Drona Parva: Chapter 103

ದ್ರೋಣ ಪರ್ವ: ಜಯದ್ರಥವಧ ಪರ್ವ

೧೦೩

ದ್ರೋಣ ಮತ್ತು ಇತರ ಸೇನೆಗಳನ್ನು ಪರಾಜಯಗೊಳಿಸಿ ಭೀಮಸೇನನು ಮುಂದುವರಿದು ಯುದ್ಧಮಾಡುತ್ತಿದ್ದ ಅರ್ಜುನ-ಸಾತ್ಯಕಿಯರನ್ನು ನೋಡಿ ಸಂತೋಷದಿಂದ ಗರ್ಜಿಸಿದುದು; ಅವನ ಗರ್ಜನೆಯನ್ನು ಕೇಳಿ ಕೃಷ್ಣಾರ್ಜುನರೂ ಗರ್ಜಿಸಿದುದು (೧-೨೮). ಅವರಗ ರ್ಜನೆಗಳನ್ನು ಕೇಳಿ ಯುಧಿಷ್ಠಿರನು ಹರ್ಷಿತನಾದುದು (೨೯-೪೯).

07103001 ಸಂಜಯ ಉವಾಚ|

07103001a ತಮುತ್ತೀರ್ಣಂ ರಥಾನೀಕಾತ್ತಮಸೋ ಭಾಸ್ಕರಂ ಯಥಾ|

07103001c ದಿಧಾರಯಿಷುರಾಚಾರ್ಯಃ ಶರವರ್ಷೈರವಾಕಿರತ್||

ಸಂಜಯನು ಹೇಳಿದನು: “ಕತ್ತಲೆಯನ್ನು ಅತಿಕ್ರಮಿಸಿದ ಭಾಸ್ಕರನಂತೆ ಆ ರಥಸೇನೆಯನ್ನು ಭೀಮಸೇನನು ದಾಟಿ ಬರಲು ಆಚಾರ್ಯ ದ್ರೋಣನು ಅವನನ್ನು ತಡೆಯಲು ಅವನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು.

07103002a ಪಿಬನ್ನಿವ ಶರೌಘಾಂಸ್ತಾನ್ದ್ರೋಣಚಾಪವರಾತಿಗಾನ್|

07103002c ಸೋಽಭ್ಯವರ್ತತ ಸೋದರ್ಯಾನ್ಮಾಯಯಾ ಮೋಹಯನ್ಬಲಂ||

ದ್ರೋಣನ ಬಿಲ್ಲಿನಿಂದ ಹೊರಟುಬಂದ ಆ ಶರ ಸಮೂಹಗಳನ್ನು ಕುಡಿಯುವನೋ ಎಂಬಂತೆ ತನ್ನ ಮಾಯೆಯಿಂದ ಆ ಸೇನೆಯನ್ನು ಭ್ರಾಂತಗೊಳಿಸಿ ಭೀಮನು ತನ್ನ ಸೋದರ ಧಾರ್ತರಾಷ್ಟ್ರರ ಮೇಲೆ ನುಗ್ಗಿದನು.

07103003a ತಂ ಮೃಧೇ ವೇಗಮಾಸ್ಥಾಯ ಪರಂ ಪರಮಧನ್ವಿನಃ|

07103003c ಚೋದಿತಾಸ್ತವ ಪುತ್ರೈಶ್ಚ ಸರ್ವತಃ ಪರ್ಯವಾರಯನ್||

ಆಗ ರಣದಲ್ಲಿ ನಿನ್ನ ಮಕ್ಕಳಿಂದ ಪ್ರಚೋದಿತರಾದ ಪರಮ ಧನ್ವಿಗಳು ಅತ್ಯಂತ ವೇಗದಿಂದ ಭೀಮನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

07103004a ಸ ತಥಾ ಸಂವೃತೋ ಭೀಮಃ ಪ್ರಹಸನ್ನಿವ ಭಾರತ|

07103004c ಉದಯಚ್ಚದ್ಗದಾಂ ತೇಭ್ಯೋ ಘೋರಾಂ ತಾಂ ಸಿಂಹವನ್ನದನ್|

07103004e ಅವಾಸೃಜಚ್ಚ ವೇಗೇನ ತೇಷು ತಾನ್ಪ್ರಮಥದ್ಬಲೀ||

ಭಾರತ! ಹಾಗೆ ಮುತ್ತಿಗೆ ಹಾಕಲ್ಪಟ್ಟ ಬಲಶಾಲೀ ಭೀಮನು ನಗುತ್ತಾ ಸಿಂಹನಾದಗೈದು ಘೋರ ಗದೆಯನ್ನು ತೆಗೆದುಕೊಂಡು ವೇಗದಿಂದ ಎಸೆದು ಅವರನ್ನು ನುಚ್ಚುನೂರು ಮಾಡಿದನು.

07103005a ಸೇಂದ್ರಾಶನಿರಿವೇಂದ್ರೇಣ ಪ್ರವಿದ್ಧಾ ಸಂಹತಾತ್ಮನಾ|

07103005c ಘೋಷೇಣ ಮಹತಾ ರಾಜನ್ಪೂರಯಿತ್ವೇವ ಮೇದಿನೀಂ|

07103005e ಜ್ವಲಂತೀ ತೇಜಸಾ ಭೀಮಾ ತ್ರಾಸಯಾಮಾಸ ತೇ ಸುತಾನ್||

ರಾಜನ್! ಇಂದ್ರನಿಂದಲೇ ಪ್ರಹರಿಸಲ್ಪಟ್ಟ ಇಂದ್ರನ ವಜ್ರಾಯುಧದಂತೆ ಎಸೆಯಲ್ಪಟ್ಟ ಆ ಅತಿ ಸಾಮರ್ಥ್ಯದ ಗದೆಯು ತನ್ನ ಘೋಷದಿಂದ ಇಡೀ ಮೇದಿನಿಯನ್ನೇ ತುಂಬಿಸಿಬಿಟ್ಟಿತು. ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಆ ಭಯಂಕರ ಗದೆಯು ನಿನ್ನ ಸುತರನ್ನು ಭೀತರನ್ನಾಗಿಸಿತು.

07103006a ತಾಂ ಪತಂತೀಂ ಮಹಾವೇಗಾಂ ದೃಷ್ಟ್ವಾ ತೇಜೋಭಿಸಂವೃತಾಂ|

07103006c ಪ್ರಾದ್ರವಂಸ್ತಾವಕಾಃ ಸರ್ವೇ ನದಂತೋ ಭೈರವಾನ್ರವಾನ್||

ತೇಜಸ್ಸಿನಿಂದ ಸುತ್ತುವರೆಯಲ್ಪಟ್ಟು ಮಹಾವೇಗದಿಂದ ಬೀಳುತ್ತಿದ್ದ ಆ ಗದೆಯನ್ನು ನೋಡಿ ನಿನ್ನವರೆಲ್ಲರೂ ಭೈರವ ಕೂಗನ್ನು ಕೂಗುತ್ತಾ ಓಡತೊಡಗಿದರು.

07103007a ತಂ ಚ ಶಬ್ದಮಸಂಸಹ್ಯಂ ತಸ್ಯಾಃ ಸಂಲಕ್ಷ್ಯ ಮಾರಿಷ|

07103007c ಪ್ರಾಪತನ್ಮನುಜಾಸ್ತತ್ರ ರಥೇಭ್ಯೋ ರಥಿನಸ್ತದಾ||

ಸಹಿಸಲಾಧ್ಯವಾದ ಅದರ ಶಬ್ಧದಿಂದಾಗಿ ಮನುಷ್ಯರು ನಿಂತಲ್ಲಿಯೇ ಬಿದ್ದುಬಿಟ್ಟರು ಮತ್ತು ರಥಿಗಳು ರಥಗಳ ಮೇಲಿಂದ ಬಿದ್ದರು.

07103008a ಸ ತಾನ್ವಿದ್ರಾವ್ಯ ಕೌಂತೇಯಃ ಸಂಖ್ಯೇಽಮಿತ್ರಾನ್ದುರಾಸದಃ|

07103008c ಸುಪರ್ಣ ಇವ ವೇಗೇನ ಪಕ್ಷಿರಾಡತ್ಯಗಾಚ್ಚಮೂಂ||

ಯುದ್ಧದಲ್ಲಿ ದುರಾಸದ ಕೌಂತೇಯನು ತನ್ನ ಶತ್ರುಗಳನ್ನು ಸದೆಬಡಿಯುತ್ತಾ ಗರುಡನಂತೆ ವೇಗದಿಂದ ಆ ಸೇನೆಯನ್ನು ಅತಿಕ್ರಮಿಸಿದನು.

07103009a ತಥಾ ತಂ ವಿಪ್ರಕುರ್ವಾಣಂ ರಥಯೂಥಪಯೂಥಪಂ|

07103009c ಭಾರದ್ವಾಜೋ ಮಹಾರಾಜ ಭೀಮಸೇನಂ ಸಮಭ್ಯಯಾತ್||

ಮಹಾರಾಜ! ರಥಯೋಧಿಗಳ ನಾಯಕರ ನಾಯಕನಾದ ಭೀಮಸೇನನು ಹಾಗೆ ಸೇನೆಯನ್ನು ನಾಶಪಡಿಸುತ್ತಿರಲು ಅವನನ್ನು ಆಕ್ರಮಣಿಸಲು ಭಾರದ್ವಾಜ ದ್ರೋಣನು ಮುನ್ನುಗ್ಗಿದನು.

07103010a ದ್ರೋಣಸ್ತು ಸಮರೇ ಭೀಮಂ ವಾರಯಿತ್ವಾ ಶರೋರ್ಮಿಭಿಃ|

07103010c ಅಕರೋತ್ಸಹಸಾ ನಾದಂ ಪಾಂಡೂನಾಂ ಭಯಮಾದಧತ್||

ದ್ರೋಣನಾದರೋ ಸಮರದಲ್ಲಿ ಭೀಮನನ್ನು ತೀಕ್ಷ್ಣ ಶರಗಳಿಂದ ತಡೆಯುತ್ತಾ ಒಮ್ಮಿಂದೊಮ್ಮೆಲೇ ಜೋರಾಗಿ ಗರ್ಜಿಸಿ ಪಾಂಡವರಿಗೆ ಭಯವನ್ನು ತಂದನು.

07103011a ತದ್ಯುದ್ಧಮಾಸೀತ್ಸುಮಹದ್ಘೋರಂ ದೇವಾಸುರೋಪಮಂ|

07103011c ದ್ರೋಣಸ್ಯ ಚ ಮಹಾರಾಜ ಭೀಮಸ್ಯ ಚ ಮಹಾತ್ಮನಃ||

ಮಹಾರಾಜ! ಆಗ ಮಹಾತ್ಮ ದ್ರೋಣ ಮತ್ತು ಭೀಮರ ನಡುವೆ ದೇವಾಸುರರ ಯುದ್ಧದಂತೆ ಘೋರ ಯುದ್ಧವು ನಡೆಯಿತು.

07103012a ಯದಾ ತು ವಿಶಿಖೈಸ್ತೀಕ್ಷ್ಣೈರ್ದ್ರೋಣಚಾಪವಿನಿಃಸೃತೈಃ|

07103012c ವಧ್ಯಂತೇ ಸಮರೇ ವೀರಾಃ ಶತಶೋಽಥ ಸಹಸ್ರಶಃ||

ದ್ರೋಣನ ಚಾಪದಿಂದ ಹೊರಟ ತೀಕ್ಷ್ಣ ವಿಶಿಖಗಳು ಸಮರದಲ್ಲಿ ನೂರಾರು ಸಹಸ್ರಾರು ವೀರರನ್ನು ವಧಿಸಿದವು.

07103013a ತತೋ ರಥಾದವಪ್ಲುತ್ಯ ವೇಗಮಾಸ್ಥಾಯ ಪಾಂಡವಃ|

07103013c ನಿಮೀಲ್ಯ ನಯನೇ ರಾಜನ್ಪದಾತಿರ್ದ್ರೋಣಮಭ್ಯಯಾತ್||

ಆಗ ಪಾಂಡವನು ರಥದಿಂದ ಹಾರಿ ವೇಗವನ್ನು ಬಳಸಿ ಕಣ್ಣುಗಳನ್ನು ಮುಚ್ಚಿಕೊಂಡು ಓಡಿಕೊಂಡು ದ್ರೋಣನ ಕಡೆ ಮುನ್ನುಗ್ಗಿದ್ದನು.

07103014a ಯಥಾ ಹಿ ಗೋವೃಷೋ ವರ್ಷಂ ಪ್ರತಿಗೃಹ್ಣಾತಿ ಲೀಲಯಾ|

07103014c ತಥಾ ಭೀಮೋ ನರವ್ಯಾಘ್ರಃ ಶರವರ್ಷಂ ಸಮಗ್ರಹೀತ್||

ಹೋರಿಯೊಂದು ಹೇಗೆ ಬಹುಲೀಲೆಯಿಂದ ಜೋರಾಗಿ ಸುರಿಯುವ ಮಳೆಯನ್ನು ತಡೆದುಕೊಳ್ಳುತ್ತದೆಯೋ ಹಾಗೆ ನರವ್ಯಾಘ್ರ ಭೀಮನು ಆ ಶರಗಳ ಮಳೆಯನ್ನು ತಡೆದುಕೊಂಡನು.

07103015a ಸ ವಧ್ಯಮಾನಃ ಸಮರೇ ರಥಂ ದ್ರೋಣಸ್ಯ ಮಾರಿಷ|

07103015c ಈಷಾಯಾಂ ಪಾಣಿನಾ ಗೃಹ್ಯ ಪ್ರಚಿಕ್ಷೇಪ ಮಹಾಬಲಃ||

ಮಾರಿಷ! ವಧಿಸುತ್ತಿರುವ ಆ ಮಹಾಬಲನು ಸಮರದಲ್ಲಿ ದ್ರೋಣನ ರಥದ ಮೂಕನ್ನು ಕೈಯಿಂದ ಹಿಡಿದು ಹಿಂದಕ್ಕೆ ನೂಕಿ ಎಸೆದನು.

07103016a ದ್ರೋಣಸ್ತು ಸತ್ವರೋ ರಾಜನ್ ಕ್ಷಿಪ್ತೋ ಭೀಮೇನ ಸಂಯುಗೇ|

07103016c ರಥಮನ್ಯಂ ಸಮಾಸ್ಥಾಯ ವ್ಯೂಹದ್ವಾರಮುಪಾಯಯೌ||

07103017a ತಸ್ಮಿನ್ ಕ್ಷಣೇ ತಸ್ಯ ಯಂತಾ ತೂರ್ಣಮಶ್ವಾನಚೋದಯತ್|

07103017c ಭೀಮಸೇನಸ್ಯ ಕೌರವ್ಯ ತದದ್ಭುತಮಿವಾಭವತ್||

ರಾಜನ್! ಸಂಯುಗದಲ್ಲಿ ಭೀಮನಿಂದ ಎಸೆಯಲ್ಪಟ್ಟ ದ್ರೋಣನಾದರೋ ತ್ವರೆಮಾಡಿ ಇನ್ನೊಂದು ರಥದಲ್ಲಿ ಕುಳಿತು ವ್ಯೂಹದ್ವಾರದಲ್ಲಿ ಮತ್ತೆ ಕಾಣಿಸಿಕೊಂಡನು. ಅವನ ಸಾರಥಿಯು ಕುದುರೆಗಳನ್ನು ಬೇಗನೆ ಓಡಿಸಿದನು. ಕೌರವ್ಯ! ಭೀಮಸೇನನ ಆ ಕೃತ್ಯವು ಅದ್ಭುತವಾಗಿತ್ತು.

07103018a ತತಃ ಸ್ವರಥಮಾಸ್ಥಾಯ ಭೀಮಸೇನೋ ಮಹಾಬಲಃ|

07103018c ಅಭ್ಯವರ್ತತ ವೇಗೇನ ತವ ಪುತ್ರಸ್ಯ ವಾಹಿನೀಂ||

ಆಗ ಮಹಾಬಲ ಭೀಮಸೇನನು ತನ್ನ ರಥವನ್ನೇರಿ ವೇಗದಿಂದ ನಿನ್ನ ಮಗನ ಸೇನೆಯ ಮೇಲೆ ಎರಗಿದನು.

07103019a ಸ ಮೃದ್ನನ್ ಕ್ಷತ್ರಿಯಾನಾಜೌ ವಾತೋ ವೃಕ್ಷಾನಿವೋದ್ಧತಃ|

07103019c ಅಗಚ್ಚದ್ದಾರಯನ್ಸೇನಾನ್ಸಿಂಧುವೇಗೋ ನಗಾನಿವ||

ಭಿರುಗಾಳಿಯು ವೃಕ್ಷಗಳನ್ನು ಧ್ವಂಸಗೊಳಿಸುವಂತೆ ಅವನು ಕ್ಷತ್ರಿಯರನ್ನು ಧ್ವಂಸಗೊಳಿಸಿದನು. ಮತ್ತು ವೇಗವಾಗಿ ಹರಿದು ಬರುತ್ತಿರುವ ನದಿಯನ್ನು ಪರ್ವತವು ಹೇಗೋ ಹಾಗೆ ಅವರ ಆ ಸೇನೆಗಳನ್ನು ತಡೆಗಟ್ಟಿದನು.

07103020a ಭೋಜಾನೀಕಂ ಸಮಾಸಾದ್ಯ ಹಾರ್ದಿಕ್ಯೇನಾಭಿರಕ್ಷಿತಂ|

07103020c ಪ್ರಮಥ್ಯ ಬಹುಧಾ ರಾಜನ್ಭೀಮಸೇನಃ ಸಮಭ್ಯಯಾತ್||

ರಾಜನ್! ಅನಂತರ ಹಾರ್ದಿಕ್ಯ ಕೃತವರ್ಮನಿಂದ ರಕ್ಷಿತವಾದ ಭೋಜಸೇನೆಯನ್ನು ಚೆನ್ನಾಗಿ ಸದೆಬಡಿದು ದಾಟಿ ಮುಂದುವರೆದನು.

07103021a ಸಂತ್ರಾಸಯನ್ನನೀಕಾನಿ ತಲಶಬ್ದೇನ ಮಾರಿಷ|

07103021c ಅಜಯತ್ ಸರ್ವಸೈನ್ಯಾನಿ ಶಾರ್ದೂಲ ಇವ ಗೋವೃಷಾನ್||

ಮಾರಿಷ! ಚಪ್ಪಾಳೆ ಶಬ್ಧದಿಂದ ಸೇನೆಗಳನ್ನು ಬೆದರಿಸುತ್ತಾ ಭೀಮನು ಹುಲಿಯು ಹಸು ಹೋರಿಗಳನ್ನು ಹೇಗೋ ಹಾಗೆ ಎಲ್ಲ ಸೇನೆಗಳನ್ನೂ ಜಯಿಸಿದನು.

07103022a ಭೋಜಾನೀಕಮತಿಕ್ರಮ್ಯ ಕಾಂಬೋಜಾನಾಂ ಚ ವಾಹಿನೀಂ|

07103022c ತಥಾ ಮ್ಲೇಚ್ಚಗಣಾಂಶ್ಚಾನ್ಯಾನ್ಬಹೂನ್ಯುದ್ಧವಿಶಾರದಾನ್||

07103023a ಸಾತ್ಯಕಿಂ ಚಾಪಿ ಸಂಪ್ರೇಕ್ಷ್ಯ ಯುಧ್ಯಮಾನಂ ನರರ್ಷಭಂ|

07103023c ರಥೇನ ಯತ್ತಃ ಕೌಂತೇಯೋ ವೇಗೇನ ಪ್ರಯಯೌ ತದಾ||

07103024a ಭೀಮಸೇನೋ ಮಹಾರಾಜ ದ್ರಷ್ಟುಕಾಮೋ ಧನಂಜಯಂ|

ಮಹಾರಾಜ! ಭೋಜರ ಮತ್ತು ಕಾಂಬೋಜರ ಸೇನೆಗಳನ್ನು ಅತಿಕ್ರಮಿಸಿ ಹಾಗೆಯೇ ಅನೇಕ ಯುದ್ಧವಿಶಾರದ ಮ್ಲೇಚ್ಛಗಣಗಳನ್ನೂ ಅನ್ಯರನ್ನೂ ಸೋಲಿಸಿ, ಯುದ್ಧಮಾಡುತ್ತಿರುವ ನರರ್ಷಭ ಸಾತ್ಯಕಿಯನ್ನು ಕೂಡ ನೋಡಿ, ಧನಂಜಯನನ್ನು ಕಾಣಲು ಬಯಸಿ ಕೌಂತೇಯ ಭೀಮಸೇನನು ವೇಗವಾಗಿ ರಥದಲ್ಲಿ ಪ್ರಯಾಣಿಸಿದನು.

07103024c ಅತೀತ್ಯ ಸಮರೇ ಯೋಧಾಂಸ್ತಾವಕಾನ್ಪಾಂಡುನಂದನಃ||

07103025a ಸೋಽಪಶ್ಯದರ್ಜುನಂ ತತ್ರ ಯುಧ್ಯಮಾನಂ ನರರ್ಷಭಂ|

07103025c ಸೈಂಧವಸ್ಯ ವಧಾರ್ಥಂ ಹಿ ಪರಾಕ್ರಾಂತಂ ಪರಾಕ್ರಮೀ||

ನಿನ್ನ ಕಡೆಯ ಯೋಧರನ್ನು ಸಮರದಲ್ಲಿ ಅತಿಕ್ರಮಿಸಿ ಪಾಂಡುನಂದನ ಪರಾಕ್ರಮೀ ಭೀಮನು ಸೈಂಧವನ ವಧೆಗೋಸ್ಕರವಾಗಿ ಯುದ್ಧಮಾಡುತ್ತಿದ್ದ ನರರ್ಷಭ ಪರಾಕ್ರಾಂತ ಅರ್ಜುನನನ್ನು ಅಲ್ಲಿ ನೋಡಿದನು.

07103026a ಅರ್ಜುನಂ ತತ್ರ ದೃಷ್ಟ್ವಾಥ ಚುಕ್ರೋಶ ಮಹತೋ ರವಾನ್|

07103026c ತಂ ತು ತಸ್ಯ ಮಹಾನಾದಂ ಪಾರ್ಥಃ ಶುಶ್ರಾವ ನರ್ದತಃ||

ಅಲ್ಲಿ ಅರ್ಜುನನನ್ನು ನೋಡಿ ಮಹಾ ಕೂಗನ್ನು ಕೂಗಿದನು. ಕೂಗುತ್ತಿರುವ ಅವನ ಮಹಾನಾದವು ಪಾರ್ಥ ಅರ್ಜುನನಿಗೆ ಕೇಳಿತು.

07103027a ತತಃ ಪಾರ್ಥೋ ಮಹಾನಾದಂ ಮುಂಚನ್ವೈ ಮಾಧವಶ್ಚ ಹ|

07103027c ಅಭ್ಯಯಾತಾಂ ಮಹಾರಾಜ ನರ್ದಂತೌ ಗೋವೃಷಾವಿವ||

ಮಹಾರಾಜ! ಆ ಮಹಾನಾದವನ್ನು ಕೇಳಿ ಪಾರ್ಥ ಮತ್ತು ಮಾಧವರಿಬ್ಬರೂ ಗೂಳಿಗಳಂತೆ ಜೋರಾಗಿ ಕೂಗಿದರು.

07103028a ವಾಸುದೇವಾರ್ಜುನೌ ಶ್ರುತ್ವಾ ನಿನಾದಂ ತಸ್ಯ ಶುಷ್ಮಿಣಃ|

07103028c ಪುನಃ ಪುನಃ ಪ್ರಣದತಾಂ ದಿದೃಕ್ಷಂತೌ ವೃಕೋದರಂ||

ಭೀಮಸೇನನ ಗರ್ಜನೆಯನ್ನು ಕೇಳಿ ವಾಸುದೇವ-ಅರ್ಜುನರು ವೃಕೋದರನನ್ನು ಕಾಣಲೋಸುಗ ಪುನಃ ಪುನಃ ಗರ್ಜಿಸಿದರು.

07103029a ಭೀಮಸೇನರವಂ ಶ್ರುತ್ವಾ ಫಲ್ಗುನಸ್ಯ ಚ ಧನ್ವಿನಃ|

07103029c ಅಪ್ರೀಯತ ಮಹಾರಾಜ ಧರ್ಮಪುತ್ರೋ ಯುಧಿಷ್ಠಿರಃ||

ಮಹಾರಾಜ! ಭೀಮಸೇನನ ಮತ್ತು ಧನ್ವಿ ಅರ್ಜುನನ ಕೂಗುಗಳನ್ನು ಕೇಳಿ ಧರ್ಮಪುತ್ರ ಯುಧಿಷ್ಠಿರನು ಅತ್ಯಂತ ಪ್ರೀತನಾದನು.

07103030a ವಿಶೋಕಶ್ಚಾಭವದ್ರಾಜಾ ಶ್ರುತ್ವಾ ತಂ ನಿನದಂ ಮಹತ್|

07103030c ಧನಂಜಯಸ್ಯ ಚ ರಣೇ ಜಯಮಾಶಾಸ್ತವಾನ್ವಿಭುಃ||

ಭೀಮನ ಮತ್ತು ಧನಂಜಯನ ಮಹಾನಿನಾದವನ್ನು ಕೇಳಿ ರಾಜಾ ವಿಭುವು ಶೋಕವನ್ನು ಕಳೆದುಕೊಂಡು ಜಯದ ಆಸೆಯನ್ನು ಹೊತ್ತನು.

07103031a ತಥಾ ತು ನರ್ದಮಾನೇ ವೈ ಭೀಮಸೇನೇ ರಣೋತ್ಕಟೇ|

07103031c ಸ್ಮಿತಂ ಕೃತ್ವಾ ಮಹಾಬಾಹುರ್ಧರ್ಮಪುತ್ರೋ ಯುಧಿಷ್ಠಿರಃ||

ರಣೋತ್ಕಟ ಭೀಮಸೇನನು ಹಾಗೆ ಗರ್ಜಿಸುತ್ತಿರಲು ಮಹಾಬಾಹು ಧರ್ಮಪುತ್ರ ಯುಧಿಷ್ಠಿರನು ನಸುನಕ್ಕನು.

07103032a ಹೃದ್ಗತಂ ಮನಸಾ ಪ್ರಾಹ ಧ್ಯಾತ್ವಾ ಧರ್ಮಭೃತಾಂ ವರಃ|

07103032c ದತ್ತಾ ಭೀಮ ತ್ವಯಾ ಸಂವಿತ್ಕೃತಂ ಗುರುವಚಸ್ತಥಾ||

ಆ ಧರ್ಮಭೃತರಲ್ಲಿ ಶ್ರೇಷ್ಠನು ಹೃದಯದಿಂದ ಹೊರಟ ಮಾತನ್ನು ಮನಸ್ಸಿನಲ್ಲಿಯೇ ಅಂದುಕೊಂಡನು: “ಭೀಮ! ನೀನು ನನಗೆ ಈ ಸಂದೇಶವನ್ನಿತ್ತು ಹಿರಿಯನ ವಚನದಂತೆಯೇ ಮಾಡಿದ್ದೀಯೆ!

07103033a ನ ಹಿ ತೇಷಾಂ ಜಯೋ ಯುದ್ಧೇ ಯೇಷಾಂ ದ್ವೇಷ್ಟಾಸಿ ಪಾಂಡವ|

07103033c ದಿಷ್ಟ್ಯಾ ಜೀವತಿ ಸಂಗ್ರಾಮೇ ಸವ್ಯಸಾಚೀ ಧನಂಜಯಃ||

ಪಾಂಡವ! ನಿನ್ನನ್ನು ದ್ವೇಷಿಸುವವರಿಗೆ ಯುದ್ಧದಲ್ಲಿ ಜಯವೆಂಬುದೇ ಇಲ್ಲ. ಅದೃಷ್ಟವಶಾತ್ ಸವ್ಯಸಾಚೀ ಧನಂಜಯನು ಸಂಗ್ರಾಮದಲ್ಲಿ ಜೀವಂತವಿದ್ದಾನೆ.

07103034a ದಿಷ್ಟ್ಯಾ ಚ ಕುಶಲೀ ವೀರಃ ಸಾತ್ಯಕಿಃ ಸತ್ಯವಿಕ್ರಮಃ|

07103034c ದಿಷ್ಟ್ಯಾ ಶೃಣೋಮಿ ಗರ್ಜಂತೌ ವಾಸುದೇವಧನಂಜಯೌ||

ಒಳ್ಳೆಯದಾಯಿತು! ವೀರ ಸತ್ಯವಿಕ್ರಮ ಸಾತ್ಯಕಿಯು ಕುಶಲನಾಗಿದ್ದಾನೆ. ಅದೃಷ್ಟವಶಾತ್ ವಾಸುದೇವ-ಧನಂಜಯರ ಗರ್ಜನೆಯನ್ನು ಕೇಳುತ್ತಿದ್ದೇನೆ!

07103035a ಯೇನ ಶಕ್ರಂ ರಣೇ ಜಿತ್ವಾ ತರ್ಪಿತೋ ಹವ್ಯವಾಹನಃ|

07103035c ಸ ಹಂತಾ ದ್ವಿಷತಾಂ ಸಂಖ್ಯೇ ದಿಷ್ಟ್ಯಾ ಜೀವತಿ ಫಲ್ಗುನಃ||

ಒಳ್ಳೆಯದಾಯಿತು! ರಣದಲ್ಲಿ ಶಕ್ರನನ್ನು ಗೆದ್ದು ಹವ್ಯವಾಹನನನ್ನು ತೃಪ್ತಿಪಡಿಸಿದ ಫಲ್ಗುನನು ರಣದಲ್ಲಿ ದ್ವೇಷಿಗಳನ್ನು ಸಂಹರಿಸಿ ಜೀವಂತನಿದ್ದಾನೆ!

07103036a ಯಸ್ಯ ಬಾಹುಬಲಂ ಸರ್ವೇ ವಯಮಾಶ್ರಿತ್ಯ ಜೀವಿತಾಃ|

07103036c ಸ ಹಂತಾ ರಿಪುಸೈನ್ಯಾನಾಂ ದಿಷ್ಟ್ಯಾ ಜೀವತಿ ಫಲ್ಗುನಃ||

ಒಳ್ಳೆಯದಾಯಿತು! ಯಾರ ಬಾಹುಬಲವನ್ನು ಆಶ್ರಯಿಸಿ ನಾವು ಜೀವಿತರಾಗಿದ್ದೆವೋ ಆ ಫಲ್ಗುನನು ಶತ್ರುಸೇನೆಗಳನ್ನು ಸಂಹರಿಸಿ ಜೀವಂತವಿದ್ದಾನೆ!

07103037a ನಿವಾತಕವಚಾ ಯೇನ ದೇವೈರಪಿ ಸುದುರ್ಜಯಾಃ|

07103037c ನಿರ್ಜಿತಾ ರಥಿನೈಕೇನ ದಿಷ್ಟ್ಯಾ ಪಾರ್ಥಃ ಸ ಜೀವತಿ||

ಒಳ್ಳೆಯದಾಯಿತು! ದೇವತೆಗಳಿಗೂ ದುರ್ಜಯರಾದ ನಿವಾತಕವಚರನ್ನು ಯಾವ ಒಬ್ಬನೇ ರಥಿಯು ಗೆದ್ದನೋ ಆ ಪಾರ್ಥನು ಜೀವಿಸಿದ್ದಾನೆ.

07103038a ಕೌರವಾನ್ಸಹಿತಾನ್ಸರ್ವಾನ್ಗೋಗ್ರಹಾರ್ಥೇ ಸಮಾಗತಾನ್|

07103038c ಯೋಽಜಯನ್ಮತ್ಸ್ಯನಗರೇ ದಿಷ್ಟ್ಯಾ ಪಾರ್ಥಃ ಸ ಜೀವತಿ||

ಒಳ್ಳೆಯದಾಯಿತು! ಮತ್ಸ್ಯನಗರದಲ್ಲಿ ಗೋವುಗಳನ್ನು ಹಿಡಿಯಲು ಒಟ್ಟಿಗೇ ಸೇರಿದ್ದ ಕೌರವರೆಲ್ಲರನ್ನೂ ಜಯಿಸಿದ ಪಾರ್ಥನು ಜೀವಿಸಿದ್ದಾನೆ.

07103039a ಕಾಲಕೇಯಸಹಸ್ರಾಣಿ ಚತುರ್ದಶ ಮಹಾರಣೇ|

07103039c ಯೋಽವಧೀದ್ಭುಜವೀರ್ಯೇಣ ದಿಷ್ಟ್ಯಾ ಪಾರ್ಥಃ ಸ ಜೀವತಿ||

ಒಳ್ಳೆಯದಾಯಿತು! ಮಹಾರಣದಲ್ಲಿ ಹದಿನಾಲ್ಕು ಸಾವಿರ ಕಾಲಕೇಯರನ್ನು ಭುಜವೀರ್ಯದಿಂದ ವಧಿಸಿದ ಪಾರ್ಥನು ಜೀವಿಸಿದ್ದಾನೆ.

07103040a ಗಂಧರ್ವರಾಜಂ ಬಲಿನಂ ದುರ್ಯೋಧನಕೃತೇನ ವೈ|

07103040c ಜಿತವಾನ್ಯೋಽಸ್ತ್ರವೀರ್ಯೇಣ ದಿಷ್ಟ್ಯಾ ಪಾರ್ಥಃ ಸ ಜೀವತಿ||

ಒಳ್ಳೆಯದಾಯಿತು! ದುರ್ಯೋಧನನಿಗಾಗಿ ಬಲಶಾಲೀ ಗಂಧರ್ವರಾಜನನ್ನು ಅಸ್ತ್ರವೀರ್ಯದಿಂದ ಜಯಿಸಿದ ಪಾರ್ಥನು ಜೀವಿಸಿದ್ದಾನೆ.

07103041a ಕಿರೀಟಮಾಲೀ ಬಲವಾನ್ ಶ್ವೇತಾಶ್ವಃ ಕೃಷ್ಣಸಾರಥಿಃ|

07103041c ಮಮ ಪ್ರಿಯಶ್ಚ ಸತತಂ ದಿಷ್ಟ್ಯಾ ಜೀವತಿ ಫಲ್ಗುನಃ||

ಒಳ್ಳೆಯದಾಯಿತು! ನನಗೆ ಸತತವೂ ಪ್ರಿಯನಾಗಿರುವ ಕಿರೀಟಮಾಲೀ, ಬಲವಾನ್, ಶ್ವೇತಾಶ್ವ, ಕೃಷ್ಣಸಾರಥಿ ಫಲ್ಗುನನು ಜೀವಿಸಿದ್ದಾನೆ.

07103042a ಪುತ್ರಶೋಕಾಭಿಸಂತಪ್ತಶ್ಚಿಕೀರ್ಷುಃ ಕರ್ಮ ದುಷ್ಕರಂ|

07103042c ಜಯದ್ರಥವಧಾನ್ವೇಷೀ ಪ್ರತಿಜ್ಞಾಂ ಕೃತವಾನ್ ಹಿ ಯಃ|

07103042e ಕಚ್ಚಿತ್ಸ ಸೈಂಧವಂ ಸಂಖ್ಯೇ ಹನಿಷ್ಯತಿ ಧನಂಜಯಃ||

ಪುತ್ರಶೋಕದಿಂದ ಸಂತಪ್ತನಾಗಿ ಜಯದ್ರಥನ ವದೆಯಂಥಹ ದುಷ್ಕರ ಕರ್ಮವನ್ನು ಮಾಡಲು ಬಯಸಿ ಪ್ರತಿಜ್ಞೆಯನ್ನು ಕೈಗೊಂಡಿರುವ ಧನಂಜಯನು ರಣದಲ್ಲಿ ಸೈಂಧವನನ್ನು ಕೊಲ್ಲುತ್ತಾನೆಯೇ?

07103043a ಕಚ್ಚಿತ್ತೀರ್ಣಪ್ರತಿಜ್ಞಂ ಹಿ ವಾಸುದೇವೇನ ರಕ್ಷಿತಂ|

07103043c ಅನಸ್ತಮಿತ ಆದಿತ್ಯೇ ಸಮೇಷ್ಯಾಮ್ಯಹಮರ್ಜುನಂ||

ವಾಸುದೇವನಿಂದ ರಕ್ಷಿತನಾಗಿ, ಆದಿತ್ಯನು ಅಸ್ತನಾಗುವುದರೊಳಗೇ ಪ್ರತಿಜ್ಞೆಯನ್ನು ಪೂರೈಸಿದ ಅರ್ಜುನನನ್ನು ನಾನು ಭೇಟಿಯಾಗಬಲ್ಲೆನೇ?

07103044a ಕಚ್ಚಿತ್ಸೈಂಧವಕೋ ರಾಜಾ ದುರ್ಯೋಧನಹಿತೇ ರತಃ|

07103044c ನಂದಯಿಷ್ಯತ್ಯಮಿತ್ರಾಣಿ ಫಲ್ಗುನೇನ ನಿಪಾತಿತಃ||

ದುರ್ಯೋಧನನ ಹಿತದಲ್ಲಿಯೇ ನಿರತನಾಗಿರುವ ರಾಜಾ ಸೈಂಧವನು ಫಲ್ಗುನನಿಂದ ಹತನಾಗಿ ಬಿದ್ದು ಶತ್ರುಗಳಿಗೆ[1] ಆನಂದವನ್ನುಂಟು ಮಾಡುತ್ತಾನೆಯೇ?

07103045a ಕಚ್ಚಿದ್ದುರ್ಯೋಧನೋ ರಾಜಾ ಫಲ್ಗುನೇನ ನಿಪಾತಿತಂ|

07103045c ದೃಷ್ಟ್ವಾ ಸೈಂಧವಕಂ ಸಂಖ್ಯೇ ಶಮಮಸ್ಮಾಸು ಧಾಸ್ಯತಿ||

ರಣದಲ್ಲಿ ಫಲ್ಗುನನು ಉರುಳಿಸಿದ ಸೈಂಧವಕನನ್ನು ನೋಡಿಯಾದರೂ ರಾಜಾ ದುರ್ಯೋಧನನು ನಮ್ಮೊಡನೆ ಸಂಧಾನವನ್ನು ಮಾಡಿಕೊಳ್ಳುವನೇ?

07103046a ದೃಷ್ಟ್ವಾ ವಿನಿಹತಾನ್ಭ್ರಾತೄನ್ಭೀಮಸೇನೇನ ಸಂಯುಗೇ|

07103046c ಕಚ್ಚಿದ್ದುರ್ಯೋಧನೋ ಮಂದಃ ಶಮಮಸ್ಮಾಸು ಧಾಸ್ಯತಿ||

ರಣದಲ್ಲಿ ಭೀಮಸೇನನು ಸಂಹರಿಸಿದ ಸಹೋದರರನ್ನು ನೋಡಿಯಾದರೂ ಮಂದಬುದ್ಧಿ ದುರ್ಯೋಧನನು ನಮ್ಮೊಡನೆ ಸಂಧಾನವನ್ನು ಮಾಡಿಕೊಳ್ಳುವನೇ?

07103047a ದೃಷ್ಟ್ವಾ ಚಾನ್ಯಾನ್ಬಹೂನ್ಯೋಧಾನ್ಪಾತಿತಾನ್ಧರಣೀತಲೇ|

07103047c ಕಚ್ಚಿದ್ದುರ್ಯೋಧನೋ ಮಂದಃ ಪಶ್ಚಾತ್ತಾಪಂ ಕರಿಷ್ಯತಿ||

ಇನ್ನೂ ಅನೇಕ ಯೋಧರು ರಣಭೂಮಿಯಲ್ಲಿ ಹತರಾಗಿ ಬಿದ್ದಿರುವುದನ್ನು ನೋಡಿಯಾದರೂ ಮಂದಬುದ್ಧಿ ದುರ್ಯೋಧನನು ಪಶ್ಚಾತ್ತಾಪ ಪಡುತ್ತಾನೆಯೇ?

07103048a ಕಚ್ಚಿದ್ಭೀಷ್ಮೇಣ ನೋ ವೈರಮೇಕೇನೈವ ಪ್ರಶಾಮ್ಯತಿ|

07103048c ಶೇಷಸ್ಯ ರಕ್ಷಣಾರ್ಥಂ ಚ ಸಂಧಾಸ್ಯತಿ ಸುಯೋಧನಃ||

ಭೀಷ್ಮನೊಬ್ಬನ ಪತನದೊಂದಿಗೇ ನಮ್ಮ ಈ ವೈರವು ಕೊನೆಗೊಳ್ಳುತ್ತದೆಯೇ? ಮತ್ತು ಉಳಿದವರ ರಕ್ಷಣೆಗಾಗಿಯಾದರೂ ಸುಯೋಧನನು ಸಂಧಿಮಾಡಿಕೊಳ್ಳುತ್ತಾನೆಯೇ?”

07103049a ಏವಂ ಬಹುವಿಧಂ ತಸ್ಯ ಚಿಂತಯಾನಸ್ಯ ಪಾರ್ಥಿವ|

07103049c ಕೃಪಯಾಭಿಪರೀತಸ್ಯ ಘೋರಂ ಯುದ್ಧಮವರ್ತತ||

ಹೀಗೆ ಬಹುವಿಧವಾಗಿ ಕೃಪೆಯಿಂದ ತುಂಬಿ ತುಳುಕುತ್ತಿದ್ದ ರಾಜ ಯುಧಿಷ್ಠಿರನು ಯೋಚಿಸುತ್ತಿರಲು, ಇನ್ನೊಂದುಕಡೆ ಘೋರ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭಿಮಸೇನಪ್ರವೇಶೇ ಯುಧಿಷ್ಠಿರಹರ್ಷೇ ತ್ರ್ಯಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೀಮಸೇನಪ್ರವೇಶೇ ಯುಧಿಷ್ಠಿರಹರ್ಷ ಎನ್ನುವ ನೂರಾಮೂರನೇ ಅಧ್ಯಾಯವು.

Image result for lotus against white background

[1] ಪಾಂಡವರಿಗೆ - ಸೈಂಧವನ ಶತ್ರುಗಳಿಗೆ ಎಂದರ್ಥ

Comments are closed.