡೆದಿದ್ದನು.

07105025a ತಾಭ್ಯಾಂ ದುರ್ಯೋಧನಃ ಸಾರ್ಧಮಗಚ್ಚದ್ಯುದ್ಧಮುತ್ತಮಂ|

07105025c ತ್ವರಿತಸ್ತ್ವರಮಾಣಾಭ್ಯಾಂ ಭ್ರಾತೃಭ್ಯಾಂ ಭಾರತೋ ಬಲೀ||

ಆಗ ಭಾರತ ಬಲಶಾಲೀ ದುರ್ಯೋಧನನು ಉತ್ತಮವಾಗಿ ಯುದ್ಧಮಾಡುತ್ತಾ ತ್ವರೆಮಾಡಿ ಒಟ್ಟಿಗೇ ಮುಂದುವರೆಯುತ್ತಿದ್ದ ಅವರಿಬ್ಬರು ಸಹೋದರರನ್ನು ಎದುರಿಸಿದನು.

07105026a ತಾವಭಿದ್ರವತಾಮೇನಮುಭಾವುದ್ಯತಕಾರ್ಮುಕೌ|

07105026c ಮಹಾರಥಸಮಾಖ್ಯಾತೌ ಕ್ಷತ್ರಿಯಪ್ರವರೌ ಯುಧಿ||

ಮಹಾರಥರೆಂದು ಪ್ರಸಿದ್ಧರಾದ ಅವರಿಬ್ಬರು ಕ್ಷತ್ರಿಯ ಪ್ರವರರೂ ಧನುಸ್ಸನ್ನು ಸೆಳೆದು ದುರ್ಯೋಧನನೊಂದಿಗೆ ಯುದ್ಧಕ್ಕೆ ತೊಡಗಿದರು.

07105027a ಯುಧಾಮನ್ಯುಸ್ತು ಸಂಕ್ರುದ್ಧಃ ಶರಾಂಸ್ತ್ರಿಂಶತಮಾಯಸಾನ್|

07105027c ವ್ಯಸೃಜತ್ತವ ಪುತ್ರಸ್ಯ ತ್ವರಮಾಣಃ ಸ್ತನಾಂತರೇ||

ಯುಧಾಮನ್ಯುವಾದರೋ ಸಂಕ್ರುದ್ಧನಾಗಿ ತ್ವರೆಮಾಡಿ ನಿನ್ನ ಮಗನ ಸ್ತನಾಂತರದಲ್ಲಿ ಮುನ್ನೂರು ಉಕ್ಕಿನ ಶರಗಳನ್ನು ಪ್ರಯೋಗಿಸಿದನು.

07105028a ದುರ್ಯೋಧನೋಽಪಿ ರಾಜೇಂದ್ರ ಪಾಂಚಾಲ್ಯಸ್ಯೋತ್ತಮೌಜಸಃ|

07105028c ಜಘಾನ ಚತುರಶ್ಚಾಶ್ವಾನುಭೌ ಚ ಪಾರ್ಷ್ಣಿಸಾರಥೀ||

ರಾಜೇಂದ್ರ! ದುರ್ಯೋಧನನಾದರೋ ಪಾಂಚಾಲ್ಯ ಉತ್ತಮೌಜಸನ ನಾಲ್ಕು ಕುದುರೆಗಳನ್ನೂ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು.

07105029a ಉತ್ತಮೌಜಾ ಹತಾಶ್ವಸ್ತು ಹತಸೂತಶ್ಚ ಸಂಯುಗೇ|

07105029c ಆರುರೋಹ ರಥಂ ಭ್ರಾತುರ್ಯುಧಾಮನ್ಯೋರಭಿತ್ವರನ್||

ಕುದುರೆಗಳು, ಸೂತರೂ ಹತರಾಗಲು ಉತ್ತಮೌಜಸನು ತ್ವರೆಮಾಡಿ ಸಹೋದರ ಯುಧಾಮನ್ಯುವಿನ ರಥವನ್ನೇರಿದನು.

07105030a ಸ ರಥಂ ಪ್ರಾಪ್ಯ ತಂ ಭ್ರಾತುರ್ದುರ್ಯೋಧನಹಯಾಂ ಶರೈಃ|

07105030c ಬಹುಭಿಸ್ತಾಡಯಾಮಾಸ ತೇ ಹತಾಃ ಪ್ರಾಪತನ್ಭುವಿ||

ಸಹೋದರನ ರಥವನ್ನೇರಿ ಅವನು ದುರ್ಯೋಧನನ ಕುದುರೆಗಳನ್ನು ಅನೇಕ ಶರಗಳಿಂದ ಹೊಡೆಯುತ್ತಿರಲು ಅವು ಹತವಾಗಿ ಭೂಮಿಯ ಮೇಲೆ ಬಿದ್ದವು.

07105031a ಹಯೇಷು ಪತಿತೇಷ್ವಸ್ಯ ಚಿಚ್ಚೇದ ಪರಮೇಷುಣಾ|

07105031c ಯುಧಾಮನ್ಯುರ್ಧನುಃ ಶೀಘ್ರಂ ಶರಾವಾಪಂ ಚ ಸಂಯುಗೇ||

ಕುದುರೆಗಳು ಬೀಳಲು ಯುಧಾಮನ್ಯುವು ಶೀಘ್ರವಾಗಿ ಸಂಯುಗದಲ್ಲಿ ಪರಮ ಧನುಸ್ಸಿನಿಂದ ದುರ್ಯೋಧನನ ಧನುಸ್ಸನ್ನೂ ಶರಾವಾಪವನ್ನೂ ಕತ್ತರಿಸಿದನು.

07105032a ಹತಾಶ್ವಸೂತಾತ್ಸ ರಥಾದವಪ್ಲುತ್ಯ ಮಹಾರಥಃ|

07105032c ಗದಾಮಾದಾಯ ತೇ ಪುತ್ರಃ ಪಾಂಚಾಲ್ಯಾವಭ್ಯಧಾವತ||

ಕುದುರೆ-ಸಾರಥಿಯರು ಸತ್ತುಹೋದ ರಥದಿಂದ ಧುಮುಕಿ ನಿನ್ನ ಮಗ ಮಹಾರಥನು ಗದೆಯನ್ನೆತ್ತಿಕೊಂಡು ಪಾಂಚಾಲ್ಯರ ಕಡೆ ಧಾವಿಸಿದನು.

07105033a ತಮಾಪತಂತಂ ಸಂಪ್ರೇಕ್ಷ್ಯ ಕ್ರುದ್ಧಂ ಪರಪುರಂಜಯಂ|

07105033c ಅವಪ್ಲುತೌ ರಥೋಪಸ್ಥಾದ್ಯುಧಾಮನ್ಯೂತ್ತಮೌಜಸೌ||

ಎರಗಿ ಬೀಳುತ್ತಿರುವ ಆ ಕ್ರುದ್ಧ ಪರಪುರಂಜಯನನ್ನು ನೋಡಿ ಯುಧಾಮನ್ಯು-ಉತ್ತಮೌಜಸರು ರಥದಿಂದ ಕೆಳಗೆ ಹಾರಿದರು.

07105034a ತತಃ ಸ ಹೇಮಚಿತ್ರಂ ತಂ ಸ್ಯಂದನಪ್ರವರಂ ಗದೀ|

07105034c ಗದಯಾ ಪೋಥಯಾಮಾಸ ಸಾಶ್ವಸೂತಧ್ವಜಂ ರಣೇ||

ಆಗ ಅವರು ಗದೆಯಿಂದ ರಥಗಳಲ್ಲಿಯೇ ಶ್ರೇಷ್ಠ ಗದೀ ದುರ್ಯೋಧನನ ಹೇಮಚಿತ್ರಿತ ರಥವನ್ನು ಕುದುರೆ-ಸಾರಥಿ-ಧ್ವಜಗಳೊಂದಿಗೆ ರಣದಲ್ಲಿ ಪುಡಿ ಪುಡಿ ಮಾಡಿದರು.

07105035a ಹತ್ವಾ ಚೈನಂ ಸ ಪುತ್ರಸ್ತೇ ಹತಾಶ್ವೋ ಹತಸಾರಥಿಃ|

07105035c ಮದ್ರರಾಜರಥಂ ತೂರ್ಣಮಾರುರೋಹ ಪರಂತಪಃ||

ಹೀಗೆ ಹತಾಶ್ವ ಹತಸಾರಥಿಯಾದ ನಿನ್ನ ಮಗ ಪರಂತಪನು ಬೇಗನೇ ಮದ್ರರಾಜನ ರಥವನ್ನೇರಿದನು.

07105036a ಪಾಂಚಾಲಾನಾಂ ತು ಮುಖ್ಯೌ ತೌ ರಾಜಪುತ್ರೌ ಮಹಾಬಲೌ|

07105036c ರಥಮನ್ಯಂ ಸಮಾರುಹ್ಯ ಧನಂಜಯಮಭೀಯತುಃ||

ಪಾಂಚಾಲ ನಾಯಕರಾದ ಅವರಿಬ್ಬರು ಮಹಾಬಲಿ ರಾಜಪುತ್ರರೂ ಇನ್ನೊಂದು ರಥವನ್ನೇರಿ ಧನಂಜಯನ ಬಳಿ ತಲುಪಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುರ್ಯೋಧನಯುದ್ಧೇ ಪಂಚಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುರ್ಯೋಧನಯುದ್ಧ ಎನ್ನುವ ನೂರಾಐದನೇ ಅಧ್ಯಾಯವು.

Image result for lotus against white background

[1] ಜಯದ್ರಥನ ರಕ್ಷಣೆಯ ಭಾರವನ್ನು ಹೊತ್ತು

Comments are closed.