Drona Parva: Chapter 100

ದ್ರೋಣ ಪರ್ವ: ಜಯದ್ರಥವಧ ಪರ್ವ

೧೦೦

ಸಂಕುಲಯುದ್ಧ (೧-೨೯).

07100001 ಧೃತರಾಷ್ಟ್ರ ಉವಾಚ|

07100001a ಕಿಂ ತಸ್ಯಾಂ ಮಮ ಸೇನಾಯಾಂ ನಾಸನ್ಕೇ ಚಿನ್ಮಹಾರಥಾಃ|

07100001c ಯೇ ತಥಾ ಸಾತ್ಯಕಿಂ ಯಾಂತಂ ನೈವಾಘ್ನನ್ನಾಪ್ಯವಾರಯನ್||

ಧೃತರಾಷ್ಟ್ರನು ಹೇಳಿದನು: “ಹಾಗೆ ಅರ್ಜುನನ ಕಡೆಗೆ ಹೋಗುತ್ತಿರುವ ಸಾತ್ಯಕಿಯನ್ನು ಸಂಹರಿಸಬಲ್ಲ ಅಥವಾ ತಡೆಯಬಲ್ಲ ಯಾವ ಮಹಾರಥರೂ ನನ್ನ ಸೇನೆಗಳಲ್ಲಿರಲಿಲ್ಲವೇ?

07100002a ಏಕೋ ಹಿ ಸಮರೇ ಕರ್ಮ ಕೃತವಾನ್ಸತ್ಯವಿಕ್ರಮಃ|

07100002c ಶಕ್ರತುಲ್ಯಬಲೋ ಯುದ್ಧೇ ಮಹೇಂದ್ರೋ ದಾನವೇಷ್ವಿವ||

ಯುದ್ಧದಲ್ಲಿ ದಾನವರೊಡನೆ ಹೋರಾಡುವ ಮಹೇಂದ್ರನ ಬಲಕ್ಕೆ ಸಮಾನ ಬಲವುಳ್ಳ ಸತ್ಯವಿಕ್ರಮ ಸಾತ್ಯಕಿಯು ಒಬ್ಬನೇ ಸಮರದಲ್ಲಿ ಅದ್ಭುತ ಕರ್ಮವೆಸಗಿದ್ದಾನೆ!

07100003a ಅಥ ವಾ ಶೂನ್ಯಮಾಸೀತ್ತದ್ಯೇನ ಯಾತಃ ಸ ಸಾತ್ಯಕಿಃ|

07100003c ಏಕೋ ವೈ ಬಹುಲಾಃ ಸೇನಾಃ ಪ್ರಮೃದ್ನನ್ಪುರುಷರ್ಷಭಃ||

ಅಥವಾ ಸಾತ್ಯಕಿಯು ಯಾವ ಮಾರ್ಗದಿಂದ ಹೋಗುತ್ತಿದ್ದನೋ ಆ ಮಾರ್ಗವು ಶ್ಯೂನ್ಯವಾಗಿ ಹೋಗಿತ್ತೇ[1]? ಆ ಪುರುಷರ್ಭನು ಒಬ್ಬನೇ ಅನೇಕ ಸೇನೆಗಳನ್ನು ಸದೆಬಡಿದನು.

07100004a ಕಥಂ ಚ ಯುಧ್ಯಮಾನಾನಾಮಪಕ್ರಾಂತೋ ಮಹಾತ್ಮನಾಂ|

07100004c ಏಕೋ ಬಹೂನಾಂ ಶೈನೇಯಸ್ತನ್ಮಮಾಚಕ್ಷ್ವ ಸಂಜಯ||

ಸಂಜಯ! ಶಿನಿಯ ಮೊಮ್ಮಗ ಸಾತ್ಯಕಿಯು ಒಬ್ಬನೇ ಹೇಗೆ ಯುದ್ಧಮಾಡುತ್ತಿದ್ದ ಅನೇಕ ಮಹಾತ್ಮರನ್ನು ಅತಿಕ್ರಮಿಸಿ ಹೋದನೆಂಬುದನ್ನು ನನಗೆ ಹೇಳು!”

07100005 ಸಂಜಯ ಉವಾಚ|

07100005a ರಾಜನ್ಸೇನಾಸಮುದ್ಯೋಗೋ ರಥನಾಗಾಶ್ವಪತ್ತಿಮಾನ್|

07100005c ತುಮುಲಸ್ತವ ಸೈನ್ಯಾನಾಂ ಯುಗಾಂತಸದೃಶೋಽಭವತ್||

ಸಂಜಯನು ಹೇಳಿದನು: “ರಾಜನ್! ರಥ-ಗಜ-ಅಶ್ವ-ಪದಾತಿಗಳಿಂದ ಸಮೃದ್ಧವಾದ ನಿನ್ನ ಸೇನೆಗಳು ಉದ್ಯೋಗಶೀಲರಾಗಿದ್ದು, ಅವುಗಳ ತುಮುಲವು ಯುಗಾಂತವೋ ಎಂಬಂತೆ ಇದ್ದಿತ್ತು.

07100006a ಆಹ್ಣಿಕೇಷು ಸಮೂಹೇಷು ತವ ಸೈನ್ಯಸ್ಯ ಮಾನದ|

07100006c ನಾಸ್ತಿ ಲೋಕೇ ಸಮಃ ಕಶ್ಚಿತ್ಸಮೂಹ ಇತಿ ಮೇ ಮತಿಃ||

ಮಾನದ! ನಿನ್ನ ಸೇನಾ ಸಮೂಹಗಳಂತಹ ಸೇನೆಗೆ ಸಮನಾದ ಸಮೂಹವು ಲೋಕಗಳಲ್ಲಿಯೇ ಎಲ್ಲಿಯೂ ಸೇರಿರಲಿಲ್ಲ ಎಂದು ನನ್ನ ಅಭಿಪ್ರಾಯ.

07100007a ತತ್ರ ದೇವಾಃ ಸ್ಮ ಭಾಷಂತೇ ಚಾರಣಾಶ್ಚ ಸಮಾಗತಾಃ|

07100007c ಏತದಂತಾಃ ಸಮೂಹಾ ವೈ ಭವಿಷ್ಯಂತಿ ಮಹೀತಲೇ||

ಅಲ್ಲಿ ಸೇರಿದ್ದ ದೇವತೆಗಳೂ ಮತ್ತು ಚಾರಣರೂ “ಭೂಮಿಯಲ್ಲಿ ಇಂತಹ ಸೇನಾ ಸಮೂಹವು ಇದೇ ಕೊನೆಯದಾಗುತ್ತದೆ!” ಎಂದು ಹೇಳಿಕೊಳುತ್ತಿದ್ದರು.

07100008a ನ ಚೈವ ತಾದೃಶಃ ಕಶ್ಚಿದ್ವ್ಯೂಹ ಆಸೀದ್ವಿಶಾಂ ಪತೇ|

07100008c ಯಾದೃಗ್ಜಯದ್ರಥವಧೇ ದ್ರೋಣೇನ ವಿಹಿತೋಽಭವತ್||

ವಿಶಾಂಪತೇ! ಜಯದ್ರಥನ ವಧೆಯ ಸಮಯದಲ್ಲಿ ದ್ರೋಣನು ನಿರ್ಮಿಸಿದ ಅದರಂಥಹ ವ್ಯೂಹವು ಎಂದೂ ರಚನೆಗೊಂಡಿರಲಿಲ್ಲ.

07100009a ಚಂಡವಾತಾಭಿಪನ್ನಾನಾಂ ಸಮುದ್ರಾಣಾಮಿವ ಸ್ವನಃ|

07100009c ರಣೇಽಭವದ್ಬಲೌಘಾನಾಮನ್ಯೋನ್ಯಮಭಿಧಾವತಾಂ||

ರಣದಲ್ಲಿ ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಆ ಸೇನೆಗಳಿಂದ ಹೊರಟ ಶಬ್ಧವು ಚಂಡಮಾರುತಕ್ಕೆ ಸಿಲುಕಿದ ಸಮುದ್ರದ ಭೋರ್ಗರೆತಕ್ಕೆ ಸಮನಾಗಿತ್ತು.

07100010a ಪಾರ್ಥಿವಾನಾಂ ಸಮೇತಾನಾಂ ಬಹೂನ್ಯಾಸನ್ನರೋತ್ತಮ|

07100010c ತ್ವದ್ಬಲೇ ಪಾಂಡವಾನಾಂ ಚ ಸಹಸ್ರಾಣಿ ಶತಾನಿ ಚ||

ನರೋತ್ತಮ! ಸೇರಿರುವ ನಿನ್ನ ಮತ್ತು ಪಾಂಡವರ ಸೇನೆಗಳಲ್ಲಿ ನೂರಾರು ಸಹಸ್ರಾರು ಪಾರ್ಥಿವರಿದ್ದರು.

07100011a ಸಂರಬ್ಧಾನಾಂ ಪ್ರವೀರಾಣಾಂ ಸಮರೇ ದೃಢಕರ್ಮಣಾಂ|

07100011c ತತ್ರಾಸೀತ್ಸುಮಹಾಂ ಶಬ್ದಸ್ತುಮುಲೋ ಲೋಮಹರ್ಷಣ||

ಸಮರದಲ್ಲಿ ಕ್ರುದ್ಧರಾಗಿರುವ ದೃಢಕರ್ಮಿ ಪ್ರವೀರರ ರೋಮಾಂಚಕಾರೀ ಮಹಾ ತುಮುಲಶಬ್ಧವು ಉಂಟಾಯಿತು.

07100012a ಅಥಾಕ್ರಂದದ್ಭೀಮಸೇನೋ ಧೃಷ್ಟದ್ಯುಮ್ನಶ್ಚ ಮಾರಿಷ|

07100012c ನಕುಲಃ ಸಹದೇವಶ್ಚ ಧರ್ಮರಾಜಶ್ಚ ಪಾಂಡವಃ||

ಮಾರಿಷ! ಭೀಮಸೇನ, ಧೃಷ್ಟದ್ಯುಮ್ನ, ನಕುಲ, ಸಹದೇವ ಮತ್ತು ಪಾಂಡವ ಧರ್ಮರಾಜರು ಜೋರಾಗಿ ಕೂಗಿಕೊಳ್ಳುತ್ತಿದ್ದರು:

07100013a ಆಗಚ್ಚತ ಪ್ರಹರತ ಬಲವತ್ಪರಿಧಾವತ|

07100013c ಪ್ರವಿಷ್ಟಾವರಿಸೇನಾಂ ಹಿ ವೀರೌ ಮಾಧವಪಾಂಡವೌ||

“ಬೇಗಬನ್ನಿರಿ! ಶಕ್ತಿಯನ್ನುಪಯೋಗಿಸಿ ಪ್ರಹರಿಸಿ! ವೀರರಾದ ಮಾಧವ-ಪಾಂಡವರು ಅರಿಸೇನೆಯನ್ನು ಪ್ರವೇಶಿಸಿಬಿಟ್ಟಿದ್ದಾರೆ!

07100014a ಯಥಾ ಸುಖೇನ ಗಚ್ಚೇತಾಂ ಜಯದ್ರಥವಧಂ ಪ್ರತಿ|

07100014c ತಥಾ ಪ್ರಕುರುತ ಕ್ಷಿಪ್ರಮಿತಿ ಸೈನ್ಯಾನ್ಯಚೋದಯತ್|

07100014e ತಯೋರಭಾವೇ ಕುರವಃ ಕೃತಾರ್ಥಾಃ ಸ್ಯುರ್ವಯಂ ಜಿತಾಃ||

ಜಯದ್ರಥನ ವಧೆಯು ಸುಲಭವಾಗಿ ನಡೆಯುವಂತೆ ಮಾಡಲು ಅವಸರಮಾಡಿರಿ!” ಎಂದು ಸೇನೆಗಳನ್ನು ಯುಧಿಷ್ಠಿರನು ಹುರಿದುಂಬಿಸಿದನು. “ಅವರಿಬ್ಬರೂ ಇಲ್ಲದಿರುವಾಗ ಕುರುಗಳು ನಮ್ಮನ್ನು ಜಯಿಸಿ ಯಶಸ್ವಿಗಳಾಗಿಬಿಡಬಹುದು!

07100015a ತೇ ಯೂಯಂ ಸಹಿತಾ ಭೂತ್ವಾ ತೂರ್ಣಮೇವ ಬಲಾರ್ಣವಂ|

07100015c ಕ್ಷೋಭಯಧ್ವಂ ಮಹಾವೇಗಾಃ ಪವನಾಃ ಸಾಗರಂ ಯಥಾ||

ಭಿರುಗಾಳಿಯು ಹೇಗೆ ಮಹಾವೇಗದಿಂದ ಬೀಸಿ ಸಾಗರವನ್ನು ಅಲ್ಲೋಲಕಲ್ಲೋಲಮಾಡುವುದೋ ಹಾಗೆ ನೀವು ಎಲ್ಲರೂ ಒಟ್ಟಾಗಿ ಬೇಗನೇ ಕುರುಸೇನೆಯನ್ನು ಕಲಕಿಬಿಡಿ!”

07100016a ಭೀಮಸೇನೇನ ತೇ ರಾಜನ್ಪಾಂಚಾಲ್ಯೇನ ಚ ಚೋದಿತಾಃ|

07100016c ಆಜಘ್ನುಃ ಕೌರವಾನ್ಸಂಖ್ಯೇ ತ್ಯಕ್ತ್ವಾಸೂನಾತ್ಮನಃ ಪ್ರಿಯಾನ್||

ರಾಜನ್! ಹೀಗೆ ಭೀಮಸೇನ ಮತ್ತು ಪಾಂಚಾಲ್ಯ ಧೃಷ್ಟದ್ಯುಮ್ನರು ಪ್ರಚೋದಿಸಲು ಅವರು ಪ್ರಿಯಪ್ರಾಣಗಳನ್ನೂ ತೊರೆದು ರಣದಲ್ಲಿ ಕೌರವರನ್ನು ಸಂಹರಿಸಿದರು.

07100017a ಇಚ್ಚಂತೋ ನಿಧನಂ ಯುದ್ಧೇ ಶಸ್ತ್ರೈರುತ್ತಮತೇಜಸಃ|

07100017c ಸ್ವರ್ಗಾರ್ಥಂ ಮಿತ್ರಕಾರ್ಯಾರ್ಥಂ ನಾಭ್ಯರಕ್ಷಂತ ಜೀವಿತಂ||

ಆ ಉತ್ತಮತೇಜಸ್ಸುಳ್ಳವರು ಯುದ್ಧ ಶಸ್ತ್ರಗಳಿಂದ ಸಾವನ್ನು ಬಯಸಿ, ಮಿತ್ರಕಾರ್ಯಾರ್ಥವಾಗಿ ಮತ್ತು ಸ್ವರ್ಗಾರ್ಥವಾಗಿ ತಮ್ಮ ಜೀವವನ್ನೇ ರಕ್ಷಿಸಿಕೊಳ್ಳುತ್ತಿರಲಿಲ್ಲ.

07100018a ತಥೈವ ತಾವಕಾ ರಾಜನ್ಪ್ರಾರ್ಥಯಂತೋ ಮಹದ್ಯಶಃ|

07100018c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಯುದ್ಧಾಯೈವೋಪತಸ್ಥಿರೇ||

ರಾಜನ್! ಹಾಗೆಯೇ ನಿನ್ನವರು ಕೂಡ ಮಹಾ ಯಶಸ್ಸನ್ನು ಬಯಸಿ ಯುದ್ಧದಲ್ಲಿಯೇ ಶ್ರೇಷ್ಠ ಬುದ್ಧಿಯನ್ನಿರಿಸಿ ಯುದ್ಧದಲ್ಲಿ ನಿರತರಾಗಿದ್ದರು.

07100019a ತಸ್ಮಿಂಸ್ತು ತುಮುಲೇ ಯುದ್ಧೇ ವರ್ತಮಾನೇ ಮಹಾಭಯೇ|

07100019c ಹತ್ವಾ ಸರ್ವಾಣಿ ಸೈನ್ಯಾನಿ ಪ್ರಾಯಾತ್ಸಾತ್ಯಕಿರರ್ಜುನಂ||

ಮಹಾಭಯವನ್ನುಂಟುಮಾಡಿ ನಡೆಯುತ್ತಿದ್ದ ಆ ತುಮುಲ ಯುದ್ಧದಲ್ಲಿ ಸರ್ವ ಸೇನೆಗಳನ್ನೂ ಸಂಹರಿಸಿ ಸಾತ್ಯಕಿಯು ಅರ್ಜುನನಿದ್ದಲ್ಲಿಗೆ ನಡೆದನು.

07100020a ಕವಚಾನಾಂ ಪ್ರಭಾಸ್ತತ್ರ ಸೂರ್ಯರಶ್ಮಿವಿಚಿತ್ರಿತಾಃ|

07100020c ದೃಷ್ಟೀಃ ಸಂಖ್ಯೇ ಸೈನಿಕಾನಾಂ ಪ್ರತಿಜಘ್ನುಃ ಸಮಂತತಃ||

ಅಲ್ಲಿ ಕವಚಗಳ ಮೇಲೆ ಬಿದ್ದ ಸೂರ್ಯನ ರಶ್ಮಿಗಳು ಹೊರಸೂಸಿ ರಣದ ಎಲ್ಲಕಡೆಗಳಲ್ಲಿ ಸೈನಿಕರ ದೃಷ್ಟಿಯನ್ನೇ ಕೋರೈಸಿದವು.

07100021a ತಥಾ ಪ್ರಯತಮಾನೇಷು ಪಾಂಡವೇಯೇಷು ನಿರ್ಭಯಃ|

07100021c ದುರ್ಯೋಧನೋ ಮಹಾರಾಜ ವ್ಯಗಾಹತ ಮಹದ್ಬಲಂ||

ಮಹಾರಾಜ! ಹಾಗೆ ನಿರ್ಭಯವಾಗಿ ಪ್ರಯತ್ನಿಸಿ ಹೋರಡುತ್ತಿದ್ದ ಪಾಂಡವೇಯರ ಆ ಮಹಾಬಲವನ್ನು ದುರ್ಯೋಧನನು ಪ್ರವೇಶಿಸಿದನು.

07100022a ಸ ಸನ್ನಿಪಾತಸ್ತುಮುಲಸ್ತೇಷಾಂ ತಸ್ಯ ಚ ಭಾರತ|

07100022c ಅಭವತ್ಸರ್ವಸೈನ್ಯಾನಾಮಭಾವಕರಣೋ ಮಹಾನ್||

ಭಾರತ! ಅವನು ಆಕ್ರಮಣಿಸಲು ಅವನ ಮತ್ತು ಅವರ ನಡುವೆ ನಡೆದ ಮಹಾಯುದ್ಧವು ಸರ್ವಸೈನ್ಯಗಳ ಕ್ಷಯಕರವಾಗಿ ಪರಿಣಮಿಸಿತು.”

07100023 ಧೃತರಾಷ್ಟ್ರ ಉವಾಚ|

07100023a ತಥಾ ಗತೇಷು ಸೈನ್ಯೇಷು ತಥಾ ಕೃಚ್ಚ್ರಗತಃ ಸ್ವಯಂ|

07100023c ಕಚ್ಚಿದ್ದುರ್ಯೋಧನಃ ಸೂತ ನಾಕಾರ್ಷೀತ್ಪೃಷ್ಠತೋ ರಣಂ||

ಧೃತರಾಷ್ಟ್ರನು ಹೇಳಿದನು: “ಸೂತ! ಸೇನೆಗಳು ಹಾಗೆ ಚದುರಿಹೋಗಿರಲು ಸ್ವಯಂ ತಾನೇ ಬಹಳ ಕಷ್ಟದಲ್ಲಿ ಸಿಲುಕಿದ್ದ ದುರ್ಯೋಧನನು ರಣದಿಂದ ಹಿಮ್ಮೆಟ್ಟಿರಲಿಲ್ಲ ತಾನೇ?

07100024a ಏಕಸ್ಯ ಚ ಬಹೂನಾಂ ಚ ಸನ್ನಿಪಾತೋ ಮಹಾಹವೇ|

07100024c ವಿಶೇಷತೋ ನೃಪತಿನಾ ವಿಷಮಃ ಪ್ರತಿಭಾತಿ ಮೇ||

ಮಹಾಯುದ್ಧದಲ್ಲಿ ಅನೇಕರೊಂದಿಗೆ ಒಬ್ಬನ, ಅದರಲ್ಲಿಯೂ ರಾಜನಾದವನ, ಯುದ್ಧವು ನಡೆಯುವುದು ಸರಿಯಲ್ಲವೆಂದು ನನಗನ್ನಿಸುತ್ತದೆ.

07100025a ಸೋಽತ್ಯಂತಸುಖಸಂವೃದ್ಧೋ ಲಕ್ಷ್ಮ್ಯಾ ಲೋಕಸ್ಯ ಚೇಶ್ವರಃ|

07100025c ಏಕೋ ಬಹೂನ್ಸಮಾಸಾದ್ಯ ಕಚ್ಚಿನ್ನಾಸೀತ್ಪರಾಙ್ಮುಖಃ||

ಅತ್ಯಂತ ಸುಖದಲ್ಲಿ ಬೆಳೆದ, ಲೋಕದ ಸಂಪತ್ತಿಗೆ ಒಡೆಯನಾದ ದುರ್ಯೋಧನನು ಒಬ್ಬನೇ ಅನೇಕರನ್ನು ಎದುರಿಸಿ ಪರಾಂಙ್ಮುಖನಾಗಲಿಲ್ಲ ತಾನೇ?”

07100026 ಸಂಜಯ ಉವಾಚ|

07100026a ರಾಜನ್ಸಂಗ್ರಾಮಮಾಶ್ಚರ್ಯಂ ತವ ಪುತ್ರಸ್ಯ ಭಾರತ|

07100026c ಏಕಸ್ಯ ಚ ಬಹೂನಾಂ ಚ ಶೃಣುಷ್ವ ಗದತೋಽದ್ಭುತಂ||

ಸಂಜಯನು ಹೇಳಿದನು: “ರಾಜನ್! ಭಾರತ! ನಿನ್ನ ಮಗನು ಒಬ್ಬನೇ ಅನೇಕರೊಂದಿಗೆ ನಡೆಸಿದ ಆ ಆಶ್ಚರ್ಯಕರ ಅದ್ಭುತ ಸಂಗ್ರಾಮದ ಕುರಿತು ಕೇಳು.

07100027a ದುರ್ಯೋಧನೇನ ಸಹಸಾ ಪಾಂಡವೀ ಪೃತನಾ ರಣೇ|

07100027c ನಲಿನೀ ದ್ವಿರದೇನೇವ ಸಮಂತಾದ್ವಿಪ್ರಲೋಡಿತಾ||

ಕಮಲಗಳಿಂದ ಕೂಡಿದ ಸರೋವರವನ್ನು ಆನೆಯೊಂದು ಮಥಿಸಿಬಿಡುವಂತೆ ರಣದಲ್ಲಿ ಪಾಂಡವರ ಸೇನೆಯನ್ನು ದುರ್ಯೋಧನನು ಒಮ್ಮೆಲೇ ಎಲ್ಲ ಕಡೆಗಳಿಂದ ಕದಡಿ ಅಲ್ಲೋಲಕಲ್ಲೋಲಗೊಳಿಸಿಬಿಟ್ಟನು.

07100028a ತಥಾ ಸೇನಾಂ ಕೃತಾಂ ದೃಷ್ಟ್ವಾ ತವ ಪುತ್ರೇಣ ಕೌರವ|

07100028c ಭೀಮಸೇನಪುರೋಗಾಸ್ತಂ ಪಾಂಚಾಲಾಃ ಸಮುಪಾದ್ರವನ್||

ಕೌರವ! ನಿನ್ನ ಮಗನು ಸೇನೆಗಳನ್ನು ಹಾಗೆ ಮಾಡಿದುದನ್ನು ನೋಡಿ ಭೀಮಸೇನನನ್ನು ಮುಂದಿರಿಸಿಕೊಂಡು ಪಾಂಚಾಲರು ಅವನನ್ನು ಆಕ್ರಮಣಿಸಿದರು.

07100029a ಸ ಭೀಮಸೇನಂ ದಶಭಿರ್ಮಾದ್ರೀಪುತ್ರೌ ತ್ರಿಭಿಸ್ತ್ರಿಭಿಃ|

07100029c ವಿರಾಟದ್ರುಪದೌ ಷಡ್ಭಿಃ ಶತೇನ ಚ ಶಿಖಂಡಿನಂ||

07100030a ಧೃಷ್ಟದ್ಯುಮ್ನಂ ಚ ವಿಂಶತ್ಯಾ ಧರ್ಮಪುತ್ರಂ ಚ ಸಪ್ತಭಿಃ|

07100030c ಕೇಕಯಾನ್ದಶಭಿರ್ವಿದ್ಧ್ವಾ ದ್ರೌಪದೇಯಾಂಸ್ತ್ರಿಭಿಸ್ತ್ರಿಭಿಃ||

07100031a ಶತಶಶ್ಚಾಪರಾನ್ಯೋಧಾನ್ಸದ್ವಿಪಾಂಶ್ಚ ರಥಾನ್ರಣೇ|

07100031c ಶರೈರವಚಕರ್ತೋಗ್ರೈಃ ಕ್ರುದ್ಧೋಽಂತಕ ಇವ ಪ್ರಜಾಃ||

ದುರ್ಯೋಧನನು ಭೀಮಸೇನನನ್ನು ಹತ್ತರಿಂದ, ಮಾದ್ರೀಪುತ್ರರನ್ನು ಮೂರು-ಮೂರರಿಂದ, ವಿರಾಟ-ದ್ರುಪದರನ್ನು ಆರರಿಂದ, ನೂರರಿಂದ ಶಿಖಂಡಿಯನ್ನು. ಧೃಷ್ಟದ್ಯುಮ್ನನನ್ನು ಇಪ್ಪತ್ತರಿಂದ, ಧರ್ಮಪುತ್ರನನ್ನು ಏಳರಿಂದ, ಕೇಕಯರನ್ನು ಹತ್ತರಿಂದ ಮತ್ತು ದ್ರೌಪದೇಯರನ್ನು ಮೂರು-ಮೂರರಿಂದ ಹೊಡೆದು, ರಣದಲ್ಲಿ ಇತರ ಇನ್ನೂ ನೂರಾರು ಆನೆಗಳನ್ನು ರಥಗಳನ್ನು ಮತ್ತು ಯೋಧರನ್ನು ಕ್ರುದ್ಧ ಅಂತಕನಂತೆ ತನ್ನ ಉಗ್ರ ಬಾಣಗಳಿಂದ ಕತ್ತರಿಸಿ ಹಾಕಿದನು.

07100032a ನ ಸಂದಧನ್ವಿಮುಂಚನ್ವಾ ಮಂಡಲೀಕೃತಕಾರ್ಮುಕಃ|

07100032c ಅದೃಶ್ಯತ ರಿಪೂನ್ನಿಘ್ನಂ ಶಿಕ್ಷಯಾಸ್ತ್ರಬಲೇನ ಚ||

ಅವನು ಧನುಸ್ಸನ್ನು ಮಂಡಲಾಕಾರವಾಗಿ ಹೂಡಿ, ತನ್ನ ಅಸ್ತ್ರಬಲ ಶಿಕ್ಷಣದಿಂದ ಶತ್ರುಗಳನ್ನು ಸಂಹರಿಸುತ್ತಿರುವಂತೆ ಕಂಡನು.

07100033a ತಸ್ಯ ತಾನ್ನಿಘ್ನತಃ ಶತ್ರೂನ್ ಹೇಮಪೃಷ್ಠಂ ಮಹದ್ಧನುಃ|

07100033c ಭಲ್ಲಾಭ್ಯಾಂ ಪಾಂಡವೋ ಜ್ಯೇಷ್ಠಸ್ತ್ರಿಧಾ ಚಿಚ್ಚೇದ ಮಾರಿಷ||

ಮಾರಿಷ! ಶತ್ರುಗಳನ್ನು ಸಂಹರಿಸುತ್ತಿರುವ ಅವನ ಆ ಬಂಗಾರದ ಬೆನ್ನುಳ್ಳ ಮಹಾಧನುಸ್ಸನ್ನು ಜ್ಯೇಷ್ಠ ಪಾಂಡವ ಯುಧಿಷ್ಠಿರನು ಎರಡು ಭಲ್ಲಗಳಿಂದ ಮೂರು ಭಾಗಗಳನ್ನಾಗಿ ತುಂಡರಿಸಿದನು.

07100034a ವಿವ್ಯಾಧ ಚೈನಂ ಬಹುಭಿಃ ಸಮ್ಯಗಸ್ತೈಃ ಶಿತೈಃ ಶರೈಃ|

07100034c ವರ್ಮಾಣ್ಯಾಶು ಸಮಾಸಾದ್ಯ ತೇ ಭಗ್ನಾಃ ಕ್ಷಿತಿಮಾವಿಶನ್||

ಇನ್ನೂ ಅನೇಕ ನಿಶಿತ ಶರಗಳಿಂದ ಅವನನ್ನು ಹೊಡೆಯಲು ಅವು ದುರ್ಯೋಧನನ ಕವಚಕ್ಕೆ ತಾಗಿ, ಕವಚವನ್ನು ಸೀಳಿ, ಭೂಮಿಯನ್ನು ಹೊಕ್ಕವು.

07100035a ತತಃ ಪ್ರಮುದಿತಾಃ ಪಾರ್ಥಾಃ ಪರಿವವ್ರುರ್ಯುಧಿಷ್ಠಿರಂ|

07100035c ಯಥಾ ವೃತ್ರವಧೇ ದೇವಾ ಮುದಾ ಶಕ್ರಂ ಮಹರ್ಷಿಭಿಃ||

ಆಗ ಸಂತೋಷಗೊಂಡ ಪಾರ್ಥರು ವೃತ್ರವಧೆಯ ನಂತರ ದೇವತೆಗಳು ಮತ್ತು ಮಹರ್ಷಿಗಳು ಶಕ್ರನನ್ನು ಹೇಗೋ ಹಾಗೆ ಯುಧಿಷ್ಠಿರನನ್ನು ಸುತ್ತುವರೆದರು.

07100036a ಅಥ ದುರ್ಯೋಧನೋ ರಾಜಾ ದೃಢಮಾದಾಯ ಕಾರ್ಮುಕಂ|

07100036c ತಿಷ್ಠ ತಿಷ್ಠೇತಿ ರಾಜಾನಂ ಬ್ರುವನ್ಪಾಂಡವಮಭ್ಯಯಾತ್||

ಆಗ ರಾಜಾ ದುರ್ಯೋಧನನು ದೃಢ ಬಿಲ್ಲನ್ನು ಎತ್ತಿಕೊಂಡು “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ರಾಜಾ ಪಾಂಡವನನ್ನು ಆಕ್ರಮಣಿಸಿದನು.

07100037a ತಂ ತಥಾ ವಾದಿನಂ ರಾಜಂಸ್ತವ ಪುತ್ರಂ ಮಹಾರಥಂ|

07100037c ಪ್ರತ್ಯುದ್ಯಯುಃ ಪ್ರಮುದಿತಾಃ ಪಾಂಚಾಲಾ ಜಯಗೃದ್ಧಿನಃ||

ರಾಜನ್! ನಿನ್ನ ಮಗ ಮಹಾರಥನು ಹೀಗೆ ಮುಂದುವರೆಯುತ್ತಿರಲು ಜಯವನ್ನು ಬಯಸುತ್ತಿದ್ದ ಪಾಂಚಾಲರು ಸಂತೋಷದಿಂದ ಅವನನ್ನು ಎದುರಿಸಿದರು.

07100038a ತಾನ್ದ್ರೋಣಃ ಪ್ರತಿಜಗ್ರಾಹ ಪರೀಪ್ಸನ್ಯುಧಿ ಪಾಂಡವಂ|

07100038c ಚಂಡವಾತೋದ್ಧುತಾನ್ಮೇಘಾನ್ಸಜಲಾನಚಲೋ ಯಥಾ||

ಆಗ ಯುದ್ಧದಲ್ಲಿ ಪಾಂಡವರನ್ನು ರಕ್ಷಿಸುತ್ತಿದ್ದ ಅವರನ್ನು ದ್ರೋಣನು ಚಂಡಮಾರುತದಿಂದುಂಟಾದ ಮೇಘಗಳನ್ನೂ ಮೋಡಗಳನ್ನೂ ಸ್ವೀಕರಿಸುವ ಪರ್ವತದಂತೆ ಬರಮಾಡಿಕೊಂಡನು.

07100039a ತತ್ರ ರಾಜನ್ಮಹಾನಾಸೀತ್ಸಂಗ್ರಾಮೋ ಭೂರಿವರ್ಧನಃ|

07100039c ರುದ್ರಸ್ಯಾಕ್ರೀಡಸಂಕಾಶಃ ಸಂಹಾರಃ ಸರ್ವದೇಹಿನಾಂ||

ರಾಜನ್! ಅಲ್ಲಿ ಭೂರಿವರ್ಧನ ಸರ್ವದೇಹಿಗಳ ಸಂಹಾರಕ ರುದ್ರನ ಕ್ರೀಡೆಯಂತಿರುವ ಮಹಾ ಸಂಗ್ರಾಮವು ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಂಕುಲಯುದ್ಧೇ ಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಸಂಕುಲಯುದ್ಧ ಎನ್ನುವ ನೂರನೇ ಅಧ್ಯಾಯವು.

Image result for jasmin against white background

[1] ನೀನು ಹೇಳುತ್ತಿರುವುದನ್ನು ಕೇಳಿದರೆ ಸಾತ್ಯಕಿಯು ಹೋದ ಮಾರ್ಗವು ವೀರರಿಂದ ಶೂನ್ಯವಾಗಿಬಿಟ್ಟಿತ್ತೇ? ಅಥವಾ ಆ ಮಾರ್ಗದಲ್ಲಿದ್ದ ವೀರರೆಲ್ಲರೂ ಅರ್ಜುನನಿಂದ ಹತರಗಿಹೋಗಿದ್ದರೇ? ಅಥವಾ ನನ್ನ ಮಕ್ಕಳಲ್ಲಿ ಯಾರೂ ಜೀವಂತರಾಗಿ ಉಳಿದೇ ಇರಲಿಲ್ಲವೇ?

Comments are closed.