Drona Parva: Chapter 104

ದ್ರೋಣ ಪರ್ವ: ಜಯದ್ರಥವಧ ಪರ್ವ

೧೦೪

ಭೀಮಸೇನನಿಂದ ಕರ್ಣನ ಪರಾಜಯ, ಪಾಂಡವ ಸೇನೆಯಲ್ಲಿ ಹರ್ಷ (೧-೩೩).

07104001 ಧೃತರಾಷ್ಟ್ರ ಉವಾಚ|

07104001a ತಥಾ ತು ನರ್ದಮಾನಂ ತಂ ಭೀಮಸೇನಂ ಮಹಾಬಲಂ|

07104001c ಮೇಘಸ್ತನಿತನಿರ್ಘೋಷಂ ಕೇ ವೀರಾಃ ಪರ್ಯವಾರಯನ್||

ಧೃತರಾಷ್ಟ್ರನು ಹೇಳಿದನು: “ಹಾಗೆ ಮೋಡಗಳ ಗುಡುಗಿನಂತೆ  ಗರ್ಜಿಸುತ್ತಿದ್ದ ಮಹಾಬಲ ಭೀಮಸೇನನನ್ನು ಯಾವ ವೀರರು ಸುತ್ತುವರೆದರು?

07104002a ನ ಹಿ ಪಶ್ಯಾಮ್ಯಹಂ ತಂ ವೈ ತ್ರಿಷು ಲೋಕೇಷು ಸಂಜಯ|

07104002c ಕ್ರುದ್ಧಸ್ಯ ಭೀಮಸೇನಸ್ಯ ಯಸ್ತಿಷ್ಠೇದಗ್ರತೋ ರಣೇ||

ಸಂಜಯ! ರಣದಲ್ಲಿ ಕ್ರುದ್ಧನಾದ ಭೀಮಸೇನನ ಎದಿರು ನಿಲ್ಲುವವರನ್ನು ಈ ಮೂರು ಲೋಕಗಳಲ್ಲಿಯೂ ಕಾಣೆವು!

07104003a ಗದಾಮುದ್ಯಚ್ಚಮಾನಸ್ಯ ಕಾಲಸ್ಯೇವ ಮಹಾಮೃಧೇ|

07104003c ನ ಹಿ ಪಶ್ಯಾಮ್ಯಹಂ ತಾತ ಯಸ್ತಿಷ್ಠೇತ ರಣಾಜಿರೇ||

ಅಯ್ಯಾ! ಮಹಾಯುದ್ಧದಲ್ಲಿ ಕಾಲನಂತೆ ಗದೆಯನ್ನೆತ್ತಿ ಬರುವ ಭೀಮನನ್ನು ರಣದಲ್ಲಿ ತಡೆದು ನಿಲ್ಲುವವರನ್ನು ನಾನು ಕಾಣೆನು.

07104004a ರಥಂ ರಥೇನ ಯೋ ಹನ್ಯಾತ್ಕುಂಜರಂ ಕುಂಜರೇಣ ಚ|

07104004c ಕಸ್ತಸ್ಯ ಸಮರೇ ಸ್ಥಾತಾ ಸಾಕ್ಷಾದಪಿ ಶತಕ್ರತುಃ||

ರಥವನ್ನು ರಥದಿಂದ ಮತ್ತು ಆನೆಯನ್ನು ಆನೆಯಿಂದ ನಾಶಪಡಿಸುವ ಅವನ ಎದಿರು, ಸಾಕ್ಷಾತ್ ಶತಕ್ರತುವೇ ಆದರೂ, ಯಾರು ತಾನೇ ನಿಂತಾರು?

07104005a ಕ್ರುದ್ಧಸ್ಯ ಭೀಮಸೇನಸ್ಯ ಮಮ ಪುತ್ರಾನ್ಜಿಘಾಂಸತಃ|

07104005c ದುರ್ಯೋಧನಹಿತೇ ಯುಕ್ತಾಃ ಸಮತಿಷ್ಠಂತ ಕೇಽಗ್ರತಃ||

ನನ್ನ ಮಕ್ಕಳನ್ನು ಕೊಲ್ಲಲು ಬಯಸಿದ ಕ್ರುದ್ಧ ಭೀಮಸೇನನ ಮುಂದೆ ದುರ್ಯೋಧನನ ಹಿತದಲ್ಲಿ ನಿರತರಾದ ಯಾರು ತಾನೆ ನಿಂತುಕೊಂಡರು?

07104006a ಭೀಮಸೇನದವಾಗ್ನೇಸ್ತು ಮಮ ಪುತ್ರತೃಣೋಲಪಂ|

07104006c ಪ್ರಧಕ್ಷ್ಯತೋ ರಣಮುಖೇ ಕೇ ವೀರಾಃ ಪ್ರಮುಖೇ ಸ್ಥಿತಾಃ||

ನನ್ನ ಮಕ್ಕಳನ್ನು ಹುಲ್ಲಿನ ಮೆದೆಗಳಂತೆ ಭಸ್ಮಮಾಡಿಬಿಡಬಲ್ಲ ಭೀಮಸೇನನೆಂಬ ದಾವಾಗ್ನಿಯನ್ನು ಯಾವ ವೀರರು ಎದುರಿಸಿ ನಿಂತರು?

07104007a ಕಾಲ್ಯಮಾನಾನ್ಹಿ ಮೇ ಪುತ್ರಾನ್ಭೀಮೇನಾವೇಕ್ಷ್ಯ ಸಂಯುಗೇ|

07104007c ಕಾಲೇನೇವ ಪ್ರಜಾಃ ಸರ್ವಾಃ ಕೇ ಭೀಮಂ ಪರ್ಯವಾರಯನ್||

ಪ್ರಜೆಗಳೆಲ್ಲರನ್ನೂ ಸಂಹರಿಸುವ ಕಾಲನಂತೆ ನನ್ನ ಮಕ್ಕಳನ್ನು ಸಂಹರಿಸುತ್ತಿದ್ದ ಭೀಮನನ್ನು ನೋಡಿ ಸಂಯುಗದದಲ್ಲಿ ಯಾರು ತಾನೇ ಭೀಮನನ್ನು ಸುತ್ತುಕಟ್ಟಿದರು?

07104008a ಭೀಮವಹ್ನೇಃ ಪ್ರದೀಪ್ತಸ್ಯ ಮಮ ಪುತ್ರಾನ್ದಿಧಕ್ಷತಃ|

07104008c ಕೇ ಶೂರಾಃ ಪರ್ಯವರ್ತಂತ ತನ್ಮಮಾಚಕ್ಷ್ವ ಸಂಜಯ||

ನನ್ನ ಪುತ್ರರನ್ನು ಸುಡುವ ಉರಿಯುತ್ತಿರುವ ಭೀಮಾಗ್ನಿಯನ್ನು ಯಾವ ಶೂರರು ಆಕ್ರಮಣಿಸಿದರು? ಅದನ್ನು ನನಗೆ ಹೇಳು ಸಂಜಯ!”

07104009 ಸಂಜಯ ಉವಾಚ|

07104009a ತಥಾ ತು ನರ್ದಮಾನಂ ತಂ ಭೀಮಸೇನಂ ಮಹಾರಥಂ|

07104009c ತುಮುಲೇನೈವ ಶಬ್ದೇನ ಕರ್ಣೋಽಪ್ಯಭ್ಯಪತದ್ಬಲೀ||

ಸಂಜಯನು ಹೇಳಿದನು: “ಹಾಗೆ ಗರ್ಜಿಸುತ್ತಿದ್ದ ಮಹಾರಥ ಭೀಮಸೇನನನ್ನು ಅಷ್ಟೇ ತುಮುಲ ಶಬ್ಧದಿಂದ ಬಲೀ ಕರ್ಣನು ಎದುರಿಸಿದನು.

07104010a ವ್ಯಾಕ್ಷಿಪನ್ಬಲವಚ್ಚಾಪಮತಿಮಾತ್ರಮಮರ್ಷಣಃ|

07104010c ಕರ್ಣಸ್ತು ಯುದ್ಧಮಾಕಾಂಕ್ಷನ್ದರ್ಶಯಿಷ್ಯನ್ಬಲಂ ಬಲೀ||

ಭೀಮನನ್ನು ಸಹಿಸಲಾರದೇ ಬಲವತ್ತಾಗಿ ಚಾಪವನ್ನು ಸೆಳೆದು ಯುದ್ಧಾಕಾಂಕ್ಷಿಯಾಗಿ ಬಲೀ ಕರ್ಣನು ಬಲವನ್ನು ಪ್ರದರ್ಶಿಸಿದನು.

07104011a ಪ್ರಾವೇಪನ್ನಿವ ಗಾತ್ರಾಣಿ ಕರ್ಣಭೀಮಸಮಾಗಮೇ|

07104011c ರಥಿನಾಂ ಸಾದಿನಾಂ ಚೈವ ತಯೋಃ ಶ್ರುತ್ವಾ ತಲಸ್ವನಂ||

ಕರ್ಣ-ಭೀಮಸೇನರ ಆ ಸಮಾಗಮದಲ್ಲಿ ಅವರಿಬ್ಬರ ಚಪ್ಪಾಳೆ ಶಬ್ಧವನ್ನು ಕೇಳಿಯೇ ರಥಿಗಳು ಮತ್ತು ಅಶ್ವಾರೋಹಿಗಳ ಶರೀರಗಳು ಕಂಪಿಸಿದವು.

07104012a ಭೀಮಸೇನಸ್ಯ ನಿನದಂ ಘೋರಂ ಶ್ರುತ್ವಾ ರಣಾಜಿರೇ|

07104012c ಖಂ ಚ ಭೂಮಿಂ ಚ ಸಂಬದ್ಧಾಂ ಮೇನಿರೇ ಕ್ಷತ್ರಿಯರ್ಷಭಾಃ||

ರಣರಂಗದಲ್ಲಿ ಭೀಮಸೇನನ ಘೋರ ನಿನಾದವನ್ನು ಕೇಳಿ ಭೂಮಿ-ಆಕಾಶಗಳು ಗಾಭರಿಗೊಂಡಿವೆಯೋ ಎಂದು ಕ್ಷತ್ರಿಯರ್ಷಭರು ತಿಳಿದುಕೊಂಡರು.

07104013a ಪುನರ್ಘೋರೇಣ ನಾದೇನ ಪಾಂಡವಸ್ಯ ಮಹಾತ್ಮನಃ|

07104013c ಸಮರೇ ಸರ್ವಯೋಧಾನಾಂ ಧನೂಂಷ್ಯಭ್ಯಪತನ್ ಕ್ಷಿತೌ||

ಪುನಃ ಮಹಾತ್ಮ ಪಾಂಡವನ ಘೋರನಾದದಿಂದಾಗಿ ಸಮರದಲ್ಲಿದ್ದ ಸರ್ವಯೋಧರ ಧನುಸ್ಸುಗಳು ನೆಲದ ಮೇಲೆ ಬಿದ್ದವು.

07104014a ವಿತ್ರಸ್ತಾನಿ ಚ ಸರ್ವಾಣಿ ಶಕೃನ್ಮೂತ್ರಂ ಪ್ರಸುಸ್ರುವುಃ|

07104014c ವಾಹನಾನಿ ಮಹಾರಾಜ ಬಭೂವುರ್ವಿಮನಾಂಸಿ ಚ||

ಮಹಾರಾಜ! ವಾಹಕ ಪ್ರಾಣಿಗಳೆಲ್ಲವೂ ಹೆದರಿ ಮಲ-ಮೂತ್ರಗಳನ್ನು ವಿಸರ್ಜಿಸಿದವು. ಲವಲವಿಕೆಯನ್ನೂ ಕಳೆದುಕೊಂಡವು.

07104015a ಪ್ರಾದುರಾಸನ್ನಿಮಿತ್ತಾನಿ ಘೋರಾಣಿ ಚ ಬಹೂನಿ ಚ|

07104015c ತಸ್ಮಿಂಸ್ತು ತುಮುಲೇ ರಾಜನ್ಭೀಮಕರ್ಣಸಮಾಗಮೇ||

ರಾಜನ್! ಭೀಮ ಮತ್ತು ಕರ್ಣರ ಆ ತುಮುಲ ಸಮಾಗಮದಲ್ಲಿ ಅನೇಕ ಘೋರ ನಿಮಿತ್ತಗಳು ಉಂಟಾದವು.

07104016a ತತಃ ಕರ್ಣಸ್ತು ವಿಂಶತ್ಯಾ ಶರಾಣಾಂ ಭೀಮಮಾರ್ದಯತ್|

07104016c ವಿವ್ಯಾಧ ಚಾಸ್ಯ ತ್ವರಿತಃ ಸೂತಂ ಪಂಚಭಿರಾಶುಗೈಃ||

ಅನಂತರ ಕರ್ಣನು ಇಪ್ಪತ್ತು ಶರಗಳಿಂದ ಭೀಮನನ್ನು ಗಾಯಗೊಳಿಸಿದನು. ತ್ವರೆಮಾಡಿ ಅವನ ಸಾರಥಿಯನ್ನು ಕೂಡ ಐದು ಆಶುಗಗಳಿಂದ ಹೊಡೆದನು.

07104017a ಪ್ರಹಸ್ಯ ಭೀಮಸೇನಸ್ತು ಕರ್ಣಂ ಪ್ರತ್ಯರ್ಪಯದ್ರಣೇ|

07104017c ಸಾಯಕಾನಾಂ ಚತುಹ್ಷಷ್ಟ್ಯಾ ಕ್ಷಿಪ್ರಕಾರೀ ಮಹಾಬಲಃ||

ಮಹಾಬಲ ಭೀಮಸೇನನಾದರೋ ಜೋರಾಗಿ ನಕ್ಕು ಅರವತ್ನಾಲ್ಕು ಕ್ಷಿಪ್ರಕಾರೀ ಸಾಯಕಗಳಿಂದ ರಣದಲ್ಲಿ ಕರ್ಣನನ್ನು ಹೊಡೆದನು.

07104018a ತಸ್ಯ ಕರ್ಣೋ ಮಹೇಷ್ವಾಸಃ ಸಾಯಕಾಂಶ್ಚತುರೋಽಕ್ಷಿಪತ್|

07104018c ಅಸಂಪ್ರಾಪ್ತಾಂಸ್ತು ತಾನ್ಭೀಮಃ ಸಾಯಕೈರ್ನತಪರ್ವಭಿಃ|

07104018e ಚಿಚ್ಚೇದ ಬಹುಧಾ ರಾಜನ್ದರ್ಶಯನ್ಪಾಣಿಲಾಘವಂ||

ರಾಜನ್! ಮಹೇಷ್ವಾಸ ಕರ್ಣನು ಅವನ ಮೇಲೆ ನಾಲ್ಕು ಸಾಯಕಗಳನ್ನು ಪ್ರಯೋಗಿಸಿದನು. ಅವು ತಲುಪುವುದರೊಳಗೇ ಅವುಗಳನ್ನು ಭೀಮನು ಸಾಯಕ ನತಪರ್ವಗಳಿಂದ ಅನೇಕ ಚೂರುಗಳಾಗಿ ತುಂಡರಿಸಿ ತನ್ನ ಕೈಚಳಕವನ್ನು ತೋರಿಸಿದನು.

07104019a ತಂ ಕರ್ಣಶ್ಚಾದಯಾಮಾಸ ಶರವ್ರಾತೈರನೇಕಶಃ|

07104019c ಸಂಚಾದ್ಯಮಾನಃ ಕರ್ಣೇನ ಬಹುಧಾ ಪಾಂಡುನಂದನಃ||

ಕರ್ಣನಿಂದ ಬಹಳ ಬಾರಿ ಮುಚ್ಚಲ್ಪಟ್ಟ ಪಾಂಡುನಂದನನು ಕರ್ಣನನ್ನೂ ಕೂಡ ಅನೇಕ ಶರಸಮೂಹಗಳಿಂದ ಮುಚ್ಚಿದನು.

07104020a ಚಿಚ್ಚೇದ ಚಾಪಂ ಕರ್ಣಸ್ಯ ಮುಷ್ಟಿದೇಶೇ ಮಹಾರಥಃ|

07104020c ವಿವ್ಯಾಧ ಚೈನಂ ಬಹುಭಿಃ ಸಾಯಕೈರ್ನತಪರ್ವಭಿಃ||

ಮಹಾರಥ ಭೀಮನು ಕರ್ಣನ ಧನುಸ್ಸನ್ನು ಮುಷ್ಟಿದೇಶದಲ್ಲಿ ಕತ್ತರಿಸಿದನು ಮತ್ತು ಅನೇಕ ನತಪರ್ವ ಸಾಯಕಗಳಿಂದ ಅವನನ್ನೂ ಹೊಡೆದನು.

07104021a ಅಥಾನ್ಯದ್ಧನುರಾದಾಯ ಸಜ್ಯಂ ಕೃತ್ವಾ ಚ ಸೂತಜಃ|

07104021c ವಿವ್ಯಾಧ ಸಮರೇ ಭೀಮಂ ಭೀಮಕರ್ಮಾ ಮಹಾರಥಃ||

ಆಗ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಶಿಂಜನಿಯನ್ನು ಬಿಗಿದು ಸೂತಜ ಕರ್ಣನು ಸಮರದಲ್ಲಿ ಮಹಾರಥಿ ಭೀಮಕರ್ಮಿ ಭೀಮನನ್ನು ಹೊಡೆದನು.

07104022a ತಸ್ಯ ಭೀಮೋ ಭೃಶಂ ಕ್ರುದ್ಧಸ್ತ್ರೀನ್ ಶರಾನ್ನತಪರ್ವಣಃ|

07104022c ನಿಚಖಾನೋರಸಿ ತದಾ ಸೂತಪುತ್ರಸ್ಯ ವೇಗಿತಃ||

ಅವನ ಮೇಲೆ ತುಂಬಾ ಕ್ರುದ್ಧನಾದ ಭೀಮನು ಮೂರು ನತಪರ್ವ ಶರಗಳನ್ನು ವೇಗದಿಂದ ಸೂತಪುತ್ರನ ಎದೆಗೆ ಗುರಿಯಿಟ್ಟು ಹೊಡೆದು ನಾಟಿಸಿದನು.

07104023a ತೈಃ ಕರ್ಣೋಽಭ್ರಾಜತ ಶರೈರುರೋಮಧ್ಯಗತೈಸ್ತದಾ|

07104023c ಮಹೀಧರ ಇವೋದಗ್ರಸ್ತ್ರಿಶೃಂಗೋ ಭರತರ್ಷಭ||

ಭರತರ್ಷಭ! ಅವನ ಎದೆಯ ಮಧ್ಯವನ್ನು ಹೊಕ್ಕ ಆ ಬಾಣಗಳಿಂದ ಕರ್ಣನು ಮೂರು ಶೃಂಗಗಳುಳ್ಳ ಪರ್ವತದಂತೆ ಕಂಗೊಳಿಸಿದನು.

07104024a ಸುಸ್ರಾವ ಚಾಸ್ಯ ರುಧಿರಂ ವಿದ್ಧಸ್ಯ ಪರಮೇಷುಭಿಃ|

07104024c ಧಾತುಪ್ರಸ್ಯಂದಿನಃ ಶೈಲಾದ್ಯಥಾ ಗೈರಿಕರಾಜಯಃ||

ಆ ತೀಕ್ಷ್ಣ ಶರಗಳಿಂದ ಗಾಯಗೊಂಡ ಅವನು ಧಾತುಗಳು ತುಂಬಿದ ನೀರನ್ನು ಪ್ರಸವಿಸುವ ಪರ್ವತದಂತೆ ರಕ್ತವನ್ನು ಸುರಿಸಿದನು.

07104025a ಕಿಂ ಚಿದ್ವಿಚಲಿತಃ ಕರ್ಣಃ ಸುಪ್ರಹಾರಾಭಿಪೀಡಿತಃ|

07104025c ಸಸಾಯಕಂ ಧನುಃ ಕೃತ್ವಾ ಭೀಮಂ ವಿವ್ಯಾಧ ಮಾರಿಷ|

07104025e ಚಿಕ್ಷೇಪ ಚ ಪುನರ್ಬಾಣಾನ್ ಶತಶೋಽಥ ಸಹಸ್ರಶಃ||

ಉತ್ತಮ ಪ್ರಹಾರದಿಂದ ತುಂಬಾ ಪೀಡಿತನಾಗಿದ್ದರೂ ಕರ್ಣನು ಸ್ವಲ್ಪವೂ ವಿಚಲಿತನಾಗಲಿಲ್ಲ. ಮಾರಿಷ! ಧನುಸ್ಸನ್ನೇ ಸಹಾಯವಾಗಿರಿಸಿಕೊಂಡು ಕರ್ಣನು ಪುನಃ ನೂರಾರು ಸಹಸ್ರಾರು ಬಾಣಗಳನ್ನು ಭೀಮನ ಮೇಲೆ ಪ್ರಯೋಗಿಸಿದನು.

07104026a ಸ ಚಾದ್ಯಮಾನಃ ಸಹಸಾ ಕರ್ಣೇನ ದೃಢಧನ್ವಿನಾ|

07104026c ಧನುರ್ಜ್ಯಾಮಚ್ಚಿನತ್ತೂರ್ಣಮುತ್ಸ್ಮಯನ್ಪಾಂಡುನಂದನಃ||

07104027a ಸಾರಥಿಂ ಚಾಸ್ಯ ಭಲ್ಲೇನ ಪ್ರಾಹಿಣೋದ್ಯಮಸಾದನಂ|

07104027c ವಾಹಾಂಶ್ಚ ಚತುರಃ ಸಂಖ್ಯೇ ವ್ಯಸೂಂಶ್ಚಕ್ರೇ ಮಹಾರಥಃ||

ದೃಢಧನ್ವಿ ಕರ್ಣನಿಂದ ಹಾಗೆ ಒಮ್ಮೆಲೇ ಮುಚ್ಚಿಹೋದ ಪಾಂಡುನಂದನ ಮಹಾರಥ ಭೀಮನು ನಗುತ್ತಾ ಬಿಲ್ಲನ್ನು ಸೆಳೆದು ಭಲ್ಲದಿಂದ ಕರ್ಣನ ಸಾರಥಿಯನ್ನು ಯಮಸಾದನಕ್ಕೆ ಕಳುಹಿಸಿದನು. ರಣದಲ್ಲಿ ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು.

07104028a ಹತಾಶ್ವಾತ್ತು ರಥಾತ್ಕರ್ಣಃ ಸಮಾಪ್ಲುತ್ಯ ವಿಶಾಂ ಪತೇ|

07104028c ಸ್ಯಂದನಂ ವೃಷಸೇನಸ್ಯ ಸಮಾರೋಹನ್ಮಹಾರಥಃ||

ವಿಶಾಂಪತೇ! ಕುದುರೆಗಳು ಹತವಾದ ಆ ರಥದಿಂದ ಹಾರಿ ಮಹಾರಥ ಕರ್ಣನು ಮಗ ವೃಷಸೇನನ ರಥವನ್ನು ಏರಿದನು.

07104029a ನಿರ್ಜಿತ್ಯ ತು ರಣೇ ಕರ್ಣಂ ಭೀಮಸೇನಃ ಪ್ರತಾಪವಾನ್|

07104029c ನನಾದ ಸುಮಹಾನಾದಂ ಪರ್ಜನ್ಯನಿನದೋಪಮಂ||

ರಣದಲ್ಲಿ ಕರ್ಣನನ್ನು ಸೋಲಿಸಿ ಪ್ರತಾಪವಾನ್ ಭೀಮಸೇನನು ಮಳೆಗಾಲದ ಗುಡುಗಿನಂತೆ ಜೋರಾಗಿ ಗರ್ಜಿಸಿದನು.

07104030a ತಸ್ಯ ತಂ ನಿನದಂ ಶ್ರುತ್ವಾ ಪ್ರಹೃಷ್ಟೋಽಭೂದ್ಯುಧಿಷ್ಠಿರಃ|

07104030c ಕರ್ಣಂ ಚ ನಿರ್ಜಿತಂ ಮತ್ವಾ ಭೀಮಸೇನೇನ ಭಾರತ||

ಭಾರತ! ಅವನ ಆ ಕೂಗನ್ನು ಕೇಳಿ, ಭೀಮಸೇನನಿಂದ ಕರ್ಣನು ಸೋತನು ಎಂದು ತಿಳಿದು ಯುಧಿಷ್ಠಿರನು ಪರಮ ಹರ್ಷಿತನಾದನು.

07104031a ಸಮಂತಾಚ್ಚಂಖನಿನದಂ ಪಾಂಡುಸೇನಾಕರೋತ್ತದಾ|

07104031c ಶತ್ರುಸೇನಾಧ್ವನಿಂ ಶ್ರುತ್ವಾ ತಾವಕಾ ಹ್ಯಪಿ ನಾನದನ್|

07104031e ಗಾಂಡೀವಂ ಪ್ರಾಕ್ಷಿಪತ್ಪಾರ್ಥಃ ಕೃಷ್ಣೋಽಪ್ಯಬ್ಜಮವಾದಯತ್||

ಆಗ ಪಾಂಡವರ ಸೇನೆಯಲ್ಲಿ ಎಲ್ಲ ಕಡೆ ಶಂಖವನ್ನು ಊದಿದರು. ಶತ್ರುಸೇನೆಗಳ ಧ್ವನಿಯನ್ನು ಕೇಳಿ ನಿನ್ನವರೂ ಕೂಡ ಕೂಗಿದರು. ಪಾರ್ಥನು ಗಾಂಡೀವವನ್ನು ಮೊಳಗಿಸಿದನು ಮತ್ತು ಕೃಷ್ಣನು ಶಂಖವನ್ನೂದಿದನು.

07104032a ತಮಂತರ್ಧಾಯ ನಿನದಂ ಧ್ವನಿರ್ಭೀಮಸ್ಯ ನರ್ದತಃ|

07104032c ಅಶ್ರೂಯತ ಮಹಾರಾಜ ಸರ್ವಸೈನ್ಯೇಷು ಭಾರತ||

ಮಹಾರಾಜ! ಭಾರತ! ಆ ಎಲ್ಲ ಕೂಗುಗಳನ್ನೂ ಅಡಗಿಸಿ ಗರ್ಜಿಸುತ್ತಿದ್ದ ಭೀಮಸೇನನ ಕೂಗಿನ ಧ್ವನಿಯು ಎಲ್ಲ ಸೇನೆಗಳಲ್ಲೂ ಕೇಳಿಬಂದಿತು.

07104033a ತತೋ ವ್ಯಾಯಚ್ಚತಾಮಸ್ತ್ರೈಃ ಪೃಥಕ್ಪೃಥಗರಿಂದಮೌ|

07104033c ಮೃದುಪೂರ್ವಂ ಚ ರಾಧೇಯೋ ದೃಢಪೂರ್ವಂ ಚ ಪಾಂಡವಃ||

ಆಗ ಆ ಇಬ್ಬರು ಅರಿಂದಮ ಕರ್ಣ-ಭೀಮರು ಬೇರೆ ಬೇರೆ ಅಸ್ತ್ರಗಳಿಂದ - ರಾಧೇಯನು ಮೃದುವಾಗಿಯೂ ಪಾಂಡವನು ಜೋರಾಗಿಯೂ - ಹೋರಾಡಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೀಮಸೇನಪ್ರವೇಶೇ ಕರ್ಣಪರಾಜಯೇ ಚತುರಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪ್ರವೇಶೇ ಕರ್ಣಪರಾಜಯ ಎನ್ನುವ ನೂರಾನಾಲ್ಕನೇ ಅಧ್ಯಾಯವು.

Image result for lotus against white background

Comments are closed.